ಆಸಾದಿ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಸಾದಿ ಕುಣಿತ[ಬದಲಾಯಿಸಿ]

ಜಾತಿ ಪದ್ಧತಿಯ ಶ್ರೇಣಿಕರಣದಲ್ಲಿ ಕಟ್ಟಕಡೆಯವರೆಂದು ಗುರುತಿಸಲ್ಪಟ್ಟ ಹೊಲೆಯರು ಧಾರ್ಮಿಕ ಆಚರಣೆಗಳಲ್ಲಿ ಎಲ್ಲರಂತೆ ಪಾಲ್ಗೊಳ್ಳುವ ಅವಕಾಶ ಪಡೆದವರೆಲ್ಲ. ಆದರೆ, ಮಾರಿಯ ಪುರಾಣವೇ ಹೊಲೆಯನೊಬ್ಬನ ವರ್ಣಸಂಕೀರ್ಣಕ್ಕೆ ಸಂಬಂಧಿಸಿದ್ದು ಎಂಬುದನ್ನು ಗಮನಿಸಿದಾಗ ಮತ್ತು ಅವನನ್ನು ಉಚ್ಚ ಜಾತಿಯವರು ತೀರಿಸಿಕೊಂಡ ಸೇಡಿನ ಬಗೆಯನ್ನು ಗಮನಿಸಿದಾಗ ಅಸಾದಿ ಕುಣಿತದ ಮಹತ್ವ ನಮಗೆ ಗೊತ್ತಾಗುತ್ತದೆ. ಆಸಾದಿ ಹೊಲೆಯ ಜಾತಿಗೆ ಸೇರಿದ, ಆದರೆ ಮಾರಮ್ಮನ ಹಬ್ಬದ ಧಾರ್ಮಿಕ ವಿಧಿಯಂದರಲ್ಲಿ ಮೇಲ್ವರ್ಗದವರ ಜೊತೆ ಪಾಲ್ಗೊಳ್ಳುವ ಅವಕಾಶ ಪಡೆದ ಒಬ್ಬ ನಿಗದಿತ ವ್ಯಕ್ತಿ. ಊರಿನ ಮೇಲ್ವರ್ಗದ ಜನರನ್ನೂ ಅಧಿಕಾರಸ್ಥರನ್ನೂ ಕಡೆಗೆ ಮಾರಮ್ಮನನ್ನೂ ಬಯ್ಯುವ ಮತ್ತು ಹೀಯಾಳಿಸುವ ಧಾರ್ಮಿಕ ಅಧಿಕಾರ ಪಡೆದ ವ್ಯಕ್ತಿ. ಆದರೆ ಈ ಅಧಿಕಾರ ಮಾರಿ ಹಬ್ಬದಲ್ಲಿ ಮಾತ್ರ. ಆಸಾದಿಗಳು ಸ್ತ್ರೀದೇವತೆಯ ಅದರಲ್ಲೂ ಮಾರಮ್ಮನ ಆರಾಧಕರು. ಅವರು ಆ ದೇವತೆಯನ್ನು ಕುರಿತ ಹಾಡುಗಳನ್ನು ಮಾತ್ರ ಹಾಡುತ್ತಾರೆ. ತಮ್ಮ ಇಷ್ಟ ದೇವತೆಯ ಎದುರಿನಲ್ಲಿ ದೀಕ್ಷೆ ಪಡೆದ ಅನಂತರವೇ ಒಬ್ಬಾತ ಅಸಾಧಿ ಎನಿಸಿಕೊಳ್ಳುತ್ತಾನೆ. ಅಮ್ಮನಿಗೆ ಸಂಬಂಧಿಸಿದ ಯಾವುದೇ ಪುಣ್ಯಕಾರ್ಯ ನಡೆಸಬೇಕಾದರೂ ಆಸಾದಿ ಅನಿವಾರ್ಯ . ಭಕ್ತರ ಕೋರಿಕೆಯಂತೆ ಬೆಳದಿಂಗಳ ರಾತ್ರಿ ಅಮ್ಮನ ಕಥೆ ಮಾಡಿಸುವುದೂ ಉಂಟು. ಧಾರ್ಮಿಕ ವೃತ್ತಿಗಾಯಕರೆಂದು ವಿದ್ವಾಂಸರು ಇವರನ್ನು ಗುರುತಿಸಿದ್ದಾರೆ. ಆಸಾದಿ ಎಂಬ ಪದಕ್ಕೆ ‘ಕೆರ ಹೊಲಿಯುವವನು’, ‘ಅಟ್ಟೆ ಚುಚ್ಚುವವನು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಹೇಳಿದೆ. ಆಸಾದಿಗಳೆಲ್ಲಾ ಹೊಲೆಯರೇ ಆಗಿದ್ದು ದೀಕ್ಷೆ ಪಡೆದ ಅನಂತರವೇ ಅವರಿಗೆ ಆ ಪದವಿ ದೊರೆಯುವುದೆಂದು ಹೇಳಲಾಗಿದೆ. ಶಕ್ತಿದೇವತೆಯ ಆರಾಧಕರಾದ ಆಸಾಧಿಗಳನ್ನು ಅಮ್ಮನ ಪೂಜಾರರು ಎಂದೂ ಕರೆಯುವುದುಂಟು. ಮಾರಮ್ಮ ಇವರ ಆರಾಧ್ಯ ದೈವ. ಮಾರಮ್ಮನ ಜಾತ್ರೆಗಳಲ್ಲಿ ಸಾಮಾನ್ಯವಾಗಿ ಇವರು ಕಾಣಿಸಿಕೊಳ್ಳುತ್ತಾರೆ. ತಮ್ಮ ಆರಾಧ್ಯ ದೈವದ ಮಹಿಮೆಗಳನ್ನು ಜನತೆಯಲ್ಲಿ ಪ್ರಸಾರಮಾಡಿ, ಜನತೆಯಲ್ಲಿ ಧರ್ಮಶ್ರದ್ಧೆ, ಭಕ್ತಿನಿಷ್ಠೆಗಳನ್ನು ಕಾಪಾಡಿಕೊಂಡು ಬರುವುದು ಇವರ ಉದ್ದೇಶ. ಎಲ್ಲ ವೃತ್ತಿಗಾಯಕರೂ ವಂಶಪಾರಂಪರ್ಯವಾಗಿ ನಡೆದುಕೊಳ್ಳುತ್ತಾರೆ.[೧]

ದೀಕ್ಷೆ[ಬದಲಾಯಿಸಿ]

‘ಆಸಾದಿ’ ಹೊಲಗೇರಿಯ ಒಬ್ಬ ಧಾರ್ಮಿಕ ಮುಖಂಡ. ಅವನು ಹಾಗೆ ಮುಖಂಡನಾಗುವುದೂ ಧಾರ್ಮಿಕ ವಿಧಿಯ ಮೂಲಕವೇ. ಆದರೆ, ಏಳೆಂಟು ವರ್ಷದ ಹುಡುಗನೊಬ್ಬನನ್ನು ಆಯ್ಕೆ ಮಾಡಿ ಅಮ್ಮನ ದೇವಸ್ಥಾನಕ್ಕೆ ಕರೆತಂದು, ತಲೆಯ ಕೂದಲು ತೆಗೆಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿ ಕಂಬಳಿ ಗದ್ದುಗೆ ಮೇಲೆ ಕೂರಿಸಲಾಗುತ್ತದೆ. ನಾಲ್ಕು ಮೂಲೆಗೆ ನಾಲ್ಕು ಕಳಸ ಇಟ್ಟು ಪೂಜಿಸಲಾಗುತ್ತದೆ. ಹುಡುಗನಿಗೆ ಕಂಕಣ ಕಡ್ಡಿ ಐದು ಬಿಳಿಯ ಮುತ್ತುಗಳನ್ನು ಕೊರಳಿಗೆ ಕಟ್ಟಲಾಗುತ್ತದೆ. ಅನಂತರ ಅವನ ಭುಜ ಮತ್ತು ಎದೆಯ ಮೇಲೆ ಮುದ್ರೆ ಒತ್ತಲಾಗುತ್ತದೆ. ಅಮ್ಮನ ಮೇಲಿನ ಸೀರೆಯೊಂದನ್ನು ತೆಗೆದು ಇವನಿಗೆ ಹೊದಿಸಿದ ಮೇಲೆ, ಈ ಹಿಂದಿನ ಆಸಾದಿಯಿಂದ ಅಂದರೆ ‘ಗುರು’ವಿನಿಂದ ದೀಕ್ಷೆಯನ್ನು ನೀಡಲಾಗುತ್ತದೆ. ದೀಕ್ಷೆಯ ಸಂದರ್ಭದಲ್ಲಿ “ಶುಕ್ರವಾರ ಮಂಗಳವಾರ ಅಮ್ಮನ ಪೂಜೆಯ ಕಾಲಕ್ಕೆ ಹಲಗೆ ಬಾರಿಸುತ್ತ, ಅಮ್ಮನ ಸೇವೆ ಮಾಡುತ್ತಾನೆ. ಯಾರೊಬ್ಬರಿಗೂ ಅನ್ಯಾಯ ಮಾಡುವುದಿಲ್ಲ, ಕೆಟ್ಟ ಮಾತುಗಳನ್ನಾಡುವುದಿಲ್ಲ, ಮೆಟ್ಟನ್ನು ಕೈಯಲ್ಲಿ ಹಿಡಿಯುವುದಿಲ್ಲ, ದನಕರುಗಳನ್ನು ಕಾಲಲ್ಲಿ ಒದೆಯುವುದಿಲ್ಲ, ಮತ್ತೊಬ್ಬರ ಎಂಜಿಲು ತಟ್ಟೆಯಲ್ಲಿ ಉಣ್ಣುವುದಿಲ್ಲ” ಎಂಬ ವಚನ ಬೋಧನೆ ಮಾಡಲಾಗುತ್ತದೆ. ಅನಂತರ ಅಮ್ಮನ ಪಾದಗಳಿಗೆ ಅಡ್ಡ ಬೀಳಿಸಿ ‘ಉಧೋ ಉಧೋ’ ಎಂದು ಕೂಗಿ ಅಮ್ಮನ ಭಂಡಾರ ಹಚ್ಚಲಾಗುತ್ತದೆ. ಹೆಚ್ಚು ಕಡಿಮೆ ಒಂದು ಮದುವೆ ಮಾಡಿದಂತೆ ವಿಧಿಬದ್ಧವಾಗಿ ಈ ಕ್ರಿಯೆ ನಡೆಯುತ್ತದೆ. ಅಂದಿನಿಂದ ಅವನು ಸಾಮಾನ್ಯ ಅಲ್ಲ. ಅವನಿಗೊಂದು ಗೌರವದ ಸ್ಥಾನ ಪ್ರಾಪ್ತವಾಗುತ್ತದೆ. ಅಲ್ಲದೆ, ಹಬ್ಬದ ಸಂದರ್ಭದಲ್ಲಿ ಸ್ವತಃ ಅಮ್ಮನನ್ನು ಮೇಲ್ಜಾತಿಯ ಜನರನ್ನು ಹೀಯ್ಯಾಳಿಸುವ ವಿಶೇಷ ಅಧಿಕಾರ ಕೂಡ ಪ್ರಾಪ್ತವಾಗುತ್ತದೆ. ಈ ದೀಕ್ಷೆಯ ವಿಧಾನ ಪ್ರಾದೇಶಿಕವಾಗಿ ಬದಲಾಗುತ್ತದೆ.

ವೇಷ[ಬದಲಾಯಿಸಿ]

ತಲೆಗೆ ಕೆಂಪು ಮುಂಡಾಸು, ಬಿಳಿಯ ಅಂಗಿ, ಅಂಗಿಯ ಮೇಲೊಂದು ಅಮ್ಮನ ಕೆಂಪು ಬಣ್ಣದ ವಸ್ತ್ರ, ಬಿಳಿಯ ಪಂಚೆ, ಹಣೆಯಲ್ಲಿ ಭಂಡಾರ, ಕಿವಿಯಲ್ಲಿ ಕರ್ಣಕುಂಡಲ, ಹಿಂದಲೆಗೆ ಅಮ್ಮನ ಮೈಮೇಲಿನ ಹೂ, ಕೈಗೆ ಮತ್ತು ಕಾಲಿಗೆ ಪಂಚಲೋಹದ ಬಳೆ ಇವು ಅಸಾದಿಯ ಸಾಮಾನ್ಯ ವೇಷ ಭೂಷಣ.ಆಸಾದಿ ಸಾಮಾನ್ಯವಾಗಿ ತನ್ನಲ್ಲಿ ಯಾವಾಗಲೂ ತಮಟೆ ಇಟ್ಟುಕೊಂಡಿರುತ್ತಾನೆ. ಸಂದರ್ಭ ಬಂದಾಗಲೆಲ್ಲ ಅದನ್ನು ಬಾರಿಸುವುದೇ ಅವನ ಕೆಲಸ. ಕೆಲವು ಕಡೆ ಚೌಡಿಕೆ ಮತ್ತು ಕೆಲವು ಕಡೆ ಉರುಮೆ ವಾದ್ಯವನ್ನು ಬಳಸುವ ಅಸಾದಿಗಳೂ ಉಂಟು.

ಹಾಡು ಮತ್ತು ಕುಣಿತ[ಬದಲಾಯಿಸಿ]

ದೀಕ್ಷೆ ಪಡೆಯುವ ಆಸಾದಿ ಅಂದಿನಿಂದ ಮಾರಿಗುಡಿಯ ಜೊತೆಗಿನ ಸಂಬಂಧವನ್ನು ಸದಾ ಇಟ್ಟುಕೊಳ್ಳಬೇಕಾಗುತ್ತದೆ. ಗುಡಿಯಲ್ಲಿನ ಆಗುಹೋಗುಗಳು, ಹಬ್ಬ ಹರಿದಿನಗಳು ಹಾಗೂ ಪರ, ಸೇವೆ ಇತ್ಯಾದಿಗಳ ಸಂದರ್ಭದಲ್ಲಿ ತಮಟೆ ಬಡಿದುಕೊಂಡು ಸುತ್ತಮುತ್ತಲ ಊರುಗಳಲ್ಲಿ ‘ಸಾರು’ ಹಾಕಬೇಕಾಗುತ್ತದೆ. ಅಂದರೆ ದೇವರಿಗೆ ಸೇರಿದ ಒಕ್ಕಲುಗಳ ವ್ಯಾಪ್ತಿಯಲ್ಲಿ ಬರುವ ಊರೂರ ಬೀದಿಗಳಲ್ಲಿ ನಿಂತು ತಮಟೆ ಬಡಿಯುತ್ತ ಸುದ್ದಿಯನ್ನು ಮುಟ್ಟಿಸುವುದು ಮಧ್ಯೆ ಮಧ್ಯೆ ಅಮ್ಮನನ್ನು ಕುರಿತು ಹಾಡುಗಳನ್ನು ಹೇಳುವುದು. ಅಂಥ ಹಾಡಿನ ಒಂದು ಉದಾಹರಣೆ ಇಲ್ಲಿದೆ: ಉಧೋ ಭದ್ರಮಹಾಕಾಳಿಂ ಉಜ್ಜಿನಿ ಸಿರಿದೇವಿ ಒಂದೊಂದೇ ರೂಪಿಲಿ ಬಂದಾಕೆ ಅಲ್ವೇನೆ ಮಲ್ಲಮ್ಮನ ಮಗಳೆ ರುದ್ದರನ ತಾಯಿ ಭದ್ರ ಮಹಾಂಕಾಳಿ ಬೂದಿ ಮುಚ್ಚಿದ ಕೆಂಡ ಆಕಾಶಕೆ ಬ್ರಹ್ಮಾಂಡ ಕುಕ್ಕವಾಡದಮ್ಮ ದೊರೆಹಿರಿ ಅಂತರಗಟ್ಟೆ ಬಸವಾಪಟ್ನದ ದುರುಗಮ್ಮ ಉಚಗಿ ಎಲ್ಲಮ್ಮ ಏಳು ಕೋಟಿ ಮೈಲಾರಲಿಂಗ ಖಂಡುಗ ಬಂಡಾರದವಳು ಕಾರುಣೀಕ ಧರಿಸಿ ನೀ ಬರೋ ರಭಸಕ್ಕಮ್ಮ, ಗುಂಡು ಗುಡುಗುಟ್ಟಿತು ಭೂಮಿ ಅಲ್ಲಾಡಿತ್ತು ಕೆಂಡ ಹಾರಿದ್ದವು ಕ್ವಾಣ ಮಾರಿ, ಕೊತ್ಲಮಾರಿ, ಉರಿಮಾರಿ, ಸಿರಿಮಾರಿ ಕ್ವಾಟೆ ಮಾರಿ, ದೊರೆಹಿರಿ ಅಂತರಗಟ್ಟೇ ಕರಿಯವ್ವ ಇವಳು ಉಧೋ ಅಂದ ಮನಿಗೆ ಉದುಪತಿ ಆದ್ಲಂತೆ ಇವಳು ಜೋ ಅಂದ ಮನಿಗೆ ಜೋಗುಳ ಹಾಡಿಕೊಂಡು ಬಂದ್ಲಂತೆ ಮಂಗಳವಾರದ ಮಾಯಾಕಾತಿ ಬುಧವಾರದ ಬುದ್ಧಿವಂತೆ ಬೇಸ್ತವಾರದ ಬೇಟಕಾತಿ ಶುಕ್ರವಾರದ ಶೀಲವಂತೆ ಒಂದೊಂದೇ ರೂಪಿನಲಿ ಬಂದಾಕೆ ಅಲ್ವೇನೆ ರುದ್ರನ ತಾಯಿ ಭದ್ರಮಹಾಂಕಾಳಿ ಬೂದಿ ಮುಚಿದ ಕೆಂಡ ಆಕಾಶಕ್ಕೆ ಪರಮಂಡ ಇವರ ಆಡೋ ಮಕ್ಕಳಲ್ಲಿ ತೂಗೋ ತೊಟ್ಟಿಲಲ್ಲಿ ಬೇಡಿದಂಥ ಭಾಗ್ಯವನ್ನು ಕೊಟ್ಟು ಇವರೆತ್ತೋದ್ರು ಮುತ್ತನ ಸೆರಗು ಮರೆ ಮಾಡಿಕೊಂಡು ಬಾರಮ್ಮ ರಕ್ಷಿಸು ಮಹಾಂಕಾಳಿ ದೊರೆಪಿರಿ ಅಂತರಗಟ್ಟೆವ್ವ ಚಿಕ್ಕವ್ವ ದುಟ್ಟವ್ವ ಪವಾಡ ಪುರುಷೆ ಉಧೋ ಉಧೋ ಇದೇ ರೀತಿಯಲ್ಲಿ ವಿವಿಧ ಹಾಡುಗಳನ್ನು ಹಾಡುತ್ತಾ ದೇವಿಯನ್ನು ಕೊಂಡಾಡುವ ಆಸಾದಿ ಸದಾ ಅವಳ ಮತ್ತು ಊರಿನ ಕೈಂಕರ್ಯದಲ್ಲಿ ತೊಡಗುತ್ತಾನೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸಂಬಂಧಪಟ್ಟ ಊರುಗಳಿಗೆ ಹೋಗಿ ಭಿಕ್ಷೆ ಬೇಡಿ ಬರುತ್ತಾನೆ. ಭಕ್ತರ ಮನೆಗೆ ಭಂಡಾರ ಹಚ್ಚುತ್ತಾನೆ. ಕೆಲವು ಊರುಗಳಲ್ಲಿ ಆಸಾದಿಗಳು ಭಿಕ್ಷೆಗೆ ಹೋಗುವುದಿಲ್ಲ. ಬದಲಾಗಿ ಅವರಿಗೆ ವರ್ಷಕ್ಕೊಂದು ಬಾರಿ ‘ಅಡುಗೆ’ ನೀಡಲಾಗುತ್ತದೆ. ಅಂದರೆ ಸುಗ್ಗಿ ಸಂದರ್ಭದಲ್ಲಿ ನಿಗದಿತ ಅಳತೆಯ ದವಸಧಾನ್ಯ ನೀಡುವುದು; ಮತ್ತೂ ಕೆಲವು ಕಡೆ ಆಸಾದಿಗಾಗಿ ‘ಕೊಡುಗೆ’ ಜಮೀನು ನೀಡಿ ಅವನೇ ವ್ಯವಸಾಯ ಮಾಡಿಕೊಳ್ಳುವಂಥಾ ಅವಕಾಶವನ್ನೂ ಕಲ್ಪಿಸಲಾಗಿದೆ. ಭಕ್ತರು ಆಸಾದಿಗೆ ತಲೆಗೆ ಎಣ್ಣೆ, ಹಣ್ಣು ಕಾಯಿ ಹಾಗೂ ಮಡ್ಲಕ್ಕಿಗಳನ್ನು ನೀಡುವ ಪರಿಪಾಠವೂ ಕೆಲವೆಡೆ ಉಂಟು. ಆಸಾದಿಯ ಮಹತ್ವ ಇರುವುದು ಹಬ್ಬಗಳಲ್ಲಿ. ಹಬ್ಬ ಸಾರಿದ ದಿನದಿಂದ ಆಸಾದಿ ಮಡಿಯಲ್ಲಿ ಇರುತ್ತಾನೆ. ಮನೆಯ ವಾಸವನ್ನು ಬಿಡುತ್ತಾನೆ. ನೇಮನಿಷ್ಠೆಯಿಂದ ಇರುತ್ತಾನೆ. ದೇವಿಯ ಮೆರವಣಿಗೆ ಹಾಗೂ ಇತರ ಅನೇಕ ಆಚರಣೆಗಳ ಸಂದರ್ಭದಲ್ಲಿ ದೇವಿಯ ಜೊತೆಗೆ ಇರಬೇಕು. ಮಾರಿಯ ಮೆರವಣಿಗೆ ಮತ್ತು ಕುಣಿತದ ಸಂದರ್ಭಕ್ಕೆ ಊರ ಬಯಲಿನಲ್ಲಿ ಜನ ಸೇರುತ್ತಾರೆ. ಅಂಥ ಒಂದು ನಿಗದಿತ ಸಮಯ ಆಸಾದಿಯ ಮೈದುಂಬಿದ ಸಂದರ್ಭವೇ ಆಗಿ ಪರಿವರ್ತಿತವಾಗುತ್ತದೆ. ಉರುಮೆಯ ಬಡಿತ ಅಥವಾ ತಮಟೆಯ ಬಡಿತದ ಗತಿಗೆ ತಕ್ಕಂತೆ ನಿಧಾನಕ್ಕೆ ಕಿಣಿಯತೊಡಗುತ್ತಾನೆ. ಅದು ರಭಸದ ಕುಣಿತವಲ್ಲ. ನಿಧಾನಗತಿಯ ಲಘುನರ್ತನ. ಆದರೆ ದೇವಿ ಮೈದುಂಬಿದಂತೆ ಅವನ ಓಲಾಟ, ಬೀಗುವುದು ಮತ್ತು ವಾಸ್ತವ ರೂಪದ ಅಭಿನಯ ಹೆಚ್ಚಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಮೇಲ್ವರ್ಗದ ಜನ ಆಸಾದಿಯಿಂದ ಬೈಸಿಕೊಳ್ಳುವುದಕ್ಕಾಗಿಯೇ ನಿಂತಿರುತ್ತಾರೆ. ಅವನು ಒಂದು ವೇಳೆ ಬಯ್ಯದಿದ್ದರೆ ತಮಗೆ ಶ್ರೇಯಸ್ಸಲ್ಲ ಎಂದು ಭಾವಿಸಿ ತಮ್ಮನ್ನು ಬೈಯ್ಯುವಂತೆ ಆಸಾದಿಯನ್ನೇ ಪ್ರೇರೇಪಿಸುತ್ತಾರೆ. ಆಂಧ್ರದ ಕೆಲವು ಭಾಗಗಳಲ್ಲಿ ಉಗುಳಿಸಿಕೊಳ್ಳುವ ಆಚರಣೆಯೂ ಇದೆಯಂತೆ. ಚೊಂಬಿನಲ್ಲಿ ನೀರು ಕೊಟ್ಟು, ಆನೀರನ್ನು ಮುಕ್ಕಳಿಸಿ ಆಸಾದಿ ಉಗಿಯುತ್ತಾನಂತೆ. ಮೊದಲಿಗೆ ದೇವಿಯ ಸ್ತುತಿ ಆದಮೇಲೆ ಆಸಾದಿ ಹೊಗಳುವ ಮತ್ತು ತೆಗಳುವ ಅಪ್ಪಣೆ ಕೇಳುತ್ತಾನೆ. “ಕುಲದ ಸ್ವಾಮಿ ಗೌಡ, ಶಾನುಭೋಗ, ಗೊಂಚಿಕಾರ, ತೋಟಿ, ತಳವಾರ ಮೊದಲ್ಗೊಂಡ ಕುಲವನ್ನೊಂದು ಜಾತಿ ಹನ್ನೆರಡು ಕೈವಾಡಸ್ತರು ನಿಮ್ಮ ಈ ಮಗನಿಗೆ ಮಾತಾಡಲು ಅಪ್ಪಣೆ ಕೊಡ್ತೀರಾ ಸ್ವಾಮಿ..” ಹೀಗೆ ಮೂರು ಬಾರಿ ಕೇಳುತ್ತಾನೆ. ಎಲ್ಲರೂ ಒಂದೇ ರೀತಿಯಲ್ಲಿ ‘ಅಪ್ಪಣೆ’ ಎಂದು ಕೂಗುತ್ತಾರೆ. ಆಸಾದಿ ಒಬ್ಬೊಬ್ಬರನ್ನೇ ಹೆಸರಿಡಿದು ಅವರ ಗುಣಾವಗುಣಗಳನ್ನು ಜಾಲಾಡಿಸ ತೊಡಗುತ್ತಾನೆ. ಗೌಡ ಗಂಭೀರನಲ್ಲ ತೌಡು ಬುಕ್ಕಿಟ್ಟಲ್ಲ ಗೌಡನ ಮಗಳು ಗರತಿ ಅಲ್ಲ ಔಡಲ ಕಾಯಿ ಬೆಳಸಲ್ಲ... ಹೀಗೇ ಗೌಡನೂ ಮೊದಲ್ಗೊಂಡು ಪಟೇಲ ಶಾನುಭೋಗನಾದಿಯಾಗಿ ಎಲ್ಲರ ಬಗ್ಗೆಯೂ ವ್ಯಂಗ್ಯ ರೂಪದ ಹಾಡಲ್ಲದೆ, ಅವರ ಲೈಂಗಿಕ ವ್ಯವಹಾರಗಳನ್ನು ಕುರಿತ ಬಣ್ಣನೆಯೂ ನಡೆಯುತ್ತದೆ. ಇಂಥದ್ದು ಅತಿಯಾದಾಗ ಆಸಾದಿಗೆ ದಕ್ಷಿಣೆ ನೀಡಿ ನಿಲ್ಲಿಸುವಂತೆ ಕೇಳಿಕೊಳ್ಳುವುದೂ ಉಂಟು. ಊರಿನ ದೊಡ್ಡ ಮನುಷ್ಯರ ಹಿಯ್ಯಾಳಿಕೆಯ ನಂತರ ಸ್ವತಃ ಮಾರಿಯನ್ನೇ ತರಾಟೆಗೆ ತೆಗೆದುಕೊಳ್ಳಲಾಗುತ್ತದೆ. ಆಸಂದಿ ಸೀಮೆಯೋಳೆ ರೇಸಿಮೆ ಸೀರೆಯೋಳೆ ಏಸೊಂದು ಬೆಳ್ಳಿ ಬಳೆಯೋಳೆ / ಮಾರಮ್ಮ ‘ಬೋಸುಡಿ’ ಬಾರೆ ಬಯಲಿಗೆ ತುಳಿಯಲ್ಪಟ್ಟ ಜನರ ಆಕ್ರೋಶದ ಬುಗೆಯನ್ನು ತಣ್ಣಗಾಗಿಸುವ ಹುನ್ನಾರ ಈ ಆಸಾದಿ ಆಚರಣೆಯಲ್ಲಿದೆ ಎಂಬ ಅನುಮಾನ ಬರುತ್ತದಾದರೂ, ಅಂಥ ಜನರ ಪ್ರತಿನಿಧಿಯಾಗಿ ಆಸಾದಿ ತನ್ನ ಸಾಂಕೇತಿಕ ಭಾವನೆಯನ್ನು ಆಚರಣೆಯೊಂದರ ಪರೀಧಿಯಲ್ಲಿ ಮಾತ್ರ ವ್ಯಕ್ತಪಡಿಸುತ್ತಾನೆ. ಈ ವಿಶಿಷ್ಟ ಸಂಪ್ರದಾಯ ಸಾಮಾಜಿಕ ವಿಶ್ಲೇಷಣೆಯ ದೃಷ್ಟಿಯಿಂದ ಇನ್ನಷ್ಟು ಅಧ್ಯಯನಕ್ಕೆ ಒಳಗಾಗಬೇಕಾಗಿದೆ. ಅನೇಕ ಆಸಾದಿಗಳು ಉತ್ತಮ ಗಾಯಕರೂ, ಕಥೆಗಾರರೂ ಹೌದು. ತಮ್ಮ ತಮ್ಮ ದೇವಿಗೆ ಸಂಬಂಧಿಸಿದ ಕಥೆ ಹಾಗೂ ಸ್ಥಳ ಪುರಾಣಗಳನ್ನು ಹಾಡಿನ ರೂಪದಲ್ಲಿ ಹೇಳಬಲ್ಲ ಇವರು ಹಿನ್ನಲೆ ವಾದ್ಯವನ್ನಾಗಿ ತಮಟೆ, ಚೌಡಿಕೆ ಹಾಗೂ ಉರುಮೆಯನ್ನು ಬಳಸುತ್ತಾರೆ.[೨]

ಉಲ್ಲೇಖಗಳು[ಬದಲಾಯಿಸಿ]

  1. https://kn.wikipedia.org/wiki/%E0%B2%86%E0%B2%B8%E0%B2%BE%E0%B2%A6%E0%B2%BF
  2. "ಆರ್ಕೈವ್ ನಕಲು". Archived from the original on 2020-09-26. Retrieved 2018-10-31.