ವಿಷಯಕ್ಕೆ ಹೋಗು

ಅನುಭೋಗಿಯ ಹೆಚ್ಚಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಭೋಗಿಯ ಹೆಚ್ಚಳ ಎಂದರೆ ಒಂದು ಸರಕು ಅಥವಾ ಸೇವೆಯನ್ನು ಅನುಭೋಗಿಸುವುದರಿಂದ ಲಭಿಸುವ ಒಟ್ಟು ತುಷ್ಟಿಗೂ (ಟೋಟಲ್ ಯುಟಿಲಿಟಿ) ಅದನ್ನು ಪಡೆಯಲು ಹಣ ಕೊಡುವುದರ ಮೂಲಕ ಮಾಡಬೇಕಾದ ತ್ಯಾಗಕ್ಕೂ ನಡುವೆ ಇರುವ ವ್ಯತ್ಯಾಸವೇ ಅನುಭೋಗಿಯ ಹೆಚ್ಚಳ (ಕನ್‍ಸ್ಯೂಮರ್ಸ್ ಸರ್‍ಪ್ಲಸ್).

ಹಿನ್ನೆಲೆ

[ಬದಲಾಯಿಸಿ]

ಸರಕನ್ನು ಪಡೆಯಲು ಅನುಭೋಗಿ ಕೊಡಲು ಸಿದ್ದವಾಗಿರುವ ಬೆಲೆ (ಪೊಟೆನ್ಷಿಯಲ್ ಪ್ರೈಸ್) ಒಟ್ಟು ತುಷ್ಟಿಯ ಅಳತೆಯಾಗಿದೆ. ಹೀಗೆ ಕೊಳ್ಳುವ ಸರಕಿನ ಮೊದಲ ಘಟಕಗಳಿಗೆ ಹೆಚ್ಚು ಬೆಲೆಯನ್ನೂ ತರುವಾಯ ಬಯಸುವ ಹೆಚ್ಚು ಹೆಚ್ಚು ಘಟಕಗಳಿಗೆ ಇಳಿವರಿ ಬೆಲೆಯನ್ನೂ ಅನುಭೋಗಿ ಕೊಡಲು ಸಿದ್ಧನಾಗಿರುವುದು. ಇಳುವರಿ ಅಂಚಿನ ತುಷ್ಟಿಗುಣ ನಿಯಮಕ್ಕೆ (ಲಾ ಆಫ್ ಡಿಮಿನಿಷಿಂಗ್ ಮಾರ್ಜಿನಲ್ ಯುಟಿಲಿಟಿ) ಅನುಸಾರವಾಗಿರುತ್ತದೆ. ಆದರೆ ಸರಕಿನ ಎಲ್ಲ ಘಟಕಗಳಿಗೂ ಆತ ಕೊಡುವುದು ಒಂದೇ ಬೆಲೆ. ಅದು ಅಂಚಿನ ಘಟಕದ ತುಷ್ಟಿಗುಣಕ್ಕೆ ಸಮವಾಗಿರುತ್ತದೆ. ಅಂಚಿನ ಘಟಕಕ್ಕೆ ಅನುಭೋಗಿ ಕೊಡುವ ಬೆಲೆಯೂ ಕೊಡಲು ಸಿದ್ಧನಿರುವ ಬೆಲೆಯೂ ಒಂದೇ ಆಗಿರುತ್ತದೆ. ಮೊದಲ ಘಟಕಗಳಿಗೆ ಕೊಡಲು ಸಿದ್ಧವಾಗಿರುವ ಬೆಲೆ ಅಂಚಿನ ಘಟಕಕ್ಕೆ ಕೊಡುವ ಬೆಲೆಗಿಂತ ಹೆಚ್ಚಾಗಿರುವುದು. []ಹೀಗೆ ಅನುಭೋಗಿ ಕೊಡಲು ಸಿದ್ಧವಾಗಿರುವ ಬೆಲೆ ವಾಸ್ತವವಾಗಿ ಕೊಡುವ ಬೆಲೆಗಿಂತ ಎಷ್ಟು ಹೆಚ್ಚಾಗಿರುವುದೋ ಅದು ಆತ ಅನುಭವಿಸುವ ತುಷ್ಟಿ ಹೆಚ್ಚಳದ (ಸರ್‍ಪ್ಲಸ್ ಯುಟಿಲಿಟಿ) ಆರ್ಥಿಕ ಅಳತೆಯೊಳಗಿರುತ್ತದೆ ಎಂದು ಆಂಗ್ಲ ಆರ್ಥಶಾಸ್ತ್ರಜ್ಞ ಆಲ್‍ಫ್ರೆಡ್ ಮಾರ್ಷಲ್ ನಿರೂಪಿಸಿ ಅದರ ಪ್ರಾಮುಖ್ಯವನ್ನು ಪ್ರಥಮತಃ ಎತ್ತಿ ತೋರಿಸಿದ.[]

ಉದಾ: ಕಿತ್ತಲೆಹಣ್ಣಿಗೆ ನಾವು ಕೊಡಲು ಸಿದ್ದವಿರುವ ಬೆಲೆ ಮತ್ತು ವಾಸ್ತವವಾಗಿ ಕೊಡುವ ಬೆಲೆ ಹೀಗಿರುವುವೆಂದು ಊಹಿಸೋಣ.

ಸರಕಿನ ಘಟಕ ಕೊಡಲು ಸಿದ್ಧವಿರುವ ವಾಸ್ತವವಾಗಿ ಕೊಡುವ ಬೆಲೆ ರೂ. ಬೆಲೆ ರೂ.

1 1.00 0.20

2 0.80 0.20

3 0.70 0.20

4 0.50 0.20

5 0.40 0.20

6 0.30 0.20

7 0.25 0.20

8 0.20 0.20

8 ಕಿತ್ತಲೆ ಹಣ್ಣಿಗೆ ರೂ. 4.15 ಕೊಡಲು ಸಿದ್ಧವಿರುವಾಗ ಕೇವಲ ರೂ. 1.60 ಕ್ಕೆ ಸಿಗುವುದರಿಂದ ರೂ. 2.55 ಸೂಚಿಸುವ ಹೆಚ್ಚಳ ತುಷ್ಟಿ ಲಭಿಸಿದಂತಾಯಿತೆಂಬುದೇ ಅನುಭೋಗಿಯ ಹೆಚ್ಚಳ ಸಿದ್ಧಾಂತದ ವಾದ. ಅನುಭೋಗಿಯ ಹೆಚ್ಚಳವನ್ನು ಈ ಕೆಳಗಣ ರೇಖಾಚಿತ್ರದ ಮೂಲಕ ತೋರಿಸಬಹುದು.[]

ಆಆ' ಎಂಬ ಬೇಡಿಕೆ ಕಮಾನು ಸರಕಿನ ಘಟಕಗಳಿಗೆ ಅನುಕ್ರಮವಾಗಿ ಅನುಭೋಗಿ ಕೊಡಲು ಸಿದ್ಧವಿರುವ ಬೆಲೆಯನ್ನು ಸೂಚಿಸುತ್ತದೆ. PP' ಆತ ವಾಸ್ತವವಾಗಿ ಕೊಡುವ ಸರಕಿನ ಒಂದು ಘಟಕದ ಬೆಲೆಯನ್ನೂ ಂP ರೇಖೆ ಮಾರುಕಟ್ಟೆಯಲ್ಲಿ ಎಲ್ಲ ಘಟಕಗಳಿಗೂ ಇರುವ ಸಮ ಬೆಲೆಯನ್ನೂ ಸೂಚಿಸುತ್ತವೆ.

ಒಟ್ಟು ಅನುಭೋಗ ಔP ಘಟಕಗಳಾದರೆ ಇವುಗಳಿಗೆ ನೀಡಿರುವ ಬೆಲೆಯನ್ನು ಂಔP"P ಭಾಗ ಸೂಚಿಸುವುದು. ಅನುಭೋಗದ ಒಟ್ಟು ತುಷ್ಟಿಯನ್ನೂ ಆ ತುಷ್ಟಿಗೆ ಅನುಸಾರವಾಗಿ ಅನುಭೋಗಿ ಕೊಡಲು ಸಿದ್ಧವಾಗಿರುವ ಬೆಲೆಯನ್ನೂ ಆಔP'P ಯೂ ಸೂಚಿಸುತ್ತದೆ. ಅನುಭೋಗಿ ಕೊಡಲು ಸಿದ್ಧವಿರುವ ಬೆಲೆಗೂ ವಾಸ್ತವವಾಗಿ ನೀಡುವ ಬೆಲೆಗೂ ಇರುವ ವ್ಯತ್ಯಾಸವನ್ನು ಆಂP ಸೂಚಿಸುತ್ತದೆ. ಇದೇ ಅನುಭೋಗಿಯ ಹೆಚ್ಚಳ.


ಅನುಭೋಗಿ ಸರಕುಗಳಿಗೆ ತಾನು ಕೊಡುವ ಬೆಲೆಗಿಂತ ಹೆಚ್ಚಿನ ತುಷ್ಟಿಯನ್ನು ಪಡೆಯುತ್ತಾನೆ. ಮತ್ತು ಈ ಹೆಚ್ಚಳ ತುಷ್ಟಿಯನ್ನು ಆತನು ಕೊಡಲು ಸಿದ್ಧವಾಗಿರುವ ಬೆಲೆ ಮತ್ತು ವಾಸ್ತವವಾಗಿ ಕೊಡುವ ಬೆಲೆ ಇವುಗಳ ವ್ಯತ್ಯಾಸ ಅಳೆದು ತೋರಿಸುತ್ತದೆ ಎಂಬ ಭಾವನೆ ಕೆಲವು ಆಕ್ಷೇಪಗಳಿಗೆ ಒಳಗಾಗಿದೆ.

ಪ್ರಯೋಜನ

[ಬದಲಾಯಿಸಿ]

ಕೊಳ್ಳುವ ಸರಕನ್ನು ಅನುಭೋಗಿ ಅನೇಕ ಸಣ್ಣ ಘಟಕಗಳಾಗಿ ಬಿಡಿಸಿ ಮೊದಲ ಘಟಕಕ್ಕೆ ಎಷ್ಟು ಬೆಲೆ ಕೊಡಬಹುದು. ಮುಂದಿನ ಘಟಕಗಳಿಗೆ ಎಷ್ಟೆಷ್ಟು ಕೊಡಬಹುದು ಎಂದು ಆಲೋಚಿಸುವನೆಂದು ಊಹಿಸುವುದು ಅವಾಸ್ತವಿಕ ಎಂಬುದು ಒಂದು ಆಕ್ಷೇಪಣೆ. ಹೀಗೆ ಬಿಡಿಸಿ ಆಲೋಚಿಸಿವುದು ಅಸ್ವಾಭಾವಿಕವೇ ಸರಿ. ಇರತಕ್ಕ ಬೆಲೆಗಿಂತ ಸ್ವಲ್ಪ ಹೆಚ್ಚು ಕಡಿಮೆ ಆದರೆ ಬೇಡಿಕೆ ಹೀಗೆ ವ್ಯತ್ಯಾಸವಾಗಬಹುದೆಂಬುದನ್ನು ಹೇಳಬಹುದಾದರೂ ಜನರು ಬಯಸುವ ಸರಕುಗಳ ಮೊದಮೊದಲ ಘಟಕಗಳಿಗೆ ಎಷ್ಟು ಬೆಲೆ ನೀಡಲು ಸಿದ್ಧವಿರುವರೆಂಬುದನ್ನು ಊಹಿಸಲು ಸರಿಯಾದ ಆಧಾರ ಸಿಗುವುದಿಲ್ಲ. ಅದರಲ್ಲೂ ಅತ್ಯಾವಶ್ಯಕವಾಗಿರುವ ಸರಕುಗಳ ಬಗ್ಗೆ ಹೀಗೆ ನೀಡಲು ಸಿದ್ಧವಿರುವ ಬೆಲೆಗೆ ಮೇಲ್ಮಿತಿ ಊಹಿಸುವುದಂತೂ ಕಾರ್ಯತಃ ಕಷ್ಟ. ಕನಿಷ್ಠಪ್ರಮಾಣದ ದೈನಂದಿನ ಆಹಾರ ಪದಾರ್ಥಗಳಿಗಾಗಲಿ ಅತಿ ತುರ್ತಾಗಿ ಬೇಕಾಗಿರಬಹುದಾದ ಇತರ ಸರಕುಗಳಿಗಾಗಲಿ ಎಷ್ಟೇ ಹೆಚ್ಚಿನ ಬೆಲೆಯನ್ನಾದರೂ ಕೊಡಲು ಸಿದ್ಧವಿರಬಹುದು. ಈ ಬೆಲೆಗೂ ವಾಸ್ತವವಾಗಿ ಮಾರುಕಟ್ಟೆಯಲ್ಲಿ ಅವುಗಳಿಗೆ ಕೊಡುವ ಬೆಲೆಗೂ ಇರುವ ವ್ಯತ್ಯಾಸ ಆ ಅನುಭೋಗಿಯ ಹೆಚ್ಚಳ ತುಷ್ಟಿಯನ್ನು ಅಳೆಯುವುದೆಂದು ಹೇಳುವುದು ಕೇವಲ ಕಾಲ್ಪನಿಕವಾಗುವುದು. ಹೆಚ್ಚಳ ತುಷ್ಟಿಯನ್ನು ಹೀಗೆ ಅಳೆಯುವುದಕ್ಕೆ ಇದು ಮಿತಿ ಸೂಚಿಸಿದಂತಾಯಿತು. ಆದ್ದರಿಂದಲೇ ಮಾರ್ಷಲ್ ಅವರ ಅನುಭೋಗಿಯ ಹೆಚ್ಚಳದ ಭಾವನೆ ನಿಷ್ಪ್ರಯೋಜಕವೆಂಬ ಟೀಕೆಯನ್ನು ಪ್ರಥಮತಃ ಪ್ರೊ. ನಿಕಲ್‍ಸನ್ ಪ್ರಶ್ನಿಸಿ ಸುಮಾರು 100 ಪೌಂಡ್ ವಾರ್ಷಿಕವರಮಾನ ಸುಮಾರು 1000 ಪೌಂಡುಗಳಿಗೆ ಸಮ ಎಂದು ಹೇಳುವುದರಲ್ಲಿ ಯಾವ ಪ್ರಯೋಜನವಾದರೂ ಇದೆಯೇ ಎಂದು ಕೇಳಿದ್ದಕ್ಕೆ ಮಾರ್ಷಲ್ ನೀಡಿದ ಉತ್ತರ ಹೀಗಿದೆ: ಹಾಗೆ ಹೇಳುವುದರಲ್ಲಿ ಪ್ರಯೋಜನವಿಲ್ಲದಿರಬಹುದು, ಆದರೆ ಮಧ್ಯ ಆಫ್ರಿಕದವರ ಜೀವನವನ್ನು ಇಂಗ್ಲೆಂಡಿನವರ ಜೀವನದೊಡನೆ ಹೋಲಿಸಿದರೆ ಅನುಭೋಗ ಹೆಚ್ಚಳ ಭಾವನೆಯ ಪ್ರಯೋಜನ ತಿಳಿದೀತು. ಏಕೆಂದರೆ ಮಧ್ಯ ಆಫ್ರಿಕದಲ್ಲಿ ಸಿಗಬಹುದಾದ ಸರಕು ಸೇವೆಗಳ ಬೆಲೆ ಒಟ್ಟಿನಲ್ಲಿ ಇಂಗ್ಲೆಂಡಿನಲ್ಲಿ ಸಿಗುವ ಬೆಲೆಗಳಷ್ಟೆ ಇರಬಹುದಾದರೂ ಇಂಗ್ಲೆಂಡಿನಲ್ಲಿ ಸಿಗುವ ಅನೇಕ ಸರಕು ಸೇವೆಗಳು ಅಲ್ಲಿ ಇರುವುದಿಲ್ಲವಾದುದರಿಂದ ಅಲ್ಲಿ ಸುಮಾರು 1000 ಪೌಂಡುಗಳಷ್ಟು ವಾರ್ಷಿಕ ವರಮಾನವಿರುವವನು ಇಲ್ಲಿ ಸುಮಾರು 300-400 ಪೌಂಡುಗಳಷ್ಟು ವಾರ್ಷಿಕ ವರಮಾನ ಹೊಂದಿರುವವನಷ್ಟು ಸುಖವಾಗಿರುವುದಿಲ್ಲ.[]

ಸನ್ನಿವೇಶ ಸೌಕರ್ಯಗಳಿಗೆ ಅನುಗುಣವಾಗಿ ಅನುಭೋಗಿಗೆ ಹೆಚ್ಚಳತುಷ್ಟಿ

[ಬದಲಾಯಿಸಿ]

ತಾತ್ಪರ್ಯವೇನೆಂದರೆ, ಆಯಾ ಸನ್ನಿವೇಶ ಸೌಕರ್ಯಗಳಿಗೆ ಅನುಗುಣವಾಗಿ ಅನುಭೋಗಿಗೆ ಹೆಚ್ಚಳತುಷ್ಟಿ ಲಭಿಸುತ್ತದೆ. ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲೂ ದೇಶದೊಳಗಿನ ಅಭಿವೃದ್ಧಿಯಾಗದಿರುವ ಪ್ರದೇಶಗಳಲ್ಲಿ ಇರುವುದಕ್ಕಿಂತ ಹೆಚ್ಚು ಅನುಭೋಗಾವಕಾಶಗಳಿರುವುವು ಅಲ್ಲದೆ ಅನೇಕ ಸರಕು ಸೇವೆಗಳು ಅಂಥ ಮುಂದುವರಿದಿರುವ ರಾಷ್ಟ್ರ ಅಥವಾ ಪ್ರದೇಶಗಳಲ್ಲಿ ಅನುಭೋಗಿಗಳು ಕೊಡಲು ಸಿದ್ದವಿರುವ ಬೆಲೆಗಿಂತ ಕಡಿಮೆ ಬೆಲೆಗೆ ಲಭಿಸುವುದೂ ಅನುಭವ ಸಿದ್ಧ ವಿಷಯವಾಗಿದೆ. ಆದ್ದರಿಂದ ಅನುಭೋಗಿಯ ಹೆಚ್ಚಳ ಸನ್ನಿವೇಶ ಮತ್ತು ಅವಕಾಶಗಳಿಂದ ಉದ್ಭವಿಸುವ ಪ್ರಯೋಜನವಿಶೇಷವೆಂದು ಹೇಳಬಹುದು. ವಿವಿಧ ರಾಷ್ಟ್ರಗಳ ಅನುಭೋಗಿಗಳ ಅಥವಾ ವಿವಿಧ ಸನ್ನಿವೇಶಗಳಲ್ಲಿ ಒಬ್ಬನೇ ಅನುಭೋಗಿಯ ಐಹಿಕಕ್ಷೇಮವನ್ನು ಸ್ಥೂಲವಾಗಿ ಹೋಲಿಸಲು ಮತ್ತು ಅನುಭೋಗಿಗಳು ಅನುಭವಿಸುವ ತುಷ್ಟಿ ವ್ಯತ್ಯಾಸವನ್ನು ಗ್ರಹಿಸಲು ಅನುಭೋಗಿಯ ಹೆಚ್ಚಳದ ಭಾವನೆ ಉಪಯೋಗವಾದೀತೆಂಬುದು ಇದರ ಪ್ರತಿಪಾದಕರ ಆಕಾಂಕ್ಷೆ. []

ಬೆಲೆ ಮತ್ತು ಅನುಭೋಗಿಯ ಹೆಚ್ಚಳ

[ಬದಲಾಯಿಸಿ]

ಹಣದ ಅಂಚಿನ ತುಷ್ಟಿ ಅನುಭೋಗಿಗಳ ವರಮಾನ ಹಾಗೂ ಇತರ ಸ್ಥಿತಿಗತಿಗಳಿಗನುಸಾರವಾಗಿ ವ್ಯತ್ಯಾಸವಾಗಿರುವುದರಿಂದ ಬೆಲೆಗಳ ಮೂಲಕ ತುಷ್ಟಿಯನ್ನು ಅಳೆಯುವುದೂ ಹೋಲಿಸುವುದು ಕಷ್ಟ. ಅಂದಮೇಲೆ, ಅನುಭೋಗಿಗಳು ಅನುಭವಿಸುವ ತುಷ್ಟಿ ಹೆಚ್ಚಳವನ್ನು ಬೆಲೆಗಳ ಮೂಲಕ ಅಳೆಯುವ ಪ್ರಯತ್ನ ನಿಷ್ಪ್ರಯೋಜಕ ಎಂಬುದು ಅನುಭೋಗಿಯ ಹೆಚ್ಚಳದ ಬಗ್ಗೆ ಹೇಳಲಾಗಿರುವ ಇನ್ನೊಂದು ಆಕ್ಷೇಪಣೆ.

ಬೇಡಿಕೆ ಮತ್ತು ಅನುಭೋಗಿಯ ಹೆಚ್ಚಳ

[ಬದಲಾಯಿಸಿ]

ಆಧುನಿಕ ಅರ್ಥಶಾಸ್ತ್ರಜ್ಞರಲ್ಲಿ ಕೆಲವರು ಅನುಭೋಗಿಯ ಹೆಚ್ಚಳ ಭಾವನೆಯನ್ನು ಹೆಚ್ಚು ಭಾವಗರ್ಭಿತವಾಗಿ ಮಾಡುವ ಪ್ರಯತ್ನ ಮಾಡಿರುತ್ತಾರೆ. ಉದಾಹರಣೆಗೆ, ಇತರ ಸಂದರ್ಭಗಳು ಏಕರೀತಿಯಲ್ಲಿದ್ದು, ಒಂದು ಸರಕಿನ ಬೆಲೆ ಮಾತ್ರವೇ ಇಳಿವರಿಯಾದಾಗ ಅನುಭೋಗಿಗಳು ಪಡೆಯುವ ಲಾಭವನ್ನು ಅನುಭೋಗಿಸಲು ಹೆಚ್ಚಳವೆಂದೂ ಫ್ರೊ. ಹಿಕ್ಸ್ ಪರಿಗಣಿಸಿದ್ದಾನೆ. ಬೆಲೆ ಇಳಿವರಿಯಾಗದ ಸರಕಿನ ಬದಲಿಗೆ ಬೆಲೆ ಇಳಿವರಿಯಾದ ಸರಕನ್ನು ಸ್ವಲ್ಪ ಹೆಚ್ಚಾಗಿ ಕೊಂಡುಕೊಳ್ಳುವುದರಿಂದ ಅನುಭೋಗಿ ಹೆಚ್ಚಳ ತುಷ್ಟಿ ಪಡೆಯುವನು. ಇಂಥ ಪುನರವಲೋಕಿಸಿದ ಉಕ್ತಿಗಳು ಮೂಲ ಭಾವನೆಯನ್ನು ಪುಷ್ಟೀಕರಿಸುವುವೆಂದು ಹೇಳಬಹುದು. ಅನುಭೋಗಿಯ ಹೆಚ್ಚಳವನ್ನು ಕರಾರುವಾಕ್ಕಾಗಿ ಅಳೆಯುವುದು ಕಷ್ಟದ ಕೆಲಸವಾದರೂ ಈ ಭಾವನೆಯಲ್ಲಿ ನಿಜಾಂಶವಿದೆ ಮತ್ತು ಆರ್ಥಿಕ ವಿಶ್ಲೇಷಣೆಯಲ್ಲಿ ಈ ಭಾವನೆಯಿಂದ ಪ್ರಯೋಜನವುಂಟು ಎಂಬುದು ಅನೇಕ ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಏಕಸ್ವಾಮ್ಯ ಹೊಂದಿರುವ ಉದ್ಯಮಿಗೆ ಅನುಭೋಗಿಯ ಹೆಚ್ಚಳದ ಪರಿಶೀಲನೆ ಪ್ರಯೋಜನಕರವೆಂದು ಹೇಳಲಾಗಿದೆ; ಏಕೆಂದರೆ, ಅಂಥ ಏಕಾಧಿಕಾರಿ ತನ್ನ ಸರಕಿನ ಮಾರಾಟದ ಬೆಲೆ ಗೊತ್ತುಮಾಡಲು ತನಗಿರುವ ಶಕ್ತಿಯನ್ನು ಉಪಯೋಗಿಸುವಾಗ ಅನುಭೋಗಿಗಳ ಹೆಚ್ಚಳದಲ್ಲಿ ಆದಷ್ಟು ಭಾಗವನ್ನು ತಾನೂ ಪಡೆಯಲು ಪ್ರಯತ್ನಿಸುತ್ತಾನೆ. ಅಂದರೆ ಅನುಭೋಗಿಗಳು ಕೊಡಲು ಸಿದ್ಧರಿರುವ ಪರಮಾವಧಿ ಬೆಲೆಯ ಅಂದಾಜು ಏಕಸ್ವಾಮ್ಯ ವ್ಯಾಪಾರಕ್ಕೆ ಆವಶ್ಯಕ.[]

ತೆರಿಗೆ ಮತ್ತು ಅನುಭೋಗಿಯ ಹೆಚ್ಚಳ

[ಬದಲಾಯಿಸಿ]

ತೆರಿಗೆ ಅಥವಾ ಸಹಾಯಧನದ ಪರಿಣಾಮಗಳ ಪರಿಶೀಲನೆಯಲ್ಲಿ ಸರಕಿನ ಮೇಲೆ ತೆರಿಗೆ ವಿಧಿಸುವುದರಿಂದ ಬೆಲೆ ಏರಿ ಅನುಭೋಗಿಯ ಹೆಚ್ಚಳ ಕಡಿಮೆಯಾಗಬಹುದು. ಇಂಥ ಸಂದರ್ಭದಲ್ಲಿ ತೆರಿಗೆಯ ಮೂಲಕ ಸರ್ಕಾರಕ್ಕೆ ಲಭಿಸುವ ಆದಾಯವನ್ನು ಅನುಭೋಗಿಗಳಿಗೆ ಆಗುವ ನಷ್ಟದೊಡನೆ ಹೋಲಿಸಿ ತೆರಿಗೆಯನ್ನು ವಿಧಿಸುವುದರ ಔಚಿತ್ಯವನ್ನು ನಿರ್ಧರಿಸಬೇಕಾಗುವುದು. ಈ ರೀತಿಯಲ್ಲಿ ಕೈಗಾರಿಕೆಯೊಂದಕ್ಕೆ ಸರ್ಕಾರ ನೀಡುವ ಸಹಾಯಧನದ ಪರಿಣಾಮವನ್ನು ಪರಿಶೀಲಿಸುವಾಗಲೂ ಅನುಭೋಗಿಯ ಹೆಚ್ಚಳದ ಭಾವನೆ ಸಹಾಯಕವಾಗುವುದು. ಅನುಭೋಗಿಗಳ ಬೇಡಿಕೆ ಹೆಚ್ಚಿಸುವಂತೆ ಸರಕಿನ ಬೆಲೆ ಇಳಿಸುವ ಉದ್ದೇಶದಿಂದ ಸರ್ಕಾರ ಸರಕು ತಯಾರಿಸುವವರಿಗೆ ಸಹಾಯಧನ ನೀಡಬಹುದು. ಹೀಗೆ ಮಾಡುವಾಗ ಅನುಭೋಗಿಗಳಿಗೆ ಲಭಿಸುವ ಹೆಚ್ಚುವರಿ ಸರ್ಕಾರಕ್ಕೆ ಆಗುವ ವ್ಯಯಕ್ಕಿಂತ ಹೆಚ್ಚಾದರೆ ಮಾತ್ರ ಈ ರೀತಿಯ ಸಹಾಯಧನ ನೀಡಿಕೆ ಒಳ್ಳೆಯದೆಂದು ಹೇಳಬಹುದು.[]

ಅನುಭೋಗಿಯ ಹೆಚ್ಚಳದ ಭಾವನೆ ತುಷ್ಟಿಗುಣಕ್ಕೂ ಬೆಲೆಗೂ ಇರುವ ಭೇದವನ್ನು ಸ್ಪಷ್ಟಗೊಳಿಸಲು ಸಹಾಯಕವಾಗಿದೆ. ಒಂದು ಸರಕಿಗೆ ಕೊಡುವ ಬೆಲೆ ಈ ಸರಕಿನ ವಾಸ್ತವವಾದ ತೃಪ್ತಿದಾಯಕ ಶಕ್ತಿಯನ್ನು ಸಾಮಾನ್ಯವಾಗಿ ಸೂಚಿಸುವುದಿಲ್ಲ ಎಂಬ ಅಂಶವನ್ನು ಅದು ಎತ್ತಿ ತೋರಿಸುತ್ತದೆ. ಅನುಭೋಗಿಯ ಪಟ್ಟಿಯಲ್ಲಿ ಹೆಚ್ಚು ತುಷ್ಟಿಗುಣ ಹೊಂದಿರುವ ವೃತ್ತಾಂತ ಪತ್ರಿಕೆ, ಪೋಸ್ಟ್‍ಕಾರ್ಡು, ಬೆಂಕಿಪೊಟ್ಟಣ, ಉಪ್ಪು ಇತ್ಯಾದಿ ಅನೇಕ ಕಡಿಮೆ ಬೆಲೆಯ ಸರಕುಗಳಿರುತ್ತವೆ. ಆರ್ಥಿಕಾಭಿವೃದ್ಧಿಯೊಡನೆ ಕೂಡಿ ಬರುವ ಉತ್ತಮ ಸನ್ನಿವೇಶದಿಂದ ಲಭಿಸುವ ತುಷ್ಟಿಗುಣದ ಹೆಚ್ಚುವರಿಯೂ ಸಾಮಾನ್ಯವಾಗಿ ಅನುಭೋಗಿಯ ಹೆಚ್ಚಳ ರೂಪದಲ್ಲೇ ಬರುವುದು. ಅದ್ದರಿಂದ ಅನುಭೋಗಿಯ ಯೋಗಕ್ಷೇಮ ವಿಚಾರದ ಅಧ್ಯಯನದಲ್ಲಿ ಅನುಭೋಗಿಯ ಹೆಚ್ಚಳದ ಭಾವನೆ ಅರ್ಥಪೂರ್ಣವಾಗಿ ಉಳಿದುಬಂದಿದೆ. []

ಉಲ್ಲೇಖಗಳು

[ಬದಲಾಯಿಸಿ]
  1. https://www.intelligenteconomist.com/consumer-surplus/
  2. https://www.investopedia.com/terms/c/consumer_surplus.asp
  3. https://www.wallstreetmojo.com/consumer-surplus-formula/
  4. https://www.wikihow.com/Calculate-Consumer-Surplus
  5. https://businesszeal.com/difference-between-consumer-surplus-producer-surplus
  6. https://corporatefinanceinstitute.com/resources/knowledge/economics/consumer-surplus/
  7. https://bizfluent.com/info-12094297-happens-consumer-producers-surplus-good-taxed.html
  8. "ಆರ್ಕೈವ್ ನಕಲು". Archived from the original on 2018-12-20. Retrieved 2020-01-11.