ವನ್ಯಜೀವಿ ಶಾಸ್ತ್ರದ ವಿಧಾನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತರ ವಿಜ್ಞಾನಗಳಂತೆಯೇ ವನ್ಯಜೀವಿ ಶಾಸ್ತ್ರವೂ ಮೂಲ ಸಿದ್ಧಾಂತ ಅನುಭವ ಮತ್ತು ತರ್ಕದ ಆಧಾರದಿಂದ ಎತ್ತಿದ ಪ್ರಶ್ನೆಗಳ ಸತ್ಯಾಸತ್ಯತೆಗಳನ್ನು ವನ್ಯಜೀವಿಗಳ ನಿಜ ಜೀವನದ ಮಾಹಿತಿಗಳ ಒರೆಗಲ್ಲಿಗೆ ಹಚ್ಚಿ, ತೇಯ್ದು ತಿಳಿಯುವ ಸತತ ಪ್ರಯತ್ನ ಮಾಡುತ್ತದೆ. ಇದಕ್ಕೆ  ಅನುಕೂಲವಾಗುವಂಥ ಅನೇಕ ವಿಧಿವಿಧಾನಗಳನ್ನು, ಮಾದರಿಗಳನ್ನು ಹಾಗೂ ವಿಶ್ಲೇಷಣೆಗಳನ್ನು ವನ್ಯಜೀವಿ ಶಾಸ್ತ್ರ ರೂಪಿಸಿಕೊಂಡಿದೆ. ಪ್ರಶ್ನೆ, ಮುನ್ನೋಟಗಳನ್ನು ಉತ್ತರಿಸಲು ಸೂಕ್ತ ಮಾದರಿ (ಮಾಡೆಲಿಂಗ್), ಕ್ಷೇತ್ರಕಾರ್ಯದ ಮೂಲಕ ನಿಖರ ಮಾಹಿತಿ ಸಂಗ್ರಹಣೆ (ಫೀಲ್ಡ್ ಡೇಟ ಕಲೆಕ್ಷನ್) ಹಾಗೂ ಕೊನೆಗೆ ನಡೆಸುವ ಮಾಹಿತಿ ವಿಶ್ಲೇಷಣೆ (ಅನಾಲಿಸಿಸ್) ಇವೆಲ್ಲಾ ವನ್ಯಜೀವಿ ಶಾಸ್ತ್ರದ ಕಾರ್ಯವಿಧಾನಗಳಲ್ಲಿ ಅಡಕವಾಗಿವೆ. ವನ್ಯಜೀವಿಗಳ ಬಗ್ಗೆ ಎತ್ತಿದ ಪ್ರಶ್ನೆ ಎಷ್ಟೇ ಮುಖ್ಯ ಅಥವಾ ಸೂಕ್ತವಾಗಿದ್ದರೂ ಉತ್ತರಿಸಲು ಬಳಸುವ ವಿಧಾನಗಳು ಅಸಮರ್ಪಕವಾದರೆ, ದೊರಕುವ ಉತ್ತರಗಳೂ ಅಸಂಬದ್ಧವಾಗಿರುವುದು ಖಚಿತ. ಭಾರತದ ಯಾವುದೇ ಅರಣ್ಯಾಧಿಕಾರಿಗಳೇ ರೂಪಿಸಿ, ನಲವತ್ತು ವರ್ಷ ವ್ಯಾಪಕವಾಗಿ ಬಳಕೆಯಾಗಿ, ಇತ್ತೀಚೆಗೆ ಅಸಮರ್ಪಕ ವಿಧಾನವೆಂದು ಮೂಲೆ ಸೇರಿದ ಹುಲಿಗಳ ಹೆಜ್ಜೆಗುರುತಿನ ಸಂಪೂರ್ಣ ಗಣತಿ (ಪಗ್‌ಮಾರ್ಕ್ ಸೆನ್ಸಸ್) ಹಾಗೂ ಅದರ ಫಲಿತಾಂಶಗಳು ಇದಕ್ಕೆ ಉತ್ತಮ ಉದಾಹರಣೆ.

ವನ್ಯಜೀವಿ ಶಾಸ್ತ್ರವು ಸಾಮಾನ್ಯವಾಗಿ ಎತ್ತುವ ಪ್ರಶ್ನೆಗಳು ಕಾಡು ಪ್ರಾಣಿಗಳ ಸಂಖ್ಯೆ, ವರ್ತನೆ, ಆಹಾರ, ನೆಲೆ, ಸಂಚಾರ ಇತ್ಯಾದಿಗಳ ಬಗ್ಗೆ ಮಾಹಿತಿ ಬೇಡುತ್ತವೆ. ಈ ಪ್ರಶ್ನೆಗಳು ಒಂದು ಜಾತಿಯ ಪ್ರಾಣಿಯ ಬಗ್ಗೆಯೋ ಅಥವಾ ಹಲಜಾತಿ ಪ್ರಾಣಿಗಳು ಕಲೆತ ಜೀವ ಸಂಕುಲಗಳ ಬಗೆಗೂ ಇರಬಹುದು. ಇವುಗಳಿಗೆ ಉತ್ತರ ಹುಡುಕುವ ಕ್ಷೇತ್ರಕಾರ್ಯದ ವ್ಯಾಪ್ತಿ ಒಂದು ಅಭಯಾರಣ್ಯದ ಅಥವಾ ಪ್ರದೇಶದ ಅಥವಾ ಪೂರ್ಣ ದೇಶದ ವ್ಯಾಪ್ತಿಗೂ ಏರಬಹುದು. ಇಂತಹ ಸಂಕೀರ್ಣತೆಗಳ ಕಾರಣ ವನ್ಯಜೀವಿ ಶಾಸ್ತ್ರದ ವಿಧಾನಗಳೂ ಅಷ್ಟೇ ವೈವಿಧ್ಯಮಯ, ಬಹುರೂಪಿ ಮತ್ತು ವ್ಯಾಪಕವಾದದ್ದು. ಈ ಲೇಖನದಲ್ಲಿ ಅವೆಲ್ಲ ವಿವರವಾಗಿ ಸೇರಲಾರವು. ವನ್ಯಜೀವಿ ಶಾಸ್ತ್ರದ ಕ್ಷೇತ್ರ ಕಾರ್ಯಕ್ಕೆ ಸಂಬಂಧಪಟ್ಟವು ಮತ್ತು ವಿಶ್ಲೇಷಣೆ (ಅನಾಲಿಸಿಸ್) ಗೆ ಸಂಬಂಧಪಟ್ಟವು ಎಂದು ಸ್ಥೂಲವಾಗಿ ವಿಂಗಡಿಸಬಹುದು.

ವನ್ಯಜೀವಿಗಳ ಬಗ್ಗೆ ಕಲೆಹಾಕುವ ಮಾಹಿತಿಗಳು ಯಾವ ತೆರನಾಗಿದ್ದರೂ ಅವುಗಳ ಸಂಗ್ರಹ ಕಾರ್ಯ ಸಂಖ್ಯಾಶಾಸ್ತ್ರದ 'ಸ್ಯಾಂಪ್ಲಿಂಗ್' ತಂತ್ರಗಳಿಗೆ ಅನುಗುಣವಾಗಿ ಇರುವುದು ಅನಿವಾರ್ಯ. ಆದುದರಿಂದ ವನ್ಯಜೀವಿ ಶಾಸ್ತ್ರದಲ್ಲಿ ಕೇವಲ ನೈಸರ್ಗಿಕ ಜೀವಶಾಸ್ತ್ರದ ಜ್ಞಾನದ ಜೊತೆಗೆ ಸಂಖ್ಯಾಶಾಸ್ತ್ರದ ಅಂಗಗಳಾದ ಸರ್ವೇ ಸ್ಯಾಂಪ್ಲಿಂಗ್, ಮಾದರಿ ನಿರೂಪಣೆ (ಮಾಡಲಿಂಗ್), ಅನುಬಂಧ (ಇನ್ಫರೆನ್ಸ್) ಇತ್ಯಾದಿಗಳನ್ನೂ ಕ್ಷೇತ್ರಕಾರ್ಯ ಹಾಗೂ ವಿಶ್ಲೇಷಣೆ ಎರಡರಲ್ಲೂ ವ್ಯಾಪಕವಾಗಿ, ಹಾಸುಹೊಕ್ಕಾಗಿ ಬಳಸುತ್ತಾರೆ. ಇದರಿಂದಾಗಿ, ವನ್ಯಜೀವಿ ಶಾಸ್ತ್ರವು ಹಳೆಯ ಮಾದರಿಯ ನಿಸರ್ಗ ಪ್ರೇಮಕ್ಕಿಂತ ತೀರಾ ಭಿನ್ನವಾದ ಸಂಖ್ಯಾಧಾರಿ ವಸ್ತುನಿಷ್ಠ ವಿಧಾನಗಳನ್ನು ರೂಢಿಸಿಕೊಂಡಿದೆ. ಈ ವಿಜ್ಞಾನದ ಬೆಳೆವಣಿಗೆಗೆ ಕಳೆದ ಕೆಲವು ದಶಕಗಳಲ್ಲಿ ಸಂಖ್ಯಾಶಾಸ್ತ್ರ, ತಂತ್ರಾಂಶ ಮತ್ತು ಗಣಕೀಕರಣ ಕ್ಷೇತ್ರಗಳಲ್ಲಿ ನಡೆದ ಪ್ರಗತಿ ಬಹಳಷ್ಟು ಸಹಕಾರಿಯಾಗಿದೆ. ವನ್ಯಜೀವಿ ವಿಜ್ಞಾನಿಯು ಇಂತಹ ಸಂಖ್ಯಾತ್ಮಕ ಶಾಸ್ತ್ರಗಳ ಮೇಲೆ ಪ್ರಭುತ್ವ ಸಾಧಿಸಿದರೆ ಸಾಲದು. ತನಗೆ ಅಗತ್ಯವಾದ ವನ್ಯಜೀವಿಗಳ ಬಗ್ಗೆ ತಿಳುವಳಿಕೆ ಪಡೆಯಲು ಮಾಹಿತಿ ಸಂಗ್ರಹಕ್ಕಾಗಿ ಕ್ಷೇತ್ರಕಾರ್ಯ ನಡೆಸಲೂ ಸೂಕ್ತ ವಿಧಾನಗಳನ್ನು ತಂತ್ರಜ್ಞಾನಗಳನ್ನು ಅವನು ಬಳಸಬೇಕು. ಇಂತಹ ನೂರಾರು ಕ್ಷೇತ್ರಕಾರ್ಯಗಳನ್ನು ಈ ಲೇಖನದ ವ್ಯಾಪ್ತಿಯೊಳಗೆ ವಿವರಿಸಿ ಹೇಳಲೂ ಅಸಾಧ್ಯ. ಇಲ್ಲಿ ಕೆಲ ಉದಾಹರಣೆಗಳನ್ನು ಚುಟುಕಾಗಿ ಹೇಳಬಹುದುಷ್ಟೇ.

ವನ್ಯಜೀವಿಗಳ ದಟ್ಟಣೆ (ಸಂಖ್ಯಾ ಸಾಂದ್ರತೆ) ಮತ್ತು ಸಂಖ್ಯೆಯ ಏರಿಳಿತಗಳನ್ನು ಅಳೆಯಲು ಸ್ಯಾಂಪ್ಲಿಂಗ್ ಆಧಾರಿತ ಗಣತಿ ಕ್ರಮಗಳನ್ನು ಬಳಸಬಹುದು. ಕಾಡಲ್ಲಿ ಕಾಣಸಿಕ್ಕು, ಗಣತಿ ಮಾಡುವಾಗ ಜತೆಗೇ ದೂರಮಾಪಕ ಬಳಸುವಂಥ ಪ್ರಾಣಿ ಜಾತಿಗಳಿಗೆ "ಡಿಸ್ಟೆನ್ಸ್ ಸ್ಯಾಂಪ್ಲಿಂಗ್" ವಿಧಾನವನ್ನೂ, ಸೆರೆ ಹಿಡಿದು ಗುರುತು (ರಿಂಗ್, ಬ್ಯಾಂಡ್) ತೊಡಿಸುವಂತಹ ಪ್ರಾಣಿ ಜಾತಿಗಳಿಗೆ ಕ್ಯಾಪ್ಚರ್ - ರೀಕ್ಯಾಪ್ಚರ್ ವಿಧಾನಗಳನ್ನು ಬಳಸಿ ಗಣತಿಮಾಡುವ ಸಾಧ್ಯತೆ ಇದೆ. ಪ್ರಾಣಿಗಳ ಅಳಿವು ಉಳಿವುಗಳ ಪ್ರಮಾಣ (ಸರ್ವೈವಲ್ ಮಾರ್ಟಾಲಿಟಿ ಸ್ಯಾಂಪ್ಲಿಂಗ್) ಅರಿಯಲು ಇಂತಹ ಸೆರೆಹಿಡಿದು, ಗುರುತಿಸಿ ಬಿಟ್ಟು ಮತ್ತೆ ಸೆರೆಹಿಡಿಯುವ ವಿಧಾನಗಳನ್ನು ಬಳಸಬಹುದು.

ಇನ್ನು ಪ್ರಾಣಿಗಳ ನೆಲೆ, ಕ್ಷೇತ್ರವಿಸ್ತಾರ, ಸಂಚಾರ, ವಲಸೆ ಇತ್ಯಾದಿಗಳ ಬಗ್ಗೆ ಅರಿಯಲು ಅವುಗಳಿಗೆ ರಿಂಗ್, ಬ್ಯಾಂಡ್ ತೊಡಿಸಿ, ಸದಾ ಹಿಂಬಾಲಿಸಿ ಅಧ್ಯಯನ ಮಾಡಬೇಕು. ಸುಲಭಕ್ಕೆ ಕಾಣದ ನಿಶಾಚರ ಪ್ರಾಣಿಗಳಿಗೆ ರೇಡಿಯೋ ಕಾಲರ್ ತೊಡಿಸಿ ಟ್ರಾಕಿಂಗ್ ಮೂಲಕ ಹಿಂಬಾಲಿಸಿ ಮಾಹಿತಿ ಪಡೆಯುತ್ತಾರೆ. ಈ ರೀತಿ ಪ್ರಾಣಿಗಳ ಮೆಲೆ ನಿಗಾ ಇಡಲು ಸಮಚಾರಕ್ಕೆ ಕಾಲ್ನಡೆ, ವಾಹನಗಳು, ವಿಮಾನಗಳು ಹಾಗೂ ಸ್ಯಾಟಲೈಟುಗಳನ್ನು ಬಳಸುವ ವಿಧಾನಗಳಿವೆ.

ಪ್ರಾಣಿಗಳ ಆಹಾರ ಕ್ರಮ ಅರಿಯಬೇಕಾದರೆ ಅವುಗಳು ಮೇಯುವ ಸಸ್ಯಗಳನ್ನು ನೋಡಿ ಅಳೆದೋ ಇಲ್ಲ ಸತ್ತ ಪ್ರಾಣಿಯ ಜಠರದ ಪರೀಕ್ಷೆಯಿಂದಲೋ ಅಥವಾ ಪ್ರಾಣಿಯ ಹಿಕ್ಕೆ ಅಥವಾ ಮಲದ ಸ್ಯಾಂಪಲ್‌ಗಳಲ್ಲಿರುವ ಕುರುಹುಗಳಿಂದಲೋ ತಿಳಿಯಬೇಕಾಗುತ್ತದೆ.

ಈ ಎಲ್ಲ ತೆರನ ಕ್ಷೇತ್ರಕಾರ್ಯದ ವಿಧಾನಗಳೂ ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರಗಳ ಫಲ ಪಡೆದು ಬೆಳೆಯುತ್ತವೆ. ಉದಾಹರಣೆಗೆ ಪಶುವೈದ್ಯಕೀಯ ವಿಜ್ಞಾನದಲ್ಲಿ ಪ್ರಾಣಿಗಳಿಗೆ ಮತ್ತು ಬರಿಸಿ ಸೆರೆಹಿಡಿಯುವ ವಿಧಾನಗಳಲ್ಲಿ ಆದ ಪ್ರಗತಿ ವನ್ಯಜೀವಿ ಶಾಸ್ತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗಿದೆ.

ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಮುನ್ನಡೆಗಳು ಕಾಡು ಪ್ರಾಣಿಗಳನ್ನು ಸ್ವಯಂಚಾಲಿತ ಕ್ಯಾಮೆರಾ ಮೂಲಕ ಸೆರೆಹಿಡಿಯುವ ಕಾರ್ಯಕ್ಕೆ ನೆರವಾಗಿವೆ.[೧] ಬಾಹ್ಯಾಂತರಿಕ್ಷದಲ್ಲಿ ಹಾರಾಡುವ ಉಪಗ್ರಹಗಳು ಪ್ರಾಣಿಗಳ ರೇಡಿಯೋ ಟ್ರಾಕಿಂಗ್ ಮತ್ತು ಆವಾಸ ನಕ್ಷೆಗಳ ತಯಾರಿಗೆ ಬೆಂಬಲವಾಗಿವೆ.[೨]

ಕಾಲಕ್ರಮೇಣ ವನ್ಯಜೀವಿ ಸಂರಕ್ಷಣೆಯ ಸಮಸ್ಯೆಗಳು ಸಂಕೀರ್ಣವಾದಂತೆ ಪ್ರಾಣಿಗಳ ಅಳಿವಿನ ಅಪಾಯ ಎದುರಿಸಲು ಅಗತ್ಯವಾದ ಮಾಹಿತಿಗಳ ಅವಶ್ಯಕತೆ ಹೆಚ್ಚಿದಂತೇ ಈ ಮಾಹಿತಿಗಳನ್ನು ಪಡೆಯಬಲ್ಲ ವನ್ಯಜೀವಿ ಶಾಸ್ತ್ರದ ವಿಧಿವಿಧಾನಗಳೂ ಅಭಿವೃದ್ಧಿಹೊಂದುತ್ತಿವೆ ಎಂಬುದು ಗಮಾನಾರ್ಹ ವಿಷಯ.

ಉಲ್ಲೇಖಗಳು[ಬದಲಾಯಿಸಿ]

  1. Swann, D. E., Kawanishi, K., Palmer, J. (2010). "Evaluating Types and Features of Camera Traps in Ecological Studies: A Guide for Researchers". In O'Connell, A. F.; Nichols, J. D., Karanth, U. K. (eds.). Camera Traps in Animal Ecology: Methods and Analyses. Tokyo, Dordrecht, London, Heidelberg, New York: Springer. pp. 27–43. ISBN 978-4-431-99494-7. Archived from the original on 2022-03-09. Retrieved 2020-11-05.{{cite book}}: CS1 maint: multiple names: authors list (link)
  2. Silvy, Nova J. (2012). The Wildlife Techniques Manual. Vol. 1. Baltimore, MD: Johns Hopkins UP.