ಜನಮತಗಣನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನಮತಗಣನೆ - ಯಾವುದಾದರೂ ಒಂದು ನಿರ್ದಿಷ್ಟ ಪ್ರಶ್ನೆಯ ಮೇಲೆ (ಉದಾ: ಸಾರ್ವಭೌಮಾಧಿಕಾರದ ಅಥವಾ ಒಂದು ಪ್ರದೇಶದ ವರ್ಗಾವಣೆ) ಒಂದು ದೇಶ ಅಥವಾ ಪ್ರದೇಶದಲ್ಲಿಯ ಎಲ್ಲ ಮತದಾರರ ಮತಗಣನೆ (ಪ್ಲೆಬಿಸೈಟ್ ಅಥವಾ ರೆಫರೆಂಡಂ).

ಭಾರತದಲ್ಲಿ[ಬದಲಾಯಿಸಿ]

ಕಾಶ್ಮೀರಕ್ಕೆ ಸಂಬಂಧಪಟ್ಟಂತೆ[ಬದಲಾಯಿಸಿ]

ಬ್ರಿಟಿಷರು ಅಖಂಡ ಭಾರತವನ್ನು ವಿಭಜಿಸಿ ಅದಕ್ಕೆ ಸ್ವಾತಂತ್ರ್ಯ ನೀಡಿ ಅಲ್ಲಿಂದ ಕಾಲ್ತೆಗೆದದ್ದರಿಂದ ಸ್ವತಂತ್ರವಾದ ದೇಶೀಯ ಸಂಸ್ಥಾನಗಳಲ್ಲೊಂದಾದ ಜಮ್ಮು ಮತ್ತು ಕಾಶ್ಮೀರ ಸಂಸ್ಥಾನ ಪಾಕಿಸ್ಥಾನದ ಆಕ್ರಮಣಕ್ಕೆ ಒಳಗಾದಾಗ ಅಲ್ಲಿಯ ದೊರೆ ತನ್ನ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿ, ಆಕ್ರಮಣವನ್ನು ತೆರವು ಮಾಡಲು ಭಾರತದ ನೆರವನ್ನು ಪ್ರಾರ್ಥಿಸಿದಾಗ, ಸಂಸ್ಥಾನದಲ್ಲಿ ನೆಮ್ಮದಿಯ ವಾತಾವರಣ ನೆಲಸಿದ ಮೇಲೆ ಅದರ ಭವಿಷ್ಯವನ್ನು ಜನಮತ ಗಣನೆಯಿಂದ ನಿರ್ಧರಿಸುವುದಾಗಿ ಭಾರತ ಸರ್ಕಾರ ಹೇಳಿತ್ತು. ಆಕ್ರಮಿತ ಪ್ರದೇಶದಿಂದ ಪಾಕಿಸ್ಥಾನ ಆಕ್ರಮಣವನ್ನು ತೆರವು ಮಾಡಲಿಲ್ಲವಾದ್ದರಿಂದ ಇದು ಆಗಲಿಲ್ಲ. ಆದರೆ ಆನಂತರ ನಡೆದ ಚುನಾವಣೆಗಳಲ್ಲಿ ಅಲ್ಲಿಯ ಜನಮತ ಸುವ್ಯಕ್ತವಾಗಿದೆ. ಭಾರತಕ್ಕೆ ಕಾಶ್ಮೀರದ ಸೇರ್ಪಡೆ ವಿಧಿಬದ್ಧವಾಗಿ ಆಗಿದೆ. ಅದು ಭಾರತದ ಅವಿಭಾಜ್ಯ ಭಾಗ.

ಬಾರತದಲ್ಲಿ ಸಂಸ್ಥಾನಗಳ ವಿಲೀನ ಸಂದರ್ಭದಲ್ಲಿ[ಬದಲಾಯಿಸಿ]

ಗುಜರಾತ್ ನ ಪಶ್ಚಿಮಕ್ಕೆ ಬರುವ ಜುನಾಗಢವು ಸೌರಾಷ್ಟ್ರದ ಒಂದು ಪುಟ್ಟ ಸಂಸ್ಥಾನವಾಗಿತ್ತು. ಜುನಾಗಢದಲ್ಲಿ %೯೦ ರಷ್ಟು ಮಂದಿ ಜನ ಭಾರತದ ಒಕ್ಕೂಟಕ್ಕೆ ವಿಲೀನ ಪರ ಮತಹಾಕಿದರು. ಜುನಾಗಢ ಜೂನ್೨೫, ೧೯೪೯ ರಂದು ಭಾರತ ಒಕ್ಕೂಟವನ್ನು ಸೇರಿಕೊಂಡಿತು. ( ನೋಡಿ ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ)

ವಿಶ್ವದ ಇತಿಹಾಸದಲ್ಲಿ[ಬದಲಾಯಿಸಿ]

ಜನಮತಗಣನೆಯ ಅನೇಕ ನಿದರ್ಶನಗಳು ವಿಶ್ವದ ಇತಿಹಾಸದಲ್ಲಿ ದೊರಕುತ್ತವೆ. 1851ರಲ್ಲಿ ಕ್ಷಿಪ್ರಕ್ರಾಂತಿಯಿಂದ ಫ್ರಾನ್ಸಿನ ಸರ್ವಾಧಿಕಾರಿಯಾದ 3ನೆಯ ನೆಪೋಲಿಯನ್ ಮರುವರ್ಷ ಜನಮತಗಣನೆ ಏರ್ಪಡಿಸಿ ತನ್ನ ಅಧಿಕಾರ ಗ್ರಹಣವನ್ನು ಸ್ಥಿರಪಡಿಸಿಕೊಂಡು ಚಕ್ರವರ್ತಿ ಪದವಿ ಪಡೆದ. ಒಂದು ಜನಾಂಗದ ಪ್ರದೇಶದ ಭವಿಷ್ಯವನ್ನು ನಿರ್ಧರಿಸುವ ಸಾಧನವಾಗಿ ಇದನ್ನು ಪ್ರಪ್ರಥಮವಾಗಿ ಅನುಸರಿಸಲಾದ್ದು ಫ್ರಾನ್ಸಿನ ಕ್ರಾಂತಿಯ ಕಾಲದಲ್ಲಿ. ಈ ಕ್ರಾಂತಿಯಲ್ಲಿ ಫ್ರೆಂಚ್ ಗಣರಾಜ್ಯ ಗೆದ್ದ ಪ್ರದೇಶಗಳನ್ನು ಕಾನೂನುಬದ್ಧಗೊಳಿಸಲು ಜನಮತಗಣನೆ ಏರ್ಪಡಿಸಲಾಯಿತು. ಅನಂತರ 1ನೆಯ ನೆಪೋಲಿಯನನೂ ಈ ವಿಧಾನ ಅನುಸರಿಸಿದ. ಮೂರನೆಯ ನೆಪೋಲಿಯನ್ ಕೂಡ ಈ ಉದ್ದೇಶದಿಂದಲೂ ಜನಮತಗಣನೆ ಏರ್ಪಡಿಸಿದ್ದ (1852-60). ನೀಸ್ ಮತ್ತು ಸವಾಯಿ ಪ್ರದೇಶಗಳಲ್ಲಿ ನಡೆಸಿದ ಜನಮತಗಣನೆಯಲ್ಲಿ ನೆಪೋಲಿಯನನಿಗೆ ಅನುಕೂಲವಾದ ಫಲಿತಾಂಶ ಪ್ರಾಪ್ತವಾಯಿತು.

ಉತ್ತರ ಇಟಲಿಯ ಡಚಿ ಪ್ರದೇಶಗಳ ಭವಿಷ್ಯದ ಬಗ್ಗೆ ನಡೆಸಿದ ಜನಮತಗಣನೆ ವಿಕ್ಟರ್ ಇಮ್ಯಾನ್ಯುಯೆಲ್ ಪರವಾಗಿ ಪರಿಣಮಿಸಿತು. ಈ ಜನಮತಗಣನೆ ಆದದ್ದು 1859-60ರಲ್ಲಿ.

ಒಂದನೆಯ ಮಹಾಯುದ್ಧಾನಂತರ ಸೇರಿದ ಶಾಂತಿಸಮ್ಮೇಳನ, ಕ್ಲಿಷ್ಟವಾದ ಸಮಸ್ಯೆಗಳ ಪರಿಹಾರಕ್ಕಾಗಿ 17 ಜನಮತಗಣನೆಗಳನ್ನು ಸಲಹೆ ಮಾಡಿತು. ಅವುಗಳನ್ನು 8 ಮಾತ್ರ ನಡೆದವು. ಜರ್ಮನಿ, ಫ್ರಾನ್ಸ್‍ಗಳ ನಡುವಣ ಕಲಹಕ್ಕೆ ಒಂದು ಕಾರಣವಾದ ಸಾರ್ ಪ್ರದೇಶವೂ ಹಲವು ಬಾರಿ ಜನಮತಗಣನೆಗಳಿಗೆ ಒಳಪಟ್ಟಿದೆ. 1920ರಲ್ಲಿ ನಡೆಸಿದ ರಾಷ್ಟ್ರಗಳ ಕೂಟದ ಆಡಳಿತದಲ್ಲಿದ್ದ ಸಾರ್ ಪ್ರದೇಶವನ್ನು 1935ರಲ್ಲಿ ನಡೆಸಿದ ಜನಮತಗಣನೆಯ ಫಲವಾಗಿ ಜರ್ಮನಿಗೆ ಹಿಂದಿರುಗಿಸಲಾಯಿತು. 1947ರಲ್ಲಿ ಏರ್ಪಡಿಸಿದ್ದ ಗಣನೆ ಫ್ರಾನ್ಸಿಗೆ ಅನುಕೂಲವಾಗಿತ್ತು. ಆ ಪ್ರದೇಶವನ್ನು ಐರೋಪ್ಯೀಕರಿಸಬೇಕೆಂಬ ಸಲಹೆಯನ್ನು 1955ರಲ್ಲಿ ನಡೆದ ಜನಮತಗಣನೆ ತಳ್ಳಿಹಾಕಿತು. 1956ರಲ್ಲಿ ಆದ ಫ್ರೆಂಚ್-ಜರ್ಮನ್ ಒಪ್ಪಂದದ ಪ್ರಕಾರ ಅದು 1957ರಲ್ಲಿ ಜರ್ಮನಿಯಲ್ಲಿ ಸೇರಿತು.