ಉದ್ಯಮ ಅರ್ಥಶಾಸ್ತ್ರ

ವಿಕಿಪೀಡಿಯ ಇಂದ
Jump to navigation Jump to search

ಉದ್ಯಮ ನಿರ್ವಹಣೆಯಲ್ಲಿ ಆರ್ಥಿಕ ಸಿದ್ಧಾಂತವನ್ನು ಅನ್ವಯಿಸುವ ಜ್ಞಾನದ ಶಾಖೆಯೇ ಉದ್ಯಮ ಅರ್ಥಶಾಸ್ತ್ರ.[೧] ಉದ್ಯಮ ಅರ್ಥಶಾಸ್ತ್ರವು ಆರ್ಥಿಕ ವಿಜ್ಞಾನದ ಒಂದು ಭಾಗವಾಗಿದ್ದು ಇತರ ವಿಜ್ಞಾನಗಳ ಸಾಲಿನಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ.

ಉದ್ಯಮ ಅರ್ಥಶಾಸ್ತ್ರ

ಉತ್ಪಾದನೆ ಮತ್ತು ಅನುಭೋಗ ಎರಡು ಪ್ರಮುಖ ಆರ್ಥಿಕ ಚಟುವಟಿಕೆಗಳು. ಅನುಭೋಗಿಗಳ ಬೇಡಿಕೆಯನ್ನು ಈಡೇರಿಸುವ ಅಂಶವನ್ನು ದೃಷ್ಟಿಯಲ್ಲಿರಿಸಿಕೊಂಡು ಉದ್ಯಮಿಯು ಉತ್ಪಾದನೆ ಮಾಡಬೇಕಾಗುತ್ತದೆ.[೨][೩] ಹೀಗೆ ಉತ್ಪಾದನೆಯಲ್ಲಿ ತೊಡಗಿರುವಾಗ ಅವನು ಸಂಪನ್ಮೂಲಗಳನ್ನು ಹೇಗೆ ಮತ್ತು ಯಾವ ಮಟ್ಟದಲ್ಲಿ ಬಳಸಿಕೊಳ್ಳಬೇಕು, ಎಷ್ಟು ವಸ್ತುಗಳನ್ನು ಉತ್ಪಾದಿಸಬೇಕು ಮತ್ತು ವಸ್ತುವಿನ ಗುಣಮಟ್ಟ ಎಂತಹುದಿರಬೇಕು, ವಸ್ತುವಿನ ಬೆಲೆ ಎಷ್ಟಿರಬೇಕು ಎಂಬ ಮೊದಲಾದ ವಿಷಯಗಳ ಬಗೆಗೆ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ. ಆರ್ಥಿಕ ತತ್ವಗಳನ್ನು ಅನ್ವಯಿಸಿ ಉದ್ಯಮದಲ್ಲಿ ಈ ಕುರಿತ ನಿರ್ಣಯಗಳನ್ನು ಕೈಗೊಳ್ಳುವುದು ಸುಲಭ ಸಾಧ್ಯವಾಗುತ್ತದೆ.[೪] ಉದ್ಯಮ ಪ್ರಪಂಚವು ತುಂಬಾ ಸಂಕೀರ್ಣವಾಗಿದ್ದು ಉದ್ಯಮಿಯು ಹಲವು ರೀತಿಗಳ ಆನಿಶ್ಚಿತತೆ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಿರುತ್ತದೆ. ಪ್ರಾಪ್ತ ಸಮಯದಲ್ಲಿ ಸಮಂ‍‍ಜಸವಾದ ನಿರ್ಣಯಗಳನ್ನು ಕೈಕೊಂಡು, ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸಿಕೊಂಡಾಗ ಉದ್ಯಮ ಸಮಸ್ಯೆಗಳನ್ನು ನಿವಾರಿಸುವುದು ಸುಲಭವಾಗುತ್ತದೆ. ಉದ್ಯಮ ನಿರ್ವಹಣೆಗೆ ಆರ್ಥಿಕ ತತ್ವಗಳನ್ನು ಅನ್ವಯಿಸಿ, ಉದ್ಯಮ ಚಟುವಟಿಕೆಗಳ ಬಗೆಗೆ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಯೋಜನೆಗಳನ್ನು ರೂಪಿಸಲು ಉದ್ಯಮ ಅರ್ಥಶಾಸ್ತ್ರವು ನೆರವಾಗುತ್ತದೆ. ಆ ಮೇರೆಗೆ, ಉದ್ಯಮ ಆಧುನಿಕ ಜಗತ್ತಿನಲ್ಲಿ ಒಂದು ಮಹತ್ವದ ಅಧ್ಯಯನವಾಗಿದೆ. ಉದ್ಯಮ ಅರ್ಥಶಾಸ್ತ್ರದ ಮೇಲಿರುವ ಕೆಲವು ವ್ಯಾಖ್ಯೆಗಳನ್ನು ಗಮನಿಸಿದಾಗ ಅದರ ಸ್ವರೂಪವು ಮನದಟ್ಟಾಗುತ್ತದೆ. ಕಾಲ್ಬರ್ಗ್, ಫಾರ್ಬಷ್ ಮತ್ತು ವ್ಹಿಟೀಕರ್ ರವರ ಪ್ರಕಾರ, "ಉದ್ಯಮ ಅರ್ಥಶಾಸ್ತ್ರವು ಪ್ರಾಥಮಿಕವಾಗಿ ಉದ್ಯಮಗಳು ಕೈಗೊಂಡ ನಿರ್ಣಯಗಳಿಗೆ ಆರ್ಥಿಕ ಕಲ್ಪನೆಗಳು ಮತ್ತು ವಿಶ್ಲೇಷಣೆಯನ್ನು ಅನ್ವಯಿಸುವುದಕ್ಕೆ ಸಂಬಂಧಿಸಿದಾಗಿದೆ". ಸ್ಪೆನ್ಸರ್ ಮತ್ತು ಸೆಲಿಗ್‌ಮನ್ ರವರು ಹೇಳುವಂತೆ, "ಉದ್ಯಮ ನಿರ್ವಹಣೆಯಲ್ಲಿ ನಿರ್ಣಯ ಕೈಗೊಳ್ಳವಿಕೆ ಮತ್ತು ಭಾವಿ ಯೋಜನೆಗಳನ್ನು ಸುಲಭಗೊಳಿಸುವ ಉದ್ದೇಶಕ್ಕಾಗಿ ಉದ್ಯಮ ಪ್ರಯೋಗದೊಡನೆ ಆರ್ಥಿಕ ಸಿದ್ಧಾಂತದ ಸಂಯೋಜನೆಯೇ ಉದ್ಯಮ ಅರ್ಥಶಾಸ್ತ್ರ".[೫]

ಮೂಲಭೂತ ಲಕ್ಷಣಗಳು[ಬದಲಾಯಿಸಿ]

ಉದ್ಯಮ ಅರ್ಥಶಾಸ್ತ್ರದ ರೇಖಾ ನಕ್ಷೆ
ಉದ್ಯಮ ಅರ್ಥಶಾಸ್ತ್ರದ ಮೂಲಭೂತ ಲಕ್ಷಣಗಳು ಇಂತಿವೆ.[೬]

೧. ಉದ್ಯಮ ಅರ್ಥಶಾಸ್ತ್ರವು ಸೂಕ್ಷ್ಮ ಅರ್ಥಶಾಸ್ತ್ರದ ಒಂದು ಭಾಗವಾಗಿದೆ. ಇದು ವೈಯಕ್ತಿಕ ಉದ್ಯಮಗಳನ್ನು ಅಧ್ಯಯನ ಮಾಡುತ್ತದೆಯೇ ಹೊರತು ಇಡೀ ಆರ್ಥಿಕ ವ್ಯವಸ್ಥೆಯನ್ನು ಕುರಿತದ್ದಲ್ಲ. ೨. ಉದ್ಯಮ ಅರ್ಥಶಾಸ್ತ್ರವು ಪ್ರಾಯೋಗಿಕ ಲಕ್ಷಣವನ್ನು ಪಡೆದಿದೆ. ಅಂದರೆ ಅದು ಆರ್ಥಿಕ ಸಿದ್ಧಾಂತದ ಭಾವನಾರೂಪದ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಾಯೋಗಿಕ ಅಂಶಗಳಿಗೆ ಮಾತ್ರ ಮಹತ್ವ ನೀಡುತ್ತದೆ. ಉದ್ಯಮ ಅರ್ಥಶಾಸ್ತ್ರದಲ್ಲಿ ಆರ್ಥಿಕ ತತ್ವಗಳನ್ನು ಪ್ರಾಯೋಗಿಕವಾಗಿ ಅನ್ವಯಿಸಲಾಗುತ್ತದೆ. ೩. ಉದ್ಯಮ ಅರ್ಥಶಾಸ್ತ್ರವು ಉದ್ಯಮದಲ್ಲಿ ನಿರ್ಣಯಗಳನ್ನು ಕೈಗೊಳ್ಳುವುದ್ದಕ್ಕೆ ಸಂಬಂಧಿಸಿದುದಾಗಿದೆ. ಉದ್ಯಮ ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳ ನಿರ್ಮೂಲನೆಗೆ ಸೈದ್ಧಾಂತಿಕ ಸಾಮಾಗ್ರಿಗಳನ್ನು ಉಪಯೋಗಿಸಿ ಪ್ರಾಯೋಗಿಕ ಪರಿಹಾರಗಳನ್ನು ಅಳವಡಿಸುವುದು ಅದರ ವಸ್ತು ವಿಷಯವಾಗಿದೆ. ೪. ಉದ್ಯಮ ಅರ್ಥಶಾಸ್ತ್ರವು ಆದರ್ಶ ವಿಜ್ಞಾನವಾಗಿದೆ. ಅಂದರೆ ಉದ್ಯಮ ಚಟುವಟಿಕೆಗಳನ್ನು ಭವಿಷ್ಯದಲ್ಲಿ ಸಜ್ಜುಗೊಳ್ಳಿಸುವ ಬಗೆಗೆ ಅಗತ್ಯವಾದ ಸಲಹೆಗಳನ್ನು ಇದು ನೀಡುತ್ತದೆ. ಭವಿಷ್ಯದಲ್ಲಿ ಉದ್ಯಮ ಚಟುವಟಿಕೆಗಳು ಹೇಗಿರಬೇಕು ಎಂಬುದರ ಕುರಿತು ಇದು ಅಭ್ಯಾಸ ಮಾಡುತ್ತದೆ. ಆದ್ದರಿಂದ ಭಾವಿ ಯೋಜನೆಯು ಉದ್ಯಮ ಅರ್ಥಶಾಸ್ತ್ರದ ಅವಿಭಾಜ್ಯ ಅಂಗವಾಗಿದೆ. ೫. ಉದ್ಯಮ ಚಟುವಟಿಕೆಗಳಿಗಾಗಿ ಸಂಪನ್ಮೂಲಗಳ ಸಂಗ್ರಹಣೆ ಮತ್ತು ಹಂಚಿಕೆಯ ಅಂಶಗಳನ್ನು ಉದ್ಯಮ ಅರ್ಥಶಾಸ್ತ್ರವು ಅಧ್ಯಯನ ಮಾಡುತ್ತದೆ. ಉತ್ಪಾದನಾ ಚಟುವಟಿಕೆಗಳ ಆಯ್ಕೆಯು ಸಹ ಇದರ ವ್ಯಾಪ್ತಿಗೆ ಬರುತ್ತದೆ. ೬. ಆರ್ಥಿಕವಲ್ಲದ ಅಂಶಗಳೂ ಉದ್ಯಮ ಅರ್ಥಶಾಸ್ತ್ರದಲ್ಲಿ ಮಹತ್ವ ಪಡೆದಿವೆ. ಅನುಭೋಗಿಯ ಬೇಡಿಕೆಯನ್ನು ಈಡೇರಿಸುವ ಉದ್ದೇಶದಿಂದ ಉದ್ಯಮ ಚಟವಟಿಕೆಗಳನ್ನು ಕೈಗೊಳ್ಳ ಬೇಕಾಗಿರುವುದರಿಂದ ಮಾನವನ ಪ್ರವೃತ್ತಿ ಮತ್ತು ಅಭಿರುಚಿಯನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲೇ ಬೇಕಾಗಿದೆ. ಆದ್ದರಿಂದ ಮಾನವಿಕ ಹಾಗೂ ಪರಿಸರದ ಅಂಶಗಳು ಇದರಲ್ಲಿ ಮಹತ್ವದ ಪ್ರಭಾವ ಬೀರುತ್ತದೆ. ೭. ಉದ್ಯಮ ಅರ್ಥಶಾಸ್ತ್ರವು ಸೂಕ್ಷ್ಮ ಅರ್ಥಶಾಸ್ತ್ರದ ಒಂದು ಭಾಗವಾಗಿದ್ದಾಗ್ಯೂ ಸಹ ಸಮಗ್ರ ಅರ್ಥಶಾಸ್ತ್ರದ ನೆರವನ್ನು ಪಡೆಯುತ್ತದೆ. ರಾಷ್ಟೀಯ ಆದಾಯದ ಲೆಕ್ಕಾಚಾರ, ಸಾರ್ವಜನಿಕ ಹಣಕಾಸು, ಅಂತರರಾಷ್ಟೀಯ ವ್ಯಾಪಾರ, ಕಾರ್ಮಿಕ ಕಲ್ಯಾಣ, ಉದ್ಯಮ ಚಕ್ರಗಳು ಮೊದಲಾದ ಅಂಶಗಳಿಗೆ ಸಂಬಂಧಿಸಿದ ಸರಕಾರದ ಆರ್ಥಿಕ ನೀತಿಗಳು ಸಮಗ್ರ ಲಕ್ಷಣವನ್ನು ಪಡೆದಿದ್ದು ಉದ್ಯಮ ನಿರ್ಣಯದ ಮೇಲೆ ಪ್ರಭಾವ ಬೀರುತ್ತವೆ. ಈ ಅಂಶಗಳಿಗೆ ಸಂಬಂಧಿಸಿದ ಆರ್ಥಿಕ ನೀತಿಯ ಹಿನ್ನಲೆಯಲ್ಲಿ ಉದ್ಯಮ ಚಟುವಟಿಕೆಗಳನ್ನು ಸರಿಯಾಗಿ ಸಜ್ಜುಗೊಳಿಸಲು ಸಾಧ್ಯವಾಗುತ್ತದೆ.

ಉದ್ಯಮ ಅರ್ಥಶಾಸ್ತ್ರದ ವ್ಯಾಪ್ತಿ[ಬದಲಾಯಿಸಿ]

ಉದ್ಯಮ ಅರ್ಥಶಾಸ್ತ್ರದ ವಿಷಯ ವಸ್ತುವು ಮೂಲಭೂತವಾಗಿ ಐದು ಅಂಶಗಳಿಗೆ ವ್ಯಾಪಿಸಿದೆ. ಅದರ ವ್ಯಾಪ್ತಿಯನ್ನು ಈ ಕೆಳಗಿನಂತೆ ಸ್ಥೂಲವಾಗಿ ವಿವರಿಸಬಹುದು. ೧. ಬೇಡಿಕೆಯ ವಿಶ್ಲೇಷಣೆ ಮತ್ತು ಮುನ್ ಅಂದಾಜು : ಪ್ರತಿಯೊಬ್ಬ ಉದ್ಯಮಿಯೂ ಗರಿಷ್ಠ ಪ್ರಮಾಣದಲ್ಲಿ ಸರಕುಗಳನ್ನು ಮಾರಾಟಮಾಡಿ ಅಧಿಕ ಲಾಭಗಳನ್ನು ಗಳಿಸಬೇಕೆಂಬ ಆಕಾಂಕ್ಷೆ ಹೊಂದಿರುತ್ತಾನೆ. ಈ ದೃಷ್ಟಿಯಿಂದ ಅವನು ಬೇಡಿಕೆಯನ್ನು ಮೊದಲೇ ಅಂದಾಜು ಮಾಡುವುದು ಸೂಕ್ತ. ಮಾರುಕಟ್ಟೆಯಲ್ಲಿ ಪ್ರಸ್ತುತದಲ್ಲಿ ಅಸ್ತಿತ್ವದಲ್ಲಿರುವ ಬೇಡಿಕೆಯನ್ನು ವಿಶ್ಲೇಷಿಸಿ, ಭವಿಷ್ಯದ ಬೇಡಿಕೆಯನ್ನು ಅಂದಾಜು ಮಾಡಿದರೆ ಅದಕ್ಕೆ ಅನುಗುಣವಾಗಿ ಸರಕುಗಳನ್ನು ಉತ್ಪಾದಿಸಿ ಪೂರೈಸಬಹುದು. ಈ ಮೂಲಕ ಉದ್ಯಮಿಯು ಅನಾವಶ್ಯಕವಾಗಿ ಹಾಗೂ ಮಿತಿಮೀರಿ ಉತ್ಪಾದನೆ ಮಾಡುವುದನ್ನು ಮತ್ತು ನಷ್ಟ ಹೊಂದುವುದನ್ನು ತಪ್ಪಿಸಬಹುದು. ಭವಿಷ್ಯದ ಮಾರಟಗಳನ್ನು ಮೊದಲೇ ಅಂದಾಜು ಮಾಡಿದರೆ ಮಾರುಕಟ್ಟೆಯನ್ನು ಬಲಪಡಿಸಿ, ಲಾಭಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶ ಲಭಿಸುತ್ತದೆ. ಆದ್ದರಿಂದ ಭವಿಷ್ಯದ ಬೇಡಿಕೆಯ ಅಂದಾಜು ಉದ್ಯಮ ನಿರ್ಣಯ ಒಂದು ಪ್ರಮುಖ ಭಾಗವಾಗಿದೆ. ೨. ಉತ್ಪಾದನೆ ಮತ್ತು ವೆಚ್ಚದ ವಿಶ್ಲೇಷಣೆ : ಎಂತಹ ಸರಕುಗಳನ್ನು ಉತ್ಪಾದಿಸಬೇಕು ಮತ್ತು ಯಾವ ಪ್ರಮಾಣದಲ್ಲಿ ಉತ್ಪಾದಿಸಬೇಕು ಎಂದು ಉದ್ಯಮಿಯು ನಿರ್ಧರಿಸಬೇಕಾಗುತ್ತದೆ. ಉತ್ಪಾದನೆಯ ಬಗ್ಗೆ ನಿರ್ಣಯವನ್ನು ಕೈಗೊಳ್ಳುವಿಕೆಯು ಉದ್ಯಮ ಅರ್ಥಶಾಸ್ತ್ರದ ವ್ಯಾಪ್ತಿಗೆ ಬರುತ್ತದೆ ಅಂತೆಯೇ ವೆಚ್ಚದ ಬಗ್ಗೆಯು ನಿರ್ಣಯವನ್ನು ಕೈಗೊಳ್ಳಬೇಕಾಗುತ್ತದೆ. ಉತ್ಪಾದನ ವೆಚ್ಚವು ಅತಿ ಕಡಿಮೆ ಇರುವಾಗ ಲಾಭಗಳನ್ನು ಗರಿಷ್ಠಗೊಳಿಸಿಕೊಳ್ಳಲು ಸಾಧ್ಯ. ಈ ದೃಷ್ಟಿಯಿಂದ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಿಕೆ. ಕಡಿಮೆ ವೆಚ್ಚದ ವಿವಿಧ ಉತ್ಪಾದನಾಂಗಗಳನ್ನು ಸಂಯೋಜಿಸಿ ಉತ್ಪಾದನೆ ಮಾಡುವಿಕೆ, ವೆಚ್ಚದ ನಿಯಂತ್ರಣ ಮೊದಲಾದ ಅಂಶಗಳು ಮಹತ್ವ ಪಡೆಯುತ್ತವೆ. ೩. ಬಂಡವಾಳ ನಿರ್ವಹಣೆ[೭]: ಆಧುನಿಕ ಉದ್ಯಮ ಪ್ರಪಂಚದಲ್ಲಿ ಬಂಡವಾಳವು ಅತಿ ಮುಖ್ಯ ಉತ್ಪಾದನಾಂಗವಾಗಿದೆ. ಅದು ದುಬಾರಿಯಾಗಿರುವ ಮತ್ತು ಕೊರತೆಯಿಂದಿರುವ ಸಂಪನ್ಮೂಲವಾಗಿದೆ. ಅದ್ದರಿಂದ ಅದರ ಬಳಕೆಯಲ್ಲಿ ಜಾಗರೂಕತೆ ಹಾಗೂ ಸೂಕ್ತ ಯೋಜನೆ ಅತ್ಯಗತ್ಯ. ಕಡಿಮೆ ವೆಚ್ಚದಲ್ಲಿ ಬಂಡವಾಳವು ದೊರೆಯುವ ಮೂಲಗಳಿಂದ ಅದನ್ನು ಪಡೆದು, ಅತ್ಯುತ್ತಮ ಪ್ರತಿಫಲ ನೀಡುವ ವಿಧಾನದಲ್ಲಿ ಅದನ್ನು ತೊಡಗಿಸಬೇಕಾಗಿದೆ. ಯಾವುದೇ ತರಹದ ಉತ್ಪಾದನೆಯಲ್ಲಿ ಬಂಡವಾಳ ವೆಚ್ಚವನ್ನು ಸಾಧ್ಯವಾದ ಮಟ್ಟಿಗೆ ಮಿತಿಯಲ್ಲಿಡಬೇಕು, ಉದ್ಯಮವನ್ನು ಸೂಕ್ತವಾದ ಸ್ಥಳದಲ್ಲಿ ಸ್ಥಾಪಿಸುವಿಕೆಯು ಬಂಡವಾಳ ವೆಚ್ಚದ ನಿಯಂತ್ರಣಕ್ಕೆ ಒಂದು ಸಾಧನವಾಗುತ್ತದೆ. ಬಂಡವಾಳ ನಿರ್ವಹಣೆಯು ಉದ್ಯಮ ಅರ್ಥಶಾಸ್ತ್ರದ ವ್ಯಾಪ್ತಿಯಲ್ಲಿ ಬರುವ ಒಂದು ಮೂಲಭೂತ ಅಂಶವಾಗಿದೆ. ೪. ಬೆಲೆ ನಿರ್ಧಾರ : ಬೆಲೆ ನಿರ್ಧಾರವು ಉದ್ಯಮ ನಿರ್ಣಯದ ಒಂದು ಅವಿಭಾಜ್ಯ ಅಂಗ. ಸರಕಿನ ಬೆಲೆಯನ್ನು ಯಾಥಾರ್ಥವಾಗಿ ನಿರ್ಧರಿಸಿದಾಗ ಮಾತ್ರ ಉದ್ಯಮವನ್ನು ಅಭಿವೃದ್ದಿಪಡಿಸಲು ಸಾಧ್ಯ. ಬೆಲೆ ನಿರ್ಧಾರದಲ್ಲಿ ಅತಿ ಎಚ್ಚರಿಕೆ ಅಗತ್ಯವಾಗಿದೆ. ಉದ್ಯಮದ ಮೂಲ ಗುರಿಯೇ ಲಾಭಗಳನ್ನು ಹೆಚ್ಚಿಸಿಕೊಳ್ಳಬೇಕೆಂಬುದು. ಆದರೆ ಬೆಲೆಯನ್ನು ವಿಪರೀತವಾಗಿ ನಿರ್ಧಾರಿಸಿದರೆ ವಸ್ತುವಿಗೆ ಬೇಡಿಕೆ ದೊರೆಯದೆ ಉದ್ಯಮವು ನಾಶವಾಗುತ್ತದೆ. ಅಂತೆಯೇ ಬೆಲೆಯನ್ನು ಅತಿ ಕಡಿಮೆಯಾಗಿ ನಿರ್ಧರಿಸಿದರೆ ಉದ್ಯಮಕ್ಕೆ ನಷ್ಟವುಂಟಾಗಿ ದಿವಾಳಿಯಾಗುತ್ತದೆ. ಆದ್ದರಿಂದ ವಸ್ತುಗಳಿಗೆ ಬೇಡಿಕೆಯನ್ನು ಹಾಳು ಮಾಡದ ರೀತಿಯಲ್ಲಿ ಮತ್ತು ಗರಿಷ್ಠ ಲಾಭಗಳನ್ನು ಸಂಪಾದಿಸಿಕೊಡಲು ಸಹಾಯಕವಾಗುವಂತೆ ಬೆಲೆಯನ್ನು ನಿರ್ಧರಿಸಬೇಕಾಗುತ್ತದೆ. ೫. ಲಾಭದ ನಿರ್ವಹಣೆ : ಲಾಭವು ಪ್ರತಿಯೊಂದು ಉದ್ಯಮದ ಯಶಸ್ಸಿನ ಮಾನದಂಡವಾಗಿದೆ, ತನ್ನ ಸರಕುಗಳಿಗೆ ಅತ್ಯುತ್ತಮ ಬೇಡಿಕೆಯನ್ನು ಹೊಂದಿದ್ದು ಗರಿಷ್ಠ ಲಾಭಗಳನ್ನು ಗಳಿಸುತ್ತಿರುವಾಗಿ ಉದ್ಯಮವು ಅತ್ಯಂತ ಯಶಸ್ಸಿನ ಹಾದಿಯ ವೆಚ್ಚದಲ್ಲಿ ಉತ್ಪಾದನಾ ಕಾರ್ಯವನ್ನು ಕೈಗೊಂಡಾಗ ಉದ್ಯಮದ ಆದಾಯವು ಜಾಸ್ತಿಯಾಗಿ ಲಾಭವು ಗರಿಷ್ಠ ಮಟ್ಟಕ್ಕೇರುತ್ತದೆ, ಬೇಡಿಕೆಯ ಏರಿಳಿತ, ಉತ್ಪಾದನಾಂಗಗಳ ಬೆಲೆಯಲ್ಲಿ ಬದಲಾವಣೆ, ಮಾರುಕಟ್ಟೆಯಲ್ಲಿ ಪೈಪೋಟಿ,ಸರ್ಕಾರದ ನೀತಿಗಳಲ್ಲಿ ಬದಲಾವಣೆ, ಉತ್ಪಾದನಾ ವಿಧಾನ ಮತ್ತು ತಂತ್ರಜ್ಞಾನದ ಮಾರ್ಪಾಡುಗಳು ಸಾಮಾಜಿಕ ಮತ್ತು ರಾಜಕೀಯ ಬದಲಾವಣೆ ಇತ್ಯಾದಿ ಅಂಶಗಳು ಲಾಭದ ಪ್ರಯಾಣದ ಏರಿಳಿತ್ತಕ್ಕೆ ಕಾರಣವಾಗುತ್ತವೆ. ಆದ್ದರಿಂದ ಈ ಸಂಗತಿಗಳನ್ನು ಸರಿಯಾಗಿ ಅಭ್ಯಸಿಸಿ, ಅವುಗಳಿಗೆ ಸಮಂಜಸವಾಗಿ ಪ್ರತಿಕ್ರಿಯಿಸಿ ಲಾಭದ ನಿರ್ವಹಣೆಯನ್ನು ಮಾಡಬೇಕಾಗಿದೆ. ಅತ್ಯುತ್ತಮ ಗುಣಮಟ್ಟದ ಸರಕುಗಳನ್ನು ಉತ್ಪಾದಿಸುವಿಕೆ ಮತ್ತು ಉತ್ಪಾದನ ವೆಚ್ಚವನ್ನು ನಿಯಂತ್ರಿಸುವಿಕೆ ಲಾಭ ನಿರ್ವಹಣೆಯ ಎರಡು ಅತಿ ಮುಖ್ಯ ಅಂಶಗಳು. ಇದಕ್ಕಾಗಿ ಪರಿಪೂರ್ಣವಾದ ತಂತ್ರ ಮತ್ತು ಯೋಜನೆ ಅಗತ್ಯ. ==ಉತ್ಪಾದನೆಯ ತತ್ವಗಳು==[೮] ಯಾವುದೊಂದು ವಸ್ತುವಿನ ಉತ್ಪಾದನೆಯು ಕೆಲವೊಂದು ನಿಯಮಗಳಿಗೆ ಅಧೀನವಾಗಿರುತ್ತದೆ. ಈ ನಿಯಮಗಳಿಗೆ 'ಪ್ರತಿಫಲದ ನಿಯಮಗಳು'(Laws of Returns) ಇಲ್ಲವೆ ಉತ್ಪಾದನೆ ತತ್ವಗಳು ಎಂದು ಕರೆಯುತ್ತಾರೆ. ಈ ನಿಯಮಗಳನ್ನು ಉತ್ಪಾದನೆಯ ವೆಚ್ಚದ ರೂಪದಲ್ಲಿ ವ್ಯಕ್ತಪಡಿಸಿದಾಗ ಅವುಗಳಿಗೆ 'ಉತ್ಪಾದನಾ ವೆಚ್ಚದ ನಿಯಮ'ಗಳೆಂದು ಕರೆಯುತ್ತಾರೆ. ಉತ್ಪಾದನೆಯನ್ನು ಹೆಚ್ಚಿಸಲು ಮುಖ್ಯವಾಗಿ ಎರಡು ಮಾರ್ಗಗಳಿವೆ. ಒಂದನೆಯದು, ಯಾವುದಾದರೊಂದು ಉತ್ಪಾದನಾಂಗವನ್ನು ಸ್ಥಿರವಾಗಿಟ್ಟು, ಉಳಿದೆಲ್ಲ ಉತ್ಪಾದನಾಂಗಗಳ ಪ್ರಮಾಣವನ್ನು ಹೆಚ್ಚಿಸಬಹುದು. ಎರಡನೆಯದು, ಎಲ್ಲ ಉತ್ಪಾದನಾಂಗಗಳ ಪ್ರಮಾಣವನ್ನು ಹೆಚ್ಚಿಸಬಹುದು. ಮೊದಲನೆಯ ವಿಧಾನವನ್ನು ಅನುಸರಿಸಿದಾಗ ಉತ್ಪಾದನೆಯು ಯಾವ ರೀತಿಯಿಂದ ಹೆಚ್ಚಾಗುತ್ತದೆಂಬುದನ್ನು ವಿವರಿಸುವ ನಿಯಮಗಳಿಗೆ 'ಪ್ರತಿಫಲದ ನಿಯಮ'ಗಳೆಂದು ಕರೆಯುತ್ತಾರೆ. ಎರಡನೆಯ ವಿಧಾನವನ್ನನುಸರಿಸಿದಾಗ ಉತ್ಪಾದನೆಯು ಹೇಗೆ ಹೆಚ್ಚಾಗುತ್ತದೆಂಬುದನ್ನು ವಿವರಿಸುವ ನಿಯಮಕ್ಕೆ 'ಉದ್ಯಮ ಗಾತ್ರಾನುಸಾರ ಪ್ರತಿಫಲದ ನಿಯಮ'ವೆಂದು ಕರೆಯುತ್ತಾರೆ. ಇಲ್ಲಿ ನಾವು ಪರಿಶೀಲಿಸುವುದು ಪ್ರತಿಫಲದ ನಿಯಮಗಳನ್ನು, ಇವುಗಳನ್ನು ಮೊದಲು ರಚಿಸಿದವರು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು. ಅವುಗಳನ್ನು ಸುಧಾರಿಸಿದ ರೀತಿಯಲ್ಲಿ ಪ್ರತಿಪಾದಿಸಿ, ಅವುಗಳಿಗೆ "ಬದಲಾಗುವ ಪರಿಮಾಣಗಳ ನಿಯಮ"(Law of Variable Proportions) ಎಂದು ಕರೆದವರು ಆಧುನಿಕ ಅರ್ಥಶಾಸ್ತ್ರಜ್ಞನರು. ಮೊದಲು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞನರು ನಿರೂಪಿಸಿದ ಪ್ರತಿಫಲದ ನಿಯಮಗಳನ್ನು ಅಧ್ಯಯನ ಮಾಡೋಣ. ಆನಂತರ, ಆಧುನಿಕ ಅರ್ಥಶಾಸ್ತ್ರಜ್ಞನರು ನಿರೂಪಿಸಿದ ಪ್ರತಿಫಲದ ನಿಯಮಗಳನ್ನು ಅಧ್ಯಯನ ಮಾಡೋಣ.

ಪ್ರತಿಫಲದ ನಿಯಮಗಳು[ಬದಲಾಯಿಸಿ]

ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಉತ್ಪಾದಕರು ಉತ್ಪಾದನಾಂಗಗಳಲ್ಲಿ ಒಂದು ಅಂಗಳನ್ನು ಸ್ಥಿರವಾಗಿಟ್ಟು, ಉಳಿದವುಗಳನ್ನು ಹೆಚ್ಚಿಸಿದಾಗ ಉತ್ಪಾದನೆಯಲ್ಲಿ ಕಂಡುಬರುವ ಪರಿಣಾಮಗಳನ್ನು ಈ ನಿಯಮಗಳು ವಿವರಿಸುತ್ತವೆ. ಉತ್ಪಾದನೆಯನ್ನು ಹೆಚ್ಚಿಸಲು ಉತ್ಪಾದಕನು ಇತರ ಅಂಗಗಳನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ, ಉತ್ಪಾದನೆಯು ಇಳಿಕೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಾ ಹೋಗಬಹುದು, ಇಲ್ಲವೆ ಏರಿಕೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಾ ಹೋಗಬಹುದು. ಇಲ್ಲವೇ ಸಮ ಪ್ರಮಾಣದಲ್ಲಿ ಅಧಿಕವಾಗಬಹುದು. ಇದನ್ನು ಇನ್ನು ವಿವರವಾಗಿ ಕೆಳಗಿನಂತೆ ವಿವರಿಸಬಹುದು. ೧. ಉತ್ಪಾದನೆಯಲ್ಲಿ ಒಂದು ಉತ್ಪಾದನಾಂಗವನ್ನು ಸ್ಥಿರವಾಗಿಟ್ಟು, ಇತರ ಉತ್ಪಾದನಾಂಗಗಳ ಪ್ರಮಾಣವನ್ನು ಹೆಚ್ಚಿಸುವುದರಿಂದ, ಒಟ್ಟು ಉತ್ಪಾದನೆಯು ಹೆಚ್ಚಾಗುತ್ತ ಹೋದರು, ಅಧಿಕವಾಗುವ ಉತ್ಪಾದನೆಯು ಅಂದರೆ ಉತ್ಪಾದನೆಯಲ್ಲಿ ಹೆಚ್ಚಳವು ಅಂದರೆ ಪ್ರತಿಫಲವು ಇಳಿಮುಖವಾಗುತ್ತ ಹೋಗುತ್ತದೆ. ಆಗ ಒಟ್ಟು ಉತ್ಪಾದನೆಯು ಇಳಿಮುಖ ಪ್ರಮಾಣದಲ್ಲಿ ಹೆಚ್ಚಾಗುತ್ತ ಹೋಗುತ್ತದೆ. ಆದ್ದರಿಂದ ಈ ನಿಯಮಕ್ಕೆ, "ಇಳಿಮುಖ ಪ್ರತಿಫಲದ ನಿಯಮ" ಎಂದು ಕರೆಯುತ್ತಾರೆ. ೨. ಉತ್ಪಾದನೆಯಲ್ಲಿ ಒಂದು ಉತ್ಪಾದನಾಂಗವನ್ನು ಸ್ಥಿರವಾಗಿಟ್ಟು, ಇತರ ಉತ್ಪಾದನಾಂಗಗಳನ್ನು ಹೆಚ್ಚಿಸಿದಾಗ, ಒಟ್ಟು ಉತ್ಪಾದನೆಯು ಮತ್ತು ಉತ್ಪಾದನೆಯಲ್ಲಿನ ಹೆಚ್ಚಳವು(ಅಂದರೆ ಪ್ರತಿಫಲವು) ಏರಿಕೆಯ ಪ್ರಮಾಣದಲ್ಲಿ ಹೆಚ್ಚಾಗುತ್ತ ಹೋಗುತ್ತದೆ. ಆದುದರಿಂದ ಈ ನಿಯಮಕ್ಕೆ "ಏರಿಕೆಯ ಪ್ರತಿಫಲದ ನಿಯಮ" ಎಂದು ಕರೆಯುತ್ತಾರೆ. ೩. ಉತ್ಪಾದನೆಯಲ್ಲಿ ಒಂದು ಉತ್ಪಾದನಾಂಗವನ್ನು ಸ್ಥಿರವಾಗಿಟ್ಟು, ಇತರ ಉತ್ಪಾದನಾಂಗಗಳನ್ನು ಹೆಚ್ಚಿಸಿದಾಗ, ಒಟ್ಟು ಉತ್ಪಾದನೆಯು ಮತ್ತು ಉತ್ಪಾದನೆಯ ಹೆಚ್ಚಳವು ಸಮಪ್ರಮಾಣದಲ್ಲಿ ಹೆಚ್ಚಾಗುತ್ತ ಹೋಗುತ್ತವೆ. ಆದುದರಿಂದ ಈ ನಿಯಮಕ್ಕೆ, "ಸ್ಥಿರ ಪ್ರತಿಫಲ ನಿಯಮ" ಎಂದು ಕರೆಯುತ್ತಾರೆ. ಸಂಪ್ರದಾಯ ಅರ್ಥಶಾಸ್ತ್ರಜ್ಞರು ವಸ್ತುವಿನ ಉತ್ಪಾದನೆಯ ಮೇಲೆ ಹೇಳಿದ ಯಾವುದೊಂದು ಪ್ರತಿಫಲದ ನಿಯಮವನ್ನವಲಂಭಿಸುತ್ತದೆಂದು ಅಭಿಪ್ರಾಯಪಟ್ಟಿದರು. ಈ ನಿಯಮದಲ್ಲಿ "ಇಳಿಮುಖ ಪ್ರತಿಫಲದ ನಿಯಮ"ವು ಬಹಳ ಮಹತ್ವವನ್ನು ಪಡೆದಿದೆ.

ಬೆಲೆ ಸಿದ್ಧಾಂತ[ಬದಲಾಯಿಸಿ]

ಅರ್ಥಶಾಸ್ತ್ರದ ಅಧ್ಯಯನದಲ್ಲಿ ಬೆಲೆಯ ಸಿದ್ಧಾಂತ ಇಲ್ಲವೆ ಮೌಲ್ಯ ಸಿದ್ಧಾಂತ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಮಾರುಕಟ್ಟೆಯಲ್ಲಿ ವಸ್ತುವಿನ ಬೆಲೆಯು ಹೇಗೆ ನಿರ್ಣಯಿಸಲ್ಪಡುತ್ತದೆಂಬುದನ್ನು ಅದು ವಿವರಿಸುತ್ತದೆ. ಯಾವುದೇ ವಸ್ತುವಿನ ಬೆಲೆಯು ಅದರ ಬೇಡಿಕೆ-ಪೂರೈಕೆಗಳನ್ನವಲಂಬಿಸಿದೆ. ಹಿಂದಿನ ಅಧ್ಯಾಯಗಳಲ್ಲಿ ನಾವು ಬೇಡಿಕೆಯ ನಿಯಮ ಮತ್ತು ಪೂರೈಕೆಯ ನಿಯಮಗಳನ್ನು ಅಧ್ಯಯನ ಮಾಡಿದ್ದೇವೆ. ಮಾರುಕಟ್ಟೆಯಲ್ಲಿ ವಸ್ತುವಿನ ಬೇಡಿಕೆ ಮತ್ತು ಪೂರೈಕೆಗಳು ಅದರ ಬೆಲೆಯನ್ನು ಹೇಗೆ ನಿಗದಿ ಮಾಡುತ್ತವೆಯೆಂಬುದನ್ನು ಈಗ ನಾವು ಅಭ್ಯಸಿಸಬೇಕಾಗಿದೆ. ಆದರೆ ಅವನ್ನು ಆಭ್ಯಸಿಸುವ ಮೊದಲು, ಬೆಲೆ ನಿರ್ಧಾರ ಪರಿಶೀಲನೆಯಲ್ಲಿ ಉಪಯುಕ್ತವಾಗಿರುವ ಹಲವಾರು ಪರಿಭಾವನೆಗಳನ್ನು ನಾವು ತಿಳಿದುಕೊಳ್ಳುವದು ಅತ್ಯಗತ್ಯವಾಗಿದೆ.

ಬೆಲೆ ಸಿದ್ಧಾಂತ

ಡಾ. ಮಾರ್ಷಲ್‌ರಿಗಿಂತ ಪೂರ್ವದಲ್ಲಿ, ಅರ್ಥಶಾಸ್ತ್ರದಲ್ಲಿ ಬೆಲೆ ನಿರ್ಧಾರವಾಗುವುದರ ಬಗೆಗೆ ಒಮ್ಮತವಿದ್ದಿಲ್ಲ. ಬೆಲೆಯು ಮುಖ್ಯವಾಗಿ ಬೇಡಿಕೆಯಿಂದ ನಿರ್ಧಾರವಾಗುತ್ತದೆಂದು ಕೆಲವು ಅರ್ಥಶಾಸ್ತ್ರಜ್ಞರು ತಿಳಿದುಕೊಂಡಿದ್ದಾರೆ, ಅದು ಮುಖ್ಯವಾಗಿ ಪೂರೈಕೆಯಿಂದ ನಿರ್ಧಾರವಾಗುತ್ತದೆಂದು ಇನ್ನು ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಡಾ.ಮಾರ್ಷಲ್ ಅವರು ಮಾತ್ರ ಬೆಲೆನಿರ್ಧಾರದ ಬಗೆಗೆ ಸರಿಯಾದ ಅಭಿಪ್ರಾಯವನ್ನು ನೀಡಿದರು. ಬೆಲೆಯು ಕೇವಲ ಬೇಡಿಕೆಯಿಂದಾಗಲಿ ಇಲ್ಲವೆ ಕೇವಲ ಪೂರೈಕೆಯಿಂದಾಗಲಿ ನಿರ್ಧಾರವಾಗದು. ಅದು ಬೇಡಿಕೆ ಮತ್ತು ಪೂರೈಕೆಗಳೆರಡರಿಂದಲೂ ನಿರ್ಧಾರವಾಗುತ್ತದೆ. ಬೆಲೆಯ ನಿರ್ಧಾರದಲ್ಲಿ ಬೇಡಿಕೆ ಮತ್ತು ಪೂರೈಕೆಗಳು ಸಮ ಪಾತ್ರವನ್ನು ವಹಿಸುತ್ತವೆಯೆಂದು ಡಾ.ಮಾರ್ಷಲ್‌ರು ಪ್ರತಿಪಾದಿಸಿದರು. ಬೇಡಿಕೆ ಮತ್ತು ಪೂರೈಕೆಗಳು ಒಂದು ಕತ್ತರಿಯ ಎರಡು ಅಲಗುಗಳಿದ್ದಂತೆ. ಒಂದು ಕಾಗದವನ್ನು ಕತ್ತರಿಸಬೇಕಾದರೆ ಕತ್ತರಿಯ ಎರಡು ಆಲಗುಗಳು ಎಷ್ಟು ಅವಶ್ಯಕವೋ, ವಸ್ತುವಿನ ಬೆಲೆಯನ್ನು ನಿರ್ಧರಿಸಬೇಕಾದರೆ ಅದರ ಬೇಡಿಕೆ ಮತ್ತು ಪೂರೈಕೆಗಳೂ ಅಷ್ಟೇ ಅವಶ್ಯಕವಾಗಿವೆ. ಮಾರುಕಟ್ಟೆಯಲ್ಲಿ ಕೆಲವು ಸಲ ಬೇಡಿಕೆಯು ಪೂರೈಕೆಗಿಂತಲೂ ಹೆಚ್ಚು ಪರಿಣಾಮಕಾರಿಯಾಗಬಹುದು. ಇನ್ನು ಕೆಲವು ಸಲ ಪೂರೈಕೆಯು ಬೇಡಿಕೆಗಿಂತಲೂ ಹೆಚ್ಚು ಪರಿಣಾಮಕಾರಿಯಾಗಬಹುದು. ಆದರೆ ಇಷ್ಟು ಮಾತ್ರಕ್ಕೆ ಬೆಲೆಯು ಕೇವಲ ಬೇಡಿಕೆಯಿಂದ ಇಲ್ಲವೆ ಪೂರೈಕೆಯಿಂದ ನಿರ್ಧಾರವಾಗುತ್ತದೆಂದು ಹೇಳುವದು ತಪ್ಪು. ಬೆಲೆ ನಿರ್ಧಾರದ ವಿಷಯದಲ್ಲಿ ಇನ್ನೂ ಒಂದು ಸಂಗತಿಯನ್ನು ನೆನಪಿನಲ್ಲಿಡುವುದು ಅತ್ಯಾವಶ್ಯಕ. ಬೆಲೆ ನಿರ್ಧಾರದ ಪ್ರಕ್ರಿಯೆಯಲ್ಲಿ ಕಾಲದ ಪಾತ್ರವೂ ಮಹತ್ವದಾಗಿದೆ.ಒಂದು ಉದ್ಯಮ ಸಂಸ್ಥೆಯು ಸಮತೋಲನದಲ್ಲಿದೆಯೆಂದು ಹೇಳಿದರೆ ಅದು ಅತ್ಯಂತ ಹೆಚ್ಚಿನ ಲಾಭವನ್ನು ಪಡೆಯುವ ಸ್ಥಿತಿಯಲ್ಲಿದೆಯೆಂದು ಅರ್ಥ. ಆಧುನಿಕ ಅರ್ಥಶಾಸ್ತ್ರದಲ್ಲಿ ಉದ್ಯಮ ಸಂಸ್ಥೆಯ ಸಮತೋಲನವನ್ನು ಕಂಡು ಹಿಡಿಯಲು ಅಂಚಿನ ವೆಚ್ಚ (Marginal Cost) ಮತ್ತು ಅಂಚಿನ ಆದಾಯ (Marginal Revenue)ಗಳನ್ನು ಪರಿಶೀಲಸಲಾಗುತ್ತದೆ.

ಏಕಸ್ವಾಮ್ಯ[ಬದಲಾಯಿಸಿ]

ಏಕಸ್ವಾಮ್ಯ

ಮಾರುಕಟ್ಟೆಯಲ್ಲಿ ಒಬ್ಬನೇ ಉತ್ಪಾದಕ ಅಥವಾ ಒಂದು ಉದ್ಯಮ ಸಂಸ್ಥೆಯು ಮಾರಾಟಗಾರನಾಗಿದ್ದು ವಸ್ತುವಿನ ಪೂರ್ಣ ನೀಡಿಕೆಯನ್ನು ನಿಯಂತ್ರಿಸುವಂತಿದ್ದರೆ ಅದಕ್ಕೆ ಏಕಸ್ವಾಮ್ಯ ಎಂದು ಕರೆಯಲಾಗುತ್ತದೆ. ಸ್ಪರ್ಧೆ ಇಲ್ಲದಿರುವ ಸ್ಥಿತಿಯೇ ಏಕಸ್ವಾಮ್ಯ, ಏಕಸ್ವಾಮ್ಯವು ಪರಿಪೂರ್ಣ ಪೈಪೋಟಿಗೆ ಅಸಂಖ್ಯಾತ ಮಾರುವವರಿದ್ದಾರೆ. ಏಕಸ್ವಾಮ್ಯದಲ್ಲಿ ಒಬ್ಬನೇ ಮಾರುವವನಿರುತ್ತಾನೆ.[೯] ತನಗಿಷ್ಟಬಂದಂತೆ ವಸ್ತುವಿನ ಬೆಲೆಯನ್ನು ನಿಗದಿಮಾಡಲು ಮತ್ತು ನೀಡಿಕೆಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಅವನಿಗೆ ಸ್ವಾತಂತ್ರವಿರುತ್ತದೆ.ರಾಬರ್ಟ್ ಟ್ರಪಿನ್ ಎಂಬ ಅರ್ಥಶಾಸ್ತ್ರಜ್ಞನ ಪ್ರಕಾರ, "ಯಾವ ಉದ್ಯಮ ಸಂಸ್ಥೆಯು ತಾನು ಮಾರುವ ವಸ್ತುವಿನ ಬೆಲೆಯನ್ನು ಬದಲಾಯಿಸಲು ಸ್ವಾತಂತ್ರ್ಯ ಪಡೆದಿರುತ್ತದೆಯೋ ಅದೇ ಏಕಸ್ವಾಮ್ಯ ಉದ್ಯಮ ಸಂಸ್ಥೆ". ಏಕಸ್ವಾಮ್ಯದಲ್ಲಿ ಪೈಪೋಟಿಯೇ ಇಲ್ಲದಿರುವುದರಿಂದ ಸ್ವಾಮ್ಯವ್ಯಕ್ತಿಯು ಉತ್ಪಾದಿಸುವ ವಸ್ತುವಿಗೆ ತೀರಾ,ಸಮೀಪದ ಬದಲಿ ವಸ್ತುಗಳು ಇರುವುದಿಲ್ಲ. ಇಡೀ ಉದ್ಯಮದಲ್ಲಿ ಅವನೊಬ್ಬನೇ ಉತ್ಪಾದಕನಾಗಿರುವುದರಿಂದ ಉದ್ಯಮ ಸಂಸ್ಥೆ ಮತ್ತು ಕೈಗಾರಿಕೆಯ ನಡುವೆ ವ್ಯತ್ಯಾಸವೇ ಇರುವುದಿಲ್ಲ. ಉದ್ಯಮ ಸಂಸ್ಥೆಯೇ ಕೈಗಾರಿಕೆಯಾಗಿರುತ್ತದೆ.

ಏಕಸ್ವಾಮ್ಯ ಮಾರುಕಟ್ಟೆಯ ಲಕ್ಷಣಗಳು[ಬದಲಾಯಿಸಿ]

ಏಕಸ್ವಾಮ್ಯ ಮಾರುಕಟ್ಟೆಯ ರೇಖಾನಕ್ಷೆ

ಏಕಸ್ವಾಮ್ಯ ಮಾರುಕಟ್ಟೆಯು ಕೆಳಕಂಡ ಲಕ್ಷಣಗಳನ್ನು ಪಡೆದಿರುತ್ತದೆ.[೧೦] ೧. ಮಾರುಕಟ್ಟೆಯಲ್ಲಿ ಒಬ್ಬ ಉತ್ಪಾದಕ ಅಥವಾ ಒಂದು ಉದ್ಯಮ ಸಂಸ್ಥೆ ಇರಬೇಕು. ಕೆಲವೊಮ್ಮೆ ಹಲವು ಉದ್ಯಮಗಳು ಸೇರಿ ಸಾಮೂಹಿಕವಾಗಿ ಉತ್ಪಾದನ, ನೀಡಿಕೆ, ಪೂರೈಕೆ ಮತ್ತು ಬೆಲೆಯನ್ನು ನಿಯಂತಿಸುವ ಮೂಲಕ ಏಕಸ್ವಾಮ್ಯವನ್ನು ಪಡೆಯಬಹುದು. ೨. ವಸ್ತುವಿನ ಉತ್ಪಾದನೆಯ ಮೇಲೆ ಪೂರ್ಣ ಹತೋಟಿ ಸ್ವಾಮ್ಯವ್ಯಕ್ತಿ ಯೊಬ್ಬನಿಗೇ ಇರುತ್ತದೆ.ಅವನು ಹೆಚ್ಚು ಉತ್ಪಾದಿಸಿ ಹೆಚ್ಚು ಪೂರೈಕೆ ಮಾಡಬಹುದು,ಇಲ್ಲವೇ ಕಡಿಮೆ ಉತ್ಪಾದಿಸಿ ಕಡಿಮೆ ಪೂರೈಕೆ ಮಾಡಬಹುದು. ೩. ಸ್ವಾಮ್ಯವ್ಯಕ್ತಿಯು ಉತ್ಪಾದಿಸುವ ಅಥವಾ ಮಾರುವ ವಸ್ತುವಿಗೆ ಸಮೀಪದ ಬದಲಿ ವಸ್ತುಗಳಿರುವುದಿಲ್ಲ. ಆದ್ದರಿಂದ ಗ್ರಾಹಕರು ಯಾವ ಬೆಲೆಗಾರರು ಅವನ ವಸ್ತುಗಳನ್ನೇ ಕೊಂಡುಕೊಳ್ಳಬೇಕಾಗುತ್ತದೆ. ೪. ತಾನು ಮಾರುವು ವಸ್ತುವಿನ ಬೆಲೆಯನ್ನು ನಿಗದಿಮಾಡುವ ಪೂರ್ಣ ಅಧಿಕಾರ ಏಕಸ್ವಾಮ್ಯ ವ್ಯಾಪಾರಿಗೆ ಮಾತ್ರ ಇರುತ್ತದೆ. ೫. ಏಕಸ್ವಾಮ್ಯದಲ್ಲಿ ಉದ್ಯಮ ಸಂಸ್ಥೆ ಮತ್ತು ಕೈಗಾರಿಕೆಯ ನಡುವೆ ವ್ಯತ್ಯಾಸವೇ ಇರುವುದಿಲ್ಲ. ಉದ್ಯಮ ಸಂಸ್ಥೆ ಮತ್ತು ಕೈಗಾರಿಕೆ ಒಂದೇ ಆಗಿದ್ದು ಅದು ಸ್ವಾಮ್ಯ ವ್ಯಕ್ತಿಯ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.

ಸ್ವಾಮ್ಯಯುತ ಪೈಪೋಟಿ[ಬದಲಾಯಿಸಿ]

ಅಲ್ಪಾವಧಿಯಲ್ಲಿ ಸ್ವಾಮ್ಯಯುತ ಪೈಪೋಟಿಯ ರೇಖಾನಕ್ಷೆ

ಪರಿಪೂರ್ಣ ಪೈಪೋಟಿ ಮತ್ತು ಪರಿಶುದ್ಧ ಏಕಸ್ಯಾಮ್ಯದಲ್ಲಿ ಬೆಲೆ ಮತ್ತು ಉತ್ಪನ್ನ ನಿರ್ಧಾರವಾಗುವ ಬಗೆಯನ್ನು ಹಿಂದಿನ ಅಧ್ಯಾಯಗಳಲ್ಲಿ ಚರ್ಚಿಸಿದೆವು, ಇವೆರಡೂ ಸಂಪೂರ್ಣವಾಗಿ ವಿರುದ್ಧವಾದ ಸನ್ನಿವೇಶಗಳು. ಆದರೆ ಸಾಮಾನ್ಯವಾಗಿ, ವಾಸ್ತವ ಪ್ರಪಂಚದಲ್ಲಿ ಈ ಎರಡೂ ರೀತಿಯ ಮಾರುಕಟ್ಟೆಗಳನ್ನು ಕಾಣುವುದು ಅಸಂಭವವೆಂದೇ ಹೇಳಬೇಕಾಗುತ್ತದೆ. ವಾಸ್ತವಾಗಿ ಅಸ್ಥಿತ್ವದಲ್ಲಿರುವ ಮಾರುಕಟ್ಟೆ ಎಂದರೆ ಅಪರಿಪೂರ್ಣ ಪೈಪೋಟಿ. ಇದು ಪರಿಪೂರ್ಣ ಪೈಪೋಟಿ ಹಾಗೂ ಪರಿಶುದ್ಧ ಏಕಸ್ವಾಮ್ಯದ ನಡುವೆ ಬರುವ, ಅವೆರಡರ ಮಿಶ್ರ ಲಕ್ಷಣಗಳನ್ನು ಒಳಗೊಂಡಿರುವ ಮಾರುಕಟ್ಟೆ ಸನ್ನಿವೇಶವಾಗಿದೆ. ಅಪರಿಪೂರ್ಣ ಪೈಪೋಟಿ ಎಂಬುದು ವ್ಯಾಪಕವಾದ ಪರಿಭಾಷೆಯಾಗಿದ್ದು ಅನೇಕ ವಿವಿಧ ಮಾರುಕಟ್ಟೆಗಳನ್ನು ಅದು ಒಳಗೊಳ್ಳುತ್ತದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಸ್ವಾಮ್ಯಯುತ ಪೈಪೋಟಿ ಬಹುಜನಸ್ವಾಮ್ಯ ಮತ್ತು ದ್ವಿಜನಸ್ವಾಮ್ಯ.

ದೀರ್ಘಾವಧಿಯಲ್ಲಿ ಸ್ವಾಮ್ಯಯುತ ಪೈಪೋಟಿಯ ರೇಖಾನಕ್ಷೆ

೧೯೩೩ಕ್ಕೆ ಮುಂಚೆ ಅಪರಿಪೂರ್ಣ ಪೈಪೋಟಿಯ ಮಾರುಕಟ್ಟೆಯನ್ನು ಯಾವ ಅರ್ಥಶಾಸ್ತ್ರಜ್ಞರೂ ಚರ್ಚಿಸಿರಲಿಲ್ಲ. ಪರಿಪೂರ್ಣ ಪೈಪೋಟಿಯೇ ಹೆಚ್ಚು ಆಸಕ್ತಿಯನ್ನು ಕೆರಳಿಸಿದ್ದ ಮಾರುಕಟ್ಟೆ ಸನ್ನಿವೇಶವಾಗಿತ್ತು. ೧೯೩೩ರಲ್ಲಿ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಪ್ರಾಧ್ಯಾಪಕಿ ಶ್ರೀಮತಿ ಜೋನ್ ರಾಬಿನ್ಸನ್(Economics of Imperfect Competition) ಎಂಬ ಗ್ರಂಥವನ್ನೂ[೧೧] ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಪಕ ಇ.ಎಚ್ ಚೇಂಬರ್ಲಿನ್ (Theory of Monopolistic Competition) ಎಂಬ ಗ್ರಂಥವನ್ನು ಪ್ರಕಟಿಸಿದರು.[೧೨] ಕೆಲವೇ ತಿಂಗಳುಗಳು ಅಂತರದಲ್ಲಿ ಪ್ರಕಟವಾದ ಈ ಎರಡು ಗ್ರಂಥಗಳು ನಿಜ ಜೀವನದಲ್ಲಿರುವ ಮಾರುಕಟ್ಟೆ ಸನ್ನಿವೇಶಗಳನ್ನು ವಿವರಿಸುವುದರಲ್ಲಿ ಸಫಲವಾದವು. ಸ್ವಾಮ್ಯಯುಕ್ತ ಪೈಪೋಟಿ ಎಂಬುದು ಅಪರಿಪೂರ್ಣ ಪೈಪೋಟಿಯ ಒಂದು ಭಾಗ ಅಷ್ಟೆ. ಇದು ಏಕಸ್ವಾಮ್ಯ ಮತ್ತು ಪೈಪೋಟಿಯ ಮಿಶ್ರವಾಗಿರುವುದರಿಂದ ಇದಕ್ಕೆ ಸ್ವಾಮ್ಯಯುತೆ ಪೈಪೋಟಿ ಎಂಬ ಹೆಸರು ಬಂದಿದೆ. ಪರಿಪೂರ್ಣ ಪೈಪೋಟಿ ವಿಶ್ಲೇಷಣೆಯಲ್ಲಿರುವ ದೋಷಗಳ ನಿವಾರಣೆಗಾಗಿ ಹಾಗೂ ವಾಸ್ತವ ಜೀವನಕ್ಕೆ ಯಾವತ್ತೂ ಸತ್ಯವಾಗಿರುವ ಮಾರುಕಟ್ಟೆ ಸನ್ನಿವೇಶವನ್ನು ವಿಸದಪಡಿಸುವುದಕ್ಕಾಗಿ ಚೇಂಬರ್ಲಿನ್ "ಸ್ವಾಮ್ಯಯುತ ಪೈಪೋಟಿ" ಎಂಬ ಪರಿಭಾಷೆಯನ್ನೂ, ಜೋನ್ ರಾಬಿನ್ ಸನ್ "ಅಪರಿಪೂರ್ಣ ಪೈಪೋಟಿ" ಎಂಬ ಪರಿಭಾಷೆಯನ್ನು ಬಳಸಿದ್ದಾರೆ.

ಸ್ವಾಮ್ಯಯುತ ಪೈಪೋಟಿ ಮಾರುಕಟ್ಟೆಯ ಲಕ್ಷಣಗಳು[ಬದಲಾಯಿಸಿ]

ಸ್ವಾಮ್ಯಯುತ ಪೈಪೋಟಿಯ ಮಾರುಕಟ್ಟೆಯಲ್ಲಿ ಅನೇಕ ಉತ್ಪಾದಕರಿದ್ದು ಅತಿ ಸಮೀಪದ ಬದಲಿ ವಸ್ತುಗಳನ್ನು ಉತ್ಪಾದಿಸುತ್ತಿರುತ್ತಾರೆ. ಸ್ವಾಮ್ಯಯುತ ಪೈಪೋಟಿಯು ಮುಖ್ಯವಾಗಿ ನಾಲ್ಕು ಲಕ್ಷಣಗಳನ್ನು ಹೊಂದಿರುತ್ತದೆ. ೧. ಅಧಿಕ ಸಂಖ್ಯೆಯ ಉತ್ಪಾದಕರ ಅಸ್ತಿತ್ವ : ಸ್ವಾಮ್ಯಯುತ ಪೈಪೋಟಿಯಲ್ಲಿ ಹಲವಾರು ಉತ್ಪಾದಕರು(ಉದ್ಯಮ ಸಂಸ್ಥೆಗಳು) ಇರುತ್ತಾರೆ. ಉದ್ಯಮ ಸಂಸ್ಥೆಗಳ ಸಂಖ್ಯೆ ಅಧಿಕವಾಗಿದ್ದರೂ ಅವುಗಳ ಗಾತ್ರ ಚಿಕ್ಕದಾಗಿರುತ್ತದೆ. ಉತ್ಪಾದಕರ ಸಂಖ್ಯೆ ಅಧಿಕವಾಗಿರುವುದರಿಂದ ಮಾರುಕಟ್ಟೆಯ ಒಟ್ಟು ಉತ್ಪನ್ನದ ಮೇಲೆ ಯಾವುದೇ ಒಬ್ಬ ಉತ್ಪಾದಕನ ಉತ್ಪನ್ನ ಏನೂ ಪ್ರಭಾವ ಬೀರುವಂತಿರುವುದಿಲ್ಲ. ಉತ್ಪಾದಕರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಮೂಹಿಕವಾಗಿ ಬೆಲೆಯನ್ನು ಏರಿಸುವುದಾಗಲೀ ಉತ್ಪನ್ನವನ್ನು ಕಡಿಮೆಮಾಡುವುದಾಗಲೀ ಸಾಧ್ಯವಾಗುವುದಿಲ್ಲ. ಅಲ್ಲದೆ ಉತ್ಪಾದಕರಲ್ಲಿ ಪರಸ್ಪರ ಅವಲಂಬನೆಯು ಕಂಡುಬರುವುದಿಲ್ಲ. ಪ್ರತಿಯೊಂದು ಉದ್ಯಮ ಸಂಸ್ಥೆಯು ಬೆಲೆ ಮತ್ತು ಉತ್ಪನ್ನದ ವಿಷಯದಲ್ಲಿ ತನ್ನದೇ ಆದ ಸ್ವಾತಂತ್ರ ನೀತಿಯನ್ನು ಅನುಸರಿಸುತ್ತದೆ. ೨. ವಸ್ತುವಿನ ವೈವಿಧ್ಯತೆ : ವಸ್ತುಗಳ ವೈವಿಧ್ಯತೆಯು ಸ್ವಾಮ್ಯಯುತ ಪೈಪೋಟಿಯ ಎರಡನೆಯ ಲಕ್ಷಣ. ವಿವಿಧ ಉದ್ಯಮ ಸಂಸ್ಥೆಗಳು ವಿವಿಧ ರೀತಿಯ ವಸ್ತುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ತರುತ್ತವೆ. ಆದಾಗ್ಯೂ ಈ ವಸ್ತುಗಳು ಸಮೀಪದ ಬದಲಿ ವಸ್ತುಗಳಾಗಿರುತ್ತವೆ. ಆದ್ದರಿಂದ ಸ್ವಾಮ್ಯಯುತ ಪೈಪೋಟಿಯಲ್ಲಿ ಪರಿಪೂರ್ಣ ಪೈಪೋಟಿಯಲ್ಲಿರುವಂತೆ ಏಕರೂಪದ ವಸ್ತುಗಳಾಗಲೀ, ಅಥವಾ ಏಕಸ್ವಾಮ್ಯದಲ್ಲಿರುವಂತೆ ತೀರಾ ಅಪರೂಪದ ಬದಲಿ ವಸ್ತುಗಳಾಗಲೀ ಇರುವುದಿಲ್ಲ. ವಸ್ತುಗಳಿಗೆ ಆಕರ್ಷಕ ಹೆಸರನ್ನು ನೀಡುವ ಮೂಲಕ ವಸ್ತುವಿನ ತಯಾರಿಕೆಗೆ ಉಪಯೋಗಿಸುವ ಪದಾರ್ಥಗಳ ಗುಣದರ್ಜೆಯಲ್ಲಿ ವ್ಯತ್ಯಾಸಮಾಡುವುದರ ಮುಖಾಂತರ ವಿಶೇಷ ರೀತಿಯಲ್ಲಿ ಪಿಂಡಿಗಳನ್ನು ಕಟ್ಟುವ ಮೂಲಕ, ಬಗೆಬಗೆಯ ವ್ಯಾಪಾರ ಚಿಹ್ನೆಗಳನ್ನು ಬಳಸುವ ಮೂಲಕ ಆಗು ಮುಂತಾದ ರೀತಿಯಲ್ಲಿ ಸ್ವಾಮ್ಯಯುತ ಪೈಪೋಟಿಯಲ್ಲಿ ವಸ್ತುಗಳ ವೈವಿಧ್ಯಯನ್ನು(ವಸ್ತುಗಳ ಪ್ರಭೇದ) ಸಾಧಿಸಲಾಗುತ್ತದೆ. ೩. ಮಾರಾಟ ವೆಚ್ಚಗಳು : ಮಾರಾಟ ವೆಚ್ಚಗಳು ಸ್ವಾಮ್ಯಯುತ ಪೈಪೋಟಿಯ ಮೂರನೇಯ ಲಕ್ಷಣ. ತನ್ನ ಎದುರಾಳಿಯು ಮಾರುವ ವಸ್ತುವಿಗಿಂತ ತಾನು ಮಾರುವ ವಸ್ತುವು ಹೆಚ್ಚಿನ ಗುಣಮಟ್ಟದು, ಬಹುಕಾಲ ಬಾಳುವಂತಹದು ಎಂದು ಗ್ರಾಹಕರ ಮೇಲೆ ಪರಿಣಾಮ ಬೀರುವ ಪ್ರತಿಯೊಬ್ಬ ಉತ್ಪಾದಕನು ಮಾರಾಟ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಮಾರಾಟ ವೆಚ್ಚಗಳು ಪ್ರಚಾರ ಮತ್ತು ಜಾಹೀರಾತಿನ ರೂಪದಲ್ಲಿರುತ್ತವೆ. ಮಾರಾಟ ವೆಚ್ಚಗಳಿಗೆ ಎಷ್ಟು ಪ್ರಾಮುಖ್ಯತೆ ಬಂದಿದೆ ಎಂದರೆ ಇವುಗಳಿಗೆ, "ಮಾರಾಟ ವೃದ್ಧಿಯ ವಿಧಾನಗಳು"(Sales Promotion) ಎಂತಲೇ ಹೆಸರು ಬಂದಿದೆ. ೪. ಉದ್ಯಮ ಸಂಸ್ಥೆಗಳ ಆಗಮನ ಮತ್ತು ನಿರ್ಗಮನಕ್ಕೆ ಅವಕಾಶ : ಸ್ವಾಮ್ಯಯುತ ಪೈಪೋಟಿಯಲ್ಲಿ ಉದ್ಯಮ ಸಂಸ್ಥೆಗಳು ಕೈಗಾರಿಕೆಯನ್ನು ಪ್ರವೇಶಿಸುವದಕ್ಕೆ ಮತ್ತು ಕೈಗಾರಿಕೆಯಿಂದ ನಿರ್ಗಮಿಸುವುದಕ್ಕೆ ಸುಲಭವಾದ ಅವಕಾಶವಿರುತ್ತದೆ. ಹಳೆಯ ಉದ್ಯಮ ಸಂಸ್ಥೆಯ ಯಾವುದೇ ಸಮಯದಲ್ಲಿ ಕೈಗಾರಿಕೆಯಿಂದ ಹೊರಬರುವುದಕ್ಕೆ ಹಾಗೂ ಉದ್ಯಮ ಸಂಸ್ಥೆಯು ಕೈಗಾರಿಕೆಯನ್ನು ಪ್ರವೇಶಿಸುವುದಕ್ಕೆ ಏನೂ ಅಡಚಣೆಗಳಿರುವುದಿಲ್ಲ. ವಸ್ತುಗಳ ವೈವಿಧ್ಯತೆಯೇ ಸ್ವಾಮ್ಯಯುತ ಪೈಪೋಟಿಯ ಪ್ರಧಾನ ಲಕ್ಷಣ. ವಿವಿಧ ಉದ್ಯಮ ಸಂಸ್ಥೆಗಳು ತಯಾರಿಸುತ್ತಿರುವ ಯಾವುದೇ ಉಪಯೋಗದ ಒಂದು ವಸ್ತುವು ವೈವಿಧ್ಯತೆ ಪಡೆದಿರುತ್ತದೆ. ಪ್ರತಿಯೊಬ್ಬ ಉತ್ಪಾದಕನು ತಾನು ಉತ್ಪಾದಿಸುವ ವಸ್ತುವು ತನ್ನ ಎದುರಾಳಿಗಳ ವಸ್ತುಗಳಿಗಿಂತ ಉತ್ತಮವಾಗಿದ್ದು ಭಿನ್ನವಾಗಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಾನೆ. ಹಿಂದೆಯೇ ತಿಳಿಸಿದಂತೆ ವ್ಯಾಪಾರದಲ್ಲಿ ಬಳಸುವ ಚಿಹ್ನೆ, ವಸ್ತುವಿನ ತಯಾರಿಕೆಯಲ್ಲಿ ಉಪಯೋಗಿಸುವ ಪದಾರ್ಥಗಳ ಗುಣಮಟ್ಟ, ಜಾಹೀರಾತಿನ ಶೈಲಿ, ವಸ್ತುವಿನ ಹೆಸರು, ವಸ್ತುಗಳನ್ನು ಪಿಂಡಿ ಕಟ್ಟುವ ರೀತಿ ಮುಂತಾದುವುಗಳಲ್ಲಿ ಒಂದು ಉದ್ಯಮ ಸಂಸ್ಥೆಯ ವಸ್ತುಗಳು ಮತ್ತೊಂದು ಉದ್ಯಮ ಸಂಸ್ಥೆಯ ವಸ್ತುಗಳಿಗಿಂತ ಭಿನ್ನವಾಗಿರುತ್ತದೆ. ಗ್ರಾಹಕರನ್ನು ತನ್ನೆಡೆಗೆ ಹೆಚ್ಚಾಗಿ ಆಕರ್ಷಿಸುವುದಕ್ಕಾಗಿ ಪ್ರತಿಯೊಂದು ಉದ್ಯಮ ಸಂಸ್ಥೆಯು ಈ ತಂತ್ರಗಳನ್ನು ಬಳಸುತ್ತದೆ. ಸ್ವಾಮ್ಯಯುತ ಪೈಪೋಟಿಯಲ್ಲಿ ವಸ್ತುಗಳ ವೈವಿಧ್ಯತೆಗೆ(ವಸ್ತುಗಳ ಪ್ರಭೇದ) ಕೆಲವು ನಿದಿಷ್ಟ ಉದಾಹರಣೆಗಳನ್ನು ಕೊಡಬಹುದು. ಹಲವಾರು ಉದ್ಯಮ ಸಂಸ್ಥೆಗಳು ಟೂತ್ಫೇಸ್ಟ್ ಅನ್ನು ತಯಾರಿಸುತ್ತವೆ. ಪ್ರತಿಯೊಂದು ಉದ್ಯಮ ಸಂಸ್ಥೆಯು ತಯಾರಿಸುವ ಟೂತ್ಫೇಸ್ಟ್ ತನ್ನ ಎದುರಾಳಿಗಳು ತಯಾರಿಸುವ ಟೂತ್ಫೇಸ್ಟ್ ಗಳಿಗಿಂತ ಭಿನ್ನವಾಗಿರುತ್ತದೆ. ಬಿನಾಕ, ಕಾಲ್ಗೇಟ್, ಫೋರ್ ಹಾನ್ಸ್, ವಜ್ರದಂತಿ, ಮೆಕ್ ಕ್ಲೀನ್ ಮೊದಲಾದ ಟೂತ್ಫೇಸ್ಟ್‌ಗಳ ಅಸ್ತಿತ್ವವು ಸ್ವಾಮ್ಯಯುತ ಪೈಪೋಟಿ ಮಾರುಕಟ್ಟೆಗೆ ಸ್ಪಷ್ಟ ಉದಾಹರಣೆ. ಅಂತೆಯೇ ಸಾಬೂನಿಗೆ ಸಂಬಂಧಿಸಿದಂತೆ ಒಂದು ಉದಾಹರಣೆ ಎಂದರೆ. ಲಕ್ಸ್, ಹಮಾಮ್, ರೆಕ್ಸೋನಾ, ಸನ್ ಲೈಟ್, ಲೈಫ್ ಬಾಯ್, ಮೊದಲಾದ ಸಾಬೂನುಗಳ ಅಸ್ತಿತ್ವವು ಸ್ವಾಮ್ಯಯುತ ಪೈಪೋಟಿಯನ್ನು ಸೂಚಿಸುತ್ತವೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

 1. . ಉದ್ಯಮ ಅರ್ಥಶಾಸ್ತ್ರ
 2. . ಉದ್ಯಮ ಅರ್ಥಶಾಸ್ತ್ರದ ಲಕ್ಷಣಗಳು
 3. . ಬೆಲೆ ಸಿದ್ಧಾಂತ
 4. . ಏಕಸ್ವಾಮ್ಯ ಮಾರುಕಟ್ಟೆ

ಉಲ್ಲೇಖ[ಬದಲಾಯಿಸಿ]

 1. Moschandreas, Maria (2000). Business Economics, 2nd Edition, Thompson Learning, Description and chapter-preview links.
 2. D'Orlando, F.; Sanfilippo, E. (2010). "Behavioral foundations for the Keynesian Consumption Function". Journal of Economic Psychology 31 (6): 1035–1046. doi:10.1016/j.joep.2010.09.004
 3. Kotler, P., Armstrong, G., Brown, L., and Adam, S. (2006) Marketing, 7th Ed. Pearson Education Australia/Prentice Hall.
 4. Friedman Milton (1953). "The Methodology of Positive Economics", Essays in Positive Economics, University of Chicago Press, p. 10.
 5. http://kalyan-city.blogspot.com/2009/07/introduction-to-managerial-economics.html
 6. http://www.studylecturenotes.com/management-sciences/economics/330-what-is-business-definition-nature-and-characteristics-of-business
 7. http://www.investopedia.com/terms/i/investment-management.asp
 8. http://info.winman.com/blog/bid/341826/The-Basic-Principles-of-Production-Management
 9. http://www.investopedia.com/university/economics/economics6.asp
 10. http://study.com/academy/lesson/pure-monopoly-definition-characteristics-examples.html
 11. http://www.economictheories.org/2008/10/robinss-imperfect-competition-theory.html
 12. http://www.economictheories.org/2008/10/chamberlins-monopolistic-competition.html