ಕ್ರೈಸ್ತರ ಕನ್ನಡ ಚಳವಳಿ
೧೯೬೦ರ ದಶಕದ ವ್ಯಾಟಿಕನ್ ಸುಧಾರಣೆಯನ್ವಯ ಧರ್ಮಪೀಠಗಳು ಸ್ಥಳೀಯ ಸಂಸ್ಕೃತಿ, ಸ್ಥಳೀಯ ಬಾಷೆ ಹಾಗೂ ನೆಲದ ನಿಯಮಗಳಿಗೆ ಮಾನ್ಯತೆ ನೀಡಬೇಕಿತ್ತು. ಭಾಷೆಯ ನೆಲೆಗಟ್ಟಿನಲ್ಲಿ ರೂಪಿತವಾದ ಕರ್ನಾಟಕ ರಾಜ್ಯದ ನೆಲದ ನಿಯಮದನ್ವಯ ಕನ್ನಡ ಸಂಸ್ಕೃತಿ ಕನ್ನಡ ಭಾಷೆಗಳಿಗೆ ಮನ್ನಣೆ ಸಿಗಬೇಕಲ್ಲವೇ? ಆದರೆ ಬೆಂಗಳೂರು ಪ್ರದೇಶದಲ್ಲಿದ್ದ ವರಿಷ್ಠ ಪಾದ್ರಿಗಳು ಕ್ರೈಸ್ತರೆಂದರೆ ತಮಿಳು ಮಾತನಾಡುವವರು ಇಲ್ಲವೇ ತಮಿಳು ಬಲ್ಲವರು ಮಾತ್ರ, ತಮಿಳೇತರರಾರೂ ಕ್ರೈಸ್ತರಲ್ಲ ಎಂದು ಭಾವಿಸಿಕೊಂಡರು. ಇದರಿಂದ ಬೆಂಗಳೂರು, ಕೋಲಾರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಮಣ್ಣಿನ ಮಕ್ಕಳು ತಮಿಳಿನಲ್ಲಿ ದೈವಾರಾಧನೆ ನಡೆಸುವ ಅನಿವಾರ್ಯತೆಗೆ ಸಿಲುಕಿದರು.
ಕೊಡಗು, ಮಂಡ್ಯ, ಮೈಸೂರುಗಳನ್ನೊಳಗೊಂಡ ಮೈಸೂರು ಧರ್ಮಪೀಠ, ಹಾಸನ, ಚಿಕ್ಕಮಗಳೂರು, ಶೀಮೊಗ್ಗೆಯನ್ನೊಳಗೊಂಡಿದ್ದ ಚಿಕ್ಕಮಗಳೂರು ಧರ್ಮಪೀಠ, ರಾಯಚೂರು, ಬಳ್ಳಾರಿಗಳುಳ್ಳ ಬಳ್ಳಾರಿ ಧರ್ಮಪೀಠಗಳಲ್ಲಿ ವ್ಯಾಟಿಕನ್ ಸುಧಾರಣೆಯನ್ನು ಯಥಾವತ್ತಾಗಿ ಆನುಷ್ಠಾನಗೊಳಿಸಿದ ಪರಿಣಾಮ ಆ ಧರ್ಮಪೀಠಗಳಲ್ಲಿ ಸ್ಥಳೀಯ ಭಾಷೆ- ಸಂಸ್ಕೃತಿಗಳು ಚರ್ಚಿನ ಅಳವಡಿಕೆಗೆ ಬಂದವು.
ಅಸಹನೆಯ ಕಾವು
[ಬದಲಾಯಿಸಿ]ಆದರೆ ಆ ಧರ್ಮಪೀಠಗಳಿಗೆ ಪಾದ್ರಿಗಳಾಗಿ ಹೋಗುವವರಿಗೆ ತರಬೇತಿ ನಡೆಯುತ್ತಿದ್ದುದು ಬೆಂಗಳೂರಿನ ಸಂತ ರಾಯಪ್ಪರ ಗುರುಮಠದಲ್ಲಿ. ಈ ಗುರುಮಠದ ಆಳ್ವಿಕೆಯ ಸಿಂಹಪಾಲು ತಮಿಳರ ಕೈಯಲ್ಲಿತ್ತು, ಇಲ್ಲಿ ತರಬೇತಿ ಪಡೆಯುತ್ತಿದ್ದವರೂ ಹೆಚ್ಚಿನ ಪಾಲು ತಮಿಳರೇ. ಇವರ ಅಟ್ಟಹಾಸದ ನಡುವೆ ಕನ್ನಡ ಭಾಷಿಕ ಗುರುಅಭ್ಯರ್ಥಿಗಳು ತಮ್ಮ ಪ್ರತಿಭೆಗಳನ್ನು ಗುಪ್ತವಾಗಿ ಮೆರೆಯಬೇಕಿತ್ತು. ತಮಿಳರ ಧಾರ್ಮಿಕ ಸಾಹಿತ್ಯರಚನೆ, ಗಾಯನಾಭ್ಯಾಸ, ನಾಟಕಾಭ್ಯಾಸಗಳಿಗೆ ರಾಜಮನ್ನಣೆಯಿದ್ದು ಸಭಾಂಗಣದಲ್ಲಿ ನೆರವೇರುತ್ತಿದ್ದವು. ಕನ್ನಡಿಗರ ಈ ಕೆಲಸಗಳು ಅವರ ಕೊಠಡಿಗಳಲ್ಲೆ ನಡೆಯಬೇಕಿತ್ತು. ಗುರುಮಠದ ವರಿಷ್ಠರ ಕಣ್ಣಿಗೆ ಇದು ಪಿತೂರಿಯಾಗಿ ಕಾಣುತ್ತಿತ್ತು. ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಅತಿ ಕ್ಷುಲ್ಲಕ ಕಾರಣಕ್ಕೂ ಕನ್ನಡ ಗುರುಅಭ್ಯರ್ಥಿಗಳನ್ನು ಸೆಮಿನರಿಯಿಂದ ಹೊರಗಟ್ಟುವುದು ಸಾಮಾನ್ಯ ವಿಷಯವಾಗಿತ್ತು.
ಫಾದರ್ ಪೆನ್ವೆನ್ ಎಂಬ ಫ್ರೆಂಚ್ ಪಾದ್ರಿಯ ಅಭಯಾಶ್ರಯದಲ್ಲಿ ವಿದ್ಯಾರ್ಥಿಗಳಾಗಿದ್ದ ಜಾರ್ಜ್ ಡಿಸೋಜ, ಅಂತಪ್ಪ, ಎನ್. ಎಸ್. ಮರಿಜೋಸೆಫ್, ಸ್ಟ್ಯಾನಿಬ್ಯಾಪ್ಟಿಸ್ಟ್ ಮುಂತಾದವರು ಕಲೆತು ಬೈಬಲ್ ಭಾಷಾಂತರ, ಕನ್ನಡದಲ್ಲಿ ಪಾರ್ಥನಾವಿಧಿಗಳು, ಕನ್ನಡ ದೈವಾರಾಧನಾ ಗೀತೆಗಳು ಮುಂತಾದವನ್ನು ಪ್ರಕಾಶಕ್ಕೆ ತಂದರು. ಇವೆಲ್ಲವುಗಳಿಂದ ಬೆಂಗಳೂರು ಹೊರತುಪಡಿಸಿ ಮೇಲೆ ಹೇಳಿದ ಎಲ್ಲ ಇತರ ಧರ್ಮಪೀಠಗಳು ಕನ್ನಡದ ನಿಟ್ಟಿನಲ್ಲಿ ಸಮೃದ್ಧವೆನಿಸಿದವು.
ದುರದೃಷ್ಟವಶದಿಂದ ಅದೇ ವೇಳೆಗೆ ಬೆಂಗಳೂರು ಮಹಾಧರ್ಮಾಧಿಕಾಯಾಗಿ ಲೂರ್ದುಸಾಮಿಯವರು ನೇಮಕಗೊಂಡಿದ್ದರಿಂದ ಎಲ್ಲ ಕನ್ನಡಪರ ಚಟುವಟಿಕೆಗಳಿಗೆ ಕಲ್ಲು ಬಿತ್ತು. ವ್ಯಾಟಿಕನ್ ಸುಧಾರಣೆಗೂ ಮೊದಲೇ ಬಳಕೆಯಲ್ಲಿದ್ದ ಕನ್ನಡ ಆರಾಧನಾವಿಧಿ, ಪ್ರಾರ್ಥನೆಗಳು, ಪವಿತ್ರಬೈಬಲ್ ಭಾಷಾಂತರಕಾರ್ಯ ಎಲ್ಲವೂ ಅನಧಿಕೃತ ಎಂಬಂತೆ ಚರ್ಚ್ ವರಿಷ್ಠರು ನಡೆದುಕೊಂಡರು.
ಅಂದು ಇಲ್ಲಿ ಧರ್ಮಪಾಲಕರಾಗಿದ್ದ ಲೂರ್ದುಸಾಮಿಯವರ ತಮಿಳು ಭಾಷಾಂಧತೆಯೆಂಬ ನೀಚತನದಿಂದಾಗಿ ಚರ್ಚು ವಲಸಿಗರ ಏಜಂಟಿನಂತೆ ವರ್ತಿಸಿ ಕನ್ನಡ ಭಾಷೆಯನ್ನೂ ಸಂಸ್ಕೃತಿಯನ್ನೂ ನಿರಂತರವಾಗಿ ತುಳಿಯತೊಡಗಿತು. ಬೆಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಭಾಷೆ ತಮಿಳು ಎಂಬಂತೆ ಬಿಂಬಿಸಲಾಯಿತು. ತಮಿಳು ಪ್ರಾರ್ಥನೆಗಳನ್ನು ಹಾಡುಗಳನ್ನು ಎಲ್ಲ ಕ್ರೈಸ್ತರೂ ಬಳಸುವ ಸಲುವಾಗಿ ಅವನ್ನು ಕನ್ನಡ ಲಿಪಿಯಲ್ಲಿ ಮುದ್ರಣ ಮಾಡುವ ಪರಿಪಾಠ ಸಹಾ ಮೊದಲಾಯಿತು. ಚರ್ಚಿನ ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ತಮಿಳರೇ ತುಂಬಿಕೊಂಡರು. ತಮಿಳುಭಾಷಿಕ ಪಾದ್ರಿಗಳನ್ನು ತಮಿಳುನಾಡಿನಿಂದ ಆಮದು ಮಾಡಿಕೊಳ್ಳಲಾಯಿತು. ಸ್ಥಳೀಯ ಅಭ್ಯರ್ಥಿಗಳಲ್ಲಿ ಪ್ರಬುದ್ಧತೆಯಲ್ಲಿ ಕೊರತೆಯಿದ್ದವರೂ ತಮ್ಮ ಹೌದಪ್ಪ ಗುಣದ ಕಾರಣ ಪಾದ್ರಿಗಳಾದರು. ಆದರೆ ನಿಜವಾಗಿಯೂ ಅರ್ಹರೆನಿಸಿದ್ದ ಅಭ್ಯರ್ಥಿಗಳು ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿದರೆಂಬ ಕಾರಣಕ್ಕೆ ಗುರುಮಠದಿಂದ ಹೊರದಬ್ಬಲ್ಪಟ್ಟರು.
ಇನ್ನು ಜನಸಾಮಾನ್ಯರ ಪಾಡೂ ಹೇಳತೀರದಾಗಿತ್ತು. ಪಾದ್ರಿಯೆಂದರೆ ದೈವಸ್ವರೂಪಿ, ಪಾದ್ರಿ ಹೇಳಿದ್ದೇ ವೇದವಾಕ್ಯ ಎಂದು ತಿಳಿದಿದ್ದ ಭೋಳೆ ಸ್ವಭಾವದ ಕನ್ನಡಿಗ ಭಕ್ತಾದಿಗಳು ಇವೆಲ್ಲವನ್ನೂ ಸಹಿಸಿಕೊಂಡು ತಮಿಳು ಪ್ರಾರ್ಥನೆ, ಹಾಡುಗಳನ್ನು ಕನ್ನಡ ಲಿಪಿಯಲ್ಲಿ ಬರೆದು ಬಳಸುತ್ತಿದ್ದುದು ಇನ್ನೂ ನೆನಪಿನಿಂದ ಮಾಸಿಲ್ಲ. ಚರ್ಚಿನಲ್ಲಿ ಬಳಸಲ್ಪಡುವ ಭಾಷೆಗೆ ಜೋತು ಬಿದ್ದದ್ದು ವಿನಯತೆ ವಿಧೇಯತೆಯ ಸಂಕೇತವಾಗಿತ್ತು. ಅಲ್ಲದೆ ಧಾರ್ಮಿಕ ಕಟ್ಟುಪಾಡುಗಳನ್ನು ಪ್ರಶ್ನಿಸಬಾರದೆನ್ನುವ ಮತಸಂಹಿತೆಗೆ ಅನುಗುಣವಾಗಿತ್ತು. ಆದರೆ ಬದುಕಿನ ಎಲ್ಲ ಆಯಾಮಗಳಲ್ಲೂ ಅವರದು ಹೇಳಿತೀರದ ಬವಣೆ. ಕ್ರೈಸ್ತ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಸ್ಥಾನವಿಲ್ಲ, ಉದ್ಯೋಗವಿಲ್ಲ, ಅವರ ಮಕ್ಕಳಿಗೆ ಚರ್ಚಿನ ಶಾಲೆಗಳಲ್ಲಿ ಪ್ರವೇಶವಿಲ್ಲ. ಯಾವುದೇ ಸಭೆ ಸಮಾರಂಭಗಳಲ್ಲಿ ಕನ್ನಡಿಗರು ದ್ವಿತೀಯ ದರ್ಜೆಯ ಪ್ರಜೆಗಳು. ಆಯಕಟ್ಟಿನ ಜಾಗಗಳಲ್ಲಿ, ಉದ್ಯೋಗಗಳಲ್ಲಿ, ಶಿಕ್ಷಣ, ಆರ್ಥಿಕ ಕೊಳುಕೊಡುಗೆಗಳಲ್ಲಿ ಎಲ್ಲದರಲ್ಲೂ ತಮಿಳರಿಗೇ ಮೊದಲಮಣೆ ಸಿಗತೊಡಗಿದಾಗ ಮಣ್ಣಿನ ಮಕ್ಕಳ ಒಳಗುದಿ ಕ್ರಮೇಣ ಬಲಿಯತೊಡಗಿತ್ತು.
ಸಾವು, ಮದುವೆಗಳಂತಹ ಖಾಸಗಿ ಸಂದರ್ಭಗಳಲ್ಲೂ ಕನ್ನಡದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲವೆಂದಾಗ ಮಾತ್ರ ಕನ್ನಡಿಗರ ರೋಷ ಭುಗಿಲೆದ್ದಿತು. ಸುಪ್ತವಾಗಿ ಹೊಗೆಯಾಡುತ್ತಿದ್ದ ಈ ಅಸಹನೆಯ ಕಾವು ೧೯೭೭ರಲ್ಲಿ ಮಲ್ಲೇಶ್ವರದ ಶ್ರೀಕ್ರಿಸ್ತರಾಜರ ದೇವಾಲಯದಲ್ಲಿ ಭುಗಿಲೆದ್ದಿತು. ಜನಸಾಮಾನ್ಯರ ಕೂಗಿಗೆ ಸ್ಪಂದಿಸದೆ ಕಣ್ಣು ಮುಚ್ಚಿಕೊಂಡಿದ್ದ ಧರ್ಮಸಭೆಯನ್ನು ತಿವಿದು ಎಬ್ಬಿಸಿ ಗಾಂಧಿಮಾರ್ಗದಲ್ಲಿ ಹೋರಾಟ ಪ್ರಾರಂಭಿಸಿದ ಕನ್ನಡ ಕ್ರೈಸ್ತರು ಧಾರ್ಮಿಕ ಮುಖಂಡರಿಂದ ಬಹಿಷ್ಕಾರದ ಬೆದರಿಕೆಯನ್ನು, ಮನೆಮಂದಿಯಿಂದ ವಾಗ್ಬಾಣಗಳನ್ನು ಎದುರಿಸಬೇಕಾಗಿ ಬಂದರೂ ಅಂದಿನ ಐತಿಹಾಸಿಕ ಘಟನೆಗೆ ಕಾರಣಪುರುಷರಾದರು.
ಕರ್ನಾಟಕದ ಚರ್ಚುಗಳಲ್ಲಿ ಕನ್ನಡಕ್ಕೆ ಮೊದಲ ಮರ್ಯಾದೆ ಸಿಕ್ಕಬೇಕು, ಚರ್ಚುಗಳ ಸವಲತ್ತುಗಳು ಸ್ಥಳೀಯ ಕನ್ನಡ ಕ್ರೈಸ್ತರಿಗೂ ದಕ್ಕಬೇಕು ಎಂಬ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ೧೯೭೭ ನವೆಂಬರ್ ೧೭ರಂದು "ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ" ಎಂಬ ನಾಮಫಲಕದಡಿ ಹೊಸ ಕ್ರಾಂತಿಗೆ ತೊಡಗಿತು. ಕ್ರೈಸ್ತ ಕನ್ನಡಿಗರ ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸುವುದರ ಬದಲಿಗೆ ಧರ್ಮಸಭೆಯು ತಮಿಳು ಕ್ರೈಸ್ತರನ್ನು ಎತ್ತಿಕಟ್ಟಿ ವಿರೋಧ ಹುಟ್ಟಿಸುವಲ್ಲಿ ಯಶಸ್ವಿಯಾಯಿತಲ್ಲದೆ ಚಳವಳಿಗಾರರನ್ನು ಜೈಲಿಗೆ ಕಳಿಸುವ ಸಾಹಸಕ್ಕೂ ಕೈ ಹಾಕಿತು. ಅನಂತರ ಚಳವಳಿ ಬೃಹದ್ವ್ಯಾಪಿಯಾಗಿ ಪುರಸಭೆಯಿಂದ ಬಿಷಪ್ಪರ ನಿವಾಸದವರೆಗೆ ಮಹಾ ಮೆರವಣಿಗೆ ಸಾಗಿತು. ರೋಮಿನವರೆಗೆ ದೂರು ಹೋಯಿತು.
ಬಿಷಪ್ ತ್ರಯರ ಆಯೋಗ
[ಬದಲಾಯಿಸಿ]ಇಂಡಿಯಾದ ಕಥೋಲಿಕ ಧರ್ಮಾಧಿಕಾರಿಗಳ ಸಮಾವೇಶ (ಇಂಕಧಸ)ವು ಈ ಸಮಸ್ಯೆಯ ಅಧ್ಯಯನ ಮಾಡಿ ಪರಿಹಾರ ಸೂಚಿಸಲು ಬಿಷಪ್ ಹೆನ್ರಿಡಿಸೋಜರವರ ನೇತೃತ್ವದಲ್ಲಿ ಬಿಷಪ್ ತ್ರಯರ ಆಯೋಗವನ್ನು ನೇಮಿಸಿತು. ಆಯೋಗಕ್ಕೆ ವಿಶದವಾದ ವಿಚಾರವ್ಯಾಪ್ತಿಯನ್ನು ನೀಡಿ ಅದರ ಪರಿಹಾರೋಪಾಯ ಇಂಡಿಯಾದ ಇತರ ಭಾಗಗಳಲ್ಲಿ ಸತ್ಪರಿಣಾಮ ಬೀರುವಂತಿರಬೇಕೆಂಬ ಷರತ್ತನ್ನು ಒಡ್ಡಲಾಯಿತು. ಆಯೋಗವು ೧೯೮೧ ಸೆಪ್ಟೆಂಬರ್ ೪ರಿಂದ ೯ರವರೆಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಸ್ವೀಕರಿಸಿತು. ಕ್ರೈಸ್ತ ಸಮಾಜದ ವಿವಿಧ ಸ್ತರಗಳ ಜನರು ಆಯೋಗದ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದರು.
ಬಿಷಪ್ ತ್ರಯರ ಆಯೋಗವು ತನ್ನ ವರದಿಯನ್ನು ಪೋಪರ ಅನುಮೋದನೆಯೊಂದಿಗೆ ೧೯೮೨ ಡಿಸೆಂಬರ್ ೫ರಂದು ಸಲ್ಲಿಸಿತು. ವರದಿಯ ಬಹುಭಾಗ ಕನ್ನಡ ಕ್ರೈಸ್ತರ ಮನೋಭಾವವನ್ನು ಎತ್ತಿಹಿಡಿದಿತ್ತು. ಬಿಷಪ್ಪರು ವಿಧಿಯಿಲ್ಲದೆ ಕನ್ನಡ ಪ್ರಾಧಾನ್ಯತೆಯ ಅವಶ್ಯಕತೆಯನ್ನು ಒತ್ತಿಹೇಳುವ ಐತಿಹಾಸಿಕ ೩/೮೩ ಸುತ್ತೋಲೆಯನ್ನು ಹೊರಡಿಸಿದರು. ಬೆಂಗಳೂರಿನ ತಮಿಳು ಕ್ರೈಸ್ತರ ಪೊದುನಲ ಸಂಘಮ್ ಎಂಬ ಸಂಘಟನೆಯು ಈ ಸುತ್ತೋಲೆಯನ್ನು ರದ್ದುಪಡಿಸಲು ಕೋರಿ ನ್ಯಾಯಾಲಯಕ್ಕೆ ಹೋಯಿತಾದರೂ ಆ ಮೊಕದ್ದಮೆ (ಸಂಖ್ಯೆ OS 951/83) ಕೋರ್ಟಿನಲ್ಲಿ ಬಿದ್ದುಹೋಯಿತು. ನಂತರ ಇಪ್ಪತ್ತು ತಿಂಗಳಾದರೂ ಸುತ್ತೋಲೆಯ ಅನುಷ್ಠಾನ ಆಗಲಿಲ್ಲ. ಕ್ರೈಸ್ತ ಕನ್ನಡ ಯಾಜಕರ ಬಳಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಾಗ ಬಿಷಪರು ನಾಲ್ಕು ಪಾದ್ರಿಗಳನ್ನು ಮಾತುಕತೆಗೆ ಆಹ್ವಾನಿಸಿದರು. ಆ ಮಾತುಕತೆಯಲ್ಲಿ ಕನ್ನಡಕ್ಕೆ ಇಂಬುಗೊಡುವ ಯಾವುದೇ ಪ್ರಸ್ತಾವವನ್ನು ಇಡದ ಬಿಷಪರು ಮಾತು ಬದಲಿಸಿದರು. ವಿಧಿಯಿಲ್ಲದೇ ಬಿಷಪರ ಮನೆಯಲ್ಲಿ ಕನ್ನಡ ಪಾದ್ರಿಗಳು ಉಪವಾಸ ಕುಳಿತರು. ಅವರ ಮೇಲೆ ಅತಿಕ್ರಮ ಪ್ರವೇಶದ ಆರೋಪ ಹೊರಿಸಿದ ಬಿಷಪರು ಪೊಲೀಸರನ್ನು ಕರೆಸಿ ಬಂಧನಕ್ಕೊಳಪಡಿಸಿದ್ದರಿಂದ ಪರಿಸ್ಥಿತಿ ಹದಗೆಟ್ಟು ಚಳವಳಿ ತೀವ್ರವಾಯಿತು. ಜನಸಾಮಾನ್ಯರ ಧ್ವನಿಯನ್ನು ಎದುರಿಸಲಾಗದ ಬಿಷಪರು ದೀರ್ಘರಜೆಯ ಮೇಲೆ ಹೊರನಡೆದರು. ಬೆಂಗಳೂರು ಕ್ರೈಸ್ತಧರ್ಮಪೀಠ ಅರಾಜಕವಾಯಿತು. ಪೋಪ್ ಎರಡನೇ ಜಾನ್ಪೌಲರ ಬೆಂಗಳೂರು ಭೇಟಿಯೂ ತಪ್ಪಿಹೋಯಿತು. ಪೋಪರ ಬೆಂಗಳೂರು ಭೇಟಿ ತಪ್ಪಿ ಹೋದುದಕ್ಕೆ ಕನ್ನಡ ಚಳವಳಿಯೇ ಕಾರಣ ಎಂಬಂತೆ ಬಿಂಬಿಸಲಾಯಿತು. ಕನ್ನಡ ಪಾದ್ರಿಗಳನ್ನು ರೌಡಿಗಳೆಂಬಂತೆ ಚಿತ್ರಿಸಲಾಯಿತು. ಹೊಸ ಬಿಷಪರ ಆಯ್ಕೆ ಪ್ರಕ್ರಿಯೆಯಲ್ಲಿ ಯಾರೊಬ್ಬ ಕನ್ನಡಿಗ ಪಾದ್ರಿಯನ್ನು ಸೂಚಿಸದಂತೆ, ಅನುಮೋದಿಸದಂತೆ ತಾಕೀತು ಮಾಡಲಾಯಿತು. ಇಂದಿಗೂ ಆ ಅಲಿಖಿತ ತಾಕೀತು ಜಾರಿಯಲ್ಲಿದೆ.
ಬೆಂಗಳೂರಿನ ಬಿಷಪರಾಗಿ ಅಲ್ಫೋನ್ಸ್ ಮಥಾಯಿಸ್
[ಬದಲಾಯಿಸಿ]ಅಂತೂ ಕೊನೆಗೆ ೧೯೮೬ ಡಿಸೆಂಬರ್ ೩ರಂದು ಚಿಕ್ಕಮಗಳೂರಿನ ಬಿಷಪ್ ಅಲ್ಫೋನ್ಸ್ ಮಥಾಯಿಸರು ಬೆಂಗಳೂರಿನ ಮಹಾಬಿಷಪರಾಗಿ ಅಭಿಷಿಕ್ತರಾದರು. ಅಲ್ಲಿಯವರೆಗೆ ಜಗದ್ಗುರು ಆಯೋಗದ ವರದಿಯನ್ನಾಧರಿಸಿದ ೩/೮೩ ಸುತ್ತೋಲೆಯನುಸಾರ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ಕೆಲಸ ಏನೇನೂ ಆಗಿರಲಿಲ್ಲ. ಹೊಸ ಬಿಷಪ್ಪರು ಈ ಬಗ್ಗೆ ಸುಮುಖವಾಗಿ ವರ್ತಿಸುತ್ತಾರೆಂಬುದನ್ನು ಇಡೀ ಕರ್ನಾಟಕ ಕಾತರದಿಂದ ನಿರೀಕ್ಷಿಸುತ್ತಿತ್ತು. ಏಕೆಂದರೆ ೧೯೬೫ರ ವ್ಯಾಟಿಕನ್ ಮಹಾಸಮ್ಮೇಳನದಲ್ಲಿ ಭಾಗಿಯಾಗಿದ್ದ ಇವರು ತಮ್ಮ ಚಿಕ್ಕಮಗಳೂರು ಧರ್ಮಪೀಠದಲ್ಲಿ ಆ ಸುಧಾರಣೆಗಳನ್ನು ಯಥಾವತ್ ಜಾರಿಗೆ ತಂದಿದ್ದರು. ಚಿಕ್ಕಮಗಳೂರು ಧರ್ಮಪೀಠದಲ್ಲಿ ಕೊಂಕಣಿಗರೂ ಕನ್ನಡಿಗರೂ ಸಮಸಮ ಸಂಖ್ಯೆಯಲ್ಲಿದ್ದರೂ ಸಹ ಅಲ್ಲಿನ ಚರ್ಚ್ ಭಾಷೆ ಕನ್ನಡವೆಂದು ೧೯೬೭ರಲ್ಲೇ ಘೋಷಿಸಲಾಗಿತ್ತು.
ವಿಷಾದದ ಸಂಗತಿಯೆಂದರೆ ಅದೇ ಬಿಷಪ್ ಅಲ್ಫೊನ್ಸಸ್ ಮಥಾಯಿಸರು ಬೆಂಗಳೂರಿನ ಅಧಿಕಾರ ವಹಿಸಿಕೊಂಡ ಮೇಲೆ ಕನ್ನಡ ಅನುಷ್ಠಾನದ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ತಮ್ಮ ಗಮನವೆಲ್ಲ ಸಂಖ್ಯಾಬಾಹುಳ್ಯದ ಮೌನಿಗಳ ಕಡೆಯೇ ಇದೆ ಎಂದು ಅವರು ಘೋಷಿಸಿದರು. ಕ್ರೈಸ್ತರನ್ನು ಭಾಷಾವಾರು ತಲೆಯೆಣಿಕೆಯ ಮೂಲಕ ಕಾಣಲೆಳಸಿದರು. ಕನ್ನಡ ಅನುಷ್ಠಾನದ ಆ ೩/೮೩ ಸುತ್ತೋಲೆಗೆ ನಾಲ್ಕು ವರ್ಷ ತುಂಬುವ ದಿನ ಅಂದರೆ ೨೪ನೇ ಮಾರ್ಚ್ ೧೯೮೭ರಂದು ಕನ್ನಡಿಗರು ಒಂದು ಸಾಂಕೇತಿಕ ಸತ್ಯಾಗ್ರಹ ಹಮ್ಮಿಕೊಂಡರು. ಬೆಣ್ಣೆಯಲ್ಲಿ ಕೂದಲೆಳೆದಂತೆ ವರ್ತಿಸುತ್ತಿದ್ದ ಬಿಷಪರು ಈ ವಿಷಯ ತಿಳಿಯುತ್ತಿದ್ದಂತೆ ಹೌಹಾರಿ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳಬೇಕೆಂದು ತಮ್ಮ ಬಂಟರ ಮೂಲಕ ವಿನಂತಿಸಿದರು. ಅವರಿಂದ ಕನ್ನಡಪರವಾದ ಹೇಳಿಕೆ ಲಿಖಿತವಾಗಿ ಬರುವವರೆಗೂ ಸತ್ಯಾಗ್ರಹ ಅಚಲ ಎಂದು ಮರುತ್ತರ ನೀಡಲಾಯಿತು. ಕೊನೆಗೆ ಬಿಷಪರು ೩/೮೩ ಸುತ್ತೋಲೆಯ ಯಥಾವತ್ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುತ್ತೇನೆಂದು ೨೩-೦೩-೧೯೮೭ರಲ್ಲಿ ಲಿಖಿತ ಹೇಳಿಕೆಯಿತ್ತರು. ಸತ್ಯಾಗ್ರಹ ನಡೆಯಲಿಲ್ಲ.
ಅಚ್ಚರಿಯ ಸಂಗತಿಯೆಂದರೆ ಮಾನ್ಯ ಅಲ್ಫೋನ್ಸ್ ಮಥಾಯಿಸರು ಬಿಷಪ್ತ್ರಯರ ವರದಿಯನ್ನು ಮೂಲೆಗೆಸೆದು ಕನ್ನಡಿಗರ ಪ್ರಾತಿನಿಧ್ಯವಿಲ್ಲದ ಬೇರೊಂದು ಸಮಿತಿಯನ್ನು ನೇಮಕ ಮಾಡಿದರು. ಆ ಸಮಿತಿಯೂ ಕನ್ನಡ ಪರವಾದ ವರದಿಯನ್ನೇ ನೀಡಿತು. ಆ ವರದಿಯನ್ನೂ ಮೂಲೆಗೆಸೆದ ಬಿಷಪ್ ಅಲ್ಫೊನ್ಸ್ ಮಥಾಯಿಸರು ಬೆಂಗಳೂರಿನ ಭಾಷಾ ಸಮಸ್ಯೆಗೆ ಬೇರೊಂದು ಬಣ್ಣ ಕೊಟ್ಟರು. ಬೆಂಗಳೂರು ಕಾಸ್ಮೋಪಾಲಿಟನ್ ನಗರವಾದ್ದರಿಂದ ಕನ್ನಡಕ್ಕೆ ಹೆಚ್ಚು ಮನ್ನಣೆ ನೀಡಬೇಕಿಲ್ಲ ಎಂದರು. ಕ್ರೈಸ್ತ ಕನ್ನಡಿಗರ ಭಾಷಾ ಚಳವಳಿ ಅಧಿಕಾರದಾಹಕ್ಕಾಗಿ ನಡೆದಿದೆ ಎಂದು ತುತ್ತೂರಿ ಊದತೊಡಗಿದರು.
೧೯೮೭ ಆಗಸ್ಟ್ ೩೦ ರಂದು ಸಂಘವು ಬೆಂಗಳೂರಿನ ಪುರಭವನದಲ್ಲಿ ಕನ್ನಡ ಕ್ರೈಸ್ತರ ರಾಜ್ಯಮಟ್ಟದ ಸಮ್ಮೇಳನವನ್ನು ಏರ್ಪಡಿಸಿ ತನ್ನ ನೀತಿ ನಿಯಮಗಳನ್ನು ಪ್ರತಿಬಿಂಬಿಸಿತು. o ಕರ್ನಾಟಕದಲ್ಲಿ ಕ್ರಿಸ್ತರಾಜ್ಯದ ಸ್ಥಾಪನೆಗೆ ಕನ್ನಡವೇ ಮೂಲಮಂತ್ರವಾಗಬೇಕು. o ಚರ್ಚಿನ ಪ್ರಕಟನೆಗಳು ಕನ್ನಡದಲ್ಲೂ ಇರಬೇಕು. o ಕಥೋಲಿಕ ಧರ್ಮಸಭೆಯು ಕನ್ನಡದಲ್ಲಿ ಬೈಬಲ್ ಪ್ರಕಟನೆಗೆ ಮುಂದಾಗಬೇಕು. o ಅನ್ಯ ಭಾಷಿಕರು ತಪ್ಪುತಪ್ಪಾಗಿ ಕನ್ನಡ ಕಲಿತು ವ್ಯವಹರಿಸುವುದಕ್ಕಿಂತ ನಮ್ಮ ಸಂಸ್ಕೃತಿಯವರೇ ಆದ ಕನ್ನಡಿಗ ಪಾದ್ರಿಗಳೂ ಬಿಷಪರೂ ನಮಗೆ ಬೇಕು. o ಗುರುವಿದ್ಯಾಲಯದಲ್ಲಿ ಅನ್ಯ ರಾಜ್ಯದವರ ಆಡಳಿತ ತೊಲಗಿಸಿ ಅಲ್ಲಿ ನಮ್ಮ ರಾಜ್ಯದ ವಾತಾವರಣ ಮೂಡಿಸಬೇಕು. o ಚರ್ಚಿನ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಬೇಕು. o ಬೇರೆ ಭಾಷೆಗಳಲ್ಲಿ ಪ್ರಾರ್ಥನೆ ಆರಾಧನೆಗಳು ನಡೆಯಬಾರದೆಂದು ನಾವೆಂದೂ ಹೇಳಿಲ್ಲ, ಆದರೆ ಕ್ರಿಸ್ತಜಯಂತಿ, ಶುಭಶುಕ್ರವಾರದಂಥ ಮುಖ್ಯ ಸಂದರ್ಭಗಳಲ್ಲಿನ ಮುಖ್ಯ ಧಾರ್ಮಿಕ ವಿಧಿಗಳು ಎಲ್ಲಾ ದೇವಾಲಯಗಳಲ್ಲಿ ಕನ್ನಡದಲ್ಲೇ ನಡೆಯಬೇಕು. o ಬಿಷಪರು ಪಾಲ್ಗೊಳ್ಳುವ ಯಾವುದೇ ಸಮಾರಂಭ, ಪೂಜೆ, ಪ್ರಾರ್ಥನೆ, ಆರಾಧನೆಗಳು ಜನಸಾಮಾನ್ಯರ ಆಡುಭಾಷೆಯಾದ ಕನ್ನಡದಲ್ಲೇ ಇರಬೇಕು.
ಈ ಹಕ್ಕೊತ್ತಾಯಗಳಿಗೆ ಬಿಷಪ್ ಅಲ್ಫೋನ್ಸ್ ಮಥಾಯಿಸರು ಕವಡೆಯ ಕಿಮ್ಮತ್ತನ್ನೂ ನೀಡದೆ ೩-೧೨-೧೯೮೭ರಂದು "ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ"ದ ಮೇಲೆ ಕೋರ್ಟಿನ ತಡೆಯಾಜ್ಞೆ ತಂದು ಸತ್ಯಾಗ್ರಹ ನಡೆಸದಂತೆ, ಚರ್ಚ್ಅನ್ನು ಪ್ರಶ್ನಿಸದಂತೆ ಮಾಡಿದರು. ಆಗ ಕನ್ನಡ ಕ್ರೈಸ್ತರಿಗೆ ಬೆಂಬಲವಾಗಿ "ಕನ್ನಡ ಕಾರ್ಯಕರ್ತರ ವೇದಿಕೆ"ಯು ಹುಟ್ಟಿ ಕಬ್ಬನ್ಪಾರ್ಕ್ನಲ್ಲಿ ಸತ್ಯಾಗ್ರಹ ಶಿಬಿರ ನಡೆದು ಬಿಷಪರ ನಿವಾಸದವರೆಗೆ ಸುಮಾರು ೧೫೦೦೦ ಕಾರ್ಯಕರ್ತರ ಬೃಹತ್ ಮೆರವಣಿಗೆ ಸಾಗಿತು.
ಆರ್ಚ್ ಬಿಷಪರ ಕೊಲೆಯತ್ನ
[ಬದಲಾಯಿಸಿ]೧೯-೦೪-೧೯೯೦ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಬೆಂಗಳೂರಿನ ವಿಕಾರ್ ಜನರಲ್ ಆಗಿದ್ದ ಫಾದರ್ ಜೋಸೆಫ್ ಡಿಸಿಲ್ವಾ (ಇಂದು ಬಳ್ಳಾರಿ ಬಿಷಪ್) ರವರು ಹೇಳಿಕೆ ನೀಡಿ ಕನ್ನಡ ಕ್ರೈಸ್ತ ಗುರುಗಳಲ್ಲಿ ಒಬ್ಬರಾದ ಫಾದರ್ ಫಾತಿರಾಜ್ರವರು ಎಂಟೊಂಬತ್ತು ಮಂದಿಯನ್ನು ಜಮಾಯಿಸಿಕೊಂಡು ೬-೪-೧೯೯೦ರಂದು ಮಧ್ಯಾಹ್ನ ೧೧:೩೦ ಘಂಟೆಗೆ ಆರ್ಚ್ಬಿಷಪ್ಪರನ್ನು ಕೊಲೆ ಮಾಡಲು ಬಂದಿದ್ದರೆಂದು ಆರೋಪ ಮಾಡಿದ್ದರು. ವಿಪರ್ಯಾಸವೆಂದರೆ ಈ ಘಟನೆ ನಡೆಯಿತೆಂದು ಹೇಳಲಾದ ಸಮಯದಲ್ಲಿ ಫಾದರ್ ಫಾತಿರಾಜ್ರವರು ಹಾಸನದಲ್ಲಿದ್ದರು. ಆ ವೇಳೆಯಲ್ಲಿ ಅವರು ಬ್ಯಾಂಕಿನಿಂದ ಹಣ ಪಡೆದುದಕ್ಕೆ ಪುರಾವೆ ಹಾಗೂ ಅದನ್ನು ಬ್ಯಾಂಕ್ ಅಧಿಕಾರಿಗಳು ಪ್ರಮಾಣೀಕರಿಸಿದ ಪತ್ರವನ್ನು ಹಿಡಿದುಕೊಂಡು ಮಹಾಧರ್ಮಾಧಿಕಾರಿಗಳಿಗೆ ಮನದಟ್ಟಾಗಿಸಲು ತೆರಳಿದ ಹನ್ನೆರಡು ಮಂದಿ ಕನ್ನಡ ಗುರುಗಳು ಮಾಡಿದ ಪ್ರಯತ್ನವೆಲ್ಲ ಗೋರ್ಕಲ್ಲ ಮೇಲೆ ಮಳೆ ಹುಯಿದಂತಾಯ್ತು. ಅದು ಸಾಲದೆಂಬಂತೆ ಘಟನೆ ನಡೆಯಿತೆನ್ನಲಾದ ದಿನ ಫಾದರ್ ಫಾತಿರಾಜ್ರೊಂದಿಗೆ ಬಂದಿದ್ದ ಇತರರು ಕನ್ನಡ ಗುರುಗಳಾದ ಫಾದರ್ ಚಿನ್ನಪ್ಪ, ಫಾದರ್ ಅಂತಪ್ಪ, ಫಾದರ್ ಸೆಲ್ವರಾಜ್, ಫಾದರ್ ಅಮೃತರಾಜ್, ಫಾದರ್ ಆರೋಗ್ಯಸ್ವಾಮಿ, ಫಾದರ್ ತೋಮಾಸ್ ಎಂದು ಆರೋಪಿಸಲಾಯಿತು. ಈ ಹಿನ್ನೆಲೆಯಲ್ಲಿ ಆ ಸರಹದ್ದಿನ ಪೊಲೀಸರು ಕೊಲೆ ಆರೋಪದ ಮೊಕದ್ದಮೆಯನ್ನು ದಾಖಲಿಸಿದರು. ಇದನ್ನೇ ನೆಪವಾಗಿಸಿಕೊಂಡು ಸಂತ ಪ್ಯಾಟ್ರಿಕ್ಕರ ದೇವಾಲಯದಲ್ಲಿದ್ದ ಫಾದರ್ ಅಂತಪ್ಪನವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ಧರ್ಮಪ್ರಾಂತ್ಯದ ಸಲಹಾ ಕೂಟದಿಂದ ಫಾದರ್ ಚಿನ್ನಪ್ಪರವರನ್ನು ತೆಗೆದುಹಾಕಲಾಯಿತು. ಇತರ ಕನ್ನಡ ಗುರುಗಳನ್ನು ಧರ್ಮಪ್ರಾಂತ್ಯದಿಂದ ದೂರವಿರುವ ಊರುಗಳಿಗೆ ವರ್ಗಾಯಿಸಲಾಯಿತು.
ಐದು ವರ್ಷಗಳಷ್ಟು ದೀರ್ಘಕಾಲ ವಿಚಾರಣೆ ನಡೆದು ದಿನಾಂಕ ೧-೧೨-೧೯೯೫ರಂದು ಘನ ನ್ಯಾಯಾಲಯವು ಫಾದರ್ ಫಾತಿರಾಜ್ರವರನ್ನು ನಿರ್ದೋಷಿಯೆಂದು ಸಾರಿ ಮೊಕದ್ದಮೆಯನ್ನು ವಜಾ ಮಾಡಿತು. ಹೀಗೆ ಹದಿಮೂರು ವರ್ಷಗಳ ಕಾಲ ಆಡಳಿತ ನಡೆಸಿದ ಅಲ್ಫೋನ್ಸಸ್ ಮಥಾಯಿಸರ ಅವಧಿಯಲ್ಲಿ ಬೆಂಗಳೂರಿಗೆ ಕಿರಿಯ ಗುರುಮಠ ಬಂತು ಎಂಬುದನ್ನು ಬಿಟ್ಟರೆ ಎದೆ ತಟ್ಟಿ ಹೇಳಿಕೊಳ್ಳುವಂಥ ಸಾಧನೆಯೇನೂ ಆಗಲಿಲ್ಲ. ಕನ್ನಡಿಗ ಪಾದ್ರಿ ಮಿಖೇಲಪ್ಪ ಮೈಸೂರಿನ ಬಿಷಪರಾಗಿ ಆಯ್ಕೆಯಾದರು. ಹದಿಮೂರು ವರ್ಷಗಳಲ್ಲಿ ಬೆರೆಳೆಣಿಕೆಯಷ್ಟು ಮಂದಿ ಮಾತ್ರವೇ ಗುರುದೀಕ್ಷೆ ಪಡೆದರು. ಕನ್ನಡ ಪತ್ರಿಕೆ 'ಕರ್ನಾಟಕ ತಾರೆ' ನಿಂತುಹೋಯಿತು. ಒಂದಾದರೂ ಶಾಲೆ ಕಾಲೇಜು ಪ್ರಾರಂಭವಾಯಿತೇ? ಇಲ್ಲವೇ ಇಲ್ಲ. ಕೋಟ್ಯಾಂತರ ರೂಪಾಯಿಗಳ ಆಸ್ತಿಪಾಸ್ತಿ ಮಾರಿಕೊಂಡರು. ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಬಿಷಪರ ಮನೆಯನ್ನು ಪುನರ್ ನಿರ್ಮಾಣ ಮಾಡಿದರು. ಹೊಸದೇವಾಲಯ ಕಟ್ಟಬೇಕೇ - ಬಿಷಪರ ಬಳಿ ಹಣವಿಲ್ಲ, ಹಳ್ಳಿಯ ದೇವಾಲಯಗಳು ಸೋರುತ್ತಿವೆಯೇ - ರಿಪೇರಿಗೆ ಹಣವಿಲ್ಲ. ಇವರ ನಡವಳಿಕೆಯನ್ನು ಪ್ರಶ್ನಿಸಿದ ಪಾದ್ರಿಗಳಿಗೆ ಹಳ್ಳಿಗಳಿಗೆ ಎತ್ತಂಗಡಿ, ಓಲೈಸಿದವರಿಗೆ ಬಿಷಪ್ ಗಿರಿ.
೧೯೯೮ ಮೇ ೨೪ರಂದು ಬೆಂಗಳೂರಿನ ಪುರಭವನದಲ್ಲಿ ತನ್ನ ಎರಡನೇ ರಾಜ್ಯಮಟ್ಟದ ಸಮ್ಮೇಳನ ನಡೆಸಿದ ಸಂಘವು ಈ ನಾಲ್ಕು ನಿರ್ಣಯಗಳನ್ನು ಕೈಗೊಂಡಿತು.
೧. ಕನ್ನಡ ನಾಡು ನುಡಿ ಸಂಸ್ಕೃತಿಯ ಉಳಿವಿಗಾಗಿ ಸ್ಥಳೀಯ ಕನ್ನಡ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹ ಸ್ಥಳೀಯ ಕನ್ನಡ ಧರ್ಮಗುರುವೊಬ್ಬರನ್ನು ಬೆಂಗಳೂರು ಮಹಾಧರ್ಮಪ್ರಾಂತ್ಯದಲ್ಲಿ ತೆರವಾಗಿರುವ ಆರ್ಚ್ಬಿಷಪ್ ಸ್ಥಾನಕ್ಕೆ ನೇಮಿಸಬೇಕೆಂದು ಈ ಸಮಾವೇಶ ಒಕ್ಕೊರಲಿನಿಂದ ಪೋಪ್ ಜಾನ್ ಪಾಲ್ ಹಾಗೂ ಇತರ ಉನ್ನತ ವರಿಷ್ಠರನ್ನು ಒತ್ತಾಯಿಸುತ್ತದೆ. ೨. ಪೋಪರ ಆದೇಶದಂತೆ ತ್ರಿಬಿಷಪರ ವರದಿಯ ಆಧಾರದ ಮೇಲೆ ಚರ್ಚ್ಗಳಲ್ಲಿ ಕನ್ನಡವನ್ನು ಪೂರ್ಣ ಜಾರಿ ಮಾಡಿ ಸಮಸ್ತ ಕ್ರೈಸ್ತರನ್ನು ಬೇಧಭಾವಗಳ ಸಂಚಿನಿಂದ ಹೊರತಂದು ಒಂದೇ ವೇದಿಕೆಯಡಿ ತರಬೇಕೆಂದು ಹೊರಡಿಸಿದ ಐತಿಹಾಸಿ ಸುತ್ತೋಲೆ ೩/೮೩ನ್ನು ಯಥಾವತ್ತಾಗಿ ಜಾರಿ ಮಾಡಬೇಕೆಂದು ಈ ಸಮಾವೇಶ ಒಕ್ಕೊರಲಿನಿಂದ ಒತ್ತಾಯಿಸುತ್ತದೆ. ೩. ಗ್ರಾಮೀಣ ಕ್ರೈಸ್ತರ ಜೀವನ ಹಸನಾಗಿಸಲು ಎಲ್ಲಾ ಹಳ್ಳಿಗಳಲ್ಲಿಯೂ ಪ್ರೌಢಶಾಲೆಗಳನ್ನೂ ಕಾಲೇಜುಗಳನ್ನೂ ತೆರೆದು, ವಿಶೇಷವಾಗಿ ಪ್ರತಿಯೊಂದು ಹಳ್ಳಿಯಿಂದ ಯುವಕರನ್ನು ಯುವತಿಯರನ್ನು ಗುರಗಳನ್ನಾಗಿಯೂ ಸಿಸ್ಟರ್ಗಳನ್ನಾಗಿಯೂ ಮಾಡಲು ಧರ್ಮಸಭೆ ಮುಂದೆ ಬರಬೇಕೆಂದು ಹಾಗೂ ಆಸ್ಪತ್ರೆಗಳಲ್ಲೂ ಶಾಲಾಕಾಲೇಜುಗಳಲ್ಲೂ ಸ್ಥಳೀಯ ಕನ್ನಡ ಜನತೆಗೆ ಉದ್ಯೋಗ ನೀಡಬೇಕೆಂದು ಈ ಸಮಾವೇಶ ಒತ್ತಾಯಪೂರ್ವಕವಾಗಿ ಒತ್ತಾಯಿಸುತ್ತದೆ. ೪. ಕನ್ನಡ ಕ್ರೈಸ್ತರ ಮೂಲಭೂತ ಸಮಸ್ಯೆಗಳನ್ನು ಪೋಪ್ ಹಾಗೂ ಧರ್ಮದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಕರ್ನಾಟಕ ಸರ್ಕಾರ ಪತ್ರ ಬರೆದು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕೆಂದು ಈ ಸಮಾವೇಶ ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಪಡಿಸುತ್ತದೆ.
ಈ ನಿರ್ಣಯಗಳಿಗೆ ಸರ್ಕಾರವೂ ಸ್ಪಂದಿಸಿತಲ್ಲದೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಜೆ ಎಚ್ ಪಟೇಲರು ಸರ್ಕಾರದ ಪರವಾಗಿ ಪೋಪರಿಗೆ ಪತ್ರವನ್ನು ಬರೆದು ಕನ್ನಡ ಬಿಷಪರ ಆಯ್ಕೆಗೆ ತಮ್ಮ ದನಿಗೂಡಿಸಿದರು.
ಆದರೂ ಕನ್ನಡಿಗರಲ್ಲದ ಇಗ್ನೇಷಿಯಸ್ ಪಿಂಟೊ ಗದ್ದುಗೆಯೇರಿ ತನ್ನ ಅಧಿಕಾರಾವಧಿ ೧೭ ತಿಂಗಳು ಮಾತ್ರ ನನ್ನಿಂದೇನೂ ನಿರೀಕ್ಷಿಸಬೇಡಿ ಎಂದೆನ್ನುತ್ತಾ ಧರ್ಮಪೀಠವನ್ನು ಹದಿನೇಳು ವರ್ಷಗಳ ಹಿಂದಕ್ಕೆ ಒಯ್ದದ್ದು ಮಾತ್ರ ಕರಾಳ ಸತ್ಯ. ವಿದೇಶೀಯರಿಗಿಂತ ಕೆಟ್ಟದಾಗಿ ಕನ್ನಡ ಉಚ್ಚರಿಸುತ್ತಾ ಮಥಾಯಿಸರ ದ್ವೇಷವನ್ನೇ ಮುಂದುವರಿಸುತ್ತಾ ಕ್ರಿಸ್ತ ಮಂದೆಯನ್ನು ಸಲಹಿದ ಬಿಷಪ್ ಪಟ್ಟ ಪಡೆದಿದ್ದೇ ಪೊಲೀಸರ ಸರ್ಪಗಾವಲಿನಲ್ಲಿ. ತಾನು ಕನ್ನಡಿಗ ಕನ್ನಡಿಗ ಎಂದು ಪತ್ರಿಕಾ ಹೇಳಿಕೆ ಕೊಡುತ್ತಲೇ ಬಂದ ಇವರಿಗೆ ಒಂದಾದರೂ ಹಳ್ಳಿಗೆ ಹೋಗಿ ಆತ್ಮೀಯವಾಗಿ ಕನ್ನಡದಲ್ಲಿ ಮಾತನಾಡುವ ಸ್ಥೈರ್ಯವಿತ್ತೇ? ತಮಿಳು ಬಿಷಪ್ ಆರೋಕ್ಯಸಾಮಿಯವರನ್ನು ಅಧಿಕಾರದಿಂದ ಇಳಿಸುವಾಗ ಚಳುವಳಿಯ ಮುಂಚೂಣಿಯಲ್ಲಿದ್ದ ಇವರು ತಾವು ಅಧಿಕಾರ ಪಡೆದಾಗ ತತ್ವಸಿದ್ಧಾಂತಗಳನ್ನು ಮರೆತರೇಕೋ?
ಆಗಬೇಕಾದುದೇನು?
[ಬದಲಾಯಿಸಿ]ಬಿಷಪರಾದಿಯಾಗಿ ಪಾದ್ರಿ ಹಾಗೂ ಭಕ್ತರನ್ನು ಒಂದೇ ಕುಟುಂಬವಾಗಿಸಿ ಒಟ್ಟಿಗೆ ಪೂಜಾರ್ಪಣೆ ಮಾಡುವ ಹೊಣೆ ಹೊತ್ತ ಧರ್ಮಸಭೆ ಬೆಂಗಳೂರಿನಲ್ಲಿ ಕನ್ನಡ ಬೇರೆ, ತಮಿಳು ಬೇರೆ, ಇಂಗ್ಲಿಷ್ ಬೇರೆ ಎಂದು ವಿಂಗಡಿಸಿ ತಾನು ಮೃಷ್ಟಾನ್ನ ಭೋಜನ ಉಣ್ಣುತ್ತಿದೆ. ಚರ್ಚುಗಳೂ ಇತರ ಸಂಸ್ಥೆಗಳೂ ವಾಣಿಜ್ಯಕೇಂದ್ರಗಳಾಗಿ ಮಾರ್ಪಟ್ಟು ಹಣದ ಹೊಳೆಯಲ್ಲಿ ತೇಲುತ್ತಿವೆ. ಸುವಾರ್ತೆಯನ್ನು ಕೇಳದ ಬಹುಸಂಖ್ಯಾತ ಮಂದಿಗೆ ಅದನ್ನು ಅರುಹುವ ಮನೋಭಿಲಾಷೆಯಾಗಲೀ ಉತ್ಸಾಹವಾಗಲೀ ಈ ಧರ್ಮಸಭೆಗಿಲ್ಲ. ಇರುವಷ್ಟೇ ಜನಕ್ಕೆ ಆಧ್ಯಾತ್ಮಿಕ ನೆರವು ಒದಗಿಸಿ ಉಳಿದಂತೆ ಸಿಡುಕುತ್ತಾ ಬದುಕುವುದು ಇಲ್ಲವೇ ಸಮಯವಿಲ್ಲ ಎಂದು ಜಾರಿಕೊಳ್ಳುವುದು ಬೆಂಗಳೂರು ಧರ್ಮಸಭೆಯ ಫ್ಯಾಷನ್ ಆಗಿದೆ. ಬಡಜನರಿಗೆ ಸೇವೆ, ಆರೋಗ್ಯ ಮತ್ತು ಶಿಕ್ಷಣ ಎಂಬ ಧ್ಯೇಯವಾಕ್ಯ ಹೊತ್ತ ಕ್ರೈಸ್ತ ಸಂಸ್ಥೆಗಳಿಗೆ ಬೆಂಗಳೂರಿನ ಹೊರಗಿರುವ ಹಳ್ಳಿಗಳ ನೆನಪೇ ಆಗುವುದಿಲ್ಲ. ಈ ಉದ್ದೇಶಗಳಿಗಾಗಿ ಬರುವ ವಿದೇಶೀ ಹಣದ ಫಲಾನುಭವಿಗಳು ಯಾರೆಂಬುದನ್ನು ಹೇಳಬೇಕಾಗಿಲ್ಲವಷ್ಟೆ? ಇವುಗಳ ವಿರುದ್ಧ ಪ್ರತಿಭಟನೆ ನಡೆದರೆ ಅದನ್ನು ಭಾಷಾ ಚಳವಳಿ ಎಂದು ಕರೆದು ಅದನ್ನು ದಮನ ಮಾಡಲು ಷಡ್ಯಂತ್ರ ಹೂಡುವುದು ಎಂಥಾ ಧರ್ಮ? ಇಂಥ ಪಟ್ಟಭದ್ರ ನಿರಂಕುಶ ಪುರೋಹಿತಶಾಹಿಯ ವಿರುದ್ಧವಲ್ಲವೇ ಅಂದು ಕ್ರಿಸ್ತ ಸಿಡಿದೆದ್ದದ್ದು.
ಬೆಂಗಳೂರಿನ ಮಹಾಧರ್ಮಪೀಠದಲ್ಲಿ ಗಣನೀಯ ಪ್ರಮಾಣದಲ್ಲಿ ತಿಗುಳ ಭಾಷಿಕರೂ, ತೆಲುಗು ಭಾಷಿಕರೂ ಇದ್ದಾರೆ. ಇಲ್ಲಿನ ಮೂಲನಿವಾಸಿಗಳಾದ ಇವರು ತಮ್ಮ ಧಾರ್ಮಿಕ ಭಾಷೆಯಾಗಿ ಕನ್ನಡವನ್ನೇ ಬಳಸುತ್ತಾರೆ. ಇನ್ನು ಕೊಂಕಣಿಗರೂ ಮಲಯಾಳಿಗರೂ ಮೇಲ್ವರ್ಗದ ತಮಿಳರೂ ಕನ್ನಡಕ್ಕೆ ಸಹಜವಾಗಿ ಒಗ್ಗಿಕೊಂಡಿದ್ದಾರೆ. ಕೆಲವೇ ಭಾಷಾಂಧರಿಗಾಗಿ ಈ ಸಮಸ್ಯೆಯನ್ನು ಧರ್ಮಸಭೆ ಇಷ್ಟು ದೀರ್ಘಕಾಲ ಬೆಳೆಸಿಕೊಂಡು ಬಂದಿದ್ದೇ ಅಕ್ಷಮ್ಯ. ಪ್ರೀತಿಯಿಂದ ಗೆಲ್ಲಬಹುದಾದ್ದನ್ನು ಈಟಿಯಿಂದ ತಿವಿಯ ಹೊರಟಿದ್ದೇ ದೊಡ್ಡ ಅಪರಾಧ. ಧರ್ಮಸಭೆ ಇನ್ನಾದರೂ ಗುರುಮಠದಲ್ಲಿ ಹಾಗೂ ಚರ್ಚುಗಳಲ್ಲಿ ಕನ್ನಡದ ವಾತಾವರಣ ಮೂಡಿಸಬೇಕು, ಕನ್ನಡಿಗ ಗುರುಅಭ್ಯರ್ಥಿಗಳಿಗೆ ಸ್ಥಾನ ಕಲ್ಪಿಸಬೇಕು, ಎಲ್ಲ ಉದ್ಯೋಗಗಳನ್ನು ಮಣ್ಣಿನ ಮಕ್ಕಳಿಗೆ ನೀಡಬೇಕು, ಹಳ್ಳಿಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆಯಲು ಮುಂದಾಗಬೇಕು, ಹಳ್ಳಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ನಗರದಲ್ಲಿ ವಸತಿಯ ವ್ಯವಸ್ಥೆಯಾಗಬೇಕು, ನಗರಗಳಲ್ಲಿ ಕೇಂದ್ರಿತವಾಗಿರುವ ಕಾನ್ವೆಂಟುಗಳು ಹಳ್ಳಿಗಳಿಗೆ ತೆರಳಿ ಅಲ್ಲಿನ ಬಡಜನತೆಗೆ ಆರೋಗ್ಯ, ಶಿಕ್ಷಣ ನೀಡಬೇಕು. ಅಲ್ಲಿನ ಯುವಕರಿಗೆ ತಮ್ಮ ಸಂಸ್ಥೆಗಳಲ್ಲಿ ಉದ್ಯೋಗ ನೀಡಬೇಕು. ಧರ್ಮಸಭೆ ತನ್ನ ಯೋಜನಾ ನಿಧಿಯಿಂದ ಆ ಯುವಕರು ಸ್ವಉದ್ದಿಮೆ ನಡೆಸಲು ನೆರವಾಗಬೇಕು. ನಗರಪ್ರದೇಶಗಳಲ್ಲಿನ ಕ್ರೈಸ್ತರೆಲ್ಲರೂ ಒಂದೇ ಪೀಠದಡಿಗೆ ಬರುವಂತೆ ಎಲ್ಲರಿಗೂ ಸಂಪರ್ಕ ಮಾಧ್ಯಮವಾದ ಕನ್ನಡದಲ್ಲಿ ಪೂಜಾರ್ಪಣೆ ಮಾಡಬೇಕು. (ಕನ್ನಡ ಬಾರದವರು ತಂತಮ್ಮ ಭಾಷೆಗಳಲ್ಲಿ ಪೂಜೆ ಸಲ್ಲಿಸಲು ಖಾಸಗಿ ಪೂಜಾರ್ಪಣೆ ವ್ಯವಸ್ಥೆಯನ್ನು ಧರ್ಮಸಂಹಿತೆ Canon 514 ಹೇಳಿದೆಯಲ್ಲವೇ?)
ಕರ್ನಾಟಕ ರಾಜ್ಯದ ಕ್ರೈಸ್ತ ಕಥೋಲಿಕ ಸಮುದಾಯವನ್ನು ಒಂಬತ್ತು ವಿವಿಧ ಧರ್ಮಪೀಠಗಳ ಅಡಿ ಬರುವಂತೆ ವಿಂಗಡಿಸಲಾಗಿದೆ.
೧ ಬೆಂಗಳೂರುನಗರ,ಗ್ರಾಮಾಂತರ,ರಾಮನಗರ,ಕೋಲಾರ,ಚಿಕ್ಕಬಳ್ಳಾಪುರ,ತುಮಕೂರು ಜಿಲ್ಲೆಗಳನ್ನೊಳಗೊಂಡ ಬೆಂಗಳೂರು ಮಹಾಧರ್ಮಪೀಠಕ್ಕೆ ಆರ್ಚ್ ಬಿಷಪ್ ಬೆರ್ನಾರ್ಡ್ ಮೋರಾಸ್ - ಕೊಂಕಣಿ ಮಾತೃಭಾಷೆ ೨ ಮೈಸೂರು ಧರ್ಮಪೀಠಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳನ್ನೊಳಗೊಂಡ ಬಿಷಪ್ ಥಾಮಸ್ ವಾಳಪಿಳ್ಳಿ – ಮಲಯಾಳ ಮಾತೃಭಾಷೆ ೩ ಚಿಕ್ಕಮಗಳೂರು, ಹಾಸನ ಜಿಲ್ಲೆಗಳನ್ನೊಳಗೊಂಡ ಚಿಕ್ಕಮಗಳೂರು ಧರ್ಮಪೀಠಕ್ಕೆ ಬಿಷಪ್ ಟಿ ಅಂತೋಣಿಸ್ವಾಮಿ-ಕನ್ನಡ ಮಾತೃಭಾಷೆ ೪ ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳನ್ನೊಳಗೊಂಡ ಮಂಗಳೂರು ಧರ್ಮಪೀಠಕ್ಕೆ ಅಲೋಶಿಯಸ್ ಪಾಲ್ ಡಿಸೋಜ - ಕೊಂಕಣಿ ಮಾತೃಭಾಷೆ ೫ ಉತ್ತರಕನ್ನಡ ಜಿಲ್ಲೆಯನ್ನೊಳಗೊಂಡ ಕಾರವಾರ ಧರ್ಮಪೀಠಕ್ಕೆ ಬಿಷಪ್ ವಿಲಿಯಂ ಡಿಮೆಲ್ಲೋ - ಕೊಂಕಣಿ ಮಾತೃಭಾಷೆ ೬ ಶೀಮೊಗ್ಗೆ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡ ಶೀಮೊಗ್ಗೆ ಧರ್ಮಪೀಠಕ್ಕೆ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ - ಕೊಂಕಣಿ ಮಾತೃಭಾಷೆ ೭ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ಬಳ್ಳಾರಿ ಧರ್ಮಪೀಠಕ್ಕೆ ಬಿಷಪ್ ಹೆನ್ರಿ ಡಿಸೋಜ - ಕೊಂಕಣಿ ಮಾತೃಭಾಷೆ ೮ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಬಿಜಾಪುರ, ಹಾವೇರಿ ಜಿಲ್ಲೆಗಳನ್ನೊಳಗೊಂಡ ಬೆಳಗಾವಿ ಧರ್ಮಪೀಠಕ್ಕೆ ಬಿಷಪ್ ಪೀಟರ್ ಮಚಾದೋ - ಕೊಂಕಣಿ ಮಾತೃಭಾಷೆ ೯ ಗುಲ್ಬರ್ಗಾ, ಬೀದರ್ ಜಿಲ್ಲೆಗಳನ್ನೊಳಗೊಂಡ ಗುಲ್ಬರ್ಗಾ ಧರ್ಮಪೀಠಕ್ಕೆ ಬಿಷಪ್ ರಾಬರ್ಟ್ ಮಿರಾಂಡ - ಕೊಂಕಣಿ ಮಾತೃಭಾಷೆ
ನೋಡಿ, ತೆರವಾಗಿದ್ದ ಬಳ್ಳಾರಿ ಧರ್ಮಪೀಠಕ್ಕೆ ಮತ್ತೊಮ್ಮೆ ಕೊಂಕಣಿ ಮಾತೃಭಾಷಿಕರೇ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಬೇರಾರೂ ಇವರಿಗೆ ಸಿಗಲಿಲ್ಲವೇ? ಕನ್ನಡನಾಡಿನಲ್ಲಿ ಕ್ರಿಸ್ತರಾಜ್ಯದ ಪ್ರಸರಣೆಗೆ ಹಾಗೂ ಕನ್ನಡದ ಮಣ್ಣಿನ ಮಕ್ಕಳ ಪೋಷಣೆಗಿಂತಲೂ ಇವರಿಗೆ ಅಧಿಕಾರದಾಹ ಮತ್ತು ಸ್ವಜನಪಕ್ಷಪಾತವೇ ಹೆಚ್ಚಾಗಿದೆಯಲ್ಲವೇ? ಈಗಿನ ಆರ್ಚ್ ಬಿಷಪರಾದ ಬೆರ್ನಾರ್ಡ್ ಮೊರಾಸರ ಕಾಲದಲ್ಲಾದರೂ ಕನ್ನಡನಾಡಿನ ಕ್ರೈಸ್ತ ಸಮುದಾಯಕ್ಕೆ ನ್ಯಾಯ ಸಿಗುತ್ತದೆಂದು ಭಾವಿಸಿದ್ದು ಸುಳ್ಳಾಯಿತಲ್ಲ? ಮಂಗಳೂರಿನ ಕೊಂಕಣಿ ಜನ ಇಂಡಿಯಾದಲ್ಲಿ ಸುಮಾರು ೪೦ ಕಡೆಗಳಲ್ಲಿ ಬಿಷಪರಾಗಿದ್ದಾರೆ. ಆದರೆ ಮಂಗಳೂರು ಪ್ರಾಂತ್ಯದಲ್ಲಿ ಕೊಂಕಣಿ ಭಾಷಿಕರನ್ನು ಹೊರತುಪಡಿಸಿದರೆ ಇತರರನ್ನು ಅಂದರೆ ತುಳುಭಾಷಿಕರನ್ನಾಗಲೀ ಸಿದ್ಧಿ ಕುಣುಬಿಯರನ್ನಾಗಲೀ ಕ್ರೈಸ್ತಧರ್ಮಕ್ಕೆ ಕರೆತಂದಿದ್ದಾರೋ ಎಂದು ಮೊದಲು ಆತ್ಮಶೋಧನೆ ಮಾಡಿಕೊಳ್ಳಬೇಕು. ಹಾಗೆಯೇ ಕರ್ನಾಟಕದ ಧರ್ಮಪೀಠಗಳಿಗೆ ಕನ್ನಡೇತರರ ನೇಮಕವಾಗುತ್ತಲೇ ಇರುವುದು Evangelisation and Inculturation ಗೆ ಹೇಗೆ ಸಹಕಾರಿ ಎಂಬುದನ್ನು ಮನಗಾಣಬೇಕು.