ಅನುಭೋಗ
ಅನುಭೋಗ ಎಂದರೆ ಸರಕು, ಸೇವೆಗಳಲ್ಲಿರುವ ತುಷ್ಟಿಗುಣವನ್ನು ಅನುಭವಿಸುವುದು (ಕನ್ಸಮ್ಷನ್). ಈ ಕ್ರಿಯೆ ಆರ್ಥಿಕ ಚಟುವಟಿಕೆಗಳಲ್ಲಿ ಒಂದು ಮುಖ್ಯ ಭಾಗ. ಸರಕು, ಸೇವೆಗಳ ಉತ್ಪಾದನೆಗೆ ಅನುಭೋಗವೇ ಮೂಲ ಪ್ರಚೋದನೆ.[೧]
ಹಿನ್ನೆಲೆ
[ಬದಲಾಯಿಸಿ]ಎಲ್ಲರೂ ಅನುಭೋಗಿಗಳಾಗಿರುತ್ತಾರಾದ್ದರಿಂದ ಇವರ ಬಯಕೆಗಳೇನು? ಬಯಕೆ, ಬೇಡಿಕೆ ಮತ್ತು ಬೆಲೆ ಇವುಗಳ ಸಂಬಂಧವೇನು? ಜನರ ಅನುಭೋಗ ಪ್ರವೃತ್ತಿಯ ನಿರ್ಣಯಾಂಶಗಳೇನು? ಆರ್ಥಿಕಾಭಿವೃದ್ಧಿಯಲ್ಲಿಯೂ ಅರ್ಥಮಂಡಲದ ಆರ್ಥಿಕತೆಯ ಯೋಜಿತ ಮುನ್ನಡೆಯಲ್ಲಿಯೂ ಅನುಭೋಗದ ಪಾತ್ರವೆಂಥದು? ಅನುಭೋಗಿಗಳಲ್ಲಿ ಬಹುಭಾಗ ಉತ್ಪಾದಕರೂ ಆಗಿರುವುದರಿಂದ ಈ ಎರಡೂ ಆರ್ಥಿಕ ಗುಂಪಿನ ಪರಸ್ಪರ ಹಿತಾಸಕ್ತಿಗಳು ಹೇಗೆ ಸಮನ್ವಯಗೊಳ್ಳಬೇಕು? ಅನುಭೋಗಿಗೆ ಪೂರ್ಣಸ್ವಾತಂತ್ರ್ಯ ಇರುವ ಆರ್ಥಿಕಪದ್ಧತಿ ಸರಿಯೇ ಅಥವಾ ಅನುಭೋಗವನ್ನು ಒಂದು ರೀತಿಯ ನಿಯಂತ್ರಣಕ್ಕೆ ಒಳಪಡಿಸುವುದು ಸರಿಯೆ? ಹಾಗಾದರೆ ಅನುಭೋಗಿಗಳಿಗೆ ಅತ್ಯುನ್ನತ ಸಂತುಷ್ಟಿ ದೊರಕಿಸುವ ಆರ್ಥಿಕವ್ಯವಸ್ಥೆಯ ಸ್ವರೂಪವೇನು? ಇವು ಅನುಭೋಗಗಳನ್ನು ಕುರಿತ ಅಧ್ಯಯನದಲ್ಲಿ ಏಳುವ ಮುಖ್ಯ ಪ್ರಶ್ನೆಗಳು.[೨]
ಅರ್ಥಶಾಸ್ತ್ರದ ಆಧಾರ
[ಬದಲಾಯಿಸಿ]ಅನುಭೋಗಕ್ಕೆ ಸಂಬಂಧಿಸಿದ ಕೆಲವು ಸಿದ್ಧಾಂತಗಳು ಮತ್ತು ಸಮಸ್ಯೆಗಳನ್ನು ವಿಚಾರಿಸುವಾಗ ಬಯಕೆಗಳ ಕೆಲವು ಸಾಮಾನ್ಯ ಲಕ್ಷಣಗಳನ್ನು ಗಮನಿಸಬೇಕು. ಅವೇ ಬಯಕೆಗಳು ಮರಳಿ ಮರಳಿ ಬರುತ್ತಿರುವುವಲ್ಲದೆ ಹೊಸ ಹೊಸ ಬಯಕೆಗಳೂ ಹುಟ್ಟುತ್ತಲೇ ಇರುವುದರಿಂದ ಒಟ್ಟಿನಲ್ಲಿ ಮಾನವನ ಬಯಕೆಗಳು ಅಮಿತ ಹಾಗು ವೈವಿಧ್ಯಪೂರ್ಣವಾದುವೆಂದು ಹೇಳಬಹುದು. ಆದರೆ ಬಯಕೆಗಳ ಪೂರೈಕೆಗೆ ಅವಶ್ಯಕವಾದ ಸಾಧನಗಳ ಅಭಾವ ಕಂಡುಬರುತ್ತಿದೆ. ಇದೇ ಆರ್ಥಿಕ ಸಮಸ್ಯೆಯ ಮೂಲಭೂತ ಅಂಶವಾಗಿದೆ. ಯಾವುದಾದರೂ ಬಯಕೆಯೊಂದನ್ನು ತೃಪ್ತಿಗೊಳಿಸಿದಾಗ ತಾತ್ಕಾಲಿಕವಾಗಿಯಾದರೂ ಅದರ ಆವಶ್ಯಕತೆ ಇಲ್ಲವಾಗುವುದರಿಂದ ಒಂದೊಂದು ಬಯಕೆಗೂ ಒಂದೊಂದು ಮಿತಿಯುಂಟೆಂದು ಹೇಳಬಹುದು. ಅನುಭೋಗಿ ಸರಕೊಂದನ್ನು ಅನುಭೋಗಿಸುವಾಗ ಬರಬರುತ್ತಾ ಅದರ ಬಯಕೆಯ ಆಳ ಕಡಿಮೆಯಾಗುತ್ತ ಬಂದು ತೃಪ್ತಿಯ ಮಟ್ಟ ತಲುಪಿದಾಗ ಆ ಸರಕಿನ ಬಯಕೆ ನಿಲ್ಲುವುದು. ಈ ಅನುಭವದ ಆಧಾರದ ಮೇಲೆ ಇಳಿವರಿ ಅಂಚಿನ ತುಷ್ಟಿಗುಣನಿಯಮವನ್ನು ಅರ್ಥಶಾಸ್ತ್ರಜ್ಞರು ರಚಿಸಿರುತ್ತಾರೆ. ಸಾಮಾನ್ಯವಾಗಿ ಅನೇಕ ಬಯಕೆಗಳು ಏಕಕಾಲದಲ್ಲೇ ತಲೆದೋರಿ, ಅವುಗಳನ್ನು ತೃಪ್ತಿಪಡಿಸುವ ಕಾಲ ಮತ್ತು ಸಾಧನಗಳು ಮಿತಿಯುಳ್ಳವಾದ ಕಾರಣ ಅನುಭೋಗಿಯ ಮನಸ್ಸಿನಲ್ಲಿಯೇ ಈ ಬಯಕೆಗಳು ಪರಸ್ಪರ ಸ್ಪರ್ಧಿಸುವುವು. ಈ ಮಾನಸಿಕ ಸ್ಪರ್ಧೆಯಲ್ಲಿ ವಿವಿಧ ಬಯಕೆಗಳ ಒಂದು ಆದ್ಯತೆ, ತಾರತಮ್ಯ ಅನುಕ್ರಮವಾಗಿ ಏರ್ಪಡುತ್ತ ಬರುವುದು. ಓದಬೇಕೆ, ಆಡಬೇಕೆ, ಕೆಲಸ ಮಾಡಬೇಕೆ, ಇನ್ನೆಲ್ಲಾದರೂ ವಿಹಾರಕ್ಕೆ ಹೊರಡಬೇಕೆ ಎಂಬ ವಿವಿಧಬಯಕೆಗಳೊಳಗೆ ಒಂದು ರೀತಿಯ ದ್ವಂದ್ವ ನಡೆದು ಏಕಕಾಲದಲ್ಲಿ ಎಲ್ಲವನ್ನು ಮಾಡಲಾಗುವುದಿಲ್ಲವಾದ ಕಾರಣ ಒಂದನ್ನು ಮಾತ್ರ ಇಟ್ಟುಕೊಂಡು ಉಳಿದವನ್ನು ತ್ಯಜಿಸುವುದು ನಮ್ಮೆಲ್ಲರ ಸಾಮಾನ್ಯ ಅನುಭವ. ವಿವಿಧ ಬಯಕೆಗಳ ಪೂರೈಕೆಗೆ ಮಿತಿಯುಳ್ಳ ಸಾಧನಗಳನ್ನು ಹಂಚುವಾಗ ಅನುಭೋಗಿ ಒಟ್ಟಿನಲ್ಲಿ ಅತ್ಯುನ್ನತ ತುಷ್ಟಿಗುಣ ಪಡೆಯುವ ಪ್ರಯತ್ನ ಮಾಡುತ್ತಾನೆ. ಈ ಪ್ರಯತ್ನ ಯಾವ ಮಾರ್ಗದಲ್ಲಿ ನಡೆಯುತ್ತದೆ ಎಂಬುದನ್ನು ಅಂಚಿನ ಸಮಾನ ತುಷ್ಟಿಗುಣ ನಿಯಮ (ಲಾ ಆಫ್ ಈಕ್ವಿ ಮಾರ್ಜಿನಲ್ ಯುಟಿಲಿಟಿ) ಸೂಚಿಸುವುದು. [೩]ಬಯಕೆಗಳಲ್ಲಿ ಕೆಲವು ವಿಕಲ್ಪವಾಗಿರುವುವು. ಇನ್ನು ಕೆಲವು ಅನುಪೂರಕವಾಗಿರುವುವು. ಇವು ಬಯಕೆಗಳ ಎರಡು ಮುಖ್ಯ ಹಾಗೂ ಸಾಮಾನ್ಯ ಲಕ್ಷಣಗಳಾಗಿವೆ. ಬಾಯಾರಿದಾಗ ನೀರು, ಷರಬತ್ತು, ಚಹ, ಇತ್ಯಾದಿ ಪಾನೀಯಗಳಲ್ಲಿ ಒಂದನ್ನು ಕುಡಿಯಬಹುದು. ಈ ವಿವಿಧಪಾನೀಯಗಳ ಬಯಕೆ ವಿಕಲ್ಪವಾದಂತಾಯಿತು. ಪೆನ್ನುಕೊಳ್ಳುವ ಬಯಕೆ ಉಂಟಾದರೆ ಶಾಯಿಯ ಬಯಕೆ ಪೆನ್ನಿನ ಬಯಕೆಗೆ ಪೂರಕವಾದಂತಾಯಿತು. ಅನೇಕ ಬಯಕೆಗಳ ಬಗ್ಗೆ ಈ ರೀತಿಯ ಲಕ್ಷಣಗಳಿರುವುದನ್ನು ಗಮನಿಸಿದರೆ ಅನುಭೋಗದಲ್ಲಿ ಅಡಗಿರುವ ಆಯ್ಕೆಯ ಸಮಸ್ಯೆಯ ಸ್ವರೂಪ ತಿಳಿಯುವುದು.ಅನುಭೋಗಿಯ_ಪ್ರಭುತ್ವ ಇದು ಪ್ರಮುಖವಾದ ವಿಷಯ.
ವರ್ಗೀಕರಣ
[ಬದಲಾಯಿಸಿ]ಅನುಭೋಗವನ್ನು ಕುರಿತು ಆರ್ಥಿಕಾಧ್ಯಯನದಲ್ಲಿ ಬಯಕೆಗಳನ್ನು ಆವಶ್ಯಕತೆಗಳು. ಸೌಕರ್ಯಗಳು, ಭೋಗವಿಲಾಸಗಳು ಎಂಬ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಆವಶ್ಯಕತೆಗಳನ್ನು
ಜೀವನಾಧಾರದ ಆವಶ್ಯಕತೆಗಳು
ಕಾರ್ಯದಕ್ಷತೆಯ ಅವಶ್ಯಕತೆಗಳು
ಸಾಂಪ್ರದಾಯಿಕ ಆವಶ್ಯಕತೆಗಳು ಎಂಬ ಮೂರು ಉಪವರ್ಗಗಳಾಗಿ ವಿಂಗಡಿಸಬಹುದು. ಒಂದು ಕನಿಷ್ಠ ಪ್ರಮಾಣದ ಆಹಾರ ಉಡುಪು ವಸತಿ ಇವು ಮನುಷ್ಯ ಜೀವಿಸುವುದಕ್ಕೆ ಆವಶ್ಯಕ ಎಂದು ಹೇಳಬಹುದಾದರೆ ಆತನ ಕಾರ್ಯದಕ್ಷತೆ ಹೆಚ್ಚಿಸಲು ಇದಕ್ಕೂ ಉತ್ತಮ ಮಟ್ಟದ ಆಹಾರ, ಉಡುಪು ವಸತಿಗಳು ಬೇಕೆಂದು ಹೇಳಬಹುದು. ಅನುಭೋಗಿಯ ಸ್ಥಾನಮಾನ, ಕಾರ್ಯಗೌರವ, ಬಿಡಲಾರದ ಹವ್ಯಾಸ-ಇವುಗಳಿಗೆ ಅನುಗುಣವಾಗಿ ಬರುವ ಆವಶ್ಯಬಯಕೆಗಳನ್ನು ಸಾಂಪ್ರದಾಯಿಕ ಆವಶ್ಯಕತೆಗಳೆಂದು ಹೇಳಬಹುದು.[೪]
ಜೀವನಮಟ್ಟ
[ಬದಲಾಯಿಸಿ]ಸುಖಜೀವನವನ್ನು ಬಯಸುವ ಮಾನವ ಕೇವಲ ಆವಶ್ಯಕತೆಗಳಿಂದಲೇ ತೃಪ್ತನಾಗುವುದಿಲ್ಲ. ವಿವಿಧ ಸೌಕರ್ಯಗಳನ್ನೂ ಭೋಗದ ಸರಕು ಸೇವೆಗಳನ್ನೂ ಅನುಭೋಗಿಸುವುದರ ಮೂಲಕ ತನ್ನ ಜೀವನಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಅಪೇಕ್ಷಿಸುತ್ತಾನೆ. ಒಬ್ಬಾತ ಅನುಭೋಗಿಸುವ ಎಲ್ಲ ವಿಧದ ಬಯಕೆಗಳೂ ಸೇರಿ ಆತನ ಜೀವನ ಮಟ್ಟ ಏರ್ಪಡುತ್ತದೆ. ಉನ್ನತಜೀವನಮಟ್ಟ ಆಧುನಿಕ ನಾಗರಿಕತೆಯ ಒಂದು ಚಿಹ್ನೆಯಾಗಿದೆ ಎಂದು ಹೇಳಬಹುದು. ಸಾಕಷ್ಟು ಹಾಗೂ ಪುಷ್ಟಿಕರವಾದ ಆಹಾರ, ಯೋಗ್ಯವಸತಿ, ಲಕ್ಷಣವಾದ ಉಡುಪು, ಆಧುನಿಕ ಭೋಗಸೌಕರ್ಯಗಳು, ಸಾಂಸ್ಕøತಿಕ ಜೀವನಕ್ಕೆ ಅವಶ್ಯವಾದ ವಿವಿಧ ಉದಾತ್ತಬಯಕೆಗಳು ಇವೆಲ್ಲವನ್ನೂ ಎಲ್ಲರ ಅನುಭೋಗಕ್ಕೆ ಒದಗಿಸುವುದರ ಮೂಲಕ ಮಾನವನ ಹಿತ ಕ್ಷೇಮಾಭ್ಯುದಯಗಳನ್ನು ಸಾಧಿಸುವುದೇ ಆಧುನಿಕ ಆರ್ಥಿಕವ್ಯವಸ್ಥೆಯ ಒಂದು ಹೆಗ್ಗುರಿಯಾಗಿದೆ. ದೇಶದ ರಕ್ಷಣಾ ಬಲದ ವಿಸ್ತರಣೆ ಹಾಗೂ ಬಾಹ್ಯಾಕಾಶವಿಜಯಗಳು ನಮ್ಮ ಇಂದಿನ ಆರ್ಥಿಕ ವ್ಯವಸ್ಥೆಯ ಪ್ರಮುಖ ಅಂಗಗಳಾಗಿರುವುದನ್ನು ನಾವು ನೆನಪು ಮಾಡಿಕೊಳ್ಳಬಹುದು.[೫]
ಜನ ಬಯಸುವ ಆಹಾರ, ಬಟ್ಟೆ, ವಸತಿಸೌಕರ್ಯ, ವಿಹಾರ, ವಿದ್ಯಾಭ್ಯಾಸ ಇತ್ಯಾದಿಗಳೆಲ್ಲವೂ ಆಯಾ ಜನಾಂಗದ ವಾಡಿಕೆ, ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳು, ಇತರ ವಾತಾವರಣ, ವೈಯಕ್ತಿಕ ಗುಣವಿಶೇಷಗಳು ಇಂಥ ಅನೇಕ ಅಂಶಗಳನ್ನು ಅವಲಂಬಿಸಿವೆ.
ಸರಕು ಮತ್ತು ಬೇಡಿಕೆ
[ಬದಲಾಯಿಸಿ]ಅನುಭೋಗಕ್ಕೆ ಬೇಕಾದ ಸರಕು ಸೇವೆಗಳು ಯಾವುವು? ಎಷ್ಟೆಷ್ಟು ಬೇಕು? ದೇಶದ ವಿವಿಧ ಭಾಗಗಳಲ್ಲಿ ಹೇಗೆ ಇವುಗಳ ಹಂಚಿಕೆ ವ್ಯವಸ್ಥೆ ಆಗಬೇಕು? ಇವು ಕೆಲವು ಮುಖ್ಯ ಪ್ರಶ್ನೆಗಳಾಗಿವೆ. ವೈಯಕ್ತಿಕ ಸ್ವಾತಂತ್ರ್ಯವಿರುವ ಆರ್ಥಿಕ ಪದ್ಧತಿಯಲ್ಲಿ ಬೆಲೆಯ ನಿಯಂತ್ರಣವೂ ಬೇಡಿಕೆ ನೀಡಿಕೆಗಳ ಪರಸ್ಪರ ಕ್ರಿಯೆಗಳೂ ಸೇರಿ ಈ ಪ್ರಶ್ನೆಗಳನ್ನೂ ತಾವಾಗಿಯೇ ಬಿಡಿಸುತ್ತ ಹೋಗುವುವು. ಈ ಪದ್ಧತಿಯಲ್ಲಿ ಯಾವ ಸರಕು ಬೇಕಾದರೂ ಕೊಳ್ಳಲು, ಅನುಭೋಗಿಸಲು ಜನರಿಗೆ ಸ್ವಾತಂತ್ರ್ಯ ಉಂಟು. ಅವರು ಬಯಸುವ ಸರಕು ಸೇವೆಗಳಿಗೆ ಅವರು ಬೆಲೆಕೊಡಲು ಸಿದ್ದರಾಗಿರುವುದರಿಂದ ಈ ಬೆಲೆಗಳು ವಿವಿಧಸರಕುಗಳಿಗಿರುವ ಬೇಡಿಕೆಯನ್ನು ಸೂಚಿಸುವುವು. ಒಂದು ದೃಷ್ಟಿಯಿಂದ ಅನುಭೋಗಿಗಳ ಬೇಡಿಕೆ ಮತ್ತು ಪದಾರ್ಥದ ಬೆಲೆಗಳು ಇವು ವಿವಿಧ ಸರಕುಗಳ ವಿಷಯಗಳಲ್ಲಿ ಗಿರಾಕಿಗಳಿಗೆ ಇರುವ ಬಯಕೆಯ ತೀವ್ರತೆಯನ್ನು ಪ್ರತಿಬಿಂಬಿಸುತ್ತವೆ. ಈ ಆಧಾರದ ಮೇಲೆ ಉತ್ಪಾದಕರು ಸರಕು ಸೇವೆಗಳ ನೀಡಿಕೆಯ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವರು. ಯಾವ ಯಾವ ಸರಕುಗಳಿಗೆ ಹೆಚ್ಚು ಲಾಭದಯಕವೆಂದು ತೋರುವ ಬೇಡಿಕೆ ಬೆಲೆಗಳಿರುವುವೋ ಅಂಥ ಸರಕುಗಳ ತಯಾರಿಕೆಗೆ ಉತ್ಪಾದಕರು ಆದ್ಯತೆ ನೀಡುವರು. ಅಂದರೆ ಬೆಲೆಗಳ ಮೂಲಕ ಸೂಚಕವಾಗುವ ಅನುಭೋಗಿಗಳ ಬೇಡಿಕೆಯ ತೀವ್ರತೆಯೇ ಮುಖ್ಯವಾಗಿ ಉತ್ಪಾದನೆಯನ್ನು ರೂಪುಗೊಳಿಸುವುದೆಂದು ಹೇಳಬಹುದು. ಆದುದರಿಂದಲೇ ಈ ವೈಯಕ್ತಿಕ ಸ್ವಾತಂತ್ತ್ಯಪದ್ಧತಿಯಲ್ಲಿ ಅನುಭೋಗಿಯೇ ರಾಜ ಎಂಬ ನುಡಿ ಪ್ರಚುರವಾಗಿದೆ. ಆಯ್ಕೆ ಮಾಡಲು ಇರುವ ಸ್ವಾತಂತ್ರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಅನುಭೋಗಿಗಳಿಗೆ ಕೆಲವು ವೇಳೆ ಸಾಧ್ಯವಾಗದೆ ಇರಬಹುದೆಂಬ ಅಂಶವನ್ನು ಇಲ್ಲಿ ಗಮನಿಸಬೇಕು. ಅವರು ಭ್ರಮೆಗೊಳಿಸುವ ಜಾಹೀರಾತುಗಳಿಗೆ ಮಾರು ಹೋಗಬಹುದು. ಅಥವಾ ಸಾಕಷ್ಟು ತಿಳಿವಳಿಕೆ ಇಲ್ಲದೆ ಅತ್ಯುತ್ತಮ ಸರಕುಗಳನ್ನು ಕೊಳ್ಳದೆ ಇರಬಹುದು. ಆದರೆ ಕಮ್ಯೂನಿಸಂ, ಸಮಾಜವಾದಪದ್ಧತಿ ಮತ್ತು ಇತರ ಆರ್ಥಿಕ ಯೋಜನಾಪದ್ಧತಿಗಳಲ್ಲಿ ಅರ್ಥಿಕ ಸ್ವಾತಂತ್ರ್ಯವೂ ಇದರ ಅಂಗವಾದ ಅನುಭೋಗಸ್ವಾತಂತ್ರ್ಯವೂ ಆವಶ್ಯಕವಾಗಿಯೇ ಮಿತಿಗೊಳ್ಳುವುವು. ಆರ್ಥಿಕಸ್ವಾತಂತ್ರ್ಯ ಚರ್ಚೆಗೆ ಒಳಗಾಗಿರುವ ವಿಷಯ ಎಂಬುದನ್ನು ಇಲ್ಲಿ ಗಮನಿಸಬಹುದು.[೬]
ಸಮಾಜಹಿತ
[ಬದಲಾಯಿಸಿ]ಇಂಥ ಆರ್ಥಿಕಪದ್ಧತಿಗಳಲ್ಲಿ ಯೋಜನಾಧಿಕಾರಿಗಳು ಸಮಾಜಹಿತ, ಸಾರ್ವತ್ರಿಕ ಹಿತ ಇವುಗಳ ದೃಷ್ಟಿಯಿಂದ ರೂಪಿಸಿರುವ ವಿವಿಧ ರೀತಿಯ ನಿಯಂತ್ರಣಗಳಲ್ಲಿ ಅನುಭೋಗನಿಯಂತ್ರಣವು ಒಂದು. ಇಂದು ಬಂಡವಾಳಶಾಹಿ ಎಂದು ಕರೆಯಲಾಗುತ್ತಿರುವ ಹಲವು ರಾಷ್ಟ್ರಗಳಲ್ಲಿ ಮತ್ತು ಸಮಾಜವಾದಿ ರಾಷ್ಟ್ರಗಳೆಲ್ಲದರಲ್ಲಿಯೂ ಸಾಮಾನ್ಯವಾಗಿ ಒಂದಲ್ಲ ಒಂದು ರೀತಿಯ ಆರ್ಥಿಕಯೋಜನೆಯನ್ನು ಅನುಸರಿಸಲಾಗುತ್ತಿದೆ. ಸಮಾಜವಾದಿ ರಾಷ್ಟ್ರಗಳಲ್ಲಿರುವ ಉತ್ಕಟರೂಪದ ಕೇಂದ್ರೀಯ ಆರ್ಥಿಕಯೋಜನಾಪದ್ಧತಿಯಲ್ಲಿ ಜನರ ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯ ಬಂಡವಾಳಶಾಹಿ ರಾಷ್ಟ್ರಗಳ ಆರ್ಥಿಕಯೋಜನಾಪದ್ಧತಿಯಲ್ಲಿರುವುದಕ್ಕಿಂತ ಹೆಚ್ಚು ಮಿತಿಗೊಂಡಿದೆ ಎಂದು ಹೇಳಬಹುದು. ವ್ಯಕ್ತಿ ಸ್ವಾತಂತ್ರ್ಯದ ಸಮಸ್ಯೆಯ ಚರ್ಚೆ ಇಲ್ಲಿ ಅಪ್ರಕೃತ. ಆದರೆ ಆರ್ಥಿಕಾಭಿವೃದ್ಧಿ, ಆರ್ಥಿಕ ಸಮತೂಕ, ಸಾಮಾಜಿಕ ನ್ಯಾಯ ಇಂಥ ಇತರ ಧ್ಯೇಯಗಳನ್ನು ಸಾಧಿಸುವುದರ ಜೊತೆಗೆ ಆದಷ್ಟು ಅನುಭೋಗ ಸ್ವಾತಂತ್ರ್ಯವನ್ನು ದೊರಕಿಸಿ ಕಾಪಾಡಿಕೊಂಡು ಬರುವ ಆರ್ಥಿಕಪದ್ಧತಿಯನ್ನು ಉದಾತ್ತ ಆರ್ಥಿಕಪದ್ಧತಿ ಎಂದು ಹೇಳಬಹುದು.
ಆರ್ಥಿಕತೆಯ ಸ್ಥಿಮಿತಯುತ ಮುನ್ನಡೆಯಲ್ಲಿ ಅನುಭೋಗದ ಪಾತ್ರ ಮುಖ್ಯವಾದುದು. ಉತ್ಪಾದನೆ ಹಾಗೂ ಉದ್ಯೋಗಮಟ್ಟಗಳು ಇತರ ಕೆಲವು ನಿರ್ಣಯಾಂಶಗಳ ಜೊತೆಗೆ ಅನುಭೋಗಮಟ್ಟ ಹಾಗೂ ಅನುಭೋಗಮಾದರಿಯನ್ನೂ ಅವಲಂಬಿಸಿರುವುವು. ಅನುಭೋಗ ಮತ್ತು ಪರಿಣಾಮಕಾರಿ ಬೇಡಿಕೆಮಟ್ಟ ಸಾಕಷ್ಟು ಉನ್ನತಸ್ಥಿತಿಯಲ್ಲಿದ್ದರೆ ಉದ್ಯೋಗ ಮತ್ತು ಉತ್ಪನ್ನಮಟ್ಟಗಳೂ ತೃಪ್ತಿಕರವಾಗಿರುವುವು. ಆದುದರಿಂದ ಜನಾಂಗದ ಅನುಭೋಗ ಪ್ರವೃತ್ತಿ ಆರ್ಥಿಕತೆಯ ಗತಿಯಲ್ಲಿ ಮುಖ್ಯಪ್ರಭಾವ ಹೊಂದಿರುವ ಅಂಶವಾಗಿದೆ.
ಉಳಿತಾಯ ಮತ್ತು ಅನುಭೋಗ
[ಬದಲಾಯಿಸಿ]ಒಟ್ಟು ವರಮಾನದಲ್ಲಿ ಒಂದು ಭಾಗ ಅನುಭೋಗಕ್ಕೂ ಉಳಿದ ಭಾಗ ಉಳಿತಾಯದ ಮೂಲಕ ಬಂಡವಾಳಕ್ಕೂ ವ್ಯಯವಾಗುವುದೆಂದು ಊಹಿಸಿದರೆ, ಇವೆರಡರಲ್ಲಿ ವರಮಾನ ಯಾವ ಪ್ರಮಾಣದಲ್ಲಿ ಹಂಚಿಕೆಯಾಗುವುದು ಎಂಬುದು ಆರ್ಥಿಕತೆಯ ಸ್ಥಿಮಿತಯುತ ಬೆಳೆವಣಿಗೆಗೆ ಸಂಬಂಧಿಸಿದ ಒಂದು ಮುಖ್ಯ ವಿಷಯವಾಗಿದೆ. ಅನುಭೋಗವೆಚ್ಚ ಗಿರಾಕಿಗಳನ್ನು ಹೆಚ್ಚಿಸುವುದರಿಂದ ಉತ್ಪನ್ನಕ್ಕೆ ಪ್ರೇರಕವಾಗುವುದು. ವರಮಾನದ ಉಳಿತಾಯಭಾಗ ಬಂಡವಾಳ ಸಂಚಯನಕ್ಕೆ ಸಹಾಯಕವಾಗುವುದಲ್ಲದೆ ಈ ಮೂಲಕ ಒಂದು ನಿರ್ದಿಷ್ಟ ಉತ್ಪನ್ನಮಟ್ಟವನ್ನು ಸಾಧಿಸಲು ಅವಶ್ಯಕ. ಅಂದಮೇಲೆ, ಅನುಭೋಗ ಉಳಿತಾಯ ಇವೆರಡರಲ್ಲೂ ಒಂದು ಸಮತೂಕವಿರುವಂತೆ ವರಮಾನ ಹಂಚಿಕೆಯಾಗಬೇಕು. ಇದು ಜನರ ಅನುಭೋಗಪ್ರವೃತ್ತಿ ಮತ್ತು ಉಳಿಸುವ ಪ್ರವೃತ್ತಿಗಳನ್ನು ಅವಲಂಬಿಸಿದೆ. ವರಮಾನ ಮಟ್ಟಕ್ಕೂ ಈ ವರಮಾನದಿಂದ ಮಾಡಲಾಗುವ ಅನುಭೋಗವೆಚ್ಚದ ಮಟ್ಟಕ್ಕೂ ಇರುವ ಅನುಚರಿ (ಫಂಕ್ಷನಲ್) ಸಂಬಂಧವೇ ಅನುಭೋಗಪ್ರವೃತ್ತಿ. ಇದು ಕೆಲವು ವಸ್ತುನಿಷ್ಠ ಅಥವಾ ವಾಸ್ತವಿಕಾಂಶಗಳಿಂದಲೂ ಕೆಲವು ವ್ಯಕ್ತಿನಿಷ್ಠ ಅಥವಾ ಮಾನಸಿಕಾಂಶಗಳಿಂದಲೂ ನಿರ್ಣಯವಾಗುವುದು. ಸಹಜ ವರಮಾನ, ನಿವ್ವಳ ವರಮಾನ, ವಟ್ಟಾದರಗಳು, ಸರಕಾರದ ಖಜಾನೆನೀತಿ, ಇವುಗಳಲ್ಲಿ ಸಂಭವಿಸುವ ಬದಲಾವಣೆಗಳೂ ಇಂದಿನ ಹಾಗೂ ಮುಂದಿನ ವರಮಾನಗಳ ಸಂಬಂಧಗಳ ಬಗ್ಗೆ ಇರುವ ನಿರೀಕ್ಷೆಗಳ ಬದಲಾವಣೆಯೂ ಆಸ್ತಿಪಾಸ್ತಿಗಳ ಬೆಲೆಯಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಬದಲಾವಣೆಯೂ ಅನುಭೋಗ ಪ್ರವೃತ್ತಿಯ ಮೇಲೆ ಪ್ರಭಾವಬೀರುವ ವಾಸ್ತವಾಂಶಗಳು, ಮುಂಜಾಗ್ರತೆ, ಭವಿಷ್ಯದೃಷ್ಟಿ, ತುಲನಾಪ್ರವೃತ್ತಿ, ಶ್ರೀಮಂತಿಕೆಯ ಉತ್ತಮಸ್ಥಿತಿಯನ್ನು ಹೊಂದುವ ಅಭಿಲಾಷೆ, ಸ್ವಾತಂತ್ರ್ಯ, ಉದ್ಯಮಶೀಲತೆ, ಹೆಮ್ಮೆ ಮತ್ತು ಜಿಪುಣತೆ ಇವು ವರಮಾನವನ್ನು ಅನುಭೋಗಿಸದೆ ಉಳಿಸಲು ಕಾರಣವಾಗುವ ಮಾನಸಿಕ ಪ್ರೇರಕಾಂಶಗಳು, ಅಂದ ಮೇಲೆ, ಇವುಗಳ ವಿರೋಧಗುಣಗಳಾದ ಇಂದು ಸುಖಪಡಬೇಕೆಂಬ ಆಸೆ, ದೂರದೃಷ್ಟಿ ಇಲ್ಲದಿರುವುದು, ಧಾರಾಳತನ, ತಪ್ಪು ಎಣಿಕೆ, ಆಡಂಬರ ಮತ್ತು ದುಂದುಗಾರಿಕೆ-ಇವು ಅನುಭೋಗ ಹೆಚ್ಚಿಸುವ ಮಾನಸಿಕ ಪ್ರೇರಕಾಂಶಗಳು.[೭]
ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳ ಸಮಸ್ಯೆ ಅನುಭೋಗಪ್ರವೃತ್ತಿಯನ್ನು ತಡೆಹಿಡಿಯುವುದಾದರೆ, ಮುಂದುವರಿದಿರುವ ರಾಷ್ಟ್ರಗಳಲ್ಲಿ ಅನುಭೋಗಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕಾದ ಸಂದರ್ಭವೇ ಹೆಚ್ಚು. ಉತ್ಪನ್ನ ಮತ್ತು ಉದ್ಯೋಗಮಟ್ಟಗಳು ಸಾಕಷ್ಟು ಉನ್ನತಮಟ್ಟದಲ್ಲಿರಬೇಕಾದರೆ ಅನುಭೋಗಿಗಳ ಬೇಡಿಕೆ ಅವುಗಳಿಗೆ ಅನುಗುಣವಾದ ಪ್ರಮಾಣದಲ್ಲಿರಬೇಕಾದುದು ಅವಶ್ಯಕ. ಈ ಪರಿಣಾಮಕಾರಿ ಬೇಡಿಕೆ ಇಳಿವರಿಯಾದಾಗ ಅನುಭೋಗಪ್ರವೃತ್ತಿಯನ್ನು ಉತ್ತೇಜಿಸುವ ಸಮಸ್ಯೆ ಏಳುತ್ತದೆ. ಹೀಗೆ ಅನುಭೋಗಪ್ರವೃತ್ತಿ ಆರ್ಥಿಕಾಭಿವೃದ್ಧಿಯಲ್ಲೂ ಆರ್ಥಿಕ ಸ್ಥಿಮಿತೆಯಲ್ಲೂ ಪರಿಗಣಿಸಬೇಕಾದ ಒಂದು ಮುಖ್ಯ ಅಂಶವಾಗಿದೆ.
ಉತ್ಪಾದನಾವಿಧಾನ ಮತ್ತು ಅನುಭೋಗ
[ಬದಲಾಯಿಸಿ]ಅರ್ಥಶಾಸ್ತ್ರದಲ್ಲಿ ಅನುಭೋಗದ ಪ್ರಾಮುಖ್ಯವನ್ನು ಇನ್ನೊಂದು ದೃಷ್ಟಿಯಿಂದ ವಿವರಿಸಬಹುದು. ಉತ್ಪಾದನಾವಿಧಾನ ಸುಗಮವಾಗಿ ಏರುಪೇರುಗಳಿಲ್ಲದೆ ಮುಂದುವರಿಯಬೇಕಾದರೆ ಉತ್ಪಾದನೆಯಾಗುವ ಸರಕುಗಳು ಅವುಗಳ ಅನುಭೂೀಗದ ಕಾಲಕ್ರಮಕ್ಕೆ ಸರಿಯಾಗಿ ಹೊಂದಿಕೊಳ್ಳಬೇಕು. ಸರಕುಗಳ ಅನುಭೋಗದ ಕಾಲಕ್ರಮ ಮತ್ತು ಕಾಲಾಂತರಗಳು ಏಕರೀತಿ ಇರುವುದಿಲ್ಲ. ಈ ಬಗ್ಗೆ ತುಂಬ ವ್ಯತ್ಯಾಸಗಳೇ ಎದ್ದು ಕಾಣುವುವು. ಸರಕುಗಳನ್ನು ಅನುಭೋಗಿಯ ಸರಕು ಉತ್ಪಾದಕರ ಸರಕು ಎಂದು ಎರಡು ಭಾಗವಾಗಿ ವಿಂಗಡಿಸಬಹುದು. ಉತ್ಪಾದನಾ ಹಂತಗಳಲ್ಲಿ ಉಪಯೋಗಿಸುವ ಸರಕುಗಳನ್ನು ಉತ್ಪಾದಕರ ಸರಕುಗಳೆಂದೂ ಇತರ ಸರಕುಗಳನ್ನು ಅಂದರೆ ಜನರು ಅವರ ವೈಯಕ್ತಿಕ ಬಯಕೆಗಳ ತೃಪ್ತಿಗಾಗಿ ಉಪಯೋಗಿಸುವ ಸರಕುಗಳೆಲ್ಲವನ್ನೂ ಅನುಭೋಗಿಯ ಸರಕುಗಳೆಂದೂ ಹೇಳಬಹುದು. ಅನುಭೋಗಿಯ ಸರಕುಗಳು ಎರಡು ವಿಧ
ಕೇವಲ ಒಂದು ಸಲ ಉಪಯೋಗಿಸಬಲ್ಲ ಸರಕುಗಳು, ಸಾಮಾನ್ಯವಾಗಿ ತಿನ್ನುವ, ಕುಡಿಯುವ ಪದಾರ್ಥಗಳು ಈ ಗುಂಪಿಗೆ ಸೇರಿವೆ.
ಹೆಚ್ಚು ಕಾಲ ಬಳಸಬಹುದಾದ ಅಂದರೆ ಬಾಳಿಕೆ ಬರುವ ಸರಕುಗಳು, ಉಡುಪು, ಮನೆ ವಾಹನಗಳು, ಪುಸ್ತಕಗಳು ಇತ್ಯಾದಿ ಸರಕುಗಳು ಈ ಗುಂಪಿಗೆ ಸೇರಿವೆ. ಮೊದಲನೆಯ ಗುಂಪಿನ ಸರಕುಗಳ ಅನುಭೋಗ ಕಾಲಾಂತರದಲ್ಲಿ ಸಾಮಾನ್ಯವಾಗಿ ಒಂದು ಕ್ರಮವಿರುವುದು. ಆಹಾರಸೇವನೆ ಸಾಮಾನ್ಯವಾಗಿ ಒಂದು ಕಾಲಾವಧಿಯ ಪ್ರಕಾರ ನಡೆಯುವ ಕ್ರಿಯೆಯಾದುದರಿಂದ ಇದಕ್ಕೆ ಸಂಬಂಧಪಟ್ಟ ಸರಕು ಸೇವೆಗಳ ಬೇಡಿಕೆಯ ಪ್ರಮಾಣ ಹಾಗೂ ಕಾಲಕ್ರಮವನ್ನು ಸುಲಭವಾಗಿ ಅಂದಾಜು ಮಾಡಬಹುದು. ಎರಡನೆಯ ಗುಂಪಿಗೆ ಸೇರಿದ ಸರಕುಗಳ ಬಗ್ಗೆ ಇಂಥ ಅಂದಾಜು ಹಾಕುವುದು ಹೆಚ್ಚು ಕಷ್ಟ. ಆದರೆ, ಉತ್ಪಾದನಾ ವಿಧಾನದ ಸ್ಥಿಮಿತಕ್ಕೆ ಸಾಧನೆಯ ದೃಷ್ಟಿಯಿಂದ ಈ ಎಲ್ಲ ವಿಧದ ಅನುಭೋಗ ಸರಕುಗಳ ಬೇಡಿಕೆ ಪ್ರತೀಕ್ಷೆಯ ವಿವರವಾದ ಪರಿಶೀಲನೆ ಅಗತ್ಯ.
ಉಲ್ಲೇಖಗಳು
[ಬದಲಾಯಿಸಿ]- ↑ https://www.britannica.com/topic/consumption
- ↑ https://www.eia.gov/consumption/
- ↑ http://www.yourarticlelibrary.com/economics/principle-of-equi-marginal-utility-explained-with-diagram/38944
- ↑ https://corporatefinanceinstitute.com/resources/knowledge/economics/consumption/
- ↑ http://siteresources.worldbank.org/INTPAH/Resources/Publications/Quantitative-Techniques/health_eq_tn04.pdf
- ↑ https://2012books.lardbucket.org/books/policy-and-theory-of-international-finance/s11-03-consumption-demand.html
- ↑ https://www.slideshare.net/hannaatinyao5/savings-and-consumption