ಒರಿಸ್ಸಾದ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುರಾತನ ಕಾಲದಲ್ಲಿ[ಬದಲಾಯಿಸಿ]

ಒರಿಸ್ಸದ ಇತಿಹಾಸ ಪುರಾತನವಾದದ್ದು, ಪ್ರಾಚೀನ ಕಾಲದಲ್ಲಿ ಇದಕ್ಕೆ ಕಳಿಂಗ ಎಂಬ ಹೆಸರಿತ್ತು. ಗಂಗೆಯಿಂದ ಗೋದಾವರಿಯವರೆಗೆ ಪೂರ್ವಭಾರತದ ಕಡಲತಡಿಯ ನೆಲವೂ ಅದಕ್ಕೆ ಒಡಲಿನಂತಿರುವ ಪಶ್ಚಿಮದ ಪ್ರಸ್ಥಭೂಮಿಯೂ ಇದರಲ್ಲಿ ಸೇರಿದ್ದುವು. ಇಲ್ಲಿಯ ಪ್ರಾಚೀನ ನಿವಾಸಿಗಳು ಆದಿಕಾಲದ ಗಿರಿಜನರು. ಅನಂತರ ಇಲ್ಲಿಗೆ ದ್ರಾವಿಡರು ಬಂದು ನೆಲಸಿದರು. ವೇದ ಮತ್ತು ಬ್ರಾಹ್ಮಣಗಳ ಕಾಲದಲ್ಲಿ ಆರ್ಯರ ದಾಳಿ ಪ್ರಾರಂಭವಾಯಿತು. ಮಹಾಭಾರತ ಕಾಲಕ್ಕೆ ಕಳಿಂಗ, ಉತ್ಕಲ ಮತ್ತು ಓಢ್ರಗಳು ಶಕ್ತಿಯುತ ರಾಜ್ಯಗಳಾಗಿ ಆರ್ಯರ ರಾಜಕೀಯ ಸಾಮಾಜಿಕ ವ್ಯವಸ್ಥೆಗಳೊಂದಿಗೆ ಹೊಂದಿಕೊಂಡಿ ದ್ದುವು. ಮಹಾಭಾರತದಲ್ಲಿ ಕಳಿಂಗ, ಓಢ್ರ ಮತ್ತು ಉತ್ಕಲಗಳ ಬಗ್ಗೆ ಉಲ್ಲೇಖವಿದೆ. ಮಹಾಭಾರತದ ಕಾಲದಲ್ಲಿ ಶ್ರುತಯು ದೊರೆ ಕಳಿಂಗದ ಒಡೆಯನಾಗಿದ್ದ. ಈತ ಕೌರವರ ಪಕ್ಷ ಸೇರಿದ್ದನೆಂದು ಹೇಳಲಾಗಿದೆ. ಈತನ ಅನಂತರ ಮಹಾಪದ್ಮ ನಂದನವರೆಗೆ (ಪ್ರ.ಶ.ಪು.ಸು. 350) 32 ಅರಸರು ಕ್ರಮವಾಗಿ ಈ ನಾಡನ್ನಾಳಿದರು. ಮಹಾವೀರ ಮತ್ತು ಬುದ್ಧರ ಕಾಲಕ್ಕೆ ಕಳಿಂಗ, ಉತ್ಕಲ ಪ್ರದೇಶಗಳು ಭಾರತದ ಪುರ್ವತೀರದುದ್ದಕೂ ಪ್ರಸಿದ್ಧಿ ಪಡೆದಿದ್ದುದೇ ಅಲ್ಲದೆ ಮಾನ್ಯತೆಯನ್ನೂ ಪಡೆದಿದ್ದುವು.

ಒರಿಸ್ಸದ ರಾಜಕೀಯ ಇತಿಹಾಸ[ಬದಲಾಯಿಸಿ]

ಒರಿಸ್ಸದ ರಾಜಕೀಯ ಇತಿಹಾಸ ಮಗಧದ ನಂದ ಚಕ್ರವರ್ತಿಗಳ ಆಳ್ವಿಕೆಯಿಂದ ಪ್ರಾರಂಭವಾಗುತ್ತದೆ. ಉದಯಗಿರಿಯ ಬಳಿ ದೊರೆತಿರುವ ಖಾರವೇಲ ಚಕ್ರವರ್ತಿಯ ಹಾಥಿಗುಂಫ ಶಿಲಾಶಾಸನದಲ್ಲಿ ಒಬ್ಬ ನಂದ ದೊರೆಯನ್ನು ಎರಡುಸಲ ಹೆಸರಿಸಲಾಗಿದೆ. ನಂದರನ್ನು ಸೋಲಿಸಿ ಚಂದ್ರಗುಪ್ತ ಮೌರ್ಯ ಸಿಂಹಾಸನವನ್ನು ಏರಿದಾಗ ಕಳಿಂಗ ಅವನ ಚಕ್ರಾಧಿಪತ್ಯದ ಒಂದು ಭಾಗವಾಗಿರಲಿಲ್ಲ. ಅಶೋಕನ ಕಳಿಂಗದ ದಾಳಿ ಪ್ರಾಚೀನ ಕಾಲದಲ್ಲಿನ ನೂತನ ಯುಗಾರಂಭದ ಘಟನೆಯಾಯಿತಲ್ಲದೆ, ಜಗತ್ತಿನ ಇತಿಹಾಸದಲ್ಲಿ ಅನೇಕ ಶತಮಾನಗಳವರೆಗೆ ಪರಿಣಾಮ ಬೀರಬಲ್ಲದಾಗಿತ್ತು. 13ನೆಯ ಶಿಲಾಸ್ತಂಭದ ಶಾಸನದಲ್ಲಿ ಸ್ವತಃ ಅಶೋಕನೇ ಹೀಗೆಂದು ವಿವರಿಸಿದ್ದಾನೆ. ಆ (ಕಳಿಂಗ) ದೇಶದಿಂದ 1ಳಿ ಲಕ್ಷ ಜನ ಕೊಲ್ಲಲ್ಪಟ್ಟರು ಮತ್ತು ಅದಕ್ಕಿಂತಲೂ ಹೆಚ್ಚು ಜನ ನಾಶವಾದರು. ಕಳಿಂಗವನ್ನು ಅಶೋಕ ಗೆದ್ದನಾದರೂ ಅಲ್ಲಿನ ಸಾವುನೋವುಗಳಿಂದ ಅವನ ಹೃದಯ ಪರಿವರ್ತನೆಗೊಂಡಿತು. ಇದರಿಂದ ಏಷ್ಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪಥವೇ ಬದಲಾಯಿಸಿತೆನ್ನಬಹುದು.

ಅನಂತರ ಮುಖ್ಯ ಘಟ್ಟವೆಂದರೆ ಪ್ರ.ಶ.ಪು. 2ನೆಯ ಶತಮಾನದ ಮೊದಲರ್ಧದಲ್ಲಿದ್ದ ಖಾರವೇಲನ ಆಡಳಿತ. ಈತ ಸುತ್ತುಮುತ್ತಣ ಪ್ರದೇಶಗಳನ್ನೆಲ್ಲ ಗೆದ್ದ. ತನ್ನ ಆಳ್ವಿಕೆಯ 13ನೆಯ ವರ್ಷದಲ್ಲಿ ರಾಜ್ಯಾಡಳಿತದಿಂದ ನಿವೃತ್ತಿಹೊಂದಿ ಭುವನೇಶ್ವರದ ಬಳಿಯ ಖಂಡಗಿರಿಗೆ ನಿಷ್ಕ್ರಮಿಸಿದ. ಆತ, ಜೈನಮತಸ್ಥ.

ಖಾರವೇಲನ ಅನಂತರ ಒರಿಸ್ಸದ ಇತಿಹಾಸ ಅನೇಕ ಶತಮಾನಗಳವರೆಗೆ ಅಂಧಕಾರಮಯವಾಗಿತ್ತು. ಹ್ಯುಯೆನ್ತ್ಸಾಂಗ್ ನೀಡಿರುವ ವಿವರಣೆಯಿಂದ ಶಿಲಾದಿತ್ಯನ ರಾಜಕೀಯ ಪ್ರಭುತ್ವ ಒರಿಸ್ಸದವರೆಗೂ ಹರಡಿತ್ತೆಂದು ತಿಳಿದುಬರುತ್ತದೆ. ಒರಿಸ್ಸದ ತೀರದಲ್ಲಿ ವ್ಯಾಪಾರದ ಕೋಠಿಗಳು ಬಲು ಪ್ರವರ್ಧಮಾನ ಸ್ಥಿತಿಯಲ್ಲಿದ್ದುವೆಂದು ಗ್ರೀಕ್ ಭೂಗೋಳಶಾಸ್ತ್ರಜ್ಞ ಟಾಲೆಮಿ (ಪ್ರ.ಶ.ಪು. 2ನೆಯ ಶತಮಾನ) ಬರೆದಿದ್ದಾನೆ. 8ನೆಯ ಶತಮಾನದಲ್ಲಿ ಒರಿಸ್ಸದ ಸಮುದ್ರಾಂತರ ವ್ಯಾಪಾರ ಚಟುವಟಿಕೆಗಳೂ ತುಟ್ಟತುದಿ ಮುಟ್ಟಿದ್ದುವು. ಆಗ ಮಲೇಷ್ಯದಲ್ಲಿ ಶೈಲೇಂದ್ರ ಚಕ್ರಾಧಿಪತ್ಯ ಸ್ಥಾಪಿತವಾಗಿತ್ತು. ಆಗಿನ ಆಳ್ವಿಕೆಯಲ್ಲಿ ವಿದೇಶಿಯರು ಮಲೇಷ್ಯವನ್ನು ಕಳಿಂಗವೆಂದೇ ಕರೆಯುತ್ತಿದ್ದರು. ಈ ಚಕ್ರಾಧಿಪತ್ಯದ ಎಲ್ಲೆಗಳು ಕಾಂಬೋಡಿಯ ಮತ್ತು ಅಸ್ಸಾಂಗಳಿಗೂ ವಿಸ್ತರಿಸಿದ್ದುವೆಂದು ಅರಬ್ಬೀ ಮೂಲಗಳು ತಿಳಿಸುತ್ತವೆ. ಶೈಲೇಂದ್ರ ಚಕ್ರಾಧಿಪತ್ಯದ ವೈಭವೋಪೇತ ಉಚ್ಛ್ರಾಯಸ್ಥಿತಿ ಪ್ರ.ಶ. 10ನೆಯ ಶತಮಾನದಲ್ಲೂ ಮುಂದುವರಿದಿತ್ತು. 8-10ನೆಯ ಶತಮಾನದವರೆಗೆ ಇದನ್ನು ಭೌಮಕಾರ ರಾಜವಂಶ ಆಳಿತು. ಅದರ ರಾಜಧಾನಿ ಇಂದಿನ ಜಾಜ್ಪುರ. ಇದರ ಅನಂತರ ಸೋಮ ಮತ್ತು ಕೇಸರಿ ವಂಶಗಳು ಆಳಿದುವು. ಭುವನೇಶ್ವರದಲ್ಲಿನ ಲಿಂಗರಾಜ ದೇವಾಲಯವನ್ನು ಕಟ್ಟಲು ಆರಂಭಿಸಿದವನು ಯಯಾತಿ ಕೇಸರಿ. ಅವನ ಮುಂದಿನ ದೊರೆಗಳು ಅದನ್ನು ಪುರ್ಣಗೊಳಿಸಿದರು.

ಮೆಗಾಸ್ತನೀಸ್ ವಿವರಿಸಿರುವಂತೆ ಗಂಗಾ ನದೀತೀರದಲ್ಲಿದ್ದ ಗಂಗರು ಕ್ರಮೇಣ ಒರಿಸ್ಸದಲ್ಲಿ ನೆಲಸಿದರು. ಅನಂತವರ್ಮ ಚೋಳಗಂಗದೇವನಿಗೆ (1078-1191) ಗಂಗಾ ನದಿಯಿಂದ ಗೋದಾವರಿಯವರೆಗೆ ಆಳಿದ ಗೌರವ ಸಲ್ಲುತ್ತದೆ. ಪರ್ಲಾಕಿಮಿಡಿಯಲ್ಲಿನ ಕಳಿಂಗನಗರದಿಂದ ಕಟಕ್ಗೆ ತನ್ನ ರಾಜಧಾನಿಯನ್ನು ಈತ ಬದಲಾಯಿಸಿದ. ವೈಷ್ಣವ ಧರ್ಮಕ್ಕೆ ರಾಜಾಶ್ರಯ ದೊರಕಿತು. ವೈಷ್ಣವ ದೇವಾಲಯಗಳು ಮುಖಲಿಂಗಂ, ಶ್ರೀ ಕೂರ್ಮಂ, ಸಿಂಹಾಚಲಂ ಮತ್ತು ಪುರಿಗಳಲ್ಲಿ ನಿರ್ಮಿತವಾದುವು. ಪುರಿ ದೇವಾಲಯವನ್ನು ಪೂರ್ಣಗೊಳಿಸಿದವನು ಅನಂಗಭೀಮ-13ನೆಯ ಶತಮಾನದಲ್ಲಿ. ಗಂಗಸಾಮ್ರಾಜ್ಯ ಮಹಮ್ಮದೀಯರ ದಾಳಿಯನ್ನು ಎದುರಿಸಿ ಅವರನ್ನು ಸೋಲಿಸಿತು.

13ನೆಯ ಶತಮಾನದಲ್ಲಿ ಉತ್ತರ ಭಾರತದಲ್ಲಿ ಹಿಂದೂ ವಾಸ್ತುಶಿಲ್ಪ ಕ್ಷೀಣಸ್ಥಿತಿಗೆ ಬರುತ್ತಿದ್ದಾಗ ಒರಿಸ್ಸದ ವಾಸ್ತುಶಿಲ್ಪ ಕೋಣಾರ್ಕದಲ್ಲಿ ಅರಳುತ್ತಿತ್ತು. ಅಲ್ಲಿಯ ಸುಪ್ರಸಿದ್ಧ ಸೂರ್ಯದೇವಾಲಯ ಆಗ ನಿರ್ಮಾಣವಾಯಿತು. ಒಂದನೆಯ ನರಸಿಂಹದೇವ (1238-64) ಈ ದೇವಾಲಯವನ್ನು ನಿರ್ಮಿಸಿದ. ಗಂಗವಂಶದ ಆಡಳಿತ ಕೊನೆಗೊಂಡದ್ದು 1435ರಲ್ಲಿ. ಅನಂತರ ಆಡಳಿತಕ್ಕೆ ಬಂದ ಸೂರ್ಯವಂಶದ ಮೊಟ್ಟಮೊದಲ ದೊರೆಯಾದ ಗಜಪತಿ ಕಪಿಲೇಂದ್ರದೇವ (1435-66) ದಕ್ಷ ಉತ್ಸಾಹಿ. ಗಂಗರಸರ ಕೊನೆಗಾಲದಲ್ಲಿ ಹೋಗಿದ್ದ ಕೀರ್ತಿಯನ್ನು ಒರಿಸ್ಸಕ್ಕೆ ಮತ್ತೆ ಸಂಪಾದಿಸಿಕೊಟ್ಟ, ಪ್ರಬಲರಾದ ವಿರೋಧಿಗಳನ್ನು ಅಡಗಿಸಿದ. ಬಿದರೆಬಹಮನಿ ಸುಲ್ತಾನರೊಡನೆ ಯುದ್ಧ ಮಾಡಿ ಗೆದ್ದ. ಇವನ ರಾಜ್ಯ ಗಂಗೆಯಿಂದ ಕಾವೇರಿಯವರೆಗೆ ವಿಸ್ತರಿಸಿತು. ಗೋಪೀನಾಥಪುರದ ಶಿಲಾಶಾಸನದಂತೆ ಈತ ವಿಜಯನಗರಕ್ಕೆ ಸೇರಿದ್ದ ಉದಯಗಿರಿಯನ್ನೂ ಕಂಚಿಯನ್ನೂ ವಶಪಡಿಸಿಕೊಂಡ.

ಈತನ ತರುವಾಯ ಪಟ್ಟಕ್ಕೆ ಬಂದ ಪುರುಷೋತ್ತಮನ ಆಳ್ವಿಕೆಯಲ್ಲಿ (1467-97) ರಾಜ್ಯದಲ್ಲಿ ಒಡಕು ಹುಟ್ಟಿತು. ಗೋದಾವರಿಯ ದಕ್ಷಿಣದ ಭಾಗಗಳು ಕೈಬಿಟ್ಟುವು. ಕೃಷ್ಣಾನದಿಯ ದಕ್ಷಿಣಕ್ಕಿದ್ದ ಪ್ರದೇಶವನ್ನು ಸಾಳುವ ನರಸಿಂಹ ಗೆದ್ದುಕೊಂಡ. ಗೋದಾವರಿಯಿಂದ ಕೃಷ್ಣಾನದಿಯವರೆಗಿನ ಸೀಮೆ ಬಹಮನಿ ಸುಲ್ತಾನರ ವಶವಾಯಿತು. ಆದರೆ ಪುರುಷೋತ್ತಮ ತನ್ನ ಆಳ್ವಿಕೆಯ ಕಡೆಯ ಭಾಗದಲ್ಲಿ ಇವನ್ನು ಮತ್ತೆ ಗೆದ್ದು ರಾಜ್ಯವನ್ನು ಗುಂಟೂರಿನವರೆಗೂ ವಿಸ್ತರಿಸಿದ. ಆದರೂ ಆತನ ರಾಜ್ಯ ಕಪಿಲೇಂದ್ರನ ಕಾಲದಲ್ಲಿದ್ದಷ್ಟು ವಿಶಾಲವಾಗಿರಲಿಲ್ಲ.

ಪುರುಷೋತ್ತಮನ ಮಗನಾದ ಪ್ರತಾಪರುದ್ರ 1497 - 1540ರ ವರೆಗೆ ಆಳಿದ. ಈತ ಭಕ್ತ ಚೈತನ್ಯನ ಶಿಷ್ಯ. ವಿಜಯನಗರದ ಕೃಷ್ಣದೇವರಾಯನ ದಿಗ್ವಿಜಯಗಳಿಂದಲೂ ಗೋಲ್ಕೊಂಡ ಅರಸರ ಪ್ರಾಬಲ್ಯದಿಂದಲೂ ಒರಿಸ್ಸ ಮುಂದುವರಿಯಲು ಅಸಾಧ್ಯವಾಯಿತು.

ಕೃಷ್ಣದೇವರಾಯ ತನ್ನ ರಾಜ್ಯದ ಒಳಗಿನ ವಿರೋಧಿಗಳನ್ನಡಗಿಸಿ ಅಸಂಖ್ಯಾತ ಸೈನ್ಯವೊಂದನ್ನು ಸಜ್ಜುಗೊಳಿಸಿ ಪ್ರಬಲ ಶತ್ರುಗಳನ್ನಡಗಿಸಲು ಉತ್ತರದ ಕಡೆಹೊರಟ. ಕೃಷ್ಣಾನದಿಯ ದಂಡೆಯಲ್ಲಿ ಷಾಹಿ ಸುಲ್ತಾನರು ಸೋತು ಓಡಿಹೋದರು. ಆಗ ಕೃಷ್ಣದೇವರಾಯ ಕೃಷ್ಣಾನದಿಯನ್ನು ದಾಟಿ ಮುಸಲ್ಮಾನ್ ರಾಜ್ಯಕ್ಕೆ ನುಗ್ಗದೆ, ಅವುಗಳಿಗೆ ಸಹಾಯ ಮಾಡುತ್ತಿದ್ದ ಗಜಪತಿ ರಾಜನ ರಾಜ್ಯದ ಕಡೆಗೆ ಹೊರಟ. ಉದಯಗಿರಿ ಕೋಟೆಯನ್ನು ವಶಪಡಿಸಿಕೊಳ್ಳುವುದಕ್ಕೆ 1ಳಿ ವರ್ಷಗಳು ಬೇಕಾದುವು. ಅಭೇದ್ಯವೆಂದು ಹೆಸರುಪಡೆದ ಕೋಟೆಯನ್ನೇ ಅಲ್ಲದೆ ಇತರ ಕೋಟೆಗಳಿಗೂ ಆತ ಮುತ್ತಿಗೆ ಹಾಕಿದ. ಕೊಂಡವೀಡು ಮುತ್ತಿಗೆ ಮುಂದುವರಿಯುತ್ತಿದ್ದಾಗ ಪ್ರತಾಪರುದ್ರ ಗಜಪತಿ ದೊಡ್ಡ ಸೈನ್ಯದೊಂದಿಗೆ ಬಂದು ಕೃಷ್ಣದೇವರಾಯನ ಸೈನ್ಯವನ್ನೆದುರಿಸಿದ. ಆದರೆ ಪುರ್ಣವಾಗಿ ಸೋತುಹೋದ. ಗಜಪತಿಗೆ ಸೇರಿದ್ದ ಕೋಟೆಗಳು ಕೃಷ್ಣದೇವರಾಯನ ವಶವಾದುವು. ಪ್ರತಾಪರುದ್ರನ ಮಗ ವೀರಭದ್ರನೂ ದಳಪತಿಗಳಿಗೂ ಅವರಿಗೆ ಸಹಾಯ ಮಾಡುತ್ತಿದ್ದ ಮುಸಲ್ಮಾನ್ ಸೈನಿಕರೂ ಸೆರೆ ಸಿಕ್ಕಿದರು. ಕೃಷ್ಣದೇವರಾಯ ಇವರೆಲ್ಲರನ್ನೂ ವಿಜಯನಗರಕ್ಕೆ ಕಳುಹಿಸಿ ಗಜಪತಿಗೆ ನೆರವು ಕೊಡುತ್ತಿದ್ದ ಬಿದರೆ ಸುಲ್ತಾನನನ್ನು ಸೋಲಿಸಿ ಪುನಃ ಒರಿಸ್ಸಕ್ಕೆ ಬಂದು, ವಿಶಾಖಪಟ್ಟಣಕ್ಕೆ ಹತ್ತಿರವಿದ್ದ ಪೋತನೂರು ಮತ್ತು ಸಿಂಹಾದ್ರಿಗಳನ್ನು ವಶಪಡಿಸಿಕೊಂಡ. ಪ್ರತಾಪರುದ್ರ ಯುದ್ಧ ಮಾಡಲಿಲ್ಲ. ಆತ ವಿಜಯನಗರದ ಮಿತ್ರನಾಗಿ ಉಳಿಯುವುದಾದರೆ ಅವನ ರಾಜ್ಯವನ್ನು ಹಿಂತಿರುಗಿ ಪಡೆಯಬಹುದೆಂದು ಕೃಷ್ಣದೇವರಾಯ ಹೇಳಿ ಕಳುಹಿಸಿದ. ಗಜಪತಿ ಮಿತ್ರನಾಗಿರಲು ಒಪ್ಪಿಕೊಂಡು ತನ್ನ ಮಗಳಾದ ಜಗನ್ಮೋಹಿನಿಯನ್ನು ಕೃಷ್ಣದೇವರಾಯನಿಗೆ ಕೊಟ್ಟು ವಿವಾಹಮಾಡಿ ಮಗಳಿಗೆ ಬಳುವಳಿಯಾಗಿ ಕೃಷ್ಣಾನದಿಯ ದಕ್ಷಿಣಕ್ಕಿದ್ದ ಪ್ರದೇಶಗಳನ್ನೆಲ್ಲ ಕೊಟ್ಟ. ಕೃಷ್ಣದೇವರಾಯ ತಿರುಪತಿಯನ್ನು ಸಂದರ್ಶಿಸಿ ತನ್ನ ರಾಜ್ಯಕ್ಕೆ ಹಿಂತಿರುಗಿದ.

1522ರಲ್ಲಿ ಗೋಲ್ಕೊಂಡ ರಾಜ್ಯದ ಸುಲ್ತಾನ ಒರಿಸ್ಸಕ್ಕೆ ಮುತ್ತಿಗೆ ಹಾಕಿದ. ಒರಿಸ್ಸ ಆಗ ಕ್ಷೀಣದೆಶೆಗೆ ಬರುತ್ತಿತ್ತು.

16ನೆಯ ಶತಮಾನದಿಂದೀಚೆಗೆ ಒರಿಸ್ಸ ರಾಜ್ಯ ತನ್ನ ಪ್ರಾಬಲ್ಯವನ್ನೂ ಕೀರ್ತಿಯನ್ನೂ ಕಳೆದುಕೊಂಡಿತು. 1541-42ರಲ್ಲಿ ಕಪಿಲೇಂದ್ರ ವಂಶವನ್ನು ಭೋಮ್ ಸಂತತಿಯವರು ಸೋಲಿಸಿದರು. ಈ ವಂಶದ ಸ್ಥಾಪಕ ಗೋವಿಂದ. ಈತ ಹಿಂದೆ ಪ್ರತಾಪರುದ್ರನ ಮಂತ್ರಿಯಾಗಿದ್ದ. ಈತ ಭೋಮ್ ಅಥವಾ ಕಾರಕೂನ ಉದ್ಯೋಗಕ್ಕೆ ಸೇರಿದ್ದ. ಗೋವಿಂದನ ಮಕ್ಕಳೂ ಮೊಮ್ಮಕ್ಕಳೂ ಕೆಲವು ವರ್ಷಗಳ ಕಾಲ ಆಳಿದರು. ಒರಿಸ್ಸದ ಕೊನೆಯ ಹಿಂದೂ ದೊರೆಯಾದ ಮುಕುಂದದೇವನನ್ನು ಬಂಗಾಳದ ಸುಲ್ತಾನ 1568ರಲ್ಲಿ ಸೋಲಿಸಿ ಆತನ ರಾಜ್ಯವನ್ನು ವಶಪಡಿಸಿಕೊಂಡ. 1576ರಲ್ಲಿ ಇದನ್ನು ಮೊಗಲರು ಜಯಿಸಿಕೊಂಡರು.

ಒರಿಸ್ಸದಲ್ಲಿ ಮೊಗಲರ ಆಳ್ವಿಕೆ ಹೆಚ್ಚುಕಡಿಮೆ ಒಂದು ಶತಮಾನ ಕಾಲ ನಡೆಯಿತು. ಔರಂಗಜೇ಼ಬನ ಆಳ್ವಿಕೆಯ ಕಾಲದಲ್ಲಿ ಮಯೂರ್ಭಂಜ್ ನ ರಾಜ ಕೃಷ್ಣಚಂದ್ರಭಾಂಗನ ನೇತೃತ್ವದಲ್ಲಿ ಎದ್ದ ದಂಗೆಯನ್ನು ಕಷ್ಟದಿಂದ ಅಡಗಿಸಲಾಯಿತು. ಔರಂಗಜೇ಼ಬನ ನಿಧನದ ಅನಂತರ ಮೊಗಲ್ ಸಾಮ್ರಾಜ್ಯ ಅವನತಿ ಹೊಂದಿದಾಗ ಒರಿಸ್ಸ ಬಂಗಾಲದ ಸ್ವತಂತ್ರ್ಯ ನವಾಬರ ಆಳ್ವಿಕೆಯ ಅಡಿಗೆ ಬಂತು. ಬಂಗಾಲದ ನವಾಬ ಅಲಿವರ್ದಿಖಾನ್ ಇದನ್ನು ಮರಾಠರಿಗೆ 1751ರಲ್ಲಿ ಒಪ್ಪಿಸಿದ. ಇವರ ಆಳ್ವಿಕೆ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲವಿತ್ತು.

ಬ್ರಿಟಿಷರ ಆಡಳಿತ[ಬದಲಾಯಿಸಿ]

1803ರಲ್ಲಿ ನಡೆದ ಎರಡನೆಯ ಮರಾಠ ಯುದ್ಧದಲ್ಲಿ ಇದು ಬ್ರಿಟಿಷರ ಕೈಸೇರಿತು. ಇವರ ಆಡಳಿತ ಸಮರ್ಪಕವಾಗಿರಲಿಲ್ಲ. ಖುರ್ದದ ರಾಜನ ಮುಖ್ಯ ಸೇನಾಧಿಪತಿಯಾಗಿದ್ದ ಬಕ್ಷಿ ಜಗಬಂಧು ವಿದ್ಯಾಧರನ ನೇತೃತ್ವದಲ್ಲಿ ಒಂದು ಬಂಡಾಯ ನಡೆಯಿತು. 1817ರ ಏಪ್ರಿಲ್ನಲ್ಲಿ ಪುರಿ ಅವನ ವಶವಾಯಿತು. ಬ್ರಿಟಿಷರು ಕಟಕ್ಗೆ ಹಿನ್ನಡೆದರು. ಆದರೆ ಕೊನೆಯಲ್ಲಿ ಈ ದಂಗೆಯನ್ನು ತುಳಿದುಹಾಕಲಾಯಿತು. 1823ರಲ್ಲಿ ಬ್ರಿಟಿಷರು ಈ ರಾಜ್ಯವನ್ನು ಕಟಕ್, ಬಾಲಸೂರ್ ಮತ್ತು ಪುರಿ ಎಂಬ ಮೂರು ಜಿಲ್ಲೆಗಳಾಗಿ ವಿಂಗಡಿಸಿದರು. ಇವು ಬಂಗಾಳ ಆಧಿಪತ್ಯದ ಭಾಗಗಳಾದುವು. 1857ರ ಸಂಗ್ರಾಮದಲ್ಲಿ ಒರಿಸ್ಸದ ಸಂಬಲ್ಪುರ್ ವಹಿಸಿದ ಪಾತ್ರ ಪ್ರಮುಖವಾದದ್ದು. ಬ್ರಿಟಿಷ್ ಆಡಳಿತಕಾಲದ ಭೀಕರ ದುರಂತವೆಂದರೆ 1865-66ರಲ್ಲಿ ಸಂಭವಿಸಿದ ಕ್ಷಾಮ. ಅದರ ಫಲವಾಗಿ ಒರಿಸ್ಸದ ಜನಸಂಖ್ಯೆಯ ಕಾಲುಭಾಗ (10 ಲಕ್ಷ) ಜನ ಸಾವಿಗೆ ತುತ್ತಾದರು. 19ನೆಯ ಶತಮಾನದ ಉತ್ತರಾರ್ಧದಲ್ಲಿ ಇಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಯಿತು. ಒರಿಯ ಭಾಷೆಯನ್ನಾಡುವ ಜನರಿರುವ ಪ್ರದೇಶಗಳನ್ನು ಒಂದುಗೂಡಿಸಿ ಒಂದು ಪ್ರತ್ಯೇಕ ಪ್ರಾಂತ್ಯ ನಿಮಾರ್ಣವಾಗಬೇಕೆಂಬ ಚಳವಳಿ 20ನೆಯ ಶತಮಾನದಲ್ಲಿ ಆರಂಭವಾಯಿತು. 1912ರಲ್ಲಿ ಒರಿಸ್ಸ ಪ್ರಾಂತ್ಯವನ್ನು ಬಂಗಾಳದಿಂದ ಪ್ರತ್ಯೇಕಿಸಿ ಬಿಹಾರದೊಂದಿಗೆ ಸೇರಿಸಿ, ಅದನ್ನು ಬಿಹಾರ ಮತ್ತು ಒರಿಸ್ಸ ಪ್ರಾಂತ್ಯವೆಂದು ಹೆಸರಿಸಲಾಯಿತು. ಆದರೂ ಚಳವಳಿ ನಿಲ್ಲಲಿಲ್ಲ. 1936 ಏಪ್ರಿಲ್ನಲ್ಲಿ ಬ್ರಿಟಿಷರು ಒರಿಸ್ಸವನ್ನು ಪ್ರತ್ಯೇಕ ಪ್ರಾಂತ್ಯವಾಗಿ ಮಾಡಿದರು.

ಸ್ವತಂತ್ರ ಭಾರತದಲ್ಲಿ[ಬದಲಾಯಿಸಿ]

1950ರಲ್ಲಿ ಭಾರತ ಗಣರಾಜ್ಯದ ಸಂವಿಧಾನ ಜಾರಿಗೆ ಬಂದಾಗ ಒರಿಸ್ಸ ಅದರ ಒಂದು ರಾಜ್ಯವಾಯಿತು. ರಾಜ್ಯ ಪುನರ್ವಿಂಗಡಣೆಯ ಫಲವಾಗಿ ಒರಿಸ್ಸದ ಎಲ್ಲೆಯಲ್ಲೂ ಬದಲಾವಣೆಗಳಾದುವು.

ಇದನ್ನೂ ನೋಡಿ[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: