ಎಥಿಲೀನ್ ಡೈಅಮೀನ್ ಟೆಟ್ರ ಅಸಿಟೇಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಥಿಲೀನ್ ಡೈ ಅಮೀನ್ ಟೆಟ್ರ ಅಸಿಟೇಟ್ ಎಥಿಲೀನ್ ಡೈ ಅಮೀನ್ ಟೆಟ್ರ ಅಸೆಟಿಕ್ ಆಮ್ಲದ ಟೆಟ್ರ (ಅಂದರೆ ನಾಲ್ಕು) ಸೋಡಿಯಂ ಲವಣ. ಸಂಕ್ಷೇಪರೂಪ ಇಡಿಟಿಎ.

ತಯಾರಿಕೆ[ಬದಲಾಯಿಸಿ]

ಎಥಿಲೀನ್ ಡೈ ಅಮೀನಿನೊಡನೆ ಫಾರ್ಮಾಲ್ಡಿಹೈಡ್ ಮತ್ತು ಸೋಡಿಯಂ ಸೈನೈಡುಗಳನ್ನಾಗಲೀ ಸೋಡಿಯಂ ಕ್ಲೋರ್‌ಅಸಿಟೇಟನ್ನಾಗಲೀ ಸಂಯೋಗಿಸುವಂತೆ ಮಾಡಿ ಇಡಿಟಿಎಯನ್ನು ತಯಾರಿಸಲಾಗುತ್ತದೆ.

ಎಥಿಲೀನ್ ಡೈಅಮೀನ್ ಟೆಟ್ರ ಅಸಿಟೇಟ್ - ಇಡಿಟಿಎ

ಉಪಯೋಗಗಳು[ಬದಲಾಯಿಸಿ]

ಇಡಿಟಿಎ ಸಂಯುಕ್ತ ಬಹುತೇಕ ಎಲ್ಲ ಲೋಹ ಮತ್ತು ಲೋಹ ಅಯಾನುಗಳೊಡನೆ ಸಂಯೋಗಿಸಿ ಅಯಾನುಗಳಾಗಿ ವಿಭಜನೆಗೊಳ್ಳದ (ನಾನ್‌ಅಯಾನಿಕ್) ಕೀಲೇಟ್ ಸಂಕೀರ್ಣಗಳನ್ನು (ಕೀಲೇಟ್ ಕಾಂಪ್ಲೆಕ್ಸಸ್) ನೀಡುತ್ತದೆ. ಇವು ಸಾಕಷ್ಟು ಸ್ಥಿರವಾದವುಗಳಾದ್ದರಿಂದ ಇಡಿಟಿಎ ಸಂಯುಕ್ತ ಅನೇಕ ಲೋಹಗಳ ಪರಿಮಾಣ ವಿಶ್ಲೇಷಣಗಳಲ್ಲಿ (ಕ್ವಾಂಟಿಟೇಟ್ಯೂ ಅನಾಲಿಸಿಸ್) ಉಪಯೋಗಿಸಲಾಗುತ್ತಿರುವ ಬಹು ಜನಪ್ರಿಯ ಸಂಕೀರ್ಣಕಾರಕವಾಗಿದೆ (ಕಾಂಪ್ಲೆಕ್ಸಿಂಗ್ ಏಜೆಂಟ್).[೧][೨][೩][೪] ದ್ರಾವಣದ ಆಮ್ಲೀಯತೆಯನ್ನು ಅನುಸರಿಸಿ ಈ ಸಂಯುಕ್ತ ನಿರ್ದಿಷ್ಟ ಲೋಹಗಳೊಡನೆ ಮಾತ್ರ ಸಂಯೋಗಿಸುವುದರಿಂದ ಲೋಹ ಅಥವಾ ಲೋಹ ಮಿಶ್ರಣಗಳ ವಿಶ್ಲೇಷಣೆಯನ್ನೂ ಸಾಧಿಸಬಹುದು. ಮತ್ತೆ ಹಲವು ಸಂದರ್ಭಗಳಲ್ಲಿ ಹಲವು ಅಸ್ಥಿರ ಸಂಕೀರ್ಣಗಳನ್ನು (ಅನ್‌ಸ್ಟೇಬಲ್ ಕಾಂಪ್ಲೆಕ್ಸಸ್) ಸ್ಥಿರಗೊಳಿಸಲು ಇಡಿಟಿಎಯನ್ನು ಉಪಯೋಗಿಸಲಾಗುತ್ತದೆ. ಈವರೆಗೆ ಕ್ಯಾಲ್ಸಿಯಂ, ಮೆಗ್ನೀಸಿಯಂ, ಸತು, ತವರ, ಕಬ್ಬಿಣ, ತಾಮ್ರ, ಬೆಳ್ಳಿ, ಸೀಸ, ನಿಕಲ್, ಪಾದರಸ, ಬಿಸ್ಮತ್, ಮ್ಯಾಂಗನೀಸ್, ಸೋಡಿಯಂ, ಕೋಬಾಲ್ಟ್, ಥೋರಿಯಂ, ಜೆರ್ಕೋನಿಯಂ ಮತ್ತು ಹ್ಯಾಫ್ನಿಯಂ ಲೋಹ ಮತ್ತು ಲವಣಗಳ ಪರಿಮಾಣಾತ್ಮಕ ವಿಶ್ಲೇಷಣೆಗಳಲ್ಲಿ ಇಡಿಟಿಎ ಸಂಯುಕ್ತವನ್ನು ಉಪಯೋಗಿಸಲಾಗಿದೆಯೆಂದರೆ ಈ ಸಂಕೀರ್ಣಕಾರಕದ ಉಪಯುಕ್ತತೆಯ ವೈಶಾಲ್ಯದ ಅರಿವಾಗುತ್ತದೆ. ಇದನ್ನು ಬೇರೆ ಸಂದರ್ಭಗಳಲ್ಲಿಯೂ ಉಪಯೋಗಿಸುವ ಸಾಧ್ಯತೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.

ಕೇವಲ ಲೋಹಗಳು ಮಾತ್ರವಲ್ಲದೆ ಫಾಸ್ಫೇಟ್ ಮತ್ತು ಹಾಲೈಡ್ ಅಯಾನುಗಳ ಪರಿಮಾಣ ವಿಶ್ಲೇಷಣೆಯಲ್ಲಿಯೂ ಇಡಿಟಿಎ ಸಂಯುಕ್ತವನ್ನು ಉಪಯೋಗಿಸಬಹುದು. ಇಡಿಟಿಎ ಆಮ್ಲದ ಡೈಕ್ಯಾಲ್ಸಿಯಂ ಡೈ ಸೋಡಿಯಂ ಲವಣವನ್ನು ಕ್ಯಾಲ್ಸಿಯಂ ಕೊರತೆಯಿರುವ ರೋಗಿಗಳ ಚಿಕಿತ್ಸೆಯಲ್ಲೂ ಉಪಯೋಗಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಟೆಂಪ್ಲೇಟು:Holleman&Wiberg
  2. Alessandro Fulgenzi; Maria Elena Ferrero (February 2019). "EDTA Chelation Therapy for the Treatment of Neurotoxicity". International Journal of Molecular Sciences. 20 (5): 1019. doi:10.3390/ijms20051019. PMC 6429616. PMID 30813622.
  3. Swaran J.S. Flora; Vidhu Pachauri (June 2010). "Chelation in Metal Intoxication". International Journal of Environmental Research and Public Health. 7 (7): 2745–2788. doi:10.3390/ijerph7072745. PMC 2922724. PMID 20717537.
  4. Zaitoun, Mohammed A.; Lin, C. T. (1997). "Chelating Behavior between Metal Ions and EDTA in Sol−Gel Matrix". The Journal of Physical Chemistry B. 101 (10): 1857–1860. doi:10.1021/jp963102d.