ವಿಷಯಕ್ಕೆ ಹೋಗು

ಅಶೋಕಪುರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಶೋಕಪುರಂ ಮೊದಲ ಹೆಸರು "ದೊಡ್ಡ ಹೊಲಗೇರಿ"ಎಂಬುದಾಗಿತ್ತು. ಈ ಹೆಸರು ನೇರವಾಗಿ ಜಾತಿಯೊಂದನ್ನು ಸೂಚಿಸುತ್ತದೆಂದು ಪರಿಭಾವಿಸಿದ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ಅವರು ೧೯ನೇ ಶತಮಾನದ ಉತ್ತರಾರ್ಧದಲ್ಲಿ ಈ ಊರಿಗೆ "ಅಶೋಕಪುರಂ" ಎಂದು ನಾಮಕರಣ ಮಾಡಿದರು. ಅಶೋಕಪುರಂ ಯಾವಾಗ ಹುಟ್ಟಿತು? ಎಂಬುದಕ್ಕೆ ಈಗಿರುವ ಒಂದೇ ಒಂದು ಆಧಾರವೆಂದರೆ-ಆ ಊರಿನ ಚಿಕ್ಕಗರಡಿ ಪ್ರವೇಶದ್ವಾರದ ಮೇಲ್ಭಾಗದಲ್ಲಿ ಅಳವಡಿಸಿರುವ 'ಶಿಲಾಶಾಸನ'ದಲ್ಲಿನ ವಿವರಣೆ.

ಊರಿನ ಇತಿಹಾಸ

[ಬದಲಾಯಿಸಿ]
  • ಭಾರತ ಹಳ್ಳಿಗಳ ದೇಶ. ಇದು"ನಾಗರಿಕತೆಯ ತೊಟ್ಟಿಲು"ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದರಲ್ಲಿ ಕರ್ನಾಟಕವು ಒಂದು ಭಾಗ. ಈ ಕರ್ನಾಟಕದಲ್ಲಿ ಮೈಸೂರುರಾಜ್ಯ ಮತ್ತೊಂದು ಭಾಗ. ಇದರೊಳಗೆ ಅಶೋಕಪುರಂ ಎಂಬ ನಗರವಿದೆ. ಇದು ಮೈಸೂರು ನಗರದ ಒಂದು ಪ್ರಮುಖ ಭಾಗವಾಗಿದೆ. ಇದರ ಮೊದಲ ಹೆಸರು "ದೊಡ್ಡ ಹೊಲಗೇರಿ"ಎಂಬುದಾಗಿತ್ತು.
  • ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಊರಿನ ಬಗ್ಗೆ ಆಸಕ್ತಿ ವಹಿಸಲು ಮುಖ್ಯ ಕಾರಣವೆಂದರೆ-ಮೂಲ ಅರಮನೆಯು ಆಕಸ್ಮಿಕ ಅವಘಡವೊಂದರಿಂದ ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಮೈಸೂರಿನ ದಲಿತ ಜನರು ತಮ್ಮ ಜೀವದ ಹಂಗು ತೊರೆದು ಅರಮನೆಯಲ್ಲಿನ ಬಹುಪಯೋಗಿ ವಸ್ತುಗಳನ್ನು, ಅಲ್ಲಿನ ಬಹುತೇಕ ಜನರನ್ನು ರಕ್ಷಿಸಿದರಂತೆ.
  • ಇದರಿಂದ ಸಂತೋಷಗೊಂಡ ಮಹಾರಾಜರು ಅದುವರೆವಿಗೂ ವಸತಿಹೀನರಾಗಿದ್ದ ದಲಿತರಿಗೆ ಉಂಬಳಿಯಾಗಿ "ಲಕ್ಷೀಪುರಂ" ಸ್ಥಳವನ್ನು, ಜೊತೆಗೆ ಆ ಜನರ ಜೀವನೋಪಾಯಕ್ಕೆ ಎಲೆತೋಟಗಳನ್ನು ಕೊಡುಗೆಯಾಗಿ ಕೊಟ್ಟರಂತೆ. ಇಂದಿಗೂ ಅವು 'ಕೊಡುಗೆ ತೋಟ'ಗಳಾಗಿ ಉಳಿದು ಕೊಂಡಿವೆ. 'ಶಿಲಾಶಾಸನ'ದಲ್ಲಿ,ಲಕ್ಷೀಪುರಂ ವೊ.ನಂ.೮-೧೯೦೫ ಎಂದು ಬರೆಯಲಾಗಿದೆ.
  • ವಕ್ತೃಗಳು ಹೇಳುವ ಪ್ರಕಾರ 'ನಗರಾಭಿವೃದ್ದಿ ಮಂಡಳಿ'ಯವರು ೧೯೦೨-೧೯೦೫ರ ನಡುವೆ ಅಶೋಕಪುರಂ ಹುಟ್ಟಿಗೆ ಮರು ರೂಪಕೊಟ್ಟರು. ಮಹಾರಾಜರು ದಲಿತರಿಗೆ ಈ ಬಗೆಯ ಗೌರವಸೂಚಿಸಿದ್ದು ಅಂದಿನ ಸವರ್ಣೀಯರಿಗೆ ಸಹಿಸಲಾಗದೆ, ಮೈಸೂರಿನ ಕೇಂದ್ರ ಸ್ಥಾನದಲ್ಲಿದ್ದ ಆ ಜನರನ್ನು ಈಗಿರುವ ಜಾಗಕ್ಕೆ ಸ್ಥಳಾಂತರಿಸುವಂತೆ ಮಾಡಿಸಿದಾಗ,ಆ ಸ್ಥಳದಲ್ಲಿ 'ದೊಂಬರಜನಾಂಗ'ದವರು ವಾಸಿಸುತ್ತಿದ್ದರಂತೆ.
  • ಅವರೊಂದಿಗೆ ದಲಿತರು ವಾಸಿಸತೊಡಗಿದರು. ದಲಿತರೇ ಹೆಚ್ಚಾಗಿ ವಾಸಿಸುವ ಆ ತಾಣವನ್ನು 'ದೊಡ್ಡ ಹೊಲಗೇರಿ' ಎಂದು ಕರೆದರಂತೆ. ಇಂದಿರುವ 'ಗಾಂಧೀನಗರ' ಅಂದು,'ಚಿಕ್ಕ ಹೊಲಗೇರಿ' ಎಂದು ಕರೆಯಲ್ಪಡುತ್ತಿತ್ತು. ಅಶೋಕಪುರಂನಲ್ಲಿ ಸುಮಾರು ೨ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಈ ೨ಲಕ್ಷ ಜನರಲ್ಲಿ ಶೇಕಡ ೯೫%ರಷ್ಟು ಜನ 'ದಲಿತವರ್ಗ'ದವರೇ ಆಗಿದ್ದಾರೆ.
  • ಉಳಿದ ಶೇಕಡ ೫%ರಷ್ಟು ಭಾಗದಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು, ತಮಿಳರು, ಮಲೆಯಾಳಿಗಳು ಇತರೆ ವಲಸೆಗಾರರು ನೆಲೆಸಿದ್ದಾರೆ. ಅಶೋಕಪುರಂನಲ್ಲಿ ಒಟ್ಟು ೫ ಮುಖ್ಯ ರಸ್ತೆಗಳಿವೆ, ಅವುಗಳೆಂದರೆ -ವುಡ್ಯಾರ್ಡಬೀದಿ, ಉದ್ಯಾನವನ ಬೀದಿ, ಸಿದ್ದಾರ್ಥಹಾಸ್ಟೆಲ್ ಬೀದಿ, ಅಂಬೇಡ್ಕರ್ ಬೀದಿ ಮತ್ತು ರಾಮಯ್ಯಾರ್ ಬೀದಿಗಳಿವೆ. ಈ ಊರಿನಲ್ಲಿ ಒಟ್ಟು ೧೩ ಸಾಧಾರಣ ಬೀದಿಗಳಿವೆ.
  • ಇಲ್ಲಿ ೧೩ ಬೀದಿಗಳು ಪ್ರಧಾನವಾಗಿದ್ದರೂ ಅಡ್ಡಹೆಸರಿನಲ್ಲಿ ಅವುಗಳನ್ನು ಕರೆವುದು ಇಲ್ಲಿನ ವಿಶೇಷ. ಅವುಗಳೆಂದರೆ-ದೊಡ್ಡ ಬೀದಿ, ಚಿಕ್ಕ ಬೀದಿ, ಮಾಲಿಂಗಯ್ಯನ ಬೀದಿ, ದಂಡಮ್ಮನ ಬೀದಿ, ಯಳಮಯ್ಯನ ರಾಮಮಂದಿರ ಬೀದಿ, ಕಾಳಮ್ಮನ ಬೀದಿ, ಮಾದೇಶ್ವರ ಬೀದಿ,ಗೋವಿಂದಯ್ಯ ನ ಬೀದಿ, ಮಟ್ಟೇ ಕೇರಿ, ಮಗ್ಗದ ಬೀದಿ, ಚಕ್ರಕೇರಿ, ದೊಂಬರ ಕೇರಿ, ಕತ್ತೆಗುಡಿ, ಕೊಂಗರ ಬೀದಿ, ಲಾಯದ ಕೇರಿ ಮುಂತಾದುವು ಪ್ರಮುಖವಾದುವು. ಇಲ್ಲಿ ಒಟ್ಟು ೨೫ಕ್ಕೂ ಹೆಚ್ಚು ದೇಗುಲಗಳಿವೆ, ಒಂದು ಅಂಚೆ ಕಛೇರಿ, ಒಂದು ಸರ್ಕಾರಿ ಆಸ್ಪತ್ರೆ, ಒಂದು ಆರಕ್ಷಕ ಠಾಣೆಗಳಿವೆ. ಇಲ್ಲಿನ ಪ್ರಸಿದ್ದ ವ್ಯಾಪಾರ ಕೇಂದ್ರದ ಹೆಸರು "ರೇಡಿಯೊ". ಅಶೋಕಪುರಂನ ಜನರ ವಾಣಿಜ್ಯ ಬೆಳೆ-ವೀಳ್ಯೆದೆಲೆ.

ಭೌಗೋಳಿಕ ಹಿನ್ನೆಲೆ

[ಬದಲಾಯಿಸಿ]
  • ಭೌಗೋಳಿಕ ಹಿನ್ನೆಲೆ ದೃಷ್ಟಿಯಿಂದ ನೋಡಿದಾಗ ಅಶೋಕಪುರಂ ಆಯಕಟ್ಟಿನ ಸ್ಥಳದಲ್ಲಿದೆ. ಇದು ಮೈಸೂರು ಸಿಟಿ ಬಸ್ ನಿಲ್ದಾಣಕ್ಕೆ ೩ಕಿ.ಮೀ ದೂರದಲ್ಲಿದೆ. ಅಶೋಕಪುರಂನ ಪೂರ್ವ ದಿಕ್ಕಿಗೆ ಒಂದು ವಾಣಿಜ್ಯ ಕೇಂದ್ರವಿದೆ. ಆ ಪ್ರಸಿದ್ದ ವ್ಯಾಪಾರ ಕೇಂದ್ರದ ಹೆಸರು"ರೇಡಿಯೊ".ಈ ಜಾಗ ಒಂದು ಚಿಕ್ಕ ಮಾರ್ಕೆಟ್ ಮಾದರಿಯಲ್ಲಿದೆ.
  • ಇದು ಅಶೋಕಪುರಂನ ಕೇಂದ್ರಸ್ಥಾನ. ಇಲ್ಲಿ ಎಲ್ಲಾ ಬಗೆಯ ವಸ್ತು, ಸರಕು, ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತದೆ. ತಾಜಾ ತರಕಾರಿಗಳು ಸಿಗುತ್ತವೆ. ಇಲ್ಲಿ ಊರಿನ ಪ್ರತಿಯೊಂದು ವಿದ್ಯಮಾನವೂ ತಿಳಿಯುತ್ತದೆ. ಕೆಲವೂಮ್ಮೆ ಚರ್ಚೆ, ವಾದ,ವಿವಾದಗಳು ಇಲ್ಲಿ ನಡೆಯುವು ದುಂಟು. ಇದೇ ದಿಕ್ಕಿನಲ್ಲಿ ಮೈಸೂರು ರೇಷ್ಮೆತಯಾರಿಕ ಕೇಂದ್ರ ಸಿಲ್ಕ್ ಫ್ಯಾಕ್ಟರಿ ಇದೆ. ಪಶ್ಚಿಮ ದಿಕ್ಕಿನಲ್ಲಿ ಒಂದು ಅರಣ್ಯ ಇಲಾಖೆಯ ಪ್ರಧಾನ ಕೇಂದ್ರ ಕಛೇರಿಯಿದೆ.
  • ನಾಗರಹೊಳೆ,ಬಂಡೀಪುರ, ಕಾಕನಕೋಟೆ ಮುಂತಾದ ಕಾಡುಗಳಿಗೆ ಹೋಗಲು ಇಲ್ಲಿ ಪರವಾನಗಿ ಪಡೆಯಬೇಕು. ಉತ್ತರ ಭಾಗದಲ್ಲಿ ಅಂಬೇಡ್ಕರ್ ಉದ್ಯಾನವನವಿದೆ. ಅಲ್ಲಿ ಅಂಬೇಡ್ಕರ್ ಅವರ ಆಳೆತ್ತರದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ದಕ್ಷಿಣ ಭಾಗದಲ್ಲಿ ಶ್ರೀಗಂಧದ ಎಣ್ಣೆ ಕಾರ್ಖಾನೆ, ಎನ್.ಐ.ಇ ಕಾಲೇಜು, ದಕ್ಷಿಣ ರೈಲ್ವೆ ಕಾರ್ಯಗಾರ ಇತ್ಯಾದಿ ಪ್ರಸಿದ್ದ ಸ್ಥಳಗಳಿವೆ.

ಮೂಲ ನಿವಾಸಿಗಳು

[ಬದಲಾಯಿಸಿ]

ಅಶೋಕಪುರಂನ ಮೂಲ ನಿವಾಸಿಗಳು ನಾನಾ ಭಾಗಗಳಿಂದ, ನಾನಾ ದಿಕ್ಕುಗಳಿಂದ ಗುಳೇ ಹೊರಟು, ಅಲೆಮಾರಿಗಳಾಗಿ ವಲಸೆ ಬಂದವರಾಗಿದ್ದಾರೆ. ಅವರು-ವಿಜಯನಗರ, ಮೇಲುಕೋಟೆ, ಚುಂಚನಗಿರಿ, ಚುಂಚನಕಟ್ಟೆ, ಕಪ್ಪಡಿ, ಪಿರಿಯಾಪಟ್ಟಣ, ಶ್ರೀರಂಗಪಟ್ಟಣ,ನಂಜನಗೂಡು,ಮಹದೇಶ್ವರ ಬೆಟ್ಟ, ಉತ್ತನಳ್ಳಿ, ಗೌಡನಳ್ಳಿ, ಭುಗತಗಳ್ಳಿ, ಸಿದ್ದಲಿಂಗಪುರ, ಬೀಚನಹಳ್ಳಿ, ಬಪ್ಪನಹಳ್ಳಿ ಕೆರೆಗಳಿಂದ ಬಂದವರಾಗಿದ್ದಾರೆಂದು ಹೇಳಲಾಗುತ್ತದೆ.

ಜೀವನ ವೃತ್ತಿ

[ಬದಲಾಯಿಸಿ]

ಇಲ್ಲಿನ ಜನರ ಪ್ರಧಾನ ಕಸುಬು'ವಿಳ್ಯೇದೆಲೆ' ಬೆಳೆಯುವುದು. ಈ ಊರಿನ ಶೇಕಡಾ ೬೦ರಷ್ಟೂ ಜನರು ಚಿಗುರೆಲೆ ಬೆಳೆವುದನ್ನು ರೂಢಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶೇಕಡಾ ೧೫ ರಷ್ಟು ಜನ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಮಿಕ್ಕವರು ಖಾಸಗಿ ಸಂಸ್ಥೆಗಳಲ್ಲಿ, ಸ್ವಂತ ಕೆಲಸಗಳಲ್ಲಿ, ಕೈ ಕೆಲಸಗಳನ್ನು ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ.

ಶೈಕ್ಷಣಿಕ ಪ್ರಗತಿ

[ಬದಲಾಯಿಸಿ]

ಅಶೋಕಪುರಂನಲ್ಲಿ ಮೊಟ್ಟ ಮೊದಲ ಶಾಲೆ ಆರಂಭಗೊಂಡಿದ್ದು ಕ್ರೈಸ್ತ ಮಿಷನರಿಗಳಿಂದ ೧೮೮೦ರಲ್ಲಿ. 'ಮಕ್ಕಳ ಕೂಟ' ಎಂಬುದು ಒಂದು ಅಂಗನವಾಡಿ ಕೇಂದ್ರ. ದಂಡಮ್ಮ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಶೋಕಪ್ರೌಢಶಾಲೆ, ಸಿದ್ದಾರ್ಥ ಪ್ರೌಢಶಾಲೆ, ಅಶೋಕ ಸಂಯುಕ್ತ ಪದವಿಪೂರ್ವ ಕಾಲೇಜುಗಳಿವೆ. ಊರ ಒಳಗೆ ಎರಡು ವಿದ್ಯಾರ್ಥಿನಿಲಯಗಳಿವೆ-

  1. ಎಡೆಡ್ ವಿದ್ಯಾರ್ಥಿನಿಲಯ
  2. ಸಿದ್ದಾರ್ಥಪ್ರೌಢಶಾಲೆ ವಿದ್ಯಾರ್ಥಿನಿಲಯ.

ಇವೆರಡು ವಿದ್ಯಾರ್ಥಿನಿಲಯಗಳನ್ನು ಸಮಾಜ ಕಲ್ಯಾಣ ಇಲಾಖೆವತಿಯಿಂದ ನಡೆಸಲಾಗುತ್ತದೆ. ಅಶೋಕಪುರಂನಲ್ಲಿ ಇಂದು ಶೇಕಡ ೭೫%ರಷ್ಟು ಭಾಗದ ಜನರು ವಿದ್ಯಾವಂತರಾಗಿ, ಪ್ರತಿ ಮನೆಯಲ್ಲೂ ಪದವೀಧರರು, ಸ್ನಾತಕೋತ್ತರ ಪದವೀಧರರಿದ್ದಾರೆ. ಇಲ್ಲಿನ ವಿದ್ಯಾವಂತ ಜನರು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಭಿಯಂತರರು, ವೈದ್ಯರು, ವಕೀಲರು, ಉಪಧ್ಯಾಯರು, ಅಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಪ್ರವಾಚಕರು,ಪ್ರಾಧ್ಯಾಪಕರು, ಬ್ಯಾಂಕ್ ಉದ್ಯೋಗಿಗಳು, ನ್ಯಾಯಧೀಶರು, ಸಹಾಯಕ ಸಂಶೋಧಕರುಗಳಿದ್ದಾರೆ.

ಪ್ರಮುಖ ಆಚರಣೆಗಳು

[ಬದಲಾಯಿಸಿ]

ಯಾವುದೇ ಆಚರಣೆ ಯಾವುದೇ ಒಬ್ಬ ವ್ಯಕ್ತಿಯ ಸೃಷ್ಟಿಯಲ್ಲ. ಆಯಾಯ ಜನಾಂಗಗಳ ಜೀವನ ವಿಧಾನ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಇವು ರೂಢಿಗೆ ಬರುತ್ತವೆ. ಆಚರಣೆಗಳು ಮಾನವನ ವಿವಿಧ ಬಗೆಯ ಚಟುವಟಿಕೆಗಳನ್ನು ಅನಾವರಣಗೊಳಿಸುತ್ತವೆ. ಅಶೋಕಪುರಂ ಜನರಲ್ಲಿ ಹುಟ್ಟಿನಿಂದಿಡಿದು ಮದುವೆ, ಒಸಗೆ, ಬಸಿರು, ಬಾಣಂತನ, ಸಾವಿನ ಆಚರಣೆಗಳು ಚಾಲ್ತಿಯಲ್ಲಿವೆ. ಐದು ಬಗೆಯ ವಿವಾಹಗಳು ಆಚರಣೆಯಲ್ಲಿವೆ.

  1. ಬಾಲ್ಯ ವಿವಾಹ
  2. ಪ್ರೇಮವಿವಾಹ
  3. ಅಂತರ್ಜಾತಿ ವಿವಾಹ
  4. ಪಕ್ಷಿವನದ ಮದುವೆ
  5. ಕೂಡಾವಳಿ ಮದುವೆ- ಅಶೋಕಪುರಂನ ಜನರು ಹುಟ್ಟಿನಿಂದ ಸಾವಿನವರೆಗೂ ಆಚರಿಸುವ ಆಚರಣೆಗಳಲ್ಲಿ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳು ಸಮೃದ್ಧವಾಗಿವೆ.

ರಾಜಕೀಯ ಬೆಳವಣಿಗೆ

[ಬದಲಾಯಿಸಿ]
  1. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಬದುಕಿನ ಆಶೋತ್ತರಗಳ ಕಡೆ ತುಸು ಗಮನಹರಿಸಿ ಅವರಿಗೂ ಆಡಳಿತದಲ್ಲಿ ಪಾಲ್ಗೋಳ್ಳುವ ಅವಕಾಶ ಕಲ್ಪಿಸಿ, ತಾವು ನಡೆಸುತ್ತಿದ್ದ ಪ್ರಜಾಪ್ರತಿನಿಧಿ ಸಭೆಗೆ ಅಶೋಕಪುರಂನ "ಶ್ರೀ ಮರಿದಂಡಯ್ಯ "ಎಂಬುವರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದರು.
  2. ಮುಂದೆ ಮೈಸೂರು ನಗರ ಬೆಳೆದಂತೆ ಅದು 'ಪ್ರಜಾಪ್ರತಿನಿಧಿ ಪುರಸಭೆ'ಯಾಗಿ ರೂಪುಗೊಂಡಿತು. ೧೯೫೪ರಲ್ಲಿ ಕೆ.ಸಿದ್ದಯ್ಯನವರು ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡರು. ನಂತರ ಮಹಾರಾಜರೇ ,ಅಶೋಕಪುರಂನ್ನು ೨ ಭಾಗವಾಗಿ ವಿಂಗಡಿಸಿ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಅವಕಾಶ ಕಲ್ಪಿಸಿ ಕೊಟ್ಟರು. ಆ ಬಾರಿ ೧೯೫೭ರಲ್ಲಿ ಜಿ.ಎಸ್.ರಾಮಕೃಷ್ಣಯ್ಯ ಮತ್ತು ಚಿಕ್ಕತಮ್ಮಯ್ಯ ಅವರು ಪ್ರಜಾ ಪ್ರತಿನಿಧಿಗಳಾಗಿ ಆಯ್ಕೆಯಾದರು.
  3. ಈ ಸಂದರ್ಭದಲ್ಲಿ ಜಿ.ಎಸ್.ರಾಮಕೃಷ್ಣಯ್ಯ ಪುರಸಭೆಯ ಉಪಾಧ್ಯಕ್ಷರಾದರು. ೧೯೯೨-೧೯೯೩ನೇ ಸಾಲಿನಲ್ಲಿ ಕೆ.ಸಿದ್ದಯ್ಯನವರು ಪುರಸಭೆಯ ಅಧ್ಯಕ್ಷರಾದರು. ೧೯೭೨ರಲ್ಲಿ ಶ್ರೀ ಹೊಟ್ಟಪ್ಪನವರು ಪುರಸಭೆ ಸದಸ್ಯರಾದರು. ೧೯೭೪ರಲ್ಲಿ 'ದಲಿತ ಸಂಘರ್ಷ ಸಮಿತಿ' ಸ್ಥಾಪನೆ ಯಾಯಿತು. ಬಸವಲಿಂಗಪ್ಪ ಅವರ "ಬೂಸ ಪ್ರಕರಣ"ದಿಂದ ಅಶೋಕಪುರಂನ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. ಶ್ರೀನಿವಾಸ್ ಪ್ರಸಾದ್ ರಾಜಕೀಯ ನಾಯಕರಾಗಿ ಬೆಳೆದರು. ಇವರು ೫ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದವರು.
  4. ಶ್ರೀ ಗುಂಡೂರಾಯರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಅಶೋಕಪುರಂನ ಡಾ.ಸಿದ್ದರಾಜು ಅವರನ್ನು ನಗರಾಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿ ನೇಮಿಸಿದರು. *ಚಿಕ್ಕತಮ್ಮಯ್ಯ ಮೈಸೂರು ನಗರ ಪಾಲಿಕೆಗೆ ೩ ಬಾರಿ ಸ್ಪರ್ಧಿಸಿ ಗೆದ್ದವರು. ಅಶೋಕಪುರಂನ ಮಹಾಪೌರರ ಪಟ್ಟಿ-
  5. ಚಿಕ್ಕತಮ್ಮಯ್ಯ
  6. ವಿ.ವೆಂಟರಾಜು
  7. ಶ್ರೀ ಪುರುಷೋತ್ತಮ್.
  8. ಉಪ ಮಹಾಪೌರರೆಂದರೆ-ವಿ.ವೆಂಟರಾಜು, ಜಿ.ಲಿಂಗಯ್ಯ, ಶೈಲೇಂದ್ರ ಮುಂತಾದವರು.
  9. ಅಶೋಕಪುರಂನ ಮೊಟ್ಟ ಮೊದಲ ನಗರಪಾಲಿಕೆ ಮಹಿಳಾ ಸದಸ್ಯೆ ಶ್ರೀಮತಿ ರೋಹಿಣಿ ನಾಗರಾಜು.
  10. ಯುವ ಕಾಂಗೈ ಮುಖಂಡ ಎಚ್.ವಾಸು- ಹೀಗೆ ವಿ.ರಾಮಸ್ವಾಮಿ, ಚಿಕ್ಕವೀರಯ್ಯ, ಈರಣ್ಣ, ಶಾಂತರಾಜು, ಚಿಕ್ಕಲಿಂಗಣ್ಣ, ವೆಂಕಟರಾಮು, ಸುಮತಿ, ವಿಜೇಂದ್ರ, ವಿಶ್ವೇಶ್ವರ, ರಾಜೇಂದ್ರ,ಯೋಗೀಶ್ವರ್, ಶೈಲೇಂದ್ರ, ಬುದ್ಧ, ಸತ್ಯ, ಮೊದಲಾದವರು ರಾಜಕೀಯದಲ್ಲಿ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಶ್ರೀನಿವಾಸ್ ಪ್ರಸಾದ್ ಅವರು ಮೈಸೂರಿನ ಉಸ್ತುವಾರಿ ಸಚಿವರಾಗಿದ್ದಾರೆ.

ಜನಪದ ವೈವಿಧ್ಯಗಳು

[ಬದಲಾಯಿಸಿ]

ಅಶೋಕಪುರಂನಲ್ಲಿನ ಜನಪದ ವೈಶಿಷ್ಟ್ಯ ಪೂರ್ಣವಾಗಿದೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ- ೧.ಭಾಷೆ, ೨.ಭಜನೆ, ೩.ಸಾವಿನ ಪದಗಳು,೪.ಬಯ್ಗುಳಗಳು, ೫.ಗಾದೆಗಳು, ೬.ಒಗಟುಗಳು, ೭.ಜನಪದ ವೈದ್ಯ,೮. ಆಹಾರ ಪದ್ದತಿ, ೯.ನಂಬಿಕೆ ಮತ್ತು ಸಂಪ್ರದಾಯ, ೧೦.ಶಕುನ, ೧೧.ಕಲೆ ಮತ್ತು ಆಟಗಳು(ಕ್ರೀಡೆ).

ಇಲ್ಲಿನ ಭಾಷೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿವೆ. 'ಲ'ಕಾರ, 'ನ'ಕಾರ, 'ಮಿ'ಕಾರಗಳ ಬಳಕೆ ಹೆಚ್ಚು. ದೊಡ್ಡವರು ಚಿಕ್ಕವರನ್ನು ಕರೆವಾಗ ಬಲಾ,ವೂಗ್ಲ ,ಏನಮ್ಮೀ, ಏನ್ ಕೂಸೇ, ಏನ್ ಚಿಕ್ಕೋಳೆ ಎಂದರೆ, ಹೆಂಗಸರು ಬಮ್ಮೀ, ವೂಗಮ್ಮೀ, ಎದ್ದಿಯಾ ವೊಗ, ಉಂಡಿಯಾ, ತಿಂದಿಯಾ ಎನ್ನುತ್ತಾರೆ. ಗಂಡನಾದವನು ಹೆಂಡತಿಗೆ 'ಮೀ,ಲೇ,ಇವಳೇ,ಅಮ್ಮೀ' ಎಂದು ಕರೆವುದು ವಾಡಿಕೆ. ಹೀಗೆ ಸುಖ-ದು:ಖ, ಕೋಪ-ತಾಪ,ಜಗಳ-ಸಂಧಾನ,ನ್ಯಾಯ ತೀರ್ಮಾನ ಮುಂತಾದ ಆತ್ಮೀಯ ಮಾತು-ಕತೆಗಳಲ್ಲಿ ಅವರ ಭಾಷೆ ಬದಲಾಗುತ್ತಿರುತ್ತದೆ.

ದೇವರನ್ನು ಭಜಿಸಲು ಸವರ್ಣೀಯರನ್ನು ಅನುಕರಿಸಿ ಹಾಡುವ ಪದಗಳು ಭಜನೆಗಳಾಗಿವೆ. ಭಜನೆ ಹಾಡಿಗೆ ಬಳಸುವ ಪರಿಕರಗಳೆಂದರೆ ತಬಲ, ಚಿಲ್ಲಂ, ಹಾರ್ಮೊನಿಯಂ, ಗೆಜ್ಜೆ ಚೆಂಡು ಮುಂತಾದುವು. ಸಾಧಾರಣವಾಗಿ ಭಜನೆ ಹಾಡುಗಳೆಲ್ಲವು ಪುರಂದರದಾಸ, ಕನಕದಾಸರ ಕೀರ್ತನೆಗಳಾಗಿವೆ. ಉದಾ:-

  1. ಆಡಿಸಿದಳು ಯಶೋಧೆ ಜಗದೋದ್ದಾರನ,
  2. ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರೂ,
  3. ದಯ ಮಾಡೋ ರಂಗ ದಯ ಮಾಡೋ,
  4. ಹೃದಯ ಭೂಷಣ ರಾಮ,ವಿನಯ ಭೂಷಣ ರಾಮ,
  5. ಮಂಗಳಾರತಿ ಬೆಳಗಿರಿ ರಾಮನಿಗೆ, ಶ್ರೀರಾಮನ ಭಂಟನಿಗೆ ಇತ್ಯಾದಿ.

ಸಾವಿನ ಪದಗಳು

[ಬದಲಾಯಿಸಿ]

ಅಶೋಕಪುರಂನಲ್ಲಿ ವ್ಯಕ್ತಿ ಬದುಕಿದ್ದಾಗ ಹೇಗೋ, ಅದಕ್ಕಿಂತ ಹೆಚ್ಚಿನ ಗೌರವವನ್ನು ಸತ್ತವರಿಗೂ ಕೊಡುತ್ತಾರೆ. ಯಾರದಾದರು ಸಾವಿನ ಸಂದರ್ಭದಲ್ಲಿ ಸಾವಿನ ಮನೆಯವರ ದು:ಖದಲ್ಲಿ ಸಮಭಾಗಿಗಳಾಗಿ ಇಡೀ ರಾತ್ರಿ ಸಾವಿನ ಪದ(ಚರಮಗೀತೆ)ಗಳನ್ನಾಡುತ್ತಾ ,ಆ ಮನೆಯವರಿಗೆ ಸಾಂತ್ವನ ನೀಡುವ ಪ್ರಯತ್ನ ಮಾಡುತ್ತಾರೆ. ಪ್ರತಿ ಸಾವಿನ ಪದವು ಆತ್ಮ, ದೇಹ, ಮನಸ್ಸು, ಸಾವನ್ನು ಕುರಿತದ್ದಾಗಿರುತ್ತದೆ. ಉದಾ:-

  1. ಭೂಮಿಯ ಋಣ ತೀರಿದ ಮೇಲೆ, ನೀ ಹೋದೆಯ ಜೀವವೆ! ನೀ ಹೋದೆಯ,
  2. ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗ ಬಾರದವ್ವ,
  3. ಚಿಕ್ಕಪ್ರಾಯದಲ್ಲಿ ನಿನಗಂಡ ಹೋದ ಮೇಲೆ, ಚುಕ್ಕಿ ಬೊಟ್ಟಿಟ್ಟು ಫಲವೇನು,
  4. ಸತ್ಯವಂತರ ಸಂಗವಿರಲು ಚಿಂತೆಯೇತಕೆ? ನ್ಯಾಯವಂತರ ಸಂಗವಿರಲು ಸಾವು ಏತಕೆ?,
  5. ಯಾರಿಗೂ ತಿಳಿಯದು ಈ ಮರ್ಮವು, ಯಮನ ಮಾಯವಿದು..ಮುಂತಾದುವು.

ಬಯ್ಗುಳಗಳು

[ಬದಲಾಯಿಸಿ]

ಇವು ದಿನನಿತ್ಯ ಬಳಸುವ ಮಾತುಗಳಿಗಿಂತ ಭಿನ್ನವಾಗಿರುತ್ತವೆ. ಬಯ್ಗುಳಗಳು ಆಯಾ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಪ್ರಸ್ತುತ ಸ್ಥಿತಿ,ಅಸೂಯೆ, ಕೋಪ-ತಾಪದೊಂದಿಗೆ, ಅವರ ಸಾಂಸ್ಕೃತಿಕ ಮಟ್ಟವನ್ನು ತೋರಿಸುತ್ತವೆ. ಬಯ್ಗುಳಗಳಿಗೆ ಇಂತಹದೇ ವಿಚಾರವಾಗಬೇಕೆಂದಿಲ್ಲ. ಗಂಡಸರ ಬಯ್ಗುಳಕ್ಕಿಂತ, ಹೆಂಗಸರ ಬಯ್ಗುಳಗಳಲ್ಲಿ ಹೆಚ್ಚು ಪ್ರಖರತೆ ಇರುತ್ತದೆ. ಉದಾ:-

  1. ಅಳ್ ಸಿಡಿಯಂಗೆ ಸಿಡಿತಾನಲ್ಲಪ್ಪೋ,
  2. ಆಪತ್ತು ಬಂದು ಚಾಪೆಲೀ ಸುತ್ಕೊಂಡು ಹೋಗ,
  3. ಊರಿಗೆ ನೀವೆನ್ ಪಾಳೇಗಾರರ್ರ,
  4. ಎಷ್ಟೇ ಆದ್ರು ಮೂದೇವಿದು ನಾಯೀ ಪಾಡು,
  5. ನೀನು ನೆಗೆದು ಬಿದ್ದು ನೆಲ್ಲಿ ಕಾಯಾಗ..ಇತ್ಯಾದಿ.

ಗಾದೆಗಳು

[ಬದಲಾಯಿಸಿ]

ಇವು ಜನಪದರ ಅಕ್ಷಯ ಪಾತ್ರೆ. ಗಾದೆಗಳು ಯಾವಾಗಲೂ ಸಮೂಹಗಳಿಂದ ಸೃಷ್ಟಿಯಾಗುವಂತಹವು. 'ಆಡು ಮುಟ್ಟದ ಸೊಪ್ಪಿಲ್ಲ' ಎಂಬಂತೆ ಗಾದೆ ಪ್ರವೇಶಿಸದ ಜೀವನ ಭಾಗವೇ ಇಲ್ಲ ಎನ್ನಬಹುದು. ಇದು ತನ್ನ ಸೃಷ್ಟಿಕ್ರಿಯೆಯನ್ನು ಸಂದರ್ಭದ ನಿರ್ದೇಶನದಲ್ಲಿ ನಡೆಸುತ್ತದೆ. ಇದರಿಂದ ಮನುಷ್ಯನ ಭಾಷಾಭಿವ್ಯಕ್ತಿ, ಬದುಕಿನ ಜಂಜಾಟ, ಗುಣ-ಸ್ವಭಾವ, ಹಾಸ್ಯಪ್ರಜ್ಞೆ, ನುಡಿವ್ಯಂಗ್ಯ, ಸಾಮಾಜಿಕ ನ್ಯಾಯ-ನೀತಿಯ ವಿಡಂಬನೆ, ಸಾಮಾಜಿಕ ತಿಳುವಳಿಕೆ, ಎಚ್ಚರಿಕೆ ಮುಂತಾದ ಹತ್ತು ಹಲವು ವಿಷಯಗಳನ್ನು ಇದು ಪ್ರತಿ ಬಿಂಬಿಸುತ್ತದೆ. ಉದಾ:-

  1. ಅತ್ತೇದೆಲ್ಲ ಅಳಿಯ ದಾನ ಮಾಡದಂಗೆ,
  2. ಆಚಾರ ಹೇಳೋಕೆ ಅವನ್ನ ಕರೆಸಿದ್ರೆ, ಹೆಂಡ್ರನ್ನ ಬಿಟ್ಟು ಆರು ತಿಂಗಳಾಯ್ತು ಅಂದ್ನಂತೆ,
  3. ಎಣ್ಣೆ ಹಚ್ಕೊಂಡು ಮಣ್ಣಾ ಗೊಳ್ಳಾಡಿದರೂ, ಪುಣ್ಯವಿದ್ದಷ್ಟೇ ಮಣ್ಣು ಮೈಗಂಟೋದು,
  4. ಒಲೆಗೊಂದು ಒದೆಗೊರಡಿರಬೇಕು, ಮನೆಗೊಂದು ಮುದಿಗೊರಡಿರ ಬೇಕು,
  5. ಕಂಡುಗ ಫಲಾರ ಮಾಡಿದ್ರು ಉಂಡ್ಹಂಗಾಗಲ್ಲ, ಹಿಂಡು ಬಳಗ ಇದ್ರು ಗಂಡ ಇದ್ದಂಗಾಗಲ್ಲ.

ಒಗಟುಗಳು

[ಬದಲಾಯಿಸಿ]

ಒಗಟುಗಳು ಮನುಷ್ಯನ ಬೌದ್ದಿಕತೆಗೆ ಹಿಡಿದ ಕೈಗನ್ನಡಿಯಾಗಿವೆ. ವಿರಾಮ ವೇಳೆಯಲ್ಲಿ ಈ ಕ್ರಿಯೆಯನ್ನು ನಡೆಸಲಾಗುತ್ತದೆ. ಪ್ರಶ್ನೋತ್ತರದ ರೀತಿಯಲ್ಲಿ ಇದನ್ನು ಹೇಳುವುದು ವಾಡಿಕೆ. ಸಾಮಾನ್ಯವಾಗಿ ಇವು ದ್ವಿಪದಿ, ತ್ರಿಪದಿ, ಚತುಷ್ಪದಿ, ಷಟ್ಪದಿಯಲ್ಲಿ ರಚನೆಯಾಗಿರುತ್ತವೆ. ಒಗಟುಗಳು ಕೊಡುವ ಹೋಲಿಕೆಗಳೆಲ್ಲ ಬಾಹ್ಯ ಜಗತ್ತನ್ನು ಆಶ್ರಯಿಸಿವೆ. ಉದಾ:-

  1. ಅಕ್ಕನ ಗಂಡನಲ್ಲ, ಅವ್ವನ ತಮ್ಮನಲ್ಲ ಮಾವ ಅನ್ನಿಸ್ಕೋಳ್ಳದೆ ಬಿಡೋದಿಲ್ಲ- ಚಂದಮಾಮ,
  2. ಅಗಸ ಮಾಡಿದ ಮಡಿಯಲ್ಲ, ಕುಂಬಾರ ಮಾಡಿದ ಕುಡಿಕೆಯಲ್ಲ ,ಸೂರ್ಯನ ಕಣ್ಣಿಗೆ ಹೊಳಪಿಲ್ಲ-ತೆಂಗಿನಕಾಯಿ,
  3. ಅಂಗೈಯಗಲ ಗದ್ದೆಗೆ, ನೂರೊಂದು ಬಾಗಿಲು-ಬಾಚಣಿಗೆ,
  4. ಎಸಳೆಂಬತ್ತು,ಕುಸುರಿ ಮೂವತ್ತು-ಚೆಂಡು ಹೂ,
  5. ಒಂದು ಕುರಿ, ಕುರಿ ಮೇಲೊಂದು ಮರಿ, ಮರಿಮ್ಯಾಲೆ ಚಿನ್ನದುರಿ-ದೀಪ.

ಜನಪದ ವೈದ್ಯ

[ಬದಲಾಯಿಸಿ]

ಸಾಮಾನ್ಯವಾಗಿ ಜನಪದ ವೈದ್ಯಕ್ಕೆ ಮನೆಯಲ್ಲಿ ದಿನನಿತ್ಯ ಸಿಗುವ-ಅರಿಶಿನ, ಉಪ್ಪು , ಶುಂಠಿ, ಮೆಣಸು, ಜೀರಿಗೆ, ಧನಿಯ(ಕೊತ್ತಂಬರಿ ಬೀಜ), ಈರುಳ್ಳಿ, ಬೆಳ್ಳುಳ್ಳಿ, ಹಾಲು, ವೊಸರು, ಬೆಣ್ಣೆ, ತುಪ್ಪ, ಲವಂಗ, ಏಲಕ್ಕಿ, ಸೊಂಪು, ಬೂದಿ, ಇದ್ದಿಲು,ಸಗಣಿ, ಸುಣ್ಣ, ವಿಭೂತಿ, ನವಿಲುಗರಿ, ಜೇನುತುಪ್ಪ, ವಿಳ್ಯೇದೆಲೆ, ಗಂಧದಕೊರಡು, ನಾರು-ಬೇರುಗಳು, ವಿವಿಧ ಸೊಪ್ಪು, ತರಕಾರಿ ಮುಂತಾದುವು ಈ ನಾಟಿ ವೈದ್ಯದಲ್ಲಿ ಬಳಸಲ್ಪಡುತ್ತವೆ. ಇದನ್ನು "ಹಳ್ಳಿ ವೈದ್ಯ, ನಾಟಿವೈದ್ಯ, ನಾಡವೈದ್ಯ, ಮನೆಮದ್ದು, ಕೈಔಷಧಿ, ಹಸಿರೌಷಧಿ, ಅಲೋಪತಿ"- ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇದರಲ್ಲಿ ನಾಲ್ಕು ವಿಧ.

  1. ಮನೆವೈದ್ಯ
  2. ಬೀದಿವೈದ್ಯ
  3. ಹೊರವೈದ್ಯ
  4. ಮಾಟಮಂತ್ರ- ಇಲ್ಲಿನ ಜನರು ಮಾಟಮಂತ್ರವನ್ನು ವೈದ್ಯವೆಂದು ಪರಿಗಣಿಸಿರುವುದು ಅಚ್ಚರಿ ತರುತ್ತದೆ.
  5. ಮನೆ ವೈದ್ಯದ ಕಾಯಿಲೆಗಳೆಂದರೆ-ಜ್ವರ, ನೆಗಡಿ, ನಾಯಿಕೆಮ್ಮು, ವಾಂತಿ-ಭೇದಿ, ಕುರ, ಪೈತ, ತಲೆ ನೋವು, ಬಾಯಿಬೆಸಳು,ಕಣ್ಣುಕುಟರೆ, ಉಲ್ಲೂರಿ, ಸಿಡುಬು, ದಡಾರ,ಅಮ್ಮ, ಎರಳು ತೆಗೆವುದು, ಮುಷ್ಟಿ ಹಿಡಿವುದು, ಹೊಟ್ಟೆಯುಬ್ಬರ, ಹೊಟ್ಟೆನೋವು ಇತ್ಯಾದಿ ಸಣ್ಣಪುಟ್ಟ ಕಾಯಿಲೆಗಳಿಗೆ ಅಶೋಕಪುರಂ ಜನರು ವೈದ್ಯರ ಬಳಿ ಹೋಗದೆ, ತಮಗೆ ತಾವೇ ಔಷಧಿ ತಯಾರಿಸಿ ಗುಣಪಡಿಸಿ ಕೊಳ್ಳುತ್ತಾರೆ.
  6. ಬೀದಿ ವೈದ್ಯದ ಕಾಯಿಲೆಗಳೆಂದರೆ-ಕಾಮಾಲೆ, ಇಸುಬು,ಲಕ್ವ, ನಾಯಿಕಡಿತ, ಚೇಳು, ಹಾವು ಕಚ್ಚಿದ ಸಂದರ್ಭದಲ್ಲಿ, ತಾವು ತಯಾರಿಸುವ ಔಷಧಿಯ ಗುಟ್ಟುನ್ನು ಯಾರಿಗೂ ಬಿಟ್ಟು ಕೊಡದೆ ಔಷಧಿ ರಹಸ್ಯ ಕಾಪಾಡುತ್ತಾರೆ.
  7. ಹೊರ ವೈದ್ಯದ ಕಾಯಿಲೆಗಳೆಂದರೆ- ಉಳುಕು, ಮದ್ದು ತೆಗೆಸುವುದು, ಬೆನ್ನುಹುರಿ ನೋವು, ಕೈಕಾಲು ಮುರಿದರೆ, ನರ ಸರಿಪಡಿಸುವುದು ಮುಂತಾದುವುಗಳಿಗೆ ನಾಟಿವೈದ್ಯರಲ್ಲಿಗೆ ಹೋಗಿ, ಅವರು ಹೇಳುವ ಪಥ್ಯದ ಔಷಧಿ ತೆಗೆದುಕೊಂಡು ತಮ್ಮ ಕಾಯಿಲೆಯನ್ನು ಗುಣಪಡಿಸಿ ಕೊಳ್ಳುತ್ತಾರೆ.
  8. ಮಾಟಮಂತ್ರದ ಕಾಯಿಲೆಗಳೆಂದರೆ-ದೆಸೆಕಟ್ಟು, ತಡಹೊಡೆಸಿ ಕೊಳ್ಳುವುದು,ತಾಯಿತ/ಅಂತ್ರವನ್ನು ಕಟ್ಟಿಸಿಕೊಳ್ಳುವುದು, ಮಗು ಚಂಡಿ ಹಿಡಿದಾಗ, ನೆಲಗ್ರಹ ವಾದಾಗ, ದೃಷ್ಟಿಯಾದಾಗ, ರತ್ನೀರು ಎತ್ತುವುದು, ವೊಗೆ ಹಾಕುವುದು, ಬಿದ್ದುಬೀಳು ಎತ್ತಿಸುವುದು, ದೇವರು-ದೆವ್ವ ಮೈಮೇಲೆ ಬಂದಾಗ ವಾಮಚಾರಿಯನ್ನು ಮನೆಗೆ ಕರೆಸಿ ಇಲ್ಲವೆ, ಅವನಿರುವಲ್ಲಿಗೆ ಹೋಗಿ ಮಾಟ ಮಂತ್ರ ಮಾಡಿಸಿಕೊಂಡು ಬರುತ್ತಾರೆ.

ಆಹಾರ ಪದ್ದತಿ

[ಬದಲಾಯಿಸಿ]
  • ಅಶೋಕಪುರಂನಲ್ಲಿ ರೂಢಿಯಲ್ಲಿರುವ ಆಹಾರ ಪದ್ಧತಿ ಎಂದರೆ- ಮಾಂಸಹಾರ, ಸಸ್ಯಹಾರ,ತಿಂಡಿ ಪದಾರ್ಥಗಳು. ಅಶೋಕಪುರಂನ ಶೇಕಡ ೧೦೦ರಷ್ಟು ಜನರಲ್ಲಿ, ಶೇಕಡ ೯೫%ರಷ್ಟು ಜನರು ಮಾಂಸಹಾರಿಗಳಾಗಿದ್ದಾರೆ. ಹಸು, ಕುರಿ, ಕೋಳಿ, ಆಡು, ಮೀನನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇವಲ್ಲದೆ-ಏಡಿ,ಸೀಗಡಿ, ಕರಿಮೀನು,ಕೋಣ, ಪಾರಿವಾಳ, ಬಾತುಕೋಳಿ, ಮುಂತಾದುವುಗಳ ಮಾಂಸವನ್ನು ನಿಯಮಿತ ಸಂದರ್ಭದಲ್ಲಿ ಮಾತ್ರ ಬಳಸುವರು.
  • ಮಾಂಸಹಾರದ ಅಡುಗೆಗೆ ನುಗ್ಗೇಕಾಯಿ, ಮೂಲಂಗಿ, ಈರೇಕಾಯಿ ,ಹಸಿ ಅವರೇಕಾಳು, ಬದನೆಕಾಯಿ, ಆಲೂಗಡ್ಡೆ, ಗೆಡ್ಡೆಕೋಸು ಮುಂತಾದುವುಗಳನ್ನು ವಿಶೇಷವಾಗಿ ಬಳಸುತ್ತಾರೆ. ಸಸ್ಯಹಾರದ ಅಡುಗೆಗಳಲ್ಲಿ ಮುಖ್ಯವಾದುವುಗಳೆಂದರೆ-ಅಕ್ಕಿ, ರಾಗಿ,ಗೋಧಿ, ಜೋಳ, ಮೈದಾ, ರವೆ, ಅವಲಕ್ಕಿ, ನುಚ್ಚಕ್ಕಿ, ಶ್ಯಾವಿಗೆ, ತೊಗರಿಬೇಳೆ, ಹೆಸರುಬೇಳೆ, ಹುರುಳಿಕಾಳು, ಕಡಲೆಕಾಳು, ಕಡಲೆಬೇಳೆ, ಹೆಸರುಕಾಳು, ತಡಗುಣಿಕಾಳು, ತೊಗರಿ ಕಾಳು, ಅವರೆಕಾಳು ಮುಂತಾದುವು ಬಳಸಲ್ಪಡುತ್ತವೆ.
  • ತಿಂಡಿ ಪದಾರ್ಥಗಳೆಂದರೆ ಎಳ್ಳುಕುಟ್ಟು,ಕಡಲೆ ಬೇಳೆವಡೆ, ಉದ್ದಿನ ಬೇಳೆವಡೆ, ತಡಗುಣೀಕಾಳು ವಡೆ, ಚಿಕ್ಕಿ ನುಂಡೆ, ನಾಮದಲಗೆ, ಕಜ್ಜಾಯ, ನೀರ್ಕಜ್ಜಾಯ, ರವೆಉಂಡೆ, ಕಾಯಿ ಒಬ್ಬಟ್ಟು, ಬೇಳೆಒಬ್ಬಟ್ಟು, ಖರ್ಜಿಕಾಯಿ,ಚಕ್ಕುಲಿ, ಕೋಡುಬಳೆ, ನಿಪ್ಪೀಟು ಮುಖ್ಯವಾದುವು.

ನಂಬಿಕೆ ಮತ್ತು ಸಂಪ್ರದಾಯ

[ಬದಲಾಯಿಸಿ]

ಇವೆರಡಕ್ಕೂ ಇರುವ ವ್ಯತ್ಯಾಸ ಒಂದೇ ಎನ್ನಲಾಗುವುದಿಲ್ಲ. ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ಹೇಗೆಂದರೆ- ಹಬ್ಬಗಳಲ್ಲಿ 'ಎಡೆ' ಇಡುವುದು ಸಂಪ್ರದಾಯ, ಇಟ್ಟ ಎಡೆಯನ್ನು ಹಿರಿಯರು ಬಂದು ಸ್ವೀಕರಿಸುತ್ತಾರೆಂಬುದು ನಂಬಿಕೆ. ಹೀಗೆ ಹಲವು ನಂಬಿಕೆ ಮತ್ತು ಸಂಪ್ರದಾಯ ಗಳು ಜನರ ಮನದಲ್ಲಿ, ಮನೆಯಲ್ಲಿ ಆಳವಾಗಿ ಬೇರು ಬಿಟ್ಟಿವೆ. ಇವುಗಳ ಉಗಮಕ್ಕೆ, ವಿಕಾಸಕ್ಕೆ ಹಲವಾರು ಬಗೆಯ ಕಾರಣಗಳಿವೆ. ವ್ಯಕ್ತಿಯ ನಂಬಿಕೆಗೆ ಪ್ರೇರಣೆ ಅವನಿರುವ ಪರಿಸರದಿಂದಲೇ ಒದಗುವಂತಹುದು. ಉದಾ:-

  1. ಅಮ್ಮ, ದಡಾರ, ಸಿಡುಬುಗಳಾದಾಗ, ಮನೆಯಲ್ಲಿ ಮಾಂಸದಡುಗೆ ಮಾಡಬಾರದು.
  2. ಉಪ್ಪನ್ನು ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಕೊಡಬಾರದು, ಅದು ಶಾಪಕೊಟ್ಟ ಹಾಗೆ.
  3. ಮಾರಿ ಹಬ್ಬ ಮಾಡಿದರೆ, ಊರಿಗೆ ಸಮೃದ್ಧಿ, ಯಾವ ದುಷ್ಟ ಶಕ್ತಿಗಳು ತೊಂದರೆ ಕೊಡುವುದಿಲ್ಲ.
  4. ಎದ್ದ ಗಳಿಗೆ ಚೆನ್ನಾಗಿದ್ದರೆ, ಯಾವ ಕೆಲಸಕ್ಕೆ ಕೈಹಾಕಿದರೂ ಅದು ಕೈಗೂಡುತ್ತದೆ.
  5. ಸತ್ತವರ ಮನೆಯಲ್ಲಿ ತಿಥಿ ಮುಗಿಯುವವರೆಗೂ ತುಪ್ಪ, ಹಾಲು, ಎಲೆ-ಅಡಿಕೆ, ಮಾಂಸ ಮುಂತಾದುವನ್ನು ಬಳಸಬಾರದು.
  • ಸಂಪ್ರದಾಯಗಳು ಒಂದು ಸಂಸ್ಕೃತಿ ಬೆಳೆದು ಬಂದ ಬಗೆ ಅದರ ವಿಸ್ತಾರ, ರೀತಿ-ನೀತಿಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಸಂಸ್ಕೃತೀಕರಣ ಪ್ರಕ್ರಿಯೆ ಸಂಪ್ರದಾಯ ಗಳ ಪ್ರಸರಣಕ್ಕೆ ಕಾರಣವಾಗಿವೆ. ಅವುಗಳೆಂದರೆ-ಹಬ್ಬ,ಉತ್ಸವ,ಜಾತ್ರೆ, ಹರಕೆ, ಕಾಣಿಕೆ, ಮುಡಿಕೊಡುವುದು, ಪರ ಮಾಡುವುದು, ಉರುಳುಸೇವೆ, ಬಲಿಪ್ರಕ್ರಿಯೆ, ಉಪವಾಸ,ಧೂಪಸೇವೆ, ಹೆಜ್ಜೆ ನಮಸ್ಕಾರ,ಜಾಗರಣೆ, ವಾರ, ಒಪ್ಪತ್ತು, ಅಭಿಷೇಕ ಇತ್ಯಾದಿ.

ಶಕುನಗಳು

[ಬದಲಾಯಿಸಿ]

ಇವು ಮನುಷ್ಯನ ನಡೆ-ನುಡಿಯನ್ನು ನಿಯಂತ್ರಿಸುವ ಸಾಧನಗಳಾಗಿವೆ. ಶಕುನಗಳಲ್ಲಿ ೨ವಿಧ.

  1. ಒಳ್ಳೆಯ ಶಕುನ-ಹಸು, ಕುದುರೆ,ಆನೆ,ಜಿಂಕೆ,ನಾಯಿ,ತುಂಬಿದ ಕೊಡ,ಮುತ್ತೈದೆ,ಬ್ರಾಹ್ಮಣರು,ಹಣ್ಣು-ಹಂಪಲು, ತೆಂಗಿನಕಾಯಿ, ಹೆಣ, ಹೆಂಡ ಮುಂತಾದುವು.
  2. ಕೆಟ್ಟ ಶಕುನ/ಅಪಶಕುನಗಳು- ಬೆಕ್ಕು, ಕೋತಿ, ಕೋಣ,ಹಂದಿ, ವಿಧವೆ, ಒಂಟಿಬ್ರಾಹ್ಮಣ, ಸೌದೆ, ಹಗ್ಗ, ಖಾಲಿಕೊಡ ಇತ್ಯಾದಿಗಳು.

ಕಲೆ ಮತ್ತು ಆಟ(ಕ್ರೀಡೆ)ಗಳು

[ಬದಲಾಯಿಸಿ]
  • ಇವು ಅಶೋಕಪುರಂನ ಜನರ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ. ಈ ಕಲೆಗಳಲ್ಲಿ ಕೆಲವು ಅಶೋಕಪುರಂನಲ್ಲೇ ಹುಟ್ಟಿದ್ದರೆ, ಇನ್ನು ಕೆಲವು ಹೊರ ಸಮಾಜದಿಂದ ಸೇರ್ಪಡೆಗೊಂಡಿವೆ. ಆರಂಭದ ಜನಪದ ಕಲೆಗಳೆಂದರೆ-ನಾಟಕ, ಕುಣಿತ, ಜನಪದ ವಾದ್ಯ ವಿಶೇಷಗಳು. ನಂತರ ಕುಸ್ತಿ, ದೊಣ್ಣೇವರಸೆ, ಪಟಾವರಸೆ, ಸಿಡಿ, ಕತ್ತಿವರಸೆ, ಹುಲಿವೇಷ ಮುಂತಾದುವು.
  • ಇವುಗಳನ್ನೇಲ್ಲ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವರ್ಷಕ್ಕೊಂದು ಬಾರಿ,ಕೋಟೆ ಮಾರಮ್ಮನ ಆವರಣದಲ್ಲಿ ನೋಡಿ ಮೆಚ್ಚುಗೆ ಸೂಸಿ, ಶಹಭಾಸ್ಗಿರಿ ಕೊಡುತ್ತಿದ್ದರಂತೆ. ಇಲ್ಲಿನ ಉಪಆಟ/ಕ್ರೀಡೆಗಳೆಂದರೆ-ಅಣ್ಣೆ ಕಲ್ಲಾಟ, ಗಿಚ್ಚಿಯಾಟ, ಕುಂಬಳಕಾಯಿ ಆಟ, ಕುಳ್ಳಿ ಮೂಟೆ, ಬುಗುರಿ, ಅಳ್ಳು ಮನೆ, ಚೌಕಾ ಭಾರ, ಗಟ್ಟೆ ಮನೆ, ಕುಂಟ ಬಿಲ್ಲೆ, ಕಣ್ಣಾ ಮುಚ್ಚಾಲೆ, ಕಣ್ಣು ಕಟ್ಟಾಟ, ಹಸು-ಹುಲಿ, ಹುಲಿ-ಕುರಿ, ಜೂಟಾಟ, ಎಳೆಯಾಟ, ಚಿಣ್ಣೀ ದಾಂಡು, ಕಳ್ಳ-ಪೋಲಿಸ್, ಹಗ್ಗದಾಟ, ಗುಡಾರಿ, ಲಗೋರಿ, ಕಲ್ಲೋ ಮಣ್ಣೋ, ಟೋಪಿಯಾಟ, ಮರಕೋತಿ,ಉಯ್ಯಾಲೆ, ಗಾಳೀಪಟ ಇತ್ಯಾದಿ.

ಪರಾಮರ್ಶನ ಗ್ರಂಥಗಳು

[ಬದಲಾಯಿಸಿ]
  1. ಕೆಲವು ಜನಪದ ಸಂಪ್ರದಾಯಗಳು-ತ.ಚಿ.ಚಲುವೇಗೌಡ(೧೯೭೮)
  2. ನಗರ ಜಾನಪದ-ಚಂದ್ರು ಕಾಳೇನಹಳ್ಳಿ(೧೯೭೮)
  3. ಮೈಸೂರು ಒಂದು ಅಧ್ಯಯನ-ಲಿಂಗಯ್ಯ ಎಂ.ಕೆ(೧೯೮೨)
  4. ಮಲೆನಾಡ ಜನಪದ ಸಂಪ್ರದಾಯಗಳು-ಡಾ.ಅಂಬಳಿಕೆ ಹಿರಿಯಣ್ಣ(೧೯೮೬)
  5. ಒಂದು ಗ್ರಾಮದ ಜಾನಪದೀಯ ಅಧ್ಯಯನ-ಚೆನ್ನಣ್ಣವಾಲೀಕಾರ(೧೯೯೧)
  6. ಮೈಸೂರು ನಗರದ ಅಶೋಕಪುರಂ ಒಂದು ಜಾನಪದೀಯ ಅಧ್ಯಯನ-ಡಾ.ವಾಸುದೇವಮೂರ್ತಿ(೨೦೦೩)
  7. ಕನ್ನಡ ವಿಶ್ವಕೋಶ, ಕನ್ನಡ ವಿಷಯ ವಿಶ್ವಕೋಶ, ಕನ್ನಡ ಜಾನಪದ ವಿಶ್ವಕೋಶ- ಕನ್ನಡ ಅಧ್ಯಯನ ಸಂಸ್ಥೆ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ,ಮೈಸೂರು.

ಉಲ್ಲೇಖ

[ಬದಲಾಯಿಸಿ]

[] []

  1. http://wikimapia.org/14225649/Ashokapuram
  2. "ಆರ್ಕೈವ್ ನಕಲು". Archived from the original on 2016-03-04. Retrieved 2015-05-28.