ನರ್ಗಿಸ್
ನರ್ಗಿಸ್ ದತ್ | |
---|---|
ಜನನ | ಫತೀಮಾ ರಶೀದ್ ಜೂನ್ ೧, ೧೯೨೯ ಕಲ್ಕತ್ತಾ |
ಮರಣ | ಮೇ ೩, ೧೯೮೧ ಮುಂಬಯಿ |
ವೃತ್ತಿ | ಚಲನಚಿತ್ರ ಅಭಿನೇತ್ರಿ |
ಸಕ್ರಿಯ ವರ್ಷಗಳು | ೧೯೩೫, ೧೯೪೨–೧೯೬೭ |
ಸಂಗಾತಿ | ಸುನಿಲ್ ದತ್ |
ಮಕ್ಕಳು | ಸಂಜಯ್ ದತ್ ನಮ್ರತಾ ದತ್ ಪ್ರಿಯಾ ದತ್ |
ಭಾರತೀಯ ಚಲನಚಿತ್ರರಂಗವನ್ನು ಬೆಳಗಿದ ತಾರೆಯರಲ್ಲಿ ನರ್ಗಿಸ್ ದತ್ ಪ್ರಕಾಶಮಾನರೆನಿಸಿದವರು. [೧] ಅವರ ಮೂಲ ಹೆಸರು ಫತೀಮಾ ರಶೀದ್. ನರ್ಗಿಸ್ ಎಂಬುದು ಪರ್ಷಿಯನ್ ಪದವಾಗಿದ್ದು ಸುಂದರವಾದ ಹೂವಿನ ಅರ್ಥವನ್ನು ಬಿಂಬಿಸುತ್ತದೆ.
ಕೌಟುಂಬಿಕ ಹಿನ್ನೆಲೆ
[ಬದಲಾಯಿಸಿ]ನರ್ಗಿಸ್ ಜೂನ್ ೧, ೧೯೨೯ರ ವರ್ಷದಲ್ಲಿ ಕಲ್ಕತ್ತಾದಲ್ಲಿ ಜನಿಸಿದರು. ನರ್ಗಿಸ್ ದತ್ತರ ತಂದೆ ಅಬ್ದುಲ್ ರಶೀದ್. ಅವರ ತಾಯಿ ಜದ್ದಾನ್ ಬಾಯಿ ಹಿಂದೂಸ್ತಾನಿ ಸಂಗೀತಗಾರ್ತಿ. ಅಲಹಾಬಾದಿನಿಂದ ಪಂಜಾಬಿಗೆ ವಲಸೆ ಬಂದ ಮುಸಲ್ಮಾನ ಕುಟುಂಬದಕ್ಕೆ ಸೇರಿದವರಾಗಿದ್ದರು. ಜದ್ದಾನ್ ಬಾಯಿ ಉತ್ತಮ ಹಿಂದೂಸ್ಥಾನಿ ಸಂಗೀತಗಾರ್ತಿಯಾಗಿದ್ದು ಅಲಹಾಬಾದಿನ ಆಸ್ಥಾನ ಕಲಾವಿದೆಯಾಗಿದ್ದರು. ಜದ್ದಾನ್ ಬಾಯಿ ತಮ್ಮ ಮಗಳನ್ನು ಮತ್ತು ಬೇರೊಬ್ಬ ಪತಿಗೆ ಜನಿಸಿದ ತಮ್ಮ ಮಗ ಅನ್ವರ್ ಹುಸೇನನ್ನು ಆಗತಾನೇ ಪ್ರವರ್ಧಮಾನದಲ್ಲಿದ್ದ ಭಾರತೀಯ ಚಿತ್ರರಂಗವೆಂಬ ಕಲಾಲೋಕಕ್ಕೆ ಪರಿಚಯಿಸಿದರು.
ಚಿತ್ರರಂಗದ ಜನಪ್ರಿಯತೆಯಲ್ಲಿ
[ಬದಲಾಯಿಸಿ]೧೯೩೫ರ ವರ್ಷದಲ್ಲಿ ತೆರೆಕಂಡ ‘ತಲಾಶ್-ಎ-ಹಕ್’ ನರ್ಗಿಸ್ ಬಾಲನಟಿಯಾಗಿ ತಮ್ಮ ಆರನೆಯ ವರ್ಷದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಚಿತ್ರ. ನರ್ಗಿಸ್ ಮುಂದೆ ತಮ್ಮ ಹದಿನಾಲ್ಕರ ಹರಯದಿಂದಲೇ ಪ್ರೌಢ ಪಾತ್ರಗಳಲ್ಲಿ ಅಭಿನಯಿಸತೊಡಗಿದರು. ೧೯೪೨ರಲ್ಲಿ ತೆರೆಗೆ ಬಂದ ‘ತಮನ್ನಾ’ ಅವರ ಚಲನಚಿತ್ರ ವೃತ್ತಿಗೆ ಪ್ರಾರಂಭ ಕೊಟ್ಟ ಚಿತ್ರ. ೧೯೪೦ರ ದಶಕದಿಂದ ೧೯೬೦ರ ದಶಕದವರೆವಿಗೆ ವ್ಯಾಪಿಸಿದ್ದ ನರ್ಗಿಸ್ ಅವರ ಚಿತ್ರರಂಗದ ಬದುಕು ಅತ್ಯಂತ ಜನಪ್ರಿಯ ಮತ್ತು ಉತ್ತಮ ವಿಮರ್ಶೆಗೆ ಅರ್ಹವೆನಿಸಿದ ಹಲವಾರು ಚಿತ್ರಗಳನ್ನು ಒಳಗೊಂಡಿವೆ. ಇವುಗಳಲ್ಲಿ ೧೯೪೯ರ ‘ಬರ್ಸಾತ್’ ಮತ್ತು ‘ಅಂದಾಜ್’; ೧೯೫೧ರ ‘ಆವಾರಾ’ ಮತ್ತು ‘ದೀದಾರ್’; ೧೯೫೫ರ ‘ಶ್ರೀ ೪೨೦’ ಮತ್ತು ೧೯೫೬ರ ‘ಚೋರಿ ಚೋರಿ’ ಅತ್ಯಂತ ಜನಪ್ರಿಯ ಚಿತ್ರಗಳಾಗಿದ್ದವು. ಅವರು ನಟಿಸಿದ ಬಹುತೇಕ ಚಿತ್ರಗಳ ನಾಯಕರು ಅಂದಿನ ಮೇರು ನಟರೆನಿಸಿದ್ದ ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್.
ಶ್ರೇಷ್ಠ ಅಭಿನಯ
[ಬದಲಾಯಿಸಿ]೧೯೫೭ರ ವರ್ಷದಲ್ಲಿ ತೆರೆಕಂಡ ‘ಮದರ್ ಇಂಡಿಯಾ’ ಚಿತ್ರದಲ್ಲಿ ನರ್ಗಿಸ್ ಅವರ ಅಭಿನಯ ವಿಶ್ವ ಪ್ರಸಿದ್ಧ ಅಕಾಡೆಮಿ ಪ್ರಶಸ್ತಿ ಗಳಿಗೆ ನಾಮಾಂಕಿತಗೊಂಡಿತ್ತು. ಆ ಚಿತ್ರ ಅವರಿಗೆ ೧೯೫೮ರ ಫಿಲಂ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು.[೨] ೧೯೫೮ರ ವರ್ಷದಲ್ಲಿ ನರ್ಗಿಸ್ ಅವರು ಆ ಚಿತ್ರದಲ್ಲಿ ತಮ್ಮೊಂದಿಗೆ ಅಭಿನಯಿಸಿದ್ದ ಸುನಿತ್ ದತ್ ಅವರನ್ನು ವರಿಸಿ ಚಿತ್ರರಂಗದಿಂದ ಬಹುತೇಕವಾಗಿ ತೆರೆಯ ಮರೆಗೆ ಸರಿದರು. ಆ ನಂತರದಲ್ಲಿ ಸಹಾ ನರ್ಗಿಸ್ ಒಮ್ಮೊಮ್ಮೆ ಚಿತ್ರರಂಗದಲ್ಲಿ ಕಾಣಿಸಿಕೊಂಡದ್ದುಂಟು. ಅಂತಹ ಚಿತ್ರಗಳಲ್ಲಿ ಒಂದಾದ ೧೯೬೭ರ ವರ್ಷದಲ್ಲಿ ತೆರೆಕಂಡ ‘ರಾತ್ ಔರ್ ದಿನ್’ ಚಿತ್ರದ ಅಭಿನಯಕ್ಕೆ ಅವರಿಗೆ ಅದೇ ವರ್ಷ ಆರಂಭವಾದ ಪ್ರಥಮ ರಾಷ್ಟ್ರೀಯ ಪ್ರಶಸ್ತಿ ಸಂದಿತು.
ಸಾರ್ವಜನಿಕ ಸೇವೆಯಲ್ಲಿ
[ಬದಲಾಯಿಸಿ]ತಮ್ಮ ಪತಿ ಸುನಿಲ್ ದತ್ ಅವರೊಡಗೂಡಿ ನರ್ಗಿಸ್ ದತ್ ಅವರು ಅಜಂತಾ ಆರ್ಟ್ಸ್ ಕಲ್ಚರಲ್ ಟ್ರೂಪ್ಸ್ ಸಂಸ್ಥೆಯನ್ನು ಸ್ಥಾಪಿಸಿ ಆ ಕಾಲದ ಶ್ರೇಷ್ಠ ಕಲಾವಿದರು ಮತ್ತು ಗಾಯರನ್ನು ಒಂದುಗೂಡಿಸಿ ಗಡಿಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ನರ್ಗಿಸ್ ದತ್ ೧೯೭೦ರ ವರ್ಷದಲ್ಲಿ ದೈಹಿಕ ಮತ್ತು ಮಾನಸಿಕ ವಿಕಲತೆಗಳಿಗೆ ಒಳಗಾದ ಮಕ್ಕಳ ಕ್ಷೇಮಾಭಿವೃದ್ಧಿಗಾಗಿನ ‘ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಇಂಡಿಯಾ’ ಸಂಸ್ಥೆಯ ಪ್ರಥಮ ಪೋಷಕರಾಗಿ ಅದಕ್ಕಾಗಿ ಅಹರ್ನಿಶಿ ದುಡಿದು ಸಮಾಜ ಸೇವಕಿ ಎನಿಸಿದ ಹೃದಯವಂತೆ. ೧೯೮೦ರ ವರ್ಷದಲ್ಲಿ ಅವರು ರಾಜ್ಯ ಸಭೆಯ ಸದಸ್ಯರಾಗಿ ಗೌರವಿಸಲ್ಪಟ್ಟರು.
ನರ್ಗಿಸ್ ಸುನಿಲ್ ದತ್ ಕುಟುಂಬ
[ಬದಲಾಯಿಸಿ]ನರ್ಗಿಸರ ಪತಿ ಸುನಿಲ್ ದತ್ ಅವರೂ ಚಿತ್ರರಂಗ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಂಭಾವಿತ ವ್ಯಕ್ತಿ ಎನಿಸಿದ್ದರು. ಸಂಜಯ್, ಪ್ರಿಯಾ ಮತ್ತು ನಮ್ರತಾ ಈ ಮೂವರು ನರ್ಗಿಸ್ – ಸುನಿಲ್ ದತ್ ದಂಪತಿಗಳ ಮೂರು ಮಕ್ಕಳು.
ವಿದಾಯ ಮತ್ತು ಸ್ಮರಣೆ
[ಬದಲಾಯಿಸಿ]ನರ್ಗಿಸ್ ಅವರು ಮೇ ೭, ೧೯೮೧ರ ವರ್ಷದಲ್ಲಿ ಪಿತ್ತಜನಕಾಂಗದ ಕ್ಯಾನ್ಸರ್ ಕಾಯಿಲೆಗೆ ತಮ್ಮ ಜೀವವನ್ನು ಶರಣಾಗಿಸಿದರು. [೩]೧೯೮೨ರ ವರ್ಷದಲ್ಲಿ ಅವರ ಸ್ಮರಣಾರ್ಥವಾಗಿ ನರ್ಗಿಸ್ ದತ್ ಮೆಮೋರಿಯಲ್ ಕ್ಯಾನ್ಸರ್ ಫೌಂಡೇಶನ್ ಸ್ಥಾಪಿತಗೊಂಡಿತು. ಅವರು ಚಲನಚಿತ್ರರಂಗ ಮತ್ತು ಸಮಾಜಕ್ಕೆ ಸಲ್ಲಿಸಿದ ಶ್ರೇಷ್ಠ ಸೇವೆಯ ಗೌರವಾರ್ಥವಾಗಿ ‘ನರ್ಗಿಸ್ ದತ್ ರಾಷ್ಟ್ರೀಯ ಭಾವೈಕ್ಯತೆಗಾಗಿನ ಶ್ರೇಷ್ಠ ಚಿತ್ರ ಪ್ರಶಸ್ತಿ’ಯನ್ನು ಸ್ಥಾಪಿಸಲಾಯಿತು. ಒಂದು ಪ್ರಮುಖ ರಸ್ತೆಗೆ ಅವರ ಹೆಸರನ್ನಿಡಲಾಯಿತು.
ಶ್ರೇಷ್ಠತೆಗೆ ಸಂದ ಪ್ರಶಂಸೆ
[ಬದಲಾಯಿಸಿ]೨೦೦೧ರಲ್ಲಿ ನರ್ಗಿಸ್ ಅವರನ್ನು ಶತಮಾನದ ಶ್ರೇಷ್ಠ ನಟಿ ಎಂದು ಹೆಸರಿಸಲಾಯಿತು. ೨೦೧೧ರಲ್ಲಿ ರೀಡಿಫ್.ಕಾಂ ಸಂಸ್ಥೆ ನರ್ಗಿಸ್ ಅವರನ್ನು ಸಾರ್ವಕಾಲಿಕವಾದ ಶ್ರೇಷ್ಠ ನಟಿ ಎಂದು ಹೆಸರಿಸುತ್ತಾ “ವೈವಿದ್ಯತೆ, ಅಭಿವ್ಯಕ್ತಿ, ಪ್ರಸನ್ನತೆ ಮತ್ತು ಅಪ್ಯಾಯಮಾನತೆಗಳ ಸಂಗಮವನ್ನು ಬಿಂಬಿಸುವ ಸಂಭ್ರಮದ ನಟಿ ನರ್ಗಿಸ್ ದತ್’’ ಎಂದು ವರ್ಣಿಸಿತು. ಟ್ರಿಬ್ಯೂನ್ ಪತ್ರಿಕೆ “ನರ್ಗಿಸ್ ಅವರು ಸೌಂಧರ್ಯ ಮತ್ತು ಕಲಾತ್ಮಕತೆಯ ಅಭಿವ್ಯಕ್ತಿ ಇವೆರಡನ್ನೂ ಅತ್ಯಂತ ಪ್ರಶಂಸನೀಯವೆನ್ನುವಂತ ಸುಲಭತೆಯಲ್ಲಿ ನಿರ್ವಹಿಸಿದ ಅಮೋಘ ಪ್ರತಿಭೆ” ಎಂದು ವರ್ಣಿಸಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://www.imdb.com/name/nm0004291/bio
- ↑ "ಆರ್ಕೈವ್ ನಕಲು". Archived from the original on 2016-08-18. Retrieved 2019-08-01.
- ↑ https://www.freepressjournal.in/entertainment/nargis-and-sunil-dutts-love-story-is-nothing-less-than-a-fairy-tale-romance