ವಿಷಯಕ್ಕೆ ಹೋಗು

ಅಂಜೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ficus carica - Common fig
Drawing of the common fig foliage and fruit
Conservation status
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಪಂಗಡ:
ಕುಲ:
Subgenus:
Ficus
ಪ್ರಜಾತಿ:
F. carica
Binomial name
Ficus carica

ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಇದರ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಕನ್ನಡದಲ್ಲಿ ಇದಕ್ಕೆ ಮಾಕಿ ಮರ ಮತ್ತು ಮಾಕಿ ಹಣ್ಣು ಅನ್ನುತ್ತಾರೆ. ಫೈಕಸ್ ಕ್ಯಾರಿಕ ಎಂಬುದು ಇದರ ವೈಜ್ಞಾನಿಕ ನಾಮ. ಇದರ ಹಣ್ಣಿನಲ್ಲಿ ಕಬ್ಬಿಣ,ತಾಮ್ರ ಮತ್ತು ಎ,ಬಿ,ಸಿ,ಡಿ ವಿಟಮಿನ್‍ಗಳು ಹೇರಳವಾಗಿವೆ.

ಲಕ್ಷಣಗಳು

[ಬದಲಾಯಿಸಿ]

ಅಂಜೂರ ಗಾತ್ರದ ಚಿಕ್ಕ ಮರ. ಇದರ ಎತ್ತರ ಸು. 3-5 ಮೀ. ಕೆಲವು ಸಲ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತವೆ. ಎಲೆಯ ಮೇಲ್ಭಾಗ ಒರಟು; ತಳಭಾಗದಲ್ಲಿ ರೋಮಗಳಿವೆ. ಹಣ್ಣುಗಳು ಎಲೆಯ ಕಂಕುಳಲ್ಲಿ ಮೂಡುತ್ತವೆ. ಪೇರಳೆಹಣ್ಣಿನಾಕಾರ. ಅವುಗಳ ಬಣ್ಣ ಮತ್ತು ಗಾತ್ರದಲ್ಲಿ ವ್ಯತ್ಯಾಸ ಉಂಟು.ಅಂಜೂರದ ಹೂಗೊಂಚಲು ಅತ್ತಿಯ ಹೂಗೊಂಚಲಿನಂತೆಯೇ ಇದೆ. ಮಂದವಾದ ಅದರ ರಸದಿಂದ ಕೂಡಿದ ಕೋಶದೊಳಗಡೆ ಪುಟ್ಟ ಹೂಗಳಿರುತ್ತವೆ. ಪರಾಗಸ್ಪರ್ಶಕ್ರಿಯೆ ಗೊಂಚಲಿನಲ್ಲಿರುವ ಹೂಗಳ ಸ್ವರೂಪವನ್ನವಲಂಬಿಸಿದೆ. 15'-30' ಎತ್ತರ ಬೆಳೆಯುವ ಗಿಡ. ಮೂಲತಃ ಭಾರತದ ಸಸ್ಯವಲ್ಲದಿದ್ದರೂ ಈಗ ಇಲ್ಲಿ ಎಷ್ಟೋ ಕಡೆ ಇದನ್ನು ಹಣ್ಣಿಗಾಗಿ ಬೆಳೆಸುತ್ತಾರೆ. ಉಷ್ಣವಾದ ಹವೆ, ಕಪ್ಪುಭೂಮಿ ಮತ್ತು ನೀರಿನ ಸೌಕರ್ಯವಿದ್ದಲ್ಲಿ ಚೆನ್ನಾಗಿ ಬೆಳೆಯುತ್ತದೆ.

ವಿಧಗಳು

[ಬದಲಾಯಿಸಿ]

ಕೃಷಿಶಾಸ್ತ್ರದ ಪ್ರಕಾರ ಅಂಜೂರವನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ. ಹೂಗೊಂಚಲಿನಲ್ಲಿ ಹೆಣ್ಣು ಹೂಗಳು ಮಾತ್ರವಿದ್ದು, ಪರಾಗಸ್ಪರ್ಶವಿಲ್ಲದೆ ಅಥವಾ ಗರ್ಭಾಂಕುರತೆಯಿಲ್ಲದೆ, ಕೋಶ ಬೆಳೆದು, ಹಣ್ಣಾದರೆ ಅದು ಸಾಧಾರಣ ಅಂಜೂರ. ಎರಡನೆಯದು ಕ್ಯಾಪ್ರಿ ಅಂಜೂರ. ಇದರ ಹೂಗೊಂಚಲಿನಲ್ಲಿ ಗಂಡು ಮತ್ತು ಹೆಣ್ಣು ಹೂಗಳಿವೆ. ಶಲಾಕ ತುಂಡಾಗಿದೆ. ಅಂಡಾಶಯಗಳನ್ನು ಉತ್ತೇಜನಗೊಳಿಸಿದರೆ ಹಣ್ಣು ರೂಪುಗೊಳ್ಳುತ್ತದೆ. ಮೂರನೆಯದು ಸ್ಮಿರ್ನ ಅಂಜೂರ. ಇವುಗಳ ಹೂ ಗೊಂಚಲು ಹಣ್ಣಾಗಬೇಕಾದರೆ ಅನ್ಯಪರಾಗಸ್ಪರ್ಶವಾಗಲೇಬೇಕು. ಈ ಕ್ರಿಯೆಯಾಗಬೇಕಾದರೆ ಕ್ಯಾಪ್ರಿ ಅಂಜೂರದ ಹುಳುಗಳು-ಇದರ ಹೂ ಗೊಂಚಲನ್ನು ಕೊರೆಯುವ ಹಾಗೆ ಮಾಡಬೇಕು. ಸಣ್ಣ ಬಿದಿರು ಕಡ್ಡಿಯನ್ನು ಕ್ಯಾಪ್ರಿ ಅಂಜೂರದ ಕಾಯಿನೊಳಕ್ಕೆ ಚುಚ್ಚಿ ಅದನ್ನು ಸ್ಮಿರ್ನ ಅಂಜೂರದ ಕಾಯಿಗೆ ಚುಚ್ಚಿದರೆ ಅದರಿಂದ ಅನ್ಯಪರಾಗಸ್ಪರ್ಶ ನಡೆದು ಹಣ್ಣು ರೂಪುಗೊಳ್ಳುತ್ತದೆ. ನಾಲ್ಕನೆಯದು ಸ್ಯಾನ್‍ಪೆಡ್ರೊ ಅಂಜೂರ. ಇದರಲ್ಲಿ ಮೊದಲ ಬೆಳೆಯ ಹಣ್ಣು ಪರಾಗಸ್ಪರ್ಶವಿಲ್ಲದೆ ರೂಪುಗೊಳ್ಳುತ್ತದೆ. ಎರಡನೆಯ ಬೆಳೆಯ ಹಣ್ಣು ರೂಪುಗೊಳ್ಳಬೇಕಾದರೆ ಅನ್ಯಪರಾಗಸ್ಪರ್ಶ ಕ್ಯಾಪ್ರಿ ಅಂಜೂರದಿಂದ ಆಗಲೇಬೇಕು. ಈ ನಾಲ್ಕು ವಿಧದ ಹಣ್ಣುಗಳಲ್ಲಿ ಸ್ಮಿರ್ನ ಅಂಜೂರವನ್ನು ಯೂರೋಪು ಮತ್ತು ಅಮೆರಿಕ ದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಾರೆ.

ಭೌಗೋಳಿಕ ಹರಡುವಿಕೆ

[ಬದಲಾಯಿಸಿ]

ಅಂಜೂರದ ತೌರೂರು ಏಷ್ಯ ಮೈನರಿನಲ್ಲಿರುವ ಕ್ಯಾರಿಕ ಪ್ರದೇಶ. ಮೆಡಿಟರೇನಿಯನ್ ಸಮುದ್ರ ತೀರಪ್ರದೇಶಗಳಲ್ಲಿ ತುರ್ಕಿಸ್ತಾನದಿಂದ ಸ್ಪೇನಿನವರೆಗೂ ಏಷ್ಯ ಖಂಡಅರೇಬಿಯ, ಪರ್ಷಿಯ, ಅಫ್ಘಾನಿಸ್ತಾನ, ಭಾರತ, ಚೀನ ಮತ್ತು ಜಪಾನ್‍ಗಳಲ್ಲೂ ಬೆಳೆಯುತ್ತಾರೆ. ಅಮೆರಿಕದಲ್ಲೂ ಇದರ ವ್ಯವಸಾಯವಿದೆ. ಭಾರತದಲ್ಲಿ ಮಹಾರಾಷ್ಟ್ರಪೂನಾ, ಕರ್ನಾಟಕಬಳ್ಳಾರಿ, ಆಂಧ್ರದ ಅನಂತಪುರ ಜಿಲ್ಲೆಗಳು ಇದರ ಬೇಸಾಯಕ್ಕೆ ಪ್ರಸಿದ್ಧ. ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲೂ ಕೆಲವೆಡೆಗಳಲ್ಲಿ ಇದನ್ನು ಬೆಳೆಯುತ್ತಾರೆ.ಪ್ರಪಂಚದಲ್ಲಿ ಅಂಜೂರದ ಬೆಳೆಯ ಪ್ರಮಾಣವನ್ನು ಕೋಷ್ಟಕದಲ್ಲಿ ಕೊಡಲಾಗಿದೆ.

ಅಂಜೂರವನ್ನು ಹೆಚ್ಚು ಬೆಳೆಯುವ ದೇಶಗಳು - 2012
(in metric tonnes)
Rank ದೇಶ ಉತ್ಪಾದನೆ
(ಟನ್ನುಗಳಲ್ಲಿ)
1  ಟರ್ಕಿ 274,535
2  ಈಜಿಪ್ಟ್ 171,062
3 ಟೆಂಪ್ಲೇಟು:ALG 110,058
4  ಮೊರಾಕೊ 102,694
5  ಇರಾನ್ 78,000
6  ಸಿರಿಯಾ 41,224
7  ಅಮೇರಿಕ ಸಂಯುಕ್ತ ಸಂಸ್ಥಾನ 35,072
8  Brazil 28,010
9  ಅಲ್ಬೇನಿಯ 27,255
10  ಟುನೀಶಿಯ 25,000
ಪ್ರಪಂಚ 1,031,391
Source: UN Food & Agriculture Organization []

ಬೇಸಾಯ

[ಬದಲಾಯಿಸಿ]
Small fig tree

ಅಂಜೂರದ ವ್ಯವಸಾಯಕ್ಕೆ ಅತಿ ಫಲವತ್ತಾದ ಮಣ್ಣು ಬೇಕಾಗಿಲ್ಲ. ಮರಳು ಮಿಶ್ರಿತ ಎರೆಭೂಮಿ, ನೀರು ನಿಲ್ಲದ ಎರೆಭೂಮಿ ಮತ್ತು ಮೆಕ್ಕಲು ಮಣ್ಣಿನ ಭೂಮಿಯಲ್ಲಿ ಅಂಜೂರ ಚೆನ್ನಾಗಿ ಬೆಳೆಯುತ್ತದೆ. ಚೆನ್ನಾಗಿ ಫಸಲು ಬರಲು ಒಣಹವೆ ಸಹಕಾರಿ. ಸಸ್ಯವಂಶಾಭಿವೃದ್ಧಿ: ಬೀಜಗಳಿಂದ ಸಸಿಗಳನ್ನೇಳಿಸಬಹುದಾದರೂ ಯಾರೂ ಈ ಕ್ರಮವನ್ನನುಸರಿಸುವುದಿಲ್ಲ. ಸಣ್ಣ ಸಣ್ಣ ರೆಂಬೆಗಳನ್ನು 20-25 ಸೆಂ. ಮೀ. ನಷ್ಟು ಉದ್ದ ಕತ್ತರಿಸಿ, ಹದಗೊಳಿಸಿದ ಪಾತಿಗಳಲ್ಲಿ ಒಂದೊಂದು ಅಡಿ ಮಧ್ಯಂತರ ಜಾಗ ಬಿಟ್ಟು ನೆಡುತ್ತಾರೆ. ಕೊಂಕುಳಮೊಗ್ಗುಗಳು ಬೆಳೆದು ಗಿಡವಾಗುತ್ತವೆ. 12-15 ತಿಂಗಳಲ್ಲಿ ಕಿತ್ತು ಸಸಿಯಿಂದ ಸಸಿಗೆ 2-3 ಮೀಟರು ಅಂತರವಿರುವಂತೆ ಬೇರೆ ಕಡೆ ನೆಡುತ್ತಾರೆ. ಗೂಟ ಮತ್ತು ರೆಂಬೆಗಳನ್ನು ತಾಯಿಗಿಡದಿಂದ ಪ್ರತ್ಯೇಕಿಸದೆ ಭೂಮಿಯಲ್ಲಿ ಹೂಳಿ (ಲೇಯರಿಂಗ್) ಹೊಸ ಹೊಸ ಸಸ್ಯಗಳನ್ನೇಳಿಸಬಹುದು. ಅತ್ತಿ ಮತ್ತು ಆಲದ ಮರದ ರೆಂಬೆಗಳಿಗೆ ಅಂಜೂರದ ಎಲೆ ಮೊಗ್ಗುಗಳನ್ನು ಸೇರಿಸಿ ಬೆಳೆಯುವಂತೆ ಮಾಡಿದರೆ ಮರದ ಸ್ವರೂಪವೇ ಬದಲಾಯಿಸುತ್ತದೆ. ಅಂಜೂರ ತೋಟದ ವ್ಯವಸಾಯ ಇತರ ಹಣ್ಣಿನ ತೋಟಗಳ ವ್ಯವಸಾಯದ ಹಾಗೆಯೆ. ಕುರಿ ಗೊಬ್ಬರ ದನಗಳ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರಗಳು ಉತ್ತಮ. ಪೂನಾದಲ್ಲಿ ಮಳೆ ಕಡಿಮೆಯಾದ ಮೇಲೆ ಸೆಪ್ಟೆಂಬರ್ ತಿಂಗಳಲ್ಲಿ ಗಿಡದ ಸುತ್ತಲೂ ಮಣ್ಣನ್ನು ಅಗೆದು ಸಡಿಲಗೊಳಿಸಿ, ಕೆಲವು ಹಳೆಯ ಬೇರುಗಳನ್ನು ಕತ್ತರಿಸಿ, ಉಳಿದವು ಬಿಸಿಲಿನಲ್ಲಿ ಒಣಗುವಂತೆ ನಾಲ್ಕು ದಿನ ಬಿಡುತ್ತಾರೆ. ಅನಂತರ ಬೇರನ್ನು ಮಣ್ಣಿನಿಂದ ಮುಚ್ಚಿ ಎರಡು ಬಾಣಲೆಯಷ್ಟು ಗೊಬ್ಬರ ಹಾಕಿ ನೀರು ಹಾಕುತ್ತಾರೆ. ವ್ಯವಸಾಯ ಹದಿನೈದು ದಿನಗಳಲ್ಲಿ ಮುಗಿಯಬೇಕು. ಅಕ್ಟೋಬರ್ ತಿಂಗಳ ಅನಂತರ ಗೊಬ್ಬರ ಹಾಕಬಾರದು. ಮಾರ್ಚಿಯಿಂದ ಮೇ ವರೆಗೆ ಹದಿನೈದು ದಿವಸಕ್ಕೊಂದಾವೃತ್ತಿ ಮಣ್ಣನ್ನು ಸಡಿಲಗೊಳಿಸಬೇಕು. ಅಂಜೂರದ ಗಿಡಕ್ಕೆ ಹದವರಿತು ನೀರು ಹಾಕಬೇಕು. ಹಣ್ಣು ಬಿಡುವ ಕಾಲದಲ್ಲಿ ಒಂದು ವಾರ ನೀರು ತಪ್ಪಿದರೂ ಫಸಲು ಕಡಿಮೆಯಾಗುತ್ತದೆ. ಮೊದಮೊದಲು ನಾಲ್ಕು ದಿನಕ್ಕೊಂದಾವೃತ್ತಿ ನೀರು ಹಾಕುತ್ತಿದ್ದು ಕ್ರಮಕ್ರಮೇಣ ಅಂತರವನ್ನು ಹೆಚ್ಚಿಸಿ ಎಂಟುದಿವಸಕ್ಕೊಂದಾವೃತ್ತಿ ನೀರು ಹಾಕಬೇಕು. ಹೊಸದಾಗಿ ಬರುವ ರೆಂಬೆಗಳಲ್ಲಿ ಹಣ್ಣು ಬರುವುದರಿಂದ ಕಾಲವರಿತು ಹದವಾಗಿ ರೆಂಬೆಗಳನ್ನು ಪ್ರತಿವರ್ಷವೂ ಕತ್ತರಿಸಬೇಕು. ಪೂನಾದಲ್ಲಿ ಜುಲೈ ತಿಂಗಳಲ್ಲೂ ಉತ್ತರಪ್ರದೇಶದಲ್ಲಿ ಡಿಸೆಂಬರ್ ತಿಂಗಳಲ್ಲೂ ಮೈಸೂರಿನಲ್ಲಿ ಜನವರಿ-ಫೆಬ್ರವರಿ ತಿಂಗಳುಗಳಲ್ಲೂ ರೆಂಬೆಗಳನ್ನು ಕತ್ತರಿಸುವುದು ವಾಡಿಕೆ. ಅಕ್ಟೋಬರ್ ತಿಂಗಳಲ್ಲಿ ಕತ್ತರಿಸುವುದಿದೆ. ಹೀಗೆ ಮಾಡುವುದರಿಂದ ಮುಂದಿನ ಬೇಸಗೆಯಲ್ಲಿ ಫಸಲು ಬರುತ್ತದೆ.ರೋಗಗಳು : ಅಂಜೂರಕ್ಕೆ ಕೀಟ ಮತ್ತು ಬೂಷ್ಟು ರೋಗಗಳು ಬರುತ್ತವೆ. ನಮ್ಮ ದೇಶದಲ್ಲಿ ಬೆಳೆ ಹಾಳುಮಾಡುವ ರೋಗ ಬರುವುದು ಕಡಿಮೆ. ಎಲೆಗೆ ಬೂಷ್ಟದಿಂದ ಕಾಡಿಗೆರೋಗ ತಗುಲಿದರೆ ಎಲೆಗಳು ಉದುರಿಹೋಗಿ ಫಸಲು ಕಡಿಮೆಯಾಗುತ್ತದೆ. ಬ್ಯಾಟೊಸಿರ ರಪೊಮ್ಯಾಕುಲೇಟ ಎಂಬ ಕೀಟ ಗಿಡದ ಕಾಂಡವನ್ನು ಕೊರೆಯುತ್ತದೆ. ದುಂಬಿಗಳು ತೊಗಟೆ, ಎಲೆ ಮತ್ತು ಹಣ್ಣುಗಳನ್ನು ತಿನ್ನುತ್ತವೆ. ಕಂಬಳಿಹುಳು ತೊಗಟೆ ಮತ್ತು ಜಲವಾಹಕ ನಾಳಗಳನ್ನು ಟಿಷ್ಯೂಗಳನ್ನು ತಿನ್ನುವುದರಿಂದ ರೆಂಬೆಗಳು ಒಣಗಿಹೋಗುತ್ತವೆ. ಗಿಡವೇ ನಾಶವಾದರೂ ಆಗಬಹುದು. ಇಂಥ ಪಿಡುಗುಗಳನ್ನು ನಿವಾರಿಸಲು ಮರದ ಬುಡಕ್ಕೆ ತಾರು ಬಳಿದಿರುವ ಕಾಗದವನ್ನು ಸುತ್ತಿ ಇಲ್ಲವೆ ತಂತಿಯ ಬಲೆಯನ್ನು ಸುತ್ತಿ ರಕ್ಷಿಸುತ್ತಾರೆ; ಕಂಬಳಿಹುಳುಗಳನ್ನು ಹಿಡಿದು ಸೀಮೆ ಎಣ್ಣೆಯಲ್ಲಿ ಹಾಕಿ ಕೊಲ್ಲುವುದೇ ರೂಢಿ.ಹಣ್ಣುಗಳು ಉದುರಿ ಹೋಗುವುದರಿಂದಲೂ ಅಥವಾ ಬಿರಿಯುವುದರಿಂದಲೂ ಫಸಲು ನಷ್ಟವಾಗುತ್ತದೆ. ಹವಾಗುಣದ ವ್ಯತ್ಯಾಸ ಮತ್ತು ಹಣ್ಣು ರೂಪುಗೊಳ್ಳಲು ಅನುಕೂಲವಾಗುವಂತೆ ಕ್ಯಾಪ್ರಿ ಅಂಜೂರದ ಪರಾಗಸ್ಪರ್ಶ ಮಾಡುವ ಪದ್ಧತಿಯಲ್ಲಿ ವ್ಯತ್ಯಾಸ-ಇವುಗಳೇ ಇದಕ್ಕೆ ಕಾರಣ. ಹಣ್ಣಾಗುವ ಕಾಲದಲ್ಲಿ ನೀರನ್ನು ಹೆಚ್ಚಾಗಿ ಹಾಕಿದರೆ ಹಣ್ಣು ಬಿರಿಯುತ್ತದೆ. ಹಣ್ಣಿಗೆ ಅಸ್ಟರ್‍ಜಿಲ್ಲಸ್ ನೈಜರ್ ಎಂಬ ಬೂಷ್ಟು ರೋಗ ಬರುತ್ತದೆ. ಫಸಲಿನ ಕಾಲದಲ್ಲಿ ಬಾವಲಿ ಮತ್ತು ಪಕ್ಷಿಗಳು ಹಣ್ಣುಗಳನ್ನು ತಿಂದು ಹಾಳುಮಾಡದಂತೆ ನೋಡಿಕೊಳ್ಳಬೇಕು.ಗಿಡ 2 -3 ವರ್ಷ ವಯಸ್ಸಾದಾಗ ಫಸಲು ಬರುತ್ತದೆ. ಮೊದಲೆರಡು ವರ್ಷ ರೂಪುಗೊಳ್ಳುವ ಕಾಯಿಗಳನ್ನು ಕಿತ್ತು ಹಾಕುತ್ತಾರೆ. 3ನೆಯ ವರ್ಷದಿಂದ ಫಸಲನ್ನು ಸಂಗ್ರಹಿಸುತ್ತಾರೆ. ಒಂದು ಗಿಡ 12-15 ವರ್ಷ ಫಸಲು ಕೊಡುತ್ತದೆ. ಅನಂತರ ಫಸಲು ಕಡಿಮೆಯಾಗಿ ಸಸ್ಯವೇ ಒಣಗಿಹೋಗುತ್ತದೆ. ಫಸಲು ವರ್ಷಕ್ಕೆರಡಾವೃತ್ತಿ ಬರುತ್ತದೆ. ಕೆಲವು ವೇಳೆ ಮೂರು ಫಸಲೂ ಬರಬಹುದು.

ನಮ್ಮ ದೇಶದ ವಿವಿಧ ಪ್ರಾಂತಗಳಲ್ಲಿ ಮೊದಲನೆಯ ಫಸಲು ಜುಲೈ-ಅಕ್ಟೋಬರ್ ತಿಂಗಳುಗಳಲ್ಲೂ ಎರಡನೆಯ ಫಸಲು ಜನವರಿ-ಮೇ ತಿಂಗಳುಗಳಲ್ಲೂ ಬರುತ್ತವೆ. ಪೂನ ಮತ್ತು ಮೈಸೂರಿನಲ್ಲಿ ಮೊದಲನೆಯ ಫಸಲಿನಲ್ಲಿ ಬರುವ ಹಣ್ಣು ರುಚಿಯಾಗಿರುವುದರಿಂದ ಮಾರುಕಟ್ಟೆಗೆ ಅನುಕೂಲ. ಒಂದು ಗಿಡದಿಂದ ದೊರೆಯುವ ಫಸಲಿನ ಪ್ರಮಾಣ ಹವಾಗುಣ ಮತ್ತಿತರ ಪರಿಸ್ಥಿತಿಯನ್ನವಲಂಬಿಸಿದೆ.ಅಂಜೂರವನ್ನು ಒಣಗಿಸುವಿಕೆ : ಅಂಜೂರವನ್ನು ಒಣಗಿಸಿ ಮಾರಾಟಕ್ಕೆ ಕಳುಹಿಸುವುದು ಸಾಮಾನ್ಯ. ಒಣಗಿಸದೆಯೂ ಮಾರುವುದುಂಟು. ಗಿಡದಿಂದ ತಾವಾಗಿಯೇ ಮಾಗಿ ಬಿದ್ದ ಹಣ್ಣುಗಳನ್ನಾರಿಸಿ ಅಗಲವಾದ ತಟ್ಟೆಗಳಲ್ಲಿಟ್ಟು ಒಣಗಿಸುತ್ತಾರೆ. ಒಣಗಿಸುವ ಪದ್ಧತಿ ಒಂದೊಂದು ದೇಶದಲ್ಲಿ ಒಂದೊಂದು ರೀತಿಯಾಗಿದೆ. ನಮ್ಮಲ್ಲಿ ಒಣಗಿಸಿ ಮಾರಾಟಕ್ಕೆ ಕಳುಹಿಸುವುದು ಕಡಿಮೆ. ಪೂನಾ ವಿಭಾಗದಲ್ಲಿ ಮಾತ್ರ ಫಸಲಿನ ಸ್ವಲ್ಪ ಭಾಗವನ್ನು ಒಣಗಿಸುತ್ತಾರೆ. ಮಾಗಿದ ಹಣ್ಣುಗಳನ್ನು ಕಿತ್ತು ಹಣ್ಣಿನಮೇಲೆ ಹಣ್ಣು ಬೀಳದಂತೆ ಎಚ್ಚರಿಕೆಯಿಂದ ಮರದ ತಟ್ಟೆಯಲ್ಲಿಟ್ಟು, 20-30 ನಿಮಿಷ ಗಂಧಕದ ಹೊಗೆ ಕೊಡುತ್ತಾರೆ. ದಿನಕ್ಕೆ 6-7 ಸಾರಿ ಹಣ್ಣುಗಳನ್ನು ಮೇಲೆ ಕೆಳಗೆ ಮಾಡುತ್ತ ಎಲ್ಲ ಹಣ್ಣುಗಳೂ ಒಂದೇ ಸಮನಾಗಿ ಒಣಗುವಂತೆ ಮಾಡಿ, ಸಂಪೂರ್ಣವಾಗಿ ಒಣಗುವ ಮೊದಲು ಹಣ್ಣುಗಳನ್ನು ಅದುಮುತ್ತಾರೆ. ಅದುಮುವುದರಿಂದ ಪೆಟ್ಟಿಗೆಗಳಲ್ಲಿ ಹಣ್ಣುಗಳನ್ನು ಹೆಚ್ಚಾಗಿ ತುಂಬಬಹುದು. ಭರ್ತಿಮಾಡುವ ಮೊದಲು 3% ಉಪ್ಪಿರುವ ನೀರನ್ನು ಮರಳಿಸಿ ಅದರಲ್ಲಿ ಅವುಗಳನ್ನು ಅದ್ದುತ್ತಾರೆ. ಹೀಗೆ ಮಾಡುವುದರಿಂದ ಹಣ್ಣುಗಳು ಮೃದುವಾಗುವುವಲ್ಲದೆ ರುಚಿಯೂ ಹೆಚ್ಚುತ್ತದೆ. ಹಣ್ಣಿನ ಗಾತ್ರ ಮತ್ತು ಬಣ್ಣಗಳ ಆಧಾರದ ಮೇಲೆ ಅವನ್ನು ವರ್ಗೀಕರಿಸಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ

ಸಂವರ್ಧನೆ

[ಬದಲಾಯಿಸಿ]

ಅರ್ಧ ಅಂಗುಲ ದಪ್ಪವಾದ ಕಾಂಡದಿಂದ ಅಂಟನ್ನು ತಯಾರಿಸುವರು. ಹೊಸ ಗಿಡಗಳನ್ನು ಗೂಟನೆಟ್ಟು ಬೆಳೆಸುವುದೂ ಇದೆ. ಅಂಜೂರದ ಮರ ಜುಲೈ-ಅಕ್ಟೋಬರ್ ಮತ್ತು ಜನವರಿ-ಮೇ ತಿಂಗಳು ಹೀಗೆ ವರ್ಷದಲ್ಲಿ ಎರಡು ಸಲ ಹಣ್ಣು ಬಿಡುವುದು. ಮೈಸೂರುರಾಜ್ಯದಲ್ಲಿ ಒಂದು ಗಿಡಕ್ಕೆ ಸು. 180-300ರವರೆಗೆ ಹಣ್ಣುಗಳಾಗುತ್ತವೆ. ಗಿಡದ ಮೇಲೆಯೇ ಉಳಿದಿರುವ ಹಣ್ಣುಗಳನ್ನು ಕೊಯ್ಯುತ್ತಾರೆ; ಕೆಳಗೆ ಬಿದ್ದವನ್ನು ಸಂಗ್ರಹಿಸುತ್ತಾರೆ. ಬಿಸಿಲಿನಲ್ಲಿ ಒಣಗಿಸಿದ ಅಂಜೂರಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ಈ ಹಣ್ಣಿನಿಂದ ಜಾಮ್, ಮಾದಕಪೇಯ ಮುಂತಾದುವನ್ನು ತಯಾರಿಸುವರು.

ಪೌಷ್ಟಿಕಾಂಶಗಳು

[ಬದಲಾಯಿಸಿ]

ಇದೊಂದು ಪೌಷ್ಟಿಕವಾದ ಹಣ್ಣು. ಇದರಲ್ಲಿ ಎ, ಬಿ, ಸಿ ಮತ್ತು ಡಿ ಅನ್ನಾಂಗಗಳು ಇವೆ. ಮಾಂಸವನ್ನು ಬೇಗ ಕುದಿಸಲಿಕ್ಕೆ ಇದರ ಕಾಯಿಯನ್ನು ಸೇರಿಸುವರು.ಹಣ್ಣುಗಳಲ್ಲಿ ಅನೇಕ ಪೌಷ್ಠಿಕಾಂಶಗಳಿವೆ. ಸುಮಾರು 84 ರಷ್ಟು ತಿರುಳಿರುತ್ತದೆ. ಹಣ್ಣುಗಳಲ್ಲಿ ಖನಿಜಾಂಶ ಮತ್ತು ಸಕ್ಕರೆಗಳಿರುವುದರಿಂದ ಪುಷ್ಟಿಕರವಾದ ಆಹಾರವೆನಿಸಿದ್ದು ಬೇಡಿಕೆ ಹೆಚ್ಚು. ಕಬ್ಬಿಣದ ಮತ್ತು ತಾಮ್ರದ ಅಂಶ ಇತರ ಹಣ್ಣುಗಳಲ್ಲಿರುವುದಕ್ಕಿಂತಲೂ ಇವುಗಳಲ್ಲಿ ಹೆಚ್ಚಾಗಿವೆ. ಸತುವಿನ ಅಂಶವೂ ಸ್ವಲ್ಪ ಇರುತ್ತದೆ. ಎ ಮತ್ತು ಸಿ ಅನ್ನಾಂಗಗಳು ಹೆಚ್ಚು ಪ್ರಮಾಣದಲ್ಲೂ ಬಿ ಮತ್ತು ಡಿ ಅನ್ನಾಂಗಗಳು ಕಡಿಮೆ ಪ್ರಮಾಣದಲ್ಲೂ ಇರುತ್ತವೆ. ಇವುಗಳಲ್ಲದೆ ಸಿಟ್ರಿಕ್ ಮತ್ತು ಅಸಿಟಿಕ್ ಆಮ್ಲಗಳೂ ಇರುತ್ತವೆ.

ಸಂಸ್ಕರಿಸದ ಅಂಜೂರ
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz)
ಆಹಾರ ಚೈತನ್ಯ 310 kJ (74 kcal)
ಶರ್ಕರ ಪಿಷ್ಟ 19.18 g
- ಸಕ್ಕರೆ 16.26 g
- ಆಹಾರ ನಾರು 2.9 g
ಕೊಬ್ಬು 0.30 g
ಪ್ರೋಟೀನ್(ಪೋಷಕಾಂಶ) 0.75 g
Thiamine (vit. B1) 0.060 mg (5%)
Riboflavin (vit. B2) 0.050 mg (4%)
Niacin (vit. B3) 0.400 mg (3%)
Pantothenic acid (B5) 0.300 mg (6%)
Vitamin B6 0.113 mg (9%)
Folate (vit. B9) 6 μg (2%)
Choline 4.7 mg (1%)
Vitamin C 2.0 mg (2%)
ವಿಟಮಿನ್ ಕೆ 4.7 μg (4%)
ಕ್ಯಾಲ್ಸಿಯಂ 35 mg (4%)
ಕಬ್ಬಿಣ ಸತ್ವ 0.37 mg (3%)
ಮೆಗ್ನೇಸಿಯಂ 17 mg (5%)
ಮ್ಯಾಂಗನೀಸ್ 0.128 mg (6%)
ರಂಜಕ 14 mg (2%)
ಪೊಟಾಸಿಯಂ 242 mg (5%)
ಸೋಡಿಯಂ 1 mg (0%)
ಸತು 0.15 mg (2%)
Link to USDA Database entry
Percentages are roughly approximated
using US recommendations for adults.
Source: USDA Nutrient Database

ಔಷಧೀಯ ಗುಣಗಳು

[ಬದಲಾಯಿಸಿ]

ಇದೊಂದು ಔಷಧೀಯ ವಸ್ತುವೂ ಹೌದು ಅಂಜೂರದ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಹಣ್ಣು ಮೂತ್ರಸ್ರಾವಕ್ಕೆ ಉತ್ತೇಜನಕಾರಿ. ಹೆಚ್ಚುಕಾಲ ಬಳಸಿದರೆ ಆಹಾರದ ಕೊರತೆಯಿಂದ ರಕ್ತಹೀನತೆಯುಂಟಾಗುವುದನ್ನು ತಪ್ಪಿಸುತ್ತದೆ. ಫಸಲು ಬಂದಮೇಲೆ ಎಲೆಗಳನ್ನು ಕಿತ್ತು ದನಗಳಿಗೆ ಹಾಕುವುದುಂಟು. ಗಿಣ್ಣು ಉತ್ಪನ್ನದಲ್ಲಿ ಅಂಜೂರದ ಹಾಲನ್ನು ಹೆಪ್ಪುಗಟ್ಟಿಸುವುದಕ್ಕೆ ಉಪಯೋಗಿಸುತ್ತಾರೆ. ಹಾಲು ಕರುಳಿನಲ್ಲಿರುವ ಜಂತುಹುಳುಗಳನ್ನು ನಾಶಮಾಡುತ್ತದೆ. ಹಣ್ಣನ್ನು ಪೋಲ್ಟೀಸುಮಾಡಿ ಕೀವು ಬರುವ ಗಾಯಕ್ಕೆ ಕಟ್ಟುತ್ತಾರೆ. ಚರ್ಮದಮೇಲೆ ಹಾಲು ಬಿದ್ದರೆ ಗಂದೆ ಮತ್ತು ಗುಳ್ಳೆಗಳಾಗುತ್ತದೆ. ಆಲ್ಕೋಹಾಲ್ ನೀರಿನಲ್ಲಿ ಇವು ಕರಗುತ್ತವೆ

ಛಾಯಾಂಕಣ

[ಬದಲಾಯಿಸಿ]
ಎಲೆ ಮತ್ತು ಹಣ್ಣು ಹಣ್ಣು The Expulsion ತುಂಡರಿಸಿದ ಹಣ್ಣು

Leaves and green fruit on common fig tree

Common fig fruit

The Expulsion from the Garden of Edenfresco depicting a distressed Adam and Eve, with and without fig leaves, by Tommaso Masaccio, 1426–27

Cutaway-section displaying the fruit anatomy

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

[ಬದಲಾಯಿಸಿ]
  1. "Production of figs by countries". UN Food & Agriculture Organization. 2011. Archived from the original on 2011-07-13. Retrieved 2013-08-23.


"https://kn.wikipedia.org/w/index.php?title=ಅಂಜೂರ&oldid=1272635" ಇಂದ ಪಡೆಯಲ್ಪಟ್ಟಿದೆ