ಖಂಡಾಳಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಂಡಾಳಾ-ಪುಣೆ ಜಿಲ್ಲೆಯಲ್ಲಿ ಭೋರ್‍ಘಟ್ಟದ ಮಧ್ಯದಲ್ಲಿ ಇರುವ ಒಂದು ಊರು. ಪುಣೆ-ಮುಂಬಯಿ ರೈಲುಮಾರ್ಗದಲ್ಲಿ ಒಂದು ಜಂಕ್ಷನ್. ಪುಣೆಯಿಂದ 42 ಮೈ. ದೂರದಲ್ಲಿ. ಸಮುದ್ರಮಟ್ಟದಿಂದ 2,033' ಎತ್ತರದಲ್ಲಿದೆ.

ಹೊಸ ಊರಿನ ಪಶ್ಚಿಮದ ಗುಡ್ಡಗಳಲ್ಲಿ ಒಂದು ದೊಡ್ಡ ಕೆರೆ ಇದೆ. ಇಲ್ಲಿಯ ವಾಯುಗುಣ ಹಿತಕರವಾದ್ದರಿಂದ ಇದೊಂದು ಆರೋಗ್ಯಕೇಂದ್ರ, ವಿಶ್ರಾಂತಿಧಾಮ. ಇಲ್ಲಿ ತಂಗುವ ರೋಗಿಗಳಿಗಾಗಿ ಪಾರ್ಸಿ ಮತ್ತು ಹಿಂದೂ ಶ್ರೀಮಂತರು ಚಿಕ್ಕ ಮನೆಗಳನ್ನೂ ಧರ್ಮಶಾಲೆಗಳನ್ನೂ ಕಟ್ಟಿಸಿದ್ದಾರೆ. ರೋಗಿ-ಸೈನಿಕರಾಗಿ ಇಲ್ಲೊಂದು ರುಗ್ಣಾಲಯವಿದೆ. ರೈಲ್ವೆ ಮತ್ತು ಲೋಕೋಪಯೋಗಿ ಇಲಾಖೆಗಳ ಕಚೇರಿಗಳು, ಸೈನಿಕ ಮತ್ತು ಪೊಲೀಸ್ ಶಿಕ್ಷಣ ಕೇಂದ್ರಗಳು ಇಲ್ಲಿ ಸ್ಥಾಪಿತವಾಗಿವೆ.

ಇಲ್ಲಿರುವ-ವೆಲಿಂಗ್ಟನ್ ಡ್ಯೂಕನ ಮೂಗಿನಂತೆ ಕಾಣುವ-ಪರ್ವತ ಭಾಗವೊಂದಕ್ಕೆ ಡ್ಯೂಕ್ಸ್ ನೋಸ್ ಎಂದೇ ಹೆಸರು. ಅಲ್ಲಿ ನಿಂತು ನೋಡಿದರೆ ಕಾಣುವ ನಿಸರ್ಗ ಸೌಂದರ್ಯ ಮನ ತಣಿಸುತ್ತದೆ. ಈ ಊರಿನ ಬಳಿಯಲ್ಲಿ ಮುಂಬಯಿಯ ಕಡೆಗೆ ಹೋಗುವ ರೈಲು ಪಶ್ಚಿಮ ಘಟ್ಟವನ್ನೇ ಬಿಗಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಪುಣೆ-ಮುಂಬಯಿ ರೈಲುಮಾರ್ಗದಲ್ಲಿರುವ 26 ಸುರಂಗಮಾರ್ಗಗಳಲ್ಲಿ ಇದೇ ಮೊದಲನೆಯದು; ಮತ್ತು ಪಶ್ಚಿಮಘಟ್ಟಗಳ ಸುರಂಗಮಾರ್ಗಗಳ ಪೈಕಿ ಅತ್ಯಂತ ಉದ್ದವಾದ್ದು. ಖಂಡಾಳ-ಕರ್ಜತ್ ರೈಲುಮಾರ್ಗದ ನಿರ್ಮಾಣಕಾರ್ಯ 1856ರಲ್ಲಿ ಪ್ರಾರಂಭವಾಗಿ 1863ರಲ್ಲಿ ಮುಕ್ತಾಯಗೊಂಡಿತು. ಖಂಡಾಳದ ಹತ್ತಿರ ಒಂದು ಕಡೆ ರೈಲುಮಾರ್ಗವನ್ನು ಮುಂದುವರಿಸಲು ಸಾಧ್ಯವಾಗದೆ ಬೇರೆ ಮಾರ್ಗವನ್ನು ಯೋಜಿಸಿ ನಿರ್ಮಿಸಲಾಯಿತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಖಂಡಾಳಾ&oldid=701724" ಇಂದ ಪಡೆಯಲ್ಪಟ್ಟಿದೆ