ಇರುವಂತಿಗೆ(ಸಸ್ಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇರುವಂತಿಗೆ - ಮಲ್ಲಿಗೆ (ಓಲಿಯೇಸಿ) ಕುಟುಂಬದ ಒಂದು ಸಸ್ಯ. ಭಾರತ ದೇಶದ ತೋಟಗಳಲ್ಲಿ ಬಹುಪುರಾತನ ಕಾಲದಿಂದಲೂ ಇದನ್ನು ಬೆಳೆಸುತ್ತಿದ್ದಾರೆ. ಅಧಿಕ ಸುವಾಸನೆಯ ಹೂಗಳಿಂದ ಈ ಗಿಡಕ್ಕೆ ಪ್ರಾಶಸ್ತ್ಯ ಬಂದಿದೆ. ಪ್ರಪಂಚದ ಉಷ್ಣ ಪ್ರದೇಶಗಳಲ್ಲೆಲ್ಲ ಬೆಳೆಸುತ್ತಿದ್ದರೂ ಇದರ ಮೂಲಸ್ಥಾನ ಭಾರತದ ಪಶ್ಚಿಮ ದಿಕ್ಕಿನ ಯಾವುದೋ ಪ್ರದೇಶವಾಗಿರಬೇಕೆಂದು ಬಹುಜನರ ಅಭಿಮತ. ಪೊದೆಯಂತೆ ಹರಡಿಕೊಂಡು ಅಥವಾ ಯಾವುದಾದರೂ ಆಸರೆಯನ್ನು ಅಪ್ಪಿಕೊಂಡು ಬೆಳೆಯುವ ಈ ಗಿಡದ ಶಾಸ್ತ್ರೀಯ ಹೆಸರು ಜಾಸ್ಮಿನಮ್ ಸಂಬಕ್. ಎಲೆಗಳು ಆಭಿಮುಖಿ ಆಥವಾ ತ್ರಿಪರ್ಣಕವಾಗಿ ಜೋಡಣೆಗೊಂಡಿದ್ದು ಅಂಡಾಕೃತಿಯಲ್ಲಿವೆ. ಹೂಗಳು ಬಿಡಿಬಿಡಿಯಾಗಿಯೋ ಇಲ್ಲವೇ ಮೂರು ಮೂರರಂತೆ ಒಟ್ಟಾಗಿ ಗೊಂಚಲುಗಳಲ್ಲೋ ಇರುತ್ತದೆ. ಬಣ್ಣ ಅಚ್ಚ ಬಿಳಿ. ದಳಗಳ ತುದಿ ಚೂಪಾಗಿರಬಹುದು ಅಥವಾ ಮೊಂಡಾಗಿರಬಹುದು. ಕಾಯಿಗಳು ಹಣ್ಣಾದಾಗ ಕಪ್ಪುಬಣ್ಣ ತಾಳುವುವು.

ವಿಧಗಳು[ಬದಲಾಯಿಸಿ]

ಭಾರತದ ಇರುವಂತಿಗೆಯಲ್ಲಿ ಮುಖ್ಯವಾಗಿ ನಾಲ್ಕು ವಿಧಗಳಿವೆ: 1 ಇರುವಂತಿಗೆ : ಇದರಲ್ಲಿ ಎರಡು ಸುತ್ತಿನ ಹೂಗಳಿದ್ದು ಮೊಗ್ಗುಗಳು ಗುಂಡಾಗಿವೆ. 2 ಕೋಲುಮಲ್ಲಿಗೆ : ಇದರಲ್ಲೂ ಎರಡು ಸುತ್ತಿನ ಹೂಗಳಿದ್ದು ದಳಗಳು ಉದ್ದವಾಗಿವೆ. 3 ಸೂಜಿಮಲ್ಲಿಗೆ : ಇದರಲ್ಲಿ ಒಂದೇ ಸುತ್ತಿನ ಹೂಗಳಿವೆ. 4 ಏಳು ಸುತ್ತಿನ ಮಲ್ಲಿಗೆ: ಇದರಲ್ಲಿ ಸುಮಾರು ಒಂದು ಅಂಗುಲ ದಪ್ಪದ ಮೊಗ್ಗುಗಳಿವೆ. ಹೂವಿನಲ್ಲಿರುವ ಸುತ್ತುಗಳು ಹಲವಾರು. ಇವುಗಳಲ್ಲೆಲ್ಲ ಎರಡು ಸುತ್ತಿನ ಹೂವುಳ್ಳ ಗಿಡಗಳು ಹೆಚ್ಚು ಜನಪ್ರಿಯ. ಇವನ್ನು ಉತ್ತರ ಪ್ರದೇಶ, ತಮಿಳುನಾಡು, ಮೈಸೂರುಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಒಂದು ಎಕರೆಗೆ ಸರಾಸರಿ 600ಕಿ.ಗ್ರಾಂ. ಹೂಗಳನ್ನು ಪಡೆಯಬಹುದು.

ಒಣಹವೆಯ ಪ್ರದೇಶಗಳಲ್ಲಿ ಕಾಂಡದ ತುಂಡನ್ನು ನೆಟ್ಟು ಗಿಡ ಬೆಳೆಸುತ್ತಾರೆ. ಹೂ ಬಿಡುವ ಋತುಗಳು ಬೇಸಗೆ ಮತ್ತು ಮಳೆಗಾಲಗಳು. ಚೆನ್ನಾಗಿ ಬಿಸಿಲು ಬೀಳುವ ಪ್ರದೇಶದಲ್ಲಿ ಬೆಳೆಸಿ ಹೂ ಬಿಡುವುದಕ್ಕೆ ಮುಂಚೆ ಎಲೆಗಳನ್ನು ಕಿತ್ತು ಹಾಕಿದರೆ ವಿಪುಲವಾಗಿ ಹೂ ದೊರೆಯುತ್ತದೆ.

ಉಪಯೋಗಗಳು[ಬದಲಾಯಿಸಿ]

ಹಾರ ತುರಾಯಿಗಳನ್ನು ಕಟ್ಟಲು, ಸುಗಂಧ ದ್ರವ್ಯಗಳನ್ನು ತಯಾರಿಸಲು ಇರುವಂತಿಗೆಯ ಉಪಯೋಗವಿದೆ. ವರ್ಷಕ್ಕೆ ಸುಮಾರು 700ರ ಮಣಗಳಷ್ಟು ಹೂ ಸುಗಂಧದ್ರವ್ಯ ಮತ್ತು ಆತ್ತರು ತಯಾರಿಕೆಗಳಲ್ಲಿ ಬಳಕೆಯಾಗುವುದು. ಉತ್ತಮ ದರ್ಜೆಯ ಸಾಬೂನು, ಎಣ್ಣೆ ಮತ್ತು ಇತರ ಹಲವಾರು ಸೌಂದರ್ಯ ಸಾಧನಗಳ ತಯಾರಿಕೆಯಲ್ಲಿ ಇದರ ಸುಗಂಧದ್ರವ್ಯವನ್ನು ಬಳಸುತ್ತಾರೆ. ಚೀನ ದೇಶದಲ್ಲಿ ಟೀ ಸೊಪ್ಪಿಗೆ ಕಂಪುಕೊಡಲು ಇದರ ಉಪಯೋಗವಿದೆ. ಔಷಧಿಯಾಗಿಯೂ ಇರುವಂತಿಗೆಯ ಪ್ರಯೋಜನ ಉಂಟು. ಮಲಯದಲ್ಲಿ ಒಂದು ಬಗೆಯ ತಲೆನೋವಿನ ನಿವಾರಣೆಗೆ ಇದರ ಹೂಗಳನ್ನು ಬಳಸುತ್ತಾರೆ. ಎಲೆಗಳಿಂದ ತಯಾರಿಸಿದ ಕಷಾಯ ಜ್ವರನಿವಾರಕ ಔಷಧಿ. ಹಲವಾರು ಬಗೆಯ ಚರ್ಮರೋಗಗಳಿಗೆ, ಹುಣ್ಣುಗಳಿಗೆ ಇದರ ಎಲೆಯನ್ನು ಚಚ್ಚಾರವಾಗಿ ಕಟ್ಟುತ್ತಾರೆ. ಇರುವಂತಿಗೆಗೆ ಹಲವು ಬಗೆಯ ಕೀಟಗಳೂ ಒಂದು ವಿಶಿಷ್ಟ ರೀತಿಯ ನೊಣವೂ ಹತ್ತಿಕೊಂಡು ಎಲೆ ಮತ್ತು ಮೊಗ್ಗುಗಳನ್ನು ನಾಶಪಡಿಸುತ್ತವೆ. ಪ್ಯಾರಾಥಿಯೋನ್ ಎಂಬ ಔಷಧಿಯನ್ನು ಸಿಂಪಡಿಸುವುದರ ಮೂಲಕ ಅವನ್ನು ನಿವಾರಿಸಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: