ವಿಷಯಕ್ಕೆ ಹೋಗು

ಹೈಡ್ರೊಫ್ಲೋರಿಕ್ ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೈಡ್ರೊಫ್ಲೋರಿಕ್ ಆಮ್ಲ

ಹೈಡ್ರೊಕ್ಲೋರಿಕ್ ಆಮ್ಲದ ಗುಂಪಿಗೇ ಸೇರಿದ ಹೈಡ್ರೊಜನ್ ಮತ್ತು ಫ್ಲೋರಿನ್ ಸಂಯುಕ್ತದ ದ್ರಾವಣ ಹೈಡ್ರೊಫ್ಲೋರಿಕ್ ಆಮ್ಲ (HF).

ತಯಾರಿಕೆ

[ಬದಲಾಯಿಸಿ]

ಪ್ರಕೃತಿಯಲ್ಲಿ ದೊರಕುವ ಕ್ಯಾಲ್ಸಿಯಂ ಫ್ಲೋರೈಡ್ (ಫ್ಲೋರೋಸ್ಟಾರ್) ಮತ್ತು ಪ್ರಬಲ ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣವನ್ನು ಕಾಯಿಸಿ ಬಟ್ಟಿ ಇಳಿಸಿದರೆ ಹೈಡ್ರೊಜನ್ ಫ್ಲೋರೈಡ್ ಉತ್ಪತ್ತಿಯಾಗುವುದು.

CaF2 + H2SO4 → CaSO4 + 2HF

ಸುಣ್ಣಕಲ್ಲು ಮತ್ತು ಮರಳಿನ ಅಂಶ ಕಡಿಮೆಯಿರುವ ಉತ್ತಮ ದರ್ಜೆಯ ಕ್ಯಾಲ್ಸಿಯಂ ಫ್ಲೋರೈಡ್ ನಿಕ್ಷೇಪಗಳನ್ನು ಛಿದ್ರಿಸಿ ನಯವಾದ ಪುಡಿ ಮಾಡಬೇಕು. ಆ ಪುಡಿಗೆ ೯೬%-೯೮% ಪ್ರಮಾಣದ ಪ್ರಬಲತೆಯ ಸಲ್ಫೂರಿಕ್ ಆಮ್ಲವನ್ನು ಹಾಕಿ ಚೆನ್ನಾಗಿ ಕದಡಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಉಕ್ಕಿನ ಅಥವಾ ಸೀಸ ಅಥವಾ ಮೊನೆಲ್ ಮಿಶ್ರಲೋಹ (ಮುಖ್ಯವಾಗಿ ನಿಕ್ಕಲ್ ಮತ್ತು ತಾಮ್ರ) ಪಾತ್ರೆಗಳಲ್ಲಿ ೨೦೦-೨೫೦ ಸೆಂ. ಗ್ರೇ. ಉಷ್ಣತೆಯ ಮಟ್ಟದಲ್ಲಿ ೩೦-೬೦ ಮಿನಿಟುಗಳವರೆಗೆ ಕಾಯಿಸಿದರೆ ಹೈಡ್ರೊಜನ್ ಫ್ಲೋರೈಡ್ ಅನಿಲ ಹೊರಬೀಳುವುದು. ಇತ್ತೀಚೆಗೆ ಜಲಾಂಶರಹಿತ ಅಂದರೆ ಒಣ ಅಥವಾ ಶುಷ್ಕ ಹೈಡ್ರೊಜನ್ ಫ್ಲೋರೈಡ್ ಅನಿಲಕ್ಕೆ ಹೆಚ್ಚು ಉಪಯೋಗಗಳಿರುವುದರಿಂದ ಉತ್ಪಾದಿತ ಅನಿಲವನ್ನು ನೇರವಾಗಿ ಉಕ್ಕಿನ ಸಿಲಿಂಡರುಗಳಲ್ಲಿ ಒತ್ತಡದಲ್ಲಿಯಾಗಲೀ ಅಥವಾ ದ್ರವರೂಪದಲ್ಲಿಯಾಗಲೀ ಶೇಖರಿಸುವರು. ಹೈಡ್ರೊಫ್ಲೋರಿಕ್ ಆಮ್ಲದ ಅವಶ್ಯಕತೆಯಿದ್ದಾಗ ಅನಿಲವನ್ನು ನೇರವಾಗಿ ನೀರಿನಲ್ಲಿ ಹೀರಿದರೆ ಮೊದಲು ದುರ್ಬಲ ದ್ರಾವಣ ದೊರೆಯುವುದು. ಈ ದುರ್ಬಲ ದ್ರಾವಣವನ್ನು ಸಲ್ಫ್ಯೂರಿಕ್ ಆಮ್ಲದೊಡನೆ ಮಿಶ್ರಮಾಡಿ ಬಟ್ಟಿ ಇಳಿಸುವುದರ ಮೂಲಕ ಪ್ರಬಲ ಆಮ್ಲವನ್ನು ಪಡೆಯುತ್ತಾರೆ. ಶುಷ್ಕ ಅನಿಲಕ್ಕಿಂತ ದ್ರಾವಣವೇ ಅದರಲ್ಲೂ ದುರ್ಬಲ ದ್ರಾವಣ ರಾಸಾಯನಿಕವಾಗಿ ಉಗ್ರ ಚಟುವಟಿಕೆಯುಳ್ಳದ್ದು. ದ್ರಾವಣ ಸಾಮಾನ್ಯ ಎಲ್ಲ ಲೋಹಗಳನ್ನೂ ಗಾಜು, ಮರಳುಗಳನ್ನೂ ತಿಂದು ಹಾಕುವುದು. ಸೀಸ ಅಥವಾ ಪ್ಲಾಟಿನಂ ಲೋಹ ಮತ್ತು ಕೃತಕ ಪ್ಲಾಸ್ಟಿಕ್‌ಗಳು ಈ ಆಮ್ಲ ನಿರೋಧಕಗಳಾದುದರಿಂದ ಆಮ್ಲದ ದ್ರಾವಣವನ್ನು ಇವುಗಳಲ್ಲಿಯೇ ಉಪಯೋಗಿಸಬೇಕು. ಅದೇ ಶುಷ್ಕ ಹೈಡ್ರೊಜನ್ ಫ್ಲೋರೈಡ್ ಅನಿಲವನ್ನು ಉಕ್ಕಿನ ಸಿಲಿಂಡರ್‌ಗಳಲ್ಲಿ ಯಾವ ರಾಸಾಯನಿಕ ಕ್ರಿಯೆಯೂ ಇಲ್ಲದೆ ಶೇಖರಿಸಬಹುದು. ಸಾಮಾನ್ಯವಾಗಿ ಗಾಜನ್ನು ಕರಗಿಸುವ ಶಕ್ತಿಯುಳ್ಳ ಹೈಡ್ರೊಫ್ಲೋರಿಕ್ ಆಮ್ಲವನ್ನು ಅನೇಕರು ಅತ್ಯುಗ್ರ ಆಮ್ಲವೆಂದು ನಂಬಿದರೂ ಅದರ ಉಗ್ರತೆ ಅಥವಾ ಕ್ರಿಯೆ ಆಮ್ಲದ ಪ್ರಬಲತೆ, ಜಲಾಂಶ, ಉಷ್ಣತೆ ಅದರಲ್ಲಿರುವ ಆರ‍್ಸೆನಿಕ್ ಮುಂತಾದ ಅಶುದ್ಧತೆಗಳು- ಇವುಗಳನ್ನವಲಂಬಿಸಿರುತ್ತದೆ. ಆದುದರಿಂದ ಪರಿಸ್ಥಿತಿಗೆ ತಕ್ಕಂತೆ ಉತ್ಪಾದನೆ, ಶೇಖರಣೆ, ಸಾಗಾಣಿಕೆಗಳಿಗೆ ಸೂಕ್ತ ಆಮ್ಲ ನಿರೋಧಕ ವಸ್ತುಗಳನ್ನು ಆರಿಸಿಕೊಳ್ಳಬೇಕು.

ಗುಣಗಳು

[ಬದಲಾಯಿಸಿ]

ಶುಷ್ಕ ಹೈಡ್ರೊಜನ್ ಫ್ಲೋರೈಡ್ ಒಂದು ಬಣ್ಣ ರಹಿತ ಅನಿಲ ಅಥವಾ ದ್ರವ (ಕುದಿ ಬಿಂದು ೧೯.೫೦ ಸೆಂ.ಗ್ರೇ.). ನೀರಿನಲ್ಲಿ ಸುಲಭವಾಗಿ ಲೀನವಾಗುವುದು. ವಾತಾವರಣದ ಸಂಪರ್ಕದಲ್ಲಿ ಹೊಗೆಯಾಡುವುದು. ಚರ್ಮ, ಕಣ್ಣು, ಶ್ವಾಸಕೋಶಗಳಿಗೆ ತೀವ್ರ ಅಪಾಯಕಾರಿ. ದ್ರಾವಣ ರಾಸಾಯನಿಕವಾಗಿ ಚಟುವಟಿಕೆಯುಳ್ಳ ವಸ್ತು. ಆದುದರಿಂದ ಈ ಆಮ್ಲದ ಬಳಕೆಯಲ್ಲಿ ಎಚ್ಚರ ಅತ್ಯವಶ್ಯಕ. ಕೆಲಸಗಾರರಿಗೆ ಸೂಕ್ತ ಆಮ್ಲ ನಿರೋಧಕ ಬಟ್ಟೆಗಳು, ಕಣ್ಣಿಗೆ ಕನ್ನಡಕ, ಮುಖವಾಡ, ಅತಿ ಸಮೀಪದಲ್ಲಿಯೇ ಅವಶ್ಯವಿದ್ದರೆ ಕೃತಕ ಉಸಿರಾಟಕ್ಕೆ ಆಕ್ಸಿಜನ್ನಿನ ಸಿಲಿಂಡರುಗಳು, ವೈದ್ಯಕೀಯ ಸಹಾಯ-ಇವು ಅವಶ್ಯಕ.

ಉಪಯೋಗಗಳು

[ಬದಲಾಯಿಸಿ]

ಬಹು ಕಾಲದಿಂದ ಆಚರಣೆಯಲ್ಲಿರುವ ಮತ್ತು ಈಗಲೂ ಬಳಕೆಯಲ್ಲಿರುವ ಒಂದು ಉಪಯೋಗ ಗಾಜಿಗೆ ಹೊಳಪು ಕೊಡುವುದು ಮತ್ತು ಗಾಜಿನ ಮೇಲೆ ಅಕ್ಷರ, ರೇಖೆಗಳು, ರೇಖಾಚಿತ್ರಗಳು ಮುಂತಾದುವನ್ನು ಕೊರೆಯುವುದು.[] ೧೬೭೦ರಲ್ಲೇ ಈ ಕ್ರಿಯೆಯ ಅರಿವಾಗಿ ಹೈಡ್ರೊಫ್ಲೋರಿಕ್ ಆಮ್ಲ ಆಗಲೇ ಮೊದಲು ತಯಾರಿಸಲಾಯಿತೆಂದು ಭಾವಿಸಬಹುದು. ಆದರೆ ೧೮೧೩-೧೪ರಲ್ಲಿ ಮೊದಲ ಬಾರಿಗೆ ಇದು ಒಂದು ನೂತನ ಮೂಲವಸ್ತು ಫ್ಲೋರಿನ್‌ನ ಸಂಯುಕ್ತವೆಂದು ನಿರ್ಧರಿಸಲಾಯಿತು. ಈಗ ಹೈಡ್ರೊಜನ್ ಫ್ಲೋರೈಡಿಗೆ ಇರುವ ಪ್ರಮುಖ ಉಪಯೋಗವೆಂದರೆ ಫ್ಲೋರಿನ ಸಾವಯವ ಸಂಯುಕ್ತಗಳ ಕೈಗಾರಿಕಾ ತಯಾರಿಕೆ, ಪ್ಲಾಸ್ಟಿಕ್‌ಗಳು, ನೊರೆಯೀಯುವ ವಸ್ತುಗಳು, ಲೋಹಗಳ ತುಕ್ಕು ಸ್ವಚ್ಛ ಮಾಡುವ ದ್ರವಗಳು,[] ರಾಕೆಟ್‌ಗಳಲ್ಲಿ ಚಿಮ್ಮುವಿಕೆಗೆ ಪ್ರಚೋದಕಗಳು, ಇತ್ಯಾದಿ. ಎರಡನೆಯ ಮುಖ್ಯ ಉಪಯೋಗ ವಿದ್ಯುದ್ವಿಭಜನಾ ವಿಧಾನದಿಂದ ಅಲ್ಯೂಮಿನಿಯಂ ಲೋಹ ತಯಾರಿಸುವಾಗ ವಿದ್ಯುತ್ ವಿಶ್ಲೇಷಣೆಗಾಗಿ ಅವಶ್ಯವಾದ ಅಲ್ಯೂಮಿನಿಯಂ ಫ್ಲೋರೈಡ್ ಮತ್ತು ಕೃತಕ ಕ್ರಿಯೊಲೈಟ್‌ಗಳ (Na3AIF6) ಉತ್ಪಾದನೆ. ಮೂರನೆಯದಾಗಿ ಪರಮಾಣು ಶಕ್ತಿ ಉತ್ಪಾದನೆಯಲ್ಲಿ ಮೂಲ ಇಂಧನವಾದ ಯುರೇನಿಯಂ ಲೋಹದ ಉತ್ಪಾದನೆ, ನಾಲ್ಕನೆಯದಾಗಿ ಪೆಟ್ರೋಲಿಯಂ ಎಣ್ಣೆ, ಕೈಗಾರಿಕೆಯಲ್ಲಿ, ವಿಮಾನಗಳಲ್ಲಿ ಬಳಸುವ ಪೆಟ್ರೋಲ್‌ನ ತಯಾರಿಕೆ (ವೇಗವರ್ಧಕವಾಗಿ) ಸ್ಟೈನ್‌ಲೆಸ್ ಸ್ಟೀಲನ್ನು ಸ್ವಚ್ಛಗೊಳಿಸುವುದು, ಲೋಹಗಳ ಎರಕಗಳಿಗಂಟಿರುವ ಮರಳಿನ ನಿರ್ಮೂಲನ, ಫ್ಲೋರಿನ್ ತಯಾರಿಕೆ, ಕೊಳೆ ಬಟ್ಟೆಗಳ ಕಲೆಗಳನ್ನು ತೆಗೆಯುವ ವಸ್ತುಗಳ ತಯಾರಿಕೆ, ವಿಶೇಷ ಬಣ್ಣ ಮತ್ತು ಔಷಧಿಗಳ ತಯಾರಿಕೆ,[] ಖನಿಜಗಳ ರಾಸಾಯನಿಕ ವಿಶ್ಲೇಷಣೆ ಇತ್ಯಾದಿ ಇತರ ಕೆಲವು ಸಾಮಾನ್ಯ ಉಪಯೋಗಗಳು.

ಉಲ್ಲೇಖಗಳು

[ಬದಲಾಯಿಸಿ]
  1. "CDC – The Emergency Response Safety and Health Database: Systemic Agent: HYDROGEN FLUORIDE/ HYDROFLUORIC ACID – NIOSH". www.cdc.gov. Retrieved 2015-12-04.
  2. Strachan, John (January 1999). "A deadly rinse: The dangers of hydrofluoric acid". Professional Carwashing & Detailing. 23 (1). Archived from the original on April 25, 2012.
  3. Aigueperse, Jean; Mollard, Paul; Devilliers, Didier; Chemla, Marius; Faron, Robert; Romano, René; Cuer, Jean Pierre (2000). "Fluorine Compounds, Inorganic". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a11_307. {{cite encyclopedia}}: Cite has empty unknown parameter: |authors= (help)

ಹೊರಗಿನ ಕೊಂಡಿಗಳು

[ಬದಲಾಯಿಸಿ]