ದಡಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
4 ದಿನದ ಮಕ್ಕಳ ದಡಾರದ ದಡಸಲು / ರಾಶ್ ತೋರಿಸುವ ಚಿತ್ರ.

ದಡಾರ ಅಥವಾ ಅಮ್ಮ[ಬದಲಾಯಿಸಿ]

  • ಬೇಸಿಗೆಯಲ್ಲಿ ಚಿಕ್ಕ ಮಕ್ಕಳಿಗೆ, ದಡಾರ ಅಥವಾ ಮೀಸೆಲ್ಸ್ ಹಾವಳಿ ಸಾಮಾನ್ಯ. ಹೆಚ್ಚಾಗಿ ಈ ಸೋಕು ಮಾರ್ಚ್-ಏಪ್ರಿಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕು ಉಂಟು ಮಾಡುವ ಈ ರೋಗ ಭಾರತದಲ್ಲಿ ಮೊದಲಿನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲವಾದರೂ ರೋಗದ ಕುರಿತು ಮುನ್ನೆಚ್ಚರಿಕೆ ಅಗತ್ಯ. ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ದಡಾರ, ಕೆಲವು ಬಾರಿ ವಯಸ್ಕರನ್ನೂ ಬಾಧಿಸುತ್ತದೆ.
  • ದಡಾರವನ್ನು ಕೆಲವು ಗ್ರಾಮೀಣ ಪ್ರದೇಶದಲ್ಲಿ 'ಅಮ್ಮ' ಎಂದೂ ಕರೆಯಲಾಗುತ್ತದೆ. ಮಕ್ಕಳಿಗೆ ದಡಾರದ ಚುಚ್ಚುಮದ್ದು ಕೊಡಿಸುವ ಮೂಲಕ ಈ ರೋಗ ನಿಯಂತ್ರಿಸಬಹುದು. ಸಾಮಾನ್ಯವಾಗಿ ಮಗು ಜನಿಸಿದ ಆರು ತಿಂಗಳವರೆಗೆ ದಡಾರ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ತಾಯಿಯಿಂದ ಬಳುವಳಿಯಾಗಿ ಪಡೆದ ರೋಗ ನಿರೋಧಕ ಶಕ್ತಿಯೇ ಕಾರಣ. ದಡಾರದ ಉಪಟಳ ಆರು ತಿಂಗಳಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಸಾಮಾನ್ಯ.[೧]

ದಡಾರದ ಸೋಂಕು[ಬದಲಾಯಿಸಿ]

ದಡಾರದ ವೈರಸ್- ಎಲೆಕ್ಟ್ರಾನಿಕ್ ಸೂಕ್ಷ್ಮದರ್ಶಕದಲ್ಲಿ.
  • ಸಿಲ್ಲಾ ಎಂಬ ವೈರಾಣುವಿನಿಂದ (ವೈರಸ್) ಬರುವ ಇದು ಒಂದು ಅಂಟು ರೋಗ.ಇದನ್ನು "ದಡಾರ ಮತ್ತು ರುಬೆಲ್ಲಾ (ಎಂಆರ್‌)" ಎಂದು ಒಟ್ಟಿಗೆ ಗೆ ಹೇಳಲಾಗುತ್ತದೆ. ಈ ರೋಗ ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹರಡುತ್ತದೆ - ಮಕ್ಕಳಲ್ಲಿ ಹೆಚ್ಚು. ಶಾಲೆಗೆ ಹೋಗುವ ಮಕ್ಕಳಲ್ಲಿ ದಡಾರ ಕಾಣಿಸಿಕೊಂಡಲ್ಲಿ, ಮಗು ಗುಣಮುಖವಾಗುವವರೆಗೂ ಶಾಲೆಗೆ ಕಳುಹಿಸದೇ ಇರುವುದು ಒಳಿತು. ದಡಾರ ಇರುವ ಮಗುವನ್ನು ಶಾಲೆಗೆ ಕಳುಹಿಸಿದಲ್ಲಿ ಇತರ ಮಗುವಿಗೂ ರೋಗ ಅಂಟುವ ಸಾಧ್ಯತೆ ಹೆಚ್ಚು.
  • ಈ ರೋಗ ಕಾಣಿಸಿಕೊಳ್ಳುವ ಮೊದಲನೇ ದಿನ ಜ್ವರ ಬರುತ್ತದೆ. ಆರಂಭದಲ್ಲಿ ಮುಖದ ಮೇಲಷ್ಟೇ ಕಾಣಿಸಿಕೊಳ್ಳುವ ನೀರಗುಳ್ಳೆಗಳು ದಿನಗಳೆದಂತೆ ಹೊಟ್ಟೆ ಹಾಗೂ ದೇಹದ ಇತರ ಭಾಗಕ್ಕೂ ವಿಸ್ತರಿಸುತ್ತವೆ. ನೀರ ಗುಳ್ಳೆಗಳಿಂದ ಪ್ರಾರಂಭದಲ್ಲಿ ಸ್ವಲ್ಪ ನವೆ ಇರುತ್ತದೆ. ಮೊದಲು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ದಡಾರ ಇತ್ತೀಚಿನ ವರ್ಷಗಳಲ್ಲಿ 18ರಿಂದ 40 ವರ್ಷ ವಯೋವಾನದವರಲ್ಲೂ ಕಂಡುಬರುತ್ತಿದೆ. ಮಕ್ಕಳಲ್ಲಿ ದಡಾರ ಕಾಣಿಸಿಕೊಂಡರೆ ಅಮ್ಮ ಅಥವಾ ದೇವಿಯ ಕಾಟವೆಂಬ ಮೂಢನಂಬಿಕೆಯಿಂದ ಕೆಲವರು ದೇವಸ್ಥಾನಗಳಿಗೆ ತೆರಳಿ, ಎಣ್ಣೆ ಹಾಕಿ ಬರುತ್ತಾರೆ. ಇದರ ಬದಲು ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಿದಲ್ಲಿ ಮಗು ಬೇಗ ಗುಣಮುಖವಾಗುತ್ತದೆ.

ರೋಗದ ಲಕ್ಷಣ[ಬದಲಾಯಿಸಿ]

ಆಫ್ರಿಕನ್ ಮಗು(4)- ದಡಾರ
  • ಮೈಮೇಲೆ ಕೆಂಪು ದಡಸಲು ರ್ಯಾಶಸ್ (ಕೆಂಪು ಬಾಸುಂಡೆಯ ರೀತಿ) - ಬೆನ್ನಿನ ಮೇಲೆ ಹೆಚ್ಚು. ಅನುಮಾನ ಬಂದರೆ ಮೊದಲು ಬೆನ್ನು ನೋಡಬೇಕು.
  • ಶೀತ, ಕೆಮ್ಮು ಮತ್ತು ಮೂಗಿನಲ್ಲಿ ಸುರಿತ,
  • 38 ಡಿಗ್ರಿ ಸೆಂಟಿಗ್ರೇಡ್ (100.4 ಡಿಗ್ರಿ ಎಫ್) ಅಥವಾ ಅದಕ್ಕಿಂತಲೂ ಹೆಚ್ಚು ಇರುವ ಜ್ವರ
  • ಸಿಂಬಳದ ಸೋರಿಕೆ
  • ಕಣ್ಣುಗಳು ಕೆಂಪಗಾಗಿ ಊದಿಕೊಂಡು, ಕಣ್ಣೀರು ಸುರಿಯ ತೊಡಗುತ್ತದೆ.
  • ಬೆಳಕನ್ನು ನೋಡಲಾಗುವುದಿಲ್ಲ.
  • ದವಡೆ ಹಲ್ಲಿನ ಹತ್ತಿರ, ಕೆನ್ನೆಯ ಲೋಳ್ಪರೆಯ ಮೇಲೆ ಕಾಪ್ಲಿಕ್ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ದಡಾರ ಕಾಯಿಲೆ ತನ್ನ ಜತೆಗೆ ನ್ಯುಮೋನಿಯಾ, ಅತಿಭೇದಿಯಂತಹ ಆರೋಗ್ಯ ಸಮಸ್ಯೆ ತರುತ್ತದೆ. [೨]

ಮುನ್ನೆಚ್ಚರಿಕೆ ಕ್ರಮ[ಬದಲಾಯಿಸಿ]

  • ಮುನ್ನೆಚ್ಚರಿಕೆ ಕ್ರಮವಾಗಿ ದಡಾರದ ಲಸಿಕೆಯನ್ನು ಮಕ್ಕಳಿಗೆ ಕೊಡಿಸಬೇಕು. ಈ ೨೦೧೭ ರ ಫೆಬ್ರವರಿ ತಿಂಗಳಲ್ಲಿ ಕರನಾಟಕದಲ್ಲಿ ಈ ಲಸಿಕೆಯನ್ನು ಎಲ್ಲಾ ಮಕ್ಕಳಿಗೆ ಕೊಡುವ ಅಭಿಯಾನ ಆರಂಭವಾಗಿದೆ. ಅದರ ಉಪಯೋಗವನ್ನು ಅಗತ್ಯವಿರುವ ಎಲ್ಲರೂ ಪಡೆದುಕೊಳ್ಳಬೇಕು.
  • ದಡಾರ ರೋಗಿಯ ಬಾಯಲ್ಲಿ, ಮೂಗಿನಲ್ಲಿ ಮತ್ತು ಗಂಟಲ ಸ್ರವಿಕೆಯಲ್ಲಿ ವೈರಸ್‌ಗಳಿರುತ್ತವೆ. ರೋಗಿ ಸೀನಿದಾಗ, ಕೆಮ್ಮಿದಾಗ ಹೊರಗಿನ ಪರಿಸರಕ್ಕೆ ವೈರಸ್‌ಗಳು ಸೇರುತ್ತವೆ. ಉಸಿರಾಟದ ಮೂಲಕ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ್ನ ಪ್ರವೇಶಿಸಿ, ರೋಗ ಲಕ್ಷಣಗಳನ್ನು ಹೊರಹೊಮ್ಮಿಸುತ್ತವೆ. ಆರೋಗ್ಯವಂತ ಮಗುವಿಗೆ ಸೋಂಕಿನ ಮೂಲಕ ದಡಾರ ಹರಡುತ್ತದೆ. ದಡಾರ ರೋಗಿ ಉಪಯೋಗಿಸಿದ ಸೋಂಕಿನಿಂದ ಕೂಡಿದ ವಸ್ತುಗಳಿಂದಲೂ ಸೋಂಕು ಹರಡಬಹುದು. ದಡಾರ ಕಾಣಿಸಿಕೊಂಡ ಪ್ರಾರಂಭದ ಐದು ದಿನಗಳವರೆಗೆ ಸೋಂಕು ತೀವ್ರವಾಗಿರುವುದರಿಂದ ಬೇರೆ ಮಕ್ಕಳಿಂದ ಮಗುವನ್ನು ಪ್ರತ್ಯೇಕವಾಗಿರಿಸುವುದು ಅಗತ್ಯ.
  • ದಡಾರ ತಡೆಗಟ್ಟುವ ಚುಚ್ಚುಮದ್ದನ್ನು ಕೊಡಿಸದಿದ್ದರೆ ಮಗುವಿಗೆ ದಡಾರ ರೋಗ ಬರುವ ಸಾಧ್ಯತೆ ಹೆಚ್ಚು. ಎಳೆಯ ಮಕ್ಕಳಲ್ಲಿ ಮತ್ತು ಅಪೌಷ್ಟಿಕತ್ನೆ ಹೊಂದಿರುವ ಮಕ್ಕಳಲ್ಲಿ ದಡಾರ ಬಹಳ ತೀವ್ರ ತೊಡಕನ್ನ್ನುಂಟು ಮಾಡುತ್ತದೆ. ದಡಾರ ಪ್ರಾಣಕ್ಕೆ ಹಾನಿಕಾರಕ ಅಲ್ಲವಾದರೂ, ಮಕ್ಕಳಿಗೆ ಸ್ವಲ್ಪಮಟ್ಟಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದಾಗಿ ಮಕ್ಕಳು ಕಿರಿಕಿರಿ ಮಾಡುತ್ತವೆ. ಆದ್ದರಿಂದ ತಪ್ಪದೆ ದಡಾರದ ಲಸಿಕೆಯನ್ನು ಮಕ್ಕಳಿಗೆ ಕೊಡಿಸಬೇಕು.

ಭಾರತದಲ್ಲಿ ಲಸಿಕಾ ಅಭಿಯಾನ[ಬದಲಾಯಿಸಿ]

  • 9 Feb, 2017
  • ಮಕ್ಕಳಿಗೆ ತೀವ್ರವಾಗಿ ಕಾಡುವ ದಡಾರ ಮತ್ತು ರುಬೆಲ್ಲಾ ರೋಗಗಳನ್ನು ದೇಶದಲ್ಲಿ 2020ರ ವೇಳೆಗೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್‌ ವತಿಯಿಂದ ದಡಾರ–ರುಬೆಲ್ಲಾ (MR) ಲಸಿಕಾ ಕಾರ್ಯಕ್ರಮವನ್ನು ರೂಪಿಸಿದೆ. ಈ ಲಸಿಕೆಯನ್ನು 5 ರಿಂದ 15 ವರ್ಷಗಳ ಒಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಅಭಿಯಾನ 2017 ಫೆ. 7–28ರವರೆಗೆ ನಡೆಯಲಿದೆ.
  • ನಿರ್ಲಕ್ಷ್ಯ ಮಾಡಿದರೂ ಜೀವವನ್ನೇ ಬಲಿ ತೆಗೆದುಕೊಳ್ಳುವ ಅಥವಾ ಜೀವನವಿಡೀ ನರಳುವಂತೆ ಮಾಡುವಷ್ಟು ಗಂಭೀರ ಕಾಯಿಲೆಗಳಾದ ದಡಾರ ಮತ್ತು ರುಬೆಲ್ಲಾ (ಎಂಆರ್‌) ವಿರುದ್ಧ ಫೆಬ್ರವರಿ ೨೦೧೭ರಲ್ಲಿ ಭಾರತದಲ್ಲಿ ಲಸಿಕಾ ಅಭಿಯಾನ ಶುರುವಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಲಕ್ಷದ್ವೀಪಗಳಲ್ಲಿ ಹಂತಹಂತವಾಗಿ ನಡೆಯಲಿದೆ.
  • ನಮ್ಮ ಕರ್ನಾಟಕ ರಾಜ್ಯದಲ್ಲಿ ಇದು ಮಂಗಳವಾರ ೭-೨-೨೦೧೭ರಂದು ಆರಂಭವಾಗಿದ್ದು, ಈ ತಿಂಗಳ 28ರವರೆಗೂ ಮುಂದುವರಿಯಲಿದೆ. ನಮ್ಮಲ್ಲಿ 9 ತಿಂಗಳ ಶಿಶುಗಳಿಂದ ಹಿಡಿದು 15 ವರ್ಷದವರೆಗಿನ ಒಟ್ಟು 1.65 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ದೇಶದಲ್ಲಿ ಒಟ್ಟಾರೆ 41 ಕೋಟಿ ಮಕ್ಕಳಿಗೆ ಲಸಿಕೆ ನೀಡಲು ಏರ್ಪಾಟು ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಕೂಡ ಇದರ ಯಶಸ್ಸಿಗೆ ಟೊಂಕಕಟ್ಟಿ ನಿಂತಿದೆ. ವೈದ್ಯಕೀಯ ಸಿಬ್ಬಂದಿ ಮಾತ್ರವಲ್ಲದೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರನ್ನೂ ತೊಡಗಿಸಲಾಗಿದೆ. ಮಕ್ಕಳೇ ಈ ಲಸಿಕಾ ಅಭಿಯಾನದ ಮುಖ್ಯ ಫಲಾನುಭವಿಗಳು. ಹೀಗಾಗಿ ಯಾವ ಅರ್ಹ ಮಗುವೂ ಇದರಿಂದ ವಂಚಿತವಾಗಬಾರದು ಎಂಬ ಕಾರಣಕ್ಕಾಗಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರವಲ್ಲದೆ ಶಾಲೆಗಳಿಗೇ ಹೋಗಿ ಲಸಿಕೆ ಹಾಕುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಚುಚ್ಚುಮದ್ದು ಮೂಲಕ ನೀಡುವ ಈ ಲಸಿಕೆ ಸುರಕ್ಷಿತ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ. ವಿಶ್ವದಾದ್ಯಂತ ಅಸಂಖ್ಯಾತ ಮಕ್ಕಳು ಈಗಾಗಲೆ ಇದನ್ನು ಹಾಕಿಸಿಕೊಂಡು ಸುರಕ್ಷಿತರಾಗಿದ್ದಾರೆ. [೩]

ವಿವರ[ಬದಲಾಯಿಸಿ]

ದಡಾರ ಲಸಿಕೆ- ಅಂದಾಜು ಪ್ರತಿರಕ್ಷಣೆ ಹೊಂದಿರುವ ವ್ಯಾಪ್ತಿ (WHO 2010)
  • ದಡಾರ (Measles) ಕಾಯಿಲೆ ತೀವ್ರ ಸೋಂಕಿನ ಮಾರಣಾಂತಿಕ ಕಾಯಿಲೆ. ಎಷ್ಟೋ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ. ದಡಾರ ವೈರಾಣವು ಪ್ಯಾರಾಮಿಕ್ಸೂ ವೈರಿಡೆಯೇ ಕುಟುಂಬಕ್ಕೆ ಸೇರಿದ್ದು ಮಾನವನೇ ಈ ವೈರಾಣುವಿನ ಆಶ್ರಯದಾತ. ಈ ಮೊದಲು ದಡಾರ ವೈರಾಣು 15 ವರ್ಷ ಒಳಗಿನ ಮಕ್ಕಳಲ್ಲಿ ಶೇ. 90ರಷ್ಟು ಮಕ್ಕಳಿಗೆ ಹರಡುತ್ತಿತ್ತು. 1963ರಲ್ಲಿ ಮೊದಲ ಬಾರಿಗೆ ದಡಾರ ಲಸಿಕೆ ನೀಡಲು ಪ್ರಾರಂಭಿಸಿದ ನಂತರ ರೋಗದ ಹರಡುವ ಪ್ರಮಾಣ ಇಳಿಮುಖವಾಗುತ್ತ ಬಂದಿತು. ದಡಾರ ವೈರಾಣವು ಶ್ವಾಸಕೋಶದ ಮೇಲ್ಟದರವನ್ನು ಸಾಯಿಸುವುದಲ್ಲದೆ, ಚರ್ಮದ ಮೇಲಿನ ಸೂಕ್ಷ್ಮ ರಕ್ತನಾಳಗಳು ಊದಿಕೊಳ್ಳುವುದರಿಂದ ಚರ್ಮದ ಮೇಲೆ ಕೆಂಪುಬಣ್ಣದ ಚುಕ್ಕೆಗಳು ಕಾಣಿಸುವುವು.
  • ರೋಗಲಕ್ಷಣಗಳು: ಮಕ್ಕಳು ರೋಗಿಯ ಸಂಪರ್ಕದಲ್ಲಿ ಬಂದ 8–10 ದಿನಗಳಲ್ಲಿ ತೀವ್ರ ಜ್ವರ, ಬಾಯಿ ಒಳಭಾಗದಲ್ಲಿ ಕೆಂಪು ಚುಕ್ಕೆಗಳು (Koplik spots) ಕಾಣಿಸಿಕೊಳ್ಳುತ್ತವೆ. ಕೆಮ್ಮ ನೆಗಡಿಗಳು ಬಾಧಿಸುತ್ತವೆ. ಜ್ವರ ಬಂದ ಮೂರು ದಿನಗಳ ನಂತರ ಚರ್ಮದ ಮೇಲೆ ಕೆಂಪು ಚುಕ್ಕೆಗಳು ಮೊದಲು ಹಣೆಯ ಮತ್ತು ಕಿವಿಯ ಹಿಂಭಾಗದಿಂದ ಶುರುವಾಗಿ ಮುಖ ಕುತ್ತಿಗೆ ಹಾಗೂ ಬೆನ್ನಿನಿಂದ ಕೈ ಕಾಲುಗಳಿಗೆ ಕ್ರಮಬದ್ಧವಾಗಿ ಹರಡುತ್ತವೆ. ಅಂಗೈ ಹಾಗೂ ಅಂಗಾಲುಗಳಲ್ಲಿ ಕೂಡ ಕೆಂಪುಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಮೇಲೆ ಕೆಂಪುಚುಕ್ಕೆಗಳು ಕಾಣಿಸಿದ ನಂತರ ಜ್ವರ–ಶೀತ ಕ್ರಮೇಣ ಕಡಿಮೆ ಅಗುತ್ತಾ ಬರುತ್ತದೆ. ಚರ್ಮದ ಕೆಂಪು ಚುಕ್ಕೆಗಳು ಏಳು ದಿವಸದ ನಂತರ ಕ್ರಮೇಣ ಅದೇ ಕ್ರಮದಲ್ಲಿ ಮರೆಯಾಗುತ್ತವೆ. ತೀವ್ರ ತರಹದ ದಡಾರ ಇದ್ದಲ್ಲಿ ಮಾತ್ರ ಕುತ್ತಿಗೆಯ ಹಾಗೂ ತಲೆಯ ಹಿಂಭಾಗದಲ್ಲಿ ದುಗ್ದರಸ ಗ್ರಂಥಿಗಳು (lymph nodes) ದೊಡ್ಡದಾಗುವುವು.

ಪತ್ತೆ ಹಚ್ಚುವ ಬಗ್ಗೆ[ಬದಲಾಯಿಸಿ]

  • ಚರ್ಮದ ಮೇಲೆ ಕೆಂಪು ಚುಕ್ಕೆ ಬಂದ ಎರಡು ದಿವಸಗಳಲ್ಲಿ, ರಕ್ತದಲ್ಲಿ IgM antibodyಗಳು ಕಂಡು ಬರುತ್ತಿವೆ; ಇವು ಒಂದು ತಿಂಗಳ ತನಕ ರಕ್ತದಲ್ಲಿ ಇರುವುವು. IgG antibody ರೋಗ ಬಂದ ಒಂದು ವಾರದಲ್ಲಿ ಕಾಣಿಸಿಕೊಳ್ಳುವುವು; 15–30 ದಿನಗಳ ನಂತರ ಇವು ನಾಲ್ಕು ಪಟ್ಟು ಹೆಚ್ಚಾಗಿದ್ದರೆ ಆಗ ದಡಾರ ಎಂದು ಖಚಿತಪಡಿಸಿಕೊಳ್ಳಬಹುದು.
  • ರೋಗಿಯ ರಕ್ತ ಅಥವಾ ಮೂತ್ರ ಅಥವಾ ಶ್ವಾಸಕೋಶದಿಂದ ಸ್ರವಿಸುವ ಹನಿಗಳಿಂದ ಕಲ್ಚರ್‌ ಮಾಡಿ ವೈರಾಣವನ್ನು ಪತ್ತೆ ಹಚ್ಚಬಹುದು. ಇದು ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾಡಲಾಗುವುದು. ಒಂದೇ ಒಂದು ಮೀಸಲ್ಸ್ ಪ್ರಕರಣ ಬಂದರೂ ಅದರ ರಕ್ತ, ಮೂತ್ರ, ಕಫದ ಮಾದರಿಗಳನ್ನು ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರದ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. PCR ಪರೀಕ್ಷೆಯಿಂದಲೂ ರೋಗವನ್ನು ಪತ್ತೆ ಹಚ್ಚಬಹುದು.[೪]

ಇತರೆ ಪರಿಣಾಮಗಳು[ಬದಲಾಯಿಸಿ]

  • ನ್ಯೂಮೋನಿಯಾ, ಕಿವಿ ಒಡೆದು ಸೋರುವುದು, ವಾಂತಿ–ಭೇದಿಗಳು ಸಾಮಾನ್ಯವಾಗಿ ಕಂಡು ಬರುವವು. ಸಾವಿರದಲ್ಲಿ ಒಂದರಿಂದ ಮೂವರಿಗೆ ಮೆದುಳು ಜ್ವರ (Encephalitis) ಕೂಡ ಆಗಬಹುದು. ಇದು ಚರ್ಮದ ಮೇಲೆ ಕೆಂಪು ಚುಕ್ಕಿ ಕಾಣಿಸಿದಾಗಲೇ ಪ್ರಾರಂಭವಾಗುವುದು. ಮೆದುಳು ಜ್ವರದವರಲ್ಲಿ ಶೇ. 15ರಷ್ಟು ಜನ ಸಾಯುತ್ತಾರೆ. ಕಿವುಡುತನಕ್ಕೂ ಒಳಗಾಗಬಹುದು. ಹೃದಯದ ಮೇಲೂ ಪರಿಣಾಮ ಬೀರುವುದು. ಆದರೆ ಇದು ಅತಿ ವಿರಳ.
  • ದಡಾರ ಬೇನೆಯಿಂದ ಗುಣಮುಖ ಹೊಂದಿದ 7–10 ವರ್ಷದ ನಂತರ, ವಿಕೃತಗೊಂಡ ದಡಾರ ವೈರಾಣುವು ದೇಹದ ನರಗಳಲ್ಲಿ ಬಹಳಷ್ಟು ವರ್ಷ ಉಳಿದುಕೊಂಡು ನಂತರ ವೈರಾಣವು ತನ್ನ ಶಕ್ತಿ ವೃದ್ಧಿಸಿಕೊಂಡು ನರವ್ಯೂಹದಲ್ಲಿನ ಕಣಗಳನ್ನು ನಾಶಪಡಿಸುತ್ತಾ ಹೋಗುತ್ತದೆ. ಆದರೆ ಇದು ಅತಿ ವಿರಳ. ಅತಿ ಸಣ್ಣ ವಯಸ್ಸಿನಲ್ಲಿ (ಅಂದರೆ <2 ವರ್ಷ) ದಡಾರ ಬೇನೆ ಬಂದಲ್ಲಿ SSPE ಆಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಗಂಡುಮಕ್ಕಳಲ್ಲಿ ಇದು ಹೆಚ್ಚು. ದಡಾರಕ್ಕೆ ತುತ್ತಾದ 10 ವರ್ಷಗಳ ನಂತರ SSPE ರೋಗಲಕ್ಷಣಗಳು ಕಾಣಲು ಪ್ರಾರಂಭವಾಗುವುವು. ದಡಾರವನ್ನು ತಡೆಗಟ್ಟಬೇಕಾದರೆ ದಡಾರ–ಲಸಿಕೆ ಒಂದೇ ಉಪಾಯ.

ರೋಗ ತಡೆಗಟ್ಟುವಿಕೆ[ಬದಲಾಯಿಸಿ]

  • ಈ ಮೊದಲು ಮೀಸಲ್ಸ್‌ನ ಮೊದಲನೆಯ ಡೋಸ್ ಅನ್ನು 9–12 ತಿಂಗಳಲ್ಲಿ ನೀಡಬೇಕೆಂದು ನಮ್ಮ ರಾಷ್ಟ್ರೀಯ ಲಸಿಕಾ ವೇಳಾಪಟ್ಟಿಯಲ್ಲಿ ಇತ್ತು. ಆದರೆ ದಡಾರ ಪ್ರಕರಣಗಳು ಹೆಚ್ಚು ಕಂಡು ಬಂದ ಹಿನ್ನಲೆಯಲ್ಲಿ ಸರ್ಕಾರವು ಎರಡನೆಯ ಡೋಸ್‌ ಅನ್ನು 16–18 ವಾರದಲ್ಲಿ ನೀಡಲು ಪ್ರಾರಂಭಿಸಿತ್ತು. ದಡಾರ ಬೇನೆ ಕಾಣಿಸಿಕೊಂಡ 72 ತಾಸುಗಳಲ್ಲಿ ದಡಾರ ಲಸಿಕೆಯನ್ನು ಕೊಡಿಸಿದರೆ ಅದರ ತೀವ್ರತೆಗಳನ್ನು ಕಡಿಮೆ ಮಾಡಬಹುದು. ದಡಾರ ಬೇನೆಗೆ ತುತ್ತಾದ ಆರು ದಿನಗಳಲ್ಲಿ "Immunoglobulin" ನೀಡಿದರೆ ಬೇನೆಯನ್ನು ತಪ್ಪಿಸಬಹುದು ಅಥವಾ ತೀವ್ರತೆ ಕಡಿಮೆ ಮಾಡಬಹುದು.

ದಡಾರ–ರುಬೆಲ್ಲಾ ಲಸಿಕಾ ಅಭಿಯಾನ[ಬದಲಾಯಿಸಿ]

  • ನಿಯತವಾಗಿ ಲಸಿಕೆ ನೀಡಿದರೂ ಸಹ ರೋಗದ ಪ್ರಕರಣಗಳು ಹೆಚ್ಚಾಗುತ್ತಿದನ್ನು ಮನಗಂಡು ಭಾರತ ಸರ್ಕಾರವು ಈ ವರ್ಷ ಫೆಬ್ರುವರಿ 7ರಿಂದ 28ರ ವರೆಗೆ ದಡಾರ–ರುಬೆಲ್ಲಾ ಲಸಿಕಾ ಅಭಿಯಾನವನ್ನು ಕೈಗೊಂಡಿದೆ.
  • ದಡಾರ–ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. MR ಲಸಿಕೆಯನ್ನು ವಿಶೇಷ ಅಭಿಯಾನದ ಮೂಲಕ ರಾಜ್ಯದ ಒಂಬತ್ತು ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ನೀಡಲಾಗುತ್ತದೆ. ಈ ಅಭಿಯಾನವು ರಾಜ್ಯದ ಎಲ್ಲಾ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈ ಹಿಂದೆ ಲಸಿಕೆ ಪಡೆದಿದ್ದರೂ ಅಭಿಯಾನದ ಸಂದರ್ಭದಲ್ಲಿ MR ಲಸಿಕೆಯನ್ನು ನೀಡಬೇಕಾಗುತ್ತದೆ. ಸಾರ್ವಜನಿಕರು ತಮ್ಮ ಪ್ರದೇಶದಲ್ಲಿರುವ ಒಂಬತ್ತು ತಿಂಗಳಿಂದ 15 ವರ್ಷದ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಹೋಗಬೇಕು. ಶಾಲೆಗೆ ಹೋಗುವ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ದಡಾರ–ರುಬೆಲ್ಲಾ ಲಸಿಕೆಯನ್ನು ಪಡೆಯಲು ಅನುಮತಿಯನ್ನೂ ನೀಡಬೇಕು.
  • ಯಾವುದೇ ಅಡ್ಡಿ ಪರಿಣಾಮ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಇನ್ನಿತರ ಪಾಲಕರಿಗೂ ಸಹ ತಮ್ಮ ಮಕ್ಕಳಿಗೆ ಲಸಿಕೆ ಪಡೆಯಲು ಉತ್ತೇಜನ ನೀಡಿ, ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಿಳಿಸಬೇಕು.

ರುಬೆಲ್ಲಾ ಅಥವಾ ‘ಮೂರು ದಿನದ ಮೀಸಲ್ಸ್[ಬದಲಾಯಿಸಿ]

ರುಬೆಲ್ಲಾ ವೈರಸ್ಟ್ರಾ-ನ್ಸ್ಮಿಶನ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ
  • ರುಬೆಲ್ಲಾ ಇದಕ್ಕೆ ‘ಜರ್ಮನ್ ಮೀಸಲ್ಸ್’ ಅಥವಾ ‘ಮೂರು ದಿನದ ಮೀಸಲ್ಸ್’ ಎಂದೂ ಕರೆಯುತ್ತಾರೆ. ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಹೆಚ್ಚು ತೊಂದರೆಯನ್ನು ಉಂಟುಮಾಡುವುದಿಲ್ಲ. ಆದರೆ ವಯಸ್ಕರಲ್ಲಿ ತೊಂದರೆಗಳನ್ನು ಉಂಟುಮಾಡುವುದು. ರುಬೆಲ್ಲಾ ವೈರಾಣುವು ಮನುಷ್ಯನಲ್ಲಿ ಮಾತ್ರ ಜೀವಿಸಬಲ್ಲದು.
  • ರುಬೆಲ್ಲಾ ಲಸಿಕೆ ಕಂಡು ಹಿಡಿಯುವ ಮೊದಲು ರುಬೆಲ್ಲಾ ಬೇನೆಯಿಂದ ಸಾಕಷ್ಟು ಸಾವು–ನೋವುಗಳಾಗುತ್ತಿದ್ದವು. 1969ರಲ್ಲಿ ರುಬೆಲ್ಲಾ ಲಸಿಕೆಯನ್ನು ಕಂಡುಹಿಡಿಯಲಾಯಿತು. ಇದಾದ ಮೇಲೆ ರುಬೆಲ್ಲಾ ಪ್ರಕರಣಗಳು ಕಡಿಮೆ ಆಗುತ್ತಹೋದವು. ಲಸಿಕೆ ನೀಡುವ ಪ್ರಕರಣಗಳು ಹೆಚ್ಚುತ್ತಾ ಹೋದಂತೆ ರುಬೆಲ್ಲಾ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲು ನಿರ್ಧರಿಸಲಾಯಿತು. ಆದರೆ ನಮ್ಮ ಭಾರತ ದೇಶದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ರುಬೆಲ್ಲಾ ಲಸಿಕೆಯನ್ನು ದಡಾರ ಲಸಿಕೆಯೊಂದಿಗೆ ಸೇರಿಸಿ MR ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ

ರುಬೆಲ್ಲಾ ಎಂಬ ದಡಾರದ ಲಕ್ಷಣ[ಬದಲಾಯಿಸಿ]

ಬೆನ್ನಿನಲ್ಲಿ ರುಬೆಲ್ಲ ರಾಶ್ (crop)
  • ರುಬೆಲ್ಲಾ ವೈರಾಣುವಿನ ಸಂಪರ್ಕಕ್ಕೆ ಬಂದ 14ರಿಂದ 21 ದಿನಗಳಲ್ಲಿ ವ್ಯಕ್ತಿಗೆ ಜ್ವರ, ಗಂಟಲು ಕೆರೆತ, ಕಣ್ಣುಗಳು ಕೆಂಪಾಗಿ ಕಾಣುವುದು, ತಲೆನೋವು, ಮೈ ಕೈ ನೋವು, ಹಸಿವು ಕಡಿಮೆ ಆಗುವುದು, ದುಗ್ಧರಸಗ್ರಂಥಿಗಳಲ್ಲಿ ಊತ ಕಾಣಿಸಿಕೊಳ್ಳುವುದು. ಮೈ ಮೇಲೆ ಸಣ್ಣ ಸಣ್ಣ ಕೆಂಪು ಬಣ್ಣದ ಬೊಕ್ಕೆಗಳು ಮೊದಲು ಮುಖ ಹಾಗೂ ಕುತ್ತಿಗೆ ನಂತರ ಕೈ ಕಾಲುಗಳಲ್ಲಿ ಕಂಡು ಬರುವುದು. ಅದೇ ಸಮಯದಲ್ಲಿ ಬಾಯಿಯಲ್ಲಿಯೂ ಕೂಡ ಗುಲಾಬಿಬಣ್ಣದ ಸಣ್ಣ ಸಣ್ಣ ಬೊಕ್ಕೆಗಳು ಕಾಣುತ್ತವೆ. ಸಾಮಾನ್ಯವಾಗಿ ಈ ಬೊಕ್ಕೆಗಳು ಮೂರು ದಿನಗಳಲ್ಲಿ ಮಾಯವಾಗುತ್ತವೆ. ಶೇ. 25-40ರಷ್ಟು ಮಕ್ಕಳಲ್ಲಿ ಬೊಕ್ಕೆಗಳು ಇರುವುದಿಲ್ಲ.
  • ತಲೆಯ ಹಿಂದಿನ, ಕಿವಿಯ ಹಿಂದಿನ ಹಾಗು ಕುತ್ತಿಗೆಯ ಮುಂಭಾಗದಲ್ಲಿನ ದುಗ್ಧರಸಗ್ರಂಥಿಗಳು ಮುಖ್ಯವಾಗಿ ಊದುಕೊಂಡಿರುತ್ತವೆ. ಶೇ. 90ರಷ್ಟು ಗರ್ಭಿಣಿಯ ಭ್ರೂಣಕ್ಕೆ ಇದು ಹಾನಿಯನ್ನು ಉಂಟುಮಾಡುತ್ತದೆ. ಈ ರೋಗವು ಸಾಮಾನ್ಯವಾಗಿ ದಡಾರ ರೋಗಲಕ್ಷಣಗಳಿಗೆ ಹೋಲುವುದುಂಟು. ಆದರೆ ಇದರಲ್ಲಿ Kopik Spots ಇರುವುದಿಲ್ಲ. ಅಲ್ಲದೆ ದಡಾರನಲ್ಲಿದ್ದ ಹಾಗೆ ಪ್ರಾರಂಭಿಕ ರೋಗಲಕ್ಷಣಗಳು ಇರುವುದಿಲ್ಲ; ಮತ್ತು ರುಬೆಲ್ಲಾದ ಲಕ್ಷಣಗಳು ಬೇಗ ಮಾಯಾವಾಗುತ್ತವೆ.[೪][೫]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. Measles HomeAbout Measles;Signs and Symptoms
  2. ಬಾರಿಸದಿರಲಿ ದಡಾರ;ದೇವಿ ಕಾಟವಲ್ಲ, ಚಿಕಿತ್ಸೆ ಕೊಡಿಸಿ;22 Feb 2014[ಶಾಶ್ವತವಾಗಿ ಮಡಿದ ಕೊಂಡಿ]
  3. "ದಡಾರ, ರುಬೆಲ್ಲಾ ಲಸಿಕೆ ಕೊಡಿಸಲು ಹಿಂಜರಿಕೆ ಬೇಡ;ಪ್ರಜಾವಾಣಿ ವಾರ್ತೆ;9 Feb, 2017". Archived from the original on 2017-02-09. Retrieved 2017-02-09.
  4. "ದಡಾರ ರುಬೆಲ್ಲಾಗೆ ಬೇಕು ಕಡಿವಾಣ;ಡಾ. ರತಿಕಾಂತ ಸ್ವಾಮಿ;4 Feb, 2017". Archived from the original on 2017-02-04. Retrieved 2017-02-09.
  5. Rubella (German Measles, Three-Day Measles)
"https://kn.wikipedia.org/w/index.php?title=ದಡಾರ&oldid=1212531" ಇಂದ ಪಡೆಯಲ್ಪಟ್ಟಿದೆ