ಸೋಮನಾಥ ದೇವಸ್ಥಾನ, ಸೋಮೇಶ್ವರ
ಸೋಮನಾಥ ದೇವಸ್ಥಾನ, ಸೋಮೇಶ್ವರ
[ಬದಲಾಯಿಸಿ]ಸೋಮನಾಥ ದೇವಾಲಯ, ಮಂಗಳೂರಿನ ಸೋಮೇಶ್ವರ ಗ್ರಾಮದಲ್ಲಿ ನೆಲೆಸಿದ್ದು, ಮಂಗಳೂರು ನಗರದಿಂದ ದಕ್ಷಿಣಕ್ಕೆ ಸುಮಾರು 6 ಮೈಲು ದೂರದಲ್ಲಿದೆ. ಸೋಮನಾಥ ದೇವರ ಸಾನಿಧ್ಯದಿಂದಲೇ ಈ ಗ್ರಾಮಕ್ಕೆ ಸೋಮೇಶ್ವರ ಎಂಬ ಹೆಸರು ಬಂದಿದೆ.ಇದು ನಿಸರ್ಗರಮಣಿಯ ಪ್ರದೇಶವಾಗಿದ್ದು, ದೇವಾಲಯದ ಹಿಂಬದಿಯಲ್ಲಿರುವ ಸಮುದ್ರರಾಜನು ನಿತ್ಯವೂ ತನ್ನ ಬೋರ್ಗರೆಯುವ ಅಲೆಗಳಿಂದ ಸೋಮನಾಥನನ್ನು ಪೂಜಿಸುತ್ತಿದ್ದಾನೆ. ದೇವಾಲಯದ ಹಿಂಬದಿಯ ಸಮುದ್ರತಟದಲ್ಲಿರುವ ಶಿಲೆಯ ಮೇಲೆ ರುದ್ರ ಪಾದದ ಗುರುತು ಇರುವುದರಿಂದ ಈ ಕ್ಷೇತ್ರವನ್ನು‘ರುದ್ರಪಾದಕ್ಷೇತ್ರ’ವೆಂದೂ ಕರೆಯುತ್ತಾರೆ. ಈ ಮಹಾಶಿಲೆಯ ತೆಂಕುಬದಿಯಲ್ಲಿ ಸಮುದ್ರರಾಜನು ಸೌಮ್ಯನಾಗಿರುವುದರಿಂದ ಯಾತ್ರಿಕರು ಹಾಗೂ ಆಸ್ತಿಕರೂ ಸಮುದ್ರ ಸ್ನಾನ ಮಾಡುತ್ತಾರೆ. ಸ್ಕಂದಪುರಾಣದಲ್ಲೂ ಈ ಕ್ಷೇತ್ರವನ್ನು ರುದ್ರಪಾದಕ್ಷೇತ್ರವೆಂದು ಕರೆದ ಐತಿಹ್ಯವಿದೆ. ಪೂರ್ವ ದಿಕ್ಕಿನ ಹೊರಗೋಪುರದ ಕೆಳಗೆ ಕರಿಶಿಲೆಯ 27 ಸೋಪಾನ ಪಂಕ್ತಿಗಳು ಮುಗಿದೊಡನೆ ಪಂಚದುರ್ಗಿಯ ಗುಡಿಯನ್ನೂ ಕಾಣಬಹುದಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಮೊದಲು ಪಂಚದುರ್ಗೆಗುಡಿಗೆ ಕೈಮುಗಿದು ಸೋಮನಾಥನ ದರ್ಶನಕ್ಕೆ ಬರುತ್ತಾರೆ.[೧]
ಶಿವಲಿಂಗ ಪ್ರತಿಷ್ಠಾಪನೆ ರಹಸ್ಯ
[ಬದಲಾಯಿಸಿ]ಇಲ್ಲಿನ ಶಿವಲಿಂಗವನ್ನು ತ್ರೇತಾಯುಗದ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಎಂಬ ನಂಬಿಕೆಯಿದೆ.ಭಾರತ ದೇಶದ ದಕ್ಷಿಣಪಥವನ್ನು ತ್ರೇತಾಯುಗದ ರಾಮಾಯಣಕಾಲದಲ್ಲಿ ದಂಡಕಾರಣ್ಯವೆಂದು ಕರೆಯಲಾಗುತ್ತಿತ್ತು. ಇಲ್ಲಿನ ಜನಸ್ಥಾನವೆಂಬಲ್ಲಿ ಲಂಕಾಧಿಪತಿ ರಾವಣಾಸುರನ ಸಂಬಂಧಿಕನಾದ ಖರಾಸುರನು ರಾಜ್ಯವಾಳುತ್ತಿದ್ದನು. ಇಲ್ಲಿನ ಎಲ್ಲಾ ಶಿವ ದೇವಸ್ಥಾಗಳನ್ನು ಈತನೇ ಪ್ರತಿಷ್ಠಾಪಿಸಿದ್ದು ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ, ಸಾಮಾನ್ಯವಾಗಿ ಈ ಊರಿನ ಎಲ್ಲಾ ಶಿವ ದೇವಸ್ಥಾನಗಳನ್ನು ‘ಖರಾಸುರ ಪ್ರತಿಷ್ಠೆ’ ಎಂದೇ ಹೇಳಲಾಗುತ್ತದೆ. ಹೀಗಾಗಿ ಸೋಮನಾಥ ದೇವಸ್ಥಾನವೂ ಖರಾಸುರನಿಂದ ಪ್ರತಿಷ್ಠಾಪಿತವಾದುದೆಂದು ಹೇಳಲಾಗುತ್ತದೆ. ಖರಾಸುರನು ಒಂದೇ ದಿನ ಪ್ರತಿಷ್ಠೆ ಮಾಡಲೆಂದು ಮೂರು ಶಿವಲಿಂಗಗಳನ್ನು ತಂದನು. ಮೊದಲನೆಯದನ್ನು ಸೋಮೇಶ್ವರದಲ್ಲೂ, ತಲೆಯಲ್ಲಿ ಹೊತ್ತು ತಂದಿರುವ ಎರಡನೆಯದನ್ನು ಶಿರದಕಲ್ಲು ಎಂದು ಸುರತ್ಕಲ್ಲಿನಲ್ಲೂ, ಮೂರನೆಯದನ್ನು ಅದರ ಉತ್ತರ ದಿಕ್ಕಿನ ಉಚ್ಚಿಲದಲ್ಲೂ ಪ್ರತಿಷ್ಠೆ ಮಾಡಿದನು. ಈ ಮೂರೂ ಕ್ಷೇತ್ರಗಳೂ ಸಮಾನ ದೂರದಲ್ಲಿದೆ ಎನ್ನುವುದು ವಿಶೇಷ.
ಪರಂಪರಾಗತ ಐತಿಹ್ಯ
[ಬದಲಾಯಿಸಿ]ಹಿಂದೆ ಗುರ್ಜರ ದೇಶವನ್ನಾಳುತ್ತಿದ್ದ ವೀರಬಾಹು ಎಂಬ ರಾಜನು ತಾನು ಮಾಡಿದ ತಪ್ಪಿಗಾಗಿತನ್ನ ಕೈಗಳನ್ನು ಕತ್ತರಿಸಿಕೊಂಡು, ಬಂಗಾರದ ಕೃತಕ ಕೈಗಳನ್ನು ಹೊಂದಿ ಕನಕಬಾಹು ಎಂಬ ಹೆಸರು ಹೊಂದಿದ್ದ ಈತ ಕ್ಷೇತ್ರ ಸಂದರ್ಶನಾರ್ಥವಾಗಿ ಹಡಗಿನಲ್ಲಿ ಹೊರಟಿದ್ದಾಗ, ಬಿರುಗಾಳಿಯ ರಭಸಕ್ಕೆ ಸಿಲುಕಿ ಹಡಗು ಒಡೆದು ಹೋದಾಗ, ಹಡಗಿನ ಹಲಗೆಯೊಂದರ ಸಹಾಯದಿಂದ ಸೋಮೇಶ್ವರದ ರುದ್ರಪಾದ ಎಂಬ ಬಂಡೆಕಲ್ಲಿನ ಬಳಿಯಿರುವ ಕೆರೆಗೆ ಬಂದು ಬಿದ್ದನಂತೆ. ಆ ಸಮಯದಲ್ಲಿ ಅಲ್ಲಯೇ ಪಕ್ಕದಲ್ಲಿದ್ದ ರುದ್ರಶಿಲೆಯ ಬಳಿ ಹಸು ಮತ್ತು ಹುಲಿಯೊಂದು ಆಟವಾಡುತ್ತಿದ್ದುದನ್ನು ಕಂಡು ಆಶ್ಚರ್ಯಗೊಂಡು ಈ ಸ್ಥಳ ಅತ್ಯಂತ ಕಾರ್ಣಿಕ ಸ್ಥಳವೆಂದು ಆತನಿಗೆ ಭಾಸವಾಯಿತು.ಅಲ್ಲಿಯೇ ಸ್ವಲ್ಪದೂರದಲ್ಲಿ ಅಶ್ವತ್ಥಕಟ್ಟೆಯಿತ್ತು, ಅಲ್ಲಿ ಅರಸನು ವಿಶ್ರಾಂತಿಗೆಂದು ನಿದ್ದೆ ಮಾಡಿದಾಗ ಆತನಿಗೆ ‘ಅಲ್ಲಿ ಮೇಲೆ ಪೊದೆಯಲ್ಲಿ ಒಂದು ಶಿವಲಿಂಗ ಇದ್ದು, ಅದನ್ನು ಶೋಧಿಸಿ ದೇವಸ್ಥಾನ ಕಟ್ಟಿದರೆ ನಿನ್ನತುಂಡಾದ ಕೈ ಮತ್ತೆ ಮೊದಲಿನಂತಾಗುತ್ತದೆ’ ಎಂಬ ಅಶರೀರ ವಾಣಿಯೊಂದು ಕನಸಲ್ಲಿ ಕೇಳಿಸುತ್ತದೆ. ಹಾಗೆ ಶೋಧಿಸಿದಾಗ, ಪೊದರುಗಳ ನಡುವೆ ಶಿವಲಿಂಗ ಕಾಣಿಸಿತಂತೆ. ನಂತರ ಊರವರನ್ನು ಸೇರಿಸಿ ಅವರ ಸಹಕಾರದಿಂದ ಆ ಶಿವಲಿಂಗಕ್ಕೊಂದು ಗುಡಿ ಕಟ್ಟಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದನಂತೆ. ಅರಸನಿಗೆ ಚಿನ್ನದ ಕೈಗಳ ಬದಲಾಗಿ ನಿಜವಾದ ಕೈಗಳೇ ಮೂಡಿದವಂತೆ. ಅನಂತರ ಕೋಟೆಯ ರೂಪದಲ್ಲಿ ದೇವಸ್ಥಾನವನ್ನು ರಚಿಸಿ ಪಕ್ಕದಲ್ಲಿಯೇ ಅರಮನೆ ಸ್ಥಾಪಿಸಿ ವೈಭವದಿಂದ ಪೂಜೆ, ಉತ್ಸವ ನಡೆಸಿಕೊಂಡು ಬರುತ್ತಿದ್ದನೆಂಬುದು ಇಲ್ಲಿನ ಪರಂಪರಾಗತ ಐತಿಹ್ಯ.
ಮಹಾಭಾರತದ ಉಲ್ಲೇಖ
[ಬದಲಾಯಿಸಿ]ದ್ರೌಪದಿ ಸ್ವಯಂವರಕ್ಕಿಂತ ಮೊದಲು ಪಾಂಡವರು ಅರಗಿನ ಮನೆಯನ್ನು ಸುಟ್ಟು, ಬ್ರಾಹ್ಮಣವೇಷದಿಂದ ಹೊರಹೊರಟು ತಲೆಮರೆಸಿಕೊಂಡಿದ್ದಾಗ, ಬಕಾಸುರ ವಧೆಗಿಂತ ಮೊದಲು ಈ ಊರಿಗೆ ಬಂದಿದ್ದರೆಂಬ ವದಂತಿಯಿದೆ. ಹಾಗೆಯೇ ಈ ರುದ್ರಪಾದಕ್ಷೇತ್ರದ ಸಮುದ್ರದ ಸ್ನಾನಘಟ್ಟದಲ್ಲಿ ತೀರ್ಥಸ್ನಾನ ಮಾಡಿದ ಮೇಲೆ ತಣ್ಣೀರಲ್ಲಿ ಸ್ನಾನ ಮಾಡುವುದಕ್ಕಾಗಿ ಅಲ್ಲೇ ಇದ್ದ ಸಣ್ಣದಾಗಿದ್ದ ಕೆರೆಯನ್ನು ಭೀಮನು ತನ್ನ ಗದೆಯನ್ನೇ ನೆಲಕ್ಕೆ ಬಡೆದು ದೊಡ್ಡದಾಗಿಸಿದನೆಂದು ಹೇಳುತ್ತಾರೆ. ಆದ್ದರಿಂದ ವಿಶಾಲವಾದ ಈ ಕೆರೆಗೆ ‘ಗದಾತೀರ್ಥ’ವೆಂದು ಹೆಸರು ಬಂದಿದೆ. ಹೀಗೆ ಈ ಕ್ಷೇತ್ರಕ್ಕೆ ರಾಮಾಯಣ ಹಾಗೂ ಮಹಾಭಾರತದ ಉಲ್ಲೇಖವೂ ಇರುವುದರಿಂದ ಈ ಕ್ಷೇತ್ರದ ಪ್ರಾಚೀನತೆಯನ್ನು ಹೆಚ್ಚಿಸಿದೆ.
ಕ್ಷೇತ್ರ ಪರಿಚಯ
[ಬದಲಾಯಿಸಿ]ಕೈಲಾಸ ಶಿಖರವಾಸಿಯಾದ ಶಿವನ ಮಂದಿರವು ಎಲ್ಲಾ ಕಡೆ ಎತ್ತರದಲ್ಲಿಯೇ ಇರುವಂತೆ ಇಲ್ಲಿಯೂ ಕೂಡ ಎತ್ತರವಾದ ಬಂಡೆಕಲ್ಲಿನ ಮೇಲೆ ನೆಲೆಸಿದೆ. ಸಮುದ್ರ ತೀರದಲ್ಲಿ ಎತ್ತರವಾದ ಸ್ಥಳದಲ್ಲಿ ಸುತ್ತಲು ಬಂಡೆಕಲ್ಲುಗಳ ನೆಲಗಟ್ಟಿನ ಮೇಲೆ ಶ್ರೀ ಸೋಮನಾಥದೇವರ ಶಿಲಾಮಯ ಸುಂದರ ಮಂದಿರವು ಭದ್ರವಾಗಿ ಕೋಟೆಯ ಆಕಾರದಲ್ಲಿ ನೆಲೆನಿಂತಿದೆ. ಸೋಮನಾಥ ದೇವಸ್ಥಾನದ ಸ್ಥಾಪನೆಯು ಕ್ರಿ.ಶ. 10ನೇ ಶತಕದ ಮೊದಲೇ ಆಗಿರಬಹುದು. ಇತಿಹಾಸ ಸಂಶೋಧಕರು ಇಲ್ಲಿಯ ಪ್ರಾಚೀನತೆಯ ಬಗ್ಗೆ ಸಂಶೋಧನೆ ನಡೆಸುವ ತನಕ ಇಲ್ಲಿಯ ಸ್ಥಳ ಪುರಾಣ, ನಡವಳಿಕೆ, ಆಚಾರ ವಿಚಾರದಲ್ಲಿ ದಂತಕಥೆಗಳನ್ನೇ ನಂಬಬೇಕಾಗುವುದು. ಈ ದೇವಾಲಯವು ಎತ್ತರದ ಶಿಲೆಯ ಮೇಲೆ ಸ್ಥಾಪನೆಯಾಗಿದೆ. ಅಲ್ಲದೆ ಸಮುದ್ರದ ಕೆಳಗೆಶಿಲೆಯ ಬದಿಯಲ್ಲಿ 2 ಗುಹೆಗಳಿವೆ. ದೇವಾಲಯದ ಎದುರು ಸುಮಾರು 6 ಅಡಿ ಎತ್ತರದ ಚೌಕಾಕಾರದ ಕಲ್ಲಿನ ಪ್ರಧಾನ ಪೀಠವು ಕಾಣಸಿಗುತ್ತದೆ. ಪೀಠದ ಶಿಲ್ಪ ಶೈಲಿಯು 10ನೇ ಶತಕದ್ದಿರಬೇಕೆಂದು ತೋರುತ್ತದೆ. ದೇವಸ್ಥಾನದ ಒಳಗೆ ಅಂಗಣದಲ್ಲಿ ಬಲಭಾಗದ ಪೌಳಿಯಲ್ಲಿ ಸಪ್ತಮಾತೃಕಾ ವಿಗ್ರಹಗಳನ್ನು ಕಾಣಬಹುದು. ಅದರಲ್ಲಿರುವ ವಿಗ್ರಹಗಳು ಶಿಲಾಮೂರ್ತಿಗಳಾಗಿದ್ದು, ಶಿಲ್ಪ ಶೈಲಿಯು ಕ್ರಿ.ಶ.10ನೇ ಶತಕದ ಸುಮಾರಿಗೆ ನಿರ್ಮಿಸಿರುವಂತೆ ತೋರುತ್ತದೆ. ಪ್ರತಿಯೊಂದು ಬಿಂಬವು 1-2 ಅಡಿಗಳಷ್ಟು ಎತ್ತರವಿದ್ದು, ಲಲಿತಾಸನದಲ್ಲಿದೆ. ಸೋಮನಾಥದೇವಾಲಯದ ಮೂಲಸ್ಥಾನ ದೇವತೆಯು ಈಶ್ವರ ಸೋಮನಾಥ ಲಿಂಗವನ್ನೊಳಗೊಂಡು, ಗರ್ಭಗೃಹವು ಚೌಕಾಕಾರದ ಒಂದು ಗುಡಿಯಾಗಿದೆ. ಲಿಂಗದ ಎಡ ಮತ್ತು ಬಲ ಭಾಗ ಪೀಠದಲ್ಲಿ ಶಿವ, ಪಾರ್ವತಿ, ಬಲಿಮೂರ್ತಿಗಳಿವೆ. ಸಾಂಪ್ರದಾಯಿಕವಾಗಿ ಒಂದು ಕತ್ತಲೆ ಪ್ರದಕ್ಷಿಣೆ ಪಥವಿದೆ. ದ್ವಾರದಲ್ಲಿ ಮೇಲೆ ಎದುರು ಎರಡು ಬದಿಯಲ್ಲಿ ಮರದಲ್ಲಿ ಕೆತ್ತಿದ ದ್ವಾರಪಾಲಕರ ವಿಗ್ರಹ ಇದೆ. ಗರ್ಭಗುಡಿಯ ದ್ವಾರದಲ್ಲಿಯ ಆನೆಕಲ್ಲುಗಳು ಆನೆಯ ಮುಖದ ಮತ್ತು ಮುಮದಣೆರಡು ಕಾಲುಗಳ ಶಿಲ್ಪವನ್ನೊಳಗೊಂಡಿದೆ. ಈ ದೇವಾಲಯವಿರುವ ಪ್ರದೇಶವು ಕೋಟೆಯಿಂದ ಆವರಿಸಲ್ಪಟ್ಟಿರುತ್ತದೆ. ಇತಿಹಾಸದಲ್ಲಿ ಚಿರಸ್ಥಾಯಿಯಾಗಿರುವ ಉಳ್ಳಾಲದ ರಾಣಿ ಅಬ್ಬಕ್ಕ ಸೋಮನಾಥ ದೇವರ ಅನನ್ಯ ಭಕ್ತಳಾಗಿದ್ದಲ್ಲದೆ, ಈ ದೇವಸ್ಥಾನಕ್ಕೆ ಬೆಳ್ಳಿಯ ಜಲದ್ರೋಣಿಯೋದನ್ನು ಭಕ್ತಿಯಿಂದ ಅರ್ಪಿಸಿದ್ದಳು, ಅದು ಈಗಲೂ ಈ ಕ್ಷೇತ್ರದಲ್ಲಿ ಕಾಣಸಿಗುತ್ತದೆ.
ದೇವಸ್ಥಾನದ ಆಸು-ಪಾಸಿನಲ್ಲಿ
[ಬದಲಾಯಿಸಿ]ನಾಗಬನ:ಸೋಮನಾಥ ದೇವಸ್ಥಾನದ ಆಗ್ನೇಯ ದಿಕ್ಕಿನಲ್ಲಿ ನಾಗಬನವಿದೆ. ಅದರ ವೈಶಿಷ್ಟ್ಯವೆಂದರೆ ಅಲ್ಲಿರುವ ವಿಶಾಲವಾದ ಹಿರಿದಾದ ಬಂಡೆಒಡೆದು ನಾಗಹೆಡೆಯಂತೆ ಕಾಣುವ ಉದ್ಭವ ನಾಗಶಿಲೆಯನ್ನು ನೋಡಬಹುದಾಗಿದೆ. ಎಲ್ಲಾ ಕಡೆ ಶಿಲ್ಪಿಯಿಂದ ರಚಿತವಾದ ನಾಗನ ಕಲ್ಲನ್ನು ಪೂಜಿಸುವುದಾದರೆ, ಇಲ್ಲಿ ಪ್ರಾಕೃತಿಕವಾಗಿ ಸೃಷ್ಟಿಯಾದ ದೊಡ್ಡ ನಾಗನ ಕಲ್ಲನ್ನು ಪೂಜಿಸಲಾಗುತ್ತದೆ. ಇದೊಂದು ಪ್ರೇಕ್ಷಣೀಯವಾದ ನಾಗಶಿಲೆಯಾಗಿದ್ದು, ಇಲ್ಲಿ ಪ್ರತೀ ವರ್ಷವೂ ನಾಗರಪಂಚಮಿಯಂದು ಭಕ್ತಾದಿಗಳು ತಂದ ಹಾಲನ್ನೆರೆದು ವಿಶೇಷವಾಗಿ ಪೂಜಿಸಲಾಗುತ್ತದೆ. ಸದ್ದುಗದ್ದಲವಿಲ್ಲದೇ ಮನಃಶಾಂತಿ ನೀಡುವ ಈ ಸ್ಥಳ ನೋಡಲು ಮನಮೋಹಕವಾಗಿದೆ.ಈ ನಾಗಬನದ ಹಿಂಬದಿಯಲ್ಲಿ ಹೂವಿನ ಕೊಪ್ಪಲವಿದೆ. ಮೊದಲೆಲ್ಲಾ ದೇವರಿಗೆ ಬೇಕಾದ ಹೂಗಳನ್ನು ಅಲ್ಲಿಯೇ ನೆಟ್ಟು ಬೆಳೆಸುತ್ತಿದ್ದರು. ಅಲ್ಲದೆ ಇದರ ಬದಿಯಲ್ಲಿ ಒಂದು ಸುಂದರವಾದ ಕೆರೆಯಿದೆ. ಅದರಲ್ಲಿ ಹಿಂದೆ ರಾಣಿಯವರು ಸ್ನಾನ ಮಾಡುತ್ತಿದ್ದರು ಎಂದು ತಿಳಿದುಬರುತ್ತದೆ. ಆದಿಶಕ್ತಿ ಪಂಚದುರ್ಗೆಯರ ಗುಡಿ: ದೇವಸ್ಥಾನದ ಪ್ರವೇಶದ್ವಾರದ ಬಳಿಯೇ ಇರುವ ಪಂಚದುರ್ಗೆಯರ ಗುಡಿಯ ಮುಂಬಾಗದಿಂದಲೇ ಮೆಟ್ಟಿಲುಗಳನ್ನೇರಿ ಸೋಮನಾಥನ ದರ್ಶನಕ್ಕೆ ತೆರಳಬೇಕಾಗುತ್ತದೆ. ಮೂಲದುರ್ಗಾ, ಜಲದುರ್ಗಾ, ಅಗ್ನಿದುರ್ಗಾ, ವನದುರ್ಗಾ, ಆಗ್ರದುರ್ಗಾ ಎಂಬ ಪಂಚದುರ್ಗೆಯರು ಇಲ್ಲಿ ವಾಸವಾಗಿದ್ದಾರೆ ಎಂಬುವುದು ನಂಬಿಕೆ. ಶ್ರೀ ಪಂಚದುರ್ಗಿ ಅಮ್ಮನವರಿಗೆ ನವರಾತ್ರಿಯ 9 ದಿನಗಳ ಪೂಜೆಯು ಮತ್ತು ನಿತ್ಯ ಪ್ರಥಮ ನೈವೇದ್ಯ ಪೂಜೆಯಾದ ಬಳಿಕ ಸೋಮನಾಥದೇವರಿಗೆ ಪೂಜೆ ಸಲ್ಲುವುದು ಇಲ್ಲಿನ ವಿಶೇಷವಾಗಿದೆ. ಅರಸುಕಟ್ಟೆ: ಇಲ್ಲಿಅಶ್ವತ್ಥ ಮರವಿರುವ ಕಟ್ಟೆಯಿದ್ದು, ಅರಸನು ವಿಶ್ರಾಂತಿಗಾಗಿ ಇಲ್ಲಿಯೇ ಮಲಗಿದ್ದ ಕಾರಣ ಈ ಸ್ಥಳಕ್ಕೆ ಅರಸುಕಟ್ಟೆಯೆಂಬ ಹೆಸರು ಬಂದಿದೆ. ನಾಗಬನದ ಬಲಭಾಗದಲ್ಲಿ ಬೃಹತ್ ಅಶ್ವತ್ಥ ಮರವನ್ನು ಕಾಣಬಹುದಾಗಿದೆ. ಗದಾತೀರ್ಥಕೆರೆ: ದೇವಸ್ಥಾನ ಉತ್ತರ ದಿಕ್ಕಿನಲ್ಲಿ ಕೆಳಗೆ ವಿಶಾಲವಾದ ಕೊಳವಿದೆ. ಸಮುದ್ರಕ್ಕೆ ತೀರಾ ಸಮೀಪವಿದ್ದರೂ ಇದರ ನೀರಿಗೆ ಉಪ್ಪಿನ ರುಚಿ ಸೋಕಿಲ್ಲ. ಭೀಮನ ಗದೆಯ ತುದಿಯಿಂದ ಈ ಕೆರೆ ರೂಪುಗೊಂಡಿತ್ತೆಂಬ ಇತಿಹಾಸವಿದೆ. ಹಿಂದೆ ಬಹಳ ಆಳವಾಗಿದ್ದ ಕೆರೆಯಲ್ಲಿ ತಾವರೆಯ ಬಳ್ಳಿ ಹಬ್ಬಿಕೊಂಡಿತ್ತು. ಈಗ ಈ ಕೆರೆಯ ದುರಸ್ಥಿ ಕಾರ್ಯ ಕೈಗೊಂಡು ಸಮುದ್ರತೀರದ ಬಳಿಯ ಕೆರೆಯು ಪ್ರೇಕ್ಷಕರನ್ನು ಸೆಳೆಯುತ್ತಿದೆ.[೨]
ನಾಲ್ಕು ದೇವರುಗಳ ಗುಡಿ
[ಬದಲಾಯಿಸಿ]ದೇವಸ್ಥಾನದ ಹೊರ ಅಂಗಣದಲ್ಲಿ ಸುತ್ತಲೂ ನಾಲ್ಕು ದೇವರುಗಳ ಗುಡಿಗಳನ್ನು ಕಾಣಬಹುದಾಗಿದೆ.
- ಶ್ರೀ ಸಿದ್ಧಿವಿನಾಯಕ ದೇವರಗುಡಿ- ಇದು ಶಿಲಾಮಯ ದೇವಗೃಹವಾಗಿದ್ದು, ಈ ಗುಡಿಯ ಎಲ್ಲಾ ಲಕ್ಷಣಗಳಿಂದ ಕ್ರಿ.ಶ.10ನೇ ಶತಕದ ಶಿಲ್ಪ ಅಗಿರಬಹುದೆಂದು ಸಂಶೋಧನೆಗಳಿಂದ ಊಹಿಸಲಾಗಿದೆ. ಇದು ಕುಳ್ಳು ಶಿಲ್ಪಗಳಿಂದಲೂ ಸಮುದ್ರಕುದುರೆಗಳಿಂದಲೂ ಗೂಡು ದ್ವಾರಗಳಿಂದಲೂ ಹಾಗೂ ಇನ್ನಿತರ ವಿನ್ಯಾಸಗಳಿಂದಲೂ ಕೂಡಿದೆ. ಗಣೇಶ ವಿಗ್ರಹವು ಜಟಾಮುಕುಟಧಾರಿಯಾಗಿದ್ದು, ಮೇಲಿನ ಎರಡು ಕೈಗಳಲ್ಲಿ ಅಂಕುಶ ಮತ್ತು ರುದ್ರಾಕ್ಷಿ ಸರವನ್ನು, ಕೆಲಗಣ ಎರಡು ಕೈಗಳಲ್ಲಿ ದಂತ ಮತ್ತು ಲಡ್ಡು[ಕಡುಬು]ಗಳನ್ನು ಹಿಡಿದುಕೊಂಡ ನೋಟವಿದೆ. ಈ ಗಣೇಶ ವಿಗ್ರಹದ ವೈಶಿಷ್ಟ್ಯವೇನೆಂದರೆ ಸೊಂಡಿಲಿನಿಂದ ತನ್ನ ಕೈಯಲ್ಲಿದ್ದ ಭಕ್ಷ್ಯವನ್ನು ಆಘ್ರಾಣಿಸುತ್ತಿರುವನು. ಅಂತೆಯೇ ಈ ಕಟ್ಟಡವು ಸೌಂದರ್ಯ ಮತ್ತು ಪ್ರಮಾಣಗಳ ಪ್ರತೀಕವಾಗಿದೆ. ಸಿದ್ಧಿ ವಿನಾಯಕ ದೇವರಿಗೆ ಪ್ರತಿನಿತ್ಯ ಅರ್ಧ ಸೇರು ಅಕ್ಕಿ ನೈವೇದ್ಯ ಮತ್ತು ಪರ್ವಕಾಲ ಉತ್ಸವ ಸಮಯರಂಗ ಪೂಜೆ, ಅಪ್ಪದ ಪೂಜೆ, ಚೌತಿಗೆ ಗಣಹೋಮ, ಸಮಾರಾಧನೆ ಅಲ್ಲದೆ ಭಕ್ತರ ಅಪ್ಪದ ಪೂಜೆ, ಪಂಚಕಜ್ಜಾಯ, ಹಾಲು ಪಾಯಸ ಇತ್ಯಾದಿ ಪೂಜೆಗಳು ನಡೆಯುತ್ತಿರುತ್ತದೆ.
- ಶ್ರೀ ಪಾರ್ಥಸಾರತಿ ಗೋಪಾಲಕೃಷ್ಣ ಗುಡಿ- ಪಾರ್ಥಸಾರತಿಯೆಂಬ ಶ್ರೀ ಗೋಪಾಲಕೃಷ್ಣ ದೇವರು ಈ ಗುಡಿಯಲ್ಲಿ ಪ್ರತಿಷ್ಠಾಪನೆಯಾಗಿದ್ದು, ಇವನು ಪಾರ್ಥಸಾರಥಿಯೆಂಬುದರ ದ್ಯೋತಕವಾಗಿ ಬಲಗೈಯಲ್ಲಿ ಚಾಟಿಯನ್ನು ಹಿಡಿದುಕೊಂಡಿರುವನು. ಶಿಲಾಮೂರ್ತಿ ಪಾರ್ಥಸಾರತಿ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹವು ಶಿಲ್ಪ ಶೈಲಿಯಿಂದ ಕೂಡಿದುದಾಗಿದೆ. ದೇವರಿಗೆ ನಿತ್ಯ ನೈವೇದ್ಯ, ಉತ್ಸವ ಮತ್ತು ಪಂಚಪರ್ವ ಸಮಯದಲ್ಲಿ ಪೂಜೆ ನೈವೇದ್ಯ ಹಾಗೂ ಕೃಷ್ಣಾಷ್ಟಮಿಯಂದು ವಿಶೇಷ ಪೂಜೆ, ಪಂಚಾಮೃತಾಭಿಷೇಕ, ನೈವೇದ್ಯ, ಭಕ್ತರ ಹರಕೆ ರೂಪದಲ್ಲಿ ಯಾವಾಗಲೂ ಹಾಲು ಪಾಯಸ ನಡೆಯುತ್ತದೆ.
- ಶ್ರೀ ಜನಾರ್ದನ ಮೂರ್ತಿಗುಡಿ-ದೇವಸ್ಥಾನದ ಅಡುಗೆ ಕೋಣೆಯ ಬಳಿಯಿರುವ ಜನಾರ್ಧನರ್ಮೂತಿಯೆಂಬ ಹೆಸರಿನ ಶ್ರೀ ಮಹಾವಿಷ್ಣು ದೇವಾಲಯ ಕಾಣಸಿಗುತ್ತದೆ. ನಿತ್ಯ ನೈವೇದ್ಯ, ಪಂಚಪರ್ವ ಮತ್ತು ಉತ್ಸವ ಸಮಯದಲ್ಲಿ ವಿಶೇಷ ಪೂಜೆ, ಸಾಮೂಹಿಕ ಸತ್ಯ ನಾರಾಯಣ ಪೂಜೆಯನ್ನು ಮಾಡಲಾಗುತ್ತದೆ.
- ದೈವಗಳ ಗುಡಿ-ಉತ್ತರ ದಿಕ್ಕಿನಲ್ಲಿ ಗದತೀರ್ಥಕ್ಕೆ ಹೋಗುವ ಮೆಟ್ಟಲುಗಳ ಬದಿಯಲ್ಲಿ ದೈವಗಳ ಗುಡಿಯನ್ನು ಕಾಣಬಹುದಾಗಿದೆ. ದೇವರನ್ನು ನಂಬುವಷ್ಟೇ ದೈವಗಳನ್ನೂ ನಂಬುವುದು ತುಳುನಾಡ ಜನರ ವೈಶಿಷ್ಟ್ಯ. ಕೆರೆಯ ಪಕ್ಕದಲ್ಲಿ ಕಲ್ಲುರ್ಟಿ, ಕುಟ್ಟಿಚಾತು, ಗುಳಿಗ, ರಕ್ತೇಶ್ವರಿ ಎಂಬ ದೈವಗಳ ಗುಡಿಯೂ ಇದ್ದು ಅದರೊಳಗೆ ಮಂಚ, ಖಡ್ಗ, ಮಣಿಗಂಟೆ ಮತ್ತು ಶಿಲೆ ಕಲ್ಲುಗಳು ಇರುತ್ತವೆ. ರಕ್ತೇಶ್ವರಿ ಅಮ್ಮನವರಿಗೆ ನಿತ್ಯ ನೈವೇದ್ಯ ಪಂಚಪರ್ವ ಮತ್ತು ಉತ್ಸವ ಸಮಯದಲ್ಲಿ ಪೂಜೆ ನಡೆಯುವುದು. ಕಲ್ಲುರ್ಟಿ, ಗುಳಿಗ, ರಕ್ತೇಶ್ವರಿ ಅಮ್ಮನವರಿಗೆ ಚೌತಿ, ಪತ್ತನಾಜೆ ಹಬ್ಬ ಉತ್ಸವದಂದು ಪೂಜೆ ನಡೆಯುತ್ತದೆ.
ಉತ್ಸವದ ದಿನಗಳು ಮತ್ತು ಪಂಚಪರ್ವಗಳು
[ಬದಲಾಯಿಸಿ]- ಜಾತ್ರೆ, ಮೀನ ಮಾಸದಲ್ಲಿ ಹುಣ್ಣಿಮೆಯ ಮೊದಲ ದಿನ ಚತುರ್ದಶಿಯಂದು ಧ್ವಜಾರೋಹಣವಾಗಿ ಐದನೆಯ ದಿನ ಭಗವತಿಗಳ ಭೇಟಿ, ಅವಭೃಥ ಸ್ನಾನ, ಧ್ವಜಾವರೋಹಣ ಹೀಗೆ 5 ದಿನಗಳ ಉತ್ಸವಜಾತ್ರೆ ನಡೆಯುತ್ತದೆ.
- ಲಕ್ಷ ದೀಪೋತ್ಸವ.
- ದೀಪಾವಳಿ ಹಬ್ಬ, ಬಲಿ ಹೊರಡುವುದು.
- ಪತ್ತನಾಜೆ ಬಲಿ ಒಳಗೆ ಹೊಗುವ ದಿನ, ನಂತರ ಬಲಿ ಇಲ್ಲ.
- ಸಿಂಹ ಸಂಕ್ರಮಣ.
- ಶ್ರೀ ಕೃಷ್ಣಾಷ್ಟಮಿ.
- ಶ್ರಾವಣ ಅಮಾವಸ್ಯೆಯ ತೀರ್ಥಸ್ನಾನ.
- ಹೊಸ ಅಕ್ಕಿ ಊಟ.
- ಚೌತಿ.
- ನೂಲಹುಣ್ಣಿಮೆ.
- ಧನುರ್ಮಾಸ ಪೂಜೆ.
- ತುಳಸೀ ಪೂಜೆ.
- ಶಿವರಾತ್ರಿ.
- ನವರಾತ್ರಿ.
ಉಲ್ಲೇಖಗಳು
[ಬದಲಾಯಿಸಿ]