ಆದ್ಯ ರಾಮಾಚಾರ್ಯ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಆದ್ಯ ರಾಮಾಚಾರ್ಯರ ಐತಿಹಾಸಿಕ ಕಾದಂಬರಿಗಳು ವಾಸ್ತವಿಕತೆಗೆ ಸ್ವಲ್ಪವೂ ಅಪಚಾರವಾಗದಂತೆ ಬರೆಯಲ್ಪಟ್ಟಿವೆ. ಅದೇ ಸಮಯದಲ್ಲಿ ವರ್ಣನೆಯು ಕತೆಯಲ್ಲಿ ಆಸಕ್ತಿ ಹುಟ್ಟಿಸುವಂತಿರುತ್ತದೆ. ದಾಸಸಾಹಿತ್ಯ ಸಂಶೋಧನೆಗೂ ಸಹ ಆದ್ಯರು ವಿಶೇಷ ಸೇವೆ ಸಲ್ಲಿಸಿದ್ದಾರೆ.

ಬಾಲ್ಯ ಹಾಗು ಶಿಕ್ಷಣ[ಬದಲಾಯಿಸಿ]

ಆದ್ಯ ರಾಮಾಚಾರ್ಯರ ಮೂಲಪುರುಷರಾದ ಶೇಷಾದ್ರಿ ಇವರು ತಮಿಳುನಾಡಿನ ಕುಂಭಕೋಣದವರು. ಇವರು ವಿಜಾಪುರ ಜಿಲ್ಲೆಯ ಹಿರೇಮಣ್ಣೂರಿನಲ್ಲಿ ನೆಲೆಸಿದರು. ಇವರ ವಿದ್ವತ್ತಿಗೆ ಮೆಚ್ಚಿ ಪೇಶವೆ ದೊರೆಗಳು ಇವರಿಗೆ ಅಗರಖೇಡ, ಭುಂಯಾರ,ಪಡಗಾನೂರ, ಬಳ್ಳೊಳ್ಳಿ ಹಾಗು ಮಣ್ಣೂರು ಗ್ರಾಮಗಳ ಜಹಗೀರಿಯನ್ನು ಕೊಟ್ಟರು. ರಾಮಾಚಾರ್ಯರು ೧೯೨೬ ನವೆಂಬರದಲ್ಲಿ, ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ, ತಾಯಿಯ ತವರೂರಾದ ಲಚ್ಚಾಣದಲ್ಲಿ ನರಕ ಚತುರ್ದಶಿಯಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಲಚ್ಚಾಣ ಹಾಗು ಭುಂಯಾರದಲ್ಲಿ ನಡೆಯಿತು. ಮಾಧ್ಯಮಿಕ ಶಿಕ್ಷಣವು ವಿಜಾಪುರದರಬಾರ ಹಾಯ್‍ಸ್ಕೂಲಿನಲ್ಲಿ ಆಯಿತು. ಮ್ಯಾಟ್ರಿಕ್ ಪರೀಕ್ಷೆಗೆ ಕೂಡುವ ಮೊದಲೆ ರಾಮಾಚಾರ್ಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಶಾಲೆಯನ್ನು ಬಿಟ್ಟರು. ಆ ಬಳಿಕ ಸತ್ಯಜ್ಞಾನ ಸ್ವಾಮೀಜಿಯವರ ಒತ್ತಾಸೆಯಿಂದ ಈಗ ಮಹಾರಾಷ್ಟ್ರ ರಾಜ್ಯದಲ್ಲಿರುವ ಸೊಲ್ಲಾಪುರದಲ್ಲಿ ಸಂಸ್ಕೃತ ಅಭ್ಯಾಸ ಮಾಡಿದರು.

ಉದ್ಯೋಗ[ಬದಲಾಯಿಸಿ]

ಸೊಲ್ಲಾಪುರದಿಂದ ವಿಜಾಪುರಕ್ಕೆ ಮರಳಿದ ರಾಮಾಚಾರ್ಯರು ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಮುದ್ರಣಾಲಯದಲ್ಲಿ ಕೆಲಕಾಲ ಕೆಲಸ ಮಾಡಿದರು. ಆ ಸಮಯದಲ್ಲಿ ಇವರ ತಂದೆ ಸೇತುರಾಮಾಚಾರ್ಯರಿಗೆ ಮೈಸೂರು ಅರಮನೆಯಲ್ಲಿ ಭಾಗವತ ಪುರಾಣ ಪ್ರವಚನ ಮಾಡಲು ಆಹ್ವಾನ ದೊರೆತಿದ್ದರಿಂದ ರಾಮಾಚಾರ್ಯರೂ ಸಹ ತಂದೆಯೊಡನೆ ಮೈಸೂರಿಗೆ ತೆರಳಿ ಅಲ್ಲಿ ಉಷಾ ಸಾಹಿತ್ಯಮಾಲೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆನಂತರ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡತೊಡಗಿದರು. ಆದ್ಯ ರಾಮಾಚಾರ್ಯರು ೧೯೯೦ರ ಸುಮಾರಿನಲ್ಲಿ “ವರದರಾಜ ಪ್ರಕಾಶನ” ವನ್ನು ಪ್ರಾರಂಭಿಸಿದರು. ತನ್ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಐತಿಹಾಸಿಕ[ಬದಲಾಯಿಸಿ]

 • ಹನುಮಧ್ವಜ ಹಾರಿತು
 • ಸೂರ್ಯಾಸ್ತ
 • ವಿಜಾಪುರದ ಪತನ
 • ಶಂಭೂ
 • ಶ್ರೀದರ್ಶನ
 • ಶ್ರೀಸಮರ್ಥ
 • ಧನಂಜಯ
 • ಕಾಶ್ಮೀರದ ಜ್ವಾಲಾಮುಖಿ
 • ಮಾತೃಛಾಯಾ
 • ವಿಕ್ರಾಂತ ಕೇಸರಿ
 • ಭಾರತೀಯ ಮುಸಲ್ಮಾನ ಶೊಧ ಹಾಗು ಬೋಧ
 • ಭವಾನಿ
 • ರಂಭಾ
 • ಪ್ರಸನ್ನ ವೆಂಕಟ
 • ರಾಜಯೋಗಿ

ಪೌರಾಣಿಕ[ಬದಲಾಯಿಸಿ]

 • ರಾಧೇಯ

ಪತ್ತೇದಾರಿ[ಬದಲಾಯಿಸಿ]

 • ಉಮಾಪತಿ

ಕ್ಷೇತ್ರಪರಿಚಯ[ಬದಲಾಯಿಸಿ]

 • ತಿರುಪತಿ ಶ್ರೀಕ್ಷೇತ್ರ
 • ತಿರುಪತಿ ಶ್ರೀಕ್ಷೇತ್ರ (ಆಂಗ್ಲ)
 • ಶ್ರೀಕೃಷ್ಣ ದ್ವಾರಕಾ

ಇತರ[ಬದಲಾಯಿಸಿ]

 • ರಚನಾ (ವ್ಯಕ್ತಿ ಪರಿಚಯ)
 • ಕರ್ನಾಟಕ ವಿದ್ಯಾವೈಭವ (ಮಾಜಿ ಶಿಕ್ಷಣ ಸಚಿವರಾದ ಶ್ರೀ ಜಿ.ಬಿ.ಶಂಕರರಾಯರ ಅಭಿನಂದನಾ ಗ್ರಂಥ)

ಸಾಮಾಜಿಕ ಕಾರ್ಯ[ಬದಲಾಯಿಸಿ]

ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳುವಳಿ ಹಾಗು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ರಾಮಾಚಾರ್ಯರು ರಾಷ್ಟ್ರೀಯ ವಿವೇಚನಾ ಆಂದೋಲನ ಹಾಗು ಕರ್ನಾಟಕ ಏಕೀಕರಣ ಹೋರಾಟದಲ್ಲಿಯೂ ಪಾಲ್ಗೊಂಡರು. ತಿರುಪತಿಯಲ್ಲಿಯ ದಾಸಸಾಹಿತ್ಯ ಹಾಗು ಸಂಸ್ಕೃತ ಗ್ರಂಥಗಳಿಗೆ ಅನುದಾನವೀಯುವ ಸಮಿತಿಯಲ್ಲಿ ಸದಸ್ಯರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ಮಾಧ್ವ ಮಹಾಮಂಡಲ, ಬೆಂಗಳೂರು ವಿದ್ಯಾಪೀಠದ ಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ದೊಡ್ಡ ಬಸವಣ್ಣ ದೇವಸ್ಥಾನ , ಕಾರಂಜಿ ಅಂಜನೇಯ ಸ್ವಾಮಿ ದೇವಸ್ಥಾನ, , ಮಲ್ಲೇಶ್ವರದ ಆಂಜನೇಯ ಸ್ವಾಮಿ ದೇವಸ್ಥಾನ ಹಾಗು ರಾಘವೇಂದ್ರ ಮಠದ ಸಂಚಾಲಕರಾಗಿ ಸೇವೆಗೈದಿದ್ದಾರೆ. ಹಂಪಿಯಲ್ಲಿಯ ಯಂತ್ರೋದ್ಧಾರ ದೇವಾಲಯದ ಜೀರ್ಣೋದ್ಧಾರ ಸೇವಾ ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಿರುಮಲೆಕರ್ನಾಟಕ ಕ್ಷೇತ್ರದ ಸದಸ್ಯರಾಗಿ, ದೇವಸ್ಥಾನ ಪ್ರಾಚೀನ ಗ್ರಂಥಗಳ ಮುದ್ರಣ ಅನುದಾನ ಸಮಿತಿ ಸದಸ್ಯರಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ದಿ.ಕೌಜಲಗಿ ಹಣಮಂತರಾಯರ ಶತಮಾನೋತ್ಸವ ಸಮಿತಿ ಹಾಗು ಮಂಗಳವೇಡೆ ಶ್ರೀನಿವಾಸರಾಯರ ಶತಮಾನೋತ್ಸವ ಸಮಿತಿ ಸಹಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ದಿ.ಮೊಹರೆ ಹಣಮಂತರಾಯರ ಹಾಗು ಲೋಕಮಾನ್ಯ ತಿಲಕರ ಶತಮಾನೋತ್ಸವ ಸಮಿತಿಯಲ್ಲಿಯೂ ಸಹ ಭಾಗವಹಿಸಿದ್ದಾರೆ. ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಆಗಮ ಪರೀಕ್ಷಾ ವಿಭಾಗದ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಅಖಿಲ ಕರ್ನಾಟಕ ಗಡಿನಾಡು ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ಸದಾಶಿವನಗರದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಸಹಕಾರ್ಯದರ್ಶಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.

ಮಾನ ಸನ್ಮಾನ[ಬದಲಾಯಿಸಿ]

 • ಆದ್ಯ ರಾಮಾಚಾರ್ಯರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
 • ತಂಜಾವೂರಿನ ಇತಿಹಾಸ ಬರೆದಿದ್ದಕ್ಕೆ ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನದಿಂದ ಬಂಗಾರದ ಪದಕ ದೊರೆತಿದೆ.
 • ಕರ್ನಾಟಕ ರಾಜ್ಯ ಸಾಮಾಜಿಕ ಹಿತರಕ್ಷಣೆ ಮತ್ತು ಸಾಂಸ್ಕೃತಿಕ ಸಂಘದಿಂದ ಸನ್ಮಾನಿಸಲಾಗಿದೆ.
 • ಪೇಜಾವರ ವಿಶ್ವೇಶ್ವರ ತೀರ್ಥರಿಂದ, ಪುತ್ತಿಗೆ ಮಠಾಧೀಶರಿಂದ, ಉತ್ತರಾದಿ ಮಠಾಧೀಶರಿಂದ ಹಾಗು ಮುಂಬಯಿಯ ಶ್ರೀ ಸತ್ಯಜ್ಞಾನ ವಿದ್ಯಾಪೀಠದಿಂದ ಗೌರವಿಸಲ್ಪಟ್ಟಿದ್ದಾರೆ.
 • ಬೆಂಗಳೂರಿನ ಜ್ಞಾನಜ್ಯೋತಿ ಕಲಾಮಂದಿರದಿಂದ ಸನ್ಮಾನಿತರಾಗಿದ್ದಾರೆ.
 • ಆಖಿಲ ಕರ್ನಾಟಕ ಲೇಖಕರಿಂದ ಪಾಂಡವಪುರ ಪ್ರಶಸ್ತಿ ದೊರೆತಿದೆ.