ವಿಷಯಕ್ಕೆ ಹೋಗು

ಕ್ಯಾಲ್ಕುಲೇಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೇಸಿಕ್ ಕ್ಯಾಲ್ಕುಲೇಟರ್
ಆಧುನಿಕ ವೈಜ್ಞಾನಿಕ ಕ್ಯಾಲ್ಕುಲೇಟರ್‌


ಕ್ಯಾಲ್ಕುಲೇಟರ್ ಅನ್ನುವುದು ಗಣಿತಶಾಸ್ತ್ರದ ಲೆಕ್ಕಾಚಾರ ಪ್ರಕ್ರಿಯೆಯನ್ನು ಮಾಡಲು ಬಳಸುವ ‍ಒಂದು ಸಣ್ಣ(ಸಾಮಾನ್ಯವಾಗಿ ಪಾಕೆಟ್ ಗಾತ್ರದ) ಎಲೆಕ್ಟ್ರಾನಿಕ್ ಸಾಧನ. ಈ ಆಧುನಿಕ ಕಾಲದಲ್ಲಿ ಎಲ್ಲಾ ಗಣಕಯಂತ್ರಗಳಿಗಿಂತ ಚಿಕ್ಕದಾದ ಕ್ಯಾಲ್ಕುಲೇಟರ್‌ಗಳು ಬಂದಿವೆ, ಅಂಗೈ ಅಗಲದಷ್ಟು ಚಿಕ್ಕ ಕ್ಯಾಲ್ಕುಲೇಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.[] ಮೊದಲ ಇಲೆಕ್ಟ್ರಾನಿಕ್ ಕ್ಯಾಲ್ಕುಲೇಟರ್ ೧೯೬೦ರಲ್ಲಿ ಕಂಡುಹಿಡಿಯಲಾಗಿತ್ತು. ಇದರ ಮುನ್ನ ೨೦೦BC ಯಲ್ಲಿ ಅಬ್ಯಾಕಸ್ ಹುಟ್ಟಿಕೊಂಡಿತು. ೧೭ನೇ ಶತಮಾನದಲ್ಲಿ ಮೆಕ್ಯಾನಿಕಲ್ ಕ್ಯಾಲ್ಕುಲೇಟರ್ ಬಂದದ್ದು . ಇವನ್ನು ಕಂಪ್ಯೂಟರ್‌ನ ಸಮಾನಾಂತರವಾಗಿ ಅಭಿವೃದ್ಧಿಪಡಿಸಲಾಯಿತು. ಇಂಟೆಲ್ ಜಪಾನಿನ ಕ್ಯಾಲ್ಕುಲೇಟರ್ ಕಂಪನಿಗೆ ಮೈಕ್ರೊಪ್ರೊಸೆಸರ್ ನೀಡಿತು. ಈ ಮೊದಲ ಮೈಕ್ರೊಪ್ರೊಸೆಸರ್ ಅಭಿವೃದ್ಧಿಯ ನಂತರ ೧೯೭೦ರಲ್ಲಿ ಕಿಸೆಯ ಗಾತ್ರದ ಕ್ಯಾಲ್ಕುಲೇಟರ್‌ಗಳು ಮಾರುಕಟ್ಟೆಗೆ ಬಂದವು. ನಂತರ ಇದನ್ನು ತೈಲ ಮತ್ತು ಅನಿಲ ಉದ್ಯಮದಲ್ಲಿ ಬಳಸಲಾಗುತ್ತಿತ್ತು. ಕ್ಯಾಲ್ಕುಲೇಟರ್‌ನ ಸಮಾನ್ಯ ಉದ್ದೇಶವನ್ನು ಒರೆತುಪಡಿಸಿ, ತ್ರಿಕೋನಮಿತೀಯ(Trigonometry) ಮತ್ತು ಅಂಕಿಅಂಶಗಳ ಲೆಕ್ಕಾಚಾರಗಳನ್ನೂ ಮಾಡಲು ವೈಜ್ಞಾನಿಕ ಕ್ಯಾಲ್ಕುಲೇಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವು ಕ್ಯಾಲ್ಕುಲೇಟರ್‌ಗಳಿಗೆ ಕಂಪ್ಯೂಟರ್ ಬೀಜಗಣಿತ ಮಾಡುವ ಸಾಮರ್ಥ್ಯವೂ ಇದೆ. ಪ್ರಸ್ತುತ ಅಂಕಗಣಿತದ ಲೆಕ್ಕಾಚಾರ ಪ್ರಕ್ರಿಯೆಗಳನ್ನು ಮಾಡಬಲ್ಲ ಮೂಲ ಕ್ಯಾಲ್ಕುಲೇಟರ್‌ಗಳು ಅಗ್ಗವಾಗಿದ್ದು, ವೈಜ್ಞಾನಿಕ ಮತ್ತು ರೇಖಾಚಿತ್ರ ಮಾದರಿಯ ಕ್ಯಾಲ್ಕುಲೇಟರ್‌ಗಳು ಹೆಚ್ಚಿನ ಬೆಲೆಯದ್ದಾಗಿದೆ. ಗಣಿತ ಮತ್ತು ಖಗೋಳ ಪ್ರೊಫೆಸರ್ ಆಗಿದ್ದ ವಿಲ್‌ಹೆಲ್ಮ್‌ ಶಿಕಾರ್ಡ್ ಎಂಬಾತ ಬುದ್ಧಿಮತ್ತೆಗೆ ಪರ್ಯಾಯವಾಗಿ ಮನುಷ್ಯನ ಉಪಯೋಗಕ್ಕೆ ಬರುವ ಲೆಕ್ಕ ಮಾಡುವ ಯಂತ್ರವೊಂದನ್ನು ನಿರ್ಮಿಸುವ ಕನಸು ಕಂಡ. ಮಾರುಕಟ್ಟೆಯಲ್ಲೇ ಲಭ್ಯವಿದ್ದ ವಿವಿಧ ಯಾಂತ್ರಿಕ ಆಟಿಕೆಗಳನ್ನು ಬಳಸಿಕೊಂಡೇ ಸರಳ ಲೆಕ್ಕಾಚಾರ ಮಾಡಬಲ್ಲ ಕ್ಯಾಲ್ಕುಲೇಟರ್ ಒಂದನ್ನು ಆತ ತಯಾರಿಸಿದ. ಇದೇ ಜಗತ್ತಿನ ಮೊಟ್ಟಮೊದಲ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.[]

ವಿನ್ಯಾಸ

[ಬದಲಾಯಿಸಿ]

ಆದಾನ(ಇನ್ಪುಟ್)

[ಬದಲಾಯಿಸಿ]

ಅಧುನಿಕ ಯುಗದಲ್ಲಿ ಮಿನ್ನಿನ ಕ್ಯಾಲ್ಕುಲೇಟರ್ ಅಂಕೆಗಳನ್ನು ಮತ್ತು ಅಂಕಗಣಿತದ ಸರಳ ಕೂಡುವಿಕೆ, ಕಳೆಯುವಿಕೆ, ಗುಣಿಸುವಿಕೆ ಮತ್ತು ಭಾಗಿಸುವಿಕೆಗಳಂತಹ ಪ್ರಕ್ರಿಯೆಗಳನ್ನು ಮಾಡಲು ಕೀಲಿಮಣೆಯಲ್ಲಿ ಗುಂಡಿಗಳನ್ನು ಹೊಂದಿರುತ್ತದೆ. ಉದ್ದ ಲೆಕ್ಕಗಳನ್ನು ಸುಲಭ ರೀತಿಯಲ್ಲಿ ಮಾಡಲು ೦೦ ಮತ್ತು ೦೦೦ ಗುಂಡಿಗಳನ್ನೂ ಹೊಂದಿರುತ್ತದೆ. ಹೆಚ್ಚುವರಿ ಎಲ್ಲಾ ಮೂಲ ಕ್ಯಾಲ್ಕುಲೇಟೆರ್‌ಗಳಲ್ಲಿ ಒಂದು ಗುಂಡಿಗೆ ಒಂದು ವ್ಯವಸ್ಥಿತ ಕ್ರಿಯೆಯನ್ನು ನಿಯೋಜಿಸಲಾಗುತ್ತದೆ, ಆದರೆ ಹೆಚ್ಚು ನಿರ್ದಿಷ್ಟ ಕಾಲ್ಕುಲೇಟರ್‌ಗಳಲ್ಲಿ ಒಂದು ಗುಂಡಿಗೆ ಎರಡು ಅಥವ ಮೂರು ವ್ಯವಸ್ಥಿತ ಕ್ರಿಯೆಗಳನ್ನು ನಿಯೋಜಿಸಲಾಗುತ್ತದೆ.

ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೆ (ಎಲ್‌ಸಿಡಿ) ಉಪಯೋಗಿಸಿರುವ ಕ್ಯಾಲ್ಕುಲೇಟರ್

ಡಿಸ್‌ಪ್ಲೆ ಔಟ್ಪುಟ್

[ಬದಲಾಯಿಸಿ]

ಕ್ಯಾಲ್ಕುಲೇಟರ್‌ನಲ್ಲಿ ಬಳಸಲಾಗುವ ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೆ (ಎಲ್‌ಸಿಡಿ) ಉಪಯೋಗದಿಂದ ಪರದೆ ಮೇಲೆ ನಾವು ಮಾಡುವ ಲೆಕ್ಕಗಳನ್ನು ನೋಡಬಹುದು. ಇದರ ಮೊದಲು ಎಲ್‌ಸಿಡಿಯ ಬದಲು ವ್ಯಾಕ್ಯೂಮ್ ಪ್ಲೋರಸೆಂಟ್ ಡಿಸ್‌ಪ್ಲೆ(ವಿಎಫ್‌ಡಿ)ಯನ್ನು ಬಳಸಲಾಗುತ್ತಿತ್ತು. ದೊಡ್ಡ ಗಾತ್ರದ ಅಂಕಿ ಮತ್ತು ಅಲ್ಪವಿರಾಮಗಳು ಲೆಕ್ಕಗಳನ್ನು ಸುಲಭವಾಗಿ ಓದಲು ಬಳಸಲಾಗುತ್ತದೆ. ನಾವು ಮಾಡುವ ವಿವಿಧ ಪ್ರಕ್ರಿಯೆಗಳ ಚಿಹ್ನೆಗಳನ್ನೂ ಕೂಡ ಪರೆದೆಯ ಮೇಲೆ ಕಾಣಬಹುದು. ಅನೇಕ ವೈಜ್ಞಾನಿಕ ಕ್ಯಾಲ್ಕುಲೇಟರ್ ಭಿನ್ನರಾಶಿಗಳು(ಡೆಸಿಮಲ್) ಅಥವಾ ಮಿಶ್ರ ಸಂಖ್ಯೆಯಲ್ಲಿ(ಪ್ರಾಕ್ಷನ್ಸ್) ಕೆಲಸ ಮಾಡುತ್ತದೆ.

ಮೆಮೊರಿ

[ಬದಲಾಯಿಸಿ]

ಕ್ಯಾಲ್ಕುಲೇಟರ್‌ಗಳಿಗೆ ಮೆಮೊರಿಯಲ್ಲಿ ಸಂಖ್ಯೆಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುತ್ತವೆ. ಸಾಧಾರಣ ಕ್ಯಾಲ್ಕುಲೇಟರ್ ಒಂದು ಸಮಯದಲ್ಲಿ ಕೇವಲ ಒಂದು ಸಂಖ್ಯೆಯನ್ನು ಸಂಗ್ರಹಿಸುತ್ತಿತ್ತು. ಹೆಚ್ಚು ನಿರ್ದಿಷ್ಟ ರೀತಿಯ ಕ್ಯಾಲ್ಕುಲೇಟರ್‌ ಅಸ್ಥಿರಗಳ ರೂಪದಲ್ಲಿ ಅನೇಕ ಸಂಖ್ಯೆಗಳನ್ನು ಶೇಖರಿಸಿಡುವ ಸಮರ್ಥ್ಯವನ್ನು ಹೊಂದಿದೆ. ಸೂತ್ರಗಳನ್ನು ನಿರ್ಮಿಸಲು ಸಹ ಈ ಅಸ್ಥಿರಗಳನ್ನು ಬಳಸಬಹುದು. ಕೆಲವು ಮಾದರಿಗಳಲ್ಲಿ ವಿಸ್ತೃತ ಮೆಮೊರಿ ಬಳಕೆಯಿಂದ ಹೆಚ್ಚು ಸಂಖ್ಯೆಗಳನ್ನು ಶೇಖರಿಸಿಡುವ ಸಾಮರ್ಥ್ಯವನ್ನು ಹೊಂದಿವೆ, ವಿಸ್ತೃತ ವಿಳಾಸವನ್ನು ರಚನೆಯ ಸೂಚ್ಯಂಕ ಎಂದು ಕರೆಯಲಾಗುತ್ತದೆ.

ಪವರ್ ಸೊರ್ಸ್

[ಬದಲಾಯಿಸಿ]

ಹಳೆಯ ಮಾದರಿಯ ಕ್ಯಾಲ್ಕುಲೇಟರ್‌ಗಳು ಬ್ಯಾಟರಿಗಳು, ಸೌರ ಶಕ್ತಿ ಅಥವಾ ವಿದ್ಯುತ್ ಶಕ್ತಿಯ ಬಳೆಕೆಯಿಂದ ನಡೆಸಲಾಗುತ್ತಿತ್ತು. ಇದ್ದಕೆ ಒಂದು ಗುಂಡಿ ಅಥವಾ ಸ್ವಿಚ್ ಇರುತ್ತದೆ. ಕೆಲವು ಮಾದರಿಯ ಕ್ಯಾಲ್ಕುಲೇಟರ್‌‌ಗಳಿಗೆ ಆಫ್ ಬಟ್ಟನ್ ಇರುವುದಿಲ್ಲ, ಕ್ಯಾಲ್ಕುಲೇಟರ್‌ರನ್ನು ಒಂದು ಕ್ಷಣ ಉಪಯೋಗಿಸದೆ ಬಿಟ್ಟರೆ ಅಥಾವ ಲಿಡ್‌ ಅನ್ನು ಮುಚ್ಚಿದರೆ ತಂತಾನೆ ಆಫ್ ಆಗುತ್ತದೆ. ಕ್ರಾಂಕ್ ಚಾಲಿತ ಕ್ಯಾಲ್ಕುಲೇಟರ್ ಆರಂಭಿಕ ಕಂಪ್ಯೂಟರ್ ಯುಗದಲ್ಲಿ ಸಾಮಾನ್ಯವಾಗಿತ್ತು.

ಕೀಲಿಮಣೆ ವಿನ್ಯಾಸ

[ಬದಲಾಯಿಸಿ]
ಸಾಮಾನ್ಯ ಪಾಕೆಟ್ ಕ್ಯಾಲ್ಕುಲೇಟರಿನ ಕೀಲಿಮಣೆ ವಿನ್ಯಾಸ
MC M+ M- MR
C ± ÷ ×
7 8 9 -
4 5 6 +
1 2 3 =
0 .
MC ಮೆಮೊರಿ ಅಳಿಸು(Memory Clear)
M+ ಮೆಮೊರಿ ಕೂಡಿಸು(Memory Addition)
M- ಮೆಮೊರಿ ಕಳೆವಿಕೆ(Memory Substaction)
MR ಮೆಮೊರಿ ಮರುಸ್ಥಾಪನೆ(Memory Recall)
C or AC ಎಲ್ಲಾವನ್ನು ಅಳಿಸು(All Clear)
CE ಇಂದಿನ ಪ್ರಕ್ರಿಯೆಯನು ಅಳಿಸು(Clear Entry(last))
± ಸಕಾರಾತ್ಮಕ / ನಕಾರಾತ್ಮಕ ಸಂಖ್ಯೆ(positive/negative numbers)
÷ ಭಾಗಾಕಾರ(division)
× ಗುಣಾಕಾರ(multiplication)
- ವ್ಯವಕಲನ(subtraction)
+ ಸಂಕಲನ(addition)
. ದಶಮಾಂಶ ಬಿಂದು(decimal point)
= ಫಲಿತಾಂಶ(result)

ಇತಿಹಾಸ

[ಬದಲಾಯಿಸಿ]

ಮೊದಲು ಬಳಸಲಾದ ಲೆಕ್ಕ ಸಾದನವೆಂದರೆ ಮಾನವನ ಹತ್ತು ಕೈ ಬೆರಳುಗಳು. ಇದರಿಂದಲೆ ನಾವು ಇಂದಿಗೂ ಹತ್ತು ಮತ್ತು ಹತ್ತರ ಗುಣಾತ್ಮಕವಾಗಿ ಎಣಿಕೆಯನ್ನು ಮಾಡುವುದು. ನಂತರ ಅಂಕಗಣಿತದ ಲೆಕ್ಕಗಳನ್ನು ಮಾಡಲು ಮೂಳೆಗಳು, ಕಲ್ಲುಗಳು ಮತ್ತು ಎಣಿಕೆಯ ಫಲಕಗಳನ್ನು ಬಳಸಲಾಗುತ್ತಿತ್ತು.[] ೧೭ನೇ ಶತಮಾನದ ಹೊತ್ತಿಗೆ ವಿಜ್ಞಾನದಲ್ಲಿ ಅಗಾಧ ಬೆಳವಣಿಗೆ ಉಂಟಾಗಿತ್ತು. ಇದರಿಂದಾಗಿ ಯಾಂತ್ರಿಕವಾದ ಸಾಧನಗಳು, ಅಭಿವೃದ್ಧಿಪಡಿಸಲಾದ ದಿನಬಳಕೆಯ ವಸ್ತುಗಳನ್ನು ನಿರ್ಮಿಸುವುದು ಒಂದು ಖಯಾಲಿಯಾಗಿ ಪರಿಣಮಿಸಿತ್ತು. ದಿನನಿತ್ಯದಲ್ಲಿ, ಕೈಗಾರಿಕೀಕರಣಗೊಂಡ ಜೀವನಕ್ರಮದಲ್ಲಿ ಲೆಕ್ಕಾಚಾರ ಹಾಕುವುದು ಹಿಂದೆಂದಿಗಿಂತಲೂ ಮುಖ್ಯವಾಗಿತ್ತು, ಒಂದು ರೀತಿಯ ಸಮಸ್ಯೆಯೂ ಆಗಿತ್ತು. ಸಂಶೋಧನಾ ವಲಯದಲ್ಲಿಯೂ ವೈಜ್ಞಾನಿಕ ಉಪಕರಣಗಳನ್ನು ಬಳಸುವಾಗ ಲೆಕ್ಕಾಚಾರಕ್ಕೆ ಪ್ರಾಶಸ್ತ್ಯವಿತ್ತು. ಸಂಕೀರ್ಣವಾದ ಉದ್ದುದ್ದ ಲೆಕ್ಕಗಳು ಒಮ್ಮೊಮ್ಮೆ ಉಪಕರಣಗಳನ್ನು ಬಳಸುವವರನ್ನು ಚಿಂತೆಗೀಡುಮಾಡುತ್ತಿತ್ತು. ವ್ಯಾಪಾರೀ ಉದ್ದಿಮೆ ವಲಯದಲ್ಲಿ ಸಣ್ಣಪುಟ್ಟ ಲೆಕ್ಕಗಳಿಗೆ ಆಗಲೇ ಪುಟ್ಟಪುಟ್ಟ ಯಾಂತ್ರಿಕ ವ್ಯವಸ್ಥೆಗಳು ಬಂದಿದ್ದವು. ಚೀನೀಯರ ಅಬಕಸ್, ಸ್ಲೈಡ್‌ರೂಲ್[] ಮತ್ತು ನೇಪಿಯರ್ ಬೋನ್ಸ್‌ನಂತಹ ಪುಟ್ಟ ಲೆಕ್ಕ ಮಾಡುವ ಯಂತ್ರಗಳು ವ್ಯಾಪಾರಿಗಳ ಬಳಿ ಇದ್ದವು. ಇವುಗಳದ್ದೂ ಒಂದು ನಿಯಮಿತ ಹಂತದವರೆಗಿನ ಬಳಕೆ ಮಾತ್ರ ಆಗಿತ್ತು. ಕ್ಲಿಷ್ಟಕರವಾದ ಲೆಕ್ಕಗಳನ್ನು ಈ ಯಂತ್ರಗಳಿಂದ ಮಡಲಾಗುತ್ತಿರಲಿಲ್ಲ.[]

ಅಬ್ಯಾಕಸ್‌

[ಬದಲಾಯಿಸಿ]
ಚೀನಿಯರ ಅಬಕಸ್

ಅಬ್ಯಾಕಸ್‌ ಪ್ರಾಥಮಿಕವಾಗಿ ಏಶಿಯಾದ ಕೆಲವು ಭಾಗಗಳಲ್ಲಿ ಅಂಕಗಣಿತದ ಪ್ರಕ್ರಿಯೆಯ ನಿರ್ವಹಣೆಗಾಗಿ ಬಳಸಿಕೊಂಡ, ಎಣಿಕೆಮಾಡುವ ಒಂದು ಸಾಧನವಾಗಿತ್ತು. ಇಂದಿನ ದಿನಗಳಲ್ಲಿ, ಅಬ್ಯಾಕಸ್‌ಗಳನ್ನು ಯಾವಾಗಲೂ ಒಂದು ಬಿದಿರಿನ ಚೌಕಟ್ಟಿನೊಳಗೆ ಮಣಿಗಳನ್ನು ದಾರದಲ್ಲಿ ಪೋಣಿಸಿ ರಚಿಸಲಾಗುತ್ತದೆ, ಆದರೆ ಮೂಲತಹವಾಗಿ ಅವುಗಳು ಮರಳಿನಲ್ಲಿ ಕೊರೆದು ಅಥವಾ ಮರದ ಹಲಗೆಗಳ ಮೇಲೆ, ಕಲ್ಲುಗಳ ಮೇಲೆ, ಅಥವಾ ಲೋಹಗಳ ಮೇಲೆ ಜೋಡಿಸಲ್ಪಟ್ಟ ಹುರುಳಿಕಾಯಿ ಅಥವಾ ಕಲ್ಲುಗಳಾಗಿದ್ದವು. ಅಬ್ಯಾಕಸ್‌‌‌ಗಳು, ಬರವಣಿಗೆಯ ರೂಪದಲ್ಲಿರುವ ಆಧುನಿಕ ಸಂಖ್ಯಾವಾಚಕ ವಿಧಾನವನ್ನು ಅಳವಡಿಸಿಕೊಳ್ಳುವ ಒಂದು ಶತಮಾನಕ್ಕಿಂತ ಮೋದಲು ಬಳಕೆಯಲ್ಲಿದ್ದವು ಮತ್ತು ಇದು ಇಂದಿಗೂ ವರ್ತಕರಿಂದ, ವ್ಯಾಪಾರಿಗಳಿಂದ ಮತ್ತು ಏಶಿಯಾ, ಆಫ್ರಿಕಾ ಮತ್ತು ಜಗತ್ತಿನ ಹಲವಾರು ಗುಮಾಸ್ತರುಗಳಿಂದ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಪ್ರಾರಂಭದ ಅತ್ಯಂತ ಪರಿಚಿತ ಬರವಣಿಗೆಯ ರೂಪದಲ್ಲಿರುವ ಚೈನಾದ ಅಬ್ಯಾಕಸ್‌ನ ದಾಖಲೆ ಸರಿಸುಮಾರು ಕ್ರಿ.ಪೂ. ೨ನೇ ಶತಮಾನದಷ್ಟು ಹಳೆಯದು. ಚೈನಾದ ಅಬ್ಯಾಕಸ್‌ ಶುಆನ್‌ಪೆನ್‌ ಎಂದು ಪರಿಚಿತವಾಗಿದೆ, ಇದು ಬಳಕೆದಾರನಿಗೆ ಅವಲಂಭಿಸಿದಂತೆ ವಿಶಿಷ್ಟವಾಗಿ ೨೦ ಸೆಂಟಿಮೀಟರ್ ಎತ್ತರವಾದ ಮತ್ತು ವಿವಿಧ ಅಗಲಗಳಲ್ಲಿ ಲಭ್ಯವಿರುತ್ತದೆ. ಇದು ಸಾಮಾನ್ಯವಾಗಿ ಏಳಕ್ಕಿಂತ ಹೆಚ್ಚು ಸರಳುಗಳನ್ನು ಹೊಂದಿರುತ್ತದೆ. ದಶಮಾನ ಮತ್ತು ಬಹುದಶಮಾನ ಪದ್ಧತಿಯ ಎರಡೂ ಎಣಿಕೆಗಳಲ್ಲಿ ಮೇಲಿನ ವೇದಿಕೆಯ ಪ್ರತಿಯೊಂದು ಸರಳಿನಲ್ಲಿ ಎರಡು ಮಣಿಗಳು ಇರುತ್ತವೆ ಮತ್ತು ಅತ್ಯಂತ ಕೆಳಗಿನ ವೇದಿಕೆಯ ಪ್ರತೀ ಸರಳಿನಲ್ಲಿ ಐದು ಮಣಿಗಳು ಇರುತ್ತವೆ. ಮಣಿಗಳು ಸಾಮಾನ್ಯವಾಗಿ ಗೋಲಾಕಾರವಾಗಿದ್ದು ಗಟ್ಟಿಮರದಿಂದ ಮಾಡಲ್ಪಟ್ಟಿರುತ್ತದೆ. ಫಲಕದ ಕಡೆಗೆ ಮೇಲ್ಮುಖವಾಗಿ ಅಥವಾ ಕೆಳಮುಖವಾಗಿ ಚಲಿಸುವಂತೆ ಮಾಡುವುದರ ಮೂಲಕ ಮಣಿಗಳನ್ನು ಎಣಿಕೆಮಾಡಲಾಗುತ್ತದೆ. ಒಂದು ವೇಳೆ ನೀವು ಅವುಗಳನ್ನು ಫಲಕದ ಕಡೆಗೆ ಚಲಿಸುವಂತೆ ಮಾಡಿದರೆ, ನೀವು ಅವುಗಳ ಮೌಲ್ಯವನ್ನು ಎಣಿಕೆಮಾಡಬಹುದು. ಒಂದು ವೇಳೆ ಫಲಕದಿಂದ ದೂರ ಹೋಗುವಂತೆ ಚಲಿಸಿದರೆ, ನೀವು ಅವುಗಳ ಮೌಲ್ಯವನ್ನು ಎಣಿಕೆ ಮಾದಲು ಸಾಧ್ಯವಾಗುವುದಿಲ್ಲ. ಸಮಾನಾಂತರ ಅಕ್ಷದ ಮುಖೇನ ಶೀಘ್ರವಾಗಿ ತಳ್ಳುವುದರ ಮೂಲಕ ಮತ್ತು ಮಧ್ಯ ಭಾಗದಲ್ಲಿರುವ ಸಮಾನ ಹಲಗೆಯಿಂದ ಎಲ್ಲಾ ಮಣಿಗಳೂ ದೂರ ಹೋಗುವಂತೆ ಮಾಡುವುದರ ಮೂಲಕ ಶುಆನ್‌ಪೆನ್‌ ಅನ್ನು ಕೂಡಲೇ ಪ್ರಾರಂಭದ ಸ್ಥಿತಿಗೆ ಪುನರ್‌ ಸಂಯೋಜನೆ ಮಾಡಬಹುದಾಗಿತ್ತು.

ವಿಲ್‌ಹೆಲ್ಮ್‌ ಶಿಕಾರ್ಡ್ ಕ್ಯಾಲ್ಕುಲೇಟರ್
ವಿಲ್‌ಹೆಲ್ಮ್‌ ಶಿಕಾರ್ಡ್ ಬರೆದ ಕ್ಯಾಲ್ಕುಲೇಟರ್‌ನ ಮೂಲ ಚಿತ್ರ

ವಿಲ್‌ಹೆಲ್ಮ್‌ ಶಿಕಾರ್ಡ್ ಕ್ಯಾಲ್ಕುಲೇಟರ್

[ಬದಲಾಯಿಸಿ]

೧೬೪೩ರಲ್ಲಿ ವಿಲ್‌ಹೆಲ್ಮ್‌ ಶಿಕಾರ್ಡ್ ನಿರ್ಮಿಸಿದ ಯಂತ್ರವು ಅಂಕಗಣಿತದ ಸರಳ ಕೂಡುವಿಕೆ, ಕಳೆಯುವಿಕೆ, ಗುಣಿಸುವಿಕೆ ಮತ್ತು ಭಾಗಿಸುವಿಕೆಗಳನ್ನು ಸಮರ್ಥವಾಗಿ ಮಾಡಿತು. ಶಿಕಾರ್ಡ್‌ರ ಈ ಕ್ಯಾಲ್ಕುಲೇಟರ್ ಯಂತ್ರವು ಕಚ್ಚುಗಾಲಿ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತಿತ್ತು.[] ಇದರಲ್ಲಿ ಹತ್ತು ಹಲ್ಲಿನ ಚಕ್ರಗಳ ಮೂಲಕ ಕೂಡುವ ಮತ್ತು ಕಳೆಯುವ ಕಾರ್ಯವು ನಡೆಯುತ್ತಿತ್ತು. ೧೦ ಹಲ್ಲಿನ ೬ ಚಕ್ರಗಳ ಮೂಲಕ ೬ ಸಂಖ್ಯೆಗಳಿಗೆ ಸಂಪರ್ಕಿಸಲಾಗಿತ್ತು. ಬಳಕೆದಾರನು ೦ ಯಿಂದ ೯ರವರೆಗೆ ಸಂಖ್ಯೆಯನ್ನು ಪುಟ್ಟ ಕಿಟಕಿಗಳ ಮೂಲಕ ಓದಬಹುದಾಗಿತ್ತು. ಪ್ರತಿ ಚಕ್ರಗಳು ೧೦ ಸ್ಥಳ ಬದಲಾವಣೆಗಳೊಂದಿಗೆ ೩೬೦ ಡಿಗ್ರಿ ಕೋನದಲ್ಲಿ ತಿರುಗುವಂತೆ ಮಾಡಲಾಗಿತ್ತು. ಒಂದು ಪೂರ್ಣ ಸುತ್ತು ಬಳಸಿದ ನಂತರ ಮತ್ತೊಮ್ಮೆ ಎಲ್ಲವನ್ನು ಮೊದಲಿನ ಸ್ಥಾನಕ್ಕೆ ತಂದು ನಿಲ್ಲಿಸುವ ವ್ಯವಸ್ಥೆಯೂ ಇತ್ತು. ಎಡಕ್ಕೆ ಅಥವಾ ಬಲಕ್ಕೆ ಚಲಿಸುವ ನಿಯಮದ ಮೇಲೆ ಕೂಡುವ ಕಳೆಯುವುದನ್ನು ನಿರ್ಧಾರ ಮಾಡಬಹುದಾಗಿತ್ತು. ಗುಣಿಸುವ ಮತ್ತು ಭಾಗಿಸುವ ಲೆಕ್ಕಗಳನ್ನು ಯಂತ್ರದ ಮೇಲ್ಬಾಗದಲ್ಲಿ ಇರುವ ವಿಶೇಷ ವ್ಯವಸ್ಥೆಯೊಂದಿಗೆ ಮಾಡಬೇಕಾಗಿತ್ತು. ಗುಣಿಸುವ ಟೇಬಲ್ಲುಗಳನ್ನು ಸಿಲಿಂಡರುಗಳನ್ನು ತಿರುಗಿಸುವ ಮೂಲಕ ಓದಿಕೊಳ್ಳಬೇಕಾಗಿತ್ತು.

ಪ್ಯಾಸ್ಕಲ್ ಕ್ಯಾಲ್ಕುಲೇಟರ್

ಪ್ಯಾಸ್ಕಲ್ ಮತ್ತು ಲೆಬ್ನಿಸ್‌ರ ಕ್ಯಾಲ್ಕುಲೇಟರ್

[ಬದಲಾಯಿಸಿ]

ವಿಜ್ಞಾನಿ ವಿಲ್‌ಹೆಲ್ಮ್ ಶಿಕಾರ್ಡ್‌ರನ್ನು ಅನುಸರಿಸಿ ಮುಂದೆ ಅನೇಕ ವಿಜ್ಞಾನಿಗಳು ಕ್ಯಾಲ್ಕುಲೇಟರ್ ಯಂತ್ರಗಳನ್ನು ನಿರ್ಮಿಸಲು ತಮ್ಮನ್ನು ತೊಡಗಿಸಿಕೊಂಡರು. ಮುಖ್ಯವಾಗಿ ಪ್ಯಾರಿಸ್‌ನಲ್ಲಿ ಪ್ರಖ್ಯಾತ ತತ್ವಜ್ಞಾನಿ ಮತ್ತು ಗಣಿತಜ್ಞ ಪ್ಯಾಸ್ಕಲ್(೧೬೨೩-೧೬೬೨) ತನ್ನ ತಂದೆಗೆ ಸಹಾಯಕವಾಗಲು ಕೂಡುವ ಯಂತ್ರವೊಂದನ್ನು ನಿರ್ಮಿಸಿದನು.[] ಆತನ ತಂದೆ ಒಬ್ಬ ತೆರಿಗೆ ಸಂಗ್ರಹಕನಾಗಿದ್ದ, ಯಾವಾಗಲೂ ಉದ್ದುದ್ದ ಲೆಕ್ಕಗಳನ್ನು ಮಾಡಬೇಕಾಗಿತ್ತು. ೧೬೭೩ರಲ್ಲಿ ಪ್ರಖ್ಯಾತ ಗಣಿತಜ್ಞ ಲೆಬ್ನಿಸ್(೧೬೪೬-೧೭೧೬) ರಾಯಲ್ ಸೊಸೈಟಿಯಲ್ಲಿ ತಾನು ತಯಾರಿಸಿದ ಒಂದು ಜೀವಂತ ಕ್ಯಾಲ್ಕುಲೇಟರ್ ಎಂಬ ಹೆಸರಿನ ಸಂಕೀರ್ಣ ಲೆಕ್ಕ ಮಾಡುವ ಯಂತ್ರವೊಂದನ್ನು ಪ್ರದರ್ಶಿಸಿದ.[] ಈ ಯಂತ್ರ ತಯಾರಿಸಲು ದುಬಾರಿ ಹಣವನ್ನು ಆತ ಖರ್ಚು ಮಾಡಿದ್ದ. ತುಂಬಾ ಕರಾರುವಾಕ್ಕಾದ ಯಾಂತ್ರಿಕ ತಜ್ಞತೆಯೊಂದಿಗೆ ಈ ಯಂತ್ರವನ್ನು ನಿರ್ಮಿಸಲಾಗಿತ್ತು.

ಲೆಬ್ನಿಸ್‌ರ ಕ್ಯಾಲ್ಕುಲೇಟರ್

ಇಂತಹ ಯಂತ್ರಗಳು ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ಸಾಮಾನ್ಯ ವ್ಯಾಪಾರಿಗಳು ಬಳಸಬಹುದಾದ ಸರಳ ಕ್ಯಾಲ್ಕುಲೇಟರ್ ಯಂತ್ರಗಳು ಎಲ್ಲೆಲ್ಲೂ ಬಳಕೆಗೆ ಬಂದವು. ೨೦ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಅಂಗೈ ಅಗಲದ ವಿದ್ಯುತ್ ಚಾಲಿತ ಕ್ಯಾಲ್ಕುಲೇಟರ್‌ಗಳು ಮಾರುಕಟ್ಟೆಗೆ ಬಂದವು.[] ಇವುಗಳಲ್ಲಿ ಸರಳ ಲೆಕ್ಕಾಚಾರ ಮಾಡುವ ಕ್ಯಾಲ್ಕುಲೇಟರ್‌ಗಳು ಮತ್ತು ವೈಜ್ಞಾನಿಕ ಕ್ಯಾಲ್ಕುಲೇಟರ್‌ಗಳು ಎಂದೇ ವಿಭಾಗಿಸಿ ಆಯಾ ವಲಯಕ್ಕೆ ತಕ್ಕಂತೆ ಬಳಕೆಗೆ ಒದಗಿಸಲಾಗಿದೆ. ವಿದ್ಯುತ್ ಸೆಲ್‌‌ಗಳಿಂದ ನಡೆಯುವ ಕ್ಯಾಲ್ಕುಲೇಟರ್‌ಗಳಿಗೆ ಬದಲಾಗಿ ಈಗ ಸೌರಶಕ್ತಿಯನ್ನೇ ಬಳಸಿ ನಡೆಯುವ ಕ್ಯಾಲ್ಕುಲೇಟರ್‌ಗಳು ಜನಪ್ರಿಯವಾಗಿವೆ. ಈ ಆಧುನಿಕ ಕಾಲದಲ್ಲಂತೂ ಮನುಷ್ಯ ನಿರ್ವಹಿಸಬೇಕಾದ ಕ್ಲಿಷ್ಟಕರವಾದ ಲೆಕ್ಕ ಮಾಡುವ ಜವಾಬ್ದಾರಿಯನ್ನು ಕಂಪ್ಯೂಟರ್‌ಗಳು ವಹಿಸಿಕೊಂಡಿವೆ. ಶಿಕಾರ್ಡ್‌‌ನ ಮೊಟ್ಟಮೊದಲ ಕ್ಯಾಲ್ಕುಲೇಟರ್ ಯಂತ್ರಕ್ಕೂ ಇಂದಿನ ಆಧುನಿಕ ಕಂಪ್ಯೂಟರ್ ನಿಯಂತ್ರಿತ ಕ್ಯಾಲ್ಕುಲೇಟರ್‌ಗೂ ಊಹೆಗೂ ಮೀರಿದ ವ್ಯತ್ಯಾಸವಿದೆ.

ತಯಾರಕರು

[ಬದಲಾಯಿಸಿ]

ಈ ಕ್ಯಾಲ್ಕುಲೇಟರ್ ಅಭಿವೃದ್ಧಿಗೆ ಕೊಡುಗೆ ನೀಡಿದ ಕೆಲವು ತಯಾರಕರು[೧೦] ಪ್ರಸ್ತುತ ಪ್ರಮುಖ ತಯಾರಕರು

  1. ಅರೋರಾ ಆಫಿಸ್ ಎಕ್‌ಕ್ವಿಪ್‌ಮೆಂಟ್ ಕಂಪನಿ (ಚೈನ)
  2. ಕ್ಯಾನನ್ (ಜಪಾನ್)
  3. ಕಾಸ್ಕೊ (ಜಪಾನ್)
  4. ಸಿಟಿಜ಼ನ್ ಹೋಲ್ಡಿಂಗ್ಸ್ (ಜಪಾನ್)
  5. ಹೆವ್ಲೆಟ್ ಪ್ಯಾಕರ್ಡ್ (ಅಮೇರಿಕ)
  6. ಶಾರ್ಪ್ ಕಾರ್ಪೊರೇಶನ್ (ಜಪಾನ್)
  7. ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (ಅಮೇರಿಕ)

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಪ್ಯಾಕೆಟ್ ಕ್ಯಾಲ್ಕುಲೇಟರ್ ಇತಿಯಾಸ". Archived from the original on 2013-09-03. Retrieved 2015-12-08.
  2. "ಜಗತ್ತಿನ ಮೊಟ್ಟಮೊದಲ ಯಾಂತ್ರಿಕ ಕ್ಯಾಲ್ಕುಲೇಟರ್".
  3. "ಲೆಕ್ಕಗಳನ್ನು ಮಾಡಲು ಮೂಳೆಗಳ ಬಳಕೆ". Archived from the original on 2016-03-03. Retrieved 2015-12-08.
  4. "ಲೆಕ್ಕಗಳು ಮಾಡಲು ಸ್ಲೈಡ್‌ರೂಲ್".
  5. "ಕ್ಯಾಲ್ಕುಲೇಟರ್‌ಗಳ ಇತಿಹಾಸ".
  6. "ಶಿಕಾರ್ಡ್‌ರ ಕ್ಯಾಲ್ಕುಲೇಟರ್". Archived from the original on 2022-01-22. Retrieved 2015-12-08.
  7. "ಪ್ಯಾಸ್ಕಲ್‌ನ ಡಿಜಿಟಲ್ ಕ್ಯಾಲ್ಕುಲೇಟರ್".
  8. "ಲೆಬ್ನಿಸ್‌ರ ಲೆಕ್ಕದ ಯಂತ್ರ".
  9. "ಪಾಕೆಟ್ ಕ್ಯಾಲ್ಕುಲೇಟರ್ ಅಭಿವೃದ್ಧಿ". Archived from the original on 2016-01-02. Retrieved 2015-12-08.
  10. "ಕ್ಯಾಲ್ಕುಲೇಟರ್ ತಯಾರಿಸುವ ಕೆಲವು ಕಂಪನಿಗಳು".