ಸದಸ್ಯ:Revathikainthaje/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ ಸೇವಾಶ್ರಮ ಕನ್ಯಾನ

ದಕ್ಷಿಣ ಕನ್ನಡ ಜಿಲ್ಲೆಯ. ಬಂಟ್ವಾಳ ತಾಲೂಕಿನ ಒಂದು ಪುಟ್ಟ ಊರು ಕನ್ಯಾನ. ಈ ಊರಿನ ಹೃದಯ ಭಾಗದಲ್ಲಿ, ಅನಾಥರ - ಅಬಲೆಯರ - ವೃಧ್ಧರ - ನಿರ್ಗತಿಕರ ಕಾಳಜಿ ವಹಿಸುತ್ತಾ ಅಶನ, ವಸನ,ವಸತಿ ನೀಡುತ್ತಿರುವ ಸಂಸ್ಥೆಯೇ ಭಾರತ ಸೇವಾಶ್ರಮ ಕನ್ಯಾನ.

ಭಾರತ ಸೇವಾಶ್ರಮ - ಕನ್ಯಾನ

ಭಾರತ ಸೇವಾಶ್ರಮದ ಸ್ಥಾಪಕರು[ಬದಲಾಯಿಸಿ]

ಶ್ರೀ ಧೀರೇಂದ್ರನಾಥ ಭಟ್ಟಾಚಾರ್ಯರು

ಈಗಿನ ಬಾಂಗ್ಲಾ ದೇಶದ ಢಾಕಾದ ನಾರಾಯಣಗಂಜ್ ಪ್ರಾಂತ್ಯದವರಾದ ಶ್ರೀಮತಿ ಮತ್ತು ಶ್ರೀ ದೇವೇಂದ್ರನಾಥ ಭಟ್ಟಾಚಾರ್ಯರ ಪುತ್ರರಾದ ಶ್ರೀ ಧೀರೇಂದ್ರನಾಥ ಭಟ್ಟಾಚಾರ್ಯರು ಈ ಸಂಸ್ಥೆಯ ಸ್ಥಾಪಕರು. ೧೯೧೧ ರ ಜನವರಿ ೧೧ ರಂದು ಇವರು ಜನಿಸಿದರು. ಎಳವೆಯಲ್ಲಿಯೇ ಹೆತ್ತವರನ್ನು ಕಳಕೊಂಡರು. ಅಪಾರ ದೇಶಾಭಿಮಾನಿಯಾದ ಇವರು ತನ್ನ ಮನೆ ಪಾಠದ ಗುರುಗಳಾಗಿದ್ದ ಹಾಗೂ "ಅನಾರ್ಕಿಸ್ಟ್" ಪಕ್ಷದ ಕಾರ್ಯದರ್ಶಿಗಳಾಗಿದ್ದ ಗೋಪಾಲಕೃಷ್ಣ ಚಟರ್ಜಿಯವರಿಂದ ಬಹಳಷ್ಟು ಪ್ರಭಾವಿತರಾಗಿದ್ದು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಮೃದು ಮನಸ್ಸಿನವರಾದ ಇವರು ಜನರ ನೋವುಗಳಿಗೆ ಸದಾ ಸ್ಪಂದಿಸುತ್ತಿದ್ದರು. ಗಣಿ ವಿಜ್ಞಾನದ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿದ್ದರು. ಶಿರಡಿ ಸಾಯಿಬಾಬಾರವರ ಭಕ್ತರಾಗಿದ್ದರು.

೧೯೨೯ ರಲ್ಲಿ ಲೀಲಾವತಿ ಎಂಬುವವರೊಂದಿಗೆ ವಿವಾಹವಾಯಿತು. ಪುತ್ರ ಶಂಕರನಿಗೆ ೩ ವರ್ಷವಾಗುವಷ್ಟರಲ್ಲಿ ಅಸೌಖ್ಯದಿಂದಾಗಿ ಪತ್ನಿ ಮರಣಿಸಿದರು. ನಂತರ ತನ್ನ ಮಧ್ಯವಯಸ್ಸಿನಲ್ಲಿ ಆಂಧ್ರ ಪ್ರದೇಶದ ನಂದ್ಯಾಲದವರಾದ ಸರೋಜಿನಿ ಅಮ್ಮನವರನ್ನು ವಿವಾಹವಾದರು. ಇವರಿಗೆ ನಾಲ್ವರು ಪುತ್ರಿಯರು. ಭಾರತ- ಬಾಂಗ್ಲಾ ವಿಭಜನೆಯ ನಂತರ ತನ್ನ ಆಸ್ತಿ-ಪಾಸ್ತಿಗಳನ್ನು ಕಳಕೊಂಡು ಭಾರತಕ್ಕೆ ಬಂದರು. ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ ಎಂದು ಸುತ್ತಿದರು. ಅಶಿಸ್ತು ಅನ್ಯಾಯವನ್ನು ಸಹಿಸದ ಇವರು ಇದರ ಹೋರಾಟಕ್ಕಾಗಿಯೇ ಅನೇಕ ಕಡೆ ಇದ್ದ ಕೆಲಸವನ್ನು ಬಿಟ್ಟು ಬಂದುದೂ ಇದೆ. ಮುಂಬಯಿಯಲ್ಲಿದ್ದಾಗ ಪೊದ್ದಾರ್ ಕಂಪೆನಿಯಿಂದ ನಿಯುಕ್ತರಾಗಿ, ಕಬ್ಬಿಣದ ಅದಿರಿನ ಹುಡುಕಾಟದಲ್ಲಿ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಕಳಂಜಿಮಲೆ ಪ್ರದೇಶಕ್ಕೆ- ಕನ್ಯಾನಕ್ಕೆ ಬಂದರು. ಇದು ತನ್ನ ಹುಟ್ಟೂರನ್ನು ಹೋಲುವುದಾಗಿ ಮನಗಂಡರು. ಇಲ್ಲಿನ ಜನರ ಕಷ್ಟಗಳಿಗೆ ಮರುಗಿದರು. ಪುನಃ ಕೆಲಸಕ್ಕೆ ತಿರುಗಿ ಹೋದರೂ ಇಲ್ಲಿನ ಜನರ ನೋವನ್ನು ಮರೆಯಲಾಗಲಿಲ್ಲ. ಕೆಲಸದ ನಿಮಿತ್ತ ಔರಂಗಾಬಾದ್ ಗೆ ಹೋಗಿದ್ದಾಗ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾಧುವೊಬ್ಬರು ಇವರಿಗೆ ಪುನಃ ಆ ಪಶ್ಚಿಮ ಘಟ್ಟದ ಪ್ರದೇಶಕ್ಕೆ ಹೋಗಿ ದೀನರ ಸೇವೆ ಮಾಡುವಂತೆ ಹೇಳಿದರಂತೆ. ತನ್ನ ಮನದಲ್ಲಿದ್ದುದೂ ಅದೇ ಆಗಿತ್ತು. ತನ್ನ ಕೆಲಸಕ್ಕೆ ರಾಜೀನಾಮೆಯಿತ್ತು ಇಲ್ಲಿಗೆ ಬಂದರು. ತನ್ನ ಸಂಸಾರದೊಂದಿಗೆ ಒಂದು ಸಣ್ಣ ಗುಡಿಸಲಿನಲ್ಲಿ ಇಬ್ಬರು ಅನಾಥ ಮಕ್ಕಳನ್ನು ಸಾಕತೊಡಗಿದರು. ಸಮಾಜದಲ್ಲಿನ ದುರ್ಬಲರಿಗೆ, ಅಸಹಾಯಕರಿಗೆ ನೆರವಾಗುವ ಉನ್ನತ ಧ್ಯೇಯವನ್ನಿಟ್ಟುಕೊಂಡು ಸೇವೆಗೈಯಲು ನಿರ್ಧರಿಸಿ ನಿರಾಶ್ರಿತ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನಾದರೂ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ ೧೯೬೪ ರಲ್ಲಿ ಕೇವಲ ೧೦ ಸೆಂಟ್ಸ್ ಸ್ಥಳದಲ್ಲಿ ಮುಳಿಹುಲ್ಲಿನ ಛಾವಣಿಯ ಗುಡಿಸಲನ್ನು ಮಾಡಿ "ಭಾರತ ಸೇವಾಶ್ರಮ" ಎಂದು ಹೆಸರಿಸಿ, ೫ ಮಕ್ಕಳಿಂದ ಈ ಆಶ್ರಮವನ್ನು ಪ್ರಾರಂಭಿಸಿದರು.

ಆಶ್ರಮದ ಬೆಳವಣಿಗೆ[ಬದಲಾಯಿಸಿ]

ಜನರಿಂದ ಬೇಡಿತಂದ ಹಣ - ವಸ್ತುಗಳಿಂದ ಈ ಮಕ್ಕಳನ್ನು ಸಾಕತೊಡಗಿದರು. ಕಷ್ಟಗಳಲ್ಲೇ ಶೈಶವಾವಸ್ಠೆಯನ್ನು ಕಳೆದ ಈ ಆಶ್ರಮವು ೧೯೬೫ ರಲ್ಲಿ ಎಸ್.ಸುಬ್ಬಯ್ಯ ನಾಯ್ಕ, ಎ.ಶಂಕರ ಭಟ್, ಡಿ.ಎನ್.ಭಟ್ಟಾಚಾರ್ಯರು, ಡಿ.ಶಿವರಾವ್, ಡಾ.ಕೆ.ಎಸ್.ಸದಾಶಿವ ಭಟ್, ಕೆ ಗುರುವಪ್ಪ, ಡಾ. ಬಿ.ಕೆ.ಎಸ್.ಭಟ್ ಸದಸ್ಯರಾಗಿ, ಬೆಂಗಳೂರು ರಿಜಿಸ್ಟ್ರಾರ್ ಆಫ್ ಸೊಸೈಟಿ ಕಛೇರಿಯಲ್ಲಿ ನಂ. ೯ - ೬೫ - ೬೬ ರಂತೆ ನೋಂದಾವಣೆಯಾಯಿತು. ಆಗ ಆಶ್ರಮವಾಸಿಗಳ ಸಂಖ್ಯೆ ೨೩. ೧೯೬೫ - ೭೦ ರ ಅವಧಿಯಲ್ಲಿ ಈ ಸಂಖ್ಯೆಯಲ್ಲಿ ಏರಿಕೆಯಾಯಿತು. ಸರಕಾರದ ಶಿಶು ಅಭಿವೃಧ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಕಾರ ಹಾಗೂ (ಸರಕಾರದ ಮಂಜೂರಾತಿಯೊಂದಿಗೆ) ಊರ ಜನರ ಸಹಕಾರದೊಂದಿಗೆ ಸಂಸ್ಥೆಯನ್ನು ಬೆಳೆಸುತ್ತಾ ಹೋದರು. ದಿನ ನಿತ್ಯದ ಖರ್ಚುಗಳಿಗೂ ಕಷ್ಟವಾಗುತ್ತಿತ್ತು. ಶ್ರಮವಹಿಸಬೇಕಾಗುತ್ತಿತ್ತು.

ಮಕ್ಕಳು ಸಂಪಾದಿಸಿ ವಿದ್ಯಾಭ್ಯಾಸ ಪಡೆಯಬೇಕೆಂಬುದು ಇವರ ಇಚ್ಛೆಯಾಗಿತ್ತು. ಅಂತೆಯೇ

  • ೧೯೬೯ ರಲ್ಲಿ ಆಶ್ರಮವಾಸಿಗಳಿಂದ ಅಗರಬತ್ತಿ ತಯಾರಿ ಆರಂಭಿಸಿ, ಮನೆ ಮನೆಗೆ ಮಾರಾಟ ಹಾಗೂ ಮಂಗಳೂರಿಗೆ ಸಾಗಿಸಿ ಮಾರಾಟ ಮಾಡಲಾರಂಭಿಸಲಾಯಿತು.
  • ೧೯೭೩ ರಲ್ಲಿ ಸುಮಾರು ೨೩ ಎಕರೆಗಳಷ್ಟು ಸ್ಥಳದ ಖರೀದಿ ಮಾಡಲಾಯಿತು. ಇದಕ್ಕೂ ಊರವರ ಸಹಕಾರ ದೊರೆಯಿತು. ಆ ನಿವೇಶನಕ್ಕೆ "ಸೇವಾಧಾಮ"ವೆಂದು ಹೆಸರಿಸಲಾಯಿತು. (ಇದು ಭಾರತ ಸೇವಾಶ್ರಮದಿಂದ ಮೂರು ಕಿಲೋಮೀಟರುಗಳಷ್ಟು ದೂರದಲ್ಲಿದೆ. ) ಇಲ್ಲಿ ಬಾವಿ ನಿರ್ಮಿಸಿ, ಕೃಷಿಯನ್ನು ಆರಂಭಿಸಲಾಯಿತು. ೫೦ ತೆಂಗಿನಸಸಿಗಳನ್ನು ನೆಟ್ಟು ನಿವಾಸಿಗಳಿಂದ ನೀರುಣಿಸಲಾಗುತ್ತಿತ್ತು. ಅಲ್ಪ ಸ್ವಲ್ಪ ತರಕಾರಿಗಳನ್ನು ಬೆಳೆಸಲಾಗುತ್ತಿತ್ತು.
  • ೧೯೭೦ ರಲ್ಲಿ ಹೊಲಿಗೆ ತರಬೇತಿಯನ್ನು ಆರಂಭಿಸಲಾಯಿತು. ಆಶ್ರಮವಾಸಿಗಳ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿತ್ತು.
  • ೧೯೭೭ ರಲ್ಲಿ ಸರಕಾರದಿಂದ ಸಿಗುವ ಅನುದಾನ ೩೩ ಮಕ್ಕಳಿಗೆ ಸಿಗುವಂತಾಯಿತು. ಸರಿಸುಮಾರು ಇದೇ ವೇಳೆಯಲ್ಲಿ ದಾನಿಯೊಬ್ಬರ ನೆರವಿನಿಂದ ರೂ. ೨೫೦೦೦ ವೆಚ್ಚದ ಹೆಂಚಿನ ಕಟ್ಟಡ ನಿರ್ಮಿಸಲಾಯಿತು.
  • ೧೯೮೪ ರಲ್ಲಿ ನವೋದಯ ಸೇವಾ ಟ್ರಸ್ಟ್ ಆರಂಭಿಸಿ, ಮುದ್ರಣಾಲಯ,ಹಪ್ಪಳ ತಯಾರಿಯನ್ನು ಪ್ರಾರಂಭಿಸಲಾಯಿತು. ಈ ವೇಳೆಗೆ ದಾನಿಗಳಿಂದ ೨. ೮೦ ಎಕರೆ ಸ್ಥಳವು ಉಚಿತವಾಗಿ ದೊರೆಯಿತು. ಗೇರು ಕೃಷಿಯನ್ನೂ ಆರಂಭಿಸಲಾಯಿತು. ಇವೆಲ್ಲವುಗಳು ವಿರಾಮದ ವೇಳೆ ಕಳೆಯಲು ಸದುಪಯೋಗವಾಗುವುದರೊಂದಿಗೆ ಆರ್ಥಿಕವಾಗಿಯೂ ಸಹಕಾರಿಯಾಯಿತು. ಭಟ್ಟಾಚಾರ್ಯರು ಸತತ ಪ್ರಯತ್ನದಿಂದ ದಾನಿಗಳನ್ನು ಮುಖತಃ ಭೇಟಿಯಾಗಿ ನೆರವು ಪಡೆಯುತ್ತಿದ್ದರು.ಅನೇಕರಿಂದ ಉಚಿತ ಸಾಬೂನು, ಬಸ್ಸುಗಳಲ್ಲಿ ಉಚಿತ ಪ್ರಯಾಣದ ಪಾಸು,ಟಿ.ವಿ.- ಪುಸ್ತಕ-ಪತ್ರಿಕೆಗಳ ಕೊಡುಗೆ, ದರ್ಮಾರ್ಥ ನಾಟಕ ಪ್ರದರ್ಶನ ಹೀಗೆ ಸಿಗುತ್ತಿತ್ತು.
  • ೧೯೮೬ ರಲ್ಲಿ ದಾನಿಯೊಬ್ಬರು ೧೨೦ ಅಡಿ ಉದ್ದದ ಹಾಗೂ ೮೦ ಅಡಿ ಅಗಲದ ಎರಡು ಛಾವಣಿಯ ಕಟ್ಟಡ ನಿರ್ಮಿಸಿ ಕೊಟ್ಟರು.
ಸೇವಾಧಾಮ

ಹಾಲಿನ ವ್ಯವಸ್ಥೆಗಾಗಿ ಆರಂಭದ ಕಾಲದಲ್ಲಿ ದಾನಿಯೊಬ್ಬರು ಹಸುವೊಂದನ್ನು ನೀಡಿದ್ದರು. ಆ ಬಳಿಕ ಹಟ್ಟಿಯಲ್ಲಿ ೫ ಹಸುಗಳಾಗಿದ್ದುವು. ಒಂದು ದಿನ ದುಷ್ಕರ್ಮಿಯೊಬ್ಬರು ಅಡಿಕೆ ಸೋಗೆಗಳಿಂದ ನಿರ್ಮಿತವಾಗಿದ್ದ ಈ ಹಟ್ಟಿಗೆ ಬೆಂಕಿ ಹಚ಼್ಚಿದ್ದರು. ೪ ಹಸುಗಳು ಸಜೀವವಾಗಿ ಸುಟ್ಟು ಹೋಗಿದ್ದವು. ಈ ಘಟನೆಯಿಂದ ಭಟ್ಟಾಚಾರ್ಯರು ಸಂಪೂರ್ಣ ವಿಚಲಿತರಾಗಿ, ತೀರಾ ನೊಂದು, ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಲ್ಲಿಗೆ ಹೋಗಿ, ತನ್ನ ಮನದ ನೋವನ್ನು ವಿವರಿಸಿ, ಎಲ್ಲಾ ಸೊತ್ತನ್ನು ಮಠಕ್ಕೆ ಬಿಡುವುದಾಗಿಯೂ ಬೇರೆ ಊರಿಗೆ ಹೋಗುವುದಾಗಿಯೂ ತಿಳಿಸಿದರಂತೆ. ಆಗ ಸ್ವಾಮೀಜಿಯವರು " ಭಟ್ಟಾಚಾರ್ಯರು ಧೈರ್ಯಶಾಲಿಗಳು, ಬರುವುದನ್ನೆಲ್ಲ ಎದುರಿಸಿ ಹೋರಾಡಬೇಕು." ಎಂದು ಆಶೀರ್ವದಿಸಿ, ಮತ್ತೆ ಕರ್ತವ್ಯಕ್ಕೆ ತೆರಳುವಂತೆ ಕಳುಹಿಸಿಕೊಟ್ಟರು. ಅಂದಿನಿಂದ ಮಿತಾಹಾರ, ದೃಢಮನಸ್ಸು, ಗುರುವಾರ ಮೌನವ್ರತ ಮೊದಲಾದ ನಿಯಮಗಳನ್ನು ಪಾಲಿಸುತ್ತಿದ್ದರು. ಮನಕಲಕುವ ಇಂತಹ ಕೆಲವೊಂದು ಘಟನೆಗಳಾದಾಗ ಇವರ ಪತ್ನಿ ಸರೋಜಿನಿ ಅಮ್ಮನವರು ಧೈರ್ಯತುಂಬಿ ಇಲ್ಲೇ ಇದ್ದು ಸಾಧಿಸಿ ತೋರುವ ಛಲವನ್ನು ತುಂಬುತ್ತಿದ್ದರು.

ಉದಾರ ಮನೋಭಾವದವರಾದ ಭಟ್ಟಾಚಾರ್ಯರು ಆರಂಭ ಕಾಲದಲ್ಲಿ ಹಾಲಿನ ಹುಡಿಯಿಂದ ಹಾಲು ತಯಾರಿಸಿ ಉಚಿತವಾಗಿ ವಿತರಿಸುತ್ತಿದ್ದರು. ತೆಂಗಿನ ಸಸಿಗಳನ್ನು ವಿತರಿಸುತ್ತಿದ್ದರು. ಹಳ್ಳಿವಾಸಿಗಳು ಕಷ್ಟ ಎದುರಾದಾಗ ಇವರಿಂದ ಉಪಯುಕ್ತ ಮಾಹಿತಿ ಪಡೆಯುತ್ತಿದ್ದರು. ಆಸುಪಾಸಿನ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ, ಸಿಹಿತಿಂಡಿ ವಿತರಿಸುತ್ತಿದ್ದರು. ಸರ್ವ ಧರ್ಮೀಯರನ್ನೂ ಸಮಭಾವದಿಂದ ಕಾಣುತ್ತಿದ್ದರು. ಶಿರಡಿ ಸಾಯಿಬಾಬಾ ಪ್ರತಿಮೆಯನ್ನು ಆವರಣದಲ್ಲಿ ಸ್ಥಾಪಿಸಿ ನಿತ್ಯವೂ ಪೂಜಿಸುತ್ತಿದ್ದರು. ಕನ್ಯಾನದಲ್ಲಿ ಮೊತ್ತ ಮೊದಲ ಬಾರಿಗೆ ನಗರ ಭಜನೆಯನ್ನು ಪ್ರಾರಂಭಿಸಿದರು. ಶ್ರೀ ಗಣೇಶೋತ್ಸವ, ಶ್ರೀ ರಕ್ಷಾಕಾಳೀ ಮಹೋತ್ಸವ ಹಾಗೂ ಇನ್ನಿತರ ಉತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದರು. ತನ್ನ ಎರಡನೆಯ ಮಗಳು ಸರಿತಾಳನ್ನು, ಸುಮಾರು ೮ ರ ಪ್ರಾಯದಿಂದಲೇ ಆಶ್ರಮವಾಸಿಯಾಗಿದ್ದ ಈಶ್ವರ ಭಟ್ಟರೊಂದಿಗೆ ವಿವಾಹ ಮಾಡಿದ್ದರು. ತನ್ನ ವೃಧ್ಧಾಪ್ಯದಲ್ಲಿ ಆಶ್ರಮದ ವ್ಯವಸ್ಥೆಗಳನ್ನು ಪತ್ನಿ, ಈ ಮಗಳು-ಅಳಿಯಂದಿರಿಗೆ ವಹಿಸಿ, ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ೨೦೦೧ ರ ಜನವರಿ ೧ ರಂದು ಇಹಲೋಕವನ್ನು ತ್ಯಜಿಸಿದರು.

ಆಶ್ರಮ - ಇಂದು[ಬದಲಾಯಿಸಿ]

ಭಾರತ ಸೇವಾಶ್ರಮದ ಕಾರ್ಯದರ್ಶಿ - ಜತೆ ಕಾರ್ಯದರ್ಶಿಗಳಾಗಿ ಸಮರ್ಥವಾಗಿ ಮುನ್ನಡೆಸುತ್ತಿರುವ ಈಶ್ವರ ಭಟ್ಟ - ಸರಿತಾ ದಂಪತಿಯರು ಆಶ್ರಮದ ಅಭಿವೃಧ್ಢಿಗಾಗಿ ಪೂರ್ಣಾವಧಿಯಾಗಿ ದುಡಿಯುತ್ತಿದ್ದಾರೆ. ತಮ್ಮ ಮಕ್ಕಳೊಂದಿಗೆ ಆಶ್ರಮವಾಸಿಗಳೊಡನೆ ಸಹಜೀವನ ನಡೆಸುತ್ತಿದ್ದಾರೆ. ಸರೋಜಿನಿ ಅಮ್ಮನವರು ಆಶ್ರಮದೊಳಗಿನ ಎಲ್ಲಾ ಕೆಲಸಗಳಲ್ಲಿ ಸಹಕಾರವೀಯುತ್ತಿದ್ದಾರೆ. ಶಿಸ್ತು - ಕ್ರಮಗಳನ್ನು ಕಲಿಸಿ, ಇಂದಿಗೂ ಎಲ್ಲಾ ಮಕ್ಕಳಿಗೆ ತಾಯಿಯಾಗಿದ್ದಾರೆ.[೧]

ಆಶ್ರಮದ ನಿವಾಸಿಗಳು[ಬದಲಾಯಿಸಿ]

ಈಗ ಆಶ್ರಮದಲ್ಲಿ ೨೪ ಹುಡುಗರು, ೨೨ ಹುಡುಗಿಯರು, ೧೬೨ ಮಂದಿ ವೃಧ್ಢ- ವೃಧ್ಢೆಯರು, ೪೦ ಮಂದಿ ಅಬಲೆಯರು, ೪ ಮಂದಿ ಅಂಗವಿಕಲರು ಹೀಗೆ ೨೫೨ ಮಂದಿ ಆಶ್ರಯ ಪಡೆದಿದ್ದಾರೆ. ಮಕ್ಕಳು ಸಮೀಪದ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದುವರೆವಿಗೆ ಸುಮಾರು ೧೦೦ ಕ್ಕೂ ಮಿಕ್ಕಿ ಮಕ್ಕಳು ಆಶ್ರಮದ ಮೂಲಕ ವಿದ್ಯಾಭ್ಯಾಸವನ್ನು ಪಡೆದು ಸರಕಾರಿ ಉದ್ಯೋಗ, ಬ್ಯಾಂಕು ಉದ್ಯೋಗ, ಸ್ವಂತ ಉದ್ಯಮ, ಸೈನ್ಯದಲ್ಲಿ ಸೇವೆ ಹೀಗೆ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ೨೦ ಮಂದಿ ಹುಡುಗಿಯರನ್ನು ವಿವಾಹ ಮಾಡಿಕೊಡಲಾಗಿದೆ. ಹೀಗೆ ಮದುವೆಯಾದ ಹುಡುಗಿಯರು ಆಗಾಗ ತಮ್ಮ ತೌರಾದ ಆಶ್ರಮಕ್ಕೆ ಬರುತ್ತಿರುತ್ತಾರೆ. ಅವರ ಮೊದಲ ಬಾಣಂತನವನ್ನೂ ಆಶ್ರಮದಲ್ಲಿ ಮಾಡಲಾಗುತ್ತದೆ. ಉನ್ನತ ಮಟ್ಟದ ಶಿಸ್ತನ್ನು ಆಶ್ರಮದಲ್ಲಿ ಕಾಪಾಡಿಕೊಂಡು ಬರಲಾಗಿದೆ. ಆರೋಗ್ಯಕ್ಕೆ, ಸ್ವಚ್ಛತೆಗೆ, ಉತ್ತಮ ಸಂಸ್ಕಾರಕ್ಕೆ ಪ್ರಾಧಾನ್ಯತೆಯನ್ನು ನೀಡಿ ನಿವಾಸಿಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸಿಕೊಡಲಾಗಿದೆ.

ವಿದ್ಯಾಭ್ಯಾಸದ ಜೊತೆಗೆ ಕೃಷಿ, ಪಶು ಸಂಗೋಪನೆ,ಮುದ್ರಣ, ಹೊಲಿಗೆ, ಹಪ್ಪಳ ತಯಾರಿ, ಮುಂತದವುಗಳನ್ನು ಕಲಿಸಿ, ಸ್ವಾವಲಂಬಿ ಜೀವನವನ್ನು ನಡೆಸಲು ಅನುವಾಗುವಂತೆ ಮಾಡಲಾಗಿದೆ. ಸುಸಜ್ಜಿತವಾದ ಪಶು ಸಂಗೋಪನಾ ವ್ಯವಸ್ಥೆಯಿದೆ. ಪ್ರಕೃತ ೭೨ ಜಾನುವಾರುಗಳಿವೆ. ೨೬ ಹಸುಗಳು ಹಾಲನ್ನು ನೀಡುತ್ತಿವೆ. ನಿವಾಸಿಗಳಿಗಾಗಿ ಈ ಹಾಲನ್ನು ಉಪಯೋಗಿಸಲಾಗುತ್ತಿದೆ. ಗೋಬರ್ ಗ್ಯಾಸ್ ನ್ನು ನಿರ್ಮಿಸಿ ಅಡುಗೆಗೆ ಉಪಯೋಗಿಸಲಾಗುತ್ತಿದೆ.

ಗೋಶಾಲೆ

ಸೇವಾಧಾಮದ ಕೃಷಿಭೂಮಿಯಲ್ಲಿ ತೆಂಗಿನ ಗಿಡ, ಕಾಳುಮೆಣಸು,ಗೋಡಂಬಿ,ರಬ್ಬರು, ತರಕಾರಿ- ಹಣ್ಣುಗಳನ್ನು ಬೆಳೆಸಲಾಗುತ್ತಿದೆ. ಇವುಗಳಿಂದ ಬರುವ ಆದಾಯವನ್ನು ಆಶ್ರಮದ ಸೇವಾಕಾರ್ಯಗಳಿಗೆ ಉಪಯೋಗಿಸಲಾಗುತ್ತಿದೆ. ಆಶ್ರಮಕ್ಕೆ ತಿಂಗಳೊಂದರ ರೂ. ೨. ೫೦ ಲಕ್ಷಗಳು ಖರ್ಚಾಗುತ್ತಿದ್ದು, ರೂ. ೩೫೦೦೦ ವು ಆಶ್ರಮದ ಆದಾಯಗಳಿಂದ, ರೂ. ೧೮೦೦೦ ವು ಮಹಿಳೆಯರು ಮತ್ತು ಮಕ್ಕಳ ಅಭಿವೃಧ್ಢಿ ಇಲಾಖೆಯಿಂದ ಅನುದಾನವಾಗಿ,[೨] ರೂ. ೨೫೦೦೦ ವು ಅನುಕೂಲಸ್ಥ ಆಶ್ರಮ ನಿವಾಸಿ ವೃಧ್ಢರು ಸ್ವ-ಇಚ್ಛೆಯಿಂದ ನೀಡುವ ಪೋಷಣಾ ವೆಚ್ಚದ ರೂಪದಲ್ಲಿಯೂ ಸಿಗುತ್ತಿದೆ. ಹೀಗೆ ಸುಮಾರು ರೂ. ೭೮೦೦೦ ದಷ್ಟು ಆದಾಯವಿದ್ದು, ಉಳಿದ ರೂ. ೧೭೨೦೦೦ ವನ್ನು ಪ್ರತಿ ತಿಂಗಳು ಸಹೃದಯಿ ಸಮಾಜ ಬಂಧುಗಳ ದೇಣಿಗೆಯಿಂದ ಸಂಗ್ರಹಿಸಲಾಗುತ್ತಿದೆ.

ಊಟದ ಕೊಠಡಿ, ಅಡುಗೆ ಕೋಣೆ, ದಾಸ್ತಾನು ಕೊಠಡಿ, ಸ್ಟೀಮ್ ಕುಕ್ಕಿಂಗ್ ಸೌಲಭ್ಯ, ಸೌರ ಫಲಕದ ವಿದ್ಯುಚ್ಛಕ್ತಿ ಹಾಗೂ ಬಿಸಿ ನೀರಿನ ವ್ಯವಸ್ಥೆ, ಪೀಠೋಪಕರಣ, ವಿದ್ಯುಚ್ಛಕ್ತಿ ವ್ಯವಸ್ಥೆ ಮುಂತಾದವುಗಳಲ್ಲಿ ಸಮಾಜದ ಕೊಡುಗೆ ಅಪಾರ. ದಾನಿಗಳು ಅವರವರ ವಿಶೇಷ ಶುಭದಿನಗಳಲ್ಲಿ ( ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಗೃಹ ಪ್ರವೇಶ ಇತ್ಯಾದಿ ) ನಿವಾಸಿಗಳಿಗೆ ವಿಷೇಷ ಭೋಜನ, ಸಿಹಿತಿಂಡಿಗಳ ವ್ಯವಸ್ಥೆಯನ್ನು ಮಾಡುತ್ತಿರುತ್ತಾರೆ. ಇನ್ನು ಕೆಲವೊಬ್ಬರು ಒಬ್ಬ ವಿದ್ಯಾರ್ಥಿಯ ಒಂದು ವರ್ಷದ ಸಂಪೂರ್ಣ ವೆಚ್ಚವನ್ನು ನೀಡುತ್ತಾರೆ. ( ಆಶ್ರಮದ ವಾರ್ಷಿಕ ಲೆಕ್ಕಪತ್ರ ಪುಸ್ತಕದಲ್ಲಿ ಇವುಗಳನ್ನು ವಿವರವಾಗಿ ನೀಡಲಾಗುತ್ತಿದೆ.)

ಆಶ್ರಮವು ಟಿ.ವಿ., ಗ್ರಂಥಾಲಯಯನ್ನು ಹೊಂದಿದೆ. ಚೆಸ್, ಕೇರಂ, ಕ್ರಿಕೆಟ್, ವಾಲಿಬಾಲ್ ಮುಂತಾದ ವ್ಯವಸ್ಥೆಯಿದೆ. ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಹಬ್ಬಗಳ ಜೊತೆಗೆ ಸ್ಥಾಪಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.[೩] ಆಶ್ರಮದ ದಿನಚರಿ ಬೆಳಗ್ಗೆ ಐದರಿಂದ ಆರಂಭವಾಗುತ್ತದೆ. ಬೆಳಗ್ಗೆ ಹಾಗೂ ಸಾಯಂಕಾಲ ಪ್ರಾರ್ಥನೆಯನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಆಶ್ರಮದ ಪರಿಸರವನ್ನು ಗುಡಿಸಿ ಸ್ವಚ್ಛಗೊಳಿಸುತ್ತಾರೆ. ಮಹಿಳೆಯರು ತಮ್ಮ ತಮ್ಮ ವೈಯಕ್ತಿಕ ಕೆಲಸಗಳಲ್ಲದೆ ಅಡುಗೆ ಕೆಲಸಗಳಲ್ಲಿ ನೆರವಾಗುತ್ತಾರೆ. ಅಶಕ್ತರ- ವೃಧ್ಢರ ಎಲ್ಲಾ ಕೆಲಸಗಳನ್ನು ನಿವಾಸಿಗಳೇ ನಿಸ್ಪೃಹ ಸೇವಾ ಮನೋಭಾವದಿಂದ ಮಾಡುತ್ತಾರೆ.

ನಿವಾಸಿಗಳ ಆರೋಗ್ಯದ ಬಗ್ಗೆ ಉತ್ತಮವಾದ ಕಾಳಜಿಯನ್ನು ವಹಿಸಲಾಗುತ್ತದೆ. ಮಂಗಳೂರಿನ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ (ದೇರಳಕಟ್ಟೆ), ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಪುತ್ತೂರಿನ ಗಿರಿಜಾ ಕ್ಲಿನಿಕ್, ಸಿಟಿ ಆಸ್ಪತ್ರೆ, ಆದರ್ಶ ಆಸ್ಪತ್ರೆ ಗಳಲ್ಲಿ ಸೂಕ್ತ ವೈದ್ಯಕೀಯ ನೆರವನ್ನು ವೈದ್ಯರು ನೀಡುತ್ತಿದ್ದಾರೆ. ಇನ್ನೂ ಅನೇಕ ವೈದ್ಯರು ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ಶುಶ್ರೂಷೆಗಳನ್ನು ಆಶ್ರಮವಾಸಿಗಳಿಗೆ ನೀಡಿ ಸಹಕರಿಸುತ್ತಿದ್ದಾರೆ. ಡಾ. ಕೆ.ಸುಬ್ರಹ್ಮಣ್ಯ ಭಟ್, ಡಾ.ಆರ್.ಎನ್.ಶಾಸ್ತ್ರಿಗಳು ನಿವಾಸಿಗಳ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡುತ್ತಿದ್ದಾರೆ. ದಂತ ಚಿಕಿತ್ಸಕರಾದ ಡಾ.ರವಿ ಶಾಸ್ತ್ರಿಯವರು ತಮ್ಮ ಕ್ಲಿನಿಕ್ ನ್ನು ಆಶ್ರಮದಲ್ಲಿ ತೆರೆದು ನಿವಾಸಿಗಳಿಗೆ ತಮ್ಮ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ದಂತ ಚಿಕಿತ್ಸಕರಾದ ಪುತ್ತೂರಿನ ಡಾ.ಶ್ರೀ ಪ್ರಕಾಶ್ರವರೂ ಉಚಿತವಾಗಿ ಸೇವೆ ನೀಡುತ್ತಿದ್ದಾರೆ.

ಶ್ರೀ ಎಸ್.ಎಸ್.ಕಾಮತ್,ಮೆ|ಕಾಮತ್ ಆಂಡ್ ರಾವ್, ಮಂಗಳೂರು, ಇವರು ಆಶ್ರಮದ ಲೆಕ್ಕ ಪರಿಶೋಧನೆಯನ್ನು ಉಚಿತವಾಗಿ ಮಾಡುತ್ತಿದ್ದಾರೆ. ಶ್ರೀ ಬಿ.ಗಣೇಶಾನಂದ ಸೋಮಯಾಜಿ, ವಕೀಲರು ಬಿ.ಸಿ.ರೋಡು, ಇವರು ಕಾನೂನು ಸಲಹೆಯನ್ನು ನೀಡುತ್ತಾರೆ.

ದ್ವಾರಕಾಮಾಯಿ

ಭಾರತ ಸೇವಾಶ್ರಮದ ಎದುರುಗಡೆಯಲ್ಲಿ ಮೂರು ಅಂತಸ್ತುಗಳ ಕಟ್ಟಡವೊಂದನ್ನು ಇತ್ತೀಚೆಗೆ ನಿರ್ಮಿಸಲಾಗಿದೆ."ದ್ವಾರಕಾಮಾಯಿ" ಎಂಬ ಹೆಸರಿನ ಈ ಕಟ್ಟಡದಲ್ಲಿ ಆರ್ಥಿಕವಾಗಿ ಶಕ್ತರಾದ ಆದರೆ ವಯೋವೃಧ್ಢರೋ ಅಥವಾ ಇನ್ನಿತರ ಕಾರಣಗಳಿಂದ ಪರಾವಲಂಬಿಯಾಗಿರಬೇಕಾಗಿರುವಂತಹವರು ಹಣವನ್ನು ನೀಡಿ ಜೀವನವನ್ನು ನಡೆಸುತ್ತಿದ್ದಾರೆ.


ಪ್ರಸ್ತುತ ಆಶ್ರಮದ ವ್ಯವಸ್ಥಾಪಕ ಮಂಡಳಿಯಲ್ಲಿ, ಶ್ರೀ ಹರಿಕೃಷ್ಣ ಪುನರೂರು ಗೌರವಾಧ್ಯಕ್ಷರಾಗಿ, ಡಿ.ಅನಂತ ಪೈ ಅಧ್ಯಕ್ಷರಾಗಿ, ಡಾ.ಆರ್.ಎನ್.ಶಾಸ್ತ್ರಿಗಳು ಉಪಾಧ್ಯಕ್ಷರಾಗಿ, ಡಾ.ಕೆ.ಸುಬ್ರಹ್ಮಣ್ಯ ಭಟ್ ಖಜಾಂಚಿಯಾಗಿ, ಈಶ್ವರಭಟ್ಟ -ಸರಿತಾ ದಂಪತಿಯರು ಕಾರ್ಯದರ್ಶಿ-ಜತೆ ಕಾರ್ಯದರ್ಶಿಗಳಾಗಿ, ಶಂಕರ ಭಟ್ಟಾಚಾರ್ಯರು, ಯು.ಮಹಾಲಿಂಗ ಭಟ್ ಉಗ್ಗಪ್ಪಕೋಡಿ, ಬಟುಕ್ ಭಾಯ್ ಪಟೇಲ್, ಮುರಳೀಧರ ರಮಣಿ ಇವರು ಸದಸ್ಯರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೀಗೆ ಇನ್ನೂ ಇಲ್ಲಿ ಹೆಸರಿಸದ ಹತ್ತು - ಹಲವರ ಸಹಕಾರದಿಂದ ಕಳೆದ ೫೨ ವರುಷಗಳಿಂದ ಆಶ್ರಯ, ಊಟೋಪಚಾರ, ವಿದ್ಯಾಭ್ಯಾಸ, ವೈದ್ಯಕೀಯ ನೆರವು ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಾ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದೆ ಈ ಸಂಸ್ಥೆ, ಭಾರತ ಸೇವಾಶ್ರಮ- ಕನ್ಯಾನ

ಉಲ್ಲೇಖಗಳು[ಬದಲಾಯಿಸಿ]

  1. http://archive.deccanherald.com/DeccanHerald.com/Content/Sep302008/spectrum2008092992716.asp
  2. http://dwcdkar.gov.in/index.php?option=com_students&view=list&layout=resultpage&id=Mangalore&lang=en
  3. http://www.udayavani.com/kannada/news/%E0%B2%AC%E0%B2%82%E0%B2%9F%E0%B3%8D%E0%B2%B5%E0%B2%BE%E0%B2%B3/21024/%E0%B2%95%E0%B2%A8%E0%B3%8D%E0%B2%AF%E0%B2%BE%E0%B2%A8-%E0%B2%AD%E0%B2%BE%E0%B2%B0%E0%B2%A4-%E0%B2%B8%E0%B3%87%E0%B2%B5%E0%B2%BE%E0%B2%B6%E0%B3%8D%E0%B2%B0%E0%B2%AE-%E0%B2%B8%E0%B3%8D%E0%B2%A5%E0%B2%BE%E0%B2%AA%E0%B2%95%E0%B2%B0-%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

http://www.suddi9.com/?p=64919