ಹಬ್ಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಬ್ಬವು (ಉತ್ಸವ) ಸಾಮಾನ್ಯವಾಗಿ ಒಂದು ಸ್ಥಳೀಯ ಸಮುದಾಯದಿಂದ ಏರ್ಪಡಿಸಲಾಗುವ, ಆ ಸಮುದಾಯದ ಯಾವುದೋ ಒಂದು ಅದ್ವಿತೀಯ ಅಂಶದ ಮೇಲೆ ಕೇಂದ್ರೀಕರಿಸುವ ಮತ್ತು ಅದನ್ನು ಆಚರಿಸುವ ಒಂದು ಸಂದರ್ಭ. ಅನೇಕ ಧರ್ಮಗಳಲ್ಲಿ, ಉತ್ಸವವು ದೇವರು ಅಥವಾ ದೇವತೆಗಳ ಗೌರವಾರ್ಥವಾಗಿ ಏರ್ಪಡಿಸಲಾಗುವ ಆಚರಣೆಗಳ ಒಂದು ಕೂಟ. ಉತ್ಸವ ಮತ್ತು ಹಬ್ಬ ಎರಡೂ ಐತಿಹಾಸಿಕವಾಗಿ ಅದಲು ಬದಲು ಮಾಡಬಲ್ಲವಾಗಿವೆ.

ಉತ್ಸವಗಳು: ಬಹು ಜನ ವಿಶೇಷ ಉತ್ಸಾಹದಿಂದ ನಡೆಸುವ ಕಲಾಪಗಳು. ಜೀವನದ ಮುಖ್ಯ ಆಶಯಗಳು ಈಡೇರಿದಾಗ ಉತ್ಸಾಹ ತೋರಿಸುವುದು ಮಾನವರ ಸಹಜವಾದ ಪ್ರವೃತ್ತಿ. ಉತ್ಸಾಹಸನ್ನಿವೇಶಗಳಲ್ಲಿ ಸಾಮಾನ್ಯವಾಗಿ ಹಲವು ಜನ ಸೇರುತ್ತಾರೆ. ಹೀಗೆ ಜನ ಸೇರಿದಾಗ ಈ ಉತ್ಸಾಹ ಹತ್ತುಪಟ್ಟು ಹೆಚ್ಚಿ ಅದು ಉತ್ಸವದಲ್ಲಿ ಪರಿಣಾಮಗೊಳ್ಳು ತ್ತದೆ. ಉತ್ಸವಗಳು ಎಲ್ಲ ಬಗೆಯ ಜನರಲ್ಲೂ ಎಲ್ಲ ದರ್ಜೆಯ ಜನರಲ್ಲೂ-ಅನಾಗರಿಕರಲ್ಲೂ ನಾಗರಿಕರಲ್ಲೂ ಅನಾದಿ ಕಾಲದಿಂದ ಕಂಡುಬಂದಿರುವ ಸಾಮಾಜಿಕ ಸಂಪ್ರದಾಯಗಳಾಗಿವೆ. ಉತ್ಸವಗಳಲ್ಲಿ ಭಾಗವಹಿಸುವ ಜನರ ಸಂಖ್ಯೆ ಹತ್ತಿಪ್ಪತ್ತರಿಂದ ಹಿಡಿದು ಲಕ್ಷಾಂತರದವರೆಗೆ ಇರುತ್ತದೆ. ಉತ್ಸವ ಸಂದರ್ಭಗಳೂ ಅನೇಕವಾಗಿವೆ. ಹುಟ್ಟು ಹಬ್ಬ, ನಾಮಕರಣ, ಚೌಲ, ಮುಂಜಿ, ಮದುವೆ ಮುಂತಾದವು ಕುಟುಂಬಗಳ ಉತ್ಸವಗಳು. ಯುದ್ಧದಲ್ಲಿ ಜಯ, ಸಾಮಾಜಿಕ ಉದ್ಯಮಗಳ ಮುನ್ನಡೆ, ಕೆರೆ ಕಟ್ಟೆ ಕೋಟೆ ಕೊತ್ತಳಗಳ ನಿರ್ಮಾಣ, ಹೊಸ ಸಂಸ್ಥೆಗಳ ಸ್ಥಾಪನೆ, ಕಲೆಗಾರರ ಮತ್ತು ಮಹಾತ್ಮರ ಸನ್ಮಾನ ಮುಂತಾದ ಸಂದರ್ಭಗಳಲ್ಲಿ ನಡೆಯುವ ಉತ್ಸವಗಳು ಸಾರ್ವಜನಿಕ ಉತ್ಸವಗಳು. ಇವುಗಳಲ್ಲದೆ ಮತಕ್ಕೆ ಸಂಬಂಧಪಟ್ಟ ಉತ್ಸವಗಳು ವಿಶೇಷವಾಗಿ ಇವೆ. ಉತ್ಸವಗಳನ್ನು ಲೌಕಿಕ ಉತ್ಸವಗಳು, ಮತಕ್ಕೆ ಸಂಬಂಧಪಟ್ಟ ಉತ್ಸವಗಳು, ರಾಜಕೀಯ ಸಂಬಂಧವುಳ್ಳ ಉತ್ಸವಗಳು-ಎಂದು ಸಾಮಾನ್ಯವಾಗಿ ವಿಭಾಗಮಾಡ ಬಹುದು. (ನೋಡಿ - ರಾಷ್ಟ್ರೀಯ ಉತ್ಸವಗಳು, ಲೌಕಿಕ ಉತ್ಸವಗಳು) ಹಿಂದಿನ ಕಾಲದಲ್ಲಿ ಎಲ್ಲ ಉತ್ಸವಗಳ ಹಿಂದೆ ಮತಭಾವನೆ ಇದ್ದೇ ಇತ್ತು. ಭಾರತೀಯ ಸಮಾಜದಲ್ಲಿ ಮದುವೆ, ನಾಮಕರಣ, ಚೌಲ ಮುಂತಾದ ಕುಟುಂಬಗಳ ಉತ್ಸವಗಳೂ ರಾಜನ ಪಟ್ಟಾಭಿಷೇಕ, ರಾಜಕೀಯ ವಿಜಯೋತ್ಸವಗಳೂ ಮತಸಂಸ್ಕಾರಗಳಾಗಿಯೇ ಇದ್ದುವು. ಬಹಳ ಕಾಲದವರೆಗೂ ಸಾಮಾನ್ಯವಾಗಿ ರಾಜಕೀಯಕ್ಕೂ ಮತಕ್ಕೂ ನಿಕಟಸಂಬಂಧ ಇತ್ತು. ಇಲ್ಲಿ ಮತಸಂಸ್ಥೆಗಳ ಉತ್ಸವಗಳನ್ನು ಮಾತ್ರ ಕುರಿತು ಪ್ರಸ್ತಾಪ ಮಾಡಲಾಗುತ್ತದೆ. ಪ್ರಪಂಚದ ಎಲ್ಲ ಮತಗಳವರು ತಂತಮ್ಮ ಮತಗಳಿಗೆ ಸಂಬಂಧಿಸಿದಂತೆ ಉತ್ಸವಗಳನ್ನು ಏರ್ಪಡಿಸುತ್ತಾರೆ. ಯೆಹೂದ್ಯರು, ಕ್ರೈಸ್ತರು, ಮುಸ್ಲಿಮರು ವರ್ಷದ ಕೆಲವು ದಿನಗಳಲ್ಲಿ ಪ್ರಾರ್ಥನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇವು ಜಾತ್ರೆಗಳು. ಇಂಥ ಸಂದರ್ಭಗಳಲ್ಲೂ ಉತ್ಸವಗಳು ನಡೆಯುವುದುಂಟು. ಭಾರತದಲ್ಲಿ ಯೆಹೂದ್ಯರು, ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಶೈವರು, ವೈಷ್ಣವರು, ಸಿಖ್ಖರು-ಹೀಗೆ ಹಲವು ಮತಗಳ ಜನರಿದ್ದಾರೆ. ಅವರೆಲ್ಲರೂ ತಮ್ಮ ಮತಕ್ಕೆ ಸಂಬಂಧಪಟ್ಟ ಉತ್ಸವಗಳನ್ನು ನಡೆಸುತ್ತಾರೆ. ಈ ಉತ್ಸವಗಳು ಎರಡು ಬಗೆಯಾಗಿವೆ. ಮುಖ್ಯವಾದ ಮಹಾಪುರುಷರ ಜಯಂತಿಗಳು, ನಾನಕ್ ಜಯಂತಿ, ಬಸವಜಯಂತಿ, ಮಹಾವೀರಜಯಂತಿ, ಶಂಕರಜಯಂತಿ, ಆಳ್ವಾರುಗಳ ತಿರುನಕ್ಷತ್ರಗಳು ಇವು ಒಂದು ಬಗೆಯವು. ಶಿವರಾತ್ರಿ, ಕೃಷ್ಣಜನ್ಮಾಷ್ಟಮಿ, ಶ್ರೀರಾಮನವಮಿ, ಹಳ್ಳಿಯ ಜನರು ನಡೆಸುವ ಮಾರಮ್ಮನ ಉತ್ಸವ ಮುಂತಾದವು ಎರಡನೆಯ ಬಗೆಯವು. ಇಲ್ಲಿ ಮುಖ್ಯವಾಗಿ ಲಕ್ಷಿಸಬೇಕಾದವು ಶಿವ, ವಿಷ್ಣು ದೇವಾಲಯಗಳಲ್ಲಿ ನಡೆಸುವ ಉತ್ಸವಗಳು. ಇವು ನಿತ್ಯೋತ್ಸವ, ಪಕ್ಷೋತ್ಸವ, ಮಾಸೋತ್ಸವ, ಸಂವತ್ಸರೋತ್ಸವಗಳೆಂದು ಪ್ರಸಿದ್ಧವಾಗಿವೆ. ಪ್ರತಿನಿತ್ಯವೂ ಉತ್ಸವಗಳು ನಡೆಯುವುದು ತಿರುಪತಿ, ಮೇಲುಕೋಟೆ, ನಂಜನಗೂಡು, ಶ್ರೀರಂಗ ಮುಂತಾದ ದೊಡ್ಡ ದೇವಸ್ಥಾನಗಳಲ್ಲಿ. ಮಧ್ಯ ದರ್ಜೆಯ ದೇವಸ್ಥಾನಗಳಲ್ಲಿ ಪಕ್ಷೋತ್ಸವಗಳು ನಡೆಯುತ್ತವೆ. ಸಂವತ್ಸರೋತ್ಸವಗಳು ಬಹುಶಃ ಎಲ್ಲ ದೇವಾಲಯಗಳಲ್ಲೂ ನಡೆಯುತ್ತವೆ. ದೇವಸ್ಥಾನಗಳ ಪೂಜೆಗಳಲ್ಲಿ ನಿತ್ಯಪೂಜೆ, ನೈಮಿತ್ತಿಕಪೂಜೆ, ಉತ್ಸವಪೂಜೆ ಎಂದು ಮೂರು ಬಗೆಗಳಿವೆ. ಸಾಧಾರಣವಾಗಿ ನಿತ್ಯವೂ ಒಂದು ಸಲವಾದರೂ ದೇವರಿಗೆ ಪೂಜೆ ಸಲ್ಲಿಸುವುದು ನಿತ್ಯಪೂಜೆ. ನಿತ್ಯಪೂಜೆ ದಿನಕ್ಕೆ ಎರಡು ಸಲ ನಡೆಯುವ ದೇವಾಲಯಗಳೂ ಇವೆ. ತಿರುಪತಿ ವೆಂಕಟೇಶ್ವರ ದೇವಾಲಯದಂಥ ತುಂಬ ಅಭಿವೃದ್ದಿ ಸ್ಥಿತಿಯಲ್ಲಿರುವ ದೇವಾಲಯಗಳಲ್ಲಿ ಕ್ರಮವಾಗಿ ಸೂರ್ಯೋದಯಕ್ಕೆ ಮುಂಚೆ, ಸೂರ್ಯೋದಯಾನಂತರ, ಪುರ್ವಾಹ್ನ, ಮಧ್ಯಾಹ್ನ, ಸಂಜೆ, ರಾತ್ರಿ, ಅರ್ಧಯಾಮದಲ್ಲಿ-ಹೀಗೆ ಆರು ಸಲ ನಿತ್ಯಪೂಜೆ ನಡೆಯುತ್ತದೆ. ಒಂದೊಂದು ಪೂಜೆಯ ಸಮಯದಲ್ಲೂ ದೇವರ ಅಲಂಕಾರಗಳು ಬೇರೆಯಾಗು ತ್ತವೆ. ನಿತ್ಯಪೂಜೆಯ ಜೊತೆಗೆ ಕೆಲವು ದೊಡ್ಡ ದೇವಸ್ಥಾನಗಳಲ್ಲಿ ನೈಮಿತ್ತಿಕಪೂಜೆಯೂ ಉಂಟು. ಈ ನೈಮಿತ್ತಿಕ ಪೂಜೆಗಳು ಉತ್ಸವಗಳಾಗಿ ಪರಿಣಮಿಸುತ್ತವೆ. ಇವೇ ನಿತ್ಯೋತ್ಸವಗಳು. ಇವು ಸಾಮಾನ್ಯವಾಗಿ ದೇವಸ್ಥಾನದ ಒಳಪ್ರಾಕಾರದಲ್ಲಿ ನಡೆಯುತ್ತವೆ. ಆಗ ದೇವರ ಉತ್ಸವಕ್ಕಾಗಿ ಸಣ್ಣಪಲ್ಲಕ್ಕಿಯನ್ನು ಉಪಯೋಗಿಸುತ್ತಾರೆ. ದೇವಸ್ಥಾನದ ಸುತ್ತ ಅಥವಾ ಊರ ಸುತ್ತ, ನಡೆಯುವ ಉತ್ಸವಗಳಲ್ಲಿ ದೊಡ್ಡ ಪಲ್ಲಕ್ಕಿಯನ್ನೂ ಉಪಯೋಗಿಸುತ್ತಾರೆ. ಆಳ್ವಾರುಗಳ ತಿರುನಕ್ಷತ್ರ, ಗಣೇಶ ಚತುರ್ಥಿ, ಶಿವರಾತ್ರಿ, ರಾಮನವಮಿ, ಕೃಷ್ಣಜನ್ಮಾಷ್ಟಮಿ ಇತ್ಯಾದಿ ದಿನಗಳಲ್ಲೂ ಉತ್ಸವಗಳು ನಡೆಯುತ್ತವೆ. ಕೆಲವು ದೇವಾಲಯಗಳಲ್ಲಿ ಉದಾಹರಣೆಗೆ ಗಣೇಶನ ಗುಡಿಯಲ್ಲಿ ಗಣೇಶ ಚತುರ್ಥಿ ವಿಶೇಷೋತ್ಸವ. ಸ್ಕಾಂದ ಷಷ್ಠಿದಿವಸ ಸುಬ್ರಹ್ಮಣ್ಯ ಗುಡಿಯಲ್ಲಿ ವಿಶೇಷೋತ್ಸವ, ರಾಮದೇವರ ಗುಡಿಯಲ್ಲಿ ರಾಮನವಮಿಯಂದು ಉತ್ಸವ, ದುರ್ಗಿ ದೇವಸ್ಥಾನದಲ್ಲಿ ದುರ್ಗಾಷ್ಟಮಿಯಂದು ವಿಶೇಷೋತ್ಸವ, ಕೃಷ್ಣಜಯಂತಿಯ ದಿನ ಕೃಷ್ಣದೇವರ ವಿಶೇಷೋತ್ಸವ. ಆ ದಿವಸ ಸಾಮಾನ್ಯವಾಗಿ ಊರಿನ ಮುಖ್ಯ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯುತ್ತದೆ. ಈ ಉತ್ಸವಗಳಲ್ಲಿ ದೇವರ ಮೆರವಣಿಗೆಗಾಗಿ ಶಾಸ್ತ್ರೀಯವಾಗಿಯೂ ಕಲಾತ್ಮಕವಾಗಿಯೂ ಮಾಡಿದ ಲೋಹದ ವಿಗ್ರಹಗಳಿರುತ್ತವೆ. ಅವಕ್ಕೆ ಅಗತ್ಯವಾದ ಅನೇಕಾನೇಕ ಬೆಲೆ ಬಾಳುವ ಆಭರಣಗಳೂ ವಸ್ತ್ರಗಳೂ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಉತ್ಸವ ವಿಗ್ರಹಗಳನ್ನು ವಾಹನಗಳ ಮೇಲೆ ಕೂಡಿಸಿ ಮೆರವಣಿಗೆ ಮಾಡುವುದೂ ಉಂಟು. ಶಿವನಿಗೆ ಗಜ, ವೃಷಭ, ಕಾಮಧೇನು, ಕುದುರೆ; ಗಣೇಶನಿಗೆ ಇಲಿ; ಸುಬ್ರಹ್ಮಣ್ಯಸ್ವಾಮಿಗೆ ನವಿಲು; ವಿಷ್ಣುವಿಗೆ ಗರುಡ, ಶೇಷ ಮುಂತಾದವು ವಾಹನಗಳು. ಕೆಲವು ದೇವರುಗಳಿಗೆ ನವರತ್ನಖಚಿತವಾದ ಕಿರೀಟಗಳಿರುತ್ತವೆ. ಉದಾ : ವೈರಮುಡಿ, ರಾಜಮುಡಿ. ಇಂಥ ಉತ್ಸವ ಸಂದರ್ಭಗಳಲ್ಲಿ ಆ ಕಿರೀಟಗಳನ್ನು ಉಪಯೋಗಿಸುತ್ತಾರೆ. ವಿಶೇಷ ಉತ್ಸವಗಳಲ್ಲಿ ಹೂವಿನ ಪಲ್ಲಕ್ಕಿ ಮತ್ತು ವಿಮಾನಗಳನ್ನು ಉಪಯೋಗಿಸುತ್ತಾರೆ. ಒಳ ಪ್ರಾಕಾರದಲ್ಲೇ ಉತ್ಸವ ನಡೆಸುವಾಗ ಬೆಳ್ಳಿ ಮತ್ತು ಬಂಗಾರದ ಪಲ್ಲಕ್ಕಿಗಳನ್ನು ಉಪಯೋಗಿಸುತ್ತಾರೆ. ಉತ್ಸವಗಳ ಮೆರವಣಿಗೆಗಳಲ್ಲಿ ಉತ್ಸವವಿಗ್ರಹದ ಹಿಂದೆ ಛತ್ರಿಯನ್ನೂ ಎರಡು ಕಡೆಗಳಲ್ಲೂ ನಾನಾವಿಧವಾದ ಚಾಮರ ಮತ್ತು ಲೋಹದಿಂದ ರಚಿಸಿದ ಬಿರುದಾವಳಿಗಳನ್ನೂ ಲಾಂಛನಗಳನ್ನೂ ಹಿಡಿದವರು ಭಾಗವಹಿಸುತ್ತಾರೆ. ಉತ್ಸವದ ಮುಂದೆ ನಾಗಸ್ವರ, ಡೋಲು, ತಮಟೆ, ಭೇರಿ, ಕಹಳೆ, ಶಂಖ, ಪಣವ, ಆನಕ, ದುಂದುಭಿ ಮುಂತಾದ ವಾದ್ಯಗೋಷ್ಠಿಯವರೂ ಹಿಂಭಾಗದಲ್ಲಿ ವೇದ ಪ್ರಬಂಧ ಮುಂತಾದವನ್ನು ಪಠಿಸುವ ಗೋಷ್ಠಿಯವರೂ ಇರುತ್ತಾರೆ. ಹಿಂದಿನ ಕಾಲದಲ್ಲಿ ಪಂಜಿನವರು ಮೆರವಣಿಗೆಯನ್ನು ಬೆಳಗಿಸುತ್ತಿದ್ದರು. ಈಗಿನ ಕಾಲದಲ್ಲಿ ಅವುಗಳ ಜೊತೆಗೆ ಜನರೇಟರ್ನ ವಿದ್ಯುತ್ ದೀಪಗಳ ಸಾಲುಗಳಿರುತ್ತವೆ. ನರ್ತಕಿಯರೂ ಗಾಯಕರೂ ಕೆಲವು ದೊಡ್ಡ ಮೆರವಣಿಗೆಗಳಲ್ಲಿ ಭಾಗವಹಿಸುತ್ತಾರೆ. ಪಂಡರಾಪುರ ಮತ್ತು ಆಂಧ್ರ ಪ್ರದೇಶಗಳಲ್ಲಿ ಜನ ದೇವರ ಮುಂದೆ ಕುಣಿಯುತ್ತ ದೇವರ ನಾಮಗಳನ್ನು ಹಾಡುತ್ತಾರೆ. ಶ್ರೀರಾಮನವಮಿ ಉತ್ಸವಗಳಲ್ಲಿ ಉತ್ಸವವಿಗ್ರಹದ ಮುಂದೆ ಭಜನೆ ನಡೆಯುತ್ತದೆ. ದೇವರ ಉತ್ಸವಗಳಲ್ಲಿ ತುಂಬ ವಿಜೃಂಭಣೆಯಿಂದ ನಡೆಯುವ ಉತ್ಸವ ರಥೋತ್ಸವ. ಇದನ್ನು ಬ್ರಹ್ಮೋತ್ಸವ ಎಂದೂ ಕರೆಯುವುದುಂಟು. ವಾರ್ಷಿಕೋತ್ಸವದ ಅವಧಿ ಐದು ದಿನಗಳಿಂದ ಹತ್ತು ದಿನಗಳ ಪರ್ಯಂತ ನಡೆಯುತ್ತದೆ. ಕೆಲವು ಕಡೆ ರಥೋತ್ಸವ ಏಳನೆಯ ಅಥವಾ ಒಂಬತ್ತನೆಯ ದಿನ ನಡೆಯುತ್ತದೆ. ಇತರ ದಿನಗಳಲ್ಲಿ ಇತರ ವಾಹನಗಳ ಉತ್ಸವ ನಡೆಯುತ್ತದೆ. ಶ್ರೀರಾಮನವಮಿಯ ಉತ್ಸವದಲ್ಲಿ ಹನುಮಂತೋತ್ಸವ ಮುಖ್ಯ. ವಸಂತೋತ್ಸವವೆನ್ನುವುದು ಮುಕ್ತಾಯದ ಉತ್ಸವ. ರಥೋತ್ಸವಕ್ಕಾಗಿ ಉಪಯೋಗಿಸುವ ರಥ ದೇವಸ್ಥಾನದ ಶಿಖರದ ಮಾದರಿಯಲ್ಲಿರುತ್ತದೆ. ಇದನ್ನು ಬಣ್ಣ ಬಣ್ಣದ ಬಾವುಟಗಳಿಂದ, ಬಟ್ಟೆಗಳಿಂದ, ತಳಿರು ತೋರಣಗಳಿಂದ, ಬಾಳೆಯ ಕಂಬಗಳಿಂದ, ಹೂಗಳಿಂದ ಅಲಂಕರಿಸುತ್ತಾರೆ. ಇದರಲ್ಲಿ ಉತ್ಸವವಿಗ್ರಹವನ್ನು ಕೂಡಿಸುವುದಕ್ಕೆ ರಥಾರೋಹಣವೆಂದು ಹೆಸರು. ರಥಾರೋಹಣವಾದ ಮೇಲೆ ನೂರಾರು ಜನ ರಥಕ್ಕೆ ಕಟ್ಟಿದ, ರಟ್ಟೆಯಷ್ಟು ದಪ್ಪನಾದ ನೂರು ಇನ್ನೂರು ಅಡಿ ಉದ್ದದ ಹಗ್ಗವನ್ನು ಹಿಡಿದು ದೇವಸ್ಥಾನದ ಸುತ್ತ ಪ್ರಧಾನ ಹಾದಿ ಬೀದಿಗಳಲ್ಲಿ ಎಳೆಯುತ್ತಾರೆ. ರಥ ಎಳೆಯುವ ಸಮಯದಲ್ಲಿ ಸುತ್ತ ನಿಂತು ನೋಡುವ ಜನ ಬಾಳೆಹಣ್ಣಿಗೆ ದವನವನ್ನು ಸಿಕ್ಕಿಸಿ ರಥದೊಳಕ್ಕೆ ಎಸೆಯುತ್ತಾರೆ. ರಥವನ್ನು ದೇವಾಲಯದ ಮಾದರಿಯಲ್ಲೇ ಕಟ್ಟಿ ಅಲಂಕರಿಸಿರುವುದರಿಂದ ದೇವರ ಮೆರವಣಿಗೆ ಬೀದಿಯಲ್ಲಿ ಹೊರಟರೆ ದೇವಾಲಯವೇ ಮನೆ ಮನೆಯ ಬಾಗಿಲಿಗೆ ಬಂದಂತಾಗುತ್ತದೆ. ತಮ್ಮ ಮನೆಯ ಮುಂದೆ ಮೆರವಣಿಗೆ ಸಾಗಿದಾಗ ಅನೇಕರು ದೇವರಿಗೆ ಹಣ್ಣು ಕಾಯಿ ಹೂವು ಮತ್ತು ತಾಂಬೂಲವನ್ನು ಸಮರ್ಪಿಸಿ ದೇವರಿಗೆ ಮಂಗಳಾರತಿ ಮಾಡಿಸುತ್ತಾರೆ. ದೇವಾಲಯದೊಳಕ್ಕೆ ಪ್ರವೇಶವಿಲ್ಲದಿರುವ ನೂರಾರು ಜನರಿಗೆ ಕುಂಟರಿಗೆ, ಹೆಳವರಿಗೆ, ಈ ರೀತಿ ದೇವರ ದರ್ಶನ ದೊರೆಯುತ್ತದೆ. ರಥೋತ್ಸವದ ಅವಧಿಯಲ್ಲಿ ಅನೇಕರು ದೇವಸ್ಥಾನದ ಸುತ್ತಮುತ್ತ ಬಯಲಿನಲ್ಲಿ ಕೊಪ್ಪಲುಗಳನ್ನು ಕಟ್ಟಿಕೊಂಡು ಅಲ್ಲಿಗೆ ದೇವರನ್ನು ಬರಮಾಡಿಕೊಂಡು ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ. ಭಕ್ತಾದಿಗಳಿಗೆ ಕೋಸುಂಬರಿ, ಪಾನಕ, ನೀರುಮಜ್ಜಿಗೆ ಕೊಟ್ಟು ಸತ್ಕರಿಸುತ್ತಾರೆ. ಹೆಚ್ಚು ಸೌಕರ್ಯವಿರುವವರು ಮಧ್ಯಾಹ್ನ ನೂರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸುತ್ತಾರೆ. ರಥೋತ್ಸವದ ಸಮಯದಲ್ಲಿ ದೇವಸ್ಥಾನಕ್ಕೆ ಹತ್ತಿರವಿರುವ ಹತ್ತಾರು ಊರಿನವರು ಸಾವಿರಾರು ಜನ ಗುಂಪು ಕಟ್ಟಿಕೊಂಡು ಬಂದು ಸೇರುತ್ತಾರೆ. ಕೆಲವು ರಥೋತ್ಸವಗಳ ಕಾಲದಲ್ಲಿ ದನಜಾತ್ರೆ ನಡೆಯುತ್ತದೆ. ರಥೋತ್ಸವದ ಕಾಲ ಕೇವಲ ದೈವಿಕ ಭಾವವನ್ನು ಸ್ಥಿರೀಕರಿಸಿಕೊಳ್ಳಲು ಒಂದು ಮಹದಾವಕಾಶ ಮಾತ್ರವಲ್ಲ. ಲೌಕಿಕ ವಿನೋದಗಳ ಕಾಲವೂ ಹೌದು. ಈ ಸಂದರ್ಭಗಳಲ್ಲಿ ನಾಟಕ, ಸಿನಿಮಾ ಪ್ರದರ್ಶನಗಳೂ ಉಂಟು. ರಥೋತ್ಸವದ ಕಾಲ ಊರಿನವರ ಸಾಂಘಿಕ ಸಹಕಾರ, ಕಾರ್ಯದಕ್ಷತೆ ಮತ್ತು ಔದಾರ್ಯಭಾವನೆ ಹೊರಹೊಮ್ಮಲು ಒಂದು ಮಹದವಕಾಶ, ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ದೃಢ ದೈವೀಭಾವನೆಯ ಕುರುಹು. ದೇವಸ್ಥಾನದ ಉತ್ಸವಗಳಲ್ಲಿ ಕರಗ ಒಂದು ವಿಶಿಷ್ಟ ಉತ್ಸವ. ಇದನ್ನು ಆಚರಿಸುವ ಜನ ವಿಶೇಷವಾಗಿ ವಹ್ನಿಕುಲ ಕ್ಷತ್ರಿಯ (ತಿಗುಳ)ರು. ಬೆಂಗಳೂರಿನಲ್ಲಿ ನಡೆಯುವ ಆದಿಶಕ್ತಿ ಶ್ರೀ ದ್ರೌಪದಿ ಧರ್ಮರಾಯನ ಕರಗ ಸುಪ್ರಸಿದ್ಧವಾಗಿದೆ. ಇದು ಚಿತ್ರಾಪುರ್ಣಿಮೆಯ ದಿವಸ ನಡೆಯುತ್ತದೆ. ಕರ್ನಾಟಕ ರಾಜ್ಯದಲ್ಲಿ ಮತ್ತು ತಮಿಳುನಾಡಿನ ದೇವಸ್ಥಾನಗಳಲ್ಲಿ ನಡೆಸುವ ದೇವರ ರಥೋತ್ಸವಗಳ, ಜಯಂತಿಗಳ, ತಿರುನಕ್ಷತ್ರಗಳ ಪೈಕಿ ಕೆಲವುಗಳ ಪಟ್ಟಿಯೊಂದನ್ನು ಮುಂದೆ ಕೊಟ್ಟಿದೆ:

ಸ್ಥಳ ತಿಥಿ ಉತ್ಸವದ ಹೆಸರು
ಕೊಳ್ಳೆಗಾಲ ಚೈತ್ರ ಶುಕ್ಲ ಪ್ರಥಮ ರಾಮಲಿಂಗ ಚೌಡೇಶ್ವರೀ ರಥ
ದೇವವೃಂದ ” ” ಪ್ರಸನ್ನ ರಾಮೇಶ್ವರ ರಥ
ಕೂಡ್ಲಿ ” ” ಸಂಗಮೇಶ್ವರ ರಥ
ಕುರುಚೂರು ” ದ್ವಿತೀಯ ಶ್ರೀ ಭೂತೇಶ್ವರಿ ಅಮ್ಮನ ಜಾತ್ರೆ
ನಂಜನಗೂಡು ” ನವಮಿ ಶ್ರೀಕಂಠಮುಡಿ
ಮೇಲುಕೋಟೆ ” ದಶಮಿ ಚಲುವರಾಯಸ್ವಾಮಿ ವೈರಮುಡಿ
ಗುಬ್ಬಿ ” ” ಶ್ರೀ ಬೇಟರಾಯ ರಥ
ನಂಜನಗೂಡು ” ದ್ವಾದಶಿ ಶಿವಪಥ
ಕೊಳ್ಳೇಗಾಲ ” ತ್ರಯೋದಶಿ ಮಹಾವೀರ ಜಯಂತಿ
ಬೇಲೂರು ” ” ಚೆನ್ನಕೇಶವ ರಥ
ತಿರುಮಕೂಡಲು ” ” ಪ್ರಹ್ಲಾದೋತ್ಸವ
ಶ್ರೀರಂಗಪಟ್ಟಣ ” ಪುರ್ಣಿಮೆ ಪ್ರಸನ್ನ ಗಂಗಾಧರ ರಥ
ಬೆಂಗಳೂರು ” ಪುರ್ಣಿಮೆ ಕರಗ
ಹಾಲ್ಮುತ್ತೂರು ಚೈತ್ರಕೃಷ್ಣ ಷಷ್ಠಿ ಲೋಕಪರಮೇಶ್ವರೀ ರಥ
ಕಮಲಶಿಲಾಕ್ಷೇತ್ರ ” ಷಷ್ಠಿ ದುರ್ಗಾಪರಮೇಶ್ವರೀ ರಥ
ಶಿವಮೊಗ್ಗ ವೈಶಾಖ ಶುಕ್ಲ ತೃತೀಯ ಸಂಜೀವಾಂಜನೇಯ ರಥ
ತೀರ್ಥಹಳ್ಳಿ ತಾ. ಆರುಣ ” ” ಬಸವೇಶ್ವರ ಜಯಂತಿ
ಮೈಸೂರು ” ಷಷ್ಠಿ ಪೆರಿಯ ಪರಕಾಲ ಸ್ವಾಮಿಗಳ ತಿರು ನಕ್ಷತ್ರ
ಬೊಮ್ಮಲಾಪುರ ” ದಶಮಿ ಶ್ರೀ ವಾಸವಾಂಬ ಜಯಂತಿ, ವರ್ಧಮಾನ ಕೇವಲಜ್ಞಾನ ಕಲ್ಯಾಣ
ತಲಕಾಡು ” ದ್ವಾದಶಿ ಕೀರ್ತಿನಾರಾಯಣ ರಥ
ತಲಕಾಡು ” ತ್ರಯೋದಶಿ ವೇದವ್ಯಾಸ ಜಯಂತಿ
ಕಂಚಿ ಜ್ಯೇಷ್ಠಶುಕ್ಲ ಚತುರ್ದಶಿ ಗರುಡೋತ್ಸವ, ನಮ್ಮಾಳ್ವಾರ್ ತಿರು ನಕ್ಷತ್ರ
ವಕ್ಕಲಕೇರಿ ಆಷಾಢ ಶುಕ್ಲ ತೃತೀಯ ಮಾರ್ಕಂಡೇಯ ಜಯಂತಿ
ಕುದೇರು ಆಶ್ವಯುಜ ಶುಕ್ಲ ತೃತೀಯ ಶಡಗೋಪದೇಶಿಕರ ತಿರುನಕ್ಷತ್ರ
ಚಿಂತಾಮಣಿ ತಾ. ಕೈವಾರ ” ಅಷ್ಟಮಿ ದುರ್ಗಾ ಜಯಂತ್ಯುತ್ಸವ, ಜೀವದಯಾಷ್ಟಮಿ
ಮೈಸೂರು ಚಾಮುಂಡಿಬೆಟ್ಟ ಆಶ್ವಯುಜ ಶುಕ್ಲ ತ್ರಯೋದಶಿ ಚಾಮುಂಡೇಶ್ವರಿ ರಥ
ತಲಕಾಡು ಕಾರ್ತಿಕ ಕೃಷ್ಣ ಷಷ್ಠಿ ವೈದ್ಯೇಶ್ವರ ರಥ
ಹೊಸೂರು ” ” ಚಿದಂಬರಸ್ವಾಮಿ ರಥ
ಸುಬ್ರಹ್ಮಣ್ಯ ಮಾರ್ಗಶಿರ ಶುಕ್ಲ ಷಷ್ಠಿ ಸುಬ್ರಹ್ಮಣ್ಯ ರಥ
ಹೇಮಗಿರಿ ಪುಷ್ಯ ಶುಕ್ಲ ದ್ವಿತೀಯ ಮಲ್ಲಿಕಾರ್ಜುನ ರಥ ಮತ್ತು ದನಗಳ ಜಾತ್ರೆ
ಚನ್ನಪಟ್ಟಣ ತಾ.ವಂದಾರಗುಪ್ಪೆ ಪುಷ್ಯ ಕೃಷ್ಣ ಪುರ್ಣಿಮೆ ಗರುಡ ಜಯಂತಿ ,ಪುರಂದರದಾಸರ ಪುಣ್ಯದಿನ
ಹರಿಹರ ಶಿವಮೊಗ್ಗ ಜಿ ಮಾಘ ಶುಕ್ಲ ಪುರ್ಣಿಮೆ ಹರಿಹರೇಶ್ವರ ರಥ, ಶಿವಯೋಗಿ ಹಾಲಸ್ವಾಮಿಗಳ ರಥ
ರಾಂಪುರ ಮಾಘ ಕೃಷ್ಣ ದ್ವಿತೀಯ
ಶೃಂಗೇರಿ ” ತೃತೀಯ ಶಾರದಾಂಬಾ ವ್ರತೋತ್ಸವ
ತೇರದಾಳ ಶ್ರಾವಣ ಮಾಸದ ಕೊನೆಯ ಸೋಮವಾರ ಶ್ರೀ ಅಲ್ಲಮಪ್ರಭುದೇವರ ಜಾತ್ತೆ

ಉಲ್ಲೇಖಗಳು[ಬದಲಾಯಿಸಿ]

https://www.festicket.com/festivals/

https://www.quora.com/What-is-the-importance-of-festivals-in-life

https://isha.sadhguru.org/in/en/wisdom/article/importance-of-festivals

"https://kn.wikipedia.org/w/index.php?title=ಹಬ್ಬ&oldid=1182103" ಇಂದ ಪಡೆಯಲ್ಪಟ್ಟಿದೆ