ವಿಷಯಕ್ಕೆ ಹೋಗು

ರಾಜೀವ್ ತಾರಾನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂ. ರಾಜೀವ್ ತಾರಾನಾಥ್
ಜನನ೧೭ ಅಕ್ಟೋಬರ್, ೧೯೩೨
ರಾಯಚೂರು ಜಿಲ್ಲೆಯ ತುಂಗಭದ್ರಾ ಗ್ರಾಮದಲ್ಲಿರುವ "ಪ್ರೇಮಾಯತನ" ಆಶ್ರಮ
ವೃತ್ತಿಸಂಗೀತಗಾರರು, ಇಂಗ್ಲೀಷ್ ಪ್ರಾಧ್ಯಾಪಕರು, ಅನುವಾದಕರು
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪೌರತ್ವಭಾರತೀಯ
ವಿದ್ಯಾಭ್ಯಾಸಎಂ.ಎ, ಪಿ.ಎಚ್.ಡಿ (ಇಂಗ್ಲೀಷ್)
ಪ್ರಕಾರ/ಶೈಲಿಹಿಂದೂಸ್ತಾನಿ ಸಂಗೀತ
ಪ್ರಮುಖ ಪ್ರಶಸ್ತಿ(ಗಳು)ಸಂಗೀತ ನಾಟಕ ಅಕಾಡೆಮಿ(೧೯೯೯-೨೦೦೦), ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ(೧೯೯೩) ಇತ್ಯಾದಿ

ಪ್ರಭಾವಗಳು
  • ಪಂ.ತಾರಾನಾಥರು, ಉ.ಅಲಿ ಅಕ್ಬರ್ ಖಾನ್, ವಿ.ಅನ್ನಪೂರ್ಣಾದೇವಿ, ಪಂ. ರವಿಶಂಕರ್

ರಾಜೀವ್ ತಾರಾನಾಥ್ (ಅಕ್ಟೋಬರ್ ೧೭, ೧೯೩೨) ಸಂಗೀತ ಲೋಕದ ಧ್ರುವತಾರೆಗಳಲ್ಲೊಬ್ಬರು. ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರೆನಿಸಿರುವ ರಾಜೀವ್ ತಾರಾನಾಥರು ಜನಿಸಿದ ದಿನ ಅಕ್ಟೋಬರ್ ೧೭, ೧೯೩೨. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು ನಮ್ಮ ಕರ್ನಾಟಕದವರೇ ಆದ ರಾಜೀವ್ ತಾರಾನಾಥರು.

ರಾಜೀವ್ ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥರಿಂದ ಪಡೆದರು. ಕೇವಲ ಒಂಭತ್ತು ವರ್ಷದವರಿದ್ದಾಗ ಅವರು ಪ್ರಥಮ ಸಂಗೀತ ಕಚೇರಿಯನ್ನು ನಡೆಸಿದರು. ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು.

ರಾಜೀವ್ ತಾರಾನಾಥರು ಸಾಹಿತ್ಯದಲ್ಲಿ ಪಿ.ಎಚ್.ಡಿ ಪದವಿ ಪಡೆದವರಾದರೂ, ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕತನವನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕಲ್ಕತ್ತೆಗೆ ತೆರಳಿ ಅಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನರ ಶಿಷ್ಯರಾದರು. 2009ರ ವರ್ಷದಲ್ಲಿ ಅಲಿ ಅಕ್ಬರ್ ಖಾನರು ನಿಧನರಾಗುವವರೆಗೆ ರಾಜೀವ್ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಅಕ್ಬರ್ ಅಲಿ ಖಾನ್ ಅವರಲ್ಲದೆ ಪಂಡಿತ್ ರವಿಶಂಕರ್, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹಾ ರಾಜೀವ್ ತಾರಾನಾಥರು ತಮ್ಮದಾಗಿಸಿಕೊಂಡವರು.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾವಿಭಾಗದ ಮುಖ್ಯಸ್ಥರಾಗಿ ೧೯೯೫ರಿಂದ ೨೦೦೫ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ರಾಜೀವ ತಾರಾನಾಥರು ಇದೀಗ ಮೈಸೂರಿನ ನಿವಾಸಿಯಾಗಿದ್ದು ತಮ್ಮ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆಯುತ್ತಿದ್ದಾರೆ.

ಹೃದಯದ ತಂತಿಗಳನ್ನು ಮೀಟುವ ಸಂಗೀತ

[ಬದಲಾಯಿಸಿ]

ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಗಳಿಸಿರುವ ರಾಜೀವ್ ತಾರಾನಾಥರ ಕಚೇರಿಯೊಂದರ ಬಗ್ಗೆ ‘ಎಕ್ಸ್ಪ್ರೆಸ್’ ಪತ್ರಿಕೆ ಹೀಗೆ ಬರೆದಿದೆ: “ತಾರಾನಾಥರ ಸಂಗೀತವು ಹೃದಯದ ತಂತಿಗಳನ್ನು ಮೀಟುವಂತದ್ದಾಗಿದ್ದು, ಶ್ರೋತೃವರ್ಗ ಅವರ ಸಂಗೀತದ ಭಾವುಕತೆಯ ಆರ್ತತೆ ಮತ್ತು ಸಮರ್ಥತೆಗೆ ಮೂಕವಾಗಿ ತಲ್ಲೀನಗೊಂಡಿತ್ತು”. ‘ಎಕನಾಮಿಕ್ ಟೈಮ್ಸ್’ ಹೇಳುತ್ತದೆ, “ರಾಜೀವ್ ತಾರಾನಾಥರು ಅದೆಷ್ಟು ಮೋಹಕ ಚೆಲುವನ್ನು ತಮ್ಮ ‘ಸ್ವರ’ ಮತ್ತು ದನಿಗಳಲ್ಲಿ ಬಿತ್ತರಿಸುತ್ತಾರೆ! ಅವರ ಸಂಗೀತದ ಪ್ರತೀ ಸ್ತರವೂ ಮೋಹಕತೆಯ ಸುದೀರ್ಘ ಸುಮಧುರತೆಯ ಅನುಭಾವವನ್ನು ಉಳಿಸುತ್ತ ಮುನ್ನಡೆಯುವಂತದ್ದು.” ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಎಡ್ವರ್ಡ್ ರೋತ್ ಸ್ಟೀನ್ ಅಭಿಪ್ರಾಯಿಸುತ್ತಾರೆ “ರಾಜೀವ್ ತಾರಾನಾಥರ ಸಂಗೀತವು ‘spiritual and spirited’ ಸಂಯೋಗದ ಲಕ್ಷಣಗಳುಳ್ಳಂತಹ ಔನ್ನತ್ಯವನ್ನು ಸ್ಪುರಿಸುವಂತಹವು. ಅಂತರಾತ್ಮದ ಹುಡುಕಾಟವನ್ನು ಪ್ರಾತಿನಿಧಿಕವಾಗಿ ತಲುಪುವ ಪ್ರಾರ್ಥನಾ ರೂಪವಾಗಿ ಪ್ರಾರಂಭಗೊಳ್ಳುವ ಅವರ ಸಂಗೀತ ನಾದಭವ್ಯತೆಗೆ ತೆರೆದುಕೊಳ್ಳುವ ರೀತಿ ಆಸಾಮಾನ್ಯವಾದುದು”. ಹೀಗೆ ರಾಜೀವ್ ತಾರಾನಾಥರ ಸಂಗೀತ ವಿಶ್ವಸಮುದಾಯವನ್ನು ಸಂಗೀತದ ಆಧ್ಯಾತ್ಮದ ಎಳೆಯಿಂದ ನಾದವೈಭವದ ಅನಂತತೆಯವರೆಗೆ ವ್ಯಾಪಿಸಿಕೊಂಡಿದೆ.

ಆಳವಾದ ಜ್ಞಾನ

[ಬದಲಾಯಿಸಿ]

ರಾಜೀವ್ ತಾರಾನಾಥರು ತಾವು ಹೊರಹೊಮ್ಮಿಸುವ ರಾಗಗಳ ಕುರಿತಾಗಿ ಹೊಂದಿರುವ ಆಳವಾದ ಜ್ಞಾನ, ಸ್ವರ ಮಾಧುರ್ಯ, ಮತ್ತು ಸಂಗೀತ ಸಾಮರ್ಥ್ಯಕ್ಕೆ ಎಲ್ಲೆಡೆ ಗೌರವಿಸಲ್ಪಡುತ್ತಿರುವವರು. ತಾಂತ್ರಿಕ ಕೌಶಲ್ಯ, ಕಲ್ಪನಾ ಸಾಮರ್ಥ್ಯ, ಅನುಭೂತಿಯ ಸೌಂದರ್ಯ ಇವೆಲ್ಲಾ ಅವರ ಸೃಜನೆಗಳಲ್ಲಿ ಮೇಳೈಸಿವೆ.

ವಿಶ್ವದೆಲ್ಲೆಡೆ ಸಂಗೀತ

[ಬದಲಾಯಿಸಿ]

ಭಾರತ ಮತ್ತು ವಿದೇಶಗಳಲ್ಲೆಡೆಗಳಲ್ಲಿ ರಾಜೀವ್ ತಾರಾನಾಥರ ಸಂಗೀತ ಕಾರ್ಯಕ್ರಮಗಳು ಜರುಗುತ್ತಿವೆ. ಆಸ್ಟ್ರೇಲಿಯಾ, ಯೂರೋಪ್, ಯೆಮೆನ್, ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲೆಲ್ಲಾ ಅವರ ಸಂಗೀತ ಕಾರ್ಯಕ್ರಮಗಳು ನಡೆದು ಅಪಾರ ಅಭಿಮಾನೀ ಬಳಗ ಅವರನ್ನು ಹಿಂಬಾಲಿಸಿದೆ.

ಚಲನಚಿತ್ರಗಳಲ್ಲಿ ಸಂಗೀತ

[ಬದಲಾಯಿಸಿ]

ಹಲವೊಂದು ಪ್ರಖ್ಯಾತ ಚಲನಚಿತ್ರಗಳಿಗೂ ಸಂಗೀತ ನೀಡಿರುವ ರಾಜೀವ್ ತಾರಾನಾಥರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಚಿತ್ರಗಳೆಂದರೆ ಕನ್ನಡದ ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರ ಮಾಸ, ಪೇಪರ್ ಬೋಟ್, ಮಲಯಾಳಂನ ಕಾಂಚನ ಸೀತಾ ಮತ್ತು ಕಟವ್ ಮುಂತಾದವು.

ಸಂಗೀತ ಮುದ್ರಿಕೆಗಳು

[ಬದಲಾಯಿಸಿ]

ರಾಜೀವ್ ತಾರಾನಾಥರ ಪ್ರಮುಖ ಸಂಗೀತ ಧ್ವನಿ ಸುರುಳಿಗಳೆಂದರೆ:

  • ‘ಮನನ ಮೆಡಿಟೇಶನ್’: ಬಿಹಾಗ್ ಮತ್ತು ಭೈರವಿ ರಾಗಗಳು;
  • ‘ಹಾರ್ಮನಿ’ ಸಿಂಧು ಭೈರವಿ ರಾಗಮಾಲಿಕೆ’,
  • ‘ಕಾಫಿ ರಾಗ’ದ ಹಲವು ಮುಖಗಳು;
  • ರಸರಂಗ್;
  • ‘ರಿಫ್ಲೆಕ್ಷನ್ಸ್ ಅರೌಂಡ್ ನೂನ್’ ತೋಡಿ ಮತ್ತು ಕಾಫಿ ರಾಗಗಳು;
  • ಡೇ ಬ್ರೇಕ್ ಅಂಡ್ ಎ ಕ್ಯಾಂಡಲ್ ಎಂಡ್;
  • ಭಾರತೀಯ ಶಾಸ್ತ್ರೀಯ ಸಂಗೀತ; ರಾಗ ನಟಭೈರೋ, ರಾಗ ಕೌಶಿ ಭೈರವಿ, ಭೈರವಿ;
  • ಓವರ್ ದಿ ಮೂನ್ – ರಾಗ ಚಂದ್ರ ನಂದನ;
  • ರಾಗ ಅಹಿರ್ ಭೈರವ್, ರಾಗ ಚಾರುಕೇಶಿ;
  • ‘ದಿ ಮ್ಯಗ್ನಿಫಿಶನ್ಸ್ ಆಫ್ ಯಮನ್ ಕಲ್ಯಾಣ್’,
  • ಇನ್ ದಿ ಮಾಸ್ಟರ್ಸ್ ಟ್ರೆಡಿಶನ್:
  • ರಾಗ್ ಬಸಂತ್ ಮುಖಾರಿ, ರಾಗ್ ಕಿರ್ವಾಣಿ, ರಾಗ್ ಕೋಮಲ್ ದುರ್ಗಾ, ರಾಗ್ ಪುರಿಯಾ ಧನಶ್ರೀ ಮುಂತಾದವು.

ಗೌರವಗಳು

[ಬದಲಾಯಿಸಿ]

ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವ, ಟಿ.ಚೌಡಯ್ಯ ಪ್ರಶಸ್ತಿ, ಕರ್ನಾಟಕ ರಾಜ್ಯದ ಹಲವಾರು ಪ್ರಶಸ್ತಿ ಗೌರವಗಳು ಹೀಗೆ ಅನೇಕ ಗೌರವಗಳು ರಾಜೀವ್ ತಾರಾನಾಥರನ್ನು ಅರಸಿಬಂದಿವೆ. ೨೦೧೩ ರಲ್ಲಿ ಪ್ರತಿಷ್ಟಿತ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ವತಿಯಿಂದ ನೀಡಲಾಗುವ "ರಾಷ್ಟ್ರೀಯ ಸಮ್ಮಾನ" ಗೌರವ ಅವರಿಗೆ ಲಭಿಸಿದೆ.[]

೧೯೮೯ರಿಂದ ೧೯೯೨ರ ಅವಧಿಯಲ್ಲಿ ರಾಜೀವ್ ತಾರಾನಾಥರು ಫೋರ್ಡ್ ಪ್ರತಿಷ್ಠಾನದ ವಿದ್ವಾಂಸರಾಗಿ ಮೈಹಾರ್ – ಅಲ್ಲಾಉದ್ದಿನ್ ಘರಾಣಾದ ಸಂಗೀತ ಪದ್ಧತಿಗಳ ಕುರಿತಾಗಿ ಸಂಶೋಧನೆ ನಡೆಸಿ ಆ ಘರಾಣದ ಭೋಧನೆಗಳ ಕುರಿತಾದ ವಿದ್ವತ್ ಪೂರ್ಣ ಗ್ರಂಥವನ್ನು ಪ್ರಕಟಿಸಿದರು.

  • ಸಂಗೀತ ಮತ್ತು ನಾಟಕ ಅಕ್ಯಾಡೆಮಿ ಪ್ರಶಸ್ತಿ, ೧೯೯೯-೨೦೦೦
  • ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ ೧೯೯೮ (ಕರ್ನಾಟಕ ಸರಕಾರ, ಭಾರತ)
  • ಸಂಗೀತ ನೃತ್ಯ ಅಕ್ಯಾಡೆಮಿ ಪ್ರಶಸ್ತಿ, ೧೯೯೩
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೬
  • ಕೆಂಪೇಗೌಡ ಪ್ರಶಸ್ತಿ, ೨೦೦೬
  • ಗಾಯನ ಸಮಾಜದಿಂದ ಸಂಗೀತ ಕಲಾರತ್ನ
  • ಜ್ಯೋತಿ ಸುಬ್ರಮಣ್ಯ ಪ್ರಶಸ್ತಿ
  • ಭ್ರಮರಾಂಬಾ ಎನ್ ನಾಗರಾಜ್ ಬಂಗಾರದ ಪದಕ
  • ವಿ. ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ
  • ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ' ಪ್ರಶಸ್ತಿ
  • ಪದ್ಮಶ್ರೀ, ೨೦೧೯

ರಾಜೀವ್ ತಾರಾನಾಥರ ಜೀವನ ಮತ್ತು ಸಾಧನೆಗಳ ಕುರಿತಾದ ಪುಸ್ತಕ "ಸರೋದ್ ಮಾಂತ್ರಿಕ" ಕನ್ನಡದಲ್ಲಿ ಅಂಕಿತಾ ಪುಸ್ತಕದವರಿಂದ ಪ್ರಕಟಗೊಂಡಿದೆ. ಈ ಕೃತಿಯ ಲೇಖಕರು ಶ್ರೀಮತಿ ಸುಮಂಗಲಾ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://www.prajavani.net/article/%E0%B2%B8%E0%B2%82%E0%B2%97%E0%B3%80%E0%B2%A4%E0%B2%B5%E0%B3%86%E0%B2%82%E0%B2%A6%E0%B2%B0%E0%B3%86-%E0%B2%AC%E0%B2%B0%E0%B3%80-%E0%B2%B9%E0%B2%BE%E0%B2%A1%E0%B3%81%E0%B2%97%E0%B2%BE%E0%B2%B0%E0%B2%BF%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2-%E0%B2%AA%E0%B2%82%E0%B2%B0%E0%B2%BE%E0%B2%9C%E0%B3%80%E0%B2%B5%E0%B3%8D