ಕಾಕೋರಿ ಪಿತೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಕೋರಿ ಪಿತೂರಿ(ಕಾಕೋರಿ ರೈಲು ದರೋಡೆ ಅಥವಾ ಕಾಕೋರಿ ಪ್ರಕರಣ ),ಇದು ೧೯೨೫ ರ ಆಗಸ್ಟ್ ೯ ರಂದು ಬ್ರಿಟಿಷ್ ಭಾರತೀಯ ಸರ್ಕಾರದ ವಿರುದ್ಧದ ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕಾಕೋರಿ ಮತ್ತು ಲಕ್ನೋ ಬಳಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್‌ಆರ್‌ಎ) ಆಯೋಜಿಸಿದ ರೈಲು ದರೋಡೆ. ಇದನ್ನು ಕಾಕೋರಿ ಪಿತೂರಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.

ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಬಳಸುತ್ತಿದ್ದ ಜರ್ಮನ್ ನಿರ್ಮಿತ ಮೌಸರ್ ಪಿಸ್ತೂಲಿನ ಫೋಟೋ .

ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಕುಲ್ಲಾ ಖಾನ್ ತಾವು ಸದಸ್ಯರಾಗಿದ್ದ ಕ್ರಾಂತಿಕಾರಿ ಸಂಘಟನೆ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಮೂಲಕ ಈ ದರೋಡೆಯನ್ನು ಆಯೋಜಿಸಿದರು. ಸ್ವಾತಂತ್ರ್ಯ ಸಾಧಿಸುವ ಉದ್ದೇಶದಿಂದ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಲು ಈ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಶಸ್ತ್ರಾಸ್ತ್ರಗಳ ಖರೀದಿಗೆ ಸಂಸ್ಥೆಗೆ ಹಣ ಬೇಕಾಗಿದ್ದರಿಂದ, ಬಿಸ್ಮಿಲ್ ಮತ್ತು ಅವರ ಸಂಘಟನೆಯು ಉತ್ತರ ರೈಲ್ವೆ ವಿಭಾಗಕ್ಕೆ ಸೇರಿದ ರೈಲನ್ನು ಲೂಟಿ ಮಾಡಲು ನಿರ್ಧರಿಸಿತು. [೧] ದರೋಡೆ ಯೋಜನೆಯನ್ನು ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಕುಲ್ಲಾ ಖಾನ್, ರಾಜೇಂದ್ರ ಲಾಹಿರಿ, ಚಂದ್ರಶೇಖರ್ ಆಜಾದ್, ಸಚೀಂದ್ರ ಬಕ್ಷಿ, ಕೇಶಬ್ ಚಕ್ರವರ್ತಿ, ಮನ್ಮಥ್ನಾಥ್ ಗುಪ್ತಾ, ಮುಕುಂಡಿ ಲಾಲ್ (ಮುಕುಂಡಿ ಲಾಲ್ ಗುಪ್ತಾ), ಬನ್ವಾರಿ ಲಾಲ್, ಕುಂದನವಲ್ ಲಾಲ್, ಕುಂದನರಿ ಲಾಲ್ ಮುಂತಾದವರು ಸೇರಿ ನಿರ್ವಹಿಸಿದರು. [೨] [೩] ಈ ಘಟನೆಯಲ್ಲಿ ಯಾವ ಜೀವ ಹಾನಿ ಮಾಡುವ ಉದ್ದೇಶ ಇಲ್ಲದಿದ್ದರೂ ಓರ್ವ ಪ್ರಯಾಣಿಕ ಆಕಸ್ಮಿಕವಾಗಿ ಹತ್ಯೆಗೀಡಾದ.

ಪ್ರಕರಣ[ಬದಲಾಯಿಸಿ]

ಆಗಸ್ಟ್ 9, 1925 ರಂದು, ಶಹಜಹಾನ್ಪುರದಿಂದ ಲಕ್ನೋಗೆ ಪ್ರಯಾಣಿಸುವ ರೈಲು [೪] ಕಾಕೋರಿ ಪಟ್ಟಣವನ್ನು ಸಮೀಪಿಸುತ್ತಿತ್ತು (ಈಗ ಉತ್ತರಪ್ರದೇಶದಲ್ಲಿದೆ ), ಕ್ರಾಂತಿಕಾರಿಗಳಲ್ಲಿ ಒಬ್ಬರು ರೈಲು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದರು ನಂತರ ಕಾವಲುಗಾರರನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಆ ನಿರ್ದಿಷ್ಟ ರೈಲಿನಲ್ಲಿ ಭಾರತೀಯರಿಗೆ ಸೇರಿದ ಹಣವಿದ್ದು ಮತ್ತು ಅದನ್ನು ಬ್ರಿಟಿಷ್ ಸರ್ಕಾರದ ಖಜಾನೆಗೆ ವರ್ಗಾಯಿಸಲಾಗುತ್ತಿದೆ ಎಂಬ ಮಾಹಿತಿಯು ಕ್ರಾಂತಿಕಾರಿಗಳಿಗಿತ್ತು. ದಾಳಿಕೋರರು ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಹೊಂದಿದ್ದ ಹಣದ ಚೀಲಗಳನ್ನು ಮಾತ್ರ ಲೂಟಿ ಮಾಡಿ ಲಕ್ನೋದತ್ತ ಹೋಗಿ ತಲೆಮರೆಸಿಕೊಂಡರು.

ಈ ದರೋಡೆಯ ಉದ್ದೇಶಗಳು ಹೀಗಿವೆ  :

  • ಬ್ರಿಟಿಷ್ ಆಡಳಿತದಿಂದ ಕದ್ದ ಹಣದಿಂದ ಎಚ್‌ಆರ್‌ಎ ಯ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವುದು.
  • ಭಾರತೀಯರಲ್ಲಿ ಎಚ್‌ಆರ್‌ಎ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ರೂಪಿಸುವುದು.

ಅಹ್ಮದ್ ಅಲಿ ಎಂಬ ಪ್ರಯಾಣಿಕ ಈ ಘಟನೆಯಲ್ಲಿ ಆಕಸ್ಮಿಕವಾಗಿ ಕೊಲ್ಲಲ್ಪಟ್ಟರು, ಆದರೆ ಇದು ನರಹತ್ಯೆ ಪ್ರಕರಣವಾಗಿ ದಾಖಲಿಸಲಾಯಿತು. ಘಟನೆಯ ನಂತರ, ಈ ಪ್ರಕರಣದಲ್ಲಿ ಪಾಲ್ಗೊಂಡವರಿಗಾಗಿ ಬ್ರಿಟಿಷ್ ಆಡಳಿತವು ತೀವ್ರ ಶೋಧ ನಡೆಸಿ ನಂತರ ಅನೇಕ ಕ್ರಾಂತಿಕಾರಿಗಳನ್ನು ಬಂಧಿಸಲಾಯ್ತು. ಇವರೆಲ್ಲರೂ ಎಚ್‌ಆರ್‌ಎ ಯ ಸದಸ್ಯರಾಗಿದ್ದರು. ಅವರ ನಾಯಕ ರಾಮ್ ಪ್ರಸಾದ್ ಬಿಸ್ಮಿಲ್ ಅವರನ್ನು 26 ಸೆಪ್ಟೆಂಬರ್ 1925 ರಂದು ಸಹರಾನ್ಪುರದಲ್ಲಿ ಬಂಧಿಸಲಾಯಿತು, ಮತ್ತು ಬಿಸ್ಮಿಲ್‍ರ ಜೊತೆಗಾರ ಅಶ್ಫಕುಲ್ಲಾ ಖಾನ್ ಅವರನ್ನು ಹತ್ತು ತಿಂಗಳ ನಂತರ ದೆಹಲಿಯಲ್ಲಿ ಬಂಧಿಸಲಾಯಿತು.

ಭಾರತದಾದ್ಯಂತದ ಒಟ್ಟು ನಲವತ್ತು ಜನರನ್ನು [೫] ಬಂಧಿಸಲಾಯಿತು. ಅವರ ಹೆಸರುಗಳು (ಬಂಧನದ ಸ್ಥಳದೊಂದಿಗೆ):

  • ಆಗ್ರಾದಿಂದ
    • ಚಂದ್ರ ಧಾರ್ ಜೊಹ್ರಿ
    • ಚಂದ್ರ ಭಲ್ ಜೊಹ್ರಿ
  • ಅಲಹಾಬಾದ್‌ನಿಂದ
    • ಶೀತಲಾ ಸಹೈ
    • ಜ್ಯೋತಿ ಶಂಕರ್ ದೀಕ್ಷಿತ್
    • ಭೂಪೇಂದ್ರ ನಾಥ್ ಸನ್ಯಾಲ್
  • ಬನಾರಸ್‌ನಿಂದ
    • ಮನ್ಮಥನಾಥ ಗುಪ್ತಾ
    • ಫನೀಂದ್ರ ನಾಥ್ ಬ್ಯಾನರ್ಜಿ
    • ದಾಮೋದರ್ ಸ್ವರೂಪ್ ಸೇಠ್
    • ರಾಮ್ ನಾಥ್ ಪಾಂಡೆ
    • ದೇವ್ ದತ್ ಭಟ್ಟಾಚಾರ್ಯ
    • ಇಂದ್ರ ವಿಕ್ರಮ್ ಸಿಂಗ್
    • ಮುಕುಂಡಿ ಲಾಲ್
  • ಬಂಗಾಳದಿಂದ
    • ಸಚೀಂದ್ರ ನಾಥ್ ಸನ್ಯಾಲ್
    • ಜೋಗೇಶ್ ಚಂದ್ರ ಚಟರ್ಜಿ
    • ರಾಜೇಂದ್ರ ಲಾಹಿರಿ
    • ಶರತ್ ಚಂದ್ರ ಗುಹಾ
    • ಕಾಳಿ ದಾಸ್ ಬೋಸ್
  • ಎತಾದಿಂದ
    • ಬಾಬು ರಾಮ್ ವರ್ಮಾ
  • ಹಾರ್ಡೊಯ್‌ನಿಂದ
    • ಭೈರೋನ್ ಸಿಂಗ್
  • ಕಾನ್ಪುರದಿಂದ
    • ರಾಮ್ ದುಲಾರೆ ತ್ರಿವೇದಿ
    • ಗೋಪಿ ಮೋಹನ್
    • ರಾಜ್ ಕುಮಾರ್ ಸಿನ್ಹಾ
    • ಸುರೇಶ್ ಚಂದ್ರ ಭಟ್ಟಾಚಾರ್ಯ
  • ಲಾಹೋರ್‌ನಿಂದ
    • ಮೋಹನ್ ಲಾಲ್ ಗೌತಮ್
  • ಲಖಿಂಪುರದಿಂದ
    • ಹರ್ನಮ್ ಸುಂದರ್ಲಾಲ್
  • ಲಕ್ನೋದಿಂದ
    • ಗೋವಿಂದ್ ಚರಣ್ ಕರ್
    • ಶಚೀಂದ್ರ ನಾಥ್ ವಿಶ್ವಾಸ್
  • ಮಥುರಾದಿಂದ
    • ಶಿವ ಚರಣ್ ಲಾಲ್ ಶರ್ಮಾ (ಅವರ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು ಆದರೆ ಅವರು ಪಾಂಡಿಚೆರಿಗೆ ಓಡಿಹೋದ ಕಾರಣ ಅವರನ್ನು ಬಂಧಿಸಲಾಗಿಲ್ಲ)
  • ಮೀರತ್‌ನಿಂದ
    • ವಿಷ್ಣು ಶರಣ್ ಡಬ್ಲಿಶ್
  • ಒರೈನಿಂದ
    • ವೀರ್ ಭದ್ರ ತಿವಾರಿ
  • ಪುಣೆಯಿಂದ
    • ರಾಮಕೃಷ್ಣ ಖತ್ರಿ
  • ರಾಯ್‍ಬರೇಲಿಯಿಂದ
    • ಬನ್ವಾರಿ ಲಾಲ್
  • ಶಹಜಹಾನ್ಪುರದಿಂದ
    • ರಾಮ್ ಪ್ರಸಾದ್ ಬಿಸ್ಮಿಲ್
    • ಬನಾರ್ಸಿ ಲಾಲ್
    • ಲಾಲಾ ಹರ್ ಗೋವಿಂದ್
    • ಪ್ರೇಮ್ ಕೃಷ್ಣ ಖನ್ನಾ
    • ಇಂದೂಭೂಷಣ್ ಮಿತ್ರ
    • ಠಾಕೂರ್ ರೋಶನ್ ಸಿಂಗ್
    • ರಾಮ್ ದತ್ ಶುಕ್ಲಾ
    • ಮದನ್ ಲಾಲ್
    • ರಾಮ್ ರತ್ನ ಶುಕ್ಲಾ
    • ಅಶ್ಫಕುಲ್ಲಾ ಖಾನ್
  • ಪ್ರತಾಪಗಢದಿಂದ
    • ಸಚೀಂದ್ರನಾಥ್ ಬಕ್ಷಿ
  • ಬಿಹಾರದ ಚಂಪಾರನ್‌ನಿಂದ
    • ಕಮಲ್ ನಾಥ್ ತಿವಾರಿ


ಈ ಮೇಲಿನವರಲ್ಲಿ ಸಚಿಂದ್ರನಾಥ ಸನ್ಯಾಲ್, ರಾಜೇಂದ್ರ ಲಾಹಿರಿ ಮತ್ತು ಜೋಗೇಶ್ ಚಂದ್ರ ಚಟರ್ಜಿ ಅವರನ್ನು ಈಗಾಗಲೇ ಬಂಗಾಳದಲ್ಲಿ ಬಂಧಿಸಲಾಗಿತ್ತು. ದಕ್ಷಿಣೇಶ್ವರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ರಾಜೇಂದ್ರ ಲಾಹಿರಿ ವಿರುದ್ಧ ಅದಾಗಲೇ ಕಾನೂನು ಕ್ರಮ ಜರುಗಿಸಲಾಗಿತ್ತು. ಕಾಕೋರಿ ಪಿತೂರಿ ಪ್ರಕರಣದ ವಿಚಾರಣೆ ಮುಗಿದ ನಂತರ ಅಶ್ಫಕುಲ್ಲಾ ಖಾನ್ ಮತ್ತು ಸಚೀಂದ್ರನಾಥ ಬಕ್ಷಿ ಅವರನ್ನು ಬಂಧಿಸಲಾಯಿತು. ಈ ಇಬ್ಬರ ವಿರುದ್ಧ ಪೂರಕ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಲಾಯಿತು

ಪ್ರಕರಣದ ವಿಚಾರಣೆ[ಬದಲಾಯಿಸಿ]

ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಇತರರ ಮೇಲೆ ದರೋಡೆ ಮತ್ತು ಕೊಲೆ ಸೇರಿದಂತೆ ವಿವಿಧ ಅಪರಾಧಗಳ ಆರೋಪಿಗಳಾಗಿ ವಿಚಾರಣೆ ನಡೆಸಲಾಯ್ತು. ಸಾಕ್ಷ್ಯಾಧಾರದ ಕೊರತೆಯಿಂದಾಗಿ ಹದಿನೈದು ಜನರನ್ನು ಬಿಡುಗಡೆ ಮಾಡಲಾಯ್ತು. ಮತ್ತು ಇನ್ನೂ ಐದು ಮಂದಿಯನ್ನು ತಲೆಮರೆಸಿಕೊಂಡಿರುವ ಆರೋಪಿಗಳ ಯಾದಿಯಲ್ಲಿ ಸೇರಿಸಲಾಯ್ತು. ಅವರಲ್ಲಿ ಇಬ್ಬರು - ಅಶ್ಫಕುಲ್ಲಾ ಖಾನ್ ಮತ್ತು ಸಚೀಂದ್ರ ಬಕ್ಷಿ ಅವರನ್ನು ನಂತರ ಸೆರೆಹಿಡಿಯಲಾಯ್ತು. ಚಂದ್ರಶೇಖರ್ ಆಜಾದ್, 1928 ರಲ್ಲಿ ಎಚ್‌ಆರ್‌ಎ ಅನ್ನು ಮರುಸಂಘಟಿಸಿದರು ಮತ್ತು ಅಲಹಾಬಾದ್‌ನಲ್ಲಿ ತಾವು ಮರಣ ಹೊಂದಿದ ದಿನ, ಫೆಬ್ರವರಿ ೨೭, ೧೯೩೧ ರವರೆಗೆ ಅದನ್ನು ನಿರ್ವಹಿಸಿದರು. ಆ ದಿನ, ಅವರನ್ನು ಪೊಲೀಸರು ಸುತ್ತುವರೆದರು ಮತ್ತು ಸುದೀರ್ಘ ಗುಂಡಿನ ಚಕಮಕಿಯ ನಂತರ, ಚಂದ್ರಶೇಖರ್ ಆಜಾದ್ ಪಾರ್ಕ್‌ನಲ್ಲಿ ತಮ್ಮ ಕೊನೆಯ ಗುಂಡಿನಿಂದ ತಾವೇ ಗುಂಡು ಹಾರಿಸಿಕೊಂಡು ಮೃತರಾದರು . [೬]

ಇನ್ನು ಕೆಲವು ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಡಲಾಯಿತು. ಅನಾರೋಗ್ಯದ ಕಾರಣ ದಾಮೋದರ್ ಸ್ವರೂಪ್ ಸೇಠ್ ಅವರನ್ನು ಬಿಡುಗಡೆ ಮಾಡಲಾಯ್ತು. ವೀರ್ ಭದ್ರಾ ತಿವಾರಿ, ಜ್ಯೋತಿಶಂಕರ್ ದೀಕ್ಷಿತ್ ಮತ್ತು ಶಿವ ಚರಣ್ ಲಾಲ್ ಅವರು ಅಧಿಕಾರಿಗಳಿಗೆ ಮಾಹಿತಿದಾರರಾಗಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಇತರ ಇಬ್ಬರು ವ್ಯಕ್ತಿಗಳು - ಬನ್ವಾರಿ ಲಾಲ್ ಮತ್ತು ಇಂದೂ ಭೂಷಣ್ ಮಿತ್ರ ಮಾಫಿ ಸಾಕ್ಷಿಗಳಾಗಿ ಪರಿಗಣಿತರಾದರು .  

೧೫ ಆರೋಪಿಗಳ ವಿರುದ್ಧದ ಆರೋಪಗಳನ್ನು ಹಿಂಪಡೆಯಲಾಗಿ, ಉಳಿದ ೨೮ ರ ವಿರುದ್ಧ ವಿಚಾರಣೆ ೨೧ ಮೇ ೧೯೨೬ ರಂದು ಎ. ಹ್ಯಾಮಿಲ್ಟನ್ ಅವರ ವಿಶೇಷ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು. ಅಬ್ಬಾಸ್ ಸಲೀಮ್ ಖಾನ್, ಬನ್ವಾರಿ ಲಾಲ್ ಭಾರ್ಗವ, ಜ್ಞಾನ ಚಟ್ಟರ್ಜಿ ಮತ್ತು ಮೊಹಮ್ಮದ್ ಆಯುಫ್ ಈ ಪ್ರಕರಣದ ಮೌಲ್ಯಮಾಪಕರಾಗಿದ್ದರು. ೨೮ ಆರೋಪಿಗಳಲ್ಲಿ, ಸಚೀಂದ್ರ ನಾಥ್ ಸನ್ಯಾಲ್, ಜೋಗೇಶ್ ಚಂದ್ರ ಚಟರ್ಜಿ ಮತ್ತು ರಾಜೇಂದ್ರ ನಾಥ್ ಲಹಿರಿ ಅವರನ್ನು ಬಂಗಾಳದಿಂದ ಕರೆತರಲಾಯ್ತು.

ನ್ಯಾಯಾಲಯವು ಜಗತ್ ನಾರಾಯಣ್ ಮುಲ್ಲಾ ಅವರನ್ನು ಉದ್ದೇಶಪೂರ್ವಕವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿತು; ೧೯೧೬ರ ಲಕ್ನೋ ಕಾಂಗ್ರೆಸ್ ಅಧೀವೇಶನದಲ್ಲಿ ಬಾಲ್ ಗಂಗಾಧರ್ ತಿಲಕರ ಭವ್ಯ ಮೆರವಣಿಗೆಯನ್ನು ಬಿಸ್ಮಿಲ್ ಮುನ್ನಡೆಸಿದ್ದರಿಂದ ಅವರು ರಾಮ್ ಪ್ರಸಾದ್ ಬಿಸ್ಮಿಲ್ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿದ್ದರು ಜೊತೆಗೆ 1918 ರ ಮೈನ್‌ಪುರಿ ಪಿತೂರಿ ಪ್ರಕರಣದಲ್ಲೂ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು.

ಅಶ್ಫಕುಲ್ಲಾ ಖಾನ್ ಬಂಧನದ ನಂತರ, ಪೊಲೀಸರು ಇತರ ಸಹಚರರ ವಿರುದ್ಧ ಪೂರಕ ಸಾಕ್ಷ್ಯಗಳನ್ನು ಪಡೆಯಲು ಪ್ರಯತ್ನಿಸಿದರು ಆದರೆ ಅಶ್ಫಕುಲ್ಲಾ ನಿರಾಕರಿಸಿದರು. ಈ ವಿಶೇಷ ಅಧಿವೇಶನದ ನ್ಯಾಯಾಧೀಶ ಜೆ.ಆರ್.ಡಬ್ಲ್ಯೂ ಬೆನೆಟ್ ಅವರ ನ್ಯಾಯಾಲಯದಲ್ಲಿ ಅಶ್ಫಕುಲ್ಲಾ ಖಾನ್ ಮತ್ತು ಸಚೀಂದ್ರನಾಥ ಬಕ್ಷಿ ವಿರುದ್ಧ ಮತ್ತೊಂದು ಪೂರಕ ಪ್ರಕರಣ ದಾಖಲು ಮಾಡಲಾಯ್ತು. ಜುಲೈ 18, 1927 ರಂದು ಅವಧ್ (ಈಗ ಉತ್ತರಪ್ರದೇಶದಲ್ಲಿದೆ) ಮುಖ್ಯ ನ್ಯಾಯಾಲಯವಾದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು.

ಆರೋಪಿಗಳಿಗೆ ನೀಡಲಾದ ಶಿಕ್ಷೆಗಳು ಹೀಗಿವೆ: [೭]

  • ಮರಣದಂಡನೆ: ರಾಮ್ ಪ್ರಸಾದ್ ಬಿಸ್ಮಿಲ್, ಠಾಕೂರ್ ರೋಶನ್ ಸಿಂಗ್, ರಾಜೇಂದ್ರ ನಾಥ್ ಲಹಿರಿ ಮತ್ತು ಅಶ್ಫಕುಲ್ಲಾ ಖಾನ್
  • ಕೋಲೆ ಪೆನೆಗೆ ( ಪೋರ್ಟ್ ಬ್ಲೇರ್ ಸೆಲ್ಯುಲಾರ್ ಜೈಲು ) ಗಡೀಪಾರು  : ಸಚೀಂದ್ರನಾಥ ಸನ್ಯಾಲ್ ಮತ್ತು ಸಚೀಂದ್ರನಾಥ ಬಕ್ಷಿ
  • 14 ವರ್ಷಗಳ ಜೈಲು ಶಿಕ್ಷೆ: ಮನ್ಮಥನಾಥ ಗುಪ್ತಾ
  • 10 ವರ್ಷ ಜೈಲು ಶಿಕ್ಷೆ: ಜೋಗೇಶ್ ಚಂದ್ರ ಚಟರ್ಜಿ, ಮುಕುಂಡಿ ಲಾಲ್, ಗೋವಿಡ್ ಚರಣ್ ಕಾರ್, ರಾಜ್ ಕುಮಾರ್ ಸಿಂಗ್ ಮತ್ತು ರಾಮ್ ಕೃಷ್ಣ ಖತ್ರಿ
  • 7 ವರ್ಷ ಜೈಲು ಶಿಕ್ಷೆ: ವಿಷ್ಣು ಚರಣ್ ಡಬ್ಲಿಷ್, ಸುರೇಶ್ ಚರಣ್ ಭಟ್ಟಾಚಾರ್ಯ
  • 5 ವರ್ಷ ಜೈಲು ಶಿಕ್ಷೆ: ಭೂಪೇಂದ್ರನಾಥ ಸನ್ಯಾಲ್, ಪ್ರೇಮ್ ಕೃಷ್ಣ ಖನ್ನಾ, ಬನ್ವಾರಿ ಲಾಲ್ ಮತ್ತು ಪ್ರಣವೇಶ್ ಮುಖರ್ಜಿ
  • 4 ವರ್ಷಗಳ ಜೈಲು ಶಿಕ್ಷೆ: ಕೇಶಬ್ ಚಕ್ರವರ್ತಿ

ನ್ಯಾಯಾಲಯವು ಅಂತಿಮ ತೀರ್ಪು ನೀಡಿದ ನಂತರ, ಗುಂಪಿನ ಛಾಯಾಚಿತ್ರವನ್ನು ತೆಗೆದು ಎಲ್ಲಾ ಆರೋಪಿಗಳನ್ನು ಯುನೈಟೆಡ್ ಪ್ರಾಂತ್ಯದ ವಿವಿಧ ಜೈಲುಗಳಿಗೆ ಕಳುಹಿಸಲಾಯ್ತು. ಕಾರಾಗೃಹಗಳಲ್ಲಿ, ಇತರ ಕೈದಿಗಳಂತೆ ಸಮವಸ್ತ್ರವನ್ನು ಧರಿಸಲು ಅವರನ್ನು ಕೇಳಲಾಯಿತು, ಆದರೆ ಅದು ಪ್ರತಿಭಟನೆ ಮತ್ತು ಉಪವಾಸಕ್ಕೆ ಕಾರಣವಾಗುತ್ತದೆ. ಕ್ರಾಂತಿಕಾರಿಗಳು ತಮ್ಮ ಮೇಲೆ ಬ್ರಿಟಿಷ್ ಆಡಳಿತದ ವಿರುದ್ಧದ ಅಪರಾಧಗಳ ಆರೋಪ ಹೊರಿಸಲಾಗಿದ್ದರಿಂದ ಅವರನ್ನು ರಾಜಕೀಯ ಕೈದಿಗಳೆಂದು ಪರಿಗಣಿಸಬೇಕು ಮತ್ತು ರಾಜಕೀಯ ಕೈದಿಗಳಿಗೆ ಒದಗಿಸುವ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಹೊಂದಿರಬೇಕು ಎಂದು ವಾದಿಸಿದರು.

ಅವರ ಉಪವಾಸದ ವಿವರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ  : [೮]

ಖೈದಿಯ ಹೆಸರು ಜೈಲಿನ ಹೆಸರು ಉಪವಾಸದ ದಿನಗಳು
ರಾಮ್ ಪ್ರಸಾದ್ ಬಿಸ್ಮಿಲ್ ಗೋರಖ್‌ಪುರ ಕೇಂದ್ರ ಜೈಲು 4 ದಿನಗಳು (7 ಏಪ್ರಿಲ್ 1927 ರಿಂದ 11 ಏಪ್ರಿಲ್ 1927 ರವರೆಗೆ)
ರೋಶನ್ ಸಿಂಗ್ ಅಲಹಾಬಾದ್ ಜೈಲು 6 ದಿನಗಳು (7 ಏಪ್ರಿಲ್ 1927 ರಿಂದ 13 ಏಪ್ರಿಲ್ 1927 ರವರೆಗೆ)
ರಾಮ್ ನಾಥ್ ಪಾಂಡೆ ರೈಬರೆಲಿ ಜಿಲ್ಲಾ ಜೈಲು 11 ದಿನಗಳು (7 ಏಪ್ರಿಲ್ 1927 ರಿಂದ 18 ಏಪ್ರಿಲ್ 1927 ರವರೆಗೆ)
ಪ್ರೇಮ್ ಕೃಷ್ಣ ಖನ್ನಾ ಡೆಹ್ರಾಡೂನ್ ಜಿಲ್ಲಾ ಜೈಲು 16 ದಿನಗಳು (7 ಏಪ್ರಿಲ್ 1927 ರಿಂದ 23 ಏಪ್ರಿಲ್ 1927 ರವರೆಗೆ)
ಸುರೇಶ್ ಚಂದ್ರ ಭಟ್ಟಾಚಾರ್ಯ ಆಗ್ರಾ ಕೇಂದ್ರ ಜೈಲು 19 ದಿನಗಳು (7 ಏಪ್ರಿಲ್ 1927 ರಿಂದ 26 ಏಪ್ರಿಲ್ 1927 ರವರೆಗೆ)
ರಾಮ್ ಕೃಷ್ಣ ಖತ್ರಿ ಆಗ್ರಾ ಕೇಂದ್ರ ಜೈಲು 32 ದಿನಗಳು (7 ಏಪ್ರಿಲ್ 1927 ರಿಂದ 9 ಮೇ 1927 ರವರೆಗೆ)
ಮುಕುಂಡಿ ಲಾಲ್ ಬರೇಲಿ ಕೇಂದ್ರ ಜೈಲು 32 ದಿನಗಳು (7 ಏಪ್ರಿಲ್ 1927 ರಿಂದ ಟಿ 9 ಮೇ 1927)
ರಾಜ್ ಕುಮಾರ್ ಸಿನ್ಹಾ ಬರೇಲಿ ಕೇಂದ್ರ ಜೈಲು 38 ದಿನಗಳು (7 ಏಪ್ರಿಲ್ 1927 ರಿಂದ 15 ಮೇ 1927 ರವರೆಗೆ)
ಜೋಗೇಶ್ ಚಂದ್ರ ಚಟರ್ಜಿ ಫತೇಘಡ್ ಜೈಲು 41 ದಿನಗಳು (7 ಏಪ್ರಿಲ್ 1927 ರಿಂದ 18 ಮೇ 1927 ರವರೆಗೆ)
ರಾಮ್ ದುಲಾರೆ ತ್ರಿವೇದಿ ಫತೇಘಡ್ ಜೈಲು 41 ದಿನಗಳು (7 ಏಪ್ರಿಲ್ 1927 ರಿಂದ 18 ಮೇ 1927 ರವರೆಗೆ)
ಗೋವಿಂದ್ ಚರಣ್ ಕರ್ ಫತೇಘಡ್ ಜೈಲು 41 ದಿನಗಳು (7 ಏಪ್ರಿಲ್ 1927 ರಿಂದ 18 ಮೇ 1927 ರವರೆಗೆ)
ಮನ್ಮತ್ ನಾಥ್ ಗುಪ್ತಾ ನೈನಿ ಅಲಹಾಬಾದ್ ಜೈಲು 45 ದಿನಗಳು (7 ಏಪ್ರಿಲ್ 1927 ರಿಂದ 22 ಮೇ 1927 ರವರೆಗೆ)
ವಿಷ್ಣು ಶರಣ್ ಡಬ್ಲಿಶ್ ನೈನಿ ಅಲಹಾಬಾದ್ ಜೈಲು 45 ದಿನಗಳು (7 ಏಪ್ರಿಲ್ 1927 ರಿಂದ 22 ಮೇ 1927 ರವರೆಗೆ)

ರಕ್ಷಣಾ ಸಮಿತಿ[ಬದಲಾಯಿಸಿ]

ಬಂಧಿತ ಕ್ರಾಂತಿಕಾರಿಗಳಿಗೆ ಕಾನೂನು ರಕ್ಷಣೆ ನೀಡಿದವರು ಗೋಬಿಂದ್ ಬಲ್ಲಾಭ್ ಪಂತ್, ಮೋಹನ್ ಲಾಲ್ ಸಕ್ಸೇನಾ, ಚಂದ್ರ ಭಾನು ಗುಪ್ತಾ, ಅಜಿತ್ ಪ್ರಸಾದ್ ಜೈನ್, ಗೋಪಿ ನಾಥ್ ಶ್ರೀವಾಸ್ತವ, ಆರ್.ಎಂ. ಬಹದ್ದೂರ್ಜಿ, ಬಿ.ಕೆ.ಚೌಧರಿ ಮತ್ತು ಕೃಪಾ ಶಂಕರ್ ಹಜೆಲಾ.

ಲಕ್ನೋದ ಪ್ರಮುಖ ವಕೀಲ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ಸಂಬಂಧಿ ಪಂಡಿತ್ ಜಗತ್ ನಾರಾಯಣ್ ಮುಲ್ಲಾ ಬಂಧಿತ ಕ್ರಾಂತಿಕಾರಿಗಳನ್ನು ರಕ್ಷಿಸಲು ನಿರಾಕರಿಸಿದರು. ನ್ಯಾಯಾಲಯವು ಅವರನ್ನು ಸಾರ್ವಜನಿಕ ಅಭಿಯೋಜಕರಾಗಿ ನೇಮಿಸಿತು.

:ಈ ಪ್ರಕರಣದ ಸಂದರ್ಭದಲ್ಲಿ ಕ್ರಾಂತಿಕಾರಿಗಳ ಬೆಂಬಲಕ್ಕೆ ಬಂದ ರಾಜಕೀಯ ವ್ಯಕ್ತಿಗಳೆಂದರೆ ಮೋತಿಲಾಲ್ ನೆಹರು, ಮದನ್ ಮೋಹನ್ ಮಾಳವೀಯ, ಮುಹಮ್ಮದ್ ಅಲಿ ಜಿನ್ನಾ, ಲಾಲಾ ಲಜಪತ್ ರಾಯ್, ಜವಾಹರಲಾಲ್ ನೆಹರು, ಗಣೇಶ ಶಂಕರ ವಿದ್ಯಾರ್ಥಿ, ಶಿವ ಪ್ರಸಾದ್ ಗುಪ್ತಾ, ಶ್ರೀ ಪ್ರಕಾಶ್ ಮತ್ತು ಆಚಾರ್ಯ ನರೇಂದ್ರ ದೇವ್ . [೯]

ದೇಶದಲ್ಲಿ ಪ್ರತಿಕ್ರಿಯೆ[ಬದಲಾಯಿಸಿ]

ನ್ಯಾಯಾಲಯದ ತೀರ್ಪಿನ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ನಾಲ್ಕು ಜನರಿಗೆ ನೀಡಲಾದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸುವಂತೆ ಕೇಂದ್ರ ಶಾಸಕಾಂಗದ ಸದಸ್ಯರು ಭಾರತದ ವೈಸ್ರಾಯ್‌ಗೆ ಮನವಿ ಸಲ್ಲಿಸಿದರು. ಮೇಲ್ಮನವಿಗಳನ್ನು ಪ್ರಿವಿವ್ ಕೌನ್ಸಿಲ್‌ಗೆ ಕಳುಹಿಸಲಾಯ್ತು. ಆದಾಗ್ಯೂ, ಈ ವಿನಂತಿಗಳನ್ನು ತಿರಸ್ಕರಿಸಲಾಯಿತು ಮತ್ತು ಅಂತಿಮವಾಗಿ ನ್ಯಾಯಾಲಯದ ತೀರ್ಪಿನಂತೆ ಗಲ್ಲಿಗೇರಿಸಲಾಯಿತು.

ಕ್ಲೆಮನ್ಸಿ ಮನವಿ[ಬದಲಾಯಿಸಿ]

22 ಆಗಸ್ಟ್ 1927 ರಂದು, ಮುಖ್ಯ ನ್ಯಾಯಾಲಯವು ಒಂದು ಅಥವಾ ಎರಡು ಶಿಕ್ಷೆಗಳನ್ನು ಹೊರತುಪಡಿಸಿ ಮೂಲ ತೀರ್ಪನ್ನು ಅನುಮೋದಿಸಿತು. ಶಾಸಕಾಂಗ ಪರಿಷತ್ತಿನ ಸದಸ್ಯರು ಯುಪಿ ಪ್ರಾಂತೀಯ ಗವರ್ನರ್ ಮುಂದೆ ಮೇಲ್ಮನವಿ ಸಲ್ಲಿಸಿದರು. ರಾಮ್ ಪ್ರಸಾದ್ ಬಿಸ್ಮಿಲ್ ಅವರು ಮದನ್ ಮೋಹನ್ ಮಾಲ್ವಿಯಾ ಅವರಿಗೆ ೯ ಸೆಪ್ಟೆಂಬರ್ ೧೯೨೭ ರಂದು ಗೋರಖ್‌ಪುರ ಜೈಲಿನಿಂದ ಪತ್ರ ಬರೆದಿದ್ದರು. ಮಾಲ್ವಿಯಾ ಅಂದಿನ ವೈಸ್ರಾಯ್ ಮತ್ತು ಭಾರತದ ಗವರ್ನರ್ ಜನರಲ್ ಎಡ್ವರ್ಡ್ ಫ್ರೆಡ್ರಿಕ್ ಲಿಂಡ್ಲೆ ವುಡ್ ಅವರಿಗೆ ೭೮ ಕೇಂದ್ರ ಶಾಸಕಾಂಗ ಸದಸ್ಯರ ಸಹಿಯೊಂದಿಗೆ ವಿಜ್ಞಾಪನಾ ಪತ್ರವನ್ನು ಕಳುಹಿಸಿದರು, ಅದನ್ನೂ ಸಹ ತಿರಸ್ಕರಿಸಲಾಯಿತು.

೧೬ ಸೆಪ್ಟೆಂಬರ್ ೧೯೨೭ರಂದು, ಇಂಗ್ಲೆಂಡ್‌ನ ಪ್ರಸಿದ್ಧ ವಕೀಲ ಎಸ್.ಎಲ್. ಪೋಲಾಕ್ ಮೂಲಕ ಅಂತಿಮ ಮನವಿಯನ್ನು ಲಂಡನ್‌ನ ಪ್ರಿವಿ ಕೌನ್ಸಿಲ್ ಮತ್ತು ಬ್ರಿಟೀಷ್ ಚಕ್ರವರ್ತಿಗೆ ರವಾನಿಸಲಾಯಿತು, ಆದರೆ ಆರೋಪಿಗಳನ್ನು ಗಲ್ಲಿಗೇರಿಸಲು ಈಗಾಗಲೇ ನಿರ್ಧರಿಸಿದ್ದ ಬ್ರಿಟಿಷ್ ಸರ್ಕಾರವು ನಿರ್ಧಾರವನ್ನು ಬದಲಾಯಿಸದೇ ನಾಲ್ವರು ಕೈದಿಗಳನ್ನು ೧೯೨೭ ರ ಡಿಸೆಂಬರ್ ೧೯ ರೊಳಗೆ ಗಲ್ಲಿಗೇರಿಸಬೇಕೆಂದು ವೈಸ್ರಾಯ್ ಅವರ ಭಾರತ ಕಚೇರಿಗೆ ಸೂಚನೆ ನೀಡಿತು.

ಉಲ್ಲೇಖಗಳು[ಬದಲಾಯಿಸಿ]

  1. Dr. Mehrotra N. C. Swatantrata Andolan Mein Shahjahanpur Ka Yogdan page 117.
  2. Dr. Mahaur Bhagwandas Kakori Shaheed Smriti page 30
  3. Sharma Vidyarnav Yug Ke Devta : Bismil Aur Ashfaq page 118
  4. "Kakori Conspiracy: 12 quick facts you need to know". India Today (in ಇಂಗ್ಲಿಷ್). Retrieved 2020-05-13.
  5. Dr. Mehrotra N. C. Swatantrata Andolan Mein Shahjahanpur Ka Yogdan, page 124–125.
  6. क्रान्त (2006). Swadhinta Sangram Ke Krantikari Sahitya Ka Itihas (in Hindi). Vol. 2 (1 ed.). New Delhi: Praveen Prakashan. p. 549. ISBN 81-7783-120-8. OCLC 271682218.{{cite book}}: CS1 maint: unrecognized language (link)
  7. Rana, Bhagwan Singh (2004). Chandra Shekhar Azad (An Immortal Revolutionary of India) (1st ed.). New Delhi, India: Diamaond books. ISBN 9788128808166.
  8. Dr. Mehrotra N.C. & Dr. Tandon Manisha page-136
  9. Dr. Mehrotra N. C. Swatantrata Andolan Mein Shahjahanpur Ka Yogdan page 130.

ಹೆಚ್ಚಿನ ಓದುವಿಕೆಗಾಗಿ[ಬದಲಾಯಿಸಿ]

  • Gupta, Amit Kumar (Sep–Oct 1997). "Defying Death: Nationalist Revolutionism in India, 1897–1938". Social Scientist. 25 (9/10): 3–27. doi:10.2307/3517678. JSTOR 3517678. (subscription required)