ರಾಮಕೃಷ್ಣ ಹೆಗಡೆ
ರಾಮಕೃಷ್ಣ ಹೆಗಡೆ | |
---|---|
ಅಧಿಕಾರ ಅವಧಿ 10 ಜನವರಿ 1983 – 10 ಆಗಸ್ಟ್ 1988 | |
ಪೂರ್ವಾಧಿಕಾರಿ | ಆರ್. ಗುಂಡೂ ರಾವ್ |
ಉತ್ತರಾಧಿಕಾರಿ | ಎಸ್.ಆರ್.ಬೊಮ್ಮಾಯಿ |
ಮತಕ್ಷೇತ್ರ | ಸಿರ್ಸಿ ವಿಧಾನಸಭಾ ಕ್ಷೇತ್ರ |
ವೈಯಕ್ತಿಕ ಮಾಹಿತಿ | |
ಜನನ | ಸಿದ್ಧಾಪುರ, ಉತ್ತರ ಕನ್ನಡ ಜಿಲ್ಲೆ | ೨೯ ಆಗಸ್ಟ್ ೧೯೨೬
ಮರಣ | 12 January 2004 ಬೆಂಗಳೂರು, ಕರ್ನಾಟಕ,ಭಾರತ | (aged 77)
ರಾಜಕೀಯ ಪಕ್ಷ | ಕಾಂಗ್ರೆಸ್, ಜನತಾ ಪಕ್ಷ, ಲೋಕಶಕ್ತಿ |
ಸಂಗಾತಿ(ಗಳು) | ಶಕುಂತಲಹೆಗಡೆ |
ಧರ್ಮ | ಹಿಂದು |
ರಾಮಕೃಷ್ಣ ಹೆಗಡೆ (೨೯-೮-೧೯೨೬ -೧೨-೧-೨೦೦೪), ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದರು. ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಇವರು ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ[೧].
ಜನನ, ವಿದ್ಯಾಭ್ಯಾಸ, ವೃತ್ತಿ ಜೀವನ
[ಬದಲಾಯಿಸಿ]ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ ೧೯೨೬, ಅಗಸ್ಟ್ ೨೯ ರಂದು , ಮಹಾಬಲೇಶ್ವರ ಹೆಗ್ಡೆ ಹಾಗು ಸರಸ್ವತಿ ಹೆಗ್ಡೆ ದಂಪತಿಗಳಿಗೆ ಹವ್ಯಕ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು. ಕೃಷಿಕ ಕುಟುಂಬದಿಂದ ಬಂದ ಇವರು ಮುಂದೆ ಇವರು ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ಯುನಿವರ್ಸಿಟಿ ಗಳಲ್ಲಿ ಓದಿ ನ್ಯಾಯ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗವಹಿಸಿದ್ದ ಇವರು ೧೯೪೨ ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನೊ ಅನುಭವಿಸಿದ್ದರು. ತನ್ನ ೨೦ನೇ ವಯಸಲ್ಲೇ ರೈತ ಚಳುವಳಿಯನ್ನು ರಾಜ್ಯದಲ್ಲಿ ರೂಪಿಸಿದರು. ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆ. ಕನ್ನಡದ "ಮರಣ ಮೃದಂಗ" ಹಾಗೂ "ಪ್ರಜಾಶಕ್ತಿ" ಚಲನಚಿತ್ರಗಳಲ್ಲಿ ನಟಿಸಿದ್ಧಾರೆ.
ರಾಜಕೀಯ ವಲಯದಲ್ಲಿ
[ಬದಲಾಯಿಸಿ]- ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ೧೯೫೪ ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ ಇವರು ೧೯೫೭ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದರು. ಇಂದಿರಾ ಗಾಂಧಿ ೧೯೭೫ ರಲ್ಲಿ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನು ಕಂಡು, ಹೊರಬಂದ ನಂತರ ಜನತಾ ಪಾರ್ಟಿಯನ್ನು ಸೇರಿದ್ದರು.
- ೧೯೮೩ರಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷದ ೧೮ ಶಾಸಕರ ಬೆಂಬಲದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾದ ಇವರು ದೇಶದ ಮೊದಲ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.೧೯೮೫ರಲ್ಲಿ ನಡೆದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಲ್ಲಿ ತನ್ನ ಪಕ್ಷದ ಸಾಮಾನ್ಯ ಗೆಲುವನ್ನು ಕಂಡ ರಾಮಕೃಷ್ಣ ಹೆಗಡೆ ಪಕ್ಷದ ಸೋಲಿನ ನೈತಿಕ ಜವಾಬ್ದಾರಿಯನ್ನು ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. [೧]
- ಆ ವರ್ಷ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಪಂಚಾಯತ್ ರಾಜ್ ಕಾನೂನಿನಲ್ಲಿ ಹೆಗಡೆಯವರ ಪಾತ್ರ,ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ರಾಮಕೃಷ್ಣ ಹೆಗಡೆಯವರ ಪಾತ್ರ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವು ರಾಜಕಾರಣ ಅಂದ ಕೂಡಲೇ ಜನಗಳ ನೆನಪಿಗೆ ಬರುವಂತದ್ದು.
- ೧೯೮೮ರಲ್ಲಿ ದೂರವಾಣಿ ಕದ್ದಾಲಿಕೆ ಹಗರಣದ ಕಾರಣ ಅವರು ರಾಜೀನಾಮೆ ಕೊಟ್ಟು ಹೊರಬಂದರು[೨]. ಅವರ ನಂತರ ಎಸ್. ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು
- ೧೯೮೯ರಲ್ಲಿ ಬಸವನಗುಡಿಯಿಂದ ಮತ್ತೆ ವಿಧಾನಸಭೆಗೆ ಚುನಾಯಿತರಾದರು
- ೧೯೮೯ರಲ್ಲಿ ವಿ. ಪಿ. ಸಿಂಗ್ ನೇತೃತ್ವದ ಕೇಂದ್ರೇಯ ಯೋಜನಾ ಅಯೋಗದ ಉಪಾಧ್ಯಕ್ಷರಾಗಿದ್ದರು. ಇದರ ವಿರುದ್ಧ ಎ.ಕೆ.ಸುಬ್ಬಯ್ಯನವರು ಆಗಿನ ರಾಜ್ಯಪಾಲರಿಗೆ ದೂರು ನೀಡಿದ್ದರು ಹಾಗು ಕರ್ನಾಟಕ ಹೈ ಕೋರ್ಟ್ ಇದರ ವಿಚಾರಣೆ ಮಾಡಿ ಅಂತಿಮವಾಗಿ ಹೆಗಡೆಯವರ ಪರವಾಗಿ ತೀರ್ಪು ನೀಡಿತು [೩]
- ೧೯೯೧ರಲ್ಲಿ ಬಾಗಲಕೋಟೆಯಿಂದ ಲೋಕಸಭೆಗೆ ಸ್ಪರ್ಧಿಸಿ ಸಿದ್ದು ನ್ಯಾಮಗೌಡr ವಿರುದ್ಧ ಸೋತರು.
- ೧೯೯೮ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು ಮತ್ತು ವಾಜಪೇಯಿ ಸರ್ಕಾರದ ಪ್ರಬಲ ವಕ್ತಾರರಾಗಿದ್ದರು [೪].
ಪತ್ರಕರ್ತ ಆಗಬೇಕೆಂಬ ಮಹದಾಸೆ
[ಬದಲಾಯಿಸಿ]- ಪತ್ರಕರ್ತ ಆಗಬಯಸಿದ್ದರು ಹೆಗಡೆ ಅವರಿಗೆ ಪತ್ರಕರ್ತ ಆಗಬೇಕೆಂಬ ಮಹದಾಸೆ ವಿದ್ಯಾರ್ಥಿ ದೆಸೆಯಿಂದಲೂ ಇತ್ತು. ಸಿರ್ಸಿ ಮಾರಿಕಾಂಬಾ ಹೈಸ್ಕೂಲ್ನಲ್ಲಿ ಕಲಿಯುತ್ತಿದ್ದಾಗ ಕೈಬರಹದ ಪತ್ರಿಕೆ ‘ಹೂವಿನ ಸರ’ಕ್ಕೆ ಲೇಖನ ಬರೆಯುತ್ತಿದ್ದರು. ಬನಾರಸ್ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಲ್ಲಿ ಅವರ ಲೇಖನ ಪ್ರಕಟವಾಗುತ್ತಿದ್ದವು.
- ಕರ್ನಾಟಕಕ್ಕೆ ಮರಳಿದ ಹೆಗಡೆ ಪ್ರಾರಂಭದಲ್ಲಿ ಮಾಡಿದ್ದು ವಕೀಲ ವೃತ್ತಿಯನ್ನು ಹಾಗೂ ಕೆಲಕಾಲ ಸಿರ್ಸಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ನಂತರ ಕಾಲದ ಹೊರಳಿಗೆ ಸಿಕ್ಕು, ರಾಜಕೀಯದತ್ತ ಮುಖ ಮಾಡಿದರು. ಪತ್ರಕರ್ತನಾಗಲಿಲ್ಲ ಎಂದು ಬಹಳ ಸಾರಿ ನೊಂದುಕೊಂಡಿದ್ದೂ ಉಂಟು.
ಬರಹಗಾರರಾಗಿ
[ಬದಲಾಯಿಸಿ]ಸ್ವತ: ಲೇಖಕರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸಂಬಂಧಪಟ್ಟಂತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು.
- “ ಎ ಕ್ಲೀನ್ ಗವರ್ನಮೆಂಟ್ “,
- “ ಪಾರ್ಲಿಮೆಂಟ್ ಅಂಡ್ ಪಿಲಿಟಿಕಲ್ ಕಲ್ಚರ್ “,
- “ ಅಡ್ಮಿನಿಸ್ಟ್ರೇಟಿವ್, ಸೋಶಿಯೋ,
- ಎಕನಾಮಿಕ್ ಛೇಂಜಸ್ ಇನ್ ಇಂಡಿಯಾ “,
- “ ಜುಡಿಶಿಯಲ್ ಥಿಯರಿ “,
- “ ಎಲೆಕ್ಟೋರಲ್ ರಿಫಾರ್ಮ್ಸ್ “ ಇನ್ನೂ ಮುಂತಾದ ಹೊತ್ತಗೆಗಳ ಲೇಖಕರು ಹೆಗಡೆ.
“ಪಂಚಾಯತ್ ರಾಜ್ “ ಯೋಜನೆ
[ಬದಲಾಯಿಸಿ]- ರಾಮಕೃಷ್ಣ ಹೆಗಡೆಯವರು ಜಾರಿಗೆ ತಂದ “ಪಂಚಾಯತ್ ರಾಜ್ “ ಯೋಜನೆ ದೇಶಕ್ಕೇ ಪ್ರಥಮ! ಅಧಿಕಾರವನ್ನು ಜನರಿದ್ದಲ್ಲಿಗೇ ಕೊಂಡೊಯ್ಯಬೇಕೆಂಬ ತಮ್ಮ ಮನದಿಂಗಿತವನ್ನು ಚಾಚೂತಪ್ಪದೆ ನಜೀರ ಸಾಬರ ಮೂಲಕ ಅನುಷ್ಟಾನಕ್ಕಿಳಿಸಿದರು ಹೆಗಡೆ!ಮುಂದೆ ಭಾರತದಲ್ಲಿಯೇ ಪಂಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರಲು ಪ್ರಧಾನಿ ರಾಜೀವ್ ಗಾಂಧಿ ಪ್ರೇರಣೆಗೊಂಡಿದ್ದು ಹೆಗಡೆಯವರ ಕಾಲದಲ್ಲಿನ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಟಾನಗೊಂಡ ಪಂಚಾಯತ್ ಕಾನೂನಿನಿಂದ!
- ಬಂಜರು ಭೂಮಿಗಳನ್ನೂ ಕೃಷಿಗೆ ಉಪಯೋಗಿಸಕೊಳ್ಳಲು ಅನುಕೂಲವಾಗುವಂತೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರೈತರ ಮುಖದಲ್ಲಿ ಸಂತೃಪ್ತಿಯ ನಗು ಕರುಣಿಸಿದ ಅವರ ಕೃಷಿ-ತೋಟಗಾರಿಕೆ ನೀತಿಯು ರಾಜೀವಗಾಂಧಿಯವರಿಂದ ರಾಷ್ಟ್ರೀಯ ತೋಟಗಾರಿಕಾ ನಿಗಮ ದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು! ಇಲ್ಲಿಗೇ ಮುಗಿದು ಹೋಯಿತಾ..? ಇಲ್ಲ .
- ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ-ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃಧ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೨೫ ರ ಮೀಸಲಾತಿ, ದೇಶದಲ್ಲಿ ಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿವೆ!
- ಲೋಕಾಯುಕ್ತರಿಗೆ ಸ್ವ ಇಚ್ಛೆಯಿಂದ ಮೊಕದ್ದಮೆಗಳನ್ನು ದಾಕಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ಆಗಲೇ ನೀಡಿದ್ದರು! ಮುಖ್ಯಮಂತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು! ಮಂತ್ರಿಗಳ ವಿರುಧ್ಧ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಆಗಲೇ ಲೋಕಾಯುಕ್ತರು ಹೊಂದಿದ್ದರು! ಸಚಿವ ಸಂಪುಟದ ತೀವ್ರ ವಿರೋಧಗಳ ನಡುವೆ ಲೋಕಾಯುಕ್ತರ ಪರಮಾಧಿಕಾರವನ್ನು ಮೊಟಕುಗೊಳಿಸಲಾಯಿತೆಂಬುದು ಬೇರೆ ವಿಚಾರ.
- ಆದರೆ ಭ್ರಷ್ಟಾಚಾರದ ನಿರ್ಮೂಲನೆಯತ್ತ ಹೆಗಡೆಯವರಿಗಿದ್ದ ಕಳಕಳಿ ಮಾತ್ರ ಪ್ರಶ್ನಾತೀತವೇ. ವಿಧ್ಯಾರ್ಥಿಗಳ ಪ್ರಯಾಣಾನುಕೂಲಕ್ಕೆ ಬಸ್ ಪಾಸ್ ನೀಡಿಕೆಯ ಆರಂಭವೂ ಹೆಗಡೆಯವರ ಕಾಲದಿಂದಲೇ.. ಶಿಕ್ಷಣ ಕ್ಷೇತ್ರ ಬಹಳ ಸುಧಾರಣೆಗೊಂಡಿದ್ದು ಅವರ ಕಾಲದಲ್ಲಿಯೇ! ಕ್ಯಾಪಿಟೇಷನ್ ಶುಲ್ಕದ ರದ್ದತಿ,ರ್ಯಾಗಿಂಗ್ ಅನ್ನು ಕ್ರಿಮಿನಲ್ ಅಪರಾಧವೆಂದು ಮಾನ್ಯ ಮಾಡಿ,ಅದಕ್ಕಾಗಿ ಕಾನೂನನ್ನು ಜಾರಿಗೊಳಿಸಿ, ತನ್ಮೂಲಕ ರ್ಯಾಗಿಂಗ್ ಎಂಬ ಪೀಡೆಯನ್ನು ಮಟ್ಟಹಾಕುವಲ್ಲಿ ಅತ್ಯಂತ ಹೆಚ್ಚಿನ ಮಟ್ಟದ ಯಶಸ್ಸಿನ ಸಾಧನೆ ಹೆಗಡೆಯವರದ್ದು.
- ಹೆಗಡೆ ಜಾರಿಗೆ ತಂದ ಹತ್ತು ಹಲವಾರು ಜನ ಕಲ್ಯಾಣ ಯೋಜನೆಗಳಲ್ಲಿ ಕೆಲವು ದೇಶದಲ್ಲಿ ಪ್ರಥಮವಾಗಿ ಆರಂಭಗೊಂಡಂತವೆಂದರೆ ಹೆಗಡೆಯವರ ಜನನಾಯಕತ್ವ- ತಮ್ಮನ್ನಾರಿಸಿ ಕಳುಹಿಸಿದ ಮತದಾರವರ್ಗದ ಅಭ್ಯುದಯದತ್ತ ಅವರಿಗಿದ್ದ ಕಾಳಜಿ ಗುರುತಿಸುವಂಥಹವೇ!
ರಾಜಕಾರಣಿ ಆರೋಪಗಳಿಗೆ ಹೊರತಲ್ಲ ಎಂಬಂತೆ, ಟೆಲಿಫೋನ್ ಕದ್ದಾಲಿಕೆ ಮುಂತಾದ ಆರೋಪಗಳು ಕೂಡ ಹೆಗಡೆಯವರನ್ನು ಸುತ್ತುವರಿದಿತ್ತು.
- ರಾಜಕಾರಣದಲ್ಲಿ ಮೌಲ್ಯಗಳಿಗೆ ಯಾವತ್ತೂ ಬೆಲೆಯಿಲ್ಲ ಎಂಬುದು ಸತ್ಯವೇ! ಆಗೀಗ ಕೆಲವಾರು ಆ ಮಾತಿಗೊಂದು ಅಪವಾದವೆಂಬ ನಿದರ್ಶನಗಳು ದೊರೆತರೂ, ತಾವು ಆಡುತ್ತ್ತಿದ್ದ ಮೌಲ್ಯಗಳನ್ನು ಚಾಚೂ ತಪ್ಪದೆ ಅನುಸರಿಸಿದವರು ಹೆಗಡೆ! “ಮೌಲ್ಯಾಧಾರಿತ ರಾಜಕಾರಣ“ ವೆಂದರೆ ಹೆಗಡೆ.. ರಾಜಕಾರಣದಲ್ಲಿ ಆ ಪದದ ಹುಟ್ಟಿಗೂ ಸಹ ಅವರೇ ಕಾರಣವೆಂದರೂ ಅತಿಶಯೋಕ್ತಿಯಲ್ಲ!!
- ಆದರೆ ತಮ್ಮ ರಾಜಕಾರಣದ ಪಡಸಾಲೆಗೆ ತಮ್ಮ ಸಂಬಂಧಿಕರನ್ನು ಬಿಟ್ಟುಕೊಂಡು ಹಾಗೂ ವಂಧಿ-ಮಾಗಧರ ಮಾತುಗಳನ್ನು ಕೇಳುತ್ತಲೇ, ದೂರವಾಣಿ ಕದ್ದಾಲಿಕೆ ಹಗರಣ[೨], ರೇವಜೀತು ಹಗರಣ ಹಾಗೂ ಮೆಡಿಕಲ್ ಸೀಟ್ ಹಗರಣ ಮುಂತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕ್ತ್ವಕ್ಕೆ ಕಪ್ಪು ವರ್ಚಸ್ಸನ್ನು ಮೂಡಿಸಿದರೂ ಮೆಡಿಕಲ್ ಸೀಟಿನ ಹಗರಣದಲ್ಲಿ ಮಗ ಭರತ್ ಹೆಗಡೆಯವರ ವಿರುಧ್ಧ ಹಾಗೂ ತಮ್ಮ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾದಾಗ ಅವರುಗಳ ಮೇಲೆಯೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು.
- ಹೆಗಡೆ ನಿಜವಾಗಿಯೂ ನೈತಿಕತೆಯನ್ನು ಪಾಲಿಸಿಕೊಂಡು ಬಂದಿದ್ದರು. “ ಕಿಂಗ್ ಶಿಪ್ ಹ್ಯಾಸ್ ನೋ ಕಿನ್ ಶಿಪ್“ ಎಂಬ ಮಾತಿಗೆ ನಿಜವಾಗಿಯೂ ಅರ್ಥ ತಂದುಕೊಟ್ಟ ಮಹಾ ಮುತ್ಸದ್ದಿ! ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ಅವರು,ಮೇಲೆ ಹೇಳಿದಂತೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರ ಸಚಿವರಾಗಿ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದವರು.
ಉತ್ತಮ ಅರ್ಥಶಾಸ್ತ್ರಜ್ಞ
[ಬದಲಾಯಿಸಿ]- ಹೆಗಡೆ ಕರ್ನಾಟಕ ರಾಜ್ಯದ ಅತ್ಯಂತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ ೧೩ ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ!!! ರಾಜ್ಯದ ೧೯೮೩ ರ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಗಡೆ ಅಧಿಕಾರ ವಿಕೇಂದ್ರೀಕರಣದ ಪ್ರಬಲ ಶಿಫಾರಸುಗಾರರಾಗಿದ್ದರು.
- ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಂಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅಂತರದಿಂದ ಬಿದ್ದು ಹೋದಾಗ, ಮಂತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎಂಬುದನ್ನು ನಿರೂಪಿಸಿದವರು. ದೇವೇಗೌಡರು ಮುಖ್ಯಮಂತ್ರಿಗಳಾದ ನಂತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ. ಕೇಂದ್ರ ದತ್ತ ತಮ್ಮ ಗಮನ ಕೇಂದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು.
- ಜನವರಿ ೧೯೮೩ ರಿಂದ ಡಿಸೆಂಬರ್ ೧೯೮೪ ಹಾಗೂ ಮಾರ್ಚ್ ೧೯೮೫ ರಿಂದ ಆಗಸ್ಟ್ ೧೯೮೮ ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಹೆಗಡೆ ಅಲ್ಪಮತಸರಕಾರವನ್ನು ಮುನ್ನಡೆಸಿದ ಬಗೆ ಈಗಲೂ ಮನನೀಯ! ಸ್ವತ: ಪಿ.ಜಿ.ಆರ್.ಸಿಂಧ್ಯ ಮುಂತಾದ ನಾಯಕರು ಹೆಗಡೆಯವರ ೭೮ ನೇ ಜನ್ಮದಿನದಂದು ನಡೆದ ಸಮಾರಂಭದಲ್ಲಿ ಅದನ್ನು ಒಪ್ಪಿಕೊಂಡಿದ್ದರು!
- ಎಸ್.ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿಯೂ ಸೇವೆಸಲ್ಲಿಸಿದ್ದರು. ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ೧೯೮೩ ರಲ್ಲಿ ಅಧಿಕಾರ ವಹಿಸಿಕೊಂಡ ಹೆಗಡೆಯವರು, ರಾಜ್ಯದಲ್ಲಿ "ಪಂಚಾಯತ್ ರಾಜ್" ವ್ಯವಸ್ಥೆಯನ್ನು ಮೊದಲಿಗೆ ಜಾರಿಗೆ ತಂದರು.
- ಇವೆಲ್ಲವುದಕ್ಕಿಂತ ಮುಖ್ಯವಾಗಿ ರಾಮಕೃಷ್ಣ ಹೆಗಡೆ ತನ್ನ ನಂತರ ಕರ್ನಾಟಕ ರಾಜಕಾರಣಕ್ಕೆ ಹಲವಾರು ನಾಯಕರನ್ನು ಬಿಟ್ಟು ಹೋದರು..ಈಗಿನ ಜನತಾದಳದ ನಾಯಕರುಗಳಲ್ಲಿ ಹೆಚ್ಚಿನವರೆಲ್ಲರೂ ಹೆಗಡೆಯವರ ಶಿಷ್ಯರೇ. ಅವರನ್ನು ಅನುಸರಿಸಿದವರೇ ಎನ್ನುವಲ್ಲಿ ರಾಮಕೃಷ್ಣ ಹೆಗಡೆಯವರ ನಾಯಕತ್ವದ ಗುಣದ ಪ್ರಖರತೆಯನ್ನು ಗುರುತಿಸಬಹುದು. ಹೆಗಡೆ ತಾವೊಬ್ಬರೇ ಬೆಳೆಯಲಿಲ್ಲ. ಇತರರನ್ನೂ ಬೆಳೆಸಿದರು!
- ಬಿ.ಸೋಮಶೇಖರ್, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಎಸ್. ಆರ್. ಬೊಮ್ಮಾಯಿ, ಪಿ.ಜಿ.ಆರ್.ಸಿಂಧ್ಯ, ಜೀವರಾಜ್ ಆಳ್ವ ಎಲ್ಲರೂ ಅವರಂಗಳದಿಂದಲೇ ಮುಂದೆ ನಡೆದವರು! ಮಾಜಿ ಮುಖ್ಯಮಣತ್ರಿ ಸಿದ್ಧರಾಮಯ್ಯನವರಂತೂ ಅವರನ್ನು ತಮ್ಮ ರಾಜಕೀಯ ಗುವೆಂದು ಘೋಷಿಸಿದ್ದಾರೆ[೫]. ತನ್ನ ಅಧಿಕಾರಾವಧಿಯಲ್ಲಿ ರಾಜ್ಯದ ಯಾವ ಮುಖ್ಯಮಂತ್ರಿಯೂ ಕರ್ನಾಟಕಕ್ಕೆ ನೀಡಿರದ ಸಾಂಸ್ಕೃತಿಕ ಮೆರಗನ್ನು ನೀಡಿದ್ದು ಹೆಗಡೆಯವರ ಆಡಳಿತ! ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆ, ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದವರು.
- ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಒಗೆ ಶೇಕಡಾ ೫೦ ರ ರಿಯಾಯಿತಿ ಮುಂತಾದ ಯೋಜನೆಗಳೂ ಅವರವೇ! ಬೆಂಗಳೂರಿನಲ್ಲಿ ಜಗತ್ಪ್ರಸಿಧ್ಧ ನೃತ್ಯಪಟುವಾಗಿದ್ದ ಪ್ರತಿಮಾ ಬೇಡಿಯ ನೃತ್ಯ ನಿಕೇತನದ ಸ್ಥಾಪನೆಗೆ ಸ್ಠಳ ನೀಡಿದ ಹೆಗಡೆಯವರ ಔದಾರ್ಯವನ್ನು ತನ್ನ ಆತ್ಮಕಥೆಯಲ್ಲಿ ಪ್ರತಿಮಾ ಬೇಡಿ ಉಲ್ಲೇಖಿಸಿದ್ದಾರೆ.
ನಿಧನ
[ಬದಲಾಯಿಸಿ]ಹೆಗಡೆಯವರು ೨೦೦೪ ಜನವರಿ ೧೨ರಂದು ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "ರಾಮಕೃಷ್ಣ ಹೆಗಡೆ ಬದುಕಿದ್ದಿದ್ದರೆ ಇವತ್ತಿಗೆ 92 ವರ್ಷವಾಗುತ್ತಿತ್ತು!-ನಯನ". kannada.oneindia.com. oneindia. Archived from the original on 2020-05-15. Retrieved 2020-05-15.}
- ↑ ೨.೦ ೨.೧ "ದೂರವಾಣಿ ಕದ್ದಾಲಿಕೆ ಸದ್ದು! ಅಂದು ಹೆಗಡೆ V/s ಗೌಡರು; ಇಂದು ಬಿಎಸ್ ವೈ V/S HDK". www.udayavani.com. udayavani. Archived from the original on 2019-09-16. Retrieved 2020-05-15.}
- ↑ "Ramakrishna Hegde vs State Of Karnataka on 17 September, 1992". indiankanoon.org. indiankanoon. Archived from the original on 2014-02-26. Retrieved 2020-05-15.}
- ↑ "ತನ್ನಿಮಿತ್ತ: ಮೌಲ್ಯಾಧಾರಿತ ರಾಜಕಾರಣದ ಅಚಲ ಪ್ರತಿಪಾದಕ - ಪ್ರೊ.ಗೋಪಾಲಕೃಷ್ಣ ಜೋಶಿ ಕೆಕ್ಕಾರು". vijaykarnataka.com. vijaykarnataka. Archived from the original on 2020-05-15. Retrieved 2020-05-15.}
- ↑ "ನನ್ನ ಗುರು ದೇವೇಗೌಡ ಅಲ್ಲ ರಾಮಕೃಷ್ಣ ಹೆಗಡೆ: ಸಿದ್ದರಾಮಯ್ಯ". kannada.asianetnews.com. asianetnews. Archived from the original on 2018-04-03. Retrieved 2020-05-15.}