ಹಸಿರೆಲೆ ಗೊಬ್ಬರ
ಹಸಿರೆಲೆ ಗೊಬ್ಬರ
[ಬದಲಾಯಿಸಿ]ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳ ಹಿ೦ದಿನಿಂದಲೂ ಬ೦ದ ಪದ್ದತಿ. ಇದು ಮಣ್ಣಿನ ಫಲವತ್ತತೆ ಮತ್ತು ಭೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಬಹಳ ಪರಿಣಾಮಕಾರಿಯಾದ ಪದ್ದತಿ. ರಾಸಾಯನಿಕ ಗೊಬ್ಬರಗಳ ಉಪಯೋಗ ಅಧಿಕವಾಗುತ್ತಾ ಹೋದಂತೆ, ಹಸಿರೆಲೆ ಗೊಬ್ಬರಗಳ ಉಪಯೋಗದ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ . ರಸಗೊಬ್ಬರಗಳ ಬೆಲೆ ಅಧಿಕವಾಗುತ್ತಾ ಹೋಗುತ್ತಿರುವ ಈ ಕಾಲದಲ್ಲಿ , ಸುಲಭವಾಗಿ ಮತ್ತು ಹಗ್ಗವಾಗಿ ಒದಗುತ್ತಿರುವ ಮತ್ತು ಉಪಯೋಗಿಸ ಬಹುದಾದ ಹಸಿರೆಲೆ ಗೊಬ್ಬರಗಳ ಬಗ್ಗೆ ಗಮನಹರಿಸುವುದು ಅವಶ್ಯಕ.[೧]
ಸಸ್ಯಗಳ ಎಲೆ,ಎಲೆಯ ಕಾಂಡ ಮತ್ತು ಬೇರು ಇವುಗಳ ಮೂಲದಿಂದ ದೊರೆಯುವ ಸಾವಯವ ವಸ್ತುಗಳನ್ನು ಹಸಿರೆಲೆ ಗೊಬ್ಬರವೆಂದು ಕರೆಯಬಹುದು. ಹಸಿರೆಲೆ ಗೊಬ್ಬರಗಳಲ್ಲಿ ಮೂರು ಬಗೆಗಳಿವೆ ಅವುಗಳೆಂದರೆ,
೧. ಹಸಿರೆಲೆಯನ್ನೇ ಹೆಚ್ಚು ಕೊಡುವ ವಾರ್ಷಿಕ ಸಸ್ಯಗಳಾದ ಡಯಂಚ, ಅಪ್-ಸೆಣಬು, ಸಸ್ಬೇನಿಯಾ, ಸೋಯಾ ಅವರೆ, ಹೆಸರು, ಅಲಸಂದೆ, ಅವರೆ, ಹುರುಳಿ, ಮುಂತದವು
೨. ಹಸಿರೆಲೆಯನ್ನು ಯಥೆ೯ಚ್ಛವಾಗಿ ಕೊಡುವ ಹೊಂಗೆ, ಬೆವು, ಸುಬಾಬುಲ್, ಗ್ಲಿಸೀಡಿಯಾದಂತ ಬಹುವಾರ್ಷಿಕ ಮರ ಗಿಡಗಳು ಮತ್ತು
೩. ಕಾಯಿ ಆಗುವ ಮುನ್ನವೇ ಕಾಂಪೋಸ್ಟ ಮಾಡಿಕೊಂಡಾಗಲಿ ಅಥವಾ ನೇರವಾಗಿ ಭೂಮಿಯಲ್ಲಿ ಸೇರುವಂತಹ ಸಸ್ಯಗಳು, ಇವುಗಳಲ್ಲಿ ಮುಖ್ಯವಾಗಿ ಎಕ್ಕ, ಉಗನಿ, ಪಾಥೇ೯ನಿಯಂ ಕಮ್ಯೂನಿಸ್ಟ ಗಿಡ( ಕ್ರೊಮೊಲೇನಾ ಕಳೆ) ನೀರು, ಸೊಪ್ಪು ಇತ್ಯಾದಿ. ಸುಸ್ಥಿರ ಕೃಷಿಯಲ್ಲಿ ಹಸಿರೆಲೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಇಳುವರಿಯನ್ನು ಹೆಚ್ಚಿಸುವ ಪ್ರಯತ್ನವಾಗಬೇಕು. ಇದಕ್ಕೆ ಹಸಿರೆಲೆ ಗೊಬ್ಬರದ ಪೂರಕವಾಗಿದೆ.
ಹಸಿರೆಲೆ ಗೊಬ್ಬರದ ಮಹತ್ವ
[ಬದಲಾಯಿಸಿ]೧. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳ ಮೇಲೆ ಅನುಕೂಲಕರವಾದ ಬದಲಾವಣೆ ಸಹಕಾರಿಯಾಗುವುದು.
೨. ಮಣ್ಣಿನಲ್ಲಿ ಸಾವಯವ ಅಂಶವನ್ನು ಕಾಪಾಡಿಕೊಂಡು ಬರುವುದು.
೩. ಮಣ್ಣಿನಲ್ಲಿರುವ ಜೈವಿಕ ಸೂಕ್ಷ್ಮಾಣುಗಳ ಚಟುವಟಿಕೆ ಹಾಗೂ ಅಭಿವೃದ್ದಿಗೆ ನೆರವಾಗುವುದು. ಇದರಿಂದ ಸಾವಯವ ವಸ್ತುಗಳನ್ನು ಕುರಿತು ಅವುಗಳಲ್ಲಿರುವ ಪೋಷಕಾಂಶಗಳು ಬೆಳೆಗೆ ಲಭ್ಯವಾಗುವುದು.
೪. ಮಣ್ಣಿನ ಕೆಳ ಪದರಗಳಲ್ಲಿರುವ ಪೋಷಕಾಂಶಗಳು ಬೆರುಗಳು ಹೀರಿಕೊಳ್ಳುವುದರಿಂದ ಈ ಗಿಡಗಳನ್ನು ಕಿತ್ತು ಮತ್ತೆ ಮಣ್ಣಿನಲ್ಲೇ ಸೇರಿಸುವ ಮೂಲಕ ಆಳದಲ್ಲಿರುವ ಸಸ್ಯ ಪೋಷಕಾಂಶಗಳನ್ನು ಮೇಲ್ಪದರಕ್ಕೆ ತರುವ ಕ್ರಿಯೆ ಉಂಟಾಗುವುದು.
೫. ಹಸಿರೆಲೆ ಗೊಬ್ಬರದ ಸಸ್ಯಗಳು ಮಣ್ಣಿನ ಮೇಲೆ ಹೊದಿಕೆಯಾಗಿರುವುದರಿಂದ ಮಳೆಯ ನೀರು ಹೆಚ್ಚು ಹಿಂಗಿ ಮಣ್ಣು ಕೊಚ್ಚಿಹೋಗುವುದು ಕಡಿಮೆಯಾಗುವುದಲ್ಲದೆ ಮಣ್ಣಿನಲ್ಲಿ ತಾಪ ಕಡಿಮೆಯಾಗುವುದು.
೬. ವಾತಾವರಣದಲ್ಲಿರುವ ಸಾರಜನಕದ ಸ್ಥಿರೀಕರಣ ಕ್ರಿಯೆಯಲ್ಲಿ ನೆರೆವಾಗುವುದು.
೭. ಸಸ್ಯಗಳ ಕಳಿಯುವಿಕೆಯಾಗುವಾಗ ಹೊರಬರುವ ಆಮ್ಲಗಳಿಂದ ಪೋಷಕಾಂಶಗಳ ಲಭ್ಯತೆ ಹೆಚ್ಚುವುದು.
೮. ಕ್ಷಾರ ಮಣ್ಣಿನ ಸುಧಾರಣೆಯಲ್ಲಿ ನೆರೆವಾಗುವುದು.
೯. ಜಂತು ಹುಳಿವಿನ ಬಾದೆಯ ನಿತಂತ್ರಣದಲ್ಲೂ ನೆರವಾಗುವುದು.
ಹಸಿರೆಲೆ ಗೊಬ್ಬರವನ್ನು ಬಳಸುವ ವಿಧಾನ
[ಬದಲಾಯಿಸಿ]ಹಸಿರೆಲೆ ಗೊಬ್ಬರಕ್ಕೆಂದೇ ಯೋಗ್ಯವಾದ ದ್ವಿದಳ ಬೆಳೆಗಳನ್ನು ೭ ರಿಂದ ೮ ವಾರಗಳ ಕಾಲ ಮುಖ್ಯ ಭೂಮಿಯಲ್ಲಿ ಬೆಳೆದು, ಸಸ್ಯಗಳು ಕಾಯಿ ಆಗುವ ಮೊದಲು ಭೂಮಿ ಉಳಿಮೆ ಮಾಡುವುದರ ಮೂಲಕ ಸೇರಿಸುವುದು. ಎರಡನೇ ಪದ್ಧತಿಯಲ್ಲಿ ಬೇಕಾಗುವ ಹಸಿರೆಲೆ ಸೊಪ್ಪನ್ನು ಕೃಷಿ ಜಮೀನಿನ ಬದುಗಳ ಮೇಲೆ ಬೆಳೆದಾಗ, ಕೃಷಿಗೆ ಯೋಗ್ಯವಲ್ಲದ ಜಮೀನುಗಳಲ್ಲಿ ಬೆಳೆದು ಹಸಿರೆಲೆ, ಮೃದುವಾದ ಕಾಂಡದ ಸಹಿತ ತಂದು ಬಿತ್ತನೆ/ನಾಟಿಕೆ ಮುಂಚೆ ಭೂಮಿಗೆ ಸೇರಿಸುವುದು.
ಹಸಿರೆಲೆ ಗೊಬ್ಬರದ ಬೆಳೆಯ ವಿಶೇಷ ಗುಣಗಳು
[ಬದಲಾಯಿಸಿ]- ಹಸಿರೆಲೆ ಗೊಬ್ಬರದ ಸಸ್ಯಗಳು ತ್ವರಿತವಾಗಿ ಬೆಳೆದು ಕಡಿಮೆ ಅವಧಿಯಲ್ಲಿ ಹೆಚ್ಚು ಸೊಪ್ಪನ್ನು ಕೊಡುವಂತಿರಬೇಕು.
- ಕಡಿಮೆ ನಾರಿನಿಂದ ಕೂಡಿದ್ದು ಮಣ್ಣಿನಲ್ಲಿ ಸೇರಿಸಿದಾಗ ಸುಲಭವಾಗಿ ಹಾಗೂ ಶೀರ್ಘವಾಗಿ ಕಳಿಯುವಂತಿರಬೇಕು.
- ಕಡಿಮೆ ಫಲವತ್ತತೆ ಇರುವ ಭೂಮಿಯಲ್ಲೂ, ಶುಷ್ಕ ವಾತಾವರಣದಲ್ಲೂ ಅಲ್ಪ ಪ್ರಮಾಣದಲ್ಲಿ ನೀರನ್ನು ಬಳಸಿಕೊಂಡು ಸುಲಭವಾಗಿ ಬೆಳೆಯುವಂತಿರಬೇಕು.
- ಆಳವಾಗಿ ಬೇರು ಬಿಡುವ ಮಣ್ಣಿನ ಕೆಳಪದರಗಳಿಂದ ನೀರು ಹಾಗೂ ಪೋಷಕಾಂಶಗಳನ್ನು ಉಪಯೋಗಿಸಿಕೊಂಡು ಬೆಳೆಯುವ ಗುಣವಿರಬೇಕು.
- ದ್ವಿದಳ ಧಾನ್ಯ ವಗ೯ಕ್ಕೆ ಸೇರಿದ್ದು ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುವಂಥ ಗುಣವುಳ್ಳದ್ದಾಗಿರಬೇಕು. ಅಲ್ಲದೆ, ಬೇರಿನಲ್ಲಿ ಹೆಚ್ಚು ಸಾರಜನಕವನ್ನು ಕೂಡಿಡುವ ಶಕ್ತಿ ಹೊಂದಿರಬೇಕು.
- ಬಹು ಉಪಯೋಗಿ ಬೆಳೆಯಾಗಿರಬೇಕು.
- ನೆರಳಿನಲ್ಲಿ ಬೆಳೆಯುವ ಹಾಗೂ ಹವಮಾನಕ್ಕನುಸಾರವಾಗಿ ಬೆಳೆಯವ ಗುಣ ಮತ್ತು ಹೆಚ್ಚು ಬೀಜವನ್ನೇ ಕೊಡುವ ಸಸ್ಯವಾಗಿರಬೇಕು.
- ಯಾವುದೇ ಕಾಲದಲ್ಲು (ಹುಲುಸಾಗಿ) ಫಲವತ್ತಾಗಿ ಬೆಳೆಯುವ ಗುಣ ಮತ್ತು ಹೆಚ್ಚು ಬೀಜವನ್ನು ಕೊಡುವ ಸಸ್ಯವಾಗಿರಬೇಕು.
- ರಾಸಾಯನಿಕ ಗೊಬ್ಬರಗಳ ಪ್ರಮಾಣ ಕಡಿಮೆ ಕೊಟ್ಟಲ್ಲಿಯೂ ಬೆಳೆಯ ಇಳುವರಿಯ ಪ್ರಮಾಣ ಕಡಿಮೆಯಾಗದಿರಬೇಕು.
- ಜಾನುವಾರುಗಳಿಗೆ ಒಳ್ಳೆಯ ಮೇವನ್ನು ಒದಗಿಸುವಂತಿರಬೇಕು.
ಮೇಲೆ ಹೇಳಿದ ಎಲ್ಲಾ ಗುಣಗಳು ಒಂದೇ ವಗ೯ದ ಸಸ್ಯದಲ್ಲಿ ಇರುವುದು ದುಲ೯ಭ. ಆದ್ದರಿಂದ ಹಸಿರೆಲೆ ಗೊಬ್ಬರದ ಬೆಳೆಯನ್ನು ಆಯ್ಕೆ ಮಾಡುವಾಗ ಸ್ಥಳೀಯ ಸನ್ನಿವೇಶದಲ್ಲಿ ಚೆನ್ನಾಗಿ ಬೆಳೆಯುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆಯುವ ವಿಧಾನಗಳು
[ಬದಲಾಯಿಸಿ]೧. ಮುಖ್ಯ ಬೆಳೆಯನ್ನು ಬೆಳೆಯುವ ಅವಧಿಯ ಮುನ್ನ ಅಥವಾ ನಂತರ ಸಾಮಾನ್ಯವಾಗಿ ಕಾಲಾವಧಿಯಲ್ಲಿ ಚೆನ್ನಾಗಿ ಮಳೆಯಾದ ವಷ೯ಗಳಲ್ಲಿ ಅಲಸಂದೆ/ಹೆಸರು/ಉದ್ದು ಹಾಗು ಅಪ್ ಸೆಣಬು ಬೆಳೆಗಳನ್ನು ಹಸಿರೆಲೆ ಗೊಬ್ಬರದ ಬೆಳೆಯಾಗಿ ಬೆಳೆದುಕೊಂಡು ಲಭ್ಯವಾಗುವ ಕಾಯಿಯನ್ನು ಮನೆಗೆ ಅವಶ್ಯಕವಾದ ತರಕಾರಿಯಾಗಿ ಬಳಸುವುದು, ಹಾಲು ಕೊಡುವ ಹಸುಗಳಿಗೆ ಮೇವಿಗಾಗಿ ಬಳಸುವುದು,ಇವೆಲ್ಲಕ್ಕೂ ಉಪಯೋಗವಾಗಿ ಇನ್ನೂ ಉಳಿದಿರುವ ಗಿಡದ ಶೇಷ ಭಾಗಗಳನ್ನು ಮಣ್ಣಿಗೆ ಹಸಿರೆಲೆ ಗೊಬ್ಬರವಾಗಿ ಸೇರಿಸಬಹುದಾಗಿದೆ.ಕೆಲವು ವಷ೯ ಮುಂಗಾರು ಮಳೆ ನವೆಂಬರ್- ಡಿಸೆಂಬರ್ ತಿಂಗಳುಗಳವರೆಗೂ ಮುಂದುವರಿದಾಗ ಆಳದ ಭೂಮಿಗಳಲ್ಲಿ ಅಲಸಂದೆ/ ಹುರಳಿ ಬೆಳೆಗಳನ್ನು ಬಿತ್ತಿ ಜಾನುವಾರುಗಳಿಗೆ ಹಸಿರು ಮೇವನ್ನಾಗಿ ಉಪಯೋಗಿಸಿಕೊಳ್ಳುವುದರ ಜೊತೆಗೆ ಮಣ್ಣಿಗೂ ಸೇರಿಸಬಹುದಾಗಿದೆ.
ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರು ನೀರಿನ ಸೌಕಾಯ೯ವಿದ್ದ ಪಕ್ಷದಲ್ಲಿ ಬೇಸಿಗೆ ಬೆಳೆ ಕಟಾವಿನ ನಂತರ ಜೂನ್ ತಿಂಗಳಿನಲ್ಲಿ ಅಪ್ ಸೆಣಬು, ಡಯಾಂಚ ಅಥವಾ ಸಸ್ಬೇನಿಯಾ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಮುಖ್ಯ ಭೂಮಿಯಲ್ಲಿ ಬೆಳೆಯಬಹುದು. ಬಿತ್ತಲು ಹೆಕ್ಟೇರಿಗೆ ೫೦-೬೩ ಕಿ.ಗ್ರಾಂ ಬೀಜವನ್ನು ಉಪಯೋಗಿಸಬೇಕು ಬಿತ್ತನೆಗೆ ಮುಂಚೆ ಬೀಜಕ್ಕೆ ಜೈವಿಕ ಗೊಬ್ಬರಗಳಿಂದ ಲೇಪನ ಮಾಡಿ ಕೈಯಿಂದ ಚೆಲ್ಲಿ. ದೊಡ್ಡದಾಗಿ ಬೆಳೆದುಕೊಂಡು ಕಳೆಗಳನ್ನು ಕೈಯಿಂದ ತೆಗೆದು ಹಾಕುವುದು ಅವಶ್ಯಕ. ಬೆಳೆ ಹುಲುಸಾಗಿ ಬರಲು ಹೆಕ್ಟೇರಿಗೆ ೩೮ ಕಿ.ಗ್ರಾಂ ಡಿ,ಎ,ಪಿ, ರಸಗೊಬ್ಬರ ಕೊಟ್ಟರೆ ಅನುಕೂಲವಾಗುತ್ತದೆ. ಹೂ ಬರುವ ಕಾಲಕ್ಕೆ ಬೆಳೆಯನ್ನು ಭೂಮಿಯಲ್ಲಿ ಸೇರುವಂತೆ ಉಳುಮೆ ಮಾಡಿಕೊಂಡು ನಂತರ ಬಿತ್ತನೆ/ನಾಟಿ ಮಾಡಲು ಭೂಮಿ ಸಿದ್ಧತೆ ಮಾಡಿಕೊಳ್ಳಬೇಕು.[೨]
೨. ಬದುಗಳ ಮೇಲೆ ಹಸಿರೆಲೆ ಕೊಡುವ ಗಿಡಗಳಾದ ಸಸ್ಬೇನಿಯಾ ಗ್ಲಿರಿಸೀಡಿಯಾಗಳನ್ನು ಬದುಗಳ ಮೇಲ ೩-೪ ಅಡಿ ಅಂತರದಲ್ಲಿ ನೆಟ್ಟು ಆರೈಕೆ ಮಾಡಿ ಬೆಳೆಸುವುದರ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಹಸಿರೆಲೆ ಗೊಬ್ಬರ ಲಭ್ಯವಾಗುತ್ತದೆ.
೩. ಹಸಿರೆಲೆ ಗೊಬ್ಬರಗಳ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು ದೀಘಾ೯ವಧಿ ಬೆಳೆಗಳಲ್ಲಿ ಎರಡು ಸಾಲುಗಳ ನಡುವೆ ಹೆಚ್ಚಿನ ಅಂತರ ಕೊಡುವುದರಿಂದ ಕೆಲವು ದ್ವಿದಳ ಧಾನ್ಯಗಳನ್ನು ಹಸಿರೆಲೆ ಗೊಬ್ಬರವಾಗಿ ಬೆಳೆದು ಸುಮಾರು ೭-೮ ವಾರಗಳ ನಂತರ ಮಣ್ಣಿನಲ್ಲಿ ಸೇರಿಸಬಹುದಾಗಿದೆ.
ಹಸಿರೆಲೆ ಗೊಬ್ಬರವಾಗಿ ಬಳಸಬಹುದಾದ ದ್ವಿದಳ ಧಾನ್ಯ ಬೆಳೆಗಳು ವಾತಾವರಣದ ಸಾರಜನಕವನ್ನೇ ಹೀರಿ ಬೇರಿನ ಗಂಟುಗಳಲ್ಲಿ ಶೇಖರಿಸುವ ಪ್ರಮಾಣ.
ಕ್ರ. ಸಂ | ದ್ವಿದಳ ಧಾನ್ಯ ಬೆಳೆಗಳು | ಸಾರಜನಕ ಪ್ರಮಾಣ (ಕಿ. ಗ್ರಾಂ /ಹೆ. ) |
---|---|---|
೧. | ಅಲಸಂದೆ | ೩೦-೯೬ |
೨ | ಕಡಲೆ | ೧೯-೧೦೮ |
೩ | ತೊಗರಿ | ೧೬-೩೫ |
೪ | ಸೋಯಾ ಅವರೆ | ೫೦-೭೦ |
೫ | ನೆಲಗಡಲೆ | ೧೨-೫೨ |
೬ | ಕುದುರೆ ಮಸಾಲೆ ಸೊಪ್ಪು | ೬೫-೧೨೦ |
ವಿವಿಧ ಹಸಿರೆಲೆ ಗೊಬ್ಬರದ ಸಸ್ಯಗಳಲ್ಲಿ ದೊರೆಯುವ ಸಸ್ಯಪೋಷಕಾಂಶಗಳ ಪ್ರಮಾಣ (ಕಿ.ಗ್ರಾಂಗಳಲ್ಲಿ)
ಕ್ರ.ಸಂ | ಹಸಿರೆಲೆ ಗೊಬ್ಬರದ | ಪ್ರತಿ ೧೦೦ಕಿ.ಗ್ರಾಂ ಗಳಿಗೆ ದೊರಕುವ ಪ್ರಮಾಣ | |||
---|---|---|---|---|---|
ಸಸ್ಯಗಳು | ಸಾರಜನಕ | ರಂಜಕ | ಪೊಟ್ಯಾಷ್ | ಸುಣ್ಣ | |
೧ | ಅಪ್ ಸೆಣಬು | ೦.೮೯ | ೦.೧೨ | ೦.೫೧ | - |
೨ | ಡಯಾಂಚ | .೦.೬೮ | ೦.೧೩ | ೦.೪೦ | - |
೩ | ಗ್ಲಿರಿಸೀಡಿಯಾ | ೦.೬೮ | ೦.೧೬ | ೦.೩೦ | - |
೪ | ಸಸ್ಬೇನಿಯಾ | ೦.೭೦ | ೦.೧೪ | ೦.೭೫ | - |
೫ | ಕೊಳಂಜಿ | ೦.೭೯ | ೦.೨೦ | ೦.೬೦ | - |
೬ | ಹೊಂಗೆ | ೦.೧೬ | ೦.೧೪ | ೦.೪೯ | ೧.೫೪ |
೭ | ಎಕ್ಕಾ | ೦.೪೨ | ೦.೧೨ | ೦.೬೭ | ೦.೨೦ |
೮ | ಲಂಟಾನ | ೦.೮೮ | ೦.೧೫ | ೦.೯೦ | ೦.೬೧ |
೯ | ಅಲಸಂದೆ | ೦.೭೧ | ೦.೧೫ | ೦.೫೮ | - |
೧೦ | ಹುರಳಿ | ೦.೯೧ | ೦.೧೮ | ೦.೬೫ | - |
೧೧ | ಉದ್ದು ಮತ್ತುಹೆಸರು | ೦.೮೨ | ೦.೧೮ | ೦.೫೨ | - |
೧೨ | ಕಮ್ಯೂನಿಸ್ಟ್ ಗಿಡ (ಕ್ರೊಮೊಲೇನ ಕಳೆ) | ೧.೫೪ | ೦.೬೨ | ೧.೪೪ | ೧.೦೪ |
ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಸಪೋಟ ಇತ್ಯಾದಿ ಮರಗಳ ಮಧ್ಯದಲ್ಲಿ ಮೇ/ಜೂನ್ ತಿಂಗಳು ಉಳುಮೆ ಮಾಡಿ, ಬೀಜ ಬಿತ್ತುವುದು ಮತ್ತು ಹುಲುಸಾಗಿ ಬೆಳೆದ ಹಸಿರೆಲೆ ಗೊಬ್ಬರವನ್ನು ಜುಲೈ/ಆಗಸ್ಟ್ ನಲ್ಲಿ ಮಣ್ಣಿನಲ್ಲಿ ಸೇರಿರುವುದು. ಇದೇ ರೀತಿ ಕೆಲವು ತೋಟಗಾರಿಕೆ ಬೆಳೆಗಳಿಗೆ ಪ್ರಾರಂಭದಲ್ಲಿ ನೆರಳು ಗಟ್ಟಲು ಅನುಕೂಲವಾಗುವಂತೆ ಗ್ಲಿರಿಸೀಡಿಯಾ, ಸಸ್ಬೇನಿಯಾಗಳನ್ನು ಬೆಳೆಯುವುದು ರೂಢಿಯಲ್ಲಿದೆ. ಈ ಬೆಳೆಗಳು ಎತ್ತರಕ್ಕೆ ಬೆಳೆದಾಗ ಹಸಿರೆಲೆ ಗೊಬ್ಬರಕ್ಕೆ ಉಪಯೋಗಿಸಬಹುದು.
ಹಸಿರೆಲೆ ಗೊಬ್ಬರವನ್ನು ಬಳಸುವಲ್ಲಿನ ತೊಡಕುಗಳು
[ಬದಲಾಯಿಸಿ]೧. ಎಲ್ಲಾ ತರಹದ ಸಸ್ಯ ವಗ೯ಗಳನ್ನು ಹಸಿರೆಲೆ ಗೊಬ್ಬರದ ಗಿಡಗಳನ್ನಾಗಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ.
೨. ಉತ್ತಮ ಗುಣಮಟ್ಟ ಹಾಗೂ ಉತ್ಕೃಷ್ಟ ಹಸಿರೆಲೆ ಬೆಳೆ ಬೆಳೆಯಲು ಯೋಗ್ಯ ಕೃಷಿ ಭೂಮಿಯ ಕೊರತೆ.
೩. ಕಡಿಮೆ ಅವಧಿಯಲ್ಲಿ ಹುಲುಸಾಗಿ ಬೆಳೆದು ಹೆಚ್ಚು ಹಸಿರೆಲೆ ಕೊಡುವ ಸಸ್ಯ ವಗ೯ಗಳು ಹಾಗೂ ತಳಿಗಳ ಕೊರತೆ.
೪. ನೀರಿನ ಅನುಕೂಲವಿಲ್ಲದಿರುವ ಕಡೆ ಹಾಗೂ ಮುಂದಿನ ಮುಖ್ಯ ಬೆಳೆಗಳಿಗೆ ಭೂಮಿ ತಯಾರಿಮಾಡಿಕೊಳ್ಳಲು ತಡವಾಗುವುದರಿಂದ ಹಸಿರೆಲೆ ಸೊಪ್ಪು ಕೊಡುವ ಮರಗಳು ವಾಷಿ೯ಕ ಹಸಿರೆಲೆ ಗೊಬ್ಬರದ ಬೆಳೆಗಳಿಗಿಂತ ಅನಾನುಕೂಲಕರ.
೫. ಬೆಳೆದ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಸಕಾಲದಲ್ಲಿ ಭೂಮಿಗೆ ಸೇರಿಸದಿದ್ದರೆ ( ಹೂ ಬರುವ ಹಂತ ) ನಾರಿನಂಶ ಹೆಚ್ಚಾಗಿ ಕಳಿಯುವಿಕೆ ಕ್ರಮೇಣ ಕ್ಷೀಣಿಸುವುದರ ಜೊತೆಗೆ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದಿಲ್ಲ.
ಒಟ್ಟಾರೆ ಹೇಳುವುದಾದರೆ ರೈತರು ಹಸಿರೆಲೆ ಗೊಬ್ಬರವನ್ನು ಬಳಸುವುದರಿಂದ ರಾಸಾಯನಿಕ ಗೊಬ್ಬರಗಳಿಗೆ ಖಚಾ೯ಗುತ್ತಿದ್ದ ಹಣವನ್ನು ಕಡುಮೆ ಮಾಡುವುದರ ಜೊತೆಗೆ ಮಣ್ಣಿನ ಆರೋಗ್ಯ ಅಂದರೆ, ಫಲವತ್ತತೆ ಮತ್ತು ಉತ್ಪಾದನಾ ಸಾಮಥ್ಯ೯ವನ್ನು ಅಭಿವೃದ್ಧಿಪಡಿಸಿಕೊಂಡು ಹೆಚ್ಚಿನ ಇಳುವರಿ ಹಾಗೂ ಅಧಿಕ ಲಾಭವನ್ನು ಗಳಿಸಬಹುದು.
ನೋಡಿ
[ಬದಲಾಯಿಸಿ]- ಅಮೃತಜಲವೆಂಬ ಗೊಬ್ಬರ;ಪ್ರಜಾವಾಣಿ ವಾರ್ತೆ;29 Nov, 2016 Archived 2016-11-29 ವೇಬ್ಯಾಕ್ ಮೆಷಿನ್ ನಲ್ಲಿ.
ಉಲೇಖ
[ಬದಲಾಯಿಸಿ]- ↑ Heinrich Dittmar, Manfred Drach, Ralf Vosskamp, Martin E. Trenkel, Reinhold Gutser, Günter Steffens "Fertilizers, 2. Types" in Ullmann's Encyclopedia of Industrial Chemistry, 2009, Wiley-VCH, Weinheim. doi:10.1002/14356007.n10_n01
- ↑ Heinrich W. Scherer "Fertilizers" in Ullmann's Encyclopedia of Industrial Chemistry, 2000, Wiley-VCH, Weinheim. doi:10.1002/14356007.a10_323.pub3