ಸಿದ್ಧ ವೈದ್ಯ ಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿದ್ಧ ವೈದ್ಯ ಪದ್ಧತಿಯು ಒಂದು ವೈದ್ಯ ಪದ್ಧತಿಯಾಗಿದೆ. ಪುರಾತನ 'ಸಿದ್ಧ ವೈದ್ಯ ಪದ್ಧತಿ'ಯನ್ನು ಭಾರತದ ಅನೇಕ 'ಸಿದ್ಧರು ಆಚರಣೆಗೆ ತಂದು ವಿಕಾಸಗೊಳಿಸಿದರು. ಸಿದ್ಧ ವೈದ್ಯ ಪದ್ಧತಿಯ ಅನೇಕ ತಾಳೆಗರಿ ಹಸ್ತಪ್ರತಿಗಳು ತಮಿಳು ಭಾಷೆಯಲ್ಲಿರುವುದರಿಂದ ಇದಕ್ಕೆ 'ತಮಿಳು ವೈದ್ಯ ಪದ್ಧತಿ' ಎಂಬ ಹೆಸರೂ ಇದೆ.[೧][೨] ಈ ಪುರಾತನ ಹಸ್ತಪ್ರತಿಗಳ ಪ್ರಕಾರ ಆ ಕಾಲದಲ್ಲಿ ಮುಖ್ಯವಾಗಿ 18 ಜನರು ಸಿದ್ಧರಿದ್ದರು. ಅವರಲ್ಲಿ ಅನಸ್ತ್ಯರು ಪ್ರಮುಖರು. ಇವರೇ ಸಿದ್ಧ ವೈದ್ಯ ಪದ್ಧತಿಯ ಪಿತಾಮಹ. ತಿರುಮಂದಿರಮ್ (ಪವಿತ್ರ ಮಂತ್ರಗಳು) ಗ್ರಂಥ ರಚಿಸಿದವನೂ ಒಬ್ಬ ಸಿದ್ಧನಾಗಿದ್ದ.

ಸಿದ್ಧ ವೈದ್ಯ ಪದ್ಧತಿಯಲ್ಲಿ ಎರಡು ಬಗೆಗಳಿವೆ. ಒಂದು ಗಿಡಮೂಲಿಕೆ ಮೂಲದ್ದು, ಮತ್ತೊಂದು ಲೋಹ ಮೂಲದ್ದು. ಲೋಹ ಮೂಲದ ಔಷಧಿಯನ್ನು ನಾನಾ ರೀತಿಯ ಮೂಲಿಕೆಗಳ ಸಾರವನ್ನು ಸೇರಿಸಿ ಲೋಹಗಳನ್ನು, ಪಾದರಸವನ್ನು ಭಸ್ಮ ಮತ್ತು ಪುಡಿಗಳನ್ನಾಗಿ ಪರಿವರ್ತಿಸುವ ಮೂಲಕ ಸಿದ್ಧಗೊಳಿಸಲಾಗುತ್ತದೆ. ಬೌದ್ಧಮತ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಸಿದ್ಧ ವೈದ್ಯ ಪದ್ಧತಿಯು ಮಲಯ, ಬರ್ಮಗಳಲ್ಲಿ ವ್ಯಾಪಿಸಿತು. 7ನೆಯ ಶತಮಾನದಲ್ಲಿ ಬೋಗಾರ್ ಎಂಬ ಪ್ರಮುಖ ಸಿದ್ಧನೊಬ್ಬ ಮೂಲಿಕೆಗಳ ಸಂಗ್ರಹಕ್ಕಾಗಿ ರೋಮಿಗೂ ಪ್ರಯಾಣ ಬೆಳೆಸಿದ್ದ.

1924ರಿಂದ ಚೆನ್ನೈಯಲ್ಲಿ ಸರ್ಕಾರಿ ಭಾರತೀಯ ವೈದ್ಯಕೀಯ ಶಾಲೆಯಲ್ಲಿ ಆಯುರ್ವೇದ, ಯುನಾನಿ ವೈದ್ಯಪದ್ಧತಿಗಳೊಂದಿಗೆ ಸಿದ್ಧವೈದ್ಯ ಪದ್ಧತಿಯನ್ನು ಬೋಧಿಸಲಾಗುತ್ತಿದೆ. ಭಾರತ ಸರ್ಕಾರ ಜಾಮ್‍ನಗರದಲ್ಲಿ ಸಿದ್ಧವೈದ್ಯ ಪದ್ಧತಿಯ ಕೇಂದ್ರ ಸಂಶೋಧನಾ ಮಹಾಸಂಸ್ಥೆಯೊಂದನ್ನು ತೆರೆದಿದೆ.

ಸಿದ್ಧವೈದ್ಯ ಪದ್ಧತಿಯ ಪ್ರಕಾರ ಮಾನವ ಶರೀರವು ವಾತ, ಪಿತ್ತ ಮತ್ತು ಕಫ ಮೂರು ಧಾತುಗಳ ಹೊಂದಾಣಿಕೆಯಿಂದ ಸಮರಸವಾಗಿ ಕಾರ್ಯ ನಡೆದುಕೊಂಡು ಹೋಗುತ್ತದೆ. ಈ ಧಾತುಗಳನ್ನು 'ನಾಡಿ'ಗಳೆಂದೂ ಕರೆಯುತ್ತಾರೆ. ಈ ಧಾತುಗಳು ಶರೀರದಲ್ಲಿ 4:2:1 ಅನುಪಾತದಲ್ಲಿರಬೇಕು. ಸಿದ್ಧವೈದ್ಯ ಪದ್ಧತಿಯ ಪ್ರಕಾರ ಸುಮಾರು 4,448 ರೀತಿಯ ರೋಗಗಳಿವೆ. ಸುಮಾರು 2,50,000 ಮೂಲಿಕೆಗಳನ್ನು ನಾನಾ ಸಂಯೋಜನೆಗಳೊಂದಿಗೆ ಬಳಸಿ ಯಾವುದೇ ವ್ಯಾಧಿಯನ್ನು ಗುಣಪಡಿಸುವುದು ಅದರ ಗುರಿ. ಆಯುರ್ವೇದ ವೈದ್ಯಪದ್ಧತಿಯಂತೆ ಸಿದ್ಧ ಪದ್ಧತಿಯು ಕೂಡ ವೈದ್ಯಕ್ಕೆ ಪ್ರಮುಖ್ಯತೆ ನೀಡುತ್ತದೆ.

1500 ವರ್ಷಗಳ ಹಿಂದೆ ರಚಿತವಾದ ಅನೇಕ ತಾಳೋರಿ ಹಸ್ತಪ್ರತಿಗಳಲ್ಲಿ ಅಡಕವಾಗಿದ್ದ ಅನೇಕ ನಿಗೂಢ ಸಂಕೇತಗಳನ್ನು, ಗೂಢಾರ್ಥಗಳನ್ನೂ ಈಗ ಸಾಮಾನ್ಯ ಬರಹಕ್ಕೆ ಪರಿವರ್ತಿಸಿ ಪುಸ್ತಕಗಳ ರೂಪದಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮೂಲ ಬರಹಗಳು ಪದ್ಯ ರೂಪದಲ್ಲಿವೆ. ಹಳ್ಳಿಗಳಲ್ಲಿ ಇವು ಇಂದಿಗೂ ಸಾಮಾನ್ಯ ಜನರ ಮಧ್ಯೆ ಬಳಕೆಯಲ್ಲಿವೆ. ಶಸ್ತ್ರಚಿಕಿತ್ಸೆಗೆ ಅವಶ್ಯಕವಾದ ಪ್ರಸಂಗಗಳನ್ನು ಹೊರತುಪಡಿಸಿ ಉಳಿದೆಲ್ಲ ಬಗೆಯ ರೋಗಗ್ರಸ್ತ ಸ್ಥಿತಿಗಳಿಗೂ ಮೂಲಿಕೆಗಳ ಪರಿಹಾರ ಉಂಟೆಂದು ಸಿದ್ಧ ವೈದ್ಯರು ಹೇಳುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Recipes for Immortality : Healing, Religion, and Community in South India: Healing, Religion, and Community in South India, p.93, Wellington Richard S Weiss, Oxford University Press, 22-Jan-2009
  2. The Encyclopedia of Ayurvedic Massage, John Douillard, p. 3, North Atlantic Books, 2004
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: