ವಿಷಯಕ್ಕೆ ಹೋಗು

ಶಿಂಡ್ಲರ್ಸ್ ಲಿಸ್ಟ್ (ಸಿನೆಮಾ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Schindler's List
ನಿರ್ದೇಶನSteven Spielberg
ನಿರ್ಮಾಪಕSteven Spielberg
Gerald R. Molen
Kathleen Kennedy
Branko Lustig
ಲೇಖಕNovel:
Thomas Keneally
Screenplay:
Steven Zaillian
ಪಾತ್ರವರ್ಗLiam Neeson
Ben Kingsley
Ralph Fiennes
Caroline Goodall
Embeth Davidtz
ಸಂಗೀತJohn Williams
ಛಾಯಾಗ್ರಹಣJanusz Kamiński
ಸಂಕಲನMichael Kahn
ಸ್ಟುಡಿಯೋAmblin Entertainment
ವಿತರಕರುUniversal Pictures
ಬಿಡುಗಡೆಯಾಗಿದ್ದು30 November (West Frisian) (premiere: DC)
1 December (West Frisian) (NYC)
9 December (West Frisian) (LA)
15 December (West Frisian) (US general)
25 December (West Frisian) (Canada)
10 February (West Frisian) (Australia)
18 February (West Frisian) (UK)
3 March (West Frisian) (Germany)
4 March (West Frisian) (Poland)
ಅವಧಿ195 minutes
ದೇಶUnited States
ಭಾಷೆEnglish
Hebrew
ಜರ್ಮನ್
Polish
ಫ್ರೆಂಚ್
ಬಂಡವಾಳ$22 million[೧]
ಬಾಕ್ಸ್ ಆಫೀಸ್$321 million

ಷಿಂಡ್ಲರ್‌ನ ಪಟ್ಟಿ ಆಸ್ಕರ್ ಷಿಂಡ್ಲರ್ ಎಂಬಾತನ ಕುರಿತಾದ ೧೯೯೩ ರ ಅಮೇರಿಕಾದ ಚಲನಚಿತ್ರ. ಆತ ಜರ್ಮನಿಯ ಓರ್ವ ಉದ್ಯಮಿಯಾಗಿದ್ದು, ಸಾಮೂಹಿಕ ನರಮೇಧದ ಸಮಯದಲ್ಲಿ ಸಾವಿರಾರು ಪೋಲೆಂಡ್‌ನ ಯಹೂದಿ ನಿರಾಶ್ರಿತರನ್ನು ತನ್ನ ಕಾರ್ಖಾನೆಗಳಲ್ಲಿ ಉದ್ಯೋಗ ನೀಡುವ ಮೂಲಕ ಬದುಕಲು ಅವಕಾಶ ಕಲ್ಪಿಸಿಕೊಟ್ಟಿರುತ್ತಾನೆ. ಇದು ಥಾಮಸ್ ಕೆನಿಯಲ್ಲೈ ರಚಿಸಿದ ಷಿಂಡ್ಲರ್ಸ್‌ ಆರ್ಕ್ ಕಾದಂಬರಿ ಆಧಾರಿತವಾಗಿದ್ದು, ಸ್ಟೀವನ್ ಸ್ಪಿಲ್‌ಬರ್ಗ್‌‌ ಈ ಚಿತ್ರವನ್ನು ನಿರ್ದೇಶಿಸಿರುತ್ತಾರೆ. ಇದರಲ್ಲಿ ಷಿಂಡ್ಲರ್‌ ಪಾತ್ರದಲ್ಲಿ ಲಿಯಾಂ ನೀಸನ್‌, ರಾಲ್ಫ್‌‌ ಫಿಯೆನ್ನೆಸ್‌ ಷುಟ್ಜ್‌ಸ್ಟಾಫೆಲ್‌‌ (SS) ಅಧಿಕಾರಿ ಅಮನ್‌ ಗೋತ್‌ ಪಾತ್ರದಲ್ಲಿ, ಹಾಗೂ ಬೆನ್‌ ಕಿಂಗ್‌ಸ್ಲೆ, ಷಿಂಡ್ಲರ್‌ನ ಯಹೂದಿ ಕರಣಿಕ ಇಟ್ಜಾಕ್‌ ಸ್ಟರ್ನ್‌‌ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದ್ದಲ್ಲದೇ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಹಾಗೂ ಅತ್ಯುತ್ತಮ ಮೂಲ ಸಂಗೀತಗಳೂ ಸೇರಿದಂತೆ ಏಳು ಅಕಾಡೆಮಿ ಪ್ರಶಸ್ತಿಗಳನ್ನು, ಹಾಗೂ ಇನ್ನಿತರ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ೨ರಲ್ಲಿ, ಅಮೇರಿಕನ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ (AFI) ಸಂಸ್ಥೆಯು ಚಿತ್ರಕ್ಕೆ ತನ್ನ ಸಾರ್ವಕಾಲಿಕ ೧೦೦ ಅತ್ಯುತ್ತಮ ಅಮೇರಿಕನ್‌ ಚಿತ್ರಗಳ ಪಟ್ಟಿಯಲ್ಲಿ ೮ ನೇ ಸ್ಥಾನ ನೀಡಿದೆ (೨೯೯೮ ರ ಪಟ್ಟಿಯ ತನ್ನ ೯ ನೇ ಸ್ಥಾನದಿಂದ ಒಂದು ಸ್ಥಾನ ಮೇಲೇರಿದಂತಾಗಿದೆ).

ಕಥಾವಸ್ತು[ಬದಲಾಯಿಸಿ]

1939ರಲ್ಲಿ ವಿಶ್ವ ಸಮರ IIರ ಆರಂಭವಾದ ಸ್ವಲ್ಪ ಸಮಯದಲ್ಲೇ ಪೋಲೆಂಡಿನ ಯಹೂದಿಗಳು ಅಲ್ಲಿನ ಸುತ್ತಮುತ್ತಲಿನ ಪ್ರದೇಶದಿಂದ ಕ್ರಾಕೌ ಘೆಟ್ಟೋಗೆ ಸ್ಥಳಾಂತರಗೊಳ್ಳುವುದೊಂದಿಗೆ ಚಿತ್ರವು ಆರಂಭವಾಗುತ್ತದೆ. ಆಗ, ಮೊರಾವಿಯಾ ಮೂಲದ ಓರ್ವ ವಿಫಲ ಅಯಹೂದಿ ಜರ್ಮನ್‌ ಉದ್ಯಮಿ ಆಸ್ಕರ್‌ ಷಿಂಡ್ಲರ್‌ (ಲಿಯಾಂ ನೀಸನ್‌), ಯುದ್ಧ ಲಾಭಕೋರನಾಗಿ ತನ್ನ ಭವಿಷ್ಯತ್ತನ್ನು ರೂಪಿಸಿಕೊಳ್ಳುವ ಆಶಯದೊಂದಿಗೆ ನಗರಕ್ಕೆ ಆಗಮಿಸುತ್ತಾನೆ. ನ್ಯಾಷನಲ್‌ ಸೋಷಲಿಸ್ಟ್‌ ಪಾರ್ಟಿ ಪಕ್ಷದ ಸದಸ್ಯನಾದ ಷಿಂಡ್ಲರ್‌, ಹಣ ಸಂಗ್ರಹಣೆಯ ಮೇಲ್ವಿಚಾರಕರಾದ ವೆಹ್ರ್‌ಮಚ್ಟ್‌ ಹಾಗೂ SS ಅಧಿಕಾರಿಗಳಿಗೆ ವಿಪರೀತ ಹಣದ ಆಮಿಷ ನೀಡುತ್ತಾನೆ. ಸೈನ್ಯದ ಪ್ರಾಯೋಜನೆಯ ಸಹಾಯದಿಂದ, ಷಿಂಡ್ಲರ್‌ ಸೈನ್ಯದ ಉಪಾಹಾರ ಕಿಟ್‌ಗಳ ಕಾರ್ಖಾನೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಾನೆ. ಇಂತಹಾ ಉದ್ದಿಮೆಯನ್ನು ಸರಿಯಾಗಿ ನಡೆಸಿ ಗೊತ್ತಿಲ್ಲದ ಕಾರಣ, ಘೆಟ್ಟೋನ ಯಹೂದ್ಯ ಉದ್ಯಮಿ ಸಮುದಾಯ ಹಾಗೂ ಕಾಳಸಂತೆಕೋರರೊಡನೆ ಸಂಪರ್ಕವಿರುವ ಕ್ರಾಕೌ'ನ ಜ್ಯುಡೆನ್ರತ್‌ (ಯಹೂದೀಯ ಸಮಿತಿ)ನ ಅಧಿಕಾರಿಯಾದ ಇಟ್‌ಜ್ಹಾಕ್‌ ಸ್ಟರ್ನ್‌ (ಬೆನ್‌ ಕಿಂಗ್‌ಸ್ಲೇ)ನಲ್ಲಿ ಸಹಭಾಗಿಯೊಬ್ಬನನ್ನು ಕಂಡುಕೊಳ್ಳುತ್ತಾನೆ. ಅವರು ಉತ್ಪಾದನೆಯ ಅಲ್ಪ ಭಾಗಾಂಶದ ಬದಲಿಗೆ ಕಾರ್ಖಾನೆಗೆ ಅಗತ್ಯವಾದ ಸಾಲವನ್ನು ನೀಡುತ್ತಾರೆ. ಕಾರ್ಖಾನೆಯನ್ನು ತೆರೆದ ನಂತರ, ಎಲ್ಲಾ ನಿರ್ವಹಣೆಯನ್ನು ಸ್ಟರ್ನ್‌ ನೋಡಿಕೊಳ್ಳುತ್ತಿರುವಾಗ ಷಿಂಡ್ಲರ್‌ ನಾಝಿಗಳನ್ನು ಸಂತೋಷಪಡಿಸಿ "ಹೆರ್‌ ಡೈರೆಕ್ಟರ್‌" ಎಂಬ ಸ್ಥಾನಮಾನವನ್ನು ಹಾಗೂ ಆಗತಾನೆ ಪಡೆದ ಐಶ್ವರ್ಯವನ್ನು ಆನಂದಿಸುತ್ತಿರುತ್ತಾನೆ. ಷಿಂಡ್ಲರ್‌ ಕಡಿಮೆ ವೆಚ್ಚದ ಕಾರಣ ಕ್ಯಾಥೊಲಿಕ್‌ ಪೊಲೆಂಡಿಗರ ಬದಲಿಗೆ ಯಹೂದೀಯ ಪೊಲೆಂಡಿಗರಿಗೆ ಉದ್ಯೋಗ ನೀಡುತ್ತಾನೆ (ಕೆಲಸಗಾರರಿಗೆ ಹಣವನ್ನು ನೀಡಲಾಗುತ್ತಿರಲಿಲ್ಲ, ಕೂಲಿಯನ್ನು SSಗೆ ಪಾವತಿ ಮಾಡಲಾಗುತ್ತಿತ್ತು). ಷಿಂಡ್ಲರ್‌'ನ ಕಾರ್ಖಾನೆಯ ಕೆಲಸಗಾರರನ್ನು ಘೆಟ್ಟೋದ ಹೊರಗೆ ಹೋಗಲು ಬಿಡಲಾಗುತ್ತಿದ್ದುದಲ್ಲದೇ, ಸ್ಟರ್ನ್‌ ಸಾಧ್ಯವಾದಷ್ಟೂ ಜನರನ್ನು ಜರ್ಮನ್‌ ಯುದ್ಧ ಕಾರ್ಯಕ್ಕೆ “ಅಗತ್ಯವಾದವರೆಂಬಂತೆ” ಬಿಂಬಿಸಿ ಅವರನ್ನು ಸೆರೆಶಿಬಿರಕ್ಕೆ ಕರೆದೊಯ್ಯದಂತೆ ಅಥವಾ ಕೊಲ್ಲದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದನು.

SS ನಾಯಕ ಅಮನ್‌ ಗಾತ್‌ (ರಾಲ್ಫ್‌ ಫಿಯೆನ್ನೆಸ್‌) ಎಂಬಾತ ನವೀನ ಪ್ಲಾಜೌ ಸೆರೆಶಿಬಿರದ ನಿರ್ಮಾಣವನ್ನು ಆರಂಭಿಸಲೆಂದು ಕ್ರಾಕೌಗೆ ಆಗಮಿಸುತ್ತಾನೆ. ಘೆಟ್ಟೋದ ಭಾಗವನ್ನು ಮುಚ್ಚಲು ಆತ ಆದೇಶಿಸಿದಾಗ, ನಿರ್ಬಂಧಿತ ಕೋಣೆಗಳನ್ನು ಖಾಲಿ ಮಾಡಿಸುವ ಹಾಗೂ ವಿರೋಧಿಸಿದವರು, ಅಸಹಕಾರಿಗಳೆಂದು ಕಂಡುಬರುವವರು, ವಯಸ್ಸಾದವರು ಅಥವಾ ದುರ್ಬಲರನ್ನು ಹತ್ಯೆ ಮಾಡುವ ಕ್ರಾಕೌನಲ್ಲಿನ ಆಪರೇಷನ್‌ ರೇನ್‌ಹಾರ್ಡ್‌ ಕಾರ್ಯಾಚರಣೆ ಆರಂಭವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಮನಸ್ಸಿಗೆ ಬಂದಂತೆ ಹತ್ಯೆಗೈಯಲಾಗಿತ್ತು. ಪ್ರದೇಶವನ್ನು ಆವರಿಸಿರುವ ಬೆಟ್ಟದ ಮೇಲಿಂದ ಈ ಹತ್ಯಾಕಾಂಡವನ್ನು ನೋಡುತ್ತಿದ್ದ ಷಿಂಡ್ಲರ್‌ ಗಾಢನೋವನ್ನು ಅನುಭವಿಸುತ್ತಾನೆ. ಆದಾಗ್ಯೂ ಸ್ಟರ್ನ್‌'ನ ಲಂಚದ ವ್ಯವಸ್ಥೆಯ ಮೂಲಕ ಗಾತ್‌ನ ಸ್ನೇಹ ಬೆಳೆಸಿ SS'ನ ಬೆಂಬಲ ಹಾಗೂ ರಕ್ಷಣೆಯನ್ನು ಪಡೆದುಕೊಂಡೇ ಇರುವಂತೆ ಎಚ್ಚರವಹಿಸುತ್ತಾನೆ. ಇದೇ ಸಮಯದಲ್ಲಿ, ಷಿಂಡ್ಲರ್‌ ಗಾತ್‌ಗೆ ಆಮಿಷ ತೋರಿಸಿ ತನ್ನ ಕೆಲಸಗಾರರಿಗೆ ಉಪ-ಶಿಬಿರವನ್ನು ಕಟ್ಟಲು ಅನುಮತಿ ಪಡೆದುಕೊಳ್ಳುತ್ತಾನೆ. ಮೂಲತಃ, ಆತನ ಉದ್ದೇಶವು ಹಣ ಮಾಡುವುದನ್ನು ಮುಂದುವರೆಸುವುದೇ ಆಗಿದ್ದರೂ, ಕಾಲ ಕಳೆದಂತೆ, ಆತ ಸ್ಟರ್ನ್‌ಗೆ ಸಾಧ್ಯವಾದಷ್ಟು ಜೀವಗಳನ್ನು ಉಳಿಸಲು ಆದೇಶಿಸಲು ಆರಂಭಿಸುತ್ತಾನೆ. ಯುದ್ಧವು ಸ್ಥಳಾಂತರಗೊಂಡಾಗ, ಬರ್ಲಿನ್‌ನಿಂದ ಗಾತ್‌ಗೆ ಕ್ರಾಕೌ ಘೆಟ್ಟೋದಲ್ಲಿ ಹತ್ಯೆಯಾದ ಪ್ರತಿ ಯಹೂದ್ಯ ಅವಶೇಷಗಳನ್ನು ಹೊರತೆಗೆದು ನಾಶಮಾಡಲು, ಪ್ಲಾಜೌವನ್ನು ಕೆಡವಲು ಹಾಗೂ ಉಳಿದಿರುವ ಯಹೂದ್ಯರನ್ನು ಆಷ್‌ವಿಟ್ಜ್‌ ಸೆರೆಶಿಬಿರಕ್ಕೆ ಸಾಗಿಸಲು ಆದೇಶ ಬರುತ್ತದೆ.

ಮೊದಲಿಗೆ, ಷಿಂಡ್ಲರ್‌ ತನ್ನ ದುರದೃಷ್ಟದೊಂದಿಗೆ ಕ್ರಾಕೌವನ್ನು ತ್ಯಜಿಸಲು ತಯಾರಿ ನಡೆಸುತ್ತಾನೆ. ನಂತರ ಆದಾಗ್ಯೂ ಗಾತ್‌ನ ಮೇಲೆ ಪ್ರಭಾವ ಬೀರಿ “ಅಂತಿಮ ಪರಿಹಾರದಿಂದ” ದೂರವಾಗಿ, “ತನ್ನ” ಕೆಲಸಗಾರರನ್ನು ಉಳಿಸಿಕೊಳ್ಳಲು ಆಕ್ರಮಿತ ಪೋಲೆಂಡ್‌ನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮೊರಾವಿಯಾಜ್ವಿಟ್ಟೌ-ಬ್ರಿನ್‌ಲಿಟ್ಜ್‌ನ ಹಳೆಯ ವಾಸಸ್ಥಾನದಲ್ಲಿನ ಕಾರ್ಖಾನೆಗೆ ಸ್ಥಳಾಂತರಿಸಲಾಗುವಂತೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಗಾತ್‌ ಸಮ್ಮತಿಸಿದರೂ, ಪ್ರತಿ ಕೆಲಸಗಾರನಿಗೂ ಭಾರೀ ಲಂಚವನ್ನು ವಿಧಿಸುತ್ತಾನೆ. ಷಿಂಡ್ಲರ್‌ ಹಾಗೂ ಸ್ಟರ್ನ್‌ ಆಷ್‌ವಿಟ್ಜ್‌ನ ರೈಲಿನಿಂದ ದೂರವಿರಿಸಬೇಕಾದ ಕೆಲಸಗಾರರ ಪಟ್ಟಿ ತಯಾರಿಸುತ್ತಾರೆ.

"ಷಿಂಡ್ಲರ್‌'ನ ಪಟ್ಟಿಯು" ಈ “ನುರಿತ” ಸಹವಾಸಿಗಳನ್ನು ಹೊಂದಿದ್ದು, ಪ್ಲಾಜೌ ಶಿಬಿರದಲ್ಲಿದ್ದ ಹಲವರಿಗೆ ಈ ಪಟ್ಟಿಗೆ ಸೇರುವುದು ಸಾವು ಬದುಕಿನ ವಿಷಯವಾಗಿತ್ತು. ಷಿಂಡ್ಲರ್‌'ನ ಪಟ್ಟಿಯಲ್ಲಿನ ಬಹುಪಾಲು ಜನ ಸುರಕ್ಷಿತವಾಗಿ ಹೊಸ ಪ್ರದೇಶಕ್ಕೆ ತಲುಪುತ್ತಾರೆ. ಯಹೂದ್ಯ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ರೈಲು ಆಕಸ್ಮಿಕವಾಗಿ ಆಷ್‌ವಿಟ್ಜ್‌ಗೆ ಪುನರ್ನಿರ್ದೇಶಿತಗೊಳ್ಳುತ್ತದೆ. ಅಲ್ಲಿ ಅನಿಲ ಕಕ್ಷೆಗೆ ತಮ್ಮನ್ನು ಕರೆದೊಯ್ಯಲಾಗುತ್ತಿದೆ ಎಂದು ಭಾವಿಸಿದ್ದ ಭಯಭೀತ ಮಹಿಳೆಯರು, ಅಲ್ಲಿಂದ ಜಲಸಿಂಪಡಕವು ನೀರು ಸಿಂಪಡಿಸಿದಾಗ ಖುಷಿಯಿಂದ ಅಳುತ್ತಾರೆ. ನಂತರದ ದಿನ, ಆ ಮಹಿಳೆಯರನ್ನು ಕೆಲಸಕ್ಕೆ ಸಾಲಿನಲ್ಲಿ ನಿಂತ ಹಾಗೆ ತೋರಿಸಲಾಗುತ್ತದೆ. ಅದೇ ಸಮಯಕ್ಕೆ, ಷಿಂಡ್ಲರ್‌ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಲು ಆಷ್‌ವಿಟ್ಜ್‌ಗೆ ತೆರಳುತ್ತಾನೆ. ಎಲ್ಲಾ ಮಹಿಳೆಯರನ್ನೂ ರಕ್ಷಿಸುವ ಉದ್ದೇಶದಿಂದ ಶಿಬಿರದ ದಳಪತಿಯಾದ ರುಡಾಲ್ಫ್‌ ಹಾಬ್‌ಗೆ ಬ್ರಿನ್‌ಲಿಟ್ಜ್‌ಗೆ ಮಹಿಳೆಯರನ್ನು ಬಿಡುಗಡೆ ಮಾಡುವುದರ ಬದಲಿಗೆ ವಜ್ರಗಳ ಗಂಟನ್ನು ಕೊಡುವುದಾಗಿ ಆಮಿಷ ಒಡ್ಡುತ್ತಾನೆ. ಆದಾಗ್ಯೂ ಮಹಿಳೆಯರು ರೈಲು ಹತ್ತುವಷ್ಟರಲ್ಲಿ ಕೊನೆಯ ಗಳಿಗೆಯ ಸಮಸ್ಯೆ ಎದುರಾಗುತ್ತದೆ. ಅನೇಕ SS ಅಧಿಕಾರಿಗಳು ಮಕ್ಕಳನ್ನು ತಡೆಹಿಡಿದು ಅವರನ್ನು ಅಲ್ಲಿಂದ ಹೊರಡದಂತೆ ತಡೆಯುತ್ತಾರೆ. ಆದಾಗ್ಯೂ, ಮದ್ದುಗುಂಡುಗಳ ಒಳಭಾಗವನ್ನು ಶುದ್ಧೀಕರಿಸಲು ಅವರ ಕೈಗಳು ಬೇಕಾಗುತ್ತವೆ ಎಂದು ಷಿಂಡ್ಲರ್‌ ಒತ್ತಾಯಿಸುತ್ತಾನೆ. ಅದರ ಪರಿಣಾಮವಾಗಿ ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ. ಮಹಿಳೆಯರು ಒಮ್ಮೆ ಜ್ವಿಟ್ಟೌ-ಬ್ರಿನ್‌ಲಿಟ್ಜ್‌ಗೆ ತಲುಪಿದ ನಂತರ, ಯಾರನ್ನೂ ಹಿಂಸಿಸದಂತೆ ಹಾಗೂ ಯಾರ ಮೇಲೂ ಗುಂಡು ಹಾರಿಸದಂತೆ ಷಿಂಡ್ಲರ್‌ ಕಾರ್ಖಾನೆಗೆ ನಿಯೋಜಿತರಾದ ಪಹರೆಯವರ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳುತ್ತಾನೆ. ಆತ ಯಹೂದ್ಯರಿಗೆ ಸಬ್ಬತ್‌ ಆಚರಿಸಲು ಅನುಮತಿ ನೀಡುತ್ತಾನೆ. ತನ್ನ ಕಾರ್ಖಾನೆಯ ಕೆಲಸಗಾರರನ್ನು ಜೀವದಿಂದಿರಿಸಲು ತನ್ನ ಬಹುಪಾಲು ಐಶ್ವರ್ಯವನ್ನು ಆತ ನಾಝಿ ಅಧಿಕಾರಿಗಳಿಗೆ ಲಂಚ ನೀಡಲು ವ್ಯಯಿಸುತ್ತಾನೆ. ನಂತರ, ದಿವ್ಯಾರಾಧನೆಯ ಸಮಯದಲ್ಲಿ ಹಳ್ಳಿಯ ಚರ್ಚ್‌ನಲ್ಲಿದ್ದ ತನ್ನ ಪತ್ನಿಗೆ, ತಾನು ಹಿಂದೆ ನೀಡದ ಹಕ್ಕೊಂದನ್ನು ನೀಡಿ, ತನ್ನ ಜೀವನದಲ್ಲಿನ ಏಕೈಕ ಮಹಿಳೆ ಅವಳೆಂದು ಹೇಳಿ ಬೆರಗು ಹುಟ್ಟಿಸುತ್ತಾನೆ. ಆಕೆ ಆತನಿಗೆ ಸಹಾಯ ಮಾಡಲು ಕಾರ್ಖಾನೆಗೆ ಅವನೊಂದಿಗೆ ತೆರಳುತ್ತಾಳೆ. ವೆಹ್ರ್‌ಮಚ್ಟ್‌ ಸೋಲೊಪ್ಪಿಕೊಂಡು ಯೂರೋಪ್‌ನಲ್ಲಿ ಯುದ್ಧ ಕೊನೆಗೊಳ್ಳುವ ಹೊತ್ತಿಗೆ ಆತ ಬರಿಗೈಯವನಾಗಿರುತ್ತಾನೆ.

ನಾಝಿ ಪಕ್ಷದ ಸದಸ್ಯ ಹಾಗೂ ಸ್ವಘೋಷಿತ "ಗುಲಾಮಗಿರಿಯ ಲಾಭಕೋರ"ನಾದುದರಿಂದ, ೧೯೪೫ ರಲ್ಲಿ ಷಿಂಡ್ಲರ್‌ ಕೆಂಪು ಸೈನ್ಯ ಮುನ್ನಡೆಯಿಂದಾಗಿ ತಲೆತಪ್ಪಿಸಿಕೊಳ್ಳಬೇಕಾಗುತ್ತದೆ. SS ಪಹರೆಯವರಿಗೆ ಬ್ರಿನ್‌ಲಿಟ್ಜ್‌‌ನ ಯಹೂದ್ಯರನ್ನು "ಕೊಲ್ಲಲು" ಆದೇಶ ನೀಡಲಾಗಿದ್ದರೂ, ಷಿಂಡ್ಲರ್‌ ಅವರನ್ನು ಕೊಲೆಗಾರರಾಗಲ್ಲದೇ ಮನುಷ್ಯರಾಗಿ ಮನೆಗೆ ಮರಳಲು ಒಪ್ಪಿಸುತ್ತಾನೆ. ನಂತರದ ಬೆಳವಣಿಗೆಯಲ್ಲಿ ಆತ ಕಾರೊಂದರಲ್ಲಿ ತನ್ನ ಸಾಮಾನು ಸರಂಜಾಮು ತುಂಬಿಕೊಂಡು ರಾತ್ರಿಯಲ್ಲಿ ತನ್ನ ಕೆಲಸಗಾರರಿಂದ ಬೀಳ್ಕೊಡುತ್ತಾನೆ. ಅವರು ಅವನಿಗೆ ತಮ್ಮ ಪಾಲಿಗೆ ಆತನು ಪಾತಕಿಯಲ್ಲವೆಂದು ವಿವರಿಸುವ ಪತ್ರವನ್ನು, ಓರ್ವ ಕೆಲಸಗಾರನ ಚಿನ್ನದ ಹಲ್ಲುಪಟ್ಟಿಯಿಂದ ರಹಸ್ಯವಾಗಿ ತಯಾರಿಸಲಾದ ಉಂಗುರವೊಂದನ್ನು ನೀಡುತ್ತಾರಲ್ಲದೇ, "ಒಂದು ಜೀವವುಳಿಸುವ ವ್ಯಕ್ತಿ ಇಡೀ ವಿಶ್ವವನ್ನೇ ಉಳಿಸಿದಂತೆ" ಎಂಬ ಯಹೂದಿ ಧರ್ಮಗ್ರಂಥದ ಹೇಳಿಕೆಯನ್ನು ಆತನ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡುತ್ತಾರೆ. ಷಿಂಡ್ಲರ್‌ ಇದೆಲ್ಲದರಿಂದ ಪ್ರಭಾವಿತನಾದುದಲ್ಲದೇ, ತಾನು ಮತ್ತಷ್ಟು ಜೀವಗಳನ್ನು ಉಳಿಸಲು ಮತ್ತಷ್ಟು ಪ್ರಯತ್ನಗಳನ್ನು ಮಾಡಬಹುದಿತ್ತು ಎಂದು ಭಾವಿಸಿ ಬಹಳವೇ ಲಜ್ಜಿತನಾಗುತ್ತಾನೆ. ಆ ರಾತ್ರಿಯಲ್ಲಿ, ತನ್ನ ಪತ್ನಿಯೊಂದಿಗೆ ಸ್ಥಳದಿಂದ ತೆರಳುತ್ತಾ ತಾನು ಇನ್ನೆಷ್ಟೋ ಜೀವಗಳನ್ನು ಉಳಿಸಲು ಸಾಧ್ಯವಿತ್ತಲ್ಲವೇ ಎಂದು ಹಳಹಳಿಸುತ್ತಾನೆ.

ರಾತ್ರಿಯಿಡೀ ಕಾರ್ಖಾನೆಯ ದ್ವಾರದ ಹೊರಗೇ ಮಲಗಿದ್ದ ಷಿಂಡ್ಲರ್‌ ಯಹೂದ್ಯರು, ಮರುದಿನದ ಸೂರ್ಯೋದಯದ ಬೆಳಕು ಕಣ್ಣಿಗೆ ಬಿದ್ದಾಗ ಎಚ್ಚರಗೊಳ್ಳುತ್ತಾರೆ. ಸೋವಿಯತ್ ಅಶ್ವಸೈನಿಕನೊಬ್ಬ ಬಂದು ಕೆಂಪು ಸೈನಿಕರಿಂದ ಆ ಯಹೂದ್ಯರೆಲ್ಲರೂ ಬಿಡುಗಡೆ ಹೊಂದಿದ್ದಾರೆಂದು ಘೋಷಿಸುತ್ತಾನೆ. ಆಹಾರವನ್ನು ಹುಡುಕಿಕೊಂಡು ಸಮೀಪದ ಪಟ್ಟಣಕ್ಕೆ ಕಾಲ್ನಡಿಗೆಯಲ್ಲಿಯೇ ಯಹೂದ್ಯರು ತೆರಳುತ್ತಾರೆ.

ಯುದ್ಧಾಪರಾಧಗಳಿಗೆ ಶಿಕ್ಷೆಯಾಗಿ ಅಮನ್‌ ಗಾತ್‌ನನ್ನು ಗಲ್ಲಿಗೇರಿಸುವುದು ಹಾಗೂ ನಂತರದ ವರ್ಷಗಳಲ್ಲಿ ಷಿಂಡ್ಲರ್‌ಗೆ ಅಂತಿಮವಾಗಿ ಏನಾಯಿತು ಎಂಬುದರ ಸಂಕ್ಷಿಪ್ತ ಚಿತ್ರಣದಂತಹಾ ಯುದ್ಧಾ-ನಂತರದ ಘಟನಾವಳಿಗಳ ಕೆಲ ದೃಶ್ಯಗಳನ್ನು ಸ್ಥಳಗಳನ್ನೂ ತೋರಿಸಿದ ನಂತರ, ಚಿತ್ರವು ಯಹೂದ್ಯರು ಸಮೀಪದ ಪಟ್ಟಣಕ್ಕೆ ತೆರಳುವಲ್ಲಿಗೆ ಮರಳುತ್ತದೆ. ಅವರು ಒಟ್ಟಿಗೆ ನಡೆಯುತ್ತಿರುವಂತೆಯೇ, ಚಿತ್ರದ ಚೌಕಟ್ಟು ಜೆರುಸಲೇಂನಲ್ಲಿರುವ ಷಿಂಡ್ಲರ್‌ನ ಸಮಾಧಿಯ ಬಳಿಯಲ್ಲಿ ನಿಂತಿರುವ ವರ್ಣದೃಶ್ಯಕ್ಕೆ ಬದಲಾಗುತ್ತದೆ. ಪ್ರಸ್ತುತ ಹಿರಿಯರಾಗಿರುವ, ಷಿಂಡ್ಲರ್‌'ನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯಹೂದ್ಯರು ಮೆರವಣಿಗೆಯಲ್ಲಿ ಬಂದು ಗೌರವಪೂರ್ವಕವಾಗಿ ಆತನ ಸಮಾಧಿಯ ಮೇಲೆ ಶಿಲೆಯನ್ನಿಡುವಲ್ಲಿಗೆ ಚಿತ್ರವು ಅಂತ್ಯಗೊಳ್ಳುತ್ತದೆ. ಪ್ರಮುಖ ಪಾತ್ರಗಳನ್ನು ವಹಿಸಿದ ನಟರು ತಾವು ಬಿಂಬಿಸಿದ ಜನರೊಂದಿಗೆ ಕೈಸೇರಿಸಿ ಜೊತೆಯಲ್ಲಿ ನಡೆಯುತ್ತಾ ಷಿಂಡ್ಲರ್‌'ನ ಸಮಾಧಿಯ ಮೇಲೆ ಶಿಲೆಯನ್ನು ಇಡುತ್ತಾರೆ. ಆಗ ಪ್ರೇಕ್ಷಕರಿಗೆ ಚಿತ್ರವು ಬಿಡುಗಡೆಯಾಗುವ ಸಮಯದಲ್ಲಿ ಪೋಲೆಂಡಿನಲ್ಲಿ ೪,೦೦೦ ಕ್ಕಿಂತಲೂ ಕಡಿಮೆ ಸಂಖ್ಯೆಯ ಯಹೂದ್ಯರು ಜೀವಂತವಿದ್ದರೆ, ೬,೦೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಷಿಂಡ್ಲರ್‌ ಯಹೂದ್ಯರ ವಂಶಜರು ವಿಶ್ವದ ಹಲವು ಭಾಗಗಳಲ್ಲಿದ್ದಾರೆ ಎಂಬುದರಿವಾಗುತ್ತದೆ. ಅಂತಿಮ ದೃಶ್ಯದಲ್ಲಿ, ಲಿಯಾಂ ನೀಸನ್‌ (ಆತನ ಮುಖವು ಮರೆಯಾಗಿದ್ದರೂ) ಸಮಾಧಿಯ ಮೇಲೆ ಗುಲಾಬಿ ಹೂಗಳನ್ನು ಇಟ್ಟು ಅದರ ಮೇಲೆ ಆತ ಧ್ಯಾನಮಗ್ನನಾಗಿ ನಿಂತಿರುತ್ತಾನೆ.

"ಆರು ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಕೊಲೆಯಾದ ಯಹೂದ್ಯರ ನೆನಪಿಗೆ" ಎಂಬ ಹೇಳಿಕೆಯೊಂದಿಗೆ; ಚಿತ್ರವು ಮುಕ್ತಾಯಗೊಳ್ಳುತ್ತದೆ, ಯುದ್ಧ ಕಾಲದ ಯಹೂದೀಯ ರುದ್ರಭೂಮಿಗಳಿಂದ ಹೆಕ್ಕಿದ ಸಮಾಧಿ ಶಿಲೆಗಳಿಂದ(ಚಿತ್ರದಲ್ಲಿ ತೋರಿಸಿದ ಹಾಗೆ) ಮಾಡಿದ ಹಾದಿಯ ದೃಶ್ಯದೊಂದಿಗೆ ಮುಕ್ತಾಯದ ಕೃತಜ್ಞತೆಗಳು ಆರಂಭವಾಗಿ ನಂತರ ಮರೆಯಾಗುತ್ತದೆ.

ಪಾತ್ರವರ್ಗ[ಬದಲಾಯಿಸಿ]

ಪ್ರಧಾನ ಪಾತ್ರವರ್ಗ[ಬದಲಾಯಿಸಿ]

ಇತರೆ/ಪೋಷಕ ವರ್ಗ[ಬದಲಾಯಿಸಿ]

 • ಎಜ್ರಾ ಡಾಗನ್‌ ಷಿಂಡ್ಲರ್‌'ನ ಶಿಬಿರದಲ್ಲಿ ಬೆಸುಗೆಗಾರನ ನೈಪುಣ್ಯತೆಯನ್ನು ಗಳಿಸಿಕೊಳ್ಳುವ ಯಹೂದ್ಯ ಧಾರ್ಮಿಕ ಬೋಧಕ ರಬ್ಬಿ ಲೆವರ್ಟೌನ ಪಾತ್ರ ವಹಿಸಿದ್ದಾರೆ.
 • ಮಾಲ್ಗೋಷಾ ಗೆಬೆಲ್‌ ಷಿಂಡ್ಲರ್‌ನ ಉಪಪತ್ನಿ ವಿಕ್ಟೋರಿಯಾ ಕ್ಲೋನೊವ್ಸ್ಕಾಳ ಪಾತ್ರ ವಹಿಸಿದ್ದಾರೆ
 • ಷ್ಮುಯೆಲ್‌ ಲೆವಿ ವಿಲೆಕ್‌ ಚಿಲೊವಿಕ್ಸ್‌ನ ಪಾತ್ರ ವಹಿಸಿದ್ದಾರೆ
 • ಮಾರ್ಕ್‌ ಇವಾನಿರ್‌ ಮಾರ್ಸೆಲ್‌ ಗೋಲ್ಡ್‌ಬರ್ಗ್‌ನ ಪಾತ್ರ ವಹಿಸಿದ್ದಾರೆ
 • ಬೀಟ್ರಿಸ್‌ ಮಕೊಲಾ ಇಂಗ್ರಿಡ್‌ನ ಪಾತ್ರ ವಹಿಸಿದ್ದಾರೆ
 • ಅಂಡ್ರ್‌ಜೆಜ್‌ ಸೆವೆರಿನ್ಜೂಲಿಯನ್‌ ಷರ್ನರ್‌ನ ಪಾತ್ರ ವಹಿಸಿದ್ದಾರೆ
 • ಫ್ರೆಡ್‌ರಿಕ್‌ ವಾನ್‌ ಥುನ್‌ ರಾಲ್ಫ್‌ ಷುರ್ಡಾನ ಪಾತ್ರ ವಹಿಸಿದ್ದಾರೆ
 • ಕ್ರ್ಜಿಸ್ಟಾಫ್‌ ಲುಫ್ಟ್‌ ಹರ್ಮನ್‌ ಟಾಫೆಲ್‌ನ ಪಾತ್ರ ವಹಿಸಿದ್ದಾರೆ
 • ಹ್ಯಾರಿ ನೆಹ್‌ರಿಂಗ್‌ನ ಪಾತ್ರ ವಹಿಸಿದ್ದಾರೆ
 • ನಾರ್ಬರ್ಟ್‌ ವೇಸ್ಸರ್‌ ಆಲ್ಬರ್ಟ್‌ ಹುಜಾರ್‌ನ ಪಾತ್ರ ವಹಿಸಿದ್ದಾರೆ
 • ಅಡಿ ನಿಟ್‌ಜನ್‌ ಪೋಲ್ಡೆಕ್‌ನ ಪತ್ನಿ ಇಲಾ ಪ್ಫೆಫ್ಫರ್‌ಬರ್ಗ್‌ರ ಪಾತ್ರ ವಹಿಸಿದ್ದಾರೆ.
 • ಮೈಕೆಲ್‌ ಷ್ನೀಡರ್‌ ಜುಡಾ ಡ್ರೆಸ್ನರ್‌‌‌ರ ಪಾತ್ರ ವಹಿಸಿದ್ದಾರೆ
 • ಮಿರಿ ಫಾಬಿಯನ್‌ ಛಾಜಾ ಡ್ರೆಸ್ನರ್‌ರ ಪಾತ್ರ ವಹಿಸಿದ್ದಾರೆ
 • ಅನ್ನಾ ಮುಛಾ ಡಂಕಾ ಡ್ರೆಸ್ನರ್‌ರ ಪಾತ್ರ ವಹಿಸಿದ್ದಾರೆ
 • ಬೆನ್‌ ಡರ್ಬಿ ಕಂದು ವಸ್ತ್ರದ ವ್ಯಕ್ತಿಯ ಪಾತ್ರ ವಹಿಸಿದ್ದಾರೆ
 • ಆಲ್ಬರ್ಟ್‌ ಮಿಸಕ್‌ ಮಾರ್ಡೆಕೈ ವುಲ್ಕನ್‌ರ ಪಾತ್ರ ವಹಿಸಿದ್ದಾರೆ
 • ಹಾನ್ಸ್‌-ಮೈಕೆಲ್‌ ರೆಹ್‌ಬರ್ಗ್‌ ರುಡಾಲ್ಫ್‌ ಹೋಯೆಸ್‌ರ ಪಾತ್ರ ವಹಿಸಿದ್ದಾರೆ
 • ಡಾನಿಯೆಲ್‌ ಡೆಲ್‌ ಪಾಂಟೆ Dr. ಜೋಸೆಫ್‌ ಮೆಂಗೆಲೆ ಪಾತ್ರ ವಹಿಸಿದ್ದಾರೆ

ನಿರ್ಮಾಣ[ಬದಲಾಯಿಸಿ]

ವಿಕಸನ[ಬದಲಾಯಿಸಿ]

ಪೋಲ್ಡೆಕ್‌ ಪ್ಫೆಫ್ಫರ್‌ಬರ್ಗ್‌‌ ಷಿಂಡ್ಲರ್‌ ಯಹೂದ್ಯ ರಲ್ಲಿ ಒಬ್ಬನಾಗಿದ್ದು, ತಮ್ಮ ಸಂರಕ್ಷಕನ ಕಥೆಯನ್ನು ಹೇಳುವುದೇ ಜೀವನದ ಉದ್ದೇಶವಾಗಿಸಿಕೊಂಡಿರುವವ. ಪ್ಫೆಫ್ಫರ್‌ಬರ್ಗ್‌‌ MGMನೊಂದಿಗೆ ಸೇರಿ (West Frisian),[೨] ರಲ್ಲಿ ಹಾವರ್ಡ್ ಕೊಚ್‌ ರಚಿತ ಕಥೆಯನ್ನಾಧರಿಸಿ,[೩] ಆಸ್ಕರ್‌ ಷಿಂಡ್ಲರ್‌ಜೀವನಚರಿತ್ರೆಯನ್ನು ನಿರ್ಮಿಸಲು ಪ್ರಯತ್ನಿಸಿದ್ದರೂ ಅದು ಫಲಪ್ರದವಾಗಲಿಲ್ಲ. ೧೯೮೨ ರಲ್ಲಿ, ಥಾಮಸ್‌ ಕೆನೀಲಿ ಪ್ಫೆಫ್ಫರ್‌ಬರ್ಗ್‌ನನ್ನು ಭೇಟಿ ಮಾಡಿದ ನಂತರ ಬರೆದ ಷಿಂಡ್ಲರ್ಸ್‌ ಆರ್ಕ್‌‌ ಎಂಬ ಪುಸ್ತಕವನ್ನು ಪ್ರಕಟಿಸುತ್ತಾನೆ‌. MCA ಅಧ್ಯಕ್ಷ ಸಿದ್‌ ಷೇನ್‌ಬರ್ಗ್‌ ನಿರ್ದೇಶಕ ಸ್ಟೀವನ್‌ ಸ್ಪಿಲ್‌ಬರ್ಗ್‌ರಿಗೆ ಪುಸ್ತಕದ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್ ‌ನಲ್ಲಿ ಪ್ರಕಟವಾದ ವಿಮರ್ಶೆಯನ್ನು ಕಳಿಸುತ್ತಾರೆ. ಆಸ್ಕರ್‌ ಷಿಂಡ್ಲರ್‌ನ ಕಥೆ ಕೇಳಿ, ಬೆರಗುಗೊಂಡ ಸ್ಪೀಲ್‌ಬರ್ಗ್‌ ತಮಾಷೆಯಾಗಿ ಇದು ನಿಜವೇ ಎಂದು ಕೇಳುತ್ತಾರೆ. ಸ್ಪೀಲ್‌ಬರ್ಗ್‌ " [ಷಿಂಡ್ಲರ್‌ ]ನ ವಿರೋಧಾಭಾಸದ ವರ್ತನೆಯ ಬಗ್ಗೆ ಆಕರ್ಷಿತನಾದೆ ... ಇದು ನಾಝಿಯೊಬ್ಬ ಯಹೂದ್ಯರನ್ನು ಉಳಿಸುವ ಬಗ್ಗೆಯಾಗಿತ್ತು... ತಾನು ದುಡಿದದ್ದನ್ನೆಲ್ಲಾ ಹೀಗೆ ಇದ್ದಕ್ಕಿದ್ದಂತೆ ಆ ಜೀವಗಳನ್ನು ಉಳಿಸಲು ವ್ಯಯಿಸುವಂತೆ ಮಾಡಿದ ಪ್ರೇರಣೆ ಎಂತಹುದು?" ಸ್ಪೀಲ್‌ಬರ್ಗ್‌ ಯೂನಿವರ್ಸಲ್‌ ಪಿಕ್ಚರ್ಸ್‌ಗೆ ಕಾದಂಬರಿಯ ಹಕ್ಕುಗಳನ್ನು ಕೊಳ್ಳುವ ಬಗ್ಗೆ ಉತ್ಸುಕತೆ ತೋರಿಸಿದರು, ೧೯೮೩ ರ ಆರಂಭದಲ್ಲಿಯೇ ಸ್ಪೀಲ್‌ಬರ್ಗ್‌ ಪ್ಫೆಫ್ಫರ್‌ಬರ್ಗ್‌‌ರನ್ನು ಭೇಟಿ ಮಾಡಿದರು. ಪ್ಫೆಫ್ಫರ್‌ಬರ್ಗ್‌‌ ಸ್ಪೀಲ್‌ಬರ್ಗ್‌ರಿಗೆ ಹೀಗೆ ಕೇಳಿದರು, "ಖಂಡಿತಾ, ನೀವು ಯಾವಾಗ ಆರಂಭಿಸುವಿರಿ?" ಸ್ಪೀಲ್‌ಬರ್ಗ್‌ "ಹತ್ತು ವರ್ಷಗಳ ನಂತರ" ಎಂದುತ್ತರಿಸಿದರು."[೨]

ಹತ್ಯಾಕಾಂಡದ ಬಗ್ಗೆ ಚಿತ್ರ ಮಾಡುವ ಪರಿಪಕ್ವತೆಯನ್ನು ತಾನು ಹೊಂದಿರುವ ಬಗ್ಗೆ ಸ್ಪೀಲ್‌ಬರ್ಗ್‌ರಿಗೇ ಅನುಮಾನವಿತ್ತು, ಆದ್ದರಿಂದ ಯೋಜನೆಯು "[ಆತನ] ಅಪರಾಧ ಪ್ರಜ್ಞೆಯಲ್ಲಿಯೇ ಉಳಿದಿತ್ತು". ಸ್ಪೀಲ್‌ಬರ್ಗ್‌ ಈ ಯೋಜನೆಯನ್ನು ನಿರ್ದೇಶಕ ರೋಮನ್‌ ಪೋಲನ್‌ಸ್ಕಿರಿಗೆ ಹಸ್ತಾಂತರಿಸಲು ಪ್ರಯತ್ನಿಸಿದಾಗ ಅವರು ನಿರಾಕರಿಸಿದರು. ಪೋಲನ್‌ಸ್ಕಿ'ರ ತಾಯಿಯನ್ನು ಆಷ್‌ವಿಟ್ಜ್‌ನಲ್ಲಿ ಕೊಲ್ಲಲಾಗಿತ್ತು,[೪] ಆತ ಕ್ರಾಕೌ ಘೆಟ್ಟೋದಲ್ಲಿಯೇ ವಾಸಿಸಿಯೂ ಬದುಕುಳಿದಿದ್ದರು. ಪೋಲನ್‌ಸ್ಕಿ ಅಂತಿಮವಾಗಿ ತಮ್ಮದೇ ಸ್ವಂತ ಹತ್ಯಾಕಾಂಡದ ಚಿತ್ರ ದ ಪಿಯಾನಿಸ್ಟ್‌‌ ಅನ್ನು ೨೦೦೨ ರಲ್ಲಿ ನಿರ್ದೇಶಿಸಿದರು. ಸ್ಪೀಲ್‌ಬರ್ಗ್‌ ಸಿಡ್ನಿ ಪೊಲ್ಲಕ್‌,[೩] ಹಾಗೂ ಷಿಂಡ್ಲರ್‌ನ ಪಟ್ಟಿ ಚಿತ್ರದ ನಿರ್ದೇಶನ ತಂಡಕ್ಕೆ ೧೯೮೮ ರಲ್ಲಿ ಸೇರಿಕೊಂಡ ಮಾರ್ಟಿನ್‌ ಸ್ಕಾರ್ಸೆಸೆರವರಿಗೂ, ಚಿತ್ರವನ್ನು ಹಸ್ತಾಂತರಿಸಲು ಉದ್ದೇಶಿಸಿದ್ದರು. ಆದಾಗ್ಯೂ, "ನಾನು ನನ್ನ ಕುಟುಂಬ ಹಾಗೂ ಮಕ್ಕಳಿಗೆ ಹತ್ಯಾಕಾಂಡದ ಕುರಿತು ಅವಕಾಶ ನೀಡಲುದ್ದೇಶಿಸಿದ್ದೇನೆ" ಎಂದು ಹೇಳಿದ್ದರಾದ್ದರಿಂದ ಸ್ಪೀಲ್‌ಬರ್ಗ್‌ ಸ್ಕಾರ್ಸೆಸೆಗೆ ಚಿತ್ರವನ್ನು ನಿರ್ದೇಶಿಸುವ ಹೊಣೆ ನೀಡುವುದರ ಬಗ್ಗೆ ಅಷ್ಟು ಖಚಿತವಾಗಿರಲಿಲ್ಲ. ಸ್ಪೀಲ್‌ಬರ್ಗ್‌ ಇದರ ಬದಲಿಗೆ ಕೇಪ್‌ ಫಿಯರ್‌ ನ ೧೯೯೧ ರ ರಿಮೇಕ್‌ ಮಾಡುವ ಅವಕಾಶ ನೀಡಿದರು.[೩] ಬಿಲ್ಲಿ ವೈಲ್ಡರ್‌ " ಬಹುಪಾಲು [ಆತನ] ಕುಟುಂಬವು ಆಷ್‌ವಿಟ್ಜ್‌ಗೆ ತೆರಳಿದ್ದರ ನೆನಪಿಗಾಗಿ" ಈ ಚಿತ್ರವನ್ನು ನಿರ್ದೇಶಿಸುವುದರ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು."

ಸ್ಪೀಲ್‌ಬರ್ಗ್‌ ಅಂತಿಮವಾಗಿ ಬೋಸ್ನಿಯಾದ ನರಮೇಧದ ಬಗ್ಗೆ ಕೇಳಿದ ನಂತರ ಹಾಗೂ ಹತ್ಯಾಕಾಂಡದ ಚಿತ್ರ ಮಾಡಲು ಅನೇಕರ ನಿರಾಕರಣೆಯ ನಂತರ ಚಿತ್ರವನ್ನು ನಿರ್ದೇಶಿಸಲು ನಿರ್ಧರಿಸಿದರು.[೨] ನವೀನ-ನಾಝಿತತ್ವವು ಬರ್ಲಿನ್‌ ಗೋಡೆಯ ಪತನದ ನಂತರ ತಲೆದೋರಿದಾಗ, ಅವರು ೧೯೩೦ ರ ದಶಕದಂತೆಯೇ ಜನರು ಅಸಹಿಷ್ಣುತೆಯನ್ನು ವಿಪರೀತವಾಗಿ ಒಪ್ಪಿಕೊಳ್ಳುತ್ತಿದ್ದಾರೆನಿಸಿ ಕಳವಳಗೊಂಡರು. ಇದರೊಂದಿಗೆ ಸ್ಪೀಲ್‌ಬರ್ಗ್‌ ತನ್ನ ಮಕ್ಕಳನ್ನು ಬೆಳೆಸಬೇಕಾದರೆ ತನ್ನ ಯಹೂದ್ಯ ಮೂಲದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು.[೫] ಸಿದ್‌ ಷೇನ್‌ಬರ್ಗ್‌ ಜುರಾಸಿಕ್‌ ಪಾರ್ಕ್‌ ಅನ್ನು ಮೊದಲಿಗೆ ನಿರ್ದೇಶಿಸಬೇಕು ಎನ್ನುವ ಷರತ್ತಿನ ಮೇಲೆಯೇ ಸ್ಪೀಲ್‌ಬರ್ಗ್‌ರಿಗೆ ಈ ಚಿತ್ರಕ್ಕೆ ಹಸಿರು ನಿಶಾನೆ ತೋರಿದರು. ಸ್ಪೀಲ್‌ಬರ್ಗ್ ‌ ನಂತರ, "ನಾನು ಒಮ್ಮೆ ಷಿಂಡ್ಲರ್‌ ಚಿತ್ರವನ್ನು ನಿರ್ದೇಶಿಸಿದರೆ ಜುರಾಸಿಕ್‌ ಪಾರ್ಕ್‌ ಚಿತ್ರವನ್ನು ಮಾಡಲಾರೆ ಎಂದು ಅವರಿಗೆ ಗೊತ್ತಿತ್ತು" ಎಂದು ನಂತರ ಹೇಳುತ್ತಾರೆ."[೩] ೧೯೮೩ ರಲ್ಲಿ, ಥಾಮಸ್‌ ಕೆನೀಲಿಯವರಿಗೆ ಆತನ ಪುಸ್ತಕವನ್ನು ಚಿತ್ರಕಥೆಗೆ ಹೊಂದಿಸಲು ನೇಮಿಸಿದಾಗ, ಅವರು ಅದನ್ನು ೨೨೦ -ಪುಟಗಳ ಕಥೆಯನ್ನಾಗಿ ನೀಡುತ್ತಾರೆ. ಕೆನೀಲಿ ಷಿಂಡ್ಲರ್‌'ನ ಅನೇಕ ಸಂಬಂಧಗಳ ಬಗ್ಗೆ ಗಮನ ಕೇಂದ್ರೀಕರಿಸಿ, ಕಥೆಯನ್ನು ಸಂಕ್ಷಿಪ್ತಗೊಳಿಸಲು ಪ್ರಯತ್ನಿಸಲಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಸ್ಪೀಲ್‌ಬರ್ಗ್‌ ನಂತರ ಔಟ್‌ ಆಫ್‌ ಆಫ್ರಿಕಾ ದ ಚಿತ್ರಕಥೆ ಬರೆದ ಕುರ್ಟ್‌ ಲ್ಯುಡ್ಟ್‌ಕೆಯವರನ್ನು ಮುಂದಿನ ಪ್ರತಿ ರಚಿಸಲು ನೇಮಿಸುತ್ತಾರೆ. ಲ್ಯುಡ್ಟ್‌ಕೆ ಷಿಂಡ್ಲರ್‌'ನ ಹೃದಯ ಪರಿವರ್ತನೆ ತೀರಾ ನಂಬಲನರ್ಹವಾದುದು ಎಂದೆನಿಸಿದ ಕಾರಣ ಸರಿಸುಮಾರು ನಾಲ್ಕು ವರ್ಷಗಳ ನಂತರ ತ್ಯಜಿಸುತ್ತಾರೆ.ತಾನು ನಿರ್ದೇಶನ ವಹಿಸಿದ ಸಮಯದಲ್ಲಿ, ಸ್ಟೀವನ್‌ ಝೈಲಿಯನ್‌ರನ್ನು ಚಿತ್ರಕಥೆ ಬರೆಯಲು ಸ್ಕಾರ್ಸೆಸೆ ನೇಮಿಸಿರುತ್ತಾರೆ. ತಾನು ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡಾಗ, ಸ್ಪೀಲ್‌ಬರ್ಗ್‌ ಝೈಲಿಯನ್‌'ರ ೧೧೫-ಪುಟಗಳ ಕಥೆ ತುಂಬಾ ಚಿಕ್ಕದು ಎನಿಸಿದ ಕಾರಣ ಅದನ್ನು ೧೯೫ ಪುಟಗಳಿಗೆ ವಿಸ್ತರಿಸಲು ಹೇಳುತ್ತಾರೆ. ಸ್ಪೀಲ್‌ಬರ್ಗ್‌ ಕಥೆಯಲ್ಲಿ ಯಹೂದ್ಯರ ಬಗ್ಗೆ ಕೇಂದ್ರೀಕರಿಸಲು ಇಚ್ಚಿಸಿದ್ದರು. ಆತ ಘೆಟ್ಟೋ ಮಾರಣಹೋಮದಲ್ಲಿ "ಬಹುಪಾಲು ಸಹಿಸಲಸಾಧ್ಯವಾಗುವ ಮಟ್ಟಿನ ಹಿಂಸೆಯನ್ನು ಚಿತ್ರಿಸುವ ಅಗತ್ಯವಿದೆ" ಎಂಬ ಬಲವಾದ ಅನಿಸಿಕೆ ಹೊಂದಿದ್ದರಿಂದ ವಿಸ್ತರಿಸಿದರು." ಷಿಂಡ್ಲರ್‌'ನ ಪರಿವರ್ತನೆ ಸಾವಕಾಶವಾಗಿ ಹಾಗೂ ಸಂದಿಗ್ಧವಾಗಿರುವಂತೆ ಮಾಡಲು, "ಭಾರೀ ಸ್ಫೋಟಕ ಶುದ್ಧೀಕರಣವೆಂಬಂತೆ ಬಿಂಬಿಸದಿರಲು" ಇಚ್ಛಿಸಿದ್ದರು."[೩]

ಪಾತ್ರ ಹಂಚಿಕೆ[ಬದಲಾಯಿಸಿ]

ಲಿಯಾಂ ನೀಸನ್‌ ನಟರ ಆಯ್ಕೆಯಲ್ಲಿ ಮೊದಲಿಗೆ, ಸ್ಪೀಲ್‌ಬರ್ಗ್‌ ಬ್ರಾಡ್‌ವೇನಲ್ಲಿ ನಡೆದ ಅನ್ನಾ ಕ್ರಿಸ್ಟೀ ನಾಟಕ ದಲ್ಲಿ ನಟಿಸಿದ್ದನ್ನು ನೋಡಿದ ನಂತರ ಆಸ್ಕರ್‌ ಷಿಂಡ್ಲರ್‌ನ ಪಾತ್ರಕ್ಕೆ ಡಿಸೆಂಬರ್‌ ೧೯೯೨ ರಲ್ಲಿಯೇ ಆಯ್ಕೆಯಾಗಿದ್ದರು.[೩] ವಾರೆನ್‌ ಬೆಟ್ಟಿ ಚಿತ್ರಕಥೆಯನ್ನು ಓದುವಾಗ ಭಾಗವಹಿಸಿದ್ದರೂ, ಸ್ಪೀಲ್‌ಬರ್ಗ್‌ ಆತ ತನ್ನ ಸಂಭಾಷಣಾ ಶೈಲಿಯನ್ನು ಮರೆಮಾಚಲು ಸಾಧ್ಯವಾಗುತ್ತಿಲ್ಲ ಹಾಗೂ "ಚಿತ್ರ ತಾರೆಯ ಶೈಲಿಯನ್ನು" ಎದ್ದು ಕಾಣಿಸುವಂತೆ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.[೬] ಕೆವಿನ್‌ ಕಾಸ್ಟ್‌ನರ್‌ ಹಾಗೂ ಮೆಲ್‌ ಗಿಬ್ಸನ್‌ ಷಿಂಡ್ಲರ್‌ನ ಪಾತ್ರ ವಹಿಸಲು ಆಸಕ್ತಿ ತೋರಿದ್ದರು.[೩] ನೀಸನ್‌ "[ಷಿಂಡ್ಲರ್‌] ನಾಝಿಗಳನ್ನು ಮೋಸಗೊಳಿಸುವುದರಲ್ಲಿ [sic] ಆನಂದ ಹೊಂದುತ್ತಿದ್ದನು" ಎಂದು ಭಾವಿಸಿದ್ದರು. ಕೆನೀಲಿ'ರ ಪುಸ್ತಕದಲ್ಲಿ ಆತನನ್ನು ಅವರು ಒಂದು ವಿಧದ ಕೋಡಂಗಿಯೆಂಬಂತೆ ಭಾವಿಸಿದ್ದರು .. ನಾಝಿಗಳು ನ್ಯೂಯಾರ್ಕ್‌‌ನವರಾಗಿದ್ದರೆ, ಆತ ಅರ್ಕನ್ಸಾಸ್‌ನವನಂತೆ ಭಾವಿಸಿದ್ದರು. ಅವರು ಎಂದಿಗೂ ಆತನನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಆತನು ಅದರ ಪೂರ್ಣ ಲಾಭ ಪಡೆದುಕೊಂಡನು."[೭] ಪಾತ್ರಕ್ಕೆ ತಯಾರಾಗಲು, ನೀಸನ್‌ರಿಗೆ ಸ್ಪೀಲ್‌ಬರ್ಗ್‌ರ ಪ್ರಕಾರ ಷಿಂಡ್ಲರ್‌'ನ ವರ್ಚಸ್ಸಿಗೆ ಸಮಾನವಾದ ವರ್ಚಸ್ಸನ್ನು ಹೊಂದಿದ್ದ ಟೈಂ ವಾರ್ನರ್‌ನ CEO ಸ್ಟೀವ್‌ ರಾಸ್‌ರ ಚಿತ್ರಣಗಳನ್ನು ಕಳಿಸಲಾಗಿತ್ತು.[೮]

ಸ್ಪೀಲ್‌ಬರ್ಗ್‌ A Dangerous Man: Lawrence After Arabia ಮತ್ತು ಎಮಿಲಿ ಬ್ರಾಂಟೆ'ರ ವುದರಿಂಗ್‌ ಹೈಟ್ಸ್ ‌ಗಳಲ್ಲಿ ಅವರ ನಟನೆಯನ್ನು ನೋಡಿದ ನಂತರ ರಾಲ್ಫ್‌ ಫಿಯೆನ್ನೆಸ್‌ರನ್ನು ಅಮನ್‌ ಗಾತ್‌ನ ಪಾತ್ರಕ್ಕೆ ಆಯ್ಕೆ ಮಾಡಿದರು. ಸ್ಪೀಲ್‌ಬರ್ಗ್‌ ಫಿಯೆನ್ನೆಸ್‌' ಪ್ರತಿಭಾ ಪ್ರದರ್ಶನದಲ್ಲಿ "ನಾನು ಲೈಂಗಿಕ ಪಾತಕಿಯನ್ನು ಕಂಡೆ. ಇದೆಲ್ಲಾ ಗೂಢತೆಯ ಬಗೆಯದು: ಕೆಲವೊಮ್ಮೆ ಅವನ ಕಣ್ಣುಗಳಲ್ಲಿ ಕರುಣೆಯು ಹರಿದಾಡಿದರೂ, ತಕ್ಷಣವೇ ಅದು ತಣ್ಣನೆಯ ಕ್ರೂರತೆಯಾಗಿ ಬಿಡುತ್ತದೆ." ಫಿಯೆನ್ನೆಸ್ ಪಾತ್ರಕ್ಕೆಂದು ೨೮ lbsಗಳಷ್ಟು ತೂಕವನ್ನು ಹೆಚ್ಚಿಸಿಕೊಂಡರು. ಆತ ಇತಿಹಾಸದ ಸುದ್ದಿಚಿತ್ರಗಳನ್ನು ವೀಕ್ಷಿಸಿದರು ಹಾಗೂ ಗಾತ್‌ನ ಬಗ್ಗೆ ಗೊತ್ತಿದ್ದ ಹತ್ಯಾಕಾಂಡದಿಂದ ಬದುಕುಳಿದಿದ್ದವರಲ್ಲಿ ತಿಳಿದುಕೊಂಡರು. ಆತನ ಪಾತ್ರ ವಹಿಸುವಾಗ, ಫಿಯೆನ್ನೆಸ್ "ಆತನ ನೋವನ್ನು ಸಮೀಪದಿಂದ ಕಂಡುಕೊಂಡೆ. ಅವನೊಳಗೆ ಓರ್ವ ಗಾಯಗೊಂಡ ಮನಸ್ಥಿತಿಯ ದುಃಖಿತ ಮಾನವನಿದ್ದ. ಆತನ ಬಗ್ಗೆ ನಾನು ದ್ವಿವಿಧ ಭಾವ ಹೊಂದಿದ್ದೇನೆ, ಆತನ ಸ್ಥಿತಿಯ ಬಗ್ಗೆ ನೊಂದಿದ್ದೇನೆ. ಆತನು ನನಗೆ ಕೊಟ್ಟ ಟೀಕೆಗೊಳಗಾದ ಕೊಳಕು ಬೊಂಬೆಯಂತೆ, ವಿಶಿಷ್ಟ ಬಾಂಧವ್ಯ ಹೊಂದಿದ್ದೆ" ಎಂದು ಹೇಳಿದರು. ಫಿಯೆನ್ನೆಸ್ ಗಾತ್‌ನ ಪೋಷಾಕಿನಲ್ಲಿ ಎಷ್ಟರಮಟ್ಟಿಗೆ ಆತನಂತೆಯೇ ಕಂಡನೆಂದರೆ ಈ ಘಟನೆಗಳಲ್ಲಿ ಬದುಕುಳಿದಿದ್ದ ಮಹಿಳೆ ಮಿಲಾ ಪ್ಫೆಫ್ಫರ್‌ಬರ್ಗ್‌, ಆತನನ್ನು ಭೇಟಿ ಮಾಡಿದಾಗ ಭಯದಿಂದ ಕಂಪಿಸಿದಳು.[೯]

ಒಟ್ಟಿನಲ್ಲಿ, ಚಿತ್ರದಲ್ಲಿ ೧೨೬ ಸಂಭಾಷಣಾ ಭಾಗಗಳಿವೆ. ಚಿತ್ರೀಕರಣದ ಸಮಯದಲ್ಲಿ ಮೂವತ್ತು ಸಾವಿರ ಗೌಣನಟರನ್ನು ಕರೆಸಿದ್ದರು. ಷಿಂಡ್ಲರ್‌ ಯಹೂದ್ಯ ರ ಮಕ್ಕಳನ್ನು ಪ್ರಮುಖ ಹೀಬ್ರ್ಯೂ-ಭಾಷಿಕ ಪಾತ್ರಗಳಿಗೆ ಹಾಗೂ ಕ್ಯಾಥೊಲಿಕ್‌ ಪೋಲೆಂಡಿಗರನ್ನು ಬದುಕುಳಿದವರ ಪಾತ್ರಗಳಿಗೆ ಸ್ಪೀಲ್‌ಬರ್ಗ್‌ ಆಯ್ಕೆ ಮಾಡಿದರು.[೩] ಅನೇಕವೇಳೆ, SSಗಳ ಪಾತ್ರ ವಹಿಸುತ್ತಿದ್ದ ಜರ್ಮನ್‌ ನಟರು ಸ್ಪೀಲ್‌ಬರ್ಗ್‌ ಬಳಿ ಬಂದು "ನಿಮ್ಮ ಚಿತ್ರದಲ್ಲಿ ನಟಿಸುವುದರ ಮೂಲಕ ನನ್ನ [ಕೌಟುಂಬಿಕ] ಗೋಪ್ಯತೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳುತ್ತಿದ್ದರು."[೬] ಚಿತ್ರೀಕರಣದ ಮಧ್ಯದಲ್ಲಿ, ಸ್ಪೀಲ್‌ಬರ್ಗ್‌ ೧೨೮ ಮಂದಿ ಷಿಂಡ್ಲರ್‌ ಯಹೂದ್ಯ ರು ಜೆರುಸಲೇಂನಲ್ಲಿನ ಷಿಂಡ್ಲರ್‌'ನ ಸಮಾಧಿಗೆ ನಮನ ಸಲ್ಲಿಸುವ ಉಪಸಂಹಾರವನ್ನು ಕಲ್ಪಿಸಿಕೊಂಡರು. ನಿರ್ಮಾಪಕರು ಚಿತ್ರದಲ್ಲಿ ಪ್ರಸ್ತುತಪಡಿಸಿದವರನ್ನು ಕಾಣಲು ಹರಸಾಹಸ ಮಾಡಬೇಕಾಯಿತು.[೩]

ಚಿತ್ರೀಕರಣ[ಬದಲಾಯಿಸಿ]

ಷಿಂಡ್ಲರ್‌'ನ ಪಟ್ಟಿ ಚಿತ್ರದ ಚಿತ್ರೀಕರಣವು ಮಾರ್ಚ್ ೧, ೧೯೯೩ ರಂದು ಆರಂಭವಾಗಿ ಪೋಲೆಂಡ್‌ನ ಕ್ರಾಕೌನಲ್ಲಿ (ಕ್ರಾಕೌ) ಎಪ್ಪತ್ತೊಂದು ದಿನಗಳ ಕಾಲ ಮುಂದುವರೆಯಿತು.[೨] ಮೂಲ ಶಿಬಿರದಲ್ಲಿನ ಯುದ್ಧಾನಂತರದ ಬದಲಾವಣೆಗಳಿಂದಾಗಿ ಪ್ಲಾಜೌ ಶಿಬಿರ ಮೂಲ ಸ್ಥಳಕ್ಕೆ ಹೊಂದಿಕೊಂಡಿದ್ದ ಹಳ್ಳದಲ್ಲಿ ಮರುನಿರ್ಮಿಸಬೇಕಾಯಿತಾದರೂ ತಂಡವು ಮೂಲ ಸ್ಥಳಗಳಲ್ಲಿಯೇ ಚಿತ್ರೀಕರಣ ನಡೆಸಿತು. ಆಷ್‌ವಿಟ್ಜ್‌ನ್ನು ಪ್ರವೇಶಿಸದಂತೆ ನಿರ್ಬಂಧವಿದ್ದುದರಿಂದ ತಂಡವು ಶಿಬಿರದ ಹೊರಗೆ ಪ್ರತಿಕೃತಿ ನಿರ್ಮಿಸಿ ಅದರಲ್ಲಿ ಚಿತ್ರೀಕರಣ ನಡೆಸಿದರು.[೮] ಪೋಲೆಂಡಿಗ ಸ್ಥಳೀಯರು ಚಿತ್ರನಿರ್ಮಾಪಕರನ್ನು ಸ್ವಾಗತಿಸಿದರು. ಕೆಲವೊಂದು ಯಹೂದ್ಯ-ವಿರೋಧಿ ಘಟನೆಗಳು ನಡೆದವು; ಚಿತ್ರೀಕರಣ ಸ್ಥಳ ಸಮೀಪದ ಸ್ಥಳೀಯ ಭಿತ್ತಿಫಲಕಗಳಲ್ಲಿ ಯಹೂದ್ಯ ವಿರೋಧಿ ಚಿಹ್ನೆಗಳು ರಾರಾಜಿಸಿದವು.[೩] ಓರ್ವ ವೃದ್ಧೆ ಫಿಯೆನ್ನೆಸ್‌ರನ್ನು ನಾಝಿಯೆಂದು ಭಾವಿಸಿಕೊಂಡು ಆತನಿಗೆ "ಜರ್ಮನರು ಆಕರ್ಷಕ ವ್ಯಕ್ತಿಗಳು. ಅವರು ಅನಗತ್ಯವಾಗಿ ಯಾರನ್ನೂ ಕೊಲ್ಲಲಿಲ್ಲ" ಎಂದು ಹೇಳಿದರೆ [೯] ಕಿಂಗ್‌ಸ್ಲೆ ಇಸ್ರೇಲಿ ನಟ ಮೈಕೆಲ್‌ ಷ್ನೆಡರ್‌ರನ್ನು ಅವಮಾನಿಸಿದ ವೃದ್ಧ ಜರ್ಮನ್‌-ಭಾಷಿಕ ಉದ್ಯಮಿಯೊಂದಿಗೆ ಬಹುಮಟ್ಟಿಗೆ ಜಗಳಕ್ಕಿಳಿದ್ದಿದ್ದರು.[೧೦] ಆದಾಗ್ಯೂ, ಸ್ಪೀಲ್‌ಬರ್ಗ್‌ ಪಾಸ್‌ಓವರ್‌ ಹಬ್ಬದಲ್ಲಿ ಹೀಗೆ ಹೇಳಿದರು, "ಎಲ್ಲಾ ಜರ್ಮನ್‌ ನಟರು ಕಾಣಿಸಿಕೊಂಡರು. ಆಗ ಅವರು ಯಾರಮುಲ್ಕ್‌ಗಳನ್ನು ಧರಿಸಿ ಹಗ್ಗದಾಗಳನ್ನು ತೆರೆದರು, ಇಸ್ರೇಲಿ ನಟರು ಅವರುಗಳ ಜೊತೆಗೇ ಹೆಜ್ಜೆ ಹಾಕಿ ಸ್ಥಳೀಯರಿಗೆ ವಿವರಿಸಲು ತೊಡಗಿದರು. ಈ ನಟರುಗಳ ಕುಟುಂಬವು ಹೀಗೆ ಒಟ್ಟಿಗೆ ಕುಳಿತಾಗ ಕುಲ ಹಾಗೂ ಸಂಸ್ಕೃತಿಗಳ ಭಿನ್ನತೆಯು ಹಿಂದೆ ಸರಿಯಿತು."[೧೦]

"I was hit in the face with my personal life. My upbringing. My Jewishness. The stories my grandparents told me about the Shoah. And Jewish life came pouring back into my heart. I cried all the time."

Steven Spielberg on his emotional state during the shoot[೪]

ಷಿಂಡ್ಲರ್‌'ನ ಪಟ್ಟಿ ಚಿತ್ರದ ಚಿತ್ರೀಕರಣವು ಸ್ಪೀಲ್‌ಬರ್ಗ್‌ರಿಗೆ ತೀವ್ರ ಭಾವನಾತ್ಮಕ ತಾಕಲಾಟಗಳ ಅವಧಿಯಾಗಿತ್ತು, ಏಕೆಂದರೆ ಚಿತ್ರದ ವಿಷಯವು ಅವರು ಬಾಲ್ಯದಲ್ಲಿ ಎದುರಿಸಿದ ಯಹೂದ್ಯ ವಿರೋಧಿ ಮನೋಭಾವದ ಕುರಿತಾಗಿತ್ತು. ಆಷ್‌ವಿಟ್ಜ್‌ಗೆ ಭೇಟಿ ನೀಡಿದಾಗ "ತೀವ್ರ ದುಃಖಿತ"ನಾಗಲಿಲ್ಲವೆಂದು ತನ್ನ ಬಗ್ಗೆಯೇ ಕೋಪಗೊಂಡಿದ್ದರಲ್ಲದೇ, ಆಷ್‌ವಿಟ್ಜ್‌ಗೆ ಕಳಿಸಲು ನಾಝಿ ವೈದ್ಯರು ಆಯ್ಕೆ ಮಾಡಲೆಂದು ವಯಸ್ಸಾಗುತ್ತಿದ್ದ ಯಹೂದ್ಯರನ್ನು ಒತ್ತಾಯಪೂರ್ವಕವಾಗಿ ನಗ್ನವಾಗಿ ಓಡುವಂತೆ ಮಾಡುವ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ತಲೆಯೆತ್ತಿ ನೋಡದ ತಂಡದ ಸದಸ್ಯರಲ್ಲಿ ಅವರೂ ಒಬ್ಬರಾಗಿದ್ದರು.[೮] ಅನೇಕ ನಟಿಯರು ಜಲಸಿಂಪಡಿಕೆಯ ದೃಶ್ಯವನ್ನು ಚಿತ್ರೀಕರಿಸುವಾಗ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು, ಇವರುಗಳಲ್ಲಿ ಸೆರೆಶಿಬಿರದಲ್ಲೇ ಜನಿಸಿದ ಒಬ್ಬಾಕೆಯೂ ಇದ್ದಳು.[೬] ಕೇಟ್‌ ಕ್ಯಾಪ್‌ಷಾ ಹಾಗೂ ಸ್ಪೀಲ್‌ಬರ್ಗ್‌'ರ ಐವರು ಮಕ್ಕಳು ಸ್ಪೀಲ್‌ಬರ್ಗ್‌ರೊಂದಿಗೆ ಚಿತ್ರೀಕರಣ ಸ್ಥಳದಲ್ಲಿದ್ದರು, ನಂತರ ಅವರು ತಮ್ಮ ಪತ್ನಿಗೆ "ಸನ್ನಿವೇಶವು ದುರ್ಭರವೆನಿಸಿದ ತೊಂಬತ್ತೆರಡು ದಿನಗಳ ಕಾಲ ಸತತವಾಗಿ ನನ್ನನ್ನು ಸಂಭಾಳಿಸಿದುದಕ್ಕಾಗಿ" ಧನ್ಯವಾದ ಅರ್ಪಿಸಿದರು." ಸ್ಪೀಲ್‌ಬರ್ಗ್‌'ರ ಪೋಷಕರು ಹಾಗೂ ಆತನ ಧರ್ಮಬೋಧಕ ಅವರನ್ನು ಚಿತ್ರೀಕರಣ ಸ್ಥಳದಲ್ಲಿ ಭೇಟಿ ಮಾಡಿದರು. ಚಿತ್ರೀಕರಣದಲ್ಲಿ ಹಾಸ್ಯದ ಪ್ರಸಕ್ತಿ ಅತಿ ಕಡಿಮೆ ಇದ್ದ ಕಾರಣ ರಾಬಿನ್‌ ವಿಲಿಯಂಸ್‌ ಪ್ರತಿ ಎರಡು ವಾರಕ್ಕೊಮ್ಮೆ ಸ್ಪೀಲ್‌ಬರ್ಗ್‌ರಿಗೆ ಕರೆ ಮಾಡಿ[೨], ನಗೆಹನಿಗಳನ್ನು ಹೇಳಿ ಪ್ರಫುಲ್ಲಿತಗೊಳಿಸುತ್ತಿದ್ದರು.[೬] ಸ್ಪೀಲ್‌ಬರ್ಗ್‌ "ರಕ್ತದ ಹಣ"ವೆಂದು ಕರೆದು ಇದಕ್ಕೆ ವೇತನವನ್ನು ನಿರಾಕರಿಸಿದ್ದರಲ್ಲದೇ, ಚಿತ್ರವು ವಿಫಲವಾಗುತ್ತದೆ ಎಂದೇ ನಂಬಿದ್ದರು.[೨]

ಸ್ಪೀಲ್‌ಬರ್ಗ್‌ ಗತಕಾಲದ ಛಾಯೆ ಮೂಡಿಸಲು ಜರ್ಮನ್‌ ಹಾಗೂ ಪೋಲೆಂಡಿನ ಭಾಷೆಯನ್ನು ದೃಶ್ಯಗಳಲ್ಲಿ ಬಳಸಿ ನಾಟಕೀಯ ಅಂಶಗಳನ್ನು ಪ್ರಾಧಾನ್ಯತೆ ನೀಡಲು ಆಂಗ್ಲ ಭಾಷೆಯನ್ನು ಬಳಸಿದ್ದರು. ನಿರ್ದೇಶಕರು ಚಿತ್ರವನ್ನು ಸಂಪೂರ್ಣವಾಗಿ ಜರ್ಮನ್‌ ಹಾಗೂ ಪೋಲೆಂಡಿನ ಭಾಷೆಯಲ್ಲಿಯೇ ಚಿತ್ರೀಕರಿಸಲು ಆಸಕ್ತಿ ಹೊಂದಿದ್ದರು, ಆದರೆ "ಓದುವಿಕೆಯಲ್ಲಿ ಬೇಕಾದಷ್ಟು ಸ್ವಾತಂತ್ರ್ಯ ವಹಿಸಬಹುದು. ಇದು ವೀಕ್ಷಕರಿಗೆ ಪರದೆಯ ಮೇಲಿಂದ ಬೇರೆಡೆ ಗಮನ ಹರಿಸಲು ಇದೊಂದು ಉತ್ತಮ ನೆಪವಾಗಬಹುದು" ಎಂದು ಹಾಗೆ ಮಾಡದಿರಲು ನಿಶ್ಚಯಿಸಿದರು."[೬]

ಚಲನಚಿತ್ರಕಲೆ[ಬದಲಾಯಿಸಿ]

ಸ್ಪೀಲ್‌ಬರ್ಗ್‌ ಚಿತ್ರವನ್ನು ಕಥಾನಕದ ಮೂಲಕ ಯೋಜಿಸದೇ ಸಾಕ್ಷ್ಯಚಿತ್ರವಾಗಿ ರೂಪಿಸಲು ನಿರ್ಧರಿಸಿ, ದ ಟ್ವಿಸ್ಟೆಡ್‌ ಕ್ರಾಸ್‌ (1956)[೧೧] ಹಾಗೂ ಷೋವಾ (1985) ಸಾಕ್ಷ್ಯಚಿತ್ರಗಳನ್ನು ಸ್ಫೂರ್ತಿಗೆಂದು ಅಭ್ಯಸಿಸಿದರು. ಚಿತ್ರದ ನಲವತ್ತು ಪ್ರತಿಶತ ಭಾಗವನ್ನು ಕೈಛಾಯಾಗ್ರಾಹಕ/ಕ್ಯಾಮರಾಗಳ ಮೂಲಕ ಚಿತ್ರೀಕರಿಸಲಾಗಿತ್ತಲ್ಲದೇ,[೧೨] $25 ದಶಲಕ್ಷದ ಮಿತವಾದ ಅಂದಾಜುವೆಚ್ಚವೇ ಚಿತ್ರವನ್ನು ವೇಗವಾಗಿ ಎಪ್ಪತ್ತೆರಡು ದಿನಗಳಲ್ಲಿಯೇ ಚಿತ್ರೀಕರಿಸಿದ್ದನ್ನು ಸೂಚಿಸಬಹುದು. ಸ್ಪೀಲ್‌ಬರ್ಗ್‌ "ಇದು ಚಿತ್ರಕ್ಕೆ ಸ್ವಯಂಸ್ಫುರಣೆ, ಮೊನಚನ್ನು ನೀಡಿದ್ದಲ್ಲದೇ ವಿಷಯಕ್ಕೂ ಪೂರಕವಾಗಿತ್ತು" ಎಂದು ಭಾವಿಸಿದ್ದರು." ಸ್ಪೀಲ್‌ಬರ್ಗ್‌ ತಾನು "ಕ್ರೇನ್‌, ಸ್ಟೆಡಿಕ್ಯಾಮ್‌, ಝೂಮ್‌ಲೆನ್ಸ್‌ಗಳು [ಹಾಗೂ] ಇನ್ನಿತರ ಸುಸಜ್ಜಿತ ಸೌಲಭ್ಯವೆನಿಸಿಕೊಳ್ಳುವ ಎಲ್ಲವನ್ನೂ ತೊರೆದು ಚಿತ್ರೀಕರಿಸಿದೆ." ಎಂದು ಹೇಳಿದರು."[೮] ವಾಣಿಜ್ಯಿಕವಾಗಿ ಯಶಸ್ವಿಯಾಗಲೇಬೇಕೆಂದು ತಾನು ಭಾವಿಸದ ಚಿತ್ರಕ್ಕೆ ಅಗತ್ಯವಾದ ಸಾಧನಗಳನ್ನು ಹೀಗೆ ಮಿತಿಗೊಳಪಡಿಸಿಕೊಳ್ಳುವ ಈ ಶೈಲಿ ಸ್ಪೀಲ್‌ಬರ್ಗ್‌ರಿಗೆ ತಮ್ಮನ್ನು ಓರ್ವ ಕಲಾವಿದನೆಂಬ ಭಾವ ಮೂಡಿಸಿತು.[೫] ಇದುವರೆಗೂ ತಾನು ಸೆಸಿಲ್‌ B. ಡೆಮಿಲ್ಲೆ ಅಥವಾ ಡೇವಿಡ್‌ ಲೀನ್‌ರಂತಹಾ ನಿರ್ದೇಶಕರ ಪ್ರಭಾವಕ್ಕೆ ಒಳಗಾಗಿದ್ದೆ ಎಂದು ಭಾವಿಸಿದ್ದ ಸ್ಪೀಲ್‌ಬರ್ಗ್‌ರನ್ನು ಇದು ಪರಿಪಕ್ವಗೊಳಿಸಿತು.[೧೦] ಈ ಚಿತ್ರದಲ್ಲಿ, ಅವರ ಚಿತ್ರೀಕರಣದ ಶೈಲಿ ಸಂಪೂರ್ಣ ಅವರದ್ದೇ ಆಗಿತ್ತು. ಅವರು ಹೆಮ್ಮೆಯಿಂದ ಈ ಚಿತ್ರದಲ್ಲಿ ಕ್ರೇನ್‌ ಬಳಸಿ ಚಿತ್ರೀಕರಿಸಿದ ದೃಶ್ಯಗಳೇ ಇಲ್ಲ ಎಂದು ಹೇಳಿಕೊಳ್ಳುತ್ತಾರೆ.[೩]

ಚಿತ್ರವನ್ನು ಪ್ರಮುಖವಾಗಿ ಕಪ್ಪುಬಿಳುಪು ಚಿತ್ರವಾಗಿ ಚಿತ್ರೀಕರಿಸುವ ನಿರ್ಧಾರವು ಚಲನಚಿತ್ರಕಲೆಯ ಸಾಕ್ಷ್ಯಚಿತ್ರ ಶೈಲಿಯಿಂದ ಎರವಲು ಪಡೆದಿದ್ದು, ಇದನ್ನು ಚಲನಚಿತ್ರ ಛಾಯಾಗ್ರಾಹಕ ಜಾನುಜ್‌ ಕಾಮಿನ್‌ಸ್ಕಿಯವರು ಜರ್ಮನ್‌ ಅಭಿವ್ಯಕ್ತಿವಾದ ಹಾಗೂ ಇಟಲಿಯ ನವೀನವಾಸ್ತವವಾದಗಳಿಗೆ ಹೋಲಿಸಿದ್ದರು.[೮] ಕಾಮಿನ್‌ಸ್ಕಿ "ವೀಕ್ಷಕರು ಈ ಚಿತ್ರವನ್ನು ಯಾವಾಗ ಚಿತ್ರೀಕರಿಸಿದ್ದೆಂದು ಅರಿಯಲಾಗದಂತೆ " ಕಾಲಾತೀತ ಭಾವವನ್ನು ಚಿತ್ರಕ್ಕೆ ನೀಡಲು ಇಚ್ಚಿಸಿದ್ದರು."[೮] ಸ್ಪೀಲ್‌ಬರ್ಗ್‌ "ಅ[ವಾ]ಸ್ತವಿಕವಾಗಿ ನಾನು ಹತ್ಯಾಕಾಂಡದಲ್ಲಿ ನೋಡಿದ ಪ್ರತಿಯೊಂದು ಅಂಶವನ್ನೂ ... ಅವುಗಳಲ್ಲಿ ಬಹಳಷ್ಟು ಕೇವಲ, ಕಪ್ಪು ಹಾಗೂ ಬಿಳಿಯ ಚಿತ್ರಗಳಾಗಿದ್ದವು" ಎಂಬ ಶೈಲಿಯನ್ನು ಅನುಸರಿಸುತ್ತಿದ್ದರು."[೧೩] ಯೂನಿವರ್ಸಲ್‌ ಅಧ್ಯಕ್ಷ ಟಾಮ್‌ ಪಾಲ್ಲೊಕ್‌ ಸ್ಪೀಲ್‌ಬರ್ಗ್‌ರಿಗೆ ಚಿತ್ರದ ವರ್ಣ VHS ಪ್ರತಿಗಳನ್ನು ಮಾರಲು ಅನುಕೂಲವಾಗುವಂತೆ ವರ್ಣ ಋಣಬಿಂಬದಲ್ಲಿ ಚಿತ್ರೀಕರಿಸಲು ಹೇಳಿದರೂ, ಸ್ಪೀಲ್‌ಬರ್ಗ್‌ರು "ಘಟನೆಗಳನ್ನು ಅಲಂಕರಿಸಲು" ಇಚ್ಛಿಸಲಿಲ್ಲ."[೮] ಕಪ್ಪು ಬಿಳುಪು ಚಿತ್ರವು ವರ್ಣ-ಪರಿಚಿತ ಸಿಬ್ಬಂದಿಗೆ ಸವಾಲೊಡ್ಡಿತು. ನಿರ್ಮಾಣ ವಿನ್ಯಾಸಕ ಅಲನ್‌ ಸ್ಟಾರ್ಸ್ಕಿರವರು, ದೃಶ್ಯದಲ್ಲಿದ್ದ ವ್ಯಕ್ತಿಗಳಿಗಿಂತ ದೃಶ್ಯಸ್ಥಳವನ್ನು ಬೆರೆತುಹೋಗದಂತೆ ಗಾಢ ಅಥವಾ ತಿಳಿಯ ಬಣ್ಣವಾಗುವಂತೆ ಮಾಡಬೇಕಿತ್ತು. ವೇಷಭೂಷಣಗಳು ಚರ್ಮದವರ್ಣ ಅಥವಾ ದೃಶ್ಯದಲ್ಲಿ ಬಳಸಿದ ವರ್ಣಗಳಿಗಿಂತ ಭಿನ್ನವಾಗಿರಬೇಕಾಗಿತ್ತು.[೧೩]

ಸಂಗೀತ[ಬದಲಾಯಿಸಿ]

ಜಾನ್‌ ವಿಲಿಯಂಸ್ಷಿಂಡ್ಲರ್‌'ನ ಪಟ್ಟಿ ಚಿತ್ರದ ಸಂಗೀತ ಸಂಯೋಜನೆ ಮಾಡಿದ್ದರು. ಸಂಯೋಜಕ ಈ ಚಿತ್ರದ ಬಗ್ಗೆ ಕೇಳಿ ವಿಸ್ಮಯಪಟ್ಟರಲ್ಲದೇ, ಇದು ಬಹಳವೇ ಸವಾಲಿನದ್ದಾಗಿದೆ ಎಂದು ಭಾವಿಸಿದ್ದರು. ಸ್ಪೀಲ್‌ಬರ್ಗ್‌ಗೆ, "ಈ ಚಿತ್ರಕ್ಕೆ ನಿಮಗೆ ನನಗಿಂತಲೂ ಉತ್ತಮ ಸಂಯೋಜಕ ಬೇಕಾಗುತ್ತಾರೆ" ಎಂದು ಹೇಳಿದರು." ಸ್ಪೀಲ್‌ಬರ್ಗ್‌ "ನನಗೆ ಗೊತ್ತಿದೆ. ಆದರೆ ಅವರೆಲ್ಲಾ ಮರಣಿಸಿದ್ದಾರೆ!" ಎಂದು ಪ್ರತ್ಯುತ್ತರ ನೀಡಿದರು. ವಿಲಿಯಂಸ್‌ ಪಿಯಾನೊದಲ್ಲಿ ಪ್ರಧಾನ ಸ್ವರಸಂಗತಿಯನ್ನು ನುಡಿಸಿದರು, ಸ್ಪೀಲ್‌ಬರ್ಗ್‌'ರ ಸಲಹೆ ಮೇರೆಗೆ, ಅದೇ ಸಂಗತಿಯನ್ನು ವಯೊಲಿನ್‌ನಲ್ಲಿ ನುಡಿಸಲು ಇಟ್ಜ್‌‌ಹಾಕ್‌ ಪರ್ಲ್‌ಮನ್‌ರನ್ನು ಗೊತ್ತು ಮಾಡಿದರು. ನಾಝಿಗಳು ಘೆಟ್ಟೋವನ್ನು ನಾಶಪಡಿಸುತ್ತಿರುವ ದೃಶ್ಯದಲ್ಲಿ, "ಓಯಿಫ್‌'ನ್‌ ಪ್ರೈಪ್ಟ್‌ಷಾಕ್‌ (Yiddish: אויפֿן פּריפּעטשיק)" ಜನಪದ ಗೀತೆಯನ್ನು ಬಾಲಗಾಯಕರ ವೃಂದದಿಂದ ಹಾಡಿಸಲಾಗಿದೆ. ಈ ಗೀತೆಯನ್ನು ಸ್ಪೀಲ್‌ಬರ್ಗ್‌'ರ ಅಜ್ಜಿ ಬೆಕಿ, ಅನೇಕವೇಳೆ ತನ್ನ ಮೊಮ್ಮಕ್ಕಳಿಗೆಂದು ಹಾಡುತ್ತಿದ್ದರು.[೧೪] ಚಿತ್ರದ ಕ್ಲಾರಿನೆಟ್‌ ಏಕಾಂಗಿ ಗೀತೆಗಳನ್ನು ಕ್ಲೆಜ್‌ಮರ್‌ ವರ್ಚುಸೋ ಗಿಯೊರಾ ಫೀಡ್‌ಮನ್‌ರು ಧ್ವನಿಮುದ್ರಿಸಿದ್ದರು.

ಸಂಕೇತಗಳು[ಬದಲಾಯಿಸಿ]

ಕೆಂಪು ಮೇಲಂಗಿಯ/ಕೋಟಿನ ಹುಡುಗಿ[ಬದಲಾಯಿಸಿ]

ಚಿತ್ರ:Schindlers list red dress.JPG
ಷಿಂಡ್ಲರ್‌ ಕೆಂಪು ಮೇಲಂಗಿ ಧರಿಸಿದ ಪುಟ್ಟ ಹುಡುಗಿಯೊಬ್ಬಳನ್ನು ನೋಡುತ್ತಾನೆ. ಕಪ್ಪು-ಬಿಳುಪು ದೃಶ್ಯಗಳಲ್ಲಿ ವರ್ಣ ಬಳಕೆಯಾದ ಕೆಲವು ಸಂದರ್ಭಗಳಲ್ಲಿ ಕೆಂಪು ಮೇಲಂಗಿಯು ಒಂದು.

ಚಿತ್ರವನ್ನು ಪ್ರಧಾನವಾಗಿ ಕಪ್ಪುಬಿಳುಪಿನಲ್ಲಿ ಚಿತ್ರಿಸಿದಾಗ್ಯೂ, ಮೇಲಂಗಿ ಧರಿಸಿದ ಓರ್ವ ಪುಟ್ಟ ಬಾಲಕಿಯನ್ನು ಪ್ರತ್ಯೇಕಿಸಲು ಕೆಂಪು ವರ್ಣವನ್ನು ಬಳಸಲಾಗಿದೆ. ನಂತರ ಚಿತ್ರದಲ್ಲಿ ಬಾಲಕಿಯನ್ನು ಸತ್ತವರ ಗುಂಪಿನಲ್ಲಿ ನೋಡಲಾಗುತ್ತದೆ, ಅಲ್ಲಿ ಆಕೆಗೆ ಆಗಲೂ ಧರಿಸಿದ ಕೆಂಪು ಮೇಲಂಗಿಯ ಮೂಲಕವೇ ಗುರುತಿಸಲಾಗುತ್ತದೆ. ಇದು ಉದ್ದೇಶಪೂರ್ವಕವಲ್ಲದಿದ್ದರೂ, ಈ ಪಾತ್ರವು ಕ್ರಾಕೌ ಘೆಟ್ಟೋದಲ್ಲಿ ತನ್ನ ಕೆಂಪು ಮೇಲಂಗಿಯಿಂದಲೇ ಗುರುತಿಸಲ್ಪಟ್ಟ ರೋಮಾ ಲಿಗೋಕ್ಕಾಳನ್ನು ಹೋಲುತ್ತದೆ. ಲಿಗೋಕ್ಕಾ, ತನ್ನ ಕಥಾಪಾತ್ರದಂತಲ್ಲದೇ ಹತ್ಯಾಕಾಂಡದಿಂದ ಪಾರಾಗಿದ್ದಳು. ಚಿತ್ರವು ಬಿಡುಗಡೆಯಾದ ನಂತರ, ಆಕೆ ದ ಗರ್ಲ್ ಇನ್‌ ದ ರೆಡ್‌ ಕೋಟ್‌: ಎ ಮೆಮೊಯಿರ್ ‌ (2002, ಭಾಷಾಂತರಿತ ಪ್ರತಿ) ಎಂಬ ಹೆಸರಿನ ತನ್ನದೇ ಸ್ವಂತ ಕಥೆಯನ್ನು ಬರೆದು ಪ್ರಕಟಿಸಿದಳು.[೧೫] ಆದರೆ ದೃಶ್ಯವನ್ನು ಪ್ಲಾಜೌ (ಹಾಗೂ ಇತರೆ ಸಮಾಜಸೇವಕ ಶಿಬಿರಗಳ)ನ ಬದುಕುಳಿದ ವ್ಯಕ್ತಿ ಝೆಲಿಗ್‌ ಬಕ್ಹುಟ್‌ರ ನೆನಪುಗಳ ಮೇಲೆ ಆಧಾರಿತವಾಗಿ ನಿರ್ಮಿಸಲಾಗಿತ್ತು. ಚಿತ್ರವನ್ನು ನಿರ್ಮಿಸುವ ಮುನ್ನ ಸ್ಪೀಲ್‌ಬರ್ಗ್‌ರು ಆತನನ್ನು ಸಂದರ್ಶಿಸಿದಾಗ, ತನ್ನ ಕಣ್ಣಮುಂದೆಯೇ ನಾಝಿ ಅಧಿಕಾರಿಯೊಬ್ಬ ಗುಲಾಬಿ ಮೇಲಂಗಿ ತೊಟ್ಟ ಓರ್ವ ನಾಲ್ಕು ವರ್ಷಕ್ಕಿಂತ ಪುಟ್ಟ ಬಾಲಕಿಗೆ ಗುಂಡಿಕ್ಕಿ ಕೊಂದ ಬಗ್ಗೆ ಬಕ್ಹುಟ್‌ ಹೇಳಿದ್ದರು. ದ ಕೊರಿಯರ್‌-ಮೇಲ್‌ಗೆ ನೀಡಿದ ಸಂದರ್ಶನದಲ್ಲಿ "ಅದು ನಿಮ್ಮೊಂದಿಗೆ ಎಂದೆಂದಿಗೂ ಉಳಿಯುವಂತಹದು" ಎಂದು ಆತ ಹೇಳುತ್ತಾರೆ".

IGN ನ ಆಂಡಿ ಪೆಟ್ರಿಜಿಯೋರ ಪ್ರಕಾರ, ಕೆಂಪು ಮೇಲಂಗಿಯ ಹುಡುಗಿಯು ಷಿಂಡ್ಲರ್‌ ಬದಲಾಗಿದ್ದಾನೆಂದು ತೋರಿಸುವ ರೀತಿಯನ್ನು ಸೂಚಿಸುತ್ತದೆ : "ಆಕೆಯನ್ನು ಸುಡಬೇಕಾಗಿರುವ ಕಳೇಬರಗಳ ಗುಪ್ಪೆಯ ಗಾಡಿಯಲ್ಲಿ ಮತ್ತೊಂದು ಹೆಣವಾಗಿಸುವ ಮೂಲಕ ಆಕೆಯ [ಲಿಗೋಕ್ಕಾ'ರ] ಕಥೆಗೆ ಸ್ಪೀಲ್‌ಬರ್ಗ್‌ ತಿರುವನ್ನು ನೀಡಿದ್ದರು. ಷಿಂಡ್ಲರ್‌'ನ ಮುಖದ ಮೇಲಿನ ಭಾವನೆಯ ತಪ್ಪಾಗಿ ಅರ್ಥೈಸಲು ಸಾಧ್ಯವೇ ಇಲ್ಲದಷ್ಟು ಸ್ಪಷ್ಟವಾಗಿತ್ತು. ಕೆಲ ನಿಮಿಷಗಳ ಮುಂಚೆಯಷ್ಟೇ, ತನ್ನ ಕಾರಿನ ಮೇಲೆ ಬೀಳುತ್ತಿದ್ದ ಸುಡುತ್ತಿರುವ ಹೆಣಗಳ ಬೂದಿ ಮತ್ತು ಮಸಿಯನ್ನು ಕೇವಲ ಕಿರಿಕಿರಿಯಂತೆ ಆತ ನೋಡಿರುತ್ತಾನೆ."[೧೬] ಆಂಡ್ರೆ ಕಾರನ್‌ ಅದನ್ನು ತೋರಿಸುವುದು "ಮುಗ್ಧತೆ, ನಿರೀಕ್ಷೆ ಅಥವಾ ಹತ್ಯಾಕಾಂಡದ ಭಯಾನಕತೆಯಲ್ಲಿ ಬಲಿಯಾದ ಯಹೂದ್ಯರ ಕೆಂಪು ರಕ್ತವನ್ನು ಸೂಚಿಸಲಿಕ್ಕೋ?" ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.[೧೭] ಸ್ಪೀಲ್‌ಬರ್ಗ್‌ ತಾವು ಕೇವಲ ಕಾದಂಬರಿಯನ್ನು ಅನುಸರಿಸಿದ್ದೇನಷ್ಟೇ ಎಂದು ಸ್ವತಃ ವಿವರಿಸಿದ್ದಲ್ಲದೇ, ತಮ್ಮ ವ್ಯಾಖ್ಯಾನವೇನೆಂದರೆ

"ಅಮೇರಿಕಾ, ರಷ್ಯಾ ಹಾಗೂ ಇಂಗ್ಲೆಂಡ್‌ಗಳಿಗೆ ಹೀಗೆ ಹತ್ಯಾಕಾಂಡ ನಡೆಯುತ್ತಿದೆಯೆಂದು ಆಗಲೇ ಗೊತ್ತಿದ್ದೂ ಅದರ ಬಗ್ಗೆ ಏನೂ ಮಾಡಲಿಲ್ಲ. ನಮ್ಮ ಯಾವುದೇ ಸೇನಾಪಡೆಯನ್ನು ಸಾವಿನೆಡೆಗಿನ ನಡೆಯನ್ನು ಎಂದರೆ ದೃಢ ಸಾವಿನೆಡೆಗಿನ ನಡೆಯನ್ನು ನಿಲ್ಲಿಸಲು ನಿಯೋಜಿಸಲಿಲ್ಲ. ಇದೊಂದು ಪ್ರತಿಯೋರ್ವರ ದೇಹದಲ್ಲಿಯೂ ಹರಿಯುವ ಪ್ರಧಾನ ಕೆಂಪು ವರ್ಣದ ರಕ್ತರಂಜಿತ ಕಳಂಕವೇ ಆಗಿದ್ದರೂ, ಯಾರೂ ಇದರ ಬಗ್ಗೆ ಏನೂ ಮಾಡಲಿಲ್ಲ. ಹೀಗಾಗಿಯೇ ನಾನು ಇದರಲ್ಲಿ ಕೆಂಪು ವರ್ಣವನ್ನು ತರಲಿಚ್ಛಿಸಿದ್ದೆ."[೧೮]

ಆ ಪುಟ್ಟ ಹುಡುಗಿಯು ಯಾವುದೇ ಸಂಭಾಷಣೆಯ ಭಾಗವಾಗದಿದ್ದರೂ ಅಂತರ್ಜಾಲದ ಚಲನಚಿತ್ರ ದತ್ತಸಂಚಯದಲ್ಲಿ ಆಕೆಯು "ರೆಡ್‌ ಜಿನಿಯಾ" ಎಂದೇ ಗುರುತಿಸಲ್ಪಟ್ಟಿದ್ದಾಳೆ, ನಂತರ ಕೇವಲ ಒಂದು ಚಿತ್ರದಲ್ಲಿ ಮಾತ್ರವೇ ನಟಿಸಿದ 1989ರ ಮೇ 28ರಂದು, ಕ್ರಾಕೌನಲ್ಲಿ ಜನಿಸಿದ ಒಲಿವಿಯಾ ಡಾಬ್ರೌಸ್ಕಾ ಈ ಪಾತ್ರದಲ್ಲಿ ನಟಿಸಿದ್ದಾಳೆ.

ಮೇಣದಬತ್ತಿಗಳು[ಬದಲಾಯಿಸಿ]

ಚಿತ್ರವು ಷಬ್ಬತ್‌ ಆಚರಿಸುತ್ತಿರುವ ಕುಟುಂಬವನ್ನು ತೋರಿಸುವುದರೊಂದಿಗೆ ಆರಂಭವಾಗುತ್ತದೆ. ಸ್ಪೀಲ್‌ಬರ್ಗ್‌ "ಮೇಣದಬತ್ತಿಯನ್ನು ಹಚ್ಚುವುದರಿಂದ ಚಿತ್ರವನ್ನು ಆರಂಭಿಸುವುದು... ಶ್ರೀಮಂತರ ಪುಸ್ತಕದ ಮಗ್ಗಲೂರೆಯಿದ್ದಂತೆ, ಯಹೂದ್ಯ ವಿರೋಧಿ ಮಹಾವಿಪ್ಪತ್ತಿನ ಮುನ್ನದ ಸಾಮಾನ್ಯ ಷಾಬ್ಬೆಸ್‌ ಸೇವೆಯಿಂದ ಚಿತ್ರವನ್ನು ಆರಂಭಿಸಲಾಗಿತ್ತು" ಎಂದರು." ಚಿತ್ರದ ಆರಂಭಿಕ ಕ್ಷಣಗಳಲ್ಲಿ ಬಣ್ಣವು ಮಂಕಾದಂತೆ, ಆಷ್‌ವಿಟ್ಜ್‌ನಲ್ಲಿ ದೇಹಗಳನ್ನು ಸುಡುತ್ತಿರುವುದನ್ನು ಸಂಕೇತಿಸಲು ಹೊಗೆಯನ್ನು ಬಳಸುವ ದೃಶ್ಯವಾಗಿ ತೆರೆದುಕೊಳ್ಳುತ್ತದೆ. ಕೊನೆಯಲ್ಲಿ ಷಿಂಡ್ಲರ್‌ ತನ್ನ ಕೆಲಸಗಾರರಿಗೆ ಷಬ್ಬತ್‌ ಆಚರಣೆಯನ್ನು ನಡೆಸಲು ಅನುಮತಿ ನೀಡಿದಾಗ ಮಾತ್ರವೇ ಮೇಣದಬತ್ತಿಯ ಬೆಳಕು ತನ್ನ ಬೆಚ್ಚನೆಯ ಭಾವವನ್ನು ಮರುಗಳಿಸುತ್ತದೆ. ಸ್ಪೀಲ್‌ಬರ್ಗ್‌ರ ಪಾಲಿಗೆ ಅವು, "ಬಣ್ಣದ ಮಿಂಚನ್ನು ಹಾಗೂ ನಿರೀಕ್ಷೆಯ ಮಿನುಗನ್ನು" ಮಾತ್ರವೇ ಸೂಚಿಸುತ್ತವೆ."[೩]

ಬಿಡುಗಡೆ[ಬದಲಾಯಿಸಿ]

ನ್ಯೂಯಾರ್ಕ್‌, ಲಾಸ್‌ ಏಂಜಲೀಸ್‌, ಹಾಗೂ ಟೊರೆಂಟೋಗಳಲ್ಲಿ ಡಿಸೆಂಬರ್‌ 15, (West Frisian)ರಂದು ಬಿಡುಗಡೆಯಾಯಿತು. ಚಿತ್ರವು ಯುನೈಟೆಡ್‌ ಸ್ಟೇಟ್ಸ್‌ನಲ್ಲಿಯೇ $96.1 ದಶಲಕ್ಷಗಳನ್ನು ಬಾಚಿದರೆ, ವಿಶ್ವದಾದ್ಯಂತ $321.2 ದಶಲಕ್ಷಗಳಿಗೂ ಮೀರಿ ಗಳಿಸಿತು.[೧೯] ಜರ್ಮನಿಯಲ್ಲಿ, 5.8 ದಶಲಕ್ಷಕ್ಕೂ ಹೆಚ್ಚಿನ ಪ್ರವೇಶಚೀಟಿಗಳು ಮಾರಾಟವಾಗಿದ್ದವು.[೧೯]

ಮಾರ್ಚ್ 9, 2004ರಂದು ಚಿತ್ರವನ್ನು DVDಯ ರೂಪದಲ್ಲಿ ಬಿಡುಗಡೆ ಮಾಡಲಾಯಿತು. DVDಯು A ಬದಿಯಲ್ಲಿ ಚಿತ್ರ ಆರಂಭವಾಗಿ B ಬದಿಯಲ್ಲಿ ಚಿತ್ರವು ಮುಂದುವರೆಯುವ ರೀತಿಯಲ್ಲಿ, ಹಾಗೂ ವಿಶೇಷ ಸೌಲಭ್ಯಗಳೊಡನೆ ಸ್ಟೀವನ್‌ ಸ್ಪೀಲ್‌ಬರ್ಗ್‌ರು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಹೊಂದಿರುವ DVD-18 ಮುದ್ರಿಕೆ/ಡಿಸ್ಕ್‌ ಮಾದರಿಯ ಅಗಲಪರದೆಯ ಹಾಗೂ ಪೂರ್ಣಪರದೆಯ ಆವೃತ್ತಿಗಳಲ್ಲಿ ಲಭ್ಯವಿದೆ. ಇದರೊಂದಿಗೆ ಎರಡೂ ಮಾದರಿಗಳಲ್ಲಿ ಜೋಡಿ ಕೊಡುಗೆಯ ಮಿತ ಆವೃತ್ತಿಗಳು ಲಭ್ಯವಿದ್ದವು. ಲೇಸರ್‌ಡಿಸ್ಕ್‌ ಜೋಡಿ ಕೊಡುಗೆಯ ಆವೃತ್ತಿಯು ಕೇವಲ 10,000 ಪ್ರತಿಗಳ ತಯಾರಿಕೆಯೊಂದಿಗೆ ಮಿತಲಭ್ಯತೆ ಆವೃತ್ತಿಗಳಲ್ಲಿ ಒಂದು. ಈ ಮಾಲೆಯು DVDಯೊಂದಿಗೆ, ಚಿತ್ರದ ಸಂಗೀತ, ಮೂಲ ಕಾದಂಬರಿ ಹಾಗೂ ವಿಶೇಷ ಚಿತ್ರಮಾಲಿಕೆಯನ್ನು ಒಳಗೊಂಡಿದೆ.[೨೦] ಲೇಸರ್‌ಡಿಸ್ಕ್‌ ಜೋಡಿಯಂತೆ, DVD ಕೊಡುಗೆ ಮಾಲೆಯು ಚಿತ್ರದ ಅಗಲಪರದೆ ಆವೃತ್ತಿ ಮೂಲ ಕಾದಂಬರಿ ಹಾಗೂ CDಯಲ್ಲಿ ಚಿತ್ರದ ಸಂಗೀತ, ಸೆನಿಟೈಪ್‌, ಹಾಗೂ ಷಿಂಡ್ಲರ್‌'ಸ್‌ ಲಿಸ್ಟ್‌: ಇಮೇಜಸ್‌ ಆಫ್‌ ದ ಸ್ಟೀವನ್‌ ಸ್ಪೀಲ್‌ಬರ್ಗ್‌ ಫಿಲ್ಮ್‌, ಎಂಬ ಶೀರ್ಷಿಕೆಯ ವಿಶೇಷ ಚಿತ್ರಮಾಲಿಕೆಗಳೆಲ್ಲವನ್ನೂ ಹೊಂದಿರುವ ಪ್ಲೆಕ್ಸಿಗ್ಲಾಸ್‌ ಸಂಪುಟದ ರೂಪದಲ್ಲಿದೆ.[೨೧] ಆ ನಂತರ ಮಾಲೆಯನ್ನು ನಿಲ್ಲಿಸಲಾಗಿದೆ.[೨೨]

ಸ್ವೀಕಾರ[ಬದಲಾಯಿಸಿ]

ಷಿಂಡ್ಲರ್‌'ನ ಪಟ್ಟಿ ಯು ಸ್ಟೀವನ್‌ ಸ್ಪೀಲ್‌ಬರ್ಗ್‌'ರ ವೃತ್ತಿಜೀವನದ ಅತ್ಯುತ್ತಮ ವಿಮರ್ಶೆ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ ಸೇರಿದಂತೆ ಏಳು ಆಸ್ಕರ್‌ ಪ್ರಶಸ್ತಿಗಳನ್ನು ಗೆದ್ದಿತು. ಲಿಯಾಂ ನೀಸನ್‌ ಹಾಗೂ ರಾಲ್ಫ್‌ ಫಿಯೆನ್ನೆಸ್‌ರನ್ನು ಕ್ರಮವಾಗಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಪೋಷಕನಟ ವರ್ಗಕ್ಕೆ ಸೂಚಿತರಾದರೂ, ಗೆಲ್ಲಲಾಗಲಿಲ್ಲ.[೨೩] ಬ್ರಿಟಿಷ್‌ ಅಕಾಡೆಮಿ ಪ್ರಶಸ್ತಿಗಳಲ್ಲಿ ಚಿತ್ರವು ಅತ್ಯುತ್ತಮ ಚಿತ್ರ, ನಿರ್ದೇಶನದ ಡೇವಿಡ್‌ ಲೀನ್‌ ಪ್ರಶಸ್ತಿ, ಅತ್ಯುತ್ತಮ ಪೋಷಕ ನಟ (ರಾಲ್ಫ್‌ ಫಿಯೆನ್ನೆಸ್‌ ), ಛಾಯಾಗ್ರಹಣ, ಸಂಪಾದನೆ ಹಾಗೂ ಸಂಗೀತಗಳ ವರ್ಗಗಳಲ್ಲಿ ಆಯ್ಕೆಯಾಯಿತು.[೧೯] ಷಿಂಡ್ಲರ್‌'ನ ಪಟ್ಟಿ ಚಿತ್ರವು ಅತ್ಯುತ್ತಮ ಚಲನಚಿತ್ರ (ರೂಪಕ/ಅಭಿನಯ), ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಚಿತ್ರಕಥೆಗಳಿಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯಲ್ಲದೇ, ಗ್ರಾಮ್ಮಿ ಪ್ರಶಸ್ತಿಯನ್ನು ಚಿತ್ರದ ಸಂಗೀತಕ್ಕಾಗಿ ಜಾನ್‌ ವಿಲಿಯಂಸ್‌ರಿಗೆ ನೀಡಲಾಯಿತು.[೧೯]

ಷಿಂಡ್ಲರ್‌'ನ ಪಟ್ಟಿ ಚಿತ್ರವನ್ನು ದ ನ್ಯೂಯಾರ್ಕ್‌ ರಿವ್ಯೂ ಆಫ್‌ ಬುಕ್ಸ್ ‌ಗೆಂದು ವಿಮರ್ಶಿಸುತ್ತಾ, ಶ್ರೇಷ್ಠ ಸಾಂಸ್ಕೃತಿಕ ವಿಮರ್ಶಕ ಜಾನ್‌ ಗ್ರಾಸ್‌ರು, : “ಡಿಸ್ನಿ ಸಂಸ್ಥೆಯು ಹತ್ಯಾಕಾಂಡದ ಬಗೆಗೆ ಒಂದು ಚಿತ್ರ ನಿರ್ಮಿಸಲು ಯೋಜಿಸಿದೆಯೆಂದು ಘೋಷಿಸಿದರೆ ... ಸ್ಪೀಲ್‌ಬರ್ಗ್‌’ರ ಇದುವರೆಗಿನ ಚಿತ್ರಗಳು ಸಾಮಾನ್ಯವಾಗಿ ರಮ್ಯಕಥೆಗಳು ಇಲ್ಲವೇ ಸಾಹಸ ಕಥೆಗಳು ಇಲ್ಲವೇ ಅವೆರಡರ ಮಿಶ್ರಣವಾಗಿದ್ದವು. ಆದ್ದರಿಂದ ನಾನು ಈ ಚಿತ್ರವನ್ನು ಅಳುಕಿಲ್ಲದೇ ನೋಡಿದೆನೆಂದು ಸೋಗು ಹಾಕಲಾರೆ. ನನ್ನ ಎಲ್ಲಾ ಆತಂಕಗಳು ಸಾರಾಸಗಟಾಗಿ ತಪ್ಪಾದವು. ಸ್ಪೀಲ್‌ಬರ್ಗ್‌ ತಮ್ಮ ವಿಷಯವಸ್ತುವಿನ ಮೇಲಿನ ಹಿಡಿತದಲ್ಲಿ ದೃಢ ನೈತಿಕತೆಯ ಹಾಗೂ ಭಾವನಾತ್ಮಕ ಹಿಡಿತವನ್ನು ಹೊಂದಿದ್ದಾರೆ. ಈ ಚಿತ್ರವು ಒಂದು ಅಸಾಧಾರಣ ಸಾಧನೆಯಾಗಿದೆ” ಎಂದು ಬರೆದಿದ್ದರು.”[೨೪]

“ತನ್ನೆಲ್ಲ ಧೀಮಂತಿಕೆಯಲ್ಲಿ ಕೂಡಾ, ಷಿಂಡ್ಲರ್‌’ನ ಪಟ್ಟಿ ಚಿತ್ರವು ಷೋವಾ ಅಥವಾ ಅಲೈನ್‌ ರೆಸ್ನೈಸ್‌'ರ ನೈಟ್‌ ಅಂಡ್‌‌ ಫಾಗ್ ‌ಗಳಂತಹಾ ನಿಜವಾದ ಸಾಕ್ಷ್ಯಚಿತ್ರಗಳ ಜಡ್ಡುಗಟ್ಟಿದ ಸತ್ಯತೆಯೊಂದಿಗೆ ಸರಿದೂಗಲಾಗದು, ಆದರೆ ಜನಪ್ರಿಯ ಸಂಸ್ಕೃತಿಗೆ ಕೊಡುಗೆಯಾಗಿ ಇದು ಒಳ್ಳೆಯದನ್ನಷ್ಟೇ ಮಾಡಬಲ್ಲದು. ಹತ್ಯಾಕಾಂಡ ನಿರಾಕರಣೆಯು ಭವಿಷ್ಯದ ಸಮಸ್ಯೆಯಾಗಬಹುದು ಅಥವಾ ಆಗದೇ ಇರಬಹುದು, ಆದರೆ ಹತ್ಯಾಕಾಂಡದ ಮೌಢ್ಯ, ಹತ್ಯಾಕಾಂಡವನ್ನು ಮರೆಯುವಿಕೆ, ಹಾಗೂ ಹತ್ಯಾಕಾಂಡದ ಬಗ್ಗೆ ಉಪೇಕ್ಷೆಗಳು ಖಂಡಿತಾ ಸಮಸ್ಯೆಯಾಗಬಲ್ಲವು ಹಾಗೂ ಷಿಂಡ್ಲರ್‌’ನ ಪಟ್ಟಿ ಚಿತ್ರವು ಒಂದೇ ಕೃತಿಯು ಅದನ್ನು ಹೋಗಲಾಡಿಸಲು ಏನು ಮಾಡಬಹುದೋ ಅದೆಲ್ಲವನ್ನೂ ಮಾಡಿದೆ” ಎಂದು ಮುಂದುವರೆಸಿ ಹೇಳಿದರು.”[೨೪]

ಚಿತ್ರವು ತನ್ನದೇ ಆದ ಲೋಪಗಳನ್ನೂ ಹೊಂದಿತ್ತು. ರಾಬರ್ಟ್‌ ಫಿಲಿಪ್‌ ಕಾಲ್ಕರ್‌, ತಮ್ಮ ಎ ಸಿನೆಮಾ ಆಫ್‌ ಲೋನ್ಲಿನೆಸ್ ‌ನಲ್ಲಿ , ಗಾತ್‌ನ ಪಾತ್ರದ ಬಿಂಬಿಸುವಿಕೆಯನ್ನು "ವೈವಿಧ್ಯತೆಯಿಲ್ಲದ ವಿಪರೀತ ಕ್ರೂರ. ಆತನೊಬ್ಬ ವಿಕ್ಷಿಪ್ತ ವ್ಯಕ್ತಿ, ಅಲ್ಲದೇ ನಾಝಿತತ್ವ ಹಾಗೂ ಅದರ ಅನುಯಾಯಿಗಳನ್ನು ತೊಲಗಿಸಲು ವಿಕ್ಷಿಪ್ತತೆ ತೀರಾ ಸುಲಭವಾದ ಮಾರ್ಗವಾದಂತಿದೆ. [...] ಸೈದ್ಧಾಂತಿಕ ಅಂಶಗಳನ್ನು ಎಷ್ಟರಮಟ್ಟಿಗೆ ವಿಕೃತಗೊಳಿಸಬಲ್ಲವೆಂದರೆ ಪ್ರಭಾವ, ಅಧಿಕಾರಗಳ ಕನಸು ಹಾಗೂ ಕಲ್ಪಿತ ದ್ವೇಷ ಮತ್ತು ಅಗತ್ಯದ ಗಾಢನಂಬಿಕೆಗಳು, ಸಾಂಸ್ಕೃತಿಕ ಜನರಲ್ಲಿ ದುಷ್ಪ್ರಭಾವಕ್ಕೊಳಗಾದ ಇತರರನ್ನು ಕೊಲ್ಲುವಂತಹಾ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ. ಖಂಡಿತಾ ವಿಕ್ಷಿಪ್ತ ಜರ್ಮನ್ನರಿದ್ದರು, ಆದರೆ; ನಾಝಿತತ್ವವನ್ನು ಕೇವಲ ವಿಕ್ಷಿಪ್ತತೆಗೆ ಇಳಿಸುವುದು ತಪ್ಪಾಗುತ್ತದೆ. ಷಿಂಡ್ಲರ್‌'ನ ಪಟ್ಟಿ ಯಲ್ಲಿ ಕೊಲ್ಲುವ ಚಿತ್ತೋನ್ಮಾದಕ್ಕೊಳಗಾದ ಜರ್ಮನ್‌ ಅಧಿಕಾರಿಗಳ ದೃಶ್ಯವಿದೆ , ಬಹುಶಃ, ಅವು ಗೋತ್‌ನ ನಿಷ್ಕರುಣೆಯ ಕೊಲೆಗಡುಕತನಕ್ಕಿಂತ ಹೆಚ್ಚು ನಿಖರತೆ ಹೊಂದಿವೆ, ಆದರೆ ಇದರೊಂದಿಗೆ ನಾಝಿಗಳನ್ನು ಸುಸಜ್ಜಿತ ದರೋಡೆಕೋರರೆಂದು ಹಳೆಯ ಹಾಲಿವುಡ್‌ನಂತೆ ಬಿಂಬಿಸಲಾಗಿದೆ" ಎಂದು ಪ್ರಶ್ನಿಸಿದ್ದಾರೆ."[೨೫]

ಚಿತ್ರ ನಿರ್ದೇಶಕ ಟೆರ್ರಿ ಗಿಲಿಯಂರು ಷಿಂಡ್ಲರ್‌'ನ ಪಟ್ಟಿ ಚಿತ್ರವನ್ನು ಟೀಕಿಸುತ್ತಾ, : "ಷಿಂಡ್ಲರ್‌'ನ ಪಟ್ಟಿ ಚಿತ್ರವು ಯಶಸ್ಸಿನ ಬಗೆಗಿದೆ, ಹತ್ಯಾಕಾಂಡವು ವಿಫಲತೆಯದಾಗಿತ್ತು" ಎಂದು ಸ್ಟಾನ್ಲೆ ಕುಬ್ರಿಕ್‌ನಿಂದ ಹೇಳಿಕೆಯೊಂದನ್ನು ಉದ್ಧರಿಸಿ ತಮ್ಮ ಚಿತ್ರದೆಡೆಗಿನ ಅಸಂತೋಷವನ್ನು ತೋರಿಸಿಕೊಂಡರು."[೨೬]

ಹಂಗೆರಿಯ ಯಹೂದ್ಯ ಹತ್ಯಾಕಾಂಡದ ಓರ್ವ ಬದುಕುಳಿದ ಲೇಖಕ ಇಮ್ರೆ ಕೆರ್ಟೆಸ್ಜ್ಷಿಂಡ್ಲರ್‌'ನ ಪಟ್ಟಿ ಚಿತ್ರದಲ್ಲಿ ಹತ್ಯಾಕಾಂಡದ ಅನುಭವವನ್ನು ಹುಸಿಯೆಂಬಂತೆ ಹಾಗೂ ಅದನ್ನು ಮನುಷ್ಯ ಸ್ವಭಾವಕ್ಕೆ ಹೊರತಾದುದು ಹಾಗೂ ಮತ್ತೆಂದೂ ಆಗಲಾರದು ಎಂಬಂತೆ ಚಿತ್ರಿಸಿರುವುದಕ್ಕೆ ಸ್ಪೀಲ್‌ಬರ್ಗ್‌ರನ್ನು ಟೀಕಿಸಿದ್ದಾರೆ. ಅವರು ಚಿತ್ರವನ್ನೇ ನಿರಾಕರಿಸಿ, ಹೀಗೆ ಹೇಳಿದರು "ಯುದ್ಧಕ್ಕೆ ಮುಂಚೆ ಹುಟ್ಟಿಯೂ ಇರದ ಅಮೇರಿಕಾದ ಸ್ಪೀಲ್‌ಬರ್ಗ್‌, ನಾಝಿ ಸೆರೆಶಿಬಿರದ ನಿಖರ ವಸ್ತುಸ್ಥಿತಿಯ ಬಗ್ಗೆ ಕಲ್ಪನೆ ಹೊಂದಿಲ್ಲ ಹಾಗೂ ಹೊಂದಲು ಸಾಧ್ಯವೂ ಇಲ್ಲ ಎಂಬುದು ಸುಸ್ಪಷ್ಟ... ನಮ್ಮದೇ ಸ್ವಂತ ವಿರೂಪಗೊಂಡ ಜೀವನ ಪದ್ಧತಿ (ಖಾಸಗಿ ವಲಯ ಅಥವಾ "ನಾಗರೀಕತೆಯ" ಮಟ್ಟದ ಬಗ್ಗೆಯಂತಹಾ) ಹಾಗೂ ಹತ್ಯಾಕಾಂಡದ ಸಾಧ್ಯತೆಯ ಬಗೆಗಿನ ಸಂಘಟಿತ ನಂಟನ್ನು ಅರ್ಥಮಾಡಿಕೊಳ್ಳದ ಅಥವಾ ಅರ್ಥಮಾಡಿಕೊಳ್ಳಲಿಚ್ಛಿಸದ ಹತ್ಯಾಕಾಂಡದ ನಿರೂಪಣೆಯನ್ನು ಧಳಕುಬಳುಕಿನದ್ದು ಎಂದೇ ಪರಿಗಣಿಸುತ್ತೇನೆ."[೨೭]

2004ರಲ್ಲಿ, ಲೈಬ್ರೆರಿ ಆಫ್‌ ಕಾಂಗ್ರೆಸ್‌ ಸಂಸ್ಥೆಯು ಚಿತ್ರವನ್ನು "ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದುದು" ಎಂದು ಪರಿಗಣಿಸಿ ನ್ಯಾಷನಲ್‌ ಫಿಲ್ಮ್‌ ರೆಜಿಸ್ಟ್ರಿ ಸಂಸ್ಥೆಯಲ್ಲಿ ಕಾಪಿಡಲು ಆಯ್ಕೆ ಮಾಡಿತು.[೨೮]

ಷಿಂಡ್ಲರ್‌'ನ ಪಟ್ಟಿ ಚಿತ್ರವು, ಟೈಮ್‌ ಔಟ್ ‌ ಪತ್ರಿಕೆಯ 1995ರಲ್ಲಿ ನಡೆಸಿದ ಶತಮಾನದ 100 ಅತ್ಯುನ್ನತ ಚಿತ್ರಗಳ ಜನಮತಗಣನೆ, ರೋಜರ್‌ ಎಬರ್ಟ್‌'ರ "ಶ್ರೇಷ್ಠ ಚಿತ್ರಗಳು"' ಸರಣಿ, ಹಾಗೂ ಲಿಯೋನಾರ್ಡ್‌ ಮಾಲ್ಟಿನ್‌' "ಶತಮಾನದ 100 ನೋಡಲೇಬೇಕಾದ ಚಿತ್ರಗಳು" ಹಾಗೂ ಟೈಮ್‌ ಪತ್ರಿಕೆಯ ಅತ್ಯುನ್ನತ ನೂರು ಚಿತ್ರಗಳಲ್ಲೊಂದಾಗಿ ವಿಮರ್ಶಕರಾದ ರಿಚರ್ಡ್‌ ಕಾರ್ಲಿಸ್‌ ಹಾಗೂ ರಿಚರ್ಡ್‌ ಷಿಕೆಲ್‌ರಿಂದ ಆಯ್ಕೆಯಾಗಿದ್ದೂ ಸೇರಿದಂತೆ ಅನೇಕ ಇತರ "ಅತ್ಯುತ್ತಮಗಳ" ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ, ದ ವ್ಯಾಟಿಕನ್‌ ಪತ್ರಿಕೆಯು ಷಿಂಡ್ಲರ್‌'ನ ಪಟ್ಟಿ ಯನ್ನು ಇದುವರೆಗೂ ಮಾಡಿದ ಶ್ರೇಷ್ಟ 45 ಚಿತ್ರಗಳಲ್ಲೊಂದಾಗಿ ಹೆಸರಿಸಿದೆ.[೨೯]

ಜರ್ಮನ್‌ ಚಲನಚಿತ್ರಪತ್ರಿಕೆ ಸಿನೆಮಾ ದ ಓದುಗರು ಷಿಂಡ್ಲರ್‌'ನ ಪಟ್ಟಿ ಚಿತ್ರಕ್ಕೆ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ #1ನೇ ಸ್ಥಾನಕ್ಕೆ 2000ರಲ್ಲಿ ಮತ ಹಾಕಿದ್ದರು.[೩೦] 2002ರಲ್ಲಿ ಚಾನಲ್‌ 4ರ ಜನಮತಗಣನೆಯಲ್ಲಿ ಷಿಂಡ್ಲರ್‌'ನ ಪಟ್ಟಿ ಚಿತ್ರವು ಸಾರ್ವಕಾಲಿಕ ಚಿತ್ರಗಳಲ್ಲಿ ಒಂಬತ್ತನೇ ಸ್ಥಾನ ನೀಡಿದರೆ,[೩೧] 2005ರ ಯುದ್ಧಚಿತ್ರಗಳ ಜನಮತಗಣನೆಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು.[೩೨]

ಚಿತ್ರದ ಯಶಸ್ಸಿನ ನಂತರ, ಸ್ಪೀಲ್‌ಬರ್ಗ್‌ ಹತ್ಯಾಕಾಂಡದ ಸಾಧ್ಯವಾದಷ್ಟು ಬದುಕುಳಿದವರ ಕಥೆಯನ್ನು ರಕ್ಷಿಸಲು ಅದನ್ನು ಚಿತ್ರೀಕರಿಸಿದ ಸಾಕ್ಷ್ಯಗಳ ಸಂಗ್ರಹಕ್ಕೆ ಅನುವು ಮಾಡುವ ಉದ್ದೇಶದ ಸರ್ವೈವರ್ಸ್‌ ಆಫ್‌ ದ ಷೋವಾ ವಿಷುಯಲ್‌ ಹಿಸ್ಟರಿ ಫೌಂಡೇಶನ್‌ ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಈಗಲೂ ಆ ಯೋಜನೆಗೆ ಧನಸಹಾಯ ನೀಡುತ್ತಿದ್ದಾರೆ.[೧೯] ಸ್ಪೀಲ್‌ಬರ್ಗ್‌ ಚಿತ್ರದಿಂದ ಗಳಿಸಿದ ಹಣವನ್ನು ದ ಲಾಸ್ಟ್‌ ಚಿಲ್ಡ್ರನ್‌ ಆಫ್‌ ಬರ್ಲಿನ್‌ (1996), ಆನ್ನೆ ಫ್ರಾಂಕ್‌ ರಿಮೆಂಬರ್‌ಡ್ ‌ (1995), ಹಾಗೂ ದ ಲಾಸ್ಟ್‌ ಡೇಸ್ ‌ (1998)ಗಳೂ ಸೇರಿದಂತೆ ಅನೇಕ ಸಂಬಂಧಿತ ಸಾಕ್ಷ್ಯಚಿತ್ರಗಳಿಗೆ ಧನಸಹಾಯ ನೀಡಲು ಬಳಸಿದರು.[೧೯]

ಅಕಾಡೆಮಿ ಪ್ರಶಸ್ತಿಗಳು[ಬದಲಾಯಿಸಿ]

ಪ್ರಶಸ್ತಿ ವ್ಯಕ್ತಿ
ನೀಡಿದ ಪ್ರಶಸ್ತಿ:
ಅತ್ಯುತ್ತಮ ಚಿತ್ರ ಸ್ಟೀವನ್‌ ಸ್ಪೀಲ್‌ಬರ್ಗ್‌
ಗೆರಾಲ್ಡ್‌ R. ಮೊಲೆನ್‌
ಬ್ರಾಂಕೊ ಲುಸ್ಟಿಗ್‌
ಅತ್ಯುತ್ತಮ ನಿರ್ದೇಶಕ ಸ್ಟೀವನ್‌ ಸ್ಪೀಲ್‌ಬರ್ಗ್‌
ಅತ್ಯುತ್ತಮ ಅಳವಡಿತ ಚಿತ್ರಕಥೆ ಸ್ಟೀವನ್‌ ಝೈಲಿಯನ್‌
ಅತ್ಯುತ್ತಮ ಛಾಯಾಗ್ರಾಹಕ ಜಾನುಜ್‌ ಕಾಮಿನ್‌ಸ್ಕಿ
ಅತ್ಯುತ್ತಮ ಕಲಾ ನಿರ್ದೇಶನ ಈವಾ ಬ್ರಾವ್ನ್‌‌
ಅಲನ್‌ ಸ್ಟಾರ್ಸ್ಕಿ
ಅತ್ಯುತ್ತಮ ಚಿತ್ರ ಸಂಪಾದನೆ ಮೈಕೆಲ್‌ ಕಾಹ್ನ್‌
ಅತ್ಯುತ್ತಮ ಮೂಲ ಸಂಗೀತಕ್ಕೆ ಅಕಾಡೆಮಿ ಪ್ರಶಸ್ತಿ ಜಾನ್‌ ವಿಲಿಯಂಸ್‌
ನಾಮನಿರ್ದೇಶನಗಳು
ಅತ್ಯುತ್ತಮ ನಟ ಲಿಯಾಂ ನೀಸನ್‌
ಅತ್ಯುತ್ತಮ ಪೋಷಕ ನಟ [[ರಾಲ್ಫ್‌ ಫಿಯೆನ್ನೆಸ್‌

]]

ಅತ್ಯುತ್ತಮ ಪೋಷಾಕು ವಿನ್ಯಾಸ ಅನ್ನಾ ಬಿಯೆಡ್ರ್ಜಿಕ್ಕಾ ಷೆಪ್ಪರ್ಡ್‌
ಅತ್ಯುತ್ತಮ ಧ್ವನಿ ಆಂಡಿ ನೆಲ್ಸನ್‌
ಸ್ಟೀವ್‌ ಪೆಡರ್‌ಸನ್‌
ಸ್ಕಾಟ್‌ ಮಿಲ್ಲನ್‌
ರಾನ್‌ ಜಡ್ಕಿನ್ಸ್‌
ಅತ್ಯುತ್ತಮ ಮೇಕಪ್‌ ಕ್ರಿಸ್ಟಿನಾ ಸ್ಮಿತ್‌
ಮ್ಯಾಥ್ಯೂ ಮುಂಗಲ್‌
ಜೂಡಿ ಅಲೆಕ್ಸಾಂಡರ್‌ ಕಾರಿ

ಅಮೇರಿಕನ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಮನ್ನಣೆ ಪಡೆದವು:

ವಿವಾದಗಳು[ಬದಲಾಯಿಸಿ]

ಝೆಕ್‌ ಚಿತ್ರನಿರ್ಮಾಪಕ ಜುರಾಜ್‌ ಹರ್ಜ್‌ರು, ಮಹಿಳೆಯರು ಜಲಸಿಂಪಡಕವನ್ನು ಅನಿಲ ಕಕ್ಷೆಯೆಂದು ಗೊಂದಲಗೊಳ್ಳುವ ದೃಶ್ಯದ ಪ್ರತಿ ಫಲಕವನ್ನೂ ತಮ್ಮ ಝಸ್ತಿಹ್ಲಾ ಮಿ ನಾಕ್‌ (1986) ಎಂಬ ಚಿತ್ರದಿಂದ ನಕಲು ಮಾಡಲಾಗಿದೆ ಎಂದು ವಾದಿಸಿದ್ದಾರೆ. ಹರ್ಜ್‌ ತಾನು ಈ ಬಗ್ಗೆ ದಾವೆ ಹೂಡಬೇಕೆಂದಿದ್ದೆ, ಆದರೆ ಅದಕ್ಕೆ ಬೇಕಾದ ಹಣವನ್ನು ಹೊಂದಿಸಲಾಗದಿದ್ದುದರಿಂದ ಕೈಬಿಡಬೇಕಾಯಿತು ಎಂದು ಹೇಳಿದ್ದಾರೆ.[೩೪]

1997ರಲ್ಲಿ ಅಮೇರಿಕಾದಲ್ಲಿನ ಚಿತ್ರದ ಕಿರುತೆರೆ ಪ್ರದರ್ಶನದಲ್ಲಿ, ಸ್ಪೀಲ್‌ಬರ್ಗ್‌'ರ ಒತ್ತಾಯದ ಮೇರೆಗೆ ಸಂಪಾದನೆಯಿಲ್ಲದೇ ಹಾಗೂ ಲೈಂಗಿಕ ದೃಶ್ಯಗಳ ಎಲ್ಲಾ "ತುಯ್ತಗಳನ್ನು" ತೆಗೆದುಹಾಕಿ ಲಘುವಾಗಿ ಸಂಪಾದಿಸಿದ್ದರೂ ಬಹುಮಟ್ಟಿಗೆ ಪರಾಮರ್ಶನೆಯಿಲ್ಲದೆ ಪ್ರಸಾರ ಮಾಡಲಾಗಿತ್ತು. ಸ್ಪೀಲ್‌ಬರ್ಗ್‌ರು ತಾವೇ ಸ್ವತಃ ನೀಡಿದ ಬಹುಮಟ್ಟಿಗೆ ಅಸಂಪಾದಿತವಾಗಿ ಚಿತ್ರವನ್ನು ಏಕೆ ಪ್ರಸಾರ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿರುವ ಮೊದಲೇ ಮುದ್ರಿಸಿದ ಪೀಠಿಕೆಯನ್ನು ಚಿತ್ರಕ್ಕೆ ಮುನ್ನ ಪ್ರಸಾರ ಮಾಡಲಾಗಿತ್ತು. ಅದೇ ವರ್ಷದ ಆರಂಭದಲ್ಲಿ ಸ್ಥಾಪಿತವಾದ TV ಪೋಷಕ ಮಾರ್ಗದರ್ಶಿ ಸೂತ್ರಗಳ ಅಂಗವಾಗಿ TV-M ಶ್ರೇಯಾಂಕವನ್ನು (ಈಗ TV-MA) ಮೊತ್ತಮೊದಲಿಗೆ ಪಡೆದ ಕಾರ್ಯಕ್ರಮವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಆಗಿನ ಓಕ್ಲಾಹಾಮ ಶಾಸನಸಭೆ ಸದಸ್ಯರಾಗಿದ್ದ ಸೆನೆಟ್‌ ಸದಸ್ಯ ಟಾಂ ಕಾಬರ್ನ್‌ರು NBCಯು, ಚಿತ್ರವನ್ನು ಪ್ರಸಾರ ಮಾಡುವ ಮೂಲಕ ಕಿರುತೆರೆಯನ್ನು "ಸಾರ್ವಕಾಲಿಕ ಹೀನತೆ, ಮುಂಭಾಗದ ಪೂರ್ಣ ನಗ್ನತೆ, ಹಿಂಸೆ ಹಾಗೂ ಧರ್ಮನಿಂದೆಗಳೊಂದಿಗೆ ಕೀಳುಮಟ್ಟಕ್ಕಿಳಿಸಿದೆ" ಎಂದರಲ್ಲದೇ ಚಿತ್ರದ ಪ್ರಸಾರವು "ಎಲ್ಲೆಡೆಯ ಸಭ್ಯ-ಮನಸ್ಥಿತಿಯ ವ್ಯಕ್ತಿಗಳಿಗೆ ಅವಮಾನ ಮಾಡಿದಂತೆ " ಎಂದೂ ಹೇಳಿದರು.[೩೫] ರಿಪಬ್ಲಿಕನ್‌ ಹಾಗೂ ಡೆಮೋಕ್ರಾಟ್‌ ಸಹೋದ್ಯೋಗಿಗಳಿಂದ ಟೀಕೆಗೊಳಗಾದ ನಂತರ : "ನನ್ನ ಉದ್ದೇಶಗಳು ಒಳ್ಳೆಯದಿದ್ದವು, ಆದರೆ ನಾನು ಹೇಳಬೇಕೆಂದಿದ್ದನ್ನು ಹೇಗೆ ಹೇಳಬೇಕಿತ್ತು ಎಂಬುದರಲ್ಲಿ ತಪ್ಪು ಮಾಡಿದೆ" ಎಂದು ಹೇಳಿ ಕೋಬರ್ನ್‌ ತನ್ನ ಟೀಕೆಗಳಿಗೆ ಕ್ಷಮೆ ಕೇಳಿದರು. ಆತ ತಾನು ಚಿತ್ರವನ್ನು ಪ್ರಸಾರ ಮಾಡಿದುದರ ಬಗ್ಗೆ ತನ್ನ ಅಭಿಪ್ರಾಯವನ್ನು ತಿರುಚುತ್ತಿಲ್ಲವೆಂದು, ಆದರೆ ಚಿತ್ರವು ರಾತ್ರಿಯಲ್ಲಿ "ಹೆಚ್ಚಿನ ಸಂಖ್ಯೆಯ ಮಕ್ಕಳು ಪೋಷಕರ ಮೇಲ್ವಿಚಾರಣೆಯಿಲ್ಲದೆ ಕಿರುತೆರೆಯನ್ನು ವೀಕ್ಷಿಸುವ" ಸಮಯದ ಬದಲಿಗೆ ತಡರಾತ್ರಿಯಲ್ಲಿ ಪ್ರಸಾರ ಮಾಡಲರ್ಹವಾಗಿತ್ತು ಎಂದಿದ್ದಾರೆ.[೩೬] ಚಿತ್ರವನ್ನು ಒಂದು ವರ್ಷದ ತರುವಾಯ ಆಯ್ದ PBS ಕೇಂದ್ರಗಳ ಮೂಲಕ ಮರುಪ್ರಸಾರವಾಯಿತು, ಮತ್ತೊಮ್ಮೆ ಅಸಂಪಾದಿತವಾದರೂ ಸ್ಪೀಲ್‌ಬರ್ಗ್‌'ರ ಪೀಠಿಕೆಯಿಲ್ಲದೇ ಪ್ರಸಾರವಾಯಿತು.

ಜರ್ಮನಿಯಲ್ಲಿ ಪ್ರೊ 7 ವಾಹಿನಿಯಲ್ಲಿ ಚಿತ್ರದ ಕಿರುತೆರೆ ಪ್ರದರ್ಶನವನ್ನು ಮಾಡಿದಾಗ ವಿವಾದಗಳೆದ್ದವು. ಎರಡು ವಾಣಿಜ್ಯ ವಿರಾಮಗಳ ನಂತರ ಕೇಂದ್ರವು ಚಿತ್ರವನ್ನು ಪ್ರಸಾರ ಮಾಡಿದ ನಂತರ ಭಾರೀ ಪ್ರತಿಭಟನೆಗಳು ನಡೆದವು. ರಾಜಿಯ ಫಲವಾಗಿ ಪ್ರಸಾರವು ಅಂತಿಮವಾಗಿ ಸಣ್ಣ ಸುದ್ದಿ ಪ್ರಸಾರ ಹಾಗೂ ಆಯ್ದ (ಆಲ್ಕೊಹಾಲ್‌ ಹಾಗೂ ನೈರ್ಮಲ್ಯ ಉತ್ಪನ್ನಗಳನ್ನು ಹೊರತುಪಡಿಸಿ) ಜಾಹಿರಾತುಗಳನ್ನು ಹೊಂದಿದ್ದ ಒಂದು ವಿರಾಮದ ನಂತರ ಪ್ರಸಾರವಾಯಿತು.[೩೭] ಆಗಿನಿಂದ, ತರುವಾಯದ ಜರ್ಮನ್‌ ಕಿರುತೆರೆಯಲ್ಲಿನ ಮರುಪ್ರಸಾರಗಳು ಜಾಹಿರಾತುಗಳಿಲ್ಲದೇ ಪ್ರಸಾರವಾಗುತ್ತಿವೆ.

ಆಕರಗಳು[ಬದಲಾಯಿಸಿ]

 1. http://www.boxofficemojo.com/movies/?id=schindlerslist.htm
 2. ೨.೦ ೨.೧ ೨.೨ ೨.೩ ೨.೪ ೨.೫ McBride, Joseph (1997). Steven Spielberg. Faber and Faber. pp. 424–27. ISBN 0-571-19177-0.
 3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ "Making History". Entertainment Weekly. 1994-01-21. Archived from the original on 2014-10-30. Retrieved 2007-08-08.
 4. ೪.೦ ೪.೧ McBride, Joseph (1997). Steven Spielberg. Faber and Faber. pp. 414–16. ISBN 0-571-19177-0.
 5. ೫.೦ ೫.೧ Face to Face. BBC Two. 1994-01-31.
 6. ೬.೦ ೬.೧ ೬.೨ ೬.೩ ೬.೪ Susan Royal. "An Interview with Steven Spielberg". Inside Film Magazine Online. Retrieved 2008-10-29.
 7. "OSKAR WINNER". Entertainment Weekly. 1994-01-21. Archived from the original on 2007-10-15. Retrieved 2007-08-08.
 8. ೮.೦ ೮.೧ ೮.೨ ೮.೩ ೮.೪ ೮.೫ ೮.೬ McBride, Joseph (1997). Steven Spielberg. Faber and Faber. pp. 429–33. ISBN 0-571-19177-0.
 9. ೯.೦ ೯.೧ Richard Corliss (1994-02-21). "The Man Behind the Monster". TIME. Archived from the original on 2007-11-01. Retrieved 2007-08-08.
 10. ೧೦.೦ ೧೦.೧ ೧೦.೨ David Ansen (20 December 1993). "Spielberg's obsession". Vol. 122, no. 25. Newsweek. pp. 112–16. {{cite news}}: Unknown parameter |coauthors= ignored (|author= suggested) (help)
 11. Steven Spielberg (2006-11-04). The Culture Show (TV). BBC2.
 12. ಷಿಂಡ್ಲರ್‌'ನ ಪಟ್ಟಿ - DVD ಅಳವಡಿಕೆ
 13. ೧೩.೦ ೧೩.೧ "Behind The Scenes: Production Notes". Official site. Archived from the original on 2010-06-07. Retrieved 2007-08-08.
 14. Susan Goldman Rubin (2001). Steven Spielberg. Harry N. Abrams, Inc. pp. 73–74. ISBN 0-8109-4492-8.
 15. ದ ರೆಡ್‌ ಕೋಟ್‌ ಗರ್ಲ್‌ , ವೀಕ್ಷಿಸಿದ್ದು 15 ಮೇ 2009
 16. Andy Patrizio (2004-03-10). "Schindler's List". IGN. Archived from the original on 2012-06-27. Retrieved 2007-08-09.
 17. Andre Caron. "Spielberg's Fiery Lights". Senses of Cinema. Retrieved 2007-08-09.
 18. David Anker (director), Steven Spielberg (2005-04-05). Imaginary Witness: Hollywood and the Holocaust (TV). AMC. {{cite AV media}}: |format= requires |url= (help)
 19. ೧೯.೦ ೧೯.೧ ೧೯.೨ ೧೯.೩ ೧೯.೪ ೧೯.೫ Freer, Ian (2001). The Complete Steven Spielberg. Virgin Books. pp. 220–237. ISBN 0-7535-0556-8.
 20. "Schindler's List (1993) - Laserdisc details". Internet Movie Database. Archived from the original on 2009-02-02. Retrieved 2009-01-16.
 21. "Schindler's List - Collector's Gift Set DVD". Film Freak Central. Archived from the original on 2009-01-29. Retrieved 2009-01-16.
 22. "Schindler's List (1993)". Amazon.com. Retrieved 2009-01-16.
 23. "Schindler's List - Awards and Nominations". Yahoo! Movies. Archived from the original on 2007-07-10. Retrieved 2007-08-08.
 24. ೨೪.೦ ೨೪.೧ ಜಾನ್‌ ಗ್ರಾಸ್‌, “ಹಾಲಿವುಡ್‌ ಅಂಡ್‌ ದ ಹೋಲೋಕಾಸ್ಟ್‌", ದ ನ್ಯೂಯಾರ್ಕ್‌ ರಿವ್ಯೂ ಆಫ್‌ ಬುಕ್ಸ್ , Feb. 3, 1994 [೧]
 25. ರಾಬರ್ಟ್‌ ಫಿಲಿಪ್‌ ಕಾಲ್ಕರ್‌. ಎ ಸಿನೆಮಾ ಆಫ್‌ ಲೋನ್ಲಿನೆಸ್‌ : ಪೆನ್ನ್‌‌, ಸ್ಟೋನ್‌, ಕುಬ್ರಿಕ್‌, ಸ್ಕಾರ್ಸೆಸೆ, ಸ್ಪೀಲ್‌ಬರ್ಗ್‌, ಅಲ್ಟ್‌ಮನ್‌. ಮೂರನೇ ಆವೃತ್ತಿ. p. 320.
 26. Terry Gilliam. "Terry Gilliam criticizes Spielberg and Schindler's List".
 27. "Holocaust Reflections". Archived from the original on 2013-08-07. Retrieved 2010-03-22.
 28. "National Film Registry, List of Films 2004". National Film Registry. Retrieved 2007-10-28.
 29. "The Vatican Film List — Ten Years Later". Decent Films. Retrieved 2007-10-28.
 30. Cinema.de 100 Magische Filmmomente: Die besten Filme aller Zeiten
 31. "100 Greatest Films". Channel 4. 2008-04-08. Retrieved 2008-04-08.
 32. "100 Greatest War Films". Channel 4. Retrieved 2008-04-08.
 33. Hoberman, J (October 26, 2004). "Still a Contender". The Village Voice. Archived from the original on ಜನವರಿ 12, 2015. Retrieved February 21, 2009. {{cite news}}: Cite has empty unknown parameter: |coauthors= (help)
 34. Ivana Kosulicova (2002-01-07). "Drowning the bad times". Kinoeye. Retrieved 2007-08-08.
 35. Reason. "The Minority Leader". Reason. Archived from the original on 2007-08-15. Retrieved 2007-08-08.
 36. Associated Press (1997-02-26). "After rebuke, congressman apologizes for 'Schindler's List' remarks". CNN. Archived from the original on 2007-10-11. Retrieved 2007-08-08.
 37. "Article, Feb. 21, 1997 (German)". Berliner Zeitung. 1997-02-21. Retrieved 2010-01-21.

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಶಿಂಡ್ಲರ್ಸ್ ಲಿಸ್ಟ್ (ಸಿನೆಮಾ)]]
Awards
ಪೂರ್ವಾಧಿಕಾರಿ
Unforgiven
Academy Award for Best Picture
1993
ಉತ್ತರಾಧಿಕಾರಿ
Forrest Gump
ಪೂರ್ವಾಧಿಕಾರಿ
Scent of a Woman
Golden Globe for Best Picture - Drama
1993
ಪೂರ್ವಾಧಿಕಾರಿ
Howards End
BAFTA Award for Best Film
1993
ಉತ್ತರಾಧಿಕಾರಿ
Four Weddings and a Funeral