ರಮೇಶ್ ಕೃಷ್ಣನ್‌

ವಿಕಿಪೀಡಿಯ ಇಂದ
Jump to navigation Jump to search
ಬಲಭಾಗಲ್ಲಿರುವವರು, ೨೦೦೯ರಲ್ಲಿ

ರಮೇಶ್‌ ಕೃಷ್ಣನ್‌ (ತಮಿಳು:ரமேஷ் கிருஷ்ணன்) (ಜನನ: 1961ರ ಜೂನ್‌ 5ರಂದು) ಭಾರತದ ಮಾಜಿ ವೃತ್ತಿಪರ ಟೆನ್ನಿಸ್‌ ಆಟಗಾರ ಹಾಗೂ ಟೆನ್ನಿಸ್‌ ತರಬೇತುದಾರರಾಗಿದ್ದಾರೆ. 1970ರ ನಂತರದಲ್ಲಿ ಕಿರಿಯ ಟೆನ್ನಿಸ್‌ ಆಟಗಾರರಾಗಿ ವಿಂಬಲ್ಡನ್‌ ಮತ್ತು ಫ್ರೆಂಚ್‌ ಓಪನ್‌ ಟೆನ್ನಿಸ್‌ ಪಂದ್ಯಾವಳಿಯ ಬಾಲಕರ ಸಿಂಗಲ್ಸ್‌ ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಗರಿ ಮೂಡಿಸಿದ್ದರು. ಮತ್ತೆ 1980ರಲ್ಲಿ ಮೂರು ಗ್ರ್ಯಾಂಡ್‌ ಸ್ಲ್ಯಾಮ್‌ ಟೆನ್ನಿಸ್‌ ಪಂದ್ಯಾವಳಿಗಳಲ್ಲಿ ಕ್ವಾರ್ಟರ್‌ ಫೈನಲ್ಸ್ ಹಂತದ ವರೆಗೂ ಮುನ್ನಡೆದರಲ್ಲದೆ, 1987ರಲ್ಲಿ ಡೇವಿಸ್‌ ಕಪ್‌ ಪೈನಲ್‌ ತಲುಪಿದ ಭಾರತ ಟೆನ್ನಿಸ್‌ ತಂಡದ ಪ್ರಮುಖ ಸದಸ್ಯರಾಗಿದ್ದರು. 2007ರಲ್ಲಿ ರಮೇಶ್‌ ಕೃಷ್ಣನ್‌ ಭಾರತದ ಡೇವಿಸ್‌ ಕಪ್‌ ನಾಯಕರಾದರು.

ರಮೇಶ್‌ ಭಾರತ ದೇಶದ ಮದರಾಸು (ಇಂದು ಚೆನ್ನೈ) ನಗರದಲ್ಲಿ ಜನಿಸಿದರು. ಇವರ ತಂದೆ ರಾಮನಾಥನ್‌ ಕೃಷ್ಣನ್‌ 1960ರ ಅವಧಿಯಲ್ಲಿ ಭಾರತದ ಪ್ರಮುಖ ಟೆನ್ನಿಸ್‌ ಆಟಗಾರರಲ್ಲಿ ಒಬ್ಬರಾಗಿದ್ದರು. ತಮ್ಮ ತಂದೆಯಂತೆ, ರಮೇಶ್‌ ಸಹ, 1979ರಲ್ಲಿ ವಿಂಬಲ್ಡನ್‌ ಜೂನಿಯರ್‌ ಸಿಂಗಲ್ಸ್‌ ಪ್ರಶಸ್ತಿ ಗಳಿಸಿದರು. ಅವರು ಅದೇ ವರ್ಷ ಫ್ರೆಂಚ್ ಓಪನ್‌ ಜೂನಿಯರ್‌ ಪ್ರಶಸ್ತಿಯನ್ನೂ ಗೆದ್ದು, ವಿಶ್ವದಲ್ಲಿ ಕಿರಿಯ ಟೆನ್ನಿಸ್ ಆಟಗಾರರ (ನಂ.1 ಜೂನಿಯರ್ ಎಂಬ ಬಿರುದು ಗಳಿಸಿ) ಅಗ್ರಸ್ಥಾನ ಗಿಟ್ಟಿಸಿಕೊಂಡರು.

'ಸೀನಿಯರ್'‌ ಮಟ್ಟದಲ್ಲಿ, ರಮೇಶ್‌ (1986)ರಲ್ಲಿ ನಡೆದ ವಿಂಬಲ್ಡನ್‌ ಟೆನ್ನಿಸ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್ಸ್ ತನಕ ಮುನ್ನಡೆದಿದ್ದರು.ಅಲ್ಲದೆ, ಎರಡು ಬಾರಿ (1981 ಹಾಗೂ 1987ರಲ್ಲಿ) ಯುಎಸ್‌ ಓಪನ್‌ ಟೆನ್ನಿಸ್ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್ಸ್ ಹಂತದ ವರೆಗೆ ಮುನ್ನಡೆದಿದ್ದರು.

1987ರಲ್ಲಿ ಡೇವಿಸ್‌ ಕಪ್‌ ಟೆನ್ನಿಸ್‌ ಪಂದ್ಯಾವಳಿಯ ಫೈನಲ್ಸ್ ತಲುಪಿದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು. ಅದೇ ವರ್ಷ, ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಜಾನ್‌ ಫಿಟ್ಜ್‌ಗೆರಾಲ್ಡ್‌ರನ್ನು ನಾಲ್ಕು ಸೆಟ್‌ಗಳಿಂದ ಸೋಲಿಸಿ, ಐದನೆಯ ಪಂದ್ಯದಲ್ಲಿ ವ್ಯಾಲಿ ಮಸೂರ್‌ರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ, ಭಾರತದ 3-2 ಅಂತರದ ರೋಚಕ ಜಯಕ್ಕೆ ಕಾರಣರಾದರು. ಆದರೆ, ಸ್ವೀಡೆನ್‌ನ ಗೊಟೆನ್ಬರ್ಗ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ, ಆತಿಥೇಯ ತಂಡದ ವಿರುದ್ಧ ಭಾರತವು 0-5ರ ಭಾರಿ ಅಂತರದಿಂದ ಸೋತಿತು. ರಮೇಶ್‌ ಕೃಷ್ಣನ್‌, ಮ್ಯಾಟ್ಸ್‌ ವಿಲಾಂಡರ್‌ ಮತ್ತು ಅಂಡರ್ಸ್‌ ಜಾರೀಡ್‌ ವಿರುದ್ಧ ತಮ್ಮ ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಸೋತರು. 1977ರಿಂದ 1993ರ ತನಕ, ರಮೇಶ್‌ ಕೃಷ್ಣನ್‌ ಭಾರತದ ಡೇವಿಸ್‌ ಕಪ್‌ ತಂಡದ ಪ್ರಮುಖ ಸದಸ್ಯರಾಗಿದ್ದರು. ಅವರ ಗೆಲುವು-ಸೋಲಿನ ಅಂಕಿಅಂಶ ಒಟ್ಟಾರೆ 29-21 ಆಗಿತ್ತು (ಸಿಂಗಲ್ಸ್‌ 23-19 ಮತ್ತು ಡಬಲ್ಸ್‌ 6-2).

ಬಾರ್ಸಿಲೊನಾದಲ್ಲಿ, 1992ರಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ರಮೇಶ್ ಕೃಷ್ಣನ್‌ ಲಿಯಾಂಡರ್‌ ಪೇಸ್‌‌ ಜೊತೆಗೂಡಿ ಪುರುಷರ ಡಬಲ್ಸ್‌ ಕ್ವಾರ್ಟರ್‌-ಫೈನಲ್ಸ್ ಹಂತದ ತನಕ ಮುನ್ನಡೆದಿದ್ದರು.

ರಮೇಶ್‌ ಕೃಷ್ಣನ್‌ ವೃತ್ತಿಪರ ಟೆನ್ನಿಸ್‌ ಪಯಣ-ಸ್ಪರ್ಧೆಯಿಂದ 1993ರಲ್ಲಿ ನಿವೃತ್ತರಾದರು. ಅವರ ವೃತ್ತಿಜೀವನದಲ್ಲಿ ಎಂಟು ಉನ್ನತ-ಮಟ್ಟದ ಸಿಂಗಲ್ಸ್‌ ಪ್ರಶಸ್ತಿಗಳು ಹಾಗೂ ಒಂದು ಡಬಲ್ಸ್‌ ಪ್ರಶಸ್ತಿ ಗಳಿಸಿದರು. ವಿಶ್ವದ 23ನೆಯ ರಾಂಕಿಂಗ್‌ ಇವರ ವೃತ್ತಿಜೀವನದ ಅತ್ಯುನ್ನತ ಸಿಂಗಲ್ಸ್‌ ಶ್ರೇಯಾಂಕವಾಗಿತ್ತು. (ಜನವರಿ 1985ರಲ್ಲಿ) ಇವರ ವೃತ್ತಿಯಲ್ಲಿ ಗಳಿಸಿದ ಬಹುಮಾನ-ಹಣವು ಒಟ್ಟು 1,263,130 ಯುಎಸ್‌ ಡಾಲರ್‌ಗಳು.


ಭಾರತೀಯ ಟೆನ್ನಿಸ್‌ಗಾಗಿ ರಮೇಶ್‌ರ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಿದ ಭಾರತ ಸರ್ಕಾರವು 1998ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹಲವಾರು ಟೆನ್ನಿಸ್‌ ತರಬೇತಿ ಸಂಸ್ಥೆಗಳಂತೆಯೇ, ರಮೇಶ್‌ ಕೃಷ್ಣನ್‌ ತಮ್ಮ ಸ್ವಸ್ಥಳ ಚೆನ್ನೈಯಲ್ಲಿ (ಮುಂಚೆ ಮದರಾಸು) ಟೆನ್ನಿಸ್‌ ಅಕಾಡೆಮಿ ಸಂಸ್ಥಾಪಿಸಿ ನಡೆಸುತ್ತಿದ್ದಾರೆ. ರಮೇಶ್‌ ಅವರು 2007ರ ಜನವರಿ ತಿಂಗಳಲ್ಲಿ ಭಾರತ ಡೇವಿಸ್ ಕಪ್ ತಂಡದ ನಾಯಕರಾದರು.

ವೃತ್ತಿಯ ಮುಖ್ಯಾಂಶಗಳು[ಬದಲಾಯಿಸಿ]

 • 1979 - ವಿಂಬಲ್ಡನ್‌ ಮತ್ತು ಫ್ರೆಂಚ್‌ ಓಪನ್‌ ಜೂನಿಯರ್‌ ಸಿಂಗಲ್ಸ್‌ ಚಾಂಪಿಯನ್‌.
 • 1981 - ಯುಎಸ್‌ ಓಪನ್‌ - ಕ್ವಾರ್ಟರ್‌-ಫೈನಲ್ಸ್ ವರೆಗೆ ಮುನ್ನಡೆ.
 • 1986 - ವಿಂಬಲ್ಡನ್‌ - ಕ್ವಾರ್ಟರ್‌-ಫೈನಲ್ಸ್ ವರೆಗೆ ಮುನ್ನಡೆ.
 • 1987 - ಯುಎಸ್‌ ಓಪನ್‌ - ಕ್ವಾರ್ಟರ್‌-ಫೈನಲ್ಸ್ ವರೆಗೆ ಮುನ್ನಡೆ.
 • 1987 - ಡೇವಿಸ್‌ ಕಪ್‌ ಟೆನ್ನಿಸ್‌ ಪಂದ್ಯಾವಳಿಯ ಫೈನಲ್ ತಲುಪಿದ ಭಾರತ ತಂಡದ ಸದಸ್ಯ. (ಸೆಮಿ-ಫೈನಲ್ಸ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಕೃಷ್ಣನ್ ನಿರ್ಣಾಯಕ ಸಿಂಗಲ್ಸ್‌ ಪಂದ್ಯ ಗೆದ್ದರು. ಫೈನಲ್ ಪಂದ್ಯದಲ್ಲಿ ಭಾರತ ಆತಿಥೇಯ ಸ್ವೀಡೆನ್‌ ವಿರುದ್ಧ ಸೋತಿತು.)
 • 1989 - ಆಸ್ಟ್ರೇಲಿಯನ್ ಓಪನ್‌ ಪಂದ್ಯದ ಪುರುಷರ ಸಿಂಗಲ್ಸ್‌ ನ ಎರಡನೆಯ ಸುತ್ತಿನಲ್ಲಿ ಅಂದಿನ ವಿಶ್ವದ ನಂ 1, ಅಗ್ರಸ್ಥಾನದ ಆಟಗಾರ ಮ್ಯಾಟ್ಸ್‌ ವಿಲಾಂಡರ್‌ ವಿರುದ್ಧ ಗೆಲುವು.
 • 1992 - ಬಾರ್ಸಿಲೊನಾ ಒಲಿಂಪಿಕ್‌ ಕ್ರೀಡಾಕೂಟ ಲಿಯಾಂಡರ್‌ ಪೇಸ್‌ ಜತೆಗೂಡಿ ಪುರುಷರ ಡಬಲ್ಸ್‌ ಕ್ವಾರ್ಟರ್‌-ಫೈನಲ್ಸ್ ವರೆಗೆ ಮುನ್ನಡೆ.
 • ಅತ್ಯುನ್ನತ ಮಟ್ಟದಲ್ಲಿ ಎಂಟು ಸಿಂಗಲ್ಸ್‌ ಪ್ರಶಸ್ತಿ ಹಾಗೂ ಒಂದು ಡಬಲ್ಸ್‌ ಪ್ರಶಸ್ತಿ ಗಳಿಕೆ.
 • ವೃತ್ತಿಜೀವನದ 1985ರ ಜನವರಿ ತಿಂಗಳಲ್ಲಿ ಅವರು ಅತ್ಯುನ್ನತ ವಿಶ್ವದ 23ನೆಯ ಶ್ರೇಯಾಂಕ ತಲುಪಿದರು.
 • 1986 - ಜಪಾನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ವಿಜೇತ.
 • 1987 - ಜನವರಿ ತಿಂಗಳ ಸತತ ಎರಡು ವಾರಗಳಲ್ಲಿ ಸೌತ್‌ ಆಸ್ಟ್ರೇಲಿಯನ್‌ ಓಪನ್‌ ಮತ್ತು ಹೈನೆಕೆನ್‌ ಓಪನ್‌ ಪಂದ್ಯಾವಳಿಗಳಲ್ಲಿ ಕ್ವಾರ್ಟರ್‌-ಫೈನಲ್ಸ್ ವರೆಗೆ ಮುನ್ನಡೆ.
 • 1988 - ವೆಲ್ಲಿಂಗ್ಟನ್‌ ಓಪನ್‌ ಪ್ರಶಸ್ತಿ ವಿಜೇತ; ಎಟಿಪಿ ಆಕ್ಲೆಂಡ್‌ ಓಪನ್, ಬ್ರಿಸ್ಟಲ್‌ ಓಪನ್‌, ರೈ ಬ್ರೂಕ್‌, ನ್ಯೂಯಾರ್ಕ್‌ ಓಪನ್‌ - ಇವೆಲ್ಲ ಪಂದ್ಯಾವಳಿಗಳಲ್ಲಿ ರನ್ನರ್ಸ್-ಅಪ್‌.
 • 1989 - ಎಟಿಪಿ ಆಕ್ಲೆಂಡ್‌ ಓಪನ್‌ ವಿಜೇತ; ಜುಲೈ ತಿಂಗಳಲ್ಲಿ ಸತತ ಎರಡು ವಾರಗಳಲ್ಲಿ ಷೆನೆಕ್ಟಡಿ, ನ್ಯೂಯಾರ್ಕ್‌ ಓಪನ್‌ ಮತ್ತು ವಾಷಿಂಗ್ಟನ್‌ ಡಿಸಿ ಓಪನ್‌ ಪಂದ್ಯಾವಳಿಗಳಲ್ಲಿ ಕ್ವಾರ್ಟರ್‌-ಫೈನಲ್ಸ್ ವರೆಗೆ ಮುನ್ನಡೆ. ನ್ಯೂಜರ್ಸಿಯ ಲಿವಿಂಗ್ಸ್ಟನ್‌ ಓಪನ್‌ ಪಂದ್ಯಾವಳಿಯಲ್ಲಿ ಕ್ವಾರ್ಟರ್‌-ಫೈನಲ್ಸ್ ವರೆಗೆ ಮುನ್ನಡೆ.


 • 1990 - ಷೆನೆಕ್ಟಡಿ ಓಪನ್‌ ಪಂದ್ಯಾವಳಿ ವಿಜೇತ; ಹೈನೆಕೆನ್‌ ಓಪನ್‌ ಪಂದ್ಯಾವಳಿಯಲ್ಲಿ ಸೆಮಿಫೈನಲ್ಸ್ ವರೆಗೆ ಮುನ್ನಡೆ.
 • 1991 - ವೆಲ್ಲಿಂಗ್ಟನ್ ಓಪನ್‌ ಪಂದ್ಯಾವಳಿಯ ಕ್ವಾರ್ಟರ್‌-ಫೈನಲ್ಸ್ ವರೆಗೆ ಮುನ್ನಡೆ.
 • 1992 - ಸಿಂಗಪುರ ಓಪನ್‌ ಪಂದ್ಯಾವಳಿಯ ಸೆಮಿಫೈನಲ್ಸ್ ವರೆಗೆ ಮುನ್ನಡೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]