ಶಾಂತಲಾ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತಲಾ ದೇವಿ

ರಾಣಿ ಶಾಂತಲಾ ದೇವಿ ಹೊಯ್ಸಳ ಸಾಮ್ರಾಜ್ಯದ ಪ್ರಖ್ಯಾತ ಸಾಮ್ರಾಟ ವಿಷ್ಣುವರ್ಧನನ ಪತ್ನಿ. ಈಕೆ ನಾಟ್ಯರಾಣಿ ಶಾಂತಲೆ ಎಂದು ಪ್ರಸಿದ್ಧಿ ಪಡೆದಿದ್ದಾಳೆ. ಇವಳ ಜನ್ಮ ಸ್ಥಳ ಬಳ್ಳಿಗಾವೆ. ಈ ಸ್ಥಳ ಇಂದಿನ ದಿನದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಇವಳು ಸಂಗೀತ, ನರ್ತನ, ವಾದನಗಳಂತಹ ಲಲಿತ ಕಲೆಗಳಲ್ಲಿ ನಿಪುಣೆಯಾಗಿದ್ದಳು. ಹಾಗೂ ಜೈನ ಧರ್ಮವನ್ನು ಪರಿಪಾಲಿಸುತ್ತಿದ್ದಳು.[೧] ಶಾಂತಲಾ ದೇವಿಯು ಸೌಂದರ್ಯವತಿಯಾಗಿದ್ದು, ಇವಳ ಸೌಂದರ್ಯವನ್ನು ಹಲವಾರು ಕವಿಗಳು ವರ್ಣಿಸಿದ್ದಾರೆ. ಕೆಲವು ಕವಿಗಳು ಬೃಹಸ್ಪತಿ ಹಾಗೂ ವಾಚಸ್ಪತಿ ಎಂದು ಹೇಳುವ ಮೂಲಕ ಅವಳ ಜಾಣ್ಮೆ, ಸಂಗೀತ, ನೃತ್ಯಗಳನ್ನು ಹೊಗಳಿದ್ದಾರೆ.

ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಶಾಂತಲೆಯ ತಂದೆ ಮಾರಸಿಂಗಮಯ್ಯ. ಇವರು ಶಿವಗಂಗೆ ನಾಡಿನ ಡಣಾಯಕರಾಗಿದ್ದರು. ಅವಳ ತಾಯಿ ಮಾಚಿಕಬ್ಬೆ. ಇವರಿಗೆ ವಿವಾಹವಾಗಿ ಬಹಳ ದಿನವಾದರೂ ಮಕ್ಕಳಾಗದಿದ್ದ ಕಾರಣ ದೇವರಿಗೆ ಹರಕೆ ಹೊತ್ತು, ಕಾಣಿಕೆ ತೆತ್ತು, ಭಕ್ತಿಯಿಂದ ಪ್ರಾರ್ಥಿಸಿ ಈ ಹೆಣ್ಣು ಮಗುವನ್ನು ವರವಾಗಿ ಪಡೆದರು. ಈಕೆ ಶಿವ ಪಾರ್ವತಿಯರ ಅನುಗ್ರಹವನ್ನು ಪಡೆದು ಜನಿಸಿದಳು ಎಂದು ಹೇಳಬಹುದು. ಇವಳಿಗೆ ಲಕ್ಷ್ಮಿ ಹೆಸರಿನ ತಂಗಿ ಇದ್ದಳು. ಆದರೆ ಇವಳು ಡಣಾಯಕ ಮಾರಸಿಂಗಮಯ್ಯ ಹಾಗೂ ಮಾಚಿಕಬ್ಬೆಯರ ದತ್ತು ಪುತ್ರಿ. ಇಬ್ಬರನ್ನೂ ಸ್ವತಂತ್ರವಾದ ಮತ್ತು ಸುಜ್ಞಾನಕರ ವಾತಾವರಣದಲ್ಲಿ ಬೆಳೆಸಿದರು. ಶಾಂತಲೆಯ ವಿದ್ಯಾಭ್ಯಾಸ ಬಳ್ಳಿಗಾವೆಯಲ್ಲಿ ನಡೆಯಿತು. ವೇದ, ಆಗಮ, ಉಪನಿಷತ್ತು, ವ್ಯಾಕರಣ, ಛಂದಸ್ಸು, ಯುದ್ಧಕಲೆ, ಚಿತ್ರಕಲೆ, ಶಿಲ್ಪಕಲೆ, ನೃತ್ಯ, ಸಂಗೀತ ಮೊದಲಾದ ವಿದ್ಯೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದಳು.

ವೈವಾಹಿಕ ಜೀವನ[ಬದಲಾಯಿಸಿ]

ರಾಜ ವಿಷ್ಣುವರ್ಧನನು ಮೊದಲ ಬಾರಿಗೆ ಶಿವಗಂಗೆ ನಗರದೇವತೆಯ ದೇವಾಲಯದಲ್ಲಿ ಶಾಂತಲಾ ದೇವಿಯ ನೃತ್ಯವನ್ನು ನೋಡಿ, ಆಕೆಯನ್ನು ಮನಸಾರೆ ಮೆಚ್ಚಿ, ಅವಳನ್ನು ವಿವಾಹವಾಗಲು ಇಚ್ಛಿಸಿದನು. ಆದರೆ ಶಾಂತಲೆ ಜೈನ ಧರ್ಮದವಳಾಗಿದ್ದು, ವಿಷ್ಣುವರ್ಧನನು ವೈಷ್ಣವ ಧರ್ಮದವನಾಗಿದ್ದರಿಂದ, ಅವಳು ಅವನನ್ನು ಮದುವೆಯಾಗಲು ಮೊದಲಿಗೆ ನಿರಾಕರಿಸಿದಳು.[೨] ನಂತರ ಶಾಂತಲೆಯನ್ನು ಸಮಾಧಾನ ಪಡಿಸಲು ವಿಷುವರ್ಧನನು ಶಾಂತಲೆ ಮತ್ತು ಆಕೆಯ ತಂಗಿಯಾದ ಲಕ್ಷ್ಮಿಯನ್ನೂ ವಿವಾಹವಾದನು. ಇವರಿಬ್ಬರ ಜೊತೆಗೆ ಜೈನ ಧರ್ಮದ ಇನ್ನೂ ೫ ಜನ ಕನ್ಯೆಯರನ್ನು ವರಿಸಿದನು. ರಾಜ ವಿಷ್ಣುವರ್ಧನನು ಆತನ ಆಳ್ವಿಕೆಯ ಕಾಲದಲ್ಲಿ ಬಲಶಾಲಿ ಮತ್ತು ವಿಖ್ಯಾತನಾಗಿದ್ದರಿಂದ, ಕನ್ಯಾಪಿತೃಗಳಾದ ಅನೇಕ ರಾಜರು ಹೊಯ್ಸಳ ಸಾಮ್ರಾಜ್ಯದೊಂದಿಗೆ ಬಾಂಧವ್ಯ ಬೆಳೆಸುವ ಮೂಲಕ ಸ್ನೇಹವನ್ನು ಯಾಚಿಸಲು ಬಯಸಿದರು. ರಾಜ್ಯದ ಒಳಿತಿನ ಕಾರಣಕ್ಕಾಗಿ ವಿಷ್ಣುವರ್ಧನ ಹಲವಾರು ರಾಜ್ಯಗಳ ರಾಜಕುಮಾರಿಯರನ್ನು ಲಗ್ನವಾದನು. ಶಾಂತಲೆಗೆ ಹೀಗೆ ಹಲವಾರು ಜನ ಸವತಿಯರಿದ್ದರೂ ಸಹ ಆಕೆ ಎಲ್ಲರೊಡನೆ ಹೊಂದಿಕೊಳ್ಳುತ್ತಿದ್ದಳು. ವಿವಾಹವಾದ ನಂತರ, ೧೧೧೭ ರಲ್ಲಿ ವಿಷ್ಣುವರ್ಧನ ಶಾಂತಲೆಯರ ಪಟ್ಟಾಭಿಷೇಕವಾಗಿ, ವಿಷ್ಣುವರ್ಧನ ರಾಜನಾಗಿದ್ದು, ಶಾಂತಲೆಗೆ ಪಟ್ಟದ ರಾಣಿಯ ಪದವಿ ದೊರೆಯಿತು. ಶಾಂತಲಾ ದೇವಿಗೆ ರಾಜಕೀಯ ವಿಚಾರದಲ್ಲೂ ತಿಳಿವಳಿಕೆ ಇದ್ದುದರಿಂದ, ರಾಜ್ಯಭಾರ ಮಾಡಲು ತನ್ನ ಪತಿಗೆ ಸಹಾಯಕಳಾಗಿದ್ದಳು.[೨] ರಾಜ ಸಭೆಯಲ್ಲಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತಿದ್ದಳು. ಈಕೆಯು ರಾಜ ವಿಷ್ಣುವರ್ಧನನ ಪಾಲಿಗೆ ವಿಜಯ, ಖ್ಯಾತಿ, ಸಂಪತ್ತುಗಳ ದೇವತೆಯಾಗಿದ್ದಳು.

ವಾಸ್ತುಶಿಲ್ಪ ಪರಂಪರೆ[ಬದಲಾಯಿಸಿ]

ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಶಿಲಾಬಾಲಿಕಾ ಶಿಲ್ಪಗಳು

ವಿಷ್ಣುವರ್ಧನ ಶಾಂತಲಾ ದೇವಿಯರ ಆಳ್ವಿಕೆಯ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದವು. ೧೧೧೭ರಲ್ಲಿ, ನೊಳಂಬವಾಡಿಯವರ ವಿರುದ್ಧ ನಡೆದ ಯುದ್ಧದಲ್ಲಿ ಹೊಯ್ಸಳರು ವಿಜಯ ಸಾಧಿಸಿದ ಸಂಕೇತವಾಗಿ ಬೇಲೂರಿನಲ್ಲಿ (ವೇಲಾಪುರಿ) ಚೆನ್ನಕೇಶವ ಮತ್ತು ವಿಜಯ ನಾರಾಯಣನ ದೇವಾಲಯ ನಿರ್ಮಿಸಲಾಯಿತು. ಇಲ್ಲಿನ ಹೊರಾಂಗಣವನ್ನು ಸ್ವತಃ ಶಾಂತಲೆಯೆ ಕಟ್ಟಿಸಿದ್ದಳು. ಶಾಂತಲೆ ನೃತ್ಯ ಮಾಡುತ್ತಿದ್ದ ಸ್ಥಳವನ್ನು ಇಂದು ಸಹ ಚೆನ್ನಕೇಶವನ ದೇವಾಲಯದಲ್ಲಿ ಕಾಣಬಹುದು. ಈ ದೇವಾಲಯದಲ್ಲಿ ಭರತನಾಟ್ಯದ ವಿವಿಧ ಭಂಗಿಗಳಲ್ಲಿ ಕೆತ್ತಲಾಗಿರುವ ಶಿಲಾಬಾಲಿಕೆಯರೆಲ್ಲಾ ಶಾಂತಲಾ ದೇವಿಯ ಸ್ವರೂಪವೇ ಆಗಿ ಅವಳ ಸೌಂದರ್ಯವನ್ನು ಪ್ರತಿಬಿಂಬಿಸುವ ಸಂಕೇತವಾಗಿವೆ. ವಿಷ್ಣುವರ್ಧನ ಶಾಂತಲೆಯ ರೂಪದಿಂದ ಪ್ರಭಾವಿತನಾಗಿ ಇವುಗಳನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ.

ಹಳೇಬೀಡು ಅಥವಾ ಹೊಯ್ಸಳರ ರಾಜಧಾನಿಯಾಗಿದ್ದ ಅಂದಿನ ದ್ವಾರಸಮುದ್ರದಲ್ಲಿ ಸುಮಾರು ೧೧೨೧ ರಲ್ಲಿ ಶಿವನ ದೇವಾಲಯ ಕಟ್ಟಿಸಲಾಯಿತು. ಈ ದೇವಾಲಯಗಳು ಪೂರ್ಣಗೊಳ್ಳಲು ೧೦೩ ವರ್ಷಗಳನ್ನು ತೆಗೆದುಕೊಂಡವು.[೩] ಚೆನ್ನಕೇಶವ ದೇವಾಲಯದ ಮಾದರಿಯಲ್ಲಿ ಚನ್ನಿಗರಾಯ ದೇವಾಲಯ ಎಂಬ ದೇವಾಲಯವನ್ನು ಸ್ಥಾಪಿಸಿದ ಕೀರ್ತಿ ರಾಣಿ ಶಾಂತಲಾ ದೇವಿ ಅವರಿಗೆ ಸಲ್ಲುತ್ತದೆ. ಇವುಗಳಲ್ಲದೆ ಶ್ರವಣಬೆಳಗೊಳದಲ್ಲಿ ಶಾಂತಿನಾಥ ಬಸದಿ ಮತ್ತು ಸವತಿಗಂಧವಾರಣ ಬಸದಿಗಳನ್ನು ೧೧೨೩ ರಲ್ಲಿ ಸ್ಥಾಪಿಸಲಾಯಿತು. ಹಾಗೂ ಈ ಬಸದಿ ಮತ್ತು ಇತರ ದತ್ತಿಗಳನ್ನು ತನ್ನ ಗುರು ಪ್ರಭಾಚಂದ್ರನಿಗೆ ಅರ್ಪಿಸಿದಳು.[೩] ಇವಳು ಮೊಟ್ಟೆನವಿಲೆ ಗ್ರಾಮ ಎಂಬ ಗ್ರಾಮವನ್ನು ತಮ್ಮ ಗುರು ಪ್ರಭಾಚಂದ್ರಸಿದ್ದಾನಂದದೇವರಿಗೆ ಆಚರಣೆಗಳನ್ನು ನಡೆಸಲು ದಾನ ಮಾಡುತ್ತಾಳೆ ಎಂದು ತಿಳಿದುಬಂದಿದೆ. ವಿಷ್ಣುವರ್ಧನನು ಹೊಯ್ಸಳೇಶ್ವರ- ಶಾಂತಲೇಶ್ವರ ಎಂಬ ಅವಳಿ ದೇಗುಲಗಳನ್ನು ಶಾಂತಲಾ ದೇವಿಯ ಸ್ಮಾರಕವಾಗಿ ಹಳೇಬೀಡಿನಲ್ಲಿ ನಿರ್ಮಿಸಿದನು. ಅವಳ ಕಾಲದಲ್ಲಿ ಹೀಗೆ ಹಲವು ಜೈನ ಬಸದಿಗಳ ಸ್ಥಾಪನೆಯಾದ್ದರಿಂದ ಅವಳನ್ನು ಜೈನ ಧರ್ಮದ ರಕ್ಷಕಿ ಎಂದು ಗುರುತಿಸಲಾಗಿತ್ತದೆ.

ಬಿರುದುಗಳು[ಬದಲಾಯಿಸಿ]

ರಾಣಿ ಶಾಂತಲಾ ದೇವಿಯನ್ನು ೧೧೧೭ ರಲ್ಲಿ ಪಟ್ಟಮಹಾದೇವಿಯಾಗಿ ಕಿರೀಟಧಾರಣೆ ಮಾಡಲಾಯಿತು. ಅವಳು ಪರಿಪೂರ್ಣ ನಂಬಿಕೆಯ ಶಿಖರ ರತ್ನ, ಜೈನ ನಂಬಿಕೆಯ ಗೋಪುರ, ಯುದ್ಧದಲ್ಲಿ ವಿಜಯದ ದೇವತೆ ಮತ್ತು ಶಾಂತಿಯಲ್ಲಿ ಸಂಪತ್ತು ಮತ್ತು ಖ್ಯಾತಿಯ ದೇವತೆ ಮುಂತಾದ ಅನೇಕ ಬಿರುದುಗಳನ್ನು ಪಡೆದಿದ್ದಳು.[೧]

ಮರಣ[ಬದಲಾಯಿಸಿ]

ಶಾಂತಲೆಯ ವೈಯಕ್ತಿಕ ಜೀವನ ಕಷ್ಟಗಳಿಂದ ಮುಕ್ತವಾಗಿರಲಿಲ್ಲ. ಮದುವೆಯಾಗಿ ಹಲವು ವರ್ಷಗಳಾದರೂ ಶಾಂತಲೆ ವಿಷ್ಣುವರ್ಧನರಿಗೆ ಮಕ್ಕಳಿರಲಿಲ್ಲ. ಹಲವು ವರ್ಷಗಳ ಮೇಲೆ ಇವಳಿಗೊಂದು ಗಂಡು ಮಗು ಜನಿಸಿತು. ಆದರೆ ಕೆಲವೇ ದಿನಗಳಲ್ಲಿ ಅದು ತೀರಿಕೊಂಡಿತು. ಈ ಘಟನೆಯಲ್ಲದೆ ಇವಳ ತಾಯಿಯಾದ ಮಾಚಿಕಬ್ಬೆ ಸಹ ಮುತ್ತೈದೆಯಾಗಿಯೇ ಇಹಲೋಕವನ್ನು ತ್ಯಜಿಸಿದರು. ಪಟ್ಟದರಸಿಯಾದ ಶಾಂತಲೆಗೆ ಗಂಡು ಮಕ್ಕಳಿಲ್ಲದಿದ್ದ ಕಾರಣ, ಮುಂದೆ ಸಿಂಹಾಸನದ ವಿಷಯಕ್ಕೆ ಕಲಹಗಳಾಗಬಾರದು ಎಂಬ ಕಾರಣಕ್ಕೆ ಬೇರೊಬ್ಬ ರಾಣಿಗೆ ಪಟ್ಟಮಹಿಷಿಯ ಸ್ಥಾನವನ್ನು ನೀಡಬೇಕೆಂದು ರಾಜ ವಿಷ್ಣುವರ್ಧನನಲ್ಲಿ ಶಾಂತಲೆ ಹಲವಾರು ಬಾರಿ ಬೇಡಿದರೂ ಆತ ಅದಕ್ಕೆ ಒಪ್ಪಲಿಲ್ಲ. ಈ ಎಲ್ಲಾ ಕಾರಣಗಳಿಂದ ದುಃಖಿತಳಾಗಿ, ಜೀವನದಿಂದ ಬಿಡುಗಡೆ ಹೊಂದಲು ಶಾಂತಲೆಯು ಆತ್ಮಹತ್ಯೆ ಮಾಡಿಕೊಂಡಳು. ಶಾಂತಲೆಯ ಸಾವಿನ ಬಗ್ಗೆ ೨ ವೃತ್ತಾಂತಗಳು ಬೆಳಕಿಗೆ ಬಂದಿವೆ. ಮೊದಲನೆಯದಾಗಿ, ಶಿವಗಂಗೆ ಬೆಟ್ಟದ ಮೇಲಿನಿಂದ ಕೆಳಬಿದ್ದು ಪ್ರಾಣ ಬಿಟ್ಟಳು ಎಂದು ಹೇಳಲಾಗುತ್ತದೆ.[೪] ಎರಡನೆಯದಾಗಿ, ಜೈನ ಧರ್ಮದ ಸಲ್ಲೇಖನ ವ್ರತವನ್ನು ಸ್ವೀಕರಿಸಿ ೨೧ ದಿನಗಳ ನಿರಂತರ ಉಪವಾಸದ ನಂತರ ೧೧೩೧ ರ ವಿರೋಧಿಕೃತ ಸಂವತ್ಸರದಲ್ಲಿ ಶಾಂತಲೆಯ ಆತ್ಮಜ್ಯೋತಿ ನಂದಿಹೋಯಿತು ಎಂಬ ಕಥೆಯೂ ಇದೆ. ಈ ಎರಡರಲ್ಲಿ ಯಾವ ವೃತ್ತಾಂತ ಸತ್ಯ ಎಂಬುದು ತಿಳಿದಿಲ್ಲ. ಆದರೆ ಇಂದಿನವರೆಗೂ ಈಕೆ ಬೇಲೂರು ದೇವಾಲಯವನ್ನು ಕಾಯುವ ದೇವತೆ ಎಂಬ ನಂಬಿಕೆಯಿದೆ.

ಉಲ್ಲೆಖಗಳು[ಬದಲಾಯಿಸಿ]

  1. ೧.೦ ೧.೧ https://www.indianetzone.com/23/shantala_dev_hoysala_queen.htm
  2. ೨.೦ ೨.೧ https://shwetawrites.com/shantala-the-hoysala-queen/traveltales/
  3. ೩.೦ ೩.೧ http://www.streeshakti.com/bookS.aspx?author=18
  4. https://hanno.in/shantala-devi/