ಹಿರಿಯಡ್ಕ ರಾಮರಾಯ ಮಲ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿರಿಯಡ್ಕ ರಾಮರಾಯ ಮಲ್ಯ
Bornಮಾರ್ಚ್ ೩, ೧೮೯೯
Diedಡಿಸೆಂಬರ್ ೧೯, ೧೯೫೫
Movementಭಾರತದ ಸ್ವಾತಂತ್ರ್ಯ ಸಂಗ್ರಾಮ

ಜೀವನ[ಬದಲಾಯಿಸಿ]

ಹಿರಿಯಡ್ಕ ರಾಮರಾಯ ಮಲ್ಯರು ೧೮೯೯, ಮಾರ್ಚ್ ೩ ರಂದು ಜನಿಸಿದರು. ಇವರ ತಂದೆ ಶೇಷಗಿರಿ ಮಲ್ಯ. ಶೇಷಗಿರಿ ಮಲ್ಯರು ಪೆರ್ಡೂರು ಅನಂತ ಪಧ್ಮನಾಭ ದೇವಾಲಯದಲ್ಲಿ ಕರಣಿಕ ವೃತ್ತಿಯನ್ನು ಮಾಡುತ್ತಿದ್ದರು. ಮಗನಿಗೆ ವಿದ್ಯಾಭ್ಯಾಸ ಕೊಡಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದರು. ಹಿರಿಯಡ್ಕ ರಾಮರಾಯ ಮಲ್ಯರು ಮಿಷನ್ ಹೈಸ್ಕೂಲಿನಲ್ಲಿ ಫ್ರೌಢ ಶಿಕ್ಷಣವನ್ನು ಮುಗಿಸಿ, ಮಂಗಳೂರಿನ ಅಲೋಷಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಅವರು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು.[೧]

ಸ್ವಾತಂತ್ರ್ಯ ಹೋರಾಟ[ಬದಲಾಯಿಸಿ]

೧೯೨೦ ನೇ ಆಗಸ್ಟ್ ೧೯ ರಂದು ಗಾಂಧೀಜಿ ಪ್ರಥಮ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದಾಗ, ಅವರ ಜೊತೆಗೆ ಖಿಲಾಫತ್ ನಾಯಕರಾದ ಮೌಲನಾ ಶೌಕತ್ ಅಲಿಯವರು ಜನರಲ್ ಯಾಗು ಬಾ ಹುಸೇನ್ ಅವರೊಂದಿಗಿದ್ದರು. ಮಂಗಳೂರು ನಗರದಲ್ಲಿ ಪ್ರಚಂಡ ಮೆರವಣಿಗೆಯಾಗಿ ಕೇಂದ್ರ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯನ್ನು ಉದ್ದೇಶಿಸಿ ಗಾಂಧೀಜಿಯವರು ಸರಕಾರಿ ಶಾಲೆಯನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದರು. ಅಂದು ಗಾಂಧೀಜಿಯವರ ಸಂದೇಶದಂತೆ ಹಿರಿಯಡ್ಕ ರಾಮರಾಯ ಮಲ್ಯರು ತಮ್ಮ ಶಿಕ್ಷಣವನ್ನು ನಿಲ್ಲಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ನಿರ್ಧರಿಸಿದರು.[೨]

ಹಿರಿಯಡ್ಕ ರಾಮರಾಯ ಮಲ್ಯರ ಶ್ಯಾಮು, ಕಾದಂಬರಿ ರೂಪದಲ್ಲಿರುವ ಅವರ ಆತ್ಮ ಕಥನವಾಗಿದೆ. ಇವರು ತಮ್ಮ ಜೀವನದಲ್ಲಿ ಧರ್ಮ ಮಾರ್ಗವನ್ನು ಅನುಸರಿಸಿದರು. ಉತ್ತಮ ಬರಹಗಾರರಾಗಿದ್ದರಿಂದ ಶ್ರೀ ರಾಮರಾಯ ಮಲ್ಯರು ಆಂಗ್ಲ, ಕನ್ನಡ, ಸಂಸ್ಕೃತ, ಮರಾಠಿ ಭಾಷೆಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ರಾಮರಾಯ ಮಲ್ಯರು ಚಳುವಳಿ ಧರ್ಮ ಯುದ್ಧದ ವಿಚಾರವೆಂದು ಪರಿಗಣಿಸಿದರು. ಇವರು ಬ್ರಿಟಿಷ್ ಪೋಷಿತ ವಿದ್ಯಾಸಂಸ್ಥೆಗಳನ್ನು ಬಹಿಷ್ಕರಿಸಿದ್ದು ಮಾತ್ರವಲ್ಲದೆ ಯೋಗ್ಯ ವಿದ್ಯಾಭ್ಯಾಸದ ಅವಶ್ಯಕತೆಯನ್ನು ಮನಗಂಡು ತಿಲಕ ವಿದ್ಯಾಲಯವೆಂದು ರಾಷ್ಟ್ರೀಯ ಶಾಲೆಯನ್ನು ಆರಂಭಿಸಿ ಅಧ್ಯಾಪಕರಾಗಿ ಸೇವೆಸಲ್ಲಿಸಿದರು.[೧]

ಇವರು ಸತ್ಯಾಗ್ರಹ ತತ್ವವನ್ನು ಜನರಿಗೆ ತಿಳಿಸಬೇಕೆಂದು ಸತ್ಯಾಗ್ರಹಿ ಎಂಬ ಪತ್ರಿಕೆಯನ್ನು ಆರಂಭಿಸಿದರು.[೩] ಈ ಪತ್ರಿಕೆಯು ಅಖಿಲ ಕರ್ನಾಟಕದ ಖ್ಯಾತಿಯನ್ನು ಹೊಂದಿತು. ಈ ಕಾರಣದಿಂದಾಗಿ ಬ್ರಿಟಿಷ್ ಅಧಿಕಾರಿಗಳು ಹಿರಿಯಡ್ಕ ರಾಮರಾಯ ಮಲ್ಯರನ್ನು ಹಾಗೂ ಅವರ ಸಹಭಾಗಿಯಾದ ನಾರಾಯಣರನ್ನು ಬಂಧಿಸಿದರು. ಆ ಸಂದರ್ಭದಲ್ಲಿ ಸತ್ಯಾಗ್ರಹಿ ಪತ್ರಿಕೆಯನ್ನು ವಿ. ಎಸ್. ಕುಡ್ವರವರು ಮುನ್ನಡೆಸಿದರು.

ಹಿರಿಯಡ್ಕ ರಾಮರಾಯ ಮಲ್ಯರವರು ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಿ ಮರಳಿದ ನಂತರ ತಮ್ಮ ಪತ್ರಿಕೆ ಸಂಪಾದಕತ್ವವನ್ನು ಕೈಗೊಂಡರು. ಮಧ್ಯಪಾನ ವಿರೋಧಿ ಸಮಿತಿಯಲ್ಲಿ ಪ್ರಚಾರಕರಾಗಿ ಕಾರ್ಯನಿರ್ವಹಿಸಿದರು ಮತ್ತು ಕನ್ನಡ ಸಹಕಾರಿ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.[೧]

೧೯೩೦ ರಲ್ಲಿ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹದ ಕುರಿತು ತಿಳಿಸಿದರು. ಯಾತ್ರೆಗೆ ಹೊರಟ ಮಲ್ಯರು ಮದ್ಯವಿರೋಧ ಕೆಲಸಕ್ಕೆ ರಾಜಿನಾಮೆ ನೀಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ೬ ತಿಂಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಿದರು. ನಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಜಿಲ್ಲೆಯ ರಾಜಕೀಯ ಕಲಾಪಗಳನ್ನು ಮುನ್ನಡೆಸಿದರು. ಇವರು ಕನ್ನಡ ಸಹಕಾರಿ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಹಿರಿಯಡ್ಕ ರಾಮರಾಯ ಮಲ್ಯರ ಜೀವನದಲ್ಲಿ ಕಾಂಗ್ರೆಸ್‍ನ ಧ್ಯೇಯ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಸತ್ಯಾಗ್ರಹಿ ಪತ್ರಿಕೆಯನ್ನು ಗಾಂಧೀಜಿಯ ಆದರ್ಶದಂತೆ ಆರಂಭಿಸಿಲಾಗಿತ್ತು.

ಪತ್ರಿಕೆಗಳು[ಬದಲಾಯಿಸಿ]

೧೯೩೯ ರಲ್ಲಿ ಮಲ್ಯರು ಭಾರತಾಂಬೆ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಅಲ್ಲದೇ ಕಿಲ್ಲೆಯವರ ಸರ್ವೋದಯ ಹಾಗೂ ಎ. ಎಸ್. ಕಾಮತ್‍ರವರ ಸ್ವದೇಶಿ ಅಭಿಮಾನಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ಸತ್ಯಾಗ್ರಹ, ಸ್ವದೇಶಿ ಅಭಿಮಾನಿ, ಸ್ವಾತಂತ್ರ್ಯ ಭಾರತ, ಚರಕ ಸಂದೇಶ ಮುಂತಾದ ಪತ್ರಿಕೆಗಳನ್ನು ಮುನ್ನಡೆಸಿದರು. ಬಂಟ್ವಾಳ ನಾರಾಯಣ ನಾಯಕ್ ಮತ್ತಿತರರ ನೆರವಿನಿಂದ ಸಮಾಚಾರ ಪತ್ರಿಕೆಯ ಸಂಪಾದಕರಾಗಿ ಕೊನೆಯವರೆಗಿದ್ದರು. ಇವರು ಸೀತಾರಾಮ ಎಂಬ ಗುಪ್ತನಾಮದಿಂದ ಅನೇಕ ಸಣ್ಣ ಕಥೆಗಳನ್ನೂ ಬರೆದಿದ್ದಾರೆ.[೧]

ಮರಣ[ಬದಲಾಯಿಸಿ]

ಇವರು ೧೯೫೫ ರ ಡಿಸೆಂಬರ್ ೧೯ ರಂದು, ತಮ್ಮ ೫೬ ನೇ ವಯಸ್ಸಿನಲ್ಲಿ ನಿಧನರಾದರು.[೧]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ https://www.udayavani.com/articles/special/hiriyadka-ramaraya-mallya
  2. https://www.newindianexpress.com/states/karnataka/2020/aug/15/non-cooperation-movement-was-udupis-first-mass-struggle-2183685.html
  3. https://www.edexlive.com/news/2021/aug/08/gandhian-study-centre-to-document-unsung-events-of-quit-india-movement-in-udupi-23120.html

ಬಾಹ್ಯ ಕೊಂಡಿಗಳು[ಬದಲಾಯಿಸಿ]