ಮಡ ಹಾಗಲಕಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಡ ಹಾಗಲಕಾಯಿ

ಮಡ ಹಾಗಲಕಾಯಿ ಒಂದು ಅಪರೂಪದ ತರಕಾರಿಯಾಗಿದೆ. ಇದರ ವೈಜ್ಞಾನಿಕ ಹೆಸರು ಮೊಮೊರ್ಡಿಕ ಡಯೋಕಾ. ಇದು ಕ್ಯುಕುರ್ಬಿಟೇಸಿಯೆ ಕುಟುಂಬಕ್ಕೆ ಸೇರಿದೆ. ಇದರ ಮೂಲ ಭಾರತ ದೇಶ. ಈಗ ಶ್ರೀಲಂಕಾ, ಮಯನ್ಮಾರ್, ಚೀನಾ, ಜಪಾನ್, ದಕ್ಷಿಣ ಪೂರ್ವ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೇರಿಕಾದಲ್ಲಿಯೂ ಈ ತರಕಾರಿ ಕಂಡುಬರುತ್ತದೆ. ಭಾರತದ ಅಸ್ಸಾಂ ಹಾಗೂ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಹೇರಳವಾಗಿ ಬೆಳೆಯುತ್ತವೆ. ಈ ತರಕಾರಿಯು ಮಳೆಗಾಲದಲ್ಲಿ ಮಾತ್ರ ದೊರೆಯುತ್ತದೆ. ಕರ್ನಾಟಕದ ಮಲೆನಾಡಿನ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. [೧]

ಇತಿಹಾಸ[ಬದಲಾಯಿಸಿ]

ಮಡ ಹಾಗಲಕಾಯಿಯ ಹೂವು

ಇದಕ್ಕೆ ಕಾಟುಪೀಟರೆ, ಪೊಪೀರೆ ಎಂಬ ಹೆಸರುಗಳು ಇವೆ. ಇಂಗ್ಲೀಷಿನಲ್ಲಿ ಇದಕ್ಕೆ ಟೀಸೆಲ್ ಗಾರ್ಡ್ ಎಂಬ ಹೆಸರಿದೆ. ಇದಕ್ಕೆ ದಪ್ಪವಾದ ಪದರವಿದ್ದು ತಿನ್ನಲು ಸಿಹಿಯಾಗಿರುತ್ತದೆ. ಮಡ ಹಾಗಲಕಾಯಿಯು ಮೊಟ್ಟೆಯ ಆಕಾರದಲ್ಲಿದ್ದು, ಹಳದಿ ಅಥವಾ ಹಸಿರು ಬಣ್ಣದಲ್ಲಿರುತ್ತದೆ ಹಾಗೂ ಇದು ಮುಳ್ಳುಗಳಿಂದ ಸುತ್ತಿರುತ್ತದೆ. ಇದರ ಪದರವು ಗರಿಗರಿಯಾಗಿದ್ದು, ಬೀಜಗಳಿಂದ ಕೂಡಿರುತ್ತದೆ. ಇದರ ಬೀಜಗಳು ಸಣ್ಣದಾಗಿದ್ದು, ಸೌತೆಕಾಯಿಯ ಬೀಜವನ್ನು ಹೋಲುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಮಡ ಹಾಗಲಕಾಯಿಯನ್ನು ಕೆಲವು ಹಬ್ಬಗಳಿಗೆ ಬಳಸುತ್ತಾರೆ. ಈ ತರಕಾರಿಯು ೧೩,೦೦೦ ಕ್ರಿಸ್ತ ಶಕಗಳಷ್ಟು ಹಳೆಯದು. ಇದನ್ನು ಸಂಸ್ಕೃತದಲ್ಲಿ ಕಾರ್ಕೋಟಕಿ ಎಂದು ಕರೆಯಲಾಗಿದೆ. ಇದನ್ನು ತರಕಾರಿಯಾಗಿ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ ಇಂದಿಗೂ ಬಳಸುತ್ತಾರೆ. ಇದರಲ್ಲಿ ನೀರಿನ ಅಂಶ ಕಡಿಮೆಯಿರುತ್ತದೆ. ಮಡ ಹಾಗಲಕಾಯಿಯ ಹೂವುಗಳು ಹಳದಿ ಬಣ್ಣದಲ್ಲಿದ್ದು, ಅದರ ಮೇಲೆ ಗಾಢವಾದ ಚುಕ್ಕೆಗಳು ಇರುತ್ತವೆ. ಹೂವಿನ ಎಸಳುಗಳ ಕೆಳಗೆ ಒಂದು ದೊಡ್ಡ ಪತ್ರಕವಿರುತ್ತದೆ ಹಾಗೂ ಇದರ ಕೆಳ ಭಾಗದಲ್ಲಿ ಮಕರಂದದ ಎಸಳುಗಳು ಕಂಡುಬರುವುದಿಲ್ಲ. ಇದು ಅನೇಕ ಪೌಷ್ಟಿಕಾಂಶವುಳ್ಳ ತರಕಾರಿ. [೨]

ಔಷಧೀಯ ಗುಣಗಳು[ಬದಲಾಯಿಸಿ]

ಮಡ ಹಾಗಲಕಾಯಿ

ಮಡ ಹಾಗಲಕಾಯಿಯಲ್ಲಿ ಅನೇಕ ಔಷಧೀಯ ಗುಣಗಳು ಇವೆ. ಭಾರತದಲ್ಲಿ ಆನೇಕ ವರ್ಷಗಳಿಂದ ಔಷಧಿಯಾಗಿ ಹಾಗೂ ಆಹಾರವಾಗಿ ಮಡ ಹಾಗಲಕಾಯಿಯು ಬಳಕೆಯಲ್ಲಿದೆ. ಆರ್ಯುವೇದ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಇದರ ಎಲೆಗಳು ಮತ್ತು ಬೇರನ್ನು ಉಪಯೋಗಿಸಿ ಮೂಲವ್ಯಾಧಿ, ಮೂತ್ರಕ್ಕೆ ಸಂಬಂಧಿಸಿದ ರೋಗಗಳು ಹಾಗೂ ಜ್ವರ ಸೇರಿದಂತೆ ವಿವಿಧ ರೋಗಗಳಿಗೆ ಔಷಧಿಯನ್ನು ತಯಾರಿಸುತ್ತಾರೆ. [೩] ಮಡ ಹಾಗಲಕಾಯಿಯಲ್ಲಿ ವಿಟಮಿನ್ ಎ ಇರುವುದರಿಂದ ಇದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಮಡ ಹಾಗಲಕಾಯಿಯಲ್ಲಿ ಕ್ಯಾರೋಟೀನ್ ಅಂತಹ ವಸ್ತುಗಳಿಂದ ವಯಸ್ಸಾಗುವಿಕೆಯನ್ನು ತಡೆಗಟ್ಟುವುದರಲ್ಲಿ ಸಹಾಯ ಮಾಡುತ್ತದೆ ಹಾಗೂ ಆಂಟಿಆಕ್ಸಿಡೆಂಟ್, ಕ್ಯಾಲ್ಸಿಯಂ,ಸೋಡಿಯಂ, ಪೊಟ್ಯಾಶಿಯಮ್, ಪ್ರೋಟೀನ್, ಫೈಬರ್, ಕಾರ್ಬೊಹೈಡ್ರೇಟ್, ಕಬ್ಬಿಣ, ಮ್ಯಾಂಗನೀಸ್ ಇವೆಲ್ಲವೂ ಇರುತ್ತದೆ. ಮಡ ಹಾಗಲಕಾಯಿಯಲ್ಲಿ ಕೆರೊಟಿನ್ ಅತ್ಯಧಿಕ ಪ್ರಮಾಣದಲ್ಲಿದೆ. ಇದರಿಂದ ಅನೇಕ ಖಾದ್ಯಗಳನ್ನು ತಯಾರಿಸುತ್ತಾರೆ. ಮಡ ಹಾಗಲಕಾಯಿಯ ಬೀಜವೂ ಹಾಗಲಕಾಯಿಯ ಬೀಜಕ್ಕಿಂತಲೂ ಚಿಕ್ಕದಾಗಿರುತ್ತದೆ ಹಾಗೂ ಆಕಾರದಲ್ಲಿ ನಕ್ಷತ್ರಗಳನ್ನು ಹೋಲುತ್ತದೆ. ಇದರ ಬೀಜಗಳು ಕೂಡ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಬೀಜ ಸಹಿತ ತಿನ್ನಬಹುದಾದ ತರಕಾರಿ ಇದಾಗಿದೆ. ಇದರಲ್ಲಿ ಅತ್ಯಂತ ಕಡಿಮೆ ಕೊಬ್ಬಿನ ಅಂಶ ಇದ್ದು ಜೀರ್ಣ ಶಕ್ತಿಗೆ ಸುಲಭವಾಗಿರುತ್ತದೆ. [೪] ಇದರಲ್ಲಿ ವಿಟಮಿನ್ ಬಿ ಹಾಗೂ ವಿಟಮಿನ್ ಸಿ ಉತ್ತಮವಾಗಿದ್ದು ಗರ್ಭಿಣಿಯರಿಗೆ ಸಹಾಯಕವಾಗಿದೆ. ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಂಶಗಳು ದೇಹದಲ್ಲಿ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಇದು ಜ್ವರ, ಮೂಲವ್ಯಾಧಿ, ಹಾವಿನ ಕಡಿತದ ವಿಷ, ಮೂತ್ರ ಸಂಬಂಧಿ ರೋಗಗಳು, ಕ್ಷಯ ಮುಂತಾದ ಕಾಯಿಲೆಗಳನ್ನು ನಿವಾರಿಸುತ್ತದೆ. ಮಡ ಹಾಗಲಕಾಯಿಯಲ್ಲಿ ಅನೇಕ ರೋಗ ನಾಶಕ ಗುಣಗಳು ಇವೆ. ಇದು ರಕ್ತ ಸಂಚಾರದಲ್ಲಿಯೂ ಬಹಳಷ್ಟು ಸಹಾಯ ಮಾಡುತ್ತದೆ. ಈ ತರಕಾರಿಯು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮೂತ್ರ ಪಿಂಡದ ಕಲ್ಲುಗಳನ್ನು ನಿವಾರಿಸುಲು ಸಹಾಯ ಮಾಡುತ್ತದೆ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದು ಕೆಮ್ಮಿಗೂ ಒಂದು ಮನೆ ಮದ್ದಾಗಿದೆ. ಇದನ್ನು ಸೇವಿಸುವುದರಿಂದ ಮೆದುಳಿನ ಬುದ್ಧಿಶಕ್ತಿ ಹೆಚ್ಚುತ್ತದೆ. ಮಡ ಹಾಗಲಕಾಯಿಯ ಎಲೆಗಳಿಂದ ತಯಾರಿಸಿದ ಕಷಾಯ ತಣಿದ ಬಳಿಕ ಜೇನುತುಪ್ಪ ಸೇರಿಸಿ ಸೇವಿಸಿದರೆ ಜ್ವರ ವಾಸಿಯಾಗುತ್ತದೆ. ಅಧಿಕ ಬೆವರಿನ ಸಮಸ್ಯೆ ಇರುವವರು ಇದರ ಚೂರ್ಣ ತಯಾರಿಸಿಟ್ಟುಕೊಂಡು ಕಷಾಯ ಮಾಡಿ ಸೇವಿಸಿದರೆ ದೇಹದ ದುರ್ಗಂಧ ನಿವಾರಣೆಯ ಜೊತೆಗೆ ಚರ್ಮವು ಮೃದುವಾಗುತ್ತದೆ. ವಾಯು ಮಾಲಿನ್ಯದಿಂದುಂಟಾಗುವ ಉಸಿರಾಟದ ಸಮಸ್ಯೆಗೆ ಮಡ ಹಾಗಲಕಾಯಿಯ ಬೇರಿನ ಪುಡಿಯನ್ನು ೨೫೦ ಮಿಲಿಗ್ರಾಂ ತೆಗೆದುಕೊಂಡು ಒಂದು ಚಮಚ ಶುಂಠಿ ಹಾಗೂ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ವಾಸಿಯಾಗುತ್ತದೆ. [೫]

ಕೃಷಿ ಪದ್ದತಿ[ಬದಲಾಯಿಸಿ]

ಮಡ ಹಾಗಲಕಾಯಿಯನ್ನು ಬೆಳೆಯಲು ಕಡಿಮೆ ತಾಪಮಾನವಿರಬೇಕು. ಹಣ್ಣಾದ ಮಡ ಹಾಗಲಕಾಯಿಯ ಬೀಜಗಳನ್ನು ಮಳೆಗಾಲದ ಆರಂಭದಲ್ಲಿ ಬಿತ್ತಬೇಕು. ಒಂದು ತಿಂಗಳ ಬಳಿಕ ಸಾವಯವ ಗೊಬ್ಬರ ನೀಡಿದರೆ ದೊಡ್ಡದಾಗಿ ಬೆಳೆಯುತ್ತದೆ. ಆಧಾರಕ್ಕೆ ಚಪ್ಪರ ಹಾಕಬೇಕು. ಬೀಜ ಬಿತ್ತಿದ ೯೦ ದಿನಗಳಲ್ಲಿ ಫಸಲು ದೊರೆಯುತ್ತದೆ. ಇದು ಹಳದಿ ಬಣ್ಣದ ಹೂವುಗಳನ್ನು ಬಿಡುತ್ತದೆ. ಒಮ್ಮೆ ನೆಟ್ಟರೆ ಪ್ರತಿ ವರ್ಷ ನೆಡುವ ಅಗತ್ಯವಿರುವುದಿಲ್ಲ. ಮಳೆಗಾಲ ಕಳೆದ ನಂತರ ಬಳ್ಳಿ ಒಣಗಿ ಸಾಯುತ್ತದೆ. ಇದರ ಗಡ್ಡೆಗಳು ಮಣ್ಣಿನಲ್ಲಿಯೇ ಉಳಿಯುತ್ತದೆ. ಮಳೆ ಬಿದ್ದಾಗ ಗಡ್ಢೆಗಳು ಚಿಗುರಿ ಪುನಃ ಫಸಲು ನೀಡಲು ಪ್ರಾರಂಭಿಸುತ್ತದೆ. ಆಕ್ಟೋಬರ್, ನವೆಂಬರ್ ಅಂತ್ಯದವರೆಗೂ ಕಾಯಿಗಳು ಹೇರಳವಾಗಿ ದೊರೆಯುತ್ತದೆ. ಸುಮಾರು ಏಳು ಅಥವಾ ಎಂಟು ಸೆಂಟಿ ಮೀಟರ್‌ನಷ್ಟು ಉದ್ದದ ಹಸಿರು ಬಣ್ಣದ ಕಾಯಿಗಳಿದ್ದು, ಮುಳ್ಳುಗಳನ್ನು ಹೊಂದಿರುತ್ತದೆ. ಅದರ ಸಿಪ್ಪೆ ಮತ್ತು ತಿರುಳನ್ನು, ಬೀಜ ಸಹಿತ ಉಪಯೋಗಿಸಬಹುದು. ಮಾರುಕಟ್ಟೆಯಲ್ಲಿ ಕಿ.ಗ್ರಾಂ.ಗೆ ೧೦೦-೧೫೦ ರೂಪಾಯಿಯವರೆಗೂ ಧಾರಣೆ ಇರುವುದರಿಂದ ಕೃಷಿಕರು ಇದರ ಕೃಷಿ ಮಾಡಿ ಲಾಭ ಗಳಿಸಬಹುದು. ಕರ್ನಾಟಕ ಹಾಗೂ ಪಶ್ಚಿಮ ಬಂಗಾಳವು ಇದನ್ನು ಮುಖ್ಯವಾಗಿ ಬೆಳೆಯುವ ರಾಜ್ಯಗಳು. ಭಾರತದ ಮರುಕಟ್ಟೆಯಲ್ಲಿ ಎರಡು ವಿಧದ ಮಡ ಹಾಗಲಕಾಯಿ ದೊರೆಯುತ್ತದೆ. ಒಂದು ಸಣ್ಣ ಮಡ ಹಾಗಲಕಾಯಿ ಹಾಗೂ ಮತ್ತೊಂದು ದೊಡ್ಡ ಮಡ ಹಾಗಲಕಾಯಿ. [೬] ಇವೆರಡರಲ್ಲಿ ಸಣ್ಣ ಮಡ ಹಾಗಲಕಾಯಿಯು ಸ್ವಲ್ಪ ದುಬಾರಿ ಹಾಗೂ ಅದರ ಬೇಡಿಕೆ ಹೆಚ್ಚು. ಅಡಿಗೆ ಸಾಮಾಗ್ರಿಗಳಲ್ಲಿ, ಗೊಂಬೆಗಳಲ್ಲಿ, ಸಂಗೀತ ವಾದ್ಯಗಳಲ್ಲಿ ಹಾಗೂ ಅಲಂಕಾರಿಕ ವಸ್ತುಗಳಲ್ಲಿ ಅತ್ಯಧಿಕವಾಗಿ ಉಪಯೋಗಿಸುತ್ತಾರೆ. ಭಾರತ ದೇಶದಿಂದ ಹೊರಗೆ ಇದನ್ನು ಅಲಂಕಾರಿಕ ಗಿಡವಾಗಿ ಬೆಳೆಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://www.easyayurveda.com/2019/07/08/kakoda-momordica-dioica/
  2. www.agrifarming.in/spine-gourd-farming
  3. https://pubmed.ncbi.nlm.nih.gov/33427588/
  4. https://www.ncbi.nlm.nih.gov/pmc/articles/PMC7814569/
  5. https://www.researchgate.net/publication/342145057_A_Review_on_Momordica_dioica_Fruits
  6. https://nutrition.medhyaherbals.com/spine-gourd-kakrol-benefits-recipe/