ಸದಸ್ಯ:Deeksha.B.Poojary/ನನ್ನ ಪ್ರಯೋಗಪುಟ-1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶೇಷ ಜನವರ್ಗಗಳ ಮತ್ತು ಬುಡಕಟ್ಟುಗಳ ಕಲೆಗಳು[ಬದಲಾಯಿಸಿ]

ಕುಡುಬಿಯರ ಕುಣಿತ[ಬದಲಾಯಿಸಿ]

ಕುಡುಬಿಯರು ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಂಡುಬರುವ ಬುಡಕಟ್ಟು ಜನಾಂಗದವರು. ಕಲುವಾಡಿ ಎಂಬ ಹೆಸರನ್ನೇ ಇವರು ಜಾತಿ ಸೂಚಕವಾಗಿ ಬಳಸಿಕೊಳ್ಳುತ್ತಾರೆ. ಅರೆ, ಗೋವ, ಜೋಗಿ, ಕೊಡಿಯಾಲ, ಕರಿಯ ಎಂಬ ಒಳಪಂಗಡಗಳು ಇವರಲ್ಲಿವೆ. ಇವರು ಕೊಂಕಣಿ ಮತ್ತು ಅದರ ಒಂದು ಉಪಭಾಷೆಯನ್ನು ಆಡುತ್ತಾರೆ.

ಪ್ರದರ್ಶನ ಕಲೆ:[ಬದಲಾಯಿಸಿ]

ಗೋವೆದೇವ ಪ್ರೀತ್ಯರ್ಥವಾಗಿ ಐದು ದಿನಗಳ ಕಾಲ ನಡೆವ ನೃತ್ಯರೂಪದ ಆಚರಣೆ ಇವರಲ್ಲಿ ಬಳಕೆಯಲ್ಲಿದೆ. ಶಿವರಾತ್ರಿಯ ಮುಂದಿನ ಏಕದಶಿಯ ದಿನ ಹಾಡಿಯ ಹಿರಿಯನ ಮನೆಯಲ್ಲಿ ಆರಂಭವಾಗುತ್ತದೆ.ಇಂತಹ ಮನೆಗಳಿಗೆ ‘ಮೇಳದ ಮನೆ’ ಎನ್ನಲಾಗುತ್ತದೆ. ಒಂದೊಂದು ಮೇಳದಲ್ಲಿ ಐವತ್ತರಿಂದ ಇನ್ನೂರು ಜನ ಪಾಲ್ಗೊಳ್ಳುವುದು ಉಂಟು. ಏಕಾದಶಿಯ ದಿನ ಸಾಯಂಕಾಲ ಗಂಡಸರು ಸ್ನಾನ ಮಾಡಿಕೊಂಡು ತಮ್ಮ-ತಮ್ಮ ವೇಷ ಭೂಷಣಗಳ ಪೆಟ್ಟಿಗೆಗಳೊಂದಿಗೆ ‘ವೇಷದಮನೆ’ಯಲ್ಲಿ ಸಿದ್ದರಾಗುತ್ತಾರೆ. ಬಂದವರಿಗೆಲ್ಲ ವಾಡೆ ಬುದ್ಯಂತ ಊಟ ಉಪಚಾರ ನಡೆಸಬೇಕು. ಈ ದಿನಗಳಲ್ಲಿ ಮಾಂಸ, ಮೀನು ನಿಷಿದ್ಧ. ಮನೆಯ ಮುಂದಿನ ತುಳಸಿಕಟ್ಟೆಯ ಎದುರು ಗೋವೆ ದೇವರನ್ನು ಇಟ್ಟು ಕಾಲು ದೀಪ ಹೊತ್ತಿಸಿ, ಮಂಗಳಾರತಿ ಮಾಡುವವನು ‘ಮಂಡ್ಕಾರ’. ಅಂದರೆ ಆ ಮೇಳದ ಅರ್ಚಕ. ಇಷ್ಟರಲ್ಲಿ ಮೇಳದ ಸದಸ್ಯರೆಲ್ಲಾ ಮಂಡಲಾಕಾರದಲ್ಲಿ ನಿಲ್ಲುತ್ತಾರೆ. ಕಾಲಿಗೆ ಗೆಜ್ಜೆ, ಸೊಂಟದ ಕೆಳಗೆ ಇಜಾರ್, ಅದರ ಮೇಲೆ ಬಣ್ಣದ ಚೌಕಲಿ ಸೀರೆಯನ್ನು ಕತ್ತರಿಯಾಗಿ ಉಡುತ್ತಾರೆ ಮೇಲೆ ನೆರಿಯಂಗಿ, ಕೊರಳಿಗೆ ಬೆಳ್ಳಿಯ ನೇವಳದ ಸರ. ಬಿಳಿಯ ನೆರಯಂಗಿಯ ಮೇಲೆ ಬಿಗಿದ ಶಾಲು, ಕೈಗೆ ಬಳೆ, ತಲೆಗೆ ಕೆಂಪು ಪಟ್ಟೆಯ ಬಿಳಿ ಮುಂಡಾಸು. ಅದರ ಮೇಲೆ ಕನಕಾಂಬರ ಹೂವಿನ ದಂಡೆ. ಮುಂಡಾಸಿಗೆ ಸಿಕ್ಕಿಸಿದ ಸೊಗಸಾದ ಹೆಂಟೆಗೊದ್ದದ ಗರಿ ಇವಿಷ್ಟು ಅವರ ಅಲಂಕಾರ. ಇಷ್ಟು ದಿನ ತೂಗು ಹಾಕಿದ ಮಣ್ಣಿನ ಮಡಿಕೆಯಾಕೃತಿಯ ಗುಮಟೆ ಈಗ ಸಾಲು ಸಾಲಾಗಿ ಅಂಗಳದ ಬದಿಯಲ್ಲಿ ಸೇರ್ಪಡುತ್ತವೆ. ಎಲ್ಲರ ಕೈಯಲ್ಲೂ ಮಂಡ್ಕಾರ ಆರತಿಯೆತ್ತಿ ಪೂಜೆ ಮುಗಿಸಿದೊಡನೆ ಕೋಲಾಟಕ್ಕೆ ತೊಡಗುತ್ತಾರೆ. ನರ್ತನದೊಂದಿಗೆ ಹಾಡು ಹೇಳುತ್ತಾರೆ. ಮಂಡಲಾಕಾರದಲ್ಲಿ ಒಳಗೊಂದು ಸುತ್ತು ಹೊರಗೊಂದು ಸುತ್ತು ತೆಗೆಯುತ್ತಾ, ಎದುರೆದುರು ಬಂದವರು ಕೋಲು ಬಡಿಯುತ್ತಾ ನಿಲ್ಲದೆ ಸಾಗುತ್ತಿರುತ್ತಾರೆ. ಕೊಂಕಣಿ ಭಾಷೆಗೆ ತೀರ ಸಮೀಪವಾಗಿರುವ ಈ ಹಾಡಿನಲ್ಲಿ ಗೋವೆಯ ಹತ್ತಾರು ದೇವರ ಸ್ತು ತಿ.ಜೊತೆಗೆ ಸುತ್ತಲಿನ ಮಂದರ್ತಿ, ಕೊಲ್ಲೂರು, ಪೆರ್ಡೂರು ಮುಂತಾದ ದೇವರ ಹೊಗಳಿಕೆಯು ಇರುತ್ತದೆ. ಹೊತ್ತು ಸಾಗಿದಂತೆ ಭಕ್ತಿಯ ಆವೇಶ-ಉಬ್ಬರ ಏರಿದಂತೆ ಹೆಜ್ಜೆಯ ಗತಿ ತೀವ್ರಗೊಳ್ಳುತ್ತದೆ, ಕೋಲಿನ ನುಡಿತ ಬಡಿತ ತೀವ್ರಗೊಳ್ಳುತ್ತದೆ. ಇದಾದ ಮೇಲೆ ಎಲ್ಲರೂ ಅವರವರ ಗುಮ್ಟಿಯನ್ನು ಕೈಗೆತ್ತಿಕೊಳ್ಳುತ್ತಾರೆ. ಒಂದೇ ಸಾಲಿನಲ್ಲಿ ಎಲ್ಲರೂ ಉದ್ದಕ್ಕೆ ನಿಲ್ಲುವುದು ವಾಡಿಕೆ. ಗುಮ್ಟಿ ಗುರ್ಕಾರ ಮಧ್ಯದಲ್ಲಿ ನಿಲ್ಲುತ್ತಾನೆ. ಸಾಮಾನ್ಯವಾಗಿ ಹಾಡಿನ ವಸ್ತು ಪಾಂಡವರ ವನವಾಸ ಅಥವಾ ಸೀತಾದೇವಿ ರಾಮಲಕ್ಷ್ಮಣರೊಂದಿಗೆ ಅರಣ್ಯದಲ್ಲಿದ್ದ ಭಾಗವಾಗಿರುತ್ತದೆ. ಕೊಂಕಣಿ ಭಾಷೆಯಲ್ಲಿರುವ ಈ ಹಾಡನ್ನು ಗುಮ್ಟಿಯ ಗುರ್ಕಾರ ಹೇಳಿದೊಡನೆ ಉಳಿದವರೆಲ್ಲರೂ ಗುಮ್ಟಿ ನುಡಿಸುತ್ತಾ ಕುಣಿಯುತ್ತಾ ಮತ್ತೆ ಆ ಹಾಡನ್ನು ಪುನರಾವೃತ್ತಿ ಮಾಡುತ್ತಾ ಹೋಗುತ್ತಾರೆ. ಹೆಜ್ಜೆಯ ಗತಿಯಲ್ಲಿ, ತೀವ್ರತೆಯಲ್ಲಿ ನಾಲ್ಕು ಬಗೆಯ ವೈವಿಧ್ಯಗಳಿವೆ. [೧] ಆ ರಾತ್ರಿಯಿಂದಲೇ ಊರುಕೇರಿಯ ಸ್ವಜಾತಿ ಬಾಂಧವರ ಮನೆಗಳಿಗೆಲ್ಲಾ ‘ಮೇಳ’ ಹೋಗುತ್ತದೆ. ಮನೆಮನೆಯ ಅಂಗಳದಲ್ಲಿ ನೃತ್ಯ ಸೇವೆ ಜರುಗುತ್ತವೆ. ಪ್ರತೀ ಮನೆಯಲ್ಲೂ ಜೋಡುತೆಂಗಿನಕಾಯಿ, ಒಂದು ಸೇರು ಅಕ್ಕಿ ಸಂದಾಯವಾಗಬೇಕು.ಪೂರ್ವ ನಿಶ್ಚಿತ ಭಾಂದವರ ಮನೆಯಲ್ಲಿ ಊಟದ ಏರ್ಪಾಡಿರುತ್ತದೆ. ದಿನದ ‘ತಿರುಗಾಟ’ ಮುಗಿದೊಡನೆ ‘ಮೇಳ’ದವರು ಹೊರಟ ಮನೆಗೇ ಬಂದು ಸೇರುತ್ತಾರೆ. ಈ ಐದು ದಿನ ಅವರು ಮನೆಗೆ ಹೋಗುವಂತಿಲ್ಲ. ಕುಟುಂಬದಲ್ಲಿ ಹುಟ್ಟು ಸಾವುಗಳ ಸೂತಕ ಏರ್ಪಾಟ್ಟಾಗಲೂ ಮೇಳದವರು ಎದುರಿನ ಅಂಗಳದಲ್ಲಿ ಅಥವಾ ಗದ್ದೆಯಲ್ಲಿ ತಮ್ಮ ವೇಷಭೂಷಣ, ಗುಮ್ಟಿ, ಕೋಲಾಟದ ಕೋಲು ಎಲ್ಲವನ್ನೂ ವ್ಯವಸ್ಥಿತವಾಗಿ ಇರಿಸಿ ಸ್ನಾನ ಮಾಡಿಕೊಂಡು ಬರುತ್ತಾರೆ.ಪ್ರತಿಯೊಬ್ಬನೂ ತನ್ನ-ತನ್ನ ವೇಷಭೂಷಣಗಳ ಎದುರು ಒಂದೊಂದು ತೆಂಗಿನ ಕಾಯಿ ಒಡೆದು ನಮಸ್ಕರಿಸುತ್ತಾರೆ. ಆ ದಿನ ರಾತ್ರಿ ಸಾಮೂಹಿಕ ಬೇಟೆ. ಕೈಯಲ್ಲಿ ಕೋಲು, ಈಟಿ, ಬಲೆ, ಕತ್ತಿ- ಇವಿಷ್ಟು ಸಲಕರಣೆಗಳು. ದೊರೆತ ಬೇಟೆಯನ್ನು ಅಟ್ಟು, ಸಾಮೂಹಿಕ ಭೋಜನ ಜರುಗುತ್ತದೆ.

ಮೇರರದುಡಿಕುಣಿತ[ಬದಲಾಯಿಸಿ]

ದುಡಿಯು ಮೇರರೇ ತಯಾರಿಸುವ ಒಂದು ವಿಶೇಷ ಜನಪದ ವಾದ್ಯ. ದುಡಿಗೆ ಮೇರರ ಸಾಂಸ್ಕ್ರತಿಕ ವಿಶಿಷ್ಟ ಮನ್ನಣೆ ಇದೆ. ದುಡಿಯ ತಯಾರಿ ಬಹುಮಟ್ಟಿಗೆ ಸರಳವಾದುದು. ಬೀಟೆ, ತೇಗ ಅಥವಾ ಹೊನ್ನೆ ಮೊದಲಾದ ಮರಗಳಿಂದ ಇದನ್ನು ತಯಾರಿಸಲಾಗುತ್ತದೆ. ಮರದ ತುಂಡಿನ ಎರಡೂ ಬದಿಗಳನ್ನು ಶಂಕುವಿನಾಕಾರದಲ್ಲಿ ಕೊರೆದು ಮಧ್ಯ ಭಾಗವನ್ನು ಇದಕ್ಕನುಗುಣವಾಗಿ ಹೊಂದಿಸಲಾಗುತ್ತದೆ. ಈ ರಚನೆಯು ಎರಡು ಶಂಕುಗಳನ್ನು ಪರಸ್ಪರ ಜೋಡಿಸಿದಂತೆ ಕಂಡು ಬರುತ್ತದೆ. ದುಡಿಯ ಇಬ್ಬದಿಗಳು ಅದರ ಮಧ್ಯ ಭಾಗದಿಂದ ಸುಮಾರು ಮೂರರಷ್ಟು ವಿಸ್ತಾರವಾಗಿರುತ್ತದೆ. ಹೀಗೆ ಮರವೊಂದನ್ನು ದುಡಿಯ ರಚನೆಗೆ ಅಣಿಗೊಳಿಸಿದಾಗ ಅದು ‘ದುಡಿಮರ’ವಾಗುತ್ತದೆ. ಮುಂದಿನ ಹಂತ ದುಡಿಯನ್ನು ಮುಚ್ಚುವುದು. ಮರದ ಎರಡೂ ಬದಿಗಳಗೆ ಪ್ರಾಣಿಯ ಚರ್ಮವನ್ನು ಬಿಗಿದು ಕಟ್ಟಲಾಗುತ್ತದೆ. ಸಾಮಾನ್ಯವಾಗಿ ಉಡ ಮತ್ತು ಮಂಗನ ಚರ್ಮವನ್ನು ದುಡಿ ಮುಚ್ಚುವುದಕ್ಕೆ ಉಪಯೋಗಿಸುತ್ತಾರೆ. ಎಡಭಾಗಕ್ಕೆ ಉಡದಚರ್ಮವೂ ಬಲಭಾಗಕ್ಕೆ ಮಂಗನ ಚರ್ಮವೂ ‘ಮುಚ್ಚಿಗೆ’ಯಾಗಿರುತ್ತದೆ. ಈ ಚರ್ಮವನ್ನು ಮೊದಲು ‘ದುಡಿಬಳೆ’ಯೊಂದಕ್ಕೆ ಬಿಗಿಯಲಾಗುತ್ತದೆ. ದುಡಿ ಬಳೆಯು ವೃತ್ತಾಕಾರದ ಬೆತ್ತದರಚನೆ. ಇದಕ್ಕೆ ನಯವಾದ ಚರ್ಮವನ್ನು ಹೊದಿಸಿ ಅಂಟಿಸಲಾಗುತ್ತದೆ. ಅಂಟಿಸಿ ಒಣಗಿಸಿದ ಬಳೆಯನ್ನು ದುಡಿಯ ಇಬ್ಬದಿಗಳಿಗೆ ಸೇರಿಸಿ ಸೊರವಾದ ಹುರಿ ಹಗ್ಗಗಳಿಂದ ಬಿಗಿಲಾಗುತ್ತದೆ. ಹೀಗೆ ಬಿಗಿದ ಹಗ್ಗವನ್ನು ಮತ್ತೆ ‘ದುಡಿ ಪಣೆ’ಯೊಂದರಿಂದ ನಿಯಂತ್ರಿಸಲಾಗುತ್ತದೆ. ಈ ‘ದುಡಿಯ ಗಟ್ಟಿಯಾದ ಮರವೊಂದರ ಸಣ್ಣರಚನೆ. ಮಧ್ಯಕ್ಕೆ ರಂಧ್ರವಿದ್ದು ಉದ್ದದ ಬೆತ್ತದ ನಾರನ್ನು ಪೋಣಿಸಲಾಗುತ್ತದೆ. ದುಡಿಯ ಮೂಲಕ ಬೆತ್ತದ ನಾರನ್ನು ದುಡಿಯ ಮಧ್ಯ ಭಗ ಹೆಗಲಿನಿಂದ ಜೋತಾಡುವಂತೆ ಇಳಿಬಿಟ್ಟು ದುಡಿ ನುಡಿಸಲಾಗುತ್ತದೆ. ದುಡಿಪಣೆಯ ಮೂಲಕ ದುಡಿ ಬಳೆಯ ಹಗ್ಗವನ್ನು ದುಡಿ ಕುಣಿತವನ್ನು ಮನರಂಜನೆ, ಆರಾದನೆ, ಮತ್ತು ಸಂಪ್ರದಾಯಗಳ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಿಗಿ ಮತ್ತು ಸಡಿಲಗೊಳಿಸುವುದರಿಂದ ದುಡಿಗೆ ನಾದ ಬರುತ್ತದೆ. ಇದನ್ನು ಬಾರಿಸಲು ತುದಿ ಬಾಗಿದ ಬೆತ್ತದ ಕೋಲುಗಳನ್ನು ಉಪಯೋಗಿಸುತ್ತಾರೆ. ಸಂಜೆಯ ವಿಶ್ರಾಂತಿ ಸಂದರ್ಭದಲ್ಲಿ ಹಾಗೂ ನೆಂಟರಿಷ್ಟರು ಮನೆಗೆ ಬಂದಾಗ ದುಡಿ ನುಡಿತವಿರುತ್ತದೆ. ಆರಾದನೆಯ ಸಂದರ್ಭವೆಂದರೆ ಚೆನ್ನುನಲಿಕೆ ಮತ್ತು ಮುಗೇರರ ಕೋಲಗಳಲ್ಲಿ ದುಡಿ ಕುಣಿತವಿರುತ್ತದೆ. ಮದುವೆಯೇ ಮೊದಲಾದ ಸಂಪ್ರದಾಯಗಳಲ್ಲಿಯೂ ದುಡಿ ನುಡಿತವಿರುತ್ತದೆ. ದುಡಿ ನುಡಿತಕ್ಕೆ ಪಾಡ್ದನ ಇದ್ದೇ ಇರುತ್ತದೆ. ಮುಖ್ಯವಾಗಿ ಓಪ್ಪೇಲೇ ದೈರಣೆ, ತಾಲಿ, ಇಯ್ಯಾಮ್ಮಾಜೋ, ಏಣುರೆಂಕಮ್ಮ, ಮೊದಲಾದವು ಮನರಂಜನೆಯ ಸಂದರ್ಭದ ಪಾರ್ದನಗಳು ದ‌‌‍ಸ. ಚೆನ್ನು, ಕೊರಗ, ಮತ್ತು ಮುಗೇರ ಸಂದಿಗಳು ಆರಾಧನ ಸಂದರ್ಭದಲ್ಲಿ ಹೇಳುವ ಪಾಡ್ದನಗಳು.‘ದಾರಿಲೊ’ ಮದುವೆಯ ಸಂದರ್ಭದಲ್ಲಿ ವಿಶೇಷವಾಗಿ ಹೇಳಲೇಬೇಕಾದ ಪಾಡ್ದನ. ದುಡಿ ನುಡಿತದಲ್ಲಿ ಅದರ ಲಯ ಮತ್ತು ನುಡಿಸುವೆಕೆಯ ವಿಧಾನಕ್ಕನು ಗುಣವಾಗಿ ಕೆಲವೊಂದು ಪ್ರಕಾರಗಳಿವೆ. ಬಾಣೆ ಪಾಡುನ, ಒತ್ತುಕೋಲು, ಕರಂಡೆ ಮೊದಲಾದವು ಅವುಗಳಲ್ಲಿ ಮುಖ್ಯವಾದವುಗಳು. ಸಾಂಪ್ರದಾಯಕವಾಗಿ ಎದುರು ಬದುರು ನಿಂತು ದುಡಿ ನುಡಿಸಿ ಪಂಥಾಹ್ವಾನ ನೀಡುತ್ತ ದಿನ ಗಟಗಟಲೆ ಬಾರಿಸುವ ದುಡಿ ವೀರರಿದ್ದಾರೆ. ‘ಕರಂಡೆ’ ಬಾರಿಸಿದಾಗ ದುಡಿಯು ಹುಲಿಯು ಮೊರೆಯುವಂತೆ ಮೊರೆಯುತ್ತದೆ ಎಂದೂ ಹೇಳಲಾಗುತ್ತದೆ. ದುಡಿಯು ಕೇವಲ ಮೇರರಲ್ಲಿ ಮಾತ್ರವಲ್ಲದೆ ದಕ್ಷಿಣಕನ್ನಡದ ಬುಡಕಟ್ಟುಗಳಾದ ಮನ್ಸ, ಮಾಯಿಲರಲ್ಲಿಯೂ ಇದೆ. ಹಾಗೆ ಕೊಡವರಲ್ಲಿಯೂ ದುಡಿ ಕುಣಿತವಿದೆ. ಇದೂ ಅಲ್ಲದೆ ಇನ್ನಿತರ ಬುಡಕಟ್ಟುಗಳೂ ತಮ್ಮದೇ ಆದ ದುಡಿಯನ್ನು ಹೊಂದಿದ್ದು ವಿಶಿಷ್ಟವಾಗಿ ನುಡಿಸುತ್ತಾರೆ.

ಕುಡಿಯರಕುಣಿತ[ಬದಲಾಯಿಸಿ]

ದಕ್ಷಿಣಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪರ್ವತ ಶ್ರೇಣಿಯಲ್ಲಿ ಆಗುಂಬೆಯಿಂದ ಬ್ರಹ್ಮಗಿರಿಯವರೆಗೆ ಹರಡಿಕೊಂಡಿರುವ ಒಂದು ಪ್ರಾಚೀನ ಜನಾಂಗವಿದು. ಮಲೆಯನ್, ಕುಡಿಯನ್, ಗೌಡರ್, ಈಡಿಗ, ಮಲೆಕುಡಿಯ ಇತ್ಯಾದಿ ಹೆಸರುಗಳಿಂದ ಕರೆಯಲಾಗುವ ಇವರು ಆಯಾಯ ಪ್ರಾದೇಶಿಕ ಭಾಷೆಗಳನ್ನು ತಮ್ಮದೇ ಆದ ರೀತಿಯಲ್ಲಿ ಮಾತಾಡುತ್ತಾರೆ. ಕುಡಿಯರನ್ನು ನಾಲ್ಮಲೆ ಕುಡಿಯರು ಮತ್ತು ಮೂರುಮಲೆ ಕುಡಿಯರೆಂದು ಗುರುತಿಸಲಾಗಿದೆ. ದಕ್ಷಿಣಕನ್ನಡದ ಕುಡಿಯರು ನಾಲ್ಕು ಮಲೆಯವರಾದರೆ, ಕೊಡಗಿನವರು ಮೂರುಮಲೆಯವರು. ಘಟ್ಟದ ಮೇಲಿನವರನ್ನು ಕುಡಿಯರೆಂದೂ, ಕೆಳಗಿನವರನ್ನೂ ಮಲೆಕುಡಿಯರೆಂದೂ ಕರೆಯಲಾಗುತ್ತದೆ.

ಪೀಲಿಯಾಟ್[ಬದಲಾಯಿಸಿ]

ಈ ಕಲೆಯನ್ನು ಕೊಡಗಿನ ಕುಡಿಯ ಗಂಡಸರು ಪ್ರತ್ಯೇಕವಾಗಿ ಮತ್ತು ಹೆಂಗಸರನ್ನೂ ಸೇರಿದಂತೆ ಒಟ್ಟಾಗಿ ಪ್ರದರ್ಶಿಸುವುದುಂಟು. ಕೊಡವರ ರೀತಿಯಲ್ಲಿ ಬಿಳಿಯ ನಿಲುವಂಗಿ, ಪಾಯಿಜಾವ ನಡುವಿಗೆ ವಸ್ತ್ರ, ತಲೆಗೆ ಪೇಟ ತೊಟ್ಟು ಗಂಡಸರು ಸಿದ್ಧರಾಗುತ್ತಾರೆ. ಹೆಂಗಸರಿಗಾದರೆ ಕೊಡವ ಮಹಿಳೆಯರಂತೆ ದೈನಂದಿನ ಉಡುಪುಗಳಿರುತ್ತವೆ. ಎರಡೂ ತೋಳುಗಳನ್ನೆತ್ತಿ ಕೈಗಳನ್ನು ಬಾಗಿಸುತ್ತಾ ಬಗ್ಗಿ, ಎದ್ದು, ಹಿಂದೆ ಮುಂದೆ ತಿರುಗುತ್ತಾ ಆಕರ್ಷಕವಾಗಿ ನರ್ತಿಸುವಾಗ ಒಬ್ಬ ಹಿಮ್ಮೇಖವಾಗಿ ಡೋಲನ್ನು ನುಡಿಸುತ್ತಾನೆ. ಕೊಡವರ ಕೊಂಬಾಟ್, ಪೀಲಿಯಾಟಗಳಂತೆ ಇದು ಕಂಡು ಬರುವುದಾದರೂ ಬಿರುಸಾದ ನರ್ತನ ಇಲ್ಲಿಯ ವಿಶೇಷ.

ಯರವರಕುಣಿತ[ಬದಲಾಯಿಸಿ]

ಅಮ್ಮತ್ತಿ, ಪೊನ್ನಂಪೇಟೆ, ಗೋಣಿಕೊಪ್ಪ ಮತ್ತು ಶ್ರೀಮಂಗಲವೂ ಸೇರಿದಂತೆ ವಿರಾಜಪೇಟೆಯ ಬಹುತೇಕ ಕಾಡುಗಳಲ್ಲಿ ಅಲ್ಲಲ್ಲಿ ನೆಲೆ ನಿಂತಿರುವ ಯರವರು ಒಂದು ವಿಶಿಷ್ಟ ಬುಡಕಟ್ಟು. ಕನದನಡ, ಕೊಡವ, ಮತ್ತು ಮಲೆಯಾಳಿ ಭಾಷೆಗಳ ಪ್ರಭುತ್ವದ ನಡುವೆಯೂ ತಮ್ಮದೇ ಆದ ‘ಯರವ’ ಉಪಭಾಷೆಯನ್ನು ಉಳಿಸಿಕೊಂಡು ಬಂದಿರುವ ಈ ಜನಾಂಗ ಅದೇ ಭಾಷೆಯಲ್ಲಿ ಹಾಡು, ಕಥೆಗಳನ್ನು ಕಟ್ಟಿದ್ದಾರೆ. ಇವರ ಜನಾಂಗದ ಸಾಂಸ್ಕ್ರತಿಕ ವೀರನನ್ನು ಕುರಿತ ಮಹಾಕಾವ್ಯವನ್ನು ಹಾಡುವ ಹಾಡುಗಾರರೂ ಇದ್ದಾರೆ.’ದುಡಿ’ ಬಾರಿಸುತ್ತಾ ಹಾಡುವ ಕಾವ್ಯವನ್ನು ‘ಪಟ್ಟೋರ್’ ಎಂದು ಕೆಲವರು ‘ಬಾಯನ’ ಎಂದು ಕೆಲವರು ಕರೆಯುತ್ತಾರೆ. ‘ಯರವ’ ಶಬ್ದ ‘ಇರವುಳ’ ಅಂದರೆ ಬೇಡುವವ ಎಂಬ ಶಬ್ದದಿಂದ ಬಂದುದಾಗಿರಬೇಕೆಂದೂ ‘ಪರವ’ ಶಬ್ದವೇ ಯರವ ಆಗಿದೆ ಊಹಿಸಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ವಾಸ ಮಾಡುತ್ತಿದ್ದ ‘ಚಂಡಾಳ’ರ ಒಂದು ಭಾಗದವರು ಎಂದೂ ಒಣದು ನಂಬಿಕೆ ಇದೆ. ಕೇರಳದ ವೈನಾಡು ಭಾಗದ ‘ಪರವ’ರಿಗೂ ತುಂಬಾ ಹೋಲಿಕೆ ಇದ್ದು 18ನೇ ಶತಮಾನದಲ್ಲಿ ಈ ಕಡೆ ವಲಸೆ ಬಂದಿರಬಹುದೆಂಬ ವಾದವೂ ಇದೆ. ಬೇರೆ ಬೇರೆ ಪ್ರದೇಶಗಳಿಗೆ ಸೇರಿದಯರವರು ಕೊಡಗಿನ ಈ ನೆಲದಲ್ಲಿ ಒಟ್ಟಿಗೆ ಸೇರಿರಬಹುದೆಂಬ ವಾದವನ್ನುಅವರಲ್ಲಿ ಈಗಿರುವ ‘ಪಂಜಿರಿಯರವ’, ‘ಫಣಿಯರವ’ ಹಾಗೂ ಬಡಗ ಎಂಬ ಪ್ರಭೇದಗಳಿಂದ ಪುಷ್ಟೀಕರಿಸಬಹುದೆಂದೂ ಹೇಳಲಾಗುತ್ತದೆ. ಒಟ್ಟಾರೆ ವೈನಾಡಿರಬಹುದು, ವಿರಾಜಪೇಟೆಯಿರಬಹುದು ಅಥವಾ ಸಹ್ಯಾದ್ರಿಯ ಯಾವುದೇ ಭಾಗದವರಿರಬಹುದು, ಇವರು ಬಹುದೂರದಿಂದ ಬಂದು ನೆಲೆದವರಂತೂ ಅಲ್ಲ. ಪಶ್ಚಿಮ ಘಟ್ಟಗಳ ಮಡಿಲಲ್ಲಿ ಬೆಳೆದು ವಿಕಾಸಗೊಂಡ ಜನಾಂಗವಿದು ಎಂಬುವುದರಲ್ಲಿ ಅನುಮಾನವಿಲ್ಲ. ಇವರುಯರವ ಭಾಷೆಯ ಜೊತೆಗೆ ಕನ್ನಡ, ಕೊಡವ ಮತ್ತು ಕೆಲವರು ಮಲೆಯಾಳಿ ಭಾಷೆಯನ್ನು ಬಲ್ಲವರಾಗಿದ್ದಾರೆ. ಯರವರು ದುಡಿತದ ದಣಿವಾರಿಸಿಕೊಳ್ಳಲು, ನೋವುಗಳನ್ನು ಮರೆಯಲು ರಾತ್ರಿ ಹೊತ್ತು ಸಾಮೂಹಿಕ ಕುಣಿತ ಮತ್ತು ಹಾಡುಗಳಿಗೆ ಪರವಶರಾಗುತ್ತಾರೆ. ಯರವರಕುಣಿತದ ವಿಶೇಷವೆಂದರೆ ಕುಣಿತದಲ್ಲಿ ಇಷ್ಟೇ ಜನರಿರಬೇಕೆಂದಾಗಲೀ, ಇಂಥವರೇ ಇರಬೇಕೆಂದಾಗಲೀ ಯಾವುದೇ ಕಟ್ಟುಪಾಡುಗಳಿಲ್ಲ. ಹಿನ್ನಲೆಗೆ ಪ್ರಧಾನವಾಗಿ ಬಳಸುವುದು ‘ದುಡಿ’ ಮತ್ತು ‘ಚೀನಿ ವಾದ್ಯ’ ದುಡಿ ದಕ್ಷಿಣ ಕನ್ನಡ, ಉತ್ತರಕನ್ನಡ, ಶಿಮೊಗ್ಗ ಹಾಗೂ ಕೊಡಗಿನ ಗಿರಿಜನರಲ್ಲಿ ಬಳಕೆಯಲ್ಲಿರುವ ಜನಪ್ರಿಯ ಚರ್ಮವಾದ್ಯ. ಆದರೆಯರವರ ‘ಚೀನಿ ವಾದ್ಯ’ ತುಂಬಾ ವಿಶೇಷವಾದ ಗಾಳಿವಾದ್ಯ. ಶ್ರುತಿ ಮೊದಲುಗೊಂಡು ಇದನ್ನು ಪೂರ್ಣ ಮರದಿಂದಲೇ ಮಾಡಿರುತ್ತಾರೆ. ಒಂದು ರೀತಿಯ ಗುಂಗು ತುಂಬುವ ನಾದ ವಿಶೇಷ. ಇದನ್ನು ಯರವರೇ ತಯಾರು ಮಾಡಿಕೊಳ್ಳುತ್ತಾರೆ. ದುಡಿಯ ಲಯಬದ್ದ ಬಡಿತಕ್ಕೆ ಬಾಗಿ ಬಾಗಿ ಜೋಲಿ ಹೊಡೆಯುತ್ತಾ ಕುಣಿಯುತ್ತಾರೆ. ಮಹಿಳೆಯರು ಮತ್ತು ಮಕ್ಕಳು, ಪುರುಷರನ್ನೊಳಗೊಂಡ ಸಾಮೂಹಿಕ ನೃತ್ಯವಿದು. ಯರವರ ಗಂಡಸರೇ ಕುಣಿಯುವ ಕೊಡವ ನೃತ್ಯದ ಮಾದರಿಯಾದ ‘ಯರವಾಟ್’ ನೃತ್ಯವೂ ಬಳಕೆಯಲ್ಲಿ ಇದೆ.

ಉಲ್ಲೇಖಗಳು[ಬದಲಾಯಿಸಿ]

  1. http://kanaja.in/?p=118024