ವಿಷಯಕ್ಕೆ ಹೋಗು

ಮುಕೇಶ್ (ಗಾಯಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಕೇಶ್
ಹಿನ್ನೆಲೆ ಮಾಹಿತಿ
ಜನ್ಮನಾಮಮುಕೇಶ್ ಚಂದ್ ಮಾಥುರ್
ಜನನ(೧೯೨೩-೦೭-೨೨)೨೨ ಜುಲೈ ೧೯೨೩
ದೆಹಲಿ, ಭಾರತ
ಮರಣ27 August 1976(1976-08-27) (aged 53)
ಡೆಟ್ರಾಯಿಟ್, ಮಿಶಿಗನ್,, ಅಮೆರಿಕಾ ಸಂಯುಕ್ತ ಸಂಸ್ಥಾನಗಳು
ಸಂಗೀತ ಶೈಲಿಹಿನ್ನೆಲೆ ಗಾಯನ, ಭಜನೆಗಳು, ಗಝಲ್‌ಗಳು, ಇತ್ಯಾದಿ
ವೃತ್ತಿಹಿನ್ನೆಲೆ ಗಾಯಕ, ನಟ, ನಿರ್ಮಾಪಕ, ಇತ್ಯಾದಿ
ಸಕ್ರಿಯ ವರ್ಷಗಳು೧೯೪೦ - ೧೯೭೬

ಮುಕೇಶ್ (ಜನನ ೨೨ ಜುಲೈ ೧೯೨೩ - ನಿಧನ ೨೭ ಆಗಸ್ಟ್ ೧೯೭೬) ಹಿಂದಿ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರು. ವಿಶೇಷವಾಗಿ ಹೃದಯ ತಟ್ಟುವಂತೆ, ಮನ ಮಿಡಿಯುವಂತೆ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದವರು. ಭಾರತದ ಹಿಂದಿ ಚಲನಚಿತ್ರರಂಗದ ಇತಿಹಾಸದ ಸಂಗೀತ ಕ್ಷೇತ್ರದಲ್ಲಿ ಸುವರ್ಣಯುಗವೆಂದು ಪರಿಗಣಿಸಲಾಗುವ ಇಪ್ಪತ್ತನೇ ಶತಮಾನದ ೫೦ರ ದಶಕದ ಆರಂಭದಿಂದ ತೊಡಗಿ ೭೦ರ ದಶಕದ ಅಂತ್ಯದವರೆಗಿನ ಕಾಲಘಟ್ಟದಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಾಗಿದ್ದ ಮನ್ನಾ ಡೇ, ಮಹಮ್ಮದ್ ರಫಿ, ತಲತ್ , ಮತ್ತಿತರ ಕೆಲವರಲ್ಲಿ ಮುಕೇಶ್ ಅಗ್ರಗಣ್ಯರಾಗಿದ್ದರು. ಇವರು ಅಂದಾಜು ೨೦೦ರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿರುವರಲ್ಲದೆ ಅನೇಕ ಹಿಂದಿ ಭಾವಗೀತೆ, ಶೇರ್, ಮುಂತಾದವುಗಳ ಜತೆಗೆ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಹಿಂದಿಯ ಮಹಾಕವಿ ತುಳಸೀದಾಸರಾಮಾಯಣವನ್ನೂ ಹಾಡಿ ಜನಪ್ರಿಯರಾಗಿದ್ದಾರೆ.

ಜನನ ಮತ್ತು ವೈಯಕ್ತಿಕ ಜೀವನ

[ಬದಲಾಯಿಸಿ]

೧೯೨೩ರ ಜುಲೈ ೨೨ರಂದು ಮುಕೇಶ್ ಪಂಜಾಬಿನ ಒಂದು ಮಧ್ಯಮ ವರ್ಗದ ಸಣ್ಣ ಕುಟುಂಬದಲ್ಲಿ ಜನಿಸಿದರು. ದಿಲ್ಲಿಯ ಎಂಜಿನೀಯರಿಂಗ್ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ಲಾಲಾ ಜೊರಾವರ್ ಚಂದ್ ಮಾಥುರ್ ಮತ್ತು ಚಾಂದ್ ರಾಣಿಯವರ ಹತ್ತು ಮಕ್ಕಳಲ್ಲಿ ಆರನೇಯವರಾಗಿ ಹುಟ್ಟಿದ ಇವರ ಪೂರ್ಣ ಹೆಸರು ಮುಕೇಶ್ ಚಂದ್ರ ಮಾಥುರ್. ದಿಲ್ಲಿಯಲ್ಲಿ ಹತ್ತನೇ ತರಗತಿಯವರೆಗೆ ಓದಿದ ಮುಕೇಶ್ ಅಲ್ಲಿಯ ಸಾರ್ವಜನಿಕ ಕಾಮಗಾರಿ ಇಲಾಖೆಯಲ್ಲಿ (Delhi Department of Public Works - PWD) ಸಹಾಯಕ ಸರ್ವೇಕ್ಷಕರಾಗಿ (ಅಸಿಸ್ಟೆಂಟ್ ಸರ್ವೇಯರ್) ಏಳು ತಿಂಗಳ ಕಾಲ ದುಡಿದರು.

ಮುಕೇಶ್ ೧೯೪೬ರಲ್ಲಿ ಸರಳಾ ತ್ರಿವೇದಿಯವರನ್ನು ಮದುವೆಯಾದರು. ಸರಳಾರವರನ್ನು (ಜ: ೧೯೨೮ - ನಿ: ೨೬ ಫೆ ೨೦೦೮) ಬಚೀ ಬೆನ್ ಎಂದು ಬಳಗದವರು ಕರೆಯುತ್ತಿದ್ದರು. ಇವರದು ಪ್ರೇಮ ವಿವಾಹ. ಆಗರ್ಭ ಶ್ರೀಮಂತ ಗುಜರಾತೀ ಬ್ರಾಹ್ಮಣರೊಬ್ಬರ ಮಗಳನ್ನು ಮದುವೆಯಾಗಬೇಕೆಂದು ನಿರ್ಧರಿಸುವಾಗ ಮುಕೇಶ್‌ರವರಿಗೆ ತಮ್ಮದೇ ಆದ ಮನೆಯಿರಲಿಲ್ಲ. ನಿಶ್ಚಿತ ವರಮಾನವಿರಲಿಲ್ಲ. ಚಲನಚಿತ್ರರಂಗವನ್ನು ಆಗಿನ ಕಾಲದಲ್ಲಿ ‘ನೀತಿಯಿಲ್ಲದವರ ಉದ್ಯೋಗ’ವೆಂದು ಪರಿಗಣಿಸಲಾಗುತಿತ್ತು. ಇಂಥ ಹಿನ್ನೆಲೆಯಲ್ಲಿ ಈ ಪ್ರೇಮಿಗಳು ತಮ್ಮ-ತಮ್ಮ ಕುಟುಂಬಗಳಿಂದ ದೂರವಾಗಿ ಮುಂಬೈಯ ಕಾಂದಿವಲಿಯ ದೇವಸ್ಥಾನವೊಂದರಲ್ಲಿ ಮದುವೆಯಾದಾಗ, ಎಲ್ಲ ವಿಧದ ಆಸರೆ ನೀಡಿದವರು ಆರ್ ಡಿ ಮಾಥುರ್ ಎಂಬವರು. ಅವರ ಬಂಧು-ಬಳಗವೆಲ್ಲಾ ಈ ದಾಂಪತ್ಯ ಅತಿ ಶೀಘ್ರದಲ್ಲೇ ಸಾಮರಸ್ಯ ತಪ್ಪಿ ವಿಚ್ಛೇದನದಲ್ಲಿ ಮುಕ್ತಾಯಗೊಳ್ಳುವದೆಂದು ಭವಿಷ್ಯ ನುಡಿದಿದ್ದರು. ಆದರೆ ತಮ್ಮ ಎಲ್ಲಾ ರೀತಿಯ ಕಷ್ಟ-ಕಾರ್ಪಣ್ಯಗಳನ್ನು ಒಂದಾಗಿ ಅನುಭವಿಸಿ, ಜಯಶೀಲರಾಗಿ ೧೯೭೬ರ ಜುಲೈ ೨೨ರಂದು ವಿವಾಹದ ಮೂವತ್ತನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಐದು ದಿನಗಳ ಬಳಿಕ ೨೭ನೇ ಜುಲೈ ೧೯೭೬ರಂದು ಹಿಂದಿ ಚಲನಚಿತ್ರದ ಸಂಗೀತ ಸಾಮ್ರಾಜ್ಯದ ಚಕ್ರವರ್ತಿನಿ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಜತೆ ಅಮೆರಿಕ ಸಂಯುಕ್ತ ರಾಜ್ಯಗಳಿಗೆ ಹೊರಟರು.

ಮುಕೇಶ್ ದಂಪತಿಗಳಿಗೆ ಐವರು ಮಕ್ಕಳು: ರೀಟಾ, ನಿತಿನ್, ನಳಿನಿ (ನಿಧನ ೧೯೭೮), ಮೊಹ್ನೀಶ್ ಮತ್ತು ನಮ್ರತಾ (ಅಮೃತಾ). ನೀಲ್ ನಿತಿನ್ ಮುಕೇಶ್ ಇವರ ಮೊಮ್ಮಗ.

ಸಂಗೀತ ಜೀವನ

[ಬದಲಾಯಿಸಿ]

ಪ್ರಥಮ ಪಾಠಗಳು

[ಬದಲಾಯಿಸಿ]

ಸಂಗೀತ ಶಿಕ್ಷಕರೊಬ್ಬರು ಮುಕೇಶರ ಮನೆಗೆ ಬಂದು ಅವರ ಸೋದರಿ ಸುಂದರ್ ಪ್ಯಾರೀಗೆ ಸಂಗೀತ ಕಲಿಸುತ್ತಿದ್ದಾಗ ಮುಕೇಶ್ ಪಕ್ಕದ ಕೋಣೆಯಲ್ಲಿ ಆ ಪಾಠಗಳನ್ನು ಆಲಿಸಿಕೊಂಡು, ನಂತರ ಅಭ್ಯಾಸ ಮಾಡಿಕೊಂಡು ಹಾಡುತ್ತಿದ್ದರು. ಇದನ್ನು ಗಮನಿಸಿದ ಆ ಶಿಕ್ಷಕರು ಅವರಲ್ಲಿರುವ ಗಾಯಕನನ್ನು ಗಮನಿಸಿ, ತಮ್ಮ ಸೋದರ ಪರಮೇಶ್ವರೀದಾಸನಿಂದ ಸಂಗೀತದ ಆರಂಭಿಕ ಪಾಠಗಳನ್ನು ಹೇಳಿಸಿಕೊಟ್ಟರು. ಬಳಿಕ ದಿಲ್ಲಿಯಲ್ಲಿ ಉದ್ಯೋಗದಲ್ಲಿದ್ದಾಗ ಮುಕೇಶ್ ೧೯೪೦ರಲ್ಲಿ ಗುಟ್ಟಾಗಿ ಕೆಲವು ಚಲನಚಿತ್ರೇತರ ಹಾಡುಗಳನ್ನು ಧ್ವನಿಮುದ್ರಿಸುವ ಪ್ರಯೋಗಗಳನ್ನು ನಡೆಸಿದರು. ಆ ಕಾಲದಲ್ಲೇ ಮುಂಬೈಗೆ ಹೋಗಿ ಚಲನಚಿತ್ರ ನಟನಾಗುವ ಕನಸನ್ನೂ ಕಾಣುತ್ತಿದ್ದರು. ಮುಕೇಶರು ತಮ್ಮ ಸೋದರಿಯ ಮದುವೆಯಲ್ಲಿ ಹಾಡುತ್ತಿದ್ದದನ್ನು ಅಲ್ಲಿಗೆ ಆಗಮಿಸಿದ್ದ ಅವರ ದೂರದ ಬಂಧು ಮೋತೀಲಾಲರು ಗಮನಿಸಿ, ಅವರನ್ನು ತಮ್ಮ ಜತೆ ಮುಂಬೈಗೆ ಕರೆದೊಯ್ದರು. ಮುಕೇಶರನ್ನು ತಮ್ಮಲ್ಲಿಯೇ ಉಳಿಸಿಕೊಂಡ ಮೋತೀಲಾಲರು ಅವರಿಗೆ ಸಂಗೀತಪಾಠಗಳನ್ನು ಏರ್ಪಡಿಸಿದರು.

ಸೈಗಲರ ಪರಿಚಯ

[ಬದಲಾಯಿಸಿ]

ಈ ಸಮಯದಲ್ಲಿ ಹೀಗೊಂದು ಘಟನೆ ನಡೆಯಿತೆನ್ನುತ್ತಾರೆ. ಒಮ್ಮೆ ಆ ಕಾಲದ ಪ್ರಸಿದ್ಧ ಗಾಯಕ-ನಟರಾಗಿದ್ದ ಕುಂದನ್ ಲಾಲ್ ಸೈಗಲ್ ಮೋತೀಲಾಲರ ಮನೆಯೆದುರು ಹೋಗುತ್ತಿದ್ದಾಗ ಆ ಮನೆಯೊಳಗಿಂದ ಬರುತಿದ್ದ ಸುಶ್ರಾವ್ಯ ಹಾಡಿನಿಂದ ಆಕರ್ಷಿತರಾಗಿ ಮನೆಯೊಳಹೊಕ್ಕರು. ಮೊದಲ ಮಹಡಿಯಲ್ಲಿ ಕುಳಿತು ಮುಕೇಶರ ಹಾಡನ್ನು ಕೇಳುತ್ತಿದ್ದ ಮೋತೀಲಾಲರು ಸೈಗಲರಿಗೆ ಮುಕೇಶರನ್ನು ದಿಲ್ಲಿಯಿಂದ ಚಲನಚಿತ್ರರಂಗದಲ್ಲಿ ಕೆಲಸ ಹುಡುಕುತ್ತಾ ಬಂದವರೆಂದು ಪರಿಚಯ ಮಾಡಿಕೊಟ್ಟರು. ಸೈಗಲರು, ‘ಇವನಿಗೆ ಚಲನಚಿತ್ರಗಳಲ್ಲಿ ಹಿನ್ನೆಲೆಗಾಯಕನ ಕೆಲಸ ಕೊಡಿಸಿರಿ. ಒಂದು ದಿನ ಇವನು ನನ್ನ ಸ್ಥಾನಕ್ಕೇರುತ್ತಾನೆ’ ಎಂದು ಭವಿಷ್ಯ ನುಡಿದರಂತೆ.

ಪ್ರಥಮ ಪದಾರ್ಪಣೆ

[ಬದಲಾಯಿಸಿ]

೧೯೪೧ರಲ್ಲಿ ಸೈಗಲರ ಗೆಳೆಯರಲ್ಲೊಬ್ಬರಾದ ತಾರಾಹರೀಶರು ನ್ಯಾಶನಲ್ ಸ್ಟೂಡಿಯೊ ನಿರ್ಮಿಸುತ್ತಿದ್ದ ಹಿಂದಿ ಚಲನಚಿತ್ರ ನಿರ್ದೋಷ್‌ ಗೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ತಾರಾಹರೀಶರು ವಹಿಸಬೇಕೆಂದುಕೊಂಡಿದ್ದ ಗಾಯಕ-ನಟನ ನಾಯಕ ಪಾತ್ರವನ್ನು ಸೈಗಲರು ಶಿಫಾರಿಸ್ ಮೇರೆಗೆ ಮುಕೇಶರಿಗೆ ಕೊಟ್ಟರು. ‘ಸಿಂಡರೆಲ್ಲಾ’ ಕತೆಯಂತೆ ತನ್ನ ಮಲತಾಯಿ ಮತ್ತು ಇಬ್ಬರು ಮಲಸೋದರಿಯರಿಂದ ಹಿಂಸೆಗೊಳಗಾಗಿದ್ದ ನಾಯಕಿಗೆ ಹೊಸಜೀವನವನ್ನು ಕೊಡಿಸುವ ಶ್ರೀಮಂತ ಯುವಕನ ಪಾತ್ರವಿರುವ ನಳಿನಿ ಜಯವಂತ್ ನಾಯಕಿಯಾಗಿದ್ದ ಈ ಚಿತ್ರ ಬಹಳ ಜನಪ್ರಿಯವಾಯಿತು. ಮುಕೇಶರ ಮೊದಲ ಹಾಡು, ‘ದಿಲ್ ಹೀ ಬುಝಾ ಹುಆ ಹೋ ತೋ...’ ಜನರ ನಾಲಿಗೆಯಲ್ಲಿ ಅನುಕರಣಗೊಂಡಿತು. ಅವರಿಗೆ ರಣಜೀತ್ ಮೂವಿಟೋನ್ ಕಂಪೆನಿಯಲ್ಲಿ ಕೆಲಸ ಮಾಡಲು ಮೂರು ವರ್ಷಗಳ ಕಾಂಟ್ರಾಕ್ಟ್ ದೊರೆಯಿತು.

ಕಾಂಟ್ರಾಕ್ಟಿನ ಮೂರು ವರ್ಷಗಳಲ್ಲಿ ಮುಕೇಶ್ ಅನೇಕ ಚಿತ್ರಗಳಲ್ಲಿ ನಟಿಸಿದರೂ ಕೆಲವು ಮಾತ್ರ ತೆರೆ ಕಂಡವು. ಅವೂ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂಥ ಜಯ ಗಳಿಸಲಿಲ್ಲ. ಆಗಿನ ಪ್ರಸಿದ್ಧ ಗಾಯಕಿ-ನಟಿ ಸಿತಾರಾದೇವಿಯ ಜತೆ ಖಳ-ಪ್ರೇಮಿಯ ಪಾತ್ರದಲ್ಲಿ ನಟಿಸಿದ ಸುಖ್-ದುಃಖ್ ಚಿತ್ರ ಹಾಗೂ ಕರಣ್ ದೀವಾನ್ ಮತ್ತು ನಳಿನಿ ಜಯವಂತ್ ನಾಯಕ-ನಾಯಕಿಯರಾಗಿದ್ದು, ಮುಕೇಶ್ ಪೋಷಕ ಪಾತ್ರದಲ್ಲಿರುವ ಆದಾಬ್ ಅರ್ಜ್ ಚಿತ್ರ ಈ ಸಮಯದ ಗಮನಾರ್ಹ ಚಿತ್ರಗಳು.

ಮೂರು ವರ್ಷಗಳ ಕಾಂಟ್ರಾಕ್ಟ್ ಮುಗಿದ ಮೇಲೆ ಮುಕೇಶ್ ಹಿನ್ನೆಲೆ ಗಾಯನಕ್ಕೆ ಹೆಚ್ಚಿನ ಗಮನವೀಯಲಾರಂಭಿಸಿದರು. ೧೯೪೩ ಮತ್ತು ೧೯೪೪ರಲ್ಲಿ ಮೂರ್ತಿ, ಉಸ್ ಪಾರ್, ಮೊದಲಾದ ಚಿತ್ರಗಳಿಗೆ ಯುಗಲ ಗೀತೆಗಳನ್ನು ಹಾಡಿದ ಬಳಿಕ ೧೯೪೫ರಲ್ಲಿ ಪಹಲೀ ನಜರ್ ಚಿತ್ರದಲ್ಲಿ ಮೊದಲ ಬಾರಿಗೆ ‘ದಿಲ್ ಜಲ್‌ತಾ ಹೈ ತೋ ಜಲ್‌ನೇ ದೇ’ ಹಾಡನ್ನು ಹಾಡಿದರು. ಅನಿಲ್ ಬಿಸ್ವಾಸರ ಸಂಗೀತ ನಿರ್ದೇಶನದಲ್ಲಿ ದರ್ಬಾರೀ ರಾಗವನ್ನಾಧರಿಸಿ ರಚಿಸಿದ ಈ ಹಾಡನ್ನು ಮುಕೇಶರ ಚಿತ್ರರಂಗ ಪ್ರವೇಶಕ್ಕೆ ಕಾರಣರಾದ ಮೋತೀಲಾಲರ ಮೇಲೆ ಧರ್ಮ-ಕರ್ಮ ಸಂಯೋಗವೆಂಬಂತೆ ಚಿತ್ರೀಕರಿಸಲಾಯಿತು. ಹಾಡೂ ಚಿತ್ರವೂ ಜನಪ್ರಿಯವಾಯಿತು.

ತನ್ನದೇ ಆದ ಶೈಲಿ

[ಬದಲಾಯಿಸಿ]

೧೯೪೮ರ ಚಿತ್ರ ಮೇಲಾ ಹಾಗೂ ೧೯೪೯ರ ಅಂದಾಜ್ ಚಿತ್ರದಲ್ಲಿ ನೌಶಾದರ ಸಂಗೀತ ನಿರ್ದೇಶನದಲ್ಲಿ ಮುಕೇಶ್ ತನ್ನದೇ ಆದ ಶೈಲಿಯನ್ನು ರೂಪಿಸಿಕೊಂಡರು. ಅದರಲ್ಲೂ ಅಂದಾಜ್ ನಲ್ಲಿ ಹಾಡಿದ ‘ತೂ ಕಹೇ ಅಗರ್...’,‘ಝೂಮ್ ಝೂಮ್ ಕೇ ನಾಚೇ ಆಜ್...’ ‘ಹಮ್ ಆಜ್ ಕಹೀಂ ದಿಲ್ ಖೋ ಬೈಠೇ...’ ಮತ್ತು ‘ಟೂಟೇ ನ ದಿಲ್ ಟೂಟೇ ನ...’ ಹಾಡುಗಳಲ್ಲಿ ಮುಕೇಶರ ಸ್ವಂತಿಕೆ ಎದ್ದು ತೋರುತ್ತವೆ. ದಿಲೀಪ್ ಕುಮಾರ್, ರಾಜ್ ಕಪೂರ್ ಮತ್ತು ನರ್ಗಿಸ್ ಇರುವ ಈ ಚಿತ್ರದ ವಿಶೇಷವೆಂದರೆ ಈ ಮೇಲೆ ಹೇಳಿದ ಹಾಡುಗಳನ್ನು ದಿಲೀಪ್ ಕುಮಾರ್ ಮೇಲೆ ಚಿತ್ರೀಕರಿಸಿದ್ದರೆ, ರಾಜ್ ಕಪೂರ್‌ಗೆ ಮಹಮ್ಮದ್ ರಫಿ ಹಾಡಿದ್ದಾರೆ!

‘ರಾಜ್ ಕಪೂರನ ಗಾಯನ ಸ್ವರ ಮುಕೇಶ್’ ಎಂದು ಪ್ರಸಿದ್ಧವಾದ ಮಾತು ೧೯೪೮ರಲ್ಲಿ ರಾಜ್ ಕಪೂರ್ ನಿರ್ಮಿಸಿ ನಟಿಸಿದ ಆಗ್ ಚಿತ್ರದಿಂದ ಆರಂಭವಾಯಿತು. ಮರು ವರ್ಷ ಶಂಕರ್ ಮತ್ತು ಜೈಕಿಶನರನ್ನು ತನ್ನ ಬಳಗಕ್ಕೆ ರಾಜ್ ಕಪೂರ್ ಸೇರಿಸಿಕೊಂಡು ಮುಂದೆ ಬಹಳ ಕಾಲ ಹಿಂದಿ ಚಿತ್ರರಂಗದಲ್ಲಿ ಸಂಗೀತದ ಹೊಸ ಯುಗವನ್ನು ರಚಿಸಿದರು. ರಾಜ್ ಕಪೂರರ ಮುಂದಿನ ಚಿತ್ರ ಆವಾರಾ ಮತ್ತು ಶ್ರೀ ೪೨೦ ರ ಹಾಡುಗಳಲ್ಲಿ (ಮುಖ್ಯವಾಗಿ ಮುಕೇಶರವು) ಭಾರತದಲ್ಲಿ ಮಾತ್ರವಲ್ಲದೆ ರಶಿಯಾದಲ್ಲೂ ಚೀನಾದಲ್ಲೂ ಜನ ಮೆಚ್ಚುಗೆಯನ್ನು ಪಡೆದವು.

ಅಭಿನಯ ಮತ್ತು ನಿರ್ಮಾಣ

[ಬದಲಾಯಿಸಿ]

ಆವಾರಾ ದ ಬಳಿಕ ಮುಕೇಶ್ ಅಭಿನಯದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದರು. ಭೈರವಿ ಎಂಬ ಚಿತ್ರದಲ್ಲಿ ನಟಿಸಿದರು; ಆದರೆ ಅದು ಪೂರ್ಣಗೊಳ್ಳಲಿಲ್ಲ. ಸುರೈಯಾ ಜತೆಯಲ್ಲಿ ಅವರು ನಟಿಸಿದ ಮಾಶುಕಾ ೧೯೫೩ರಲ್ಲಿ ತೆರೆ ಕಂಡಿತು. ರೋಶನ್ ಸಂಗೀತ ನೀಡಿದರೂ ಈ ಚಿತ್ರ ಜಯಪ್ರದವಾಗಲಿಲ್ಲ. ೧೯೫೧ರಲ್ಲಿ ಡಾರ್ಲಿಂಗ್ ಫಿಲ್ಮ್‌ಸ್ ಲಾಂಛನದಡಿಯಲ್ಲಿ ಆಗಿನ ಅಭಿನೇತ್ರಿ ಶಮ್ಮಿ, ಅರ್ಜುನ್, ಮೋತಿ ಸಾಗರ್ ಮತ್ತು ಕನ್ಹಯ್ಯಲಾಲ್ ಮುಖ್ಯ ಭೂಮಿಕೆಯಲ್ಲಿ ರೋಶನ್ ಅವರ ಸಂಗೀತ ನಿರ್ದೇಶನ ಮತ್ತು ಹರೀಶ್ ಚಿತ್ರ ನಿರ್ದೇಶನದಲ್ಲಿ ಮಲ್ಹಾರ್ ಎಂಬ ಹಿಂದಿ ಚಿತ್ರವನ್ನು ನಿರ್ಮಿಸಿದರು. ಸುಮಧುರ ಹಾಡುಗಳಿದ್ದರೂ ಚಿತ್ರ ಜಯಗಳಿಸಲಿಲ್ಲ. ೧೯೫೬ರಲ್ಲಿ ಮುಕೇಶ್ ಫಿಲ್ಮ್‌ಸ್ ಎಂಬ ಲಾಂಛನದಡಿಯಲ್ಲಿ ತಾನು ಅಭಿನಯಿಸಿ, ಉಷಾ ಕಿರಣ್ ಮತ್ತು ಮೃದುಲಾ ನಾಯಕಿಯರಾಗಿರುವ ಅನುರಾಗ್ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರದ ಸಂಗೀತವನ್ನು ತಾವೇ ನಿರ್ದೇಶಿಸಿದಲ್ಲದೆ, ಮೂರು ಗೀತೆಗಳನ್ನೂ ಬರೆದು ಹಾಡಿದರು. ದುರದೃಷ್ಟವಶಾತ್ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸೋತು, ಮುಕೇಶರಿಗೆ ಅಪಾರ ನಷ್ಟವಾಯಿತು. ಝೂಟೇ ಬಂಧನ್ ಎಂಬ ಚಿತ್ರ ನಿರ್ಮಿಸುವದಾಗಿ ಪ್ರಕಟಿಸಿದರೂ ಅದಾಗಲಿಲ್ಲ. ೧೯೫೩ರಲ್ಲೇ ಬಿಡುಗಡೆಯಾದ ರಾಜ್ ಕಪೂರರ ಆಹ್ ನಲ್ಲಿ ‘ಛೋಟಿಸೀ ಯಹ್ ಜಿಂದ್‌ಗಾನೀರೇ...’ ಎಂಬ ಹಾಡನ್ನು ಟಾಂಗೇವಾಲನಾಗಿ ಹಾಡಿ ಅಭಿನಯಿಸಿದ ನಂತರ ಮುಕೇಶ್ ಅಭಿನಯಕ್ಕೆ ವಿದಾಯ ಹೇಳಿ ಗಾಯನಕ್ಕೇ ಮುಡಿಪಿಟ್ಟರು.

ಮತ್ತೆ ಹಿನ್ನೆಲೆಗೆ

[ಬದಲಾಯಿಸಿ]

ಆದರೆ ಈ ಸಮಯಕ್ಕೆ ಮುಕೇಶ್ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಮತ್ತೆ ನಿರ್ಮಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದುಬಿಟ್ಟಿತ್ತು. ಸುಮಾರು ಐದು ವರ್ಷಗಳವರೆಗೆ ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯದೆ ಆರ್ಥಿಕಸ್ಥಿತಿ ತುಂಬಾ ಹದಗೆಟ್ಟಿತ್ತು. ೧೯೫೮ರಲ್ಲಿ ದಿಲೀಪ್ ಕುಮಾರ್ ಅಭಿನಯದ ಯಹೂದಿ ಚಿತ್ರದ ‘ಯೆಹ್ ಮೇರಾ ದೀವಾನಾಪನ್ ಹೈ...’ ಹಾಡು ಬಿಡುಗಡೆಯಾದಾಗ ಮುಕೇಶ್ ಮತ್ತೆ ಚಲನಚಿತ್ರಾಕಾಶದಲ್ಲಿ ಹೊಳೆಯುವ ತಾರೆಯಾದರು. ದಿಲೀಪ್ ಕುಮಾರನ ಆ ವರ್ಷದ ಇನ್ನೊಂದು ಚಿತ್ರ ಬಿಮಲ್ ರಾಯ್ ನಿರ್ದೇಶನದ ಮಧುಮತಿ ಚಿತ್ರದಲ್ಲಿ ಸಲಿಲ್ ಚೌಧುರಿ ಸಂಗೀತ ನಿರ್ದೇಶನದಲ್ಲಿ ಹಾಡಿದ ಎಲ್ಲವೂ ಜನಪ್ರಿಯವಾದವು. ಅಲ್ಲದೆ ಪರ್ವರಿಶ್ ಹಾಗೂ ಮರುವರ್ಷದ ಫಿರ್ ಸುಬಾಹ್ ಹೋಗೀ ಚಿತ್ರಗಳ ಹಾಡುಗಳ ಜತೆಗೆ ೧೯೬೦ರಿಂದ ೧೯೭೬ರ ವರೆಗಿನ ಸಮಯದಲ್ಲಿ ಅತ್ಯಂತ ಹೃದಯಂಗಮ ಹಾಡುಗಳಿಂದ ಮುಕೇಶ್ ರಸಿಕರನ್ನು ರಂಜಿಸಿದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ಒಮ್ಮೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಶ್ರೇಷ್ಠ ಹಿನ್ನೆಲೆ ಗಾಯನಕ್ಕಾಗಿ ಪಡೆದರು.

ರಾಜ್ ಕಪೂರರ ಸಂಗೀತಸ್ವರವೆಂದು ಗುರುತಿಸಲ್ಪಟ್ಟ ಮುಕೇಶ್ ಮನೋಜ್ ಕುಮಾರನಿಗೇ ಹೆಚ್ಚು ಹಾಡಿದರಲ್ಲದೆ, ಶಂಕರ್-ಜೈಕಿಶನರ ಸಂಗೀತ ನಿರ್ದೇಶನಕ್ಕಿಂತ ಅಧಿಕವಾಗಿ ಕಲ್ಯಾಣ್‌ಜೀ-ಆನಂದ್‌ಜೀಯವರ ನಿರ್ದೇಶನದಲ್ಲಿ ಹಾಡಿದರು. ರಾಜ್ ಕಪೂರರ ಸತ್ಯಮ್ ಶಿವಮ್ ಸುಂದರಮ್ ಚಿತ್ರದಲ್ಲಿ ಲಕ್ಷ್ಮೀಕಾಂತ್-ಪ್ಯಾರೇಲಾಲರ ಸಂಗೀತ ನಿರ್ದೇಶನದಲ್ಲಿ ಧ್ವನಿಮುದ್ರಿಸಲ್ಪಟ್ಟ ‘ಚಂಚಲ್, ಶೀತಲ್, ನಿರ್ಮಲ್, ಕೋಮಲ್ ಸಂಗೀತ್ ಕೀ ದೇವೀ ಸ್ವರ್ ಸಜ್‌ನೀ’ ಹಾಡು ಕೊನೆಯದಾಯಿತು. ನಂತರ ಅವರು ಲತಾ ಜತೆಗೂಡಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸಂಗೀತ ಪರ್ಯಟನೆಗೆ ಹೋದರು.

ಗಾಯನ ವೈಖರಿ ಮತ್ತು ವೈವಿಧ್ಯ

[ಬದಲಾಯಿಸಿ]

ಎದೆ ತುಂಬುವ ಹಾಡುಗಳು

[ಬದಲಾಯಿಸಿ]

ಮುಕೇಶರಿಗೆ ಹಾಡಿನ ಸನ್ನಿವೇಶವನ್ನು ವಿವರಿಸಿದಂತೆಯೇ ತಾನು ಹಿನ್ನೆಲೆ ಗಾಯನವನ್ನು ನೀಡುವ ಪಾತ್ರದ ಒಳಹೊಕ್ಕು ಅದರ ಸಂವೇದನೆಯನ್ನು ಅನುಭವಿಸಿ, ತಕ್ಕಂತೆ ಹಾಡುವ ಸಾಮರ್ಥ್ಯವಿತ್ತು. ಉದಾಹರಣೆಗೆ ಈ ಮುಂದಿನ ಹಾಡುಗಳನ್ನು ಗಮನಿಸಬಹುದು.

ಅಫ್‌ಸಾನಾ (೧೯೫೧) ಚಿತ್ರದ ‘ಕಿಸ್‌ಮತ್ ಬಿಗ್‌ಡೀ, ದುನಿಯಾ ಬದ್‌ಲೀ’

ಯಹೂದೀ ಚಿತ್ರದ ‘ಯೆಹ್ ಮೇರಾ ದೀವಾನಾಪನ್ ಹೈ’

ದೇವರ್ ಚಿತ್ರದ ‘ಬಹಾರೋಂ ನೆ ಮೇರಾ ಚಮನ್ ಲೂಟ್ ಕರ್, ಇತ್ಯಾದಿ.

ಅಲ್ಲದೆ, ಆನಂದ್ ಚಿತ್ರದ ‘ಕಹಿಂ ದೂರ್ ಜಬ್ ದಿನ್ ಡಲ್ ಜಾಏ...’ ಹಾಡಿನಲ್ಲಿ ಮಾಧುರ್ಯದ ಜತೆ ದುಃಖದ ಒಳತೋಟಿಯೊಂದು ಹರಿಯುವದನ್ನು ಅನುಭವಿಸಬಹುದು. ಆ ಚಿತ್ರದ ಪಾತ್ರ ಆನಂದ್ ಹೇಳುವಂತೆ ದುಃಖದಲ್ಲೂ ಸೌಂದರ್ಯವನ್ನು ಕಾಣಬಹುದು.

ವೈವಿಧ್ಯ

[ಬದಲಾಯಿಸಿ]

ಆದರೆ ಶೋಕಭರಿತ ಹಾಡುಗಳಷ್ಟೇ ಅಲ್ಲ; ಛೇಡಿಸುವ ಪ್ರೇಮನಿವೇದನೆಯ ಹಾಡುಗಳೂ ಬಹಳಷ್ಟಿವೆ. ಮನ್‌ಚಲೀ ಚಿತ್ರದ ‘ತನ್ ಮನ್ ಧನ್ ಸಬ್ ಹೈ ತೇರಾ..’ ದೇವರ ಭಜನೆಯಂತೆ ತೋರುವ ತುಂಟತನದ ಹಾಡು. ಅಂತೆಯೇ ಶಾರದಾ ಚಿತ್ರದ ‘ಜಪ್ ಜಪ್ ಜಪ್ ರೇ ಮನ್‌ವಾ ಜಪ್ ರೇ ಪ್ರೀತ್ ಕೀ ಮಾಲಾ...’ ಎಂಬ ಹಾಡೂ ಕೂಡಾ. ಹೆಚ್ಚಾಗಿ ಕೇಳಿರಲಾರದ ಹಾಡುಗಳು, ಸಸುರಾಲ್ ಚಿತ್ರದ ‘ಅಪ್ನೆ ಉಲ್ಫತ್ ಪೆ ಜಮಾನೇ ಕಾ ಪೆಹ್‌ರಾ ಹೋತಾ...’ ; ಮುಹಬ್ಬತ್ ಇಸ್ಕೋ ಕಹತೇ ಹೈಂ ಚಿತ್ರದ ‘ಇತ್ನಾ ಹುಸ್ನ್ ಪೆ ಹುಜೂರ್ ನ ಗುರೂರ್ ಕೀಜಿಎ...’; ಎಕ್ ಬಾರ್ ಮುಸ್ಕುರಾ ದೋ ಚಿತ್ರ ದ ‘ಚೆಹೆರೇ ಪೆ ಜರಾ ಆಂಚಲ್..’ ; ಇತ್ಯಾದಿ. ೧೯೫೯ರ ಫಿರ್ ಸುಬ್‌ಹಾ ಹೋಗೀ ಚಿತ್ರದ ‘ಚೀನೋ ಅರಬ್ ಹಮಾರ, ಹಿಂದೂಸ್ತಾನ್ ಹಮಾರಾ, ರಹನೇ ಕೋ ಘರ್ ನಹೀಂ ಹೈ, ಸಾರಾ ಜಹಾಂ ಹಮಾರಾ..’ ಎಂಬ ಸಾಮಾಜಿಕ ವಿಡಂಬನೆಯ ಹಾಡನ್ನು ಕಳಕಳಿಯ ನೋವಿನಿಂದ ಕೂಡಿದ ದನಿಯಲ್ಲಿ ಹಾಡಿದ ವೈಶಿಷ್ಟ್ಯ ಮುಕೇಶರದು!

೫೩ನೇ ಹುಟ್ಟುಹಬ್ಬವನ್ನು ಮತ್ತು ವಿವಾಹದ ಮೂವತ್ತನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ೨೭ನೇ ಜುಲೈ ೧೯೭೬ರಂದು ಲತಾ ಮಂಗೇಶ್ಕರರೊಡನೆ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಹೋದ ಮುಕೇಶ್ ಸರೀ ಒಂದು ತಿಂಗಳವರೆಗೆ ಆ ದೇಶದ ಹಲವೆಡೆ ತಮ್ಮ ಸ್ವರ ಮಾಧುರ್ಯದಿಂದ ರಸಿಕರನ್ನು ರಂಜಿಸಿ ಮಿಶಿಗನ್ ಸಂಸ್ಥಾನದ ಡೆಟ್ರಾಯಿಟ್‌ನಲ್ಲಿದ್ದರು. ರಂಗದ ಮೇಲೆ ಬರುತ್ತಿದ್ದಂತೆಯೇ ಹೃದಯಸ್ತಂಭನದಿಂದ ಅನಿರೀಕ್ಷಿತವಾಗಿ ನಿಧನಿಸಿದರು. ಬಳಿಕ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ತಂದು ಅಂತಿಮ ಕ್ರಿಯೆಗಳನ್ನು ನಡೆಸಲಾಯಿತು.

ಅದರ ಮುಂದಿನ ವರ್ಷ ಮುಕೇಶರ ಹಾಡುಗಳಿರುವ ಧರಮ್ ವೀರ್, ಅಮರ್ ಅಕ್ಬರ್ ಆಂಟನಿ, ಖೇಲ್ ಖಿಲಾಡೀಕಾ, ದರಿಂದಾ, ಚಾಂದೀ ಸೋನಾ, ಮೊದಲಾದ ಅನೇಕ ಚಿತ್ರಗಳು ಬಿಡುಗಡೆಯಾದವು. ೧೯೭೮ರಲ್ಲಿ ಆಹುತಿ, ತುಮ್ಹಾರೀ ಕಸಮ್ ಮತ್ತು ಸತ್ಯಮ್ ಶಿವಮ್ ಸುಂದರಮ್ ಬಿಡುಗಡೆಯಾದವು. ನಂತರವೂ ವರ್ಷಕ್ಕೆ ಒಂದೆರಡು ಚಿತ್ರಗಳಂತೆ ೧೯೯೭ರವರೆಗೂ ಅವರ ಹಿನ್ನೆಲೆ ಗಾಯನವಿರುವ ಚಿತ್ರಗಳು ಬಿಡುಗಡೆಯಾದವು. ಹೀಗೆ ತೆರೆ ಕಂಡ ಕೊನೆಯ ಚಿತ್ರ ಚಾಂದ್ ಗ್ರಹಣ್.

ಜೀವನದ ಮುಖ್ಯ ಘಟ್ಟಗಳು

[ಬದಲಾಯಿಸಿ]

೧೯೨೩ - ಜನನ

೧೯೪೦ - ಪ್ರಪ್ರಥಮ ಧ್ವನಿ ಮುದ್ರಣ: ದಿಲ್ಲಿಯ ಎಚ್ ಎಮ್ ವಿ ಕಂಪನಿಯಲ್ಲಿ.

೧೯೪೧ - ಅಭಿನಯಿಸಿದ ಮೊದಲ ಚಿತ್ರ ನಿರ್ದೋಷ್

೧೯೪೫ - ಮೊದಲ ಹಿನ್ನೆಲೆ ಗಾಯನ: ಪೆಹೆಲೀ ನಜರ್ ಚಿತ್ರಕ್ಕೆ, ‘ದಿಲ್ ಜಲ್‌ತಾ ಹೈ ತೋ ಜಲ್‌ನೇ ದೇ’

೧೯೪೬ - ಸರಳಾ ತ್ರಿವೇದಿಯವರೊಡನೆ ವಿವಾಹ.

೧೯೪೮ - ರಾಜ್ ಕಪೂರರ ನಿರ್ಮಾಣದ ಮೊದಲ ಚಿತ್ರ ಆಗ್ ಗೆ ಗಾಯನ.

೧೯೫೩ - ಅಭಿನಯಿಸಿದ ಕೊನೆಯ ಚಿತ್ರ, ರಾಜ್ ಕಪೂರರ ಆಹ್. ಹಾಡು ‘ಛೋಟೀಸೀ ಯೆಹ್ ಜಿಂದಗಾನೀ ರೇ..’

೧೯೫೯ - ಮೊದಲ ಫಿಲ್ಮ್ ಫೇರ್ ಪ್ರಶಸ್ತಿ: ರಾಜ್ ಕಪೂರರ ಅನಾಡಿ ಚಿತ್ರದ ಹಾಡಿಗೆ.

೧೯೬೨ - ಲಂಡನ್, ಇಂಗ್ಲೆಂಡಲ್ಲಿ ಸಂಗೀತ ಮೇಳ. ಬಿ ಬಿ ಸಿ ಯಲ್ಲಿ ಸಂದರ್ಶನ.

೧೯೭೪ - ರಾಷ್ಟ್ರೀಯ ಪ್ರಶಸ್ತಿ - ರಜನೀಗಂಧ ಚಿತ್ರದ ’ಕಈ ಬಾರ್ ಯೊಂಹಿ ದೇಖಾ ಹೈ...’ ಹಾಡಿಗೆ.

೧೯೭೬ - ನಿಧನ.

ಪ್ರಶಸ್ತಿಗಳು

[ಬದಲಾಯಿಸಿ]

ರಾಷ್ಟ್ರೀಯ ಪ್ರಶಸ್ತಿಗಳು

[ಬದಲಾಯಿಸಿ]

೧೯೭೪ - ರಜನೀಗಂಧ ಚಿತ್ರದ ’ಕಯಿ ಬಾರ್ ಯೂಂಹಿ ದೇಖಾ ಹೈ...’ ಹಾಡಿಗೆ.

೧೯೫೯ - ಅನಾಡಿ ಚಿತ್ರದ ‘ಸಬ್ ಕುಛ್ ಸೀಖಾ ಹಮ್ನೇ..’ ಹಾಡಿಗೆ.

೧೯೭೦ - ಪಹಚಾನ್ ಚಿತ್ರದ ‘ಸಬ್ ಸೆ ಬಡಾ ನಾದಾನ್..’ ಹಾಡಿಗೆ.

೧೯೭೨ - ಬೇಈಮಾನ್ ಚಿತ್ರದ ಜೈ ಬೋಲೋ ಬೆಈಮಾನ್ ಕೀ ಹಾಡಿಗೆ.

೧೯೭೬ - ಕಭೀ-ಕಭೀ ಚಿತ್ರದ ‘ಕಭೀ ಕಭೀ ಮೇರೇ ದಿಲ್ ಮೇಂ...’ ಹಾಡಿಗೆ.

ವಿವಿಧ ಮೂಲಗಳು

ಬಾಹ್ಯ ಕೊಂಡಿಗಳು

[ಬದಲಾಯಿಸಿ]