ಅನುಭೋಗಿಯ ಪ್ರಭುತ್ವ
ಅನುಭೋಗಿಯ ಪ್ರಭುತ್ವ ಎಂದರೆ ಸರಕು ಸೇವೆಗಳ ಬೆಲೆ, ಪ್ರಮಾಣ, ಬಳಕೆಗಳ ವಿಷಯದಲ್ಲಿ ಉತ್ಪಾದಕನಿಗಿಂತ ಅನುಭೋಗಿಯದೇ ಕೊನೆಯ ಮಾತು ಎಂಬ ವಾದ (ಕನ್‍ಸ್ಯೂಮರ್ಸ್ ಸಾವರ್ನಿಟಿ).
ಹಿನ್ನೆಲೆ
[ಬದಲಾಯಿಸಿ]ಅನೇಕ ವ್ಯಕ್ತಿಗಳು ಉತ್ಪಾದಕರಾಗಿದ್ದು ತಮ್ಮ ಭೌತಿಕ ಮತ್ತು ಮಾನಸಿಕಶಕ್ತಿಯನ್ನು ಉಪಯೋಗಿಸಿ ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವುದರ ಮೂಲಕ ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಜವಾಬ್ದಾರಿ ಹೊರುತ್ತಾರಾದರೂ ಯಾವ ರೀತಿಯ ಸರಕು ಮತ್ತು ಸೇವೆಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕೆಂಬುದನ್ನು ಅನುಭೋಗಿಗಳೇ ನಿರ್ಧರಿಸಬೇಕಾಗುತ್ತದೆ. ಎಲ್ಲರೂ ಅನುಭೋಗಿಗಳೇ ಆಗಿರುವುದರಿಂದ ವಿವಿಧ ಆರ್ಥಿಕವ್ಯವಸ್ಥೆಗಳಲ್ಲಿ ಅನುಭೋಗಿಯ ಸಾರ್ವಭೌಮತ್ವದ ಇತಿಮಿತಿಗಳೇನೆಂಬುದನ್ನು ಪರಿಶೀಲಿಸಬೇಕು.[೧]
ಬಂಡವಾಳ ವ್ಯವಸ್ಥೆಯಲ್ಲಿ ಅನುಭೋಗಿಯ ಪ್ರಭುತ್ವ
[ಬದಲಾಯಿಸಿ]ಎಲ್ಲ ಆರ್ಥಿಕವ್ಯವಸ್ಥೆಯಲ್ಲೂ ಸರಕುಗಳನ್ನುತ್ಪಾದಿಸಿ ಬೇಡಿಕೆಗಳನ್ನು ತೃಪ್ತಿಗೊಳಿಸುವ ದೃಷ್ಟಿಯಿಂದ ಮಿತವಾದ ಸಂಪತ್ತನ್ನು ಹೆಚ್ಚು ಫಲದಾಯಕವಾಗಿ ವಿತರಣೆ ಮಾಡುವುದು ಅತ್ಯಾವಶ್ಯಕ. ಬಂಡವಾಳಶಾಹಿಯಲ್ಲಿ ಈ ಸಂಪತ್ತಿನ ವಿತರಣೆ ಅನುಭೋಗಿಯ ಬೇಡಿಕೆಯ ಪ್ರಭಾವಕ್ಕೊಳಗಾಗಿದೆ. ಆದ್ದರಿಂದ ಈ ವಿಧದ ಆರ್ಥಿಕವ್ಯವಸ್ಥೆಯಲ್ಲಿ ಅನುಭೋಗಿಯನ್ನು ಸಾರ್ವಭೌಮನಿಗೆ ಹೋಲಿಸಬಹುದು. ಎಲ್ಲ ಉತ್ಪಾದನಾಸಮುದಾಯ ಆತನ ಸಾರ್ವಭೌಮತ್ವದ ಮಾರ್ಗದರ್ಶಿತ್ವದಲ್ಲಿ ಕಾರ್ಯಮಾಡುವುದೆಂದೂ ಹೇಳಬಹುದು. ನೋಡಿ ಅನುಭೋಗಿಯ_ಹೆಚ್ಚಳ
ಅನಿರ್ಬಂಧಿತ ಮಾರುಕಟ್ಟೆ ಇರುವ ಆರ್ಥಿಕ ವ್ಯವಸ್ಥೆ ಬಂಡವಾಳಶಾಹಿಯ ಸರ್ವಗುಣಗಳನ್ನೂ ಪ್ರದರ್ಶಿಸುತ್ರದೆ. ಈ ಆರ್ಥಿಕವ್ಯವಸ್ಥೆಯಲ್ಲಿ ಮಾರುಕಟ್ಟೆ ಕೇಂದ್ರಯೋಜನಾಸಂಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲ. ಈ ವ್ಯವಸ್ಥೆಯಲ್ಲಿ ಜನ ಕೆಲಸದ ವಿಷಯದಲ್ಲಾಗಲಿ ಉತ್ಪಾದನೆ ಅಥವಾ ಬಳಕೆಯ ವಿಷಯದಲ್ಲಾಗಲಿ ಸರ್ಕಾರದ ನಿರ್ದೇಶನಕ್ಕೆ ಒಳಪಟ್ಟಿರದೆ ಕೆಲಸವನ್ನು ಆರಿಸಿಕೊಳ್ಳುವ ತಮ್ಮ ಆದಾಯವನ್ನು ಸರಕುಗಳ ಮೇಲೆ ಸ್ವೇಚ್ಛೆಯಾಗಿ ವೆಚ್ಚ ಮಾಡುವ ಮತ್ತು ಉಳಿಸುವ ಸ್ವಾತಂತ್ರ್ಯವನ್ನು ಪಡೆದಿರುತ್ತಾರೆ.[೨]
ಬೇಡಿಕೆ ಮತ್ತು ಅನುಭೋಗಿಯ ಪ್ರಭುತ್ವ
[ಬದಲಾಯಿಸಿ]ಕೇಂದ್ರಸಮಿತಿ ರೂಪಿಸಿದ ಯೋಜನೆ ಇಲ್ಲದಿರುವಾಗ ಉತ್ಪಾದನೆ ಅನುಭೋಗಿಯ ಬೇಡಿಕೆಯ ಪ್ರಭಾವಕ್ಕೊಳಗಾಗಿರುತ್ತದೆ. ಕೇವಲ ಒಬ್ಬ ಅನುಭೋಗಿಯ ಬೇಡಿಕೆ ಆರ್ಥಿಕವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡದಿರಬಹುದು. ಆದರೆ ಎಲ್ಲ ಅನುಭೋಗಿಗಳೂ ಸೇರಿದರೆ ಅವರೆಲ್ಲರ ಒಟ್ಟು ಬೇಡಿಕೆ ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ನಿಯಂತ್ರಿಸುವ ದಿಸೆಯಲ್ಲಿ ಬಹು ಪರಿಣಾಮಕಾರಿಯಾಗಿರುತ್ತದೆ. ಅನುಭೋಗಿಯ ಬೇಡಿಕೆ ಈ ಅಂಶಗಳನ್ನು ಅವಲಂಬಿಸಿರುತ್ತದೆ.
ಅನುಭೋಗಿ ಕೊಳ್ಳುವ ಸರಕು ಮತ್ತು ಸೇವೆಗಳ ಬೆಲೆಗಳು.
ಆತನು ಕೊಳ್ಳಬಹುದಾದ ಇತರ ಸರಕು ಮತ್ತು ಸೇವೆಗಳ ಬೆಲೆಗಳು.
ಆತನ ವೈಯಕ್ತಿಕ ವೈಶಿಷ್ಟ್ಯಗಳು.
ಆತನ ವೈಯಕ್ತಿಕ ಆದಾಯ
ಬಳಕೆ ವಸ್ತುಗಳ ಮೇಲೆ ವೆಚ್ಚಮಾಡುವ ಆದಾಯ.
ಬಂಡವಾಳಶಾಹಿಯಲ್ಲಿ ಅನುಭೋಗಿ ಹೊಂದಬಹುದಾದ ಸ್ವಾತಂತ್ರ್ಯವನ್ನು ಆತನ ಸಾರ್ವಭೌಮತ್ವವೆಂದು ಉಲ್ಲೇಖಿಸುವಾಗ ಇದರ ಬಗ್ಗೆ ಸ್ಪಷ್ಟ ಅಭಿಪ್ರಾಯವಿರುವುದು ಅವಶ್ಯಕ. ಕೇಂದ್ರಯೋಜಿತವ್ಯವಸ್ಥೆಯಲ್ಲಿಯೂ ವ್ಯಕ್ತಿಗಳು ಆದಾಯವನ್ನು ಪಡೆದು ತಮಗೆ ಬೇಕಾದವುಗಳ ಮೇಲೆ ವೆಚ್ಚ ಮಾಡುವ ಸ್ವಾತಂತ್ರ್ಯವನ್ನು ಹೊಂದಿರಬಹುದು. ಆದರೆ ಅನುಭೋಗಿಯ ಬೇಡಿಕೆಯಲ್ಲಿರುವ ಸ್ವಾತಂತ್ರ್ಯ ಉತ್ಪಾದನೆಯನ್ನು ನಿರ್ದೇಶಿಸುವುದಿಲ್ಲವಾದ ಕಾರಣ ಈ ಸ್ವಾತಂತ್ರ್ಯವನ್ನು ಆತನ ಸಾರ್ವಭೌಮತ್ವಕ್ಕೆ ಹೋಲಿಸಲಾಗುವುದಿಲ್ಲ. ಇದರಿಂದಾಗಿ, ಅನುಭೋಗಿಯ ಸಾರ್ವಭೌಮತ್ವವನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಾತ್ರ ಪೂರ್ಣವಾಗಿ ಕಾಣಬಹುದು.[೩]
ಸಮಾಜವಾದಿ ವ್ಯವಸ್ಥೆಯಲ್ಲಿ ಅನುಭೋಗಿಯ ಪ್ರಭುತ್ವ; ಇಂಥ ವ್ಯವಸ್ಥೆಯಲ್ಲಿ ಅನುಭೋಗಿ ತನ್ನ ಸಾರ್ವಭೌಮತ್ವನ್ನು ಕಳೆದುಕೊಳ್ಳುವನು. ಉತ್ಪಾದನಾ ಸಮಿತಿಯೆ ಬಳಕೆಯನ್ನು ಯೋಜಿಸುವುದು. ಕೇಂದ್ರ ಯೋಜನಾಸಂಸ್ಥೆಯಿಂದ ಬೆಲೆಗಳು ನಿರ್ಧರಿಸಲ್ಪಟ್ಟರೂ ಅವು ತಮ್ಮ ವಿಶಿಷ್ಟಪಾತ್ರವನ್ನು ನಿರ್ವಹಿಸಲಾರವು.
ಆದರೆ ಯೋಜಿತ ಆರ್ಥಿಕವ್ಯವಸ್ಥೆಯ ಚಟುವಟಿಕೆಗಳೂ ಬೆಲೆಗಳಿಂದ ಪ್ರಭಾವಿತವಾಗುವುದೆಂದು ಕಂಡುಬರುತ್ತದೆ. ಅನುಭೋಗಿಯ ಸ್ವಾತಂತ್ತ್ಯವನ್ನು ಕಸಿದುಕೊಳ್ಳುವುದರಿಂದ ಬೆಲೆಗಳ ವಿಶಿಷ್ಟಪಾತ್ರವನ್ನು ಅಲ್ಲಗಳೆದಂತಾಗುವುದಿಲ್ಲ. ಈ ಅಭಿಪ್ರಾಯದ ಪ್ರಾಮುಖ್ಯವನ್ನು ಯೋಜನಾ ಆರ್ಥಿಕವ್ಯವಸ್ಥೆಯ ಉದಾಹರಣೆಯಿಂದ ಸ್ಪಷ್ಟಪಡಿಸಬಹುದು. ಯೋಜನೆಯನ್ನು ಉತ್ತೇಜಿತ ಯೋಜನೆ ಮತ್ತು ನಿರ್ದೇಶಿತ ಯೋಜನೆ ಎಂದು ವಿಂಗಡಿಸಬಹುದು. ಉತ್ತೇಜಿತ ಯೋಜನೆಯಲ್ಲಿ ಮಾರುಕಟ್ಟೆಯ ಪ್ರಭಾವವಿದ್ದು ಅದರ ಚಟುವಟಿಕೆಗಳು ಸಮಾಜದ ಧ್ಯೇಯಗಳಿಗೆ ಸರಿಹೊಂದುವ ಹಾಗೆ ಯೋಜನಾಸಂಸ್ಥೆ ನಿಯಂತ್ರಿಸಬಹುದು. ಕೇಂದ್ರ ಯೋಜನಾ ಸಂಸ್ಥೆ ಅನುಭೋಗಿಗಳಿಗೆ ಮತ್ತು ಉತ್ಪಾದಕರಿಗೆ ಆರ್ಥಿಕ ಹಾಗೂ ಇತರ ಉತ್ತೇಜನಗಳನ್ನಿತ್ತು ಸಮಾಜದ ಧ್ಯೇಯಗಳನ್ನು ಸಾಧಿಸುವುದು. ಇದರಿಂದಾಗಿ ಉತ್ತೇಜಿತ ಯೋಜನೆಯಲ್ಲಿ ಮಾರುಕಟ್ಟೆಯ ಪ್ರಾಮುಖ್ಯ ಸ್ವಲ್ಪವಾಗಿ ಕಂಡುಬಂದು ಅನುಭೋಗಿ ಸ್ವಾತಂತ್ರ್ಯವನ್ನು ಪಡೆಯುತ್ತಾನೆ. ಈ ಸ್ವಾತಂತ್ರ್ಯದ ಪರಿಣಾಮಗಳನ್ನು ಉತ್ಪಾದನಾರಂಗಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಆದರೆ ನಿರ್ದೇಶಿತ ಯೋಜನೆಯನ್ನು ಪರಿಶೀಲಿಸುವಾಗ ಸರ್ಕಾರದ ಪರಮಾಧಿಕಾರವನ್ನು ಕಾಣುತ್ತೇವೆ. ಸರ್ಕಾರದಿಂದ ಮಾತ್ರ ದೇಶದ ಆರ್ಥಿಕಚಟುವಟಿಕೆಗಳು ನಿಯಂತ್ರಿಸಲ್ಪಡುತ್ತವೆ. ಪರಿಣಾಮವಾಗಿ ಅನುಭೋಗಿಯ ಸಾರ್ವಭೌಮತ್ವ ನಶಿಸಿಹೋಗುತ್ತದೆ.
ಅನುಭೋಗಿಯ ಪ್ರಭುತ್ವದ ಮಿತಿಗಳು
[ಬದಲಾಯಿಸಿ]ಮೇಲೆ ಹೇಳಿರುವ ರೀತಿಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅನುಭೋಗಿಯ ಸ್ವಾತಂತ್ರ್ಯವನ್ನು ಸಾರ್ವಭೌಮತ್ವಕ್ಕೆ ಹೋಲಿಸಬಹುದಾಗಿದ್ದರೂ ಅದರ ಬಗ್ಗೆ ಕೆಲವು ಮಿತಿಗಳನ್ನು ಕಾಣಬಹುದು. ಮೊದಲನೆಯದಾಗಿ ಅನುಭೋಗಿಯ ಸಾರ್ವಭೌಮತ್ವ ಸರಕು ಮತ್ತು ಸೇವೆಗಳನ್ನು ಕೊಳ್ಳುವ ಆತನ ಶಕ್ತಿಯನ್ನು ಅವಲಂಬಿಸಿರುತ್ತದೆ. ಎರಡನೆಯದಾಗಿ ಯಾವುದಾದರೂ ಗೊತ್ತಾದ ಕಾಲದಲ್ಲಿರತಕ್ಕ ತಾಂತ್ರಿಕ ಜ್ಞಾನದ ಮಟ್ಟವೂ ಸಾರ್ವಭೌಮತ್ವವನ್ನು ಮಿತಿಗೊಳಿಸಿವುದು. ಸಾಮಾನ್ಯವಾಗಿ ತಾಂತ್ರಿಕಾಭಿವೃದ್ಧಿ ಅನುಭೋಗಿಯ ಆಸೆಗಿಂತ ಹಿಂದುಳಿದಿರುತ್ತದೆ. ಮೂರನೆಯದಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರವೇ ಮುಂದೆ ಬಂದು ಅನುಭೋಗಿಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದು. ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವಂಥ ಸರಕುಗಳ ಮಾರಾಟವನ್ನು ನಿಯಂತ್ರಿಸುವ ಪ್ರಯತ್ನವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಾಲ್ಕನೆಯದಾಗಿ, ಉಚ್ಚಮಟ್ಟದ ಮಾರಾಟಗಾರಿಕೆ ಮತ್ತು ಆಧುನಿಕ ಕ್ರಮವನ್ನನುಸರಿಸಿ ಹೊರಡಿಸಿದ ಜಾಹೀರಾತುಗಳ ಪ್ರಭಾವದಿಂದ ಅನುಭೋಗಿಯ ಸ್ವಾತಂತ್ರ್ಯವನ್ನು ಮಿತಿಗೊಳಿಸಬಹುದು. ಅಂದರೆ ಈ ಮೂಲಕ ಅನುಭೋಗಿಯ ನೈಜವಾದ ಬಯಕೆಗಳನ್ನು ಬದಲಿಸಿ ಆತನ ನಿರ್ಧಾರವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ಐದನೆಯದಾಗಿ, ಏಕಸ್ವಾಮ್ಯ ಇರುವ ಕ್ಷೇತ್ರಗಳಲ್ಲಿ ಅನುಭೋಗಿಯ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗುತ್ತದೆ. ಈ ಪರಿಸ್ಥಿತಿಯಲ್ಲಿ ಅನುಭೋಗಿಯ ಪ್ರಭಾವವನ್ನು, ಬೆಲೆಗಳ ವಿಷಯದಲ್ಲಾಗಲಿ ಅಥವಾ ಉತ್ಪಾದನಾರಂಗದಲ್ಲಾಗಲಿ, ಕಾಣಲು ಸಾಧ್ಯವಿಲ್ಲ. ಆರನೆಯದಾಗಿ ಅನುಭೋಗಿಯ ಸಾಂಪ್ರದಾಯಿಕ ನೀತಿ ಮತ್ತು ಪದ್ಧತಿಗಳೂ ಆತನ ಸಾರ್ವಭೌಮತ್ವವನ್ನು ಮಿತಿಗೊಳಿಸುವಲ್ಲಿ ಪರಿಣಾಮಕಾರಿಗಳಾಗಿವೆ.[೪]
ಈ ಹಿನ್ನಲೆಯಲ್ಲಿ ಪರಿಶೀಲಿಸುವಾಗ ಬಂಡವಾಳಶಾಹಿ ವ್ಯವಸ್ಥೆಯಲ್ಲೂ ಅನುಭೋಗಿ ಅಮಿತವಾದ ಸಾರ್ವಭೌಮತ್ವವನ್ನು ಹೊಂದಿರದೆ ಮಿತವಾದ ಸಾರ್ವಭೌಮತ್ವವನ್ನು ಹೊಂದಿರುವನೆಂದು ಸ್ಪಷ್ಟವಾಗುತ್ತದೆ.
ಅನುಭೋಗಿಯ ಸ್ವಾತಂತ್ರ್ಯದ ಆವಶ್ಯಕತೆ; ಅನುಭೋಗಿಯ ಸಾರ್ವಭೌಮತ್ವದ ಅಭೀಷ್ಟದ ಬಗ್ಗೆ ಅನೇಕ ಲೇಖಕರಿಂದ ವಿಧವಿಧವಾದ ಅಭಿಪ್ರಾಯಗಳು ವ್ಯಕ್ತಪಟ್ಟಿವೆ. ವಾನ್‍ಮೈಸಸ್‍ನ ಅಭಿಪ್ರಾಯದಲ್ಲಿ ಸರಕುಗಳನ್ನು ಬಳಸುವಾಗ ಅನುಭೋಗಿಗೆ ಸಂಪೂರ್ಣ ಸ್ವಾತಂತ್ರವಿರಬೇಕು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅನುಭೋಗಿಯ ಸ್ವಾತಂತ್ರ್ಯ ಅವಶ್ಯಕವಾದ ಅಂಶ. ಏಕೆಂದರೆ ಈ ಅಂಶದ ಮೂಲಕವೇ ರಾಷ್ಟ್ರೀಯ ಸಂಪತ್ತಿನ ವಿತರಣೆಯಾಗಬೇಕು.
ಅನುಭೋಗಿಯ ಪ್ರಭುತ್ವದ ವಿರುದ್ಧವಾದ ವಾದ
[ಬದಲಾಯಿಸಿ]ಮೀಡ್ ಮತ್ತು ಬಾರ್ಬರ ಲೂಟಿನ್ ಅನುಭೋಗಿಯ ಸ್ವಾತಂತ್ರ್ಯಕ್ಕೆ ವಿರೋಧ ಸೂಚಿಸುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪರಿಪೂರ್ಣ ಪೈಪೋಟಿಯ ಸ್ಥಿತಿಯಲ್ಲಿ ಅನುಭೋಗಿಯ ಆಯ್ಕೆ ಪರಿಪೂರ್ಣತೆಯಿಂದಿರುವುದಿಲ್ಲವೆಂದು ಗೊತ್ತಾಗುತ್ತದೆ. ಆದ್ದರಿಂದ ಅನುಭೋಗಿಗಳು ಸ್ವತಂತ್ರರಾಗಿದ್ದರೂ ಸರಿಯಾದ ಆಯ್ಕೆಯ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲದಿರುವುದರಿಂದ ಸರ್ಕಾರದ ಅಥವಾ ಇತರ ಸಂಸ್ಥೆಯಿಂದ ಮಾರ್ಗದರ್ಶನ ಅತ್ಯಗತ್ಯ. ಇದು ಮೀಡ್‍ನ ಅಭಿಪ್ರಾಯ.
ಆಧುನಿಕ ಪ್ರಪಂಚದಲ್ಲಿನ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಪೈಪೋಟಿ ಅಪಾರವಾಗಿದ್ದು, ಅನುಭೋಗಿ ಅನೇಕ ಸರಕುಗಳನ್ನು ಕೊಳ್ಳಲು ಅವಕಾಶವಿರುವುದರಿಂದ. ಅವರುಗಳು ಸರಿಯಾದ ಆಯ್ಕೆ ಮಾಡುವುದರಲ್ಲಿ ವಿಫಲವಾಗುವರೆಂಬುದು ಬಾರ್ಬರ ಲೂಟನ್‍ನ ಅಭಿಪ್ರಾಯವಾಗಿದೆ. ಈ ಕಾರಣದಿಂದಾಗಿ ಆತ ಪೈಪೋಟಿಯ ಮತ್ತು ಅನುಭೋಗಿಯ ಸ್ವಾತಂತ್ರ್ಯದ ವಿರುದ್ಧ ವಾದಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಅನುಭೋಗಿಗಳೊಬ್ಬರೇ ಅಥವಾ ಉತ್ಪಾದಕರೊಬ್ಬರೇ ಸಾರ್ವಭೌಮತ್ವವನ್ನು ಹೊಂದಲು ಸಾಧ್ಯವಿಲ್ಲವೆಂದು ತಿಳಿದುಬರುತ್ತದೆ. ಏಕೆಂದರೆ, ಆರ್ಥಿಕ ಏಳಿಗೆಯ ದೃಷ್ಟಿಯಿಂದ ಬಳಕೆ ಮತ್ತು ಉತ್ಪಾದನೆಗಳೆರಡರ ನಡುವೆ ಸಮತೋಲನವೇರ್ಪಡುವುದು ಅತ್ಯಾವಶ್ಯಕವಾಗಿರುತ್ತದೆ. ಅರ್ಥಶಾಸ್ತ್ರಜ್ಞ ಎಲಿ ಹೇಳಿರುವ ಹಾಗೆ, ರಾಷ್ಟ್ರದ ಪ್ರಗತಿ ಅನುಭೋಗಿಗಳನ್ನು ಮಾತ್ರವೇ ಅಲ್ಲದೆ ಉತ್ಪಾದಕರನ್ನೂ ಅವಲಂಬಿಸಿದೆ. [೫]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2020-01-11. Retrieved 2020-01-11.
- ↑ https://www.economicshelp.org/blog/glossary/consumer-sovereignty/
- ↑ https://opinionfront.com/what-is-consumer-sovereignty
- ↑ https://accountlearning.com/limitations-consumers-sovereignty/
- ↑ https://fee.org/articles/consumer-sovereignty/