ವಿಷಯಕ್ಕೆ ಹೋಗು

ಕಾಕಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲ್ಲಿಗೆಯ ಮಾಲೆ ಧರಿಸಿದ ಜಾವಾದ ಮಹಿಳೆ

ಕಾಕಡ (ಡೌನಿ ಜಾಸ್ಮಿನ್) (ಕಸ್ತೂರಿ ಮಲ್ಲಿಗೆ[]) ಮಲ್ಲಿಗೆ, ಇರುವಂತಿಗೆ, ಜಾಜಿ ಮುಂತಾದ ಗಿಡಗಳ ಹತ್ತಿರದ ಸಂಬಂಧಿ ಸಸ್ಯ. ಭಾರತಾದ್ಯಂತ ಕಾಣದೊರೆಯುವ ಮಲ್ಲಿಗೆ ಜಾತಿ ಇದು.

ಸಂಸ್ಕೃತದಲ್ಲಿ ಇದನ್ನು ಮಾಘ ಮಲ್ಲಿಕಾ ಎಂದು ಕರೆಯುತ್ತಾರೆ ಏಕೆಂದರೆ ಇದು ಹಿಂದೂ ಪಂಚಾಂಗದಲ್ಲಿನ ಮಾಘ ಮಾಸದಲ್ಲಿ ಹೂ ಬಿಡುತ್ತದೆ. ಇದು ಎಷ್ಟು ಹೂವುಗಳನ್ನು ಬಿಡುತ್ತದೆ ಎಂದರೆ ಕೆಲವೊಮ್ಮೆ ಹೂವುಗಳು ಬಹುತೇಕ ಎಲೆಗಳನ್ನು ಆವರಿಸಿ ಎಲ್ಲವನ್ನೂ ಬಿಳಿಯಾಗಿ ಮಾಡಿಬಿಡುತ್ತವೆ. ಭಾರತೀಯ ಪುರಾಣದಲ್ಲಿ, ಕುಂದ ಎಂದು ಕರೆಯಲ್ಪಡುವ ಇದು ತನ್ನ ಬಿಳುಪಿಗೆ ಪರಿಚಿತವಾಗಿದೆ. ಹಾಗಾಗಿ ಹಿಂದೂ ಪೌರಾಣಿಕ ಕಥೆಗಳಲ್ಲಿ 'ಕುಂದದಂತೆ ಬಿಳಿ' ಎಂಬ ಪದಗುಚ್ಛ ಹಲವುವೇಳೆ ಕಾಣಿಸುತ್ತದೆ. ಜೊತೆಗೆ, ಸುಂದರ ಬಿಳಿ ಹಲ್ಲುಗಳನ್ನು ಹಲವುವೇಳೆ ಕುಂದದ ಮೊಗ್ಗುಗಳಿಗೆ ಹೋಲಿಸಲಾಗುತ್ತದೆ. ಮಣಿಪುರದಲ್ಲಿ, ಕುಂದದ ಹೂವುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ, ಮತ್ತು ವಿವಾಹ ಸಮಾರಂಭದ ಅತ್ಯಗತ್ಯ ಭಾಗವಾಗಿವೆ. ವಧುವು ವರನಿಗೆ ಎರಡು ಕುಂದ ಹೂವುಗಳ ಹಾರಗಳನ್ನು ಹಾಕುತ್ತಾಳೆ. ನಂತರ ವರನು ಅವುಗಳಲ್ಲಿ ಒಂದು ಹಾರವನ್ನು ತೆಗೆದುಕೊಂಡು ವಧುವಿಗೆ ತೊಡಿಸುತ್ತಾನೆ.

ವರದಿಯ ಪ್ರಕಾರ ಈ ಪ್ರಭೇದವನ್ನು ಫ್ಲಾರಿಡಾ, ಚಿಯಾಪಾಸ್, ಮಧ್ಯ ಅಮೇರಿಕಾ, ಕ್ವೀನ್ಸ್‌ಲಂಡ್, ಮತ್ತು ವೆಸ್ಟ್ ಇಂಡೀಸ್‍ನ ಬಹುಭಾಗಗಳಲ್ಲಿ ದೇಶೀಕರಿಸಲಾಗಿದೆ.[][][][]

ಸಸ್ಯ ಶಾಸ್ತ್ರೀಯ ವರ್ಗೀಕರಣ

[ಬದಲಾಯಿಸಿ]

ಜಾಸ್‍ಮಿನಮ್ ಪ್ಯೂಬೆಸೆನ್ಸ್ ಅಥವಾ ಜಾಸ್ಮಿನಮ್ ಮಲ್ಟಿಫ್ಲೋರಮ್ ಎಂಬುದು ಸಸ್ಯಶಾಸ್ತ್ರೀಯ ಹೆಸರು.

ಲಕ್ಷಣಗಳು

[ಬದಲಾಯಿಸಿ]

ಕುರುಚು ಪೊದೆಯ ರೂಪದಲ್ಲಿ ಹರಡಿಕೊಂಡು ಬೆಳೆಯುತ್ತದೆ. ವರ್ಷವಿಡೀ ಇದರಲ್ಲಿ ಹೂವಿರುವುದಾದರೂ ಚಳಿಗಾಲದಲ್ಲಿ ಹೆಚ್ಚು ಹೂಬಿಡುತ್ತದೆ. ನಿತ್ಯ ಹಸಿರಿನ ಸಸ್ಯ. ಅಚ್ಚ ಬಿಳಿಯ ಬಣ್ಣದ ಹೂಗಳು. ಸುವಾಸನೆ ಇಲ್ಲ. ಬಹುವಾರ್ಷಿಕ ಸಸ್ಯ.ಕಾಕಡ ಓಲಿಯೇಸೀ ಕುಟುಂಬದ ಜಾಸ್‍ಮಿನಮ್ ಪ್ಯೂಬಿಸೆನ್ಸ್ ಪ್ರಭೇದಕ್ಕೆ ಸೇರಿದೆ. ಇದು ಸುಮಾರು 3'-4' ಎತ್ತರ ಬೆಳೆಯುವ ನಿತ್ಯಹಸಿರಿನ ಬಹು ವಾರ್ಷಿಕ ಪೊದೆ ಸಸ್ಯ. ಇದರ ಎಳೆಯ ಕಾಂಡ ಮತ್ತು ಎಲೆಗಳ ಮೇಲೆ ತುಕ್ಕು ಬಣ್ಣದ ನವಿರಾದ ರೋಮಗಳಿವೆ. ಎಲೆಗಳು ಚಿಕ್ಕ ತೊಟ್ಟುಳ್ಳವು; ಇವುಗಳ ಆಕಾರ ಕರನೆಯಂತೆ; ಅಂಚು ನಯ, ತುದಿ ಮೊನಚು, ಬಣ್ಣ ಗಾಢ ಹಸಿರು. ಹೂ ಗೊಂಚಲು ಮಧ್ಯಾರಂಭಿ (ಸೈಮೋಸ್) ಮಾದರಿಯದು; ರೆಂಬೆಗಳ ತುದಿಯಲ್ಲಿ ಹುಟ್ಟುತ್ತದೆ. ಪುಷ್ಪಪತ್ರಗಳು 7, ಕೂಡಿಕೊಂಡಿವೆ. ಅವುಗಳ ಬಣ್ಣ ಬಿಳಿ. ಕೇಸರಗಳು 2, ಅಂಡಾಶಯ ಉಚ್ಚಸ್ಥಾನದ್ದು.

ಸಸ್ಯಾಭಿವೃದ್ಧಿ

[ಬದಲಾಯಿಸಿ]

ಕಾಕಡ ವಿಪುಲವಾಗಿ ಕವಲೊಡೆಯುತ್ತದೆ. ಈ ಕವಲುಗಳು ಬಾಗಿ, ನೆಲವನ್ನು ಮುಟ್ಟಿ. ಬೇರು ಬಿಟ್ಟು ಸ್ವತಂತ್ರ ಸಸಿಗಳಾಗುತ್ತವೆ. ಇಂಥ ಸಸಿಗಳಿಂದ ಕಾಕಡವನ್ನು ವೃದ್ಧಿ ಮಾಡಬಹುದು. ಸಸಿಗಳಿಗೆ ಕೊನೆಯ ಪಕ್ಷ ಎರಡು ತಿಂಗಳು ವಯಸ್ಸಾಗಿರಬೇಕು. ಸಸಿಗಳನ್ನು ತಾಯಿ. ಸಸ್ಯದಿಂದ ಬೇರ್ಪಡಿಸುವಾಗ ಅವುಗಳ ತಾಯಿಬೇರು ಕಿತ್ತುಹೋಗದಂತೆ ಎಚ್ಚರಿಕೆ ವಹಿಸಬೇಕು. ಕಾಕಡ ಬೇಸಾಯಕ್ಕೆ ಕೆಂಪು ಮರಳು ಮಿಶ್ರಿತ ಗೋಡುಮಣ್ಣು ಉತ್ತಮವಾದದ್ದು. ಆದರೆ ಜೌಗಿಲ್ಲದ ಫಲವತ್ತಾಗಿರುವ ಮತ್ತು ಸಡಿಲವಾಗಿರುವ ಬೇರೆ ಬಗೆಯ ಮಣ್ಣುಗಳಲ್ಲೂ ಇದರ ಬೇಸಾಯವನ್ನು ಮಾಡಬಹುದು. ಬೇಸಾಯ ಮಾಡುವ ಮೊದಲು ತೋಟವನ್ನು ಒಂದು ತಿಂಗಳು ಮುಂಚೆಯೇ ಚೆನ್ನಾಗಿ ಉಳುಮೆ ಅಥವಾ ಅಗತೆ ಮಾಡಿ ಸಿದ್ಧ ಮಾಡಬೇಕು. ಅನಂತರ 6' ಅಂತರದ ಸಾಲುಗಳಲ್ಲಿ 2' ಉದ್ದ 2' ಅಗಲ ಹಾಗೂ 1' ಆಳದ ಗುಂಡಿಗಳನ್ನು ತೋಡಬೇಕು. ಗುಂಡಿಗಳ ಪರಸ್ಪರ ದೂರ 5' ಇರಬೇಕು. ಗುಂಡಿಗಳಿಗೆ ಕೊಟ್ಟಿಗೆ ಗೊಬ್ಬರ, ಕೆಂಪು ಮಣ್ಣು ಮಿಶ್ರಮಾಡಿ ತುಂಬಿ ಅನಂತರ ಸಸಿಗಳನ್ನು ನಾಟಿ ಮಾಡಬೇಕು. ನಾಟಿ ಮಾಡಿದ ಒಂದು ವರ್ಷದ ಅನಂತರ ಗಿಡ ಹೂ ಬಿಡಲು ಪ್ರಾರಂಭಿಸುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಮತ್ತು ಚಳಿಗಾಲದ ಮುಕ್ತಾಯದಲ್ಲಿ ಕಾಕಡ ಬೆಳೆಗೆ ಮೇಲು ಗೊಬ್ಬರ ಕೊಡಬೇಕು. ಗೊಬ್ಬರ ಕೊಡುವುದಕ್ಕೆ ಮೊದಲು ಕಳೆ ತೆಗೆದು ಇಡೀ ತೋಟವನ್ನು ಮೇಲು ಅಗೆತಮಾಡಿ, ಸಸ್ಯಗಳ ಸುತ್ತಲು ಇರುವ ಮಣ್ಣನ್ನು ಪಕ್ಕಕ್ಕೆ ತೆಗೆದು, ಅನಂತರ ಗೊಬ್ಬರ ಕೊಟ್ಟು ವಿಶಾಲವಾಗಿ ಪಾತಿ ಮಾಡಬೇಕು. ಮಳೆಗಾಲದಲ್ಲಿ ನೀರಾವರಿ ಆವಶ್ಯಕತೆ ಇರುವುದಿಲ್ಲ. ಆದರೆ ಕಾಲಕಾಲಕ್ಕೆ ಅಗತ್ಯ ಬಿದ್ದಾಗ ನೀರು ಹಾಯಿಸುವುದರಿಂದ ಹೆಚ್ಚು ಇಳುವರಿ ಸಿಕ್ಕುತ್ತದೆ. ಚೆನ್ನಾಗಿ ಬೇಸಾಯ ಮಾಡಿದ ತೋಟದಲ್ಲಿ ಒಂದೊಂದು ಗಿಡವೂ ವರ್ಷಕ್ಕೆ 1ರಿಂದ 2ಕೆಜಿ. ಮೊಗ್ಗನ್ನು ಕೊಡುತ್ತದೆ.

ಉಪಯೋಗಗಳು

[ಬದಲಾಯಿಸಿ]

ಅಲಂಕಾರಿಕ ಸಸ್ಯವಾಗಿ ಉಪಯೋಗದಲ್ಲಿದೆ. ದೇವರ ಪೂಜೆಗೆ, ಮಾಲೆ ತಯಾರಿಕೆಯಲ್ಲಿ ಹೆಚ್ಚು ಬಳಕೆಯಲ್ಲಿದೆ.

ಔಷಧೀಯ ಗುಣ

[ಬದಲಾಯಿಸಿ]

ಇದರ ಎಲೆಗಳನ್ನು ಒಣಗಿಸಿ ಹಲವು ಬಗೆಯ ವ್ರಣ ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.flowersofindia.net/catalog/slides/Kund.html
  2. "Jasminum multiflorum". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 5 February 2012.
  3. Kew World Checklist of Selected Plant Families, Jasminum multiflorum
  4. "Jasminum multiflorum". Australian Plant Name Index (APNI), IBIS database. Centre for Plant Biodiversity Research, Australian Government, Canberra. Archived from the original on 17 ಮೇ 2022. Retrieved 5 February 2012.
  5. Biota of North America Program, Jasminum multiflorum
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಾಕಡ&oldid=1341821" ಇಂದ ಪಡೆಯಲ್ಪಟ್ಟಿದೆ