ಜಾಮ್ ನಗರ
ಜಾಮ್ ನಗರ - ಭಾರತದ ಗುಜರಾತ್ ರಾಜ್ಯದ ಒಂದು ನಗರ; ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ. ಕಚ್ ಖಾರಿಯ ಬಳಿ, ಬೇಡಿ ಬಂದರಿನ ದಕ್ಷಿಣಕ್ಕೆ, ಸಮುದ್ರತೀರದಿಂದ 10 ಕಿಮೀ. ದೂರದಲ್ಲಿ, ರಾಜಕೋಟೆಗೆ ಪಶ್ಚಿಮ-ವಾಯವ್ಯದಲ್ಲಿ 45 ಮೈ. ದೂರದಲ್ಲಿ ಇದೆ. ಜನಸಂಖ್ಯೆ 2,14,816 (1971).
ಲಕೋಠ ವಸ್ತುಸಂಗ್ರಹಾಲಯ, ಕೋಠ ದುರ್ಗ, ಜೈನದೇವಾಲಯಗಳು, ದರ್ಬಾರ್‍ಗಢ ಮುಂತಾದ ಕಟ್ಟಡಗಳು ನಗರದ ಪ್ರಾಚೀನತೆಯನ್ನು ತಿದ್ದಿ ತೋರಿಸುತ್ತವೆ. ಅಲ್ಲಿರುವ ಅರಮನೆಗಳು, ಧನ್ವಂತರಿ ಮಂದಿರ, ವೈದ್ಯಕೀಯ ಕಾಲೇಜು, ಇರ್ವಿನ್ ಆಸ್ಪತ್ರೆ, ರೇಡಿಯಮ್ ಚಿಕಿತ್ಸೆಗಾಗಿ ಸೂರ್ಯಶಾಲೆ-ಇವು ಆಧುನಿಕ ಕಟ್ಟಡಗಳು. ಬಾಂಧನಿ ಕೆಲಸ, ಕಲಾಬತ್ ಲೋಹಗೆಲಸ-ಇವು ಇಲ್ಲಿಯ ಕೆಲವು ಹಳೆಯ ಕೈಕಸಬುಗಳು. ಜಾಮ್ ನಗರದ ವೈಶಿಷ್ಟ್ಯ ನೇಯ್ಗೆ; ಅದರಲ್ಲೂ ರೇಷ್ಮೆ ಕೈಗಾರಿಕೆ. ಹತ್ತಿ, ಉಣ್ಣೆ ಮತ್ತು ಮಿಶ್ರದಾರಗಳಿಂದ ಬಟ್ಟೆ ನೇಯಲಾಗುತ್ತದೆ. ಬಟ್ಟೆ ತಯಾರಿಕೆ ಜಾಮ್‍ನಗರದಲ್ಲಿ ಪ್ರಾರಂಭವಾದಾಗಿನಿಂದ ಇದರ ಸುತ್ತ ಹತ್ತಿ ಬೇಸಾಯ ವಿಸ್ತರಿಸುತ್ತಿದೆ. ತೇಗ ಮತ್ತು ಹಳದಿ-ಕೆಂಪು ಮರಗಳಿಂದಲೂ ಗಂಧದ ಮರಗಳಿಂದಲೂ ಅಲಂಕರಣ ವಸ್ತುಗಳನ್ನೂ ದಿನಬಳಕೆಯ ವಸ್ತುಗಳನ್ನೂ ಮಾಡುತ್ತಾರೆ. ಸಾಲನೀಡಿಕೆ ಮತ್ತು ಕುಶಲಕಲಾ ಶಿಕ್ಷಣಗಳಿಂದ ಗೃಹಕೈಗಾರಿಕೆಗಳು ಬೆಳೆಯತೊಡಗಿವೆ. ಹುಲಿ ಮತ್ತು ಚಿರತೆಗಳ ಚರ್ಮಗಳನ್ನು ಹದಮಾಡಿ ರಫ್ತು ಮಾಡಲಾಗುತ್ತದೆ. ಸಿಮೆಂಟ, ಕುಂಭಕೆಲಸ, ಎಣ್ಣೆ, ಉಪ್ಪು-ಇವು ಇತರ ಕೆಲವು ಮುಖ್ಯಕೈಗಾರಿಕೆಗಳು. ಸರ್ಕಾರಿ ಕಚೇರಿಗಳೂ ಶಾಲಾಕಾಲೇಜುಗಳೂ ಇರುವ ಈ ನಗರ ಒಂದು ವ್ಯಾಪಾರಕೇಂದ್ರ ಕೂಡ. ಇದು ದಕ್ಷಿಣ ಸೌರಾಷ್ಟ್ರದ ಸಾಂಸ್ಕøತಿಕ, ಆರ್ಥಿಕ ಚಟುವಟಿಕೆಗಳ ಕೇಂದ್ರ.
ಪೂರ್ವದಲ್ಲಿ ರಾಜಕೋಟೆ, ಪಶ್ಚಿಮದಲ್ಲಿ ದ್ವಾರಕೆಗಳೊಂದಿಗೆ ರಸ್ತೆ ಹಾಗೂ ರೈಲು ಸಂಪರ್ಕವುಂಟು. ಇದು ವಾಧ್ವಾನ್-ರಾಜಕೋಟೆ-ಓಖಾ ರೈಲು ಮಾರ್ಗದ ನಡುವೆ ಇರುವುದು ಇದರ ಪ್ರಾಮುಖ್ಯ. ಹಿನ್ನಾಡನ್ನು ಕಡಲಕರೆಯೊಂದಿಗೆ ಕೂಡಿಸುವ ಮುಖ್ಯ ವಾಣಿಜ್ಯಮಾರ್ಗಗಳಲ್ಲಿ ಇದು ಒಂದು. ಇಲ್ಲಿಂದ ಬೇಡಿಗೂ ರೈಲ್ವೆ ಸಂಪರ್ಕ ಉಂಟು.
ಜಾಮ್‍ನಗರ ಜಿಲ್ಲೆಯ ವಿಸ್ತೀರ್ಣ 14,125 ಚ.ಮೈ., ಜನಸಂಖ್ಯೆ 11,11,343(1971). ಹಿಂದೆ ಇದಕ್ಕೆ ಹಾಲಾರ್ ಜಿಲ್ಲೆಯೆಂಬ ಹೆಸರಿತ್ತು. ಗುಜರಾತ್ ರಾಜ್ಯದ ಕಾಠಿಯಾವಾದ್ ಪರ್ಯಾಯದ್ವೀಪದ ಜಿಲ್ಲೆಗಳ ಪೈಕಿ ಅತ್ಯಂತ ಪಶ್ಚಿಮದ ಜಿಲ್ಲೆಯಿದು. ಬಾರ್ದೋ ಬೆಟ್ಟಗಳನ್ನು ಬಿಟ್ಟರೆ ಈ ಜಿಲ್ಲೆ ಬಹುತೇಕ ಮೈದಾನ ಪ್ರದೇಶ. ಈ ಬೆಟ್ಟಗಳ ಮೂರನೇ ಎರಡು ಭಾಗ ಈ ಜಿಲ್ಲೆಯಲ್ಲಿ ಹಬ್ಬಿದೆ. ಜಿಲ್ಲೆಯ ಉತ್ತರದಲ್ಲಿ, ಕಚ್ ಖಾರಿಯ ತೀರದ ಉದ್ದಕ್ಕೂ ಗುಲ್ಮ ವೃಕ್ಷಗಳಿವೆ. ಕಚ್ ಖಾರಿಯ ತೀರಪ್ರದೇಶ ಮುಂಗಾರಿನ ಪ್ರಭಾವಕ್ಕೆ ಒಳಗಾಗುತ್ತದೆ. ಜಿಲ್ಲೆಯಲ್ಲಿ ಮಳೆ ಅನಿಶ್ಚಿತ, ನೆಲ ಅಷ್ಟೇನೂ ಸಾರವತ್ತಾದ್ದಲ್ಲ. ಗೋಧಿ, ಹತ್ತಿ, ಜೋಳ, ಬಾಜ್ರ, ಬೇಳೆ, ಆಲೂಗಡ್ಡೆ, ಬತ್ತ ಮುಖ್ಯ ಬೆಳೆಗಳು, ನೇಯ್ಗೆ ಒಂದು ಮುಖ್ಯ ಕಸಬು. ಕರಾವಳಿಯಲ್ಲಿ ಮೀನುಗಾರಿಕೆ ಮುಖ್ಯ. ಜಾಮ್‍ನಗರವಲ್ಲದೆ ದ್ವಾರಕಾ ಮತ್ತು ಓಖಾ ಮುಖ್ಯ ಸ್ಥಳಗಳು. ದ್ವಾರಕಾದ ದೇವಾಲಯಗಳು ಪ್ರಸಿದ್ಧ. ಓಖಾ ಒಂದು ಬಂದರು.
ಇತಿಹಾಸ
[ಬದಲಾಯಿಸಿ]ಹಿಂದೆ ಇದು ನವನಗರ ಸಂಸ್ಥಾನದ ರಾಜಧಾನಿಯಾಗಿತ್ತು. ಜಾಮ್ ನಗರವನ್ನು ಸ್ಥಾಪಿಸಿದವನು ಜಾಮ್ ರಾವಲ್, 1540ರಲ್ಲಿ. 1788ರಲ್ಲಿ ಇದರ ಸುತ್ತ ಕೋಟೆಯೊಂದು ನಿರ್ಮಿತವಾಯಿತು. ಹಳೆಯ ನಗರ ಇಕ್ಕಟ್ಟಾದ ಬೀದಿಗಳಿಂದ ಕೂಡಿದೆ.