ಹಾವಿನ ವಿಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈಪೆರಾ ಬೆರಸ್ - ವಿಷವನ್ನು ತಲುಪಿಸುವ ಸಲಕರಣೆ

ಹಾವಿನ ವಿಷ ಎಂಬುದು ಬಹಳ ವಿಷಯುಕ್ತವಾದ ಲಾಲಾರಸ. ಇದು ಜ಼ೂಟಾಕ್ಸಿನ್‌ಗಳನ್ನು (ಇದು ಎರೆಯ ಸ್ತಂಭನ ಮತ್ತು ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ) ಹೊಂದಿರುತ್ತದೆ.[೧] ಹಾವುಗಳ ವಿಷಗಳನ್ನು ಅಭ್ಯಸಿಸಿದಾಗ ಅವನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಬಹುದು:

  1. ನರಗಳ ಮೇಲೆ ಪ್ರಭಾವ ಬೀರುವ ವಿಷಗಳು (ನ್ಯೂರೋಟಾಕ್ಸಿನ್‌ಗಳು)
  2. ರಕ್ತಲಯಗೊಳಿಸುವ ವಿಷಗಳು (ಹಿಮೊಲಿಟಿಕ್ ಟಾಕ್ಸಿನ್ಸ್)
  3. ಹೃದಯ ಸ್ನಾಯುಗಳ ಮೇಲೆ ಪ್ರಭಾವ ಬೀರುವ ವಿಷಗಳು (ಕಾರ್ಡಿಯೋ ಟಾಕ್ಸಿನ್ಸ್)
  4. ಅಂಗಾಂಶ ಕೊಳೆಸುವ ವಿಷಗಳು (ಹಿಸ್ಟೋ ಟಾಕ್ಸಿನ್ಸ್)

ನರಗಳ ಮೇಲೆ ಪ್ರಭಾವ ಬೀರುವ ವಿಷಗಳು (ನ್ಯೂರೋಟಾಕ್ಸಿನ್‌ಗಳು)[ಬದಲಾಯಿಸಿ]

ಈ ವಿಷವು ನಾಗರಹಾವು, ಕಾಳಿಂಗ ಸರ್ಪ ಮುಂತಾದವುಗಳಲ್ಲಿ ಇರುತ್ತದೆ.[೨] ಹಾವು ಕಡಿದಾಗ ವಿಷವು ರಕ್ತದಲ್ಲಿ ಸೇರಿ ದೇಹದ ತುಂಬಾ ವ್ಯಾಪಿಸುತ್ತದೆ. ವಿಷದ ಸಂಪರ್ಕದಲ್ಲಿ ಬರುವ ನರಕೋಶಗಳು ಕ್ರಿಯಾಹೀನವಾಗುವುವು. ಇದರಿಂದ ದೇಹದಲ್ಲಿ ಅಶಕ್ತತೆ ಕಾಣುವುದು. ಕೈಕಾಲುಗಳ ಚಲನೆ, ಉಸಿರಾಟದ ಚಲನೆ, ಕಣ್ಣಿನ ಹಾಗೂ ನಾಲಿಗೆಯ ಚಲನೆ ಸ್ಥಗಿತಗೊಂಡು ವ್ಯಕ್ತಿ ಮರಣ ಹೊಂದುವನು.

ಈ ವಿಷಕ್ಕೆ ಪ್ರತಿವಿಷವನ್ನು ತಯಾರಿಸಿದ್ದಾರೆ. ವಿಷವು ಇನ್ನೂ ರಕ್ತದಲ್ಲಿ ಇರುವಾಗಲೇ ಪ್ರತಿವಿಷವು ಅದರ ಕಾರ್ಯವನ್ನು ನಿಲ್ಲಿಸಬೇಕು. ಆಗ ರೋಗಿ ಬದುಕಿ ಉಳಿಯುವನು. ಅದಾಗದೆ ವಿಷವು ನರಕೋಶಗಳನ್ನು ತಲುಪಿದ್ದರೆ ಮರಣವೇ ಗತಿ.

ಹಳ್ಳಿಗಳಲ್ಲಿ ಹಾವು ಕಚ್ಚಿದವರಿಗೆ ಬೇವಿನ ಎಲೆ ತಿನ್ನಿಸುವುದು, ನಿದ್ದೆ ಬರದಂತೆ ಓಡಾಡಿಸುವುದು ಮಾಡುತ್ತಾರೆ. ಇವೆಲ್ಲ ವಿಷವು ನರಕೋಶಗಳನ್ನು ತಲುಪಿದೆಯೋ ಇಲ್ಲವೋ ಎಂದು ಪರೀಕ್ಷಿಸಲು.

ಪ್ರತಿವಿಷವನ್ನು ತಯಾರಿಸಿ ಸರಿಯಾಗಿ ಗಾಜಿನ ಬಾಟಲಿಗಳಲ್ಲಿ ತುಂಬಿ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಕಳುಹಿಸಿರುತ್ತಾರೆ. ದೊಡ್ಡ ದೊಡ್ಡ ಆಸ್ಪತ್ರೆಗಳವರೂ ಖರೀದಿಸಿ ಇಟ್ಟಿರುತ್ತಾರೆ. ಜನರ ಕರ್ತವ್ಯವೆಂದರೆ ರೋಗಿಯನ್ನು ತಡಮಾಡದೆ ಆಸ್ಪತ್ರೆಗೆ ಒಯ್ಯುವುದು.

ರಕ್ತಲಯಗೊಳಿಸುವ ವಿಷಗಳು (ಹಿಮೊಲಿಟಿಕ್ ಟಾಕ್ಸಿನ್ಸ್)[ಬದಲಾಯಿಸಿ]

ಈ ವಿಷಗಳು ದೇಹದಲ್ಲಿ ಸೇರಿ ರಕ್ತದೊಡನೆ ಸಂಚರಿಸುವಾಗ ರಕ್ತಗೋಲಕಗಳನ್ನು ಒಡೆದು ನೀರಾಗುವಂತೆ ಮಾಡುತ್ತವೆ. ಲಯಗೊಂಡ ರಕ್ತವು ದೇಹದ ಶಕ್ತಿಯನ್ನು ಕುಂದಿಸುವುದು, ದಮ್ಮು ಹತ್ತುವಂತೆ ಮಾಡುವುದು. ಕಣ್ಣಿಗೆ ಕತ್ತಲೆ ಬರುವಂತೆ ಮಾಡಿ ರೋಗಿಯನ್ನು ಕೊಂದು ಹಾಕುವುದು. ಕಾರಣ ಇಂಥ ವಿಷಗಳ ಕಾರ್ಯವನ್ನು ನಿಯಂತ್ರಿಸಲು ರಕ್ತದಲ್ಲಿ ಸೇರಿದ ವಿಷ ಸಂಚರಿಸದಂತೆ ನೋಡಬೇಕು. ಪ್ರತಿವಿಷಗಳು ಲಭ್ಯವಿದೆ. ಅವುಗಳ ಬಳಕೆ ಶೀಘ್ರದಲ್ಲಿ ಆಗಬೇಕು.

ಹೃದಯ ಸ್ನಾಯುಗಳ ಮೇಲೆ ಪ್ರಭಾವ ಬೀರುವ ವಿಷಗಳು(ಕಾರ್ಡಿಯೋ ಟಾಕ್ಸಿನ್ಸ್)[ಬದಲಾಯಿಸಿ]

ಈ ವಿಷಗಳು ನೇರವಾಗಿ ಹೃದಯ ಸ್ನಾಯುಗಳ ಮೇಲೆ ತಮ್ಮ ಪ್ರಭಾವ ಬೀರಿ ಹೃದಯ ಸ್ನಾಯುಗಳು ಕೊಳೆಯುವಂತೆ ಮಾಡುವುವು. ಆಗ ಹಾವು ಕಚ್ಚಿಸಿಕೊಂಡ ವ್ಯಕ್ತಿ ಹೃದಯಾಘಾತದ ಲಕ್ಷಣ ತೋರುತ್ತಾನೆ. ಬಂದ ತೊಂದರೆ ಹೃದಯಾಘಾತ ಎಂದು ತಿಳಿದು ಉಪಚರಿಸಿದರೆ ಸಾಲದು. ಮೊದಲು ಪ್ರತಿವಿಷ ಕೊಡಬೇಕು. ಒಂದು ವೇಳೆ ವಿಷವು ಹೃದಯ ಸ್ನಾಯುಗಳನ್ನು ತಲುಪಿದ್ದರೆ ಏನೂ ಮಾಡಲು ಬಾರದು. ರೋಗಿ ಸತ್ತೇ ಹೋಗುವನು.

ಅಂಗಾಂಶ ಕೊಳೆಸುವ ವಿಷಗಳು (ಹಿಸ್ಟೋ ಟಾಕ್ಸಿನ್ಸ್)[ಬದಲಾಯಿಸಿ]

ಈ ವಿಷವು ದೇಹದ ಅಂಗಾಂಶವನ್ನು ಲಯಗೊಳಿಸುವುದು. ಇದರಿಂದ ದೇಹದ ಭಾಗವು ಕೊಳೆಯುತ್ತಾ ಹೋಗುವುದು. ಅಂಗಾಂಶವು ಕೊಳೆಯುವುದರಿಂದ ರಕ್ತದಲ್ಲಿ ಅಪಾಯಕಾರಿ ಪದಾರ್ಥಗಳು ಸೇರಿ ವ್ಯಕ್ತಿಯನ್ನು ಕೊಂದು ಹಾಕುವುವು. ಅಂಗಾಂಶ ಕೊಳೆತ ಹಾವು ಕಚ್ಚಿದ ಗಾಯದಿಂದಲೇ ಹರಡುತ್ತಾ ಹೋಗುವದು. ಏನು ಉಪಚಾರ ಮಾಡಿದರೂ ಅದು ಕೊಳೆಯುತ್ತಲೇ ಹೋಗುವದು.

ಪ್ರತಿವಿಷ ತಯಾರಿಕೆ[ಬದಲಾಯಿಸಿ]

ವಿಷ ಹಾಗೂ ಪ್ರತಿವಿಷಗಳ ಬಗ್ಗೆ ಸ್ವಾರಸ್ಯಕರ ಸಂಗತಿಗಳು ಇವೆ. ಪ್ರತಿವಿಷ ಇತ್ತೀಚೆಗೆ ಸಂಶೋಧಿಸಲ್ಪಟ್ಟಿದೆ. ಹಾವಿನ ವಿಷಗಳನ್ನು ಕಡಿಮೆ ಪ್ರಮಾಣದಲ್ಲಿ ಕುದುರೆಗಳಿಗೆ ಚುಚ್ಚುತ್ತಾ ಹೋಗುವರು. ಬರಬರುತ್ತಾ ವಿಷದ ಪ್ರಮಾಣ ಹೆಚ್ಚಿಸುವರು. ವಿಷವು ದೇಹದಲ್ಲಿ ಸೇರಿದಾಗ ಕುದುರೆಯ ನಿರೋಧಕ ಶಕ್ತಿ ವಿಷದೊಡನೆ ಹೋರಾಡುತ್ತದೆ ಹಾಗೂ ವಿಷವನ್ನು ನಿಶಕ್ತಿಗೊಳಿಸುವ ಪ್ರೋಟೀನ್ ಪದಾರ್ಥ ತಯಾರಿಸುತ್ತದೆ. ಇದೇ ಪ್ರತಿವಿಷ. ಇದನ್ನು ಹಾವು ಕಡಿಸಿಕೊಂಡ ವ್ಯಕ್ತಿಯ ದೇಹದಲ್ಲಿ ಚುಚ್ಚುವರು. ಹಾವಿನ ವಿಷವು ಶಕ್ತಿಗುಂದಿ ವ್ಯಕ್ತಿ ಬದುಕುವನು.

ಕಾಡು ಜನರ ವಿಷ ನಿರೋಧಕತೆ[ಬದಲಾಯಿಸಿ]

ಪ್ರತಿವಿಷಗಳು ಬರುವ ಮೊದಲೇ ಕಾಡು ಜನರು ವಿಷ ನಿರೋಧಕತೆಯನ್ನು ಮನಕಂಡಿದ್ದರು. ಅವರು ವಿವಿಧ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಸಂಗ್ರಹಿಸುತ್ತಿದ್ದರು. ಎಲ್ಲ ವಿಷಗಳನ್ನು ಒಂದು ಬಿದಿರಿನ ಕೊಳವೆಯಲ್ಲಿ ಹಾಕಿ ಇಡುತ್ತಿದ್ದರು. ಮನೆಯಲ್ಲಿಯ ಚಿಕ್ಕ ಚಿಕ್ಕ ಮಕ್ಕಳು ಅಡವಿಯಲ್ಲಿ ಓಡಾಡಲು ಪ್ರಾರಂಭಿಸುವ ವೇಳೆಗೆ ಅವರ ಕಾಲಿಗೆ ಸುಟ್ಟಗಾಯ ಮಾಡುತ್ತಿದ್ದರು. ಈ ಗಾಯವು ಬೇಗನೆ ಮಾಯದಂತೆ ಕೆಲವು ವನಸ್ಪತಿ ಬಳಿಯುತ್ತಿದ್ದರು. ಈ ಗಾಯದ ಮೇಲೆ ಸಂಗ್ರಹಿಸಿ ಇಟ್ಟ ವಿಷಗಳ ಮಿಶ್ರಣವನ್ನು ಸ್ಪಲ್ಪ ಸ್ವಲ್ಪವಾಗಿ ಲೇಪಿಸುತ್ತಿದ್ದರು. ಹೀಗೆ ಕಡಿಮೆ ಪ್ರಮಾಣದಲ್ಲಿ ಮಕ್ಕಳ ದೇಹ ಸೇರುವ ವಿಷ ಜೀವಕ್ಕೆ ಅಪಾಯ ತರುತ್ತಿರಲಿಲ್ಲ. ಬರಬರುತ್ತಾ ಲೇಪನದ ಪ್ರಮಾಣ ಹೆಚ್ಚಿಸುತ್ತಿದ್ದರು. ಕೆಲವು ತಿಂಗಳಲ್ಲಿ ಮಕ್ಕಳು ಎಲ್ಲ ವಿಷಗಳಿಗೆ ನಿರೋಧಕತೆಯನ್ನು ಬೆಳೆಸಿಕೊಳ್ಳುತ್ತಿದ್ದರು. ಇಂಥ ಮಕ್ಕಳಿಗೆ ಮುಂದೆ ಯಾವ ಹಾವು ಕಡಿದರೂ ಏನೂ ಆಗುತ್ತಿರಲಿಲ್ಲ. ಇದನ್ನು ಕಾಡು ಜನರು ತಮ್ಮ ಅನುಭವದಿಂದ ಕಲಿತಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. "Reptile Venom Research". Australian Reptile Park. Archived from the original on 2 February 2010. Retrieved 21 December 2010.
  2. He YY, Lee WH, Zhang Y (September 2004). "Cloning and purification of alpha-neurotoxins from king cobra (Ophiophagus hannah)". Toxicon. 44 (3): 295–303. doi:10.1016/j.toxicon.2004.06.003. PMID 15302536. closed access

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: