ವಿಷಯಕ್ಕೆ ಹೋಗು

ಮಾರ್ಟಿನ್‌ ಬುಬರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Martin Buber
ಜನನFebruary 8, 1878
Vienna, Austria
ಮರಣJune 13, 1965(1965-06-13) (aged 87)
Jerusalem, Israel
ಕಾಲಮಾನ20th-century philosophy
ಪ್ರದೇಶWestern Philosophy
ಪರಂಪರೆExistentialism
ಮುಖ್ಯ  ಹವ್ಯಾಸಗಳುOntology
ಗಮನಾರ್ಹ ಚಿಂತನೆಗಳುIch-Du and Ich-Es

ಮಾರ್ಟಿನ್‌ ಬುಬರ್‌ (ಹೀಬ್ರೂ:מרטין בובר; ಫೆಬ್ರವರಿ ೮, ೧೮೭೮ – ಜೂನ್ ೧೩, ೧೯೬೫) ಓರ್ವ ಆಸ್ಟ್ರಿಯಾದಲ್ಲಿ ಜನಿಸಿದ ಯಹೂದಿ ತತ್ವಶಾಸ್ತ್ರಜ್ಞರಾಗಿದ್ದರು. ನಾನು-ನೀನು ನಡುವಣ ಸಂಬಂಧ ಹಾಗೂ ನಾನು-ಅದು ನಡುವಣ ಸಂಬಂಧವನ್ನು ಕೇಂದ್ರವಾಗಿರಿಸಿಕೊಂಡ 'ಫಿಲಾಸಫಿ ಆಫ್ ಡೈಲಾಗ್' ಎಂಬ ಧಾರ್ಮಿಕ ಅಸ್ತಿತ್ವಧರ್ಮವನ್ನು ಮಂಡಿಸಿದುದಕ್ಕಾಗಿ ಅವರು ಹೆಸರುವಾಸಿಯಾದರು.[೧]

ವಿಯೆನ್ನಾದಲ್ಲಿ ಜನ್ಮ ತಾಳಿದ ಬುಬರ್ ಸಂಪ್ರದಾಯಸ್ಥ ಯಹೂದಿ ಕುಟುಂಬಕ್ಕೆ ಸೇರಿದವರಾಗಿದ್ದರು, ಆದರೆ ಯಹೂದಿ ರೀತಿರಿವಾಜುಗಳನ್ನು ಕೈಬಿಟ್ಟು ತತ್ವಶಾಸ್ತ್ರದಲ್ಲಿನ ಜಾತ್ಯತೀತ ಅಧ್ಯಯನದಲ್ಲಿ ತೊಡಗಿದರು. ೧೯೦೨ರಲ್ಲಿ ಬುಬರ್ ಡೈ ವೆಲ್ಟ್ ಎಂಬ ವಾರಪತ್ರಿಕೆಯ ಸಂಪಾದಕರಾದರು; ಈ ಪತ್ರಿಕೆಯು ಝಿಯಾನಿಸ್ಟ್ ಚಳುವಳಿಯ ಪ್ರಮುಖ ಅಂಗವಾಗಿದ್ದಿತು; ನಂತರದ ದಿನಗಳಲ್ಲಿ ಬುಬರ್ ಝಿಯಾನಿಸಂ ಕಾರ್ಯಗಳಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟುಬಿಟ್ಟರು. ೧೯೨೩ರಲ್ಲಿ ಬುಬರ್ ತಮಗೆ ಖ್ಯಾತಿ ತಂದಂತಹ ಅಸ್ತಿತ್ವಧರ್ಮಕ್ಕೆ ಸಂಬಂಧಿಸಿದ ಪ್ರಬಂಧವಾದ ಇಖ್ ಉಂಡ್ ಡು (ನಂತರ ಇಂಗ್ಲಿಷ್ ನಲ್ಲಿ ಈ ಪ್ರಬಂಧವು ಐ ಎಂಡ್ ದೌ ಎಂದು ಅನುವಾದಗೊಂಡಿತು) ಬರೆದರು, ಹಾಗೂ ೧೯೨೫ರಲ್ಲಿ ಅವರು ಹೀಬ್ರೂ ಬೈಬಲ್ ಅನ್ನು ಜರ್ಮನ್ ಭಾಷೆಗೆ ತರ್ಜುಮೆ ಮಾಡಲು ಆರಂಭಿಸಿದರು.

೧೯೩೦ರಲ್ಲಿ ಬುಬರ್ ಯೂನಿವರ್ಸಿಟಿ ಆಫ್ ಫ್ರಾಂಕ್ ಫರ್ಟ್ ಆಮ್ ಮೇಯ್ನ್ ನಲ್ಲಿ ಗೌರವ ಪ್ರಾಧ್ಯಾಪಕರಾದರು ಹಾಗೂ ಅಡಾಲ್ಫ್ ಹಿಟ್ಲರ್ ೧೯೩೩ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ವಿರೋಧಿಸಿ ತಮ್ಮ ಪ್ರೊಫೆಸರ್ ಗಿರಿಗೆ ರಾಜೀನಾಮೆ ಇತ್ತರು. ಅವರು ನಂತರ ಸೆಂಟ್ರಲ್ ಆಫೀಸ್ ಆಫ್ ಜ್ಯೂಯಿಷ್ ಎಜುಕೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು; ಜರ್ಮನ್ ಸರ್ಕಾರವು ಸಾರ್ವಜನಿಕ ಶಿಕ್ಷಣಕ್ಕೆ ಯಹೂದಿಗಳನ್ನು ಸೇರಿಸುವುದಕ್ಕೆ ನಿರ್ಬಂಧ ಹೂಡಿದ್ದ ಆ ಕಾಲದಲ್ಲಿ ಈ ಸಂಸ್ಥೆಯು ದಿನೇ ದಿನೇ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ೧೯೩೮ರಲ್ಲಿ ಬುಬರ್ ಜರ್ಮನಿಯನ್ನು ತೊರೆದು ಜೆರೂಸೆಲಂನಲ್ಲಿ ನೆಲೆಸಿದರು; ಅಲ್ಲಿನ ಬ್ರಿಟಿಷ್ ಮ್ಯಾಂಡೇಟ್ ಫಾರ್ ಪ್ಯಾಲೆಸ್ಟೈನ್ ನಲ್ಲಿ ಹೀಬ್ರೂ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಗಿರಿಯನ್ನು ಪಡೆದು ಮಾನವಶಾಸ್ತ್ರ ಮತ್ತು ಪರಿಚಯಾತ್ಮಕ ಸಮಾಜಶಾಸ್ತ್ರ ವಿಷಯಗಳನ್ನು ಬೋಧಿಸುತ್ತಿದ್ದರು.

ಬುಬರ್ ರ ಪತ್ನಿ ಪಾಲಾ ೧೯೫೮ರಲ್ಲಿ ನಿಧನರಾದರು, ಮತ್ತು ಬುಬರ್ ಜೆರೂಸೆಲಂನ ತಾಲ್ಬಿಯೆಹ್ ಬಡಾವಣೆಯಲ್ಲಿ ತಮ್ಮ ಮನೆಯಲ್ಲಿಯೇ ಜೂನ್ ೧೩, ೧೯೬೫ರಂದು ನಿಧನರಾದರು.

ಜೀವನ ವೃತ್ತಾಂತ[ಬದಲಾಯಿಸಿ]

ಮಾರ್ಟಿನ್ (ಹೀಬ್ರೂ ಹೆಸರು: מָרְדֳּכַי, ಮಾರ್ಡೆಷಲ್ ) ಬುಬರ್ ವಿಯೆನ್ನಾ ದಲ್ಲಿ ಒಂದು ಸಂಪ್ರದಾಯಶರಣ ಕುಟುಂಬದಲ್ಲಿ ಜನಿಸಿದರು. ಅವರ ತಾತ, ಸಾಲೋಮನ್ ಬುಬರ್, ರ ಮೆನಯು ಲೆಂಬರ್ಗ್ (ಈಗಿನ ಲ್ವಿವ್, ಯುಕ್ರೇನ್)ನಲ್ಲಿದ್ದಿತು ಹಾಗೂ ಬುಬರ್ ಇಲ್ಲಿಯೇ ತನ್ನ ಬಾಲ್ಯದ ದಿನಗಳನ್ನು ಹೆಚ್ಚು ಕಳೆದದ್ದು; ಸಾಲೋಮನ್ ಬುಬರ್ ಖ್ಯಾತ ಮೈದರ್ಶ್ ಮತ್ತು ರಬ್ಬಿನಿಕ್ ಸಾಹಿತ್ಯದ ಪಂಡಿತರಾಗಿದ್ದರು. ಬುಬರ್ ಮನೆಯಲ್ಲಿ ಯಿಡ್ಡಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಮಾತನಾಡುತ್ತಿದ್ದರು. ೧೮೯೨ರಲ್ಲಿ ಬುಬರ್ ಲೆಂಬರ್ಗ್ ನ ತನ್ನ ತಂದೆಯ ಮನೆಗೆ ಮರಳಿ ಬಂದರು. ಒಂದು ವೈಯಕ್ತಿಕ ಧಾರ್ಮಿಕ ಸಂಕಷ್ಟವು ಅವರು ತಮ್ಮ ಯಹೂದೀ ಧಾರ್ಮಿಕ ವಿಧಿಗಳಿಂದ ದೂರ ಸರಿಯುವಂತೆ ಮಾಡಿತು: ಅವರು ಇಮಾನ್ಯುಎಲ್ ಕಾಂಟ್, ಸೋರೆನ್ ಕೀರ್ಕೆಗ್ಗಾರ್ಡ್, ಮತ್ತು ಫ್ರೀಡ್ರಿಚ್ ನೀಷೆ ಯವರ ಕೃತಿಗಳನ್ನು ಓದಲಾರಂಭಿಸಿದರು. ಕಡೆಯ ಇಬ್ಬರ ಕೃತಿಗಳಂತೂ ಅವರು ತತ್ವಜ್ಞಾನದ ಅಧ್ಯಯನದಲ್ಲಿ ತೊಡಗಿಕೊಳ್ಳಲು ಬಲವಾದ ಪ್ರೇರಣೆ ನೀಡಿದವು. ೧೮೯೬ರಲ್ಲಿ ಬುಬರ್ ತಮ್ಮ ವ್ಯಾಸಂಗಕ್ಕಾಗಿ ವಿಯೆನ್ನಾಗೆ ತೆರಳಿದರು(ತತ್ವಶಾಸ್ತ್ರ, ಕಲಾ ಚರಿತ್ರೆ, ಜರ್ಮನ್ ಅಧ್ಯಯನಗಳು, ಭಾಷಾಶಾಸ್ತ್ರ). ೧೮೯೮ರಲ್ಲಿ ಅವರು ಝಿಯಾನಿಸ್ಟ್ ಚಳುವಳಿಗೆ ಸೇರಿದರು ಹಾಗೂ ಕಾಂಗ್ರೆಸ್ ಗಳು ಮತ್ತು ಸಂಘಟನಾ ಕಾರ್ಯಗಳಲ್ಲಿ ಭಾಗವಹಿಸಲಾರಂಭಿಸಿದರು. ೧೮೯೯ರಲ್ಲಿ, ಝುರಿಚ್ ನಲ್ಲಿ ಓದುತ್ತಿದ್ದಾಗ, ಬುಬರ್ ತಮ್ಮ ಮುಂದಿನ ಬಾಳಸಂಗಾತಿಯಾದ ಪಾಲಾ ವಿಂಕ್ಲರ್ ಎಂಬ ಮ್ಯುನಿಕ್ ನಲ್ಲಿ ಜನಿಸಿದ ಯಹೂದ್ಯೇತರ ಝಿಯಾನಿ ಪಂಥದ ಲೇಖಕಿಯನ್ನು ಭೇಟಿಯಾದರು; ನಂತರದ ದಿನಗಳಲ್ಲಿ ಪಾಲಾ ಜುದಾಯಿಸಂಗೆ ಮತಾಂತರಗೊಂಡರು.[೨]

ವಿಷಯವಸ್ತುಗಳು[ಬದಲಾಯಿಸಿ]

ಬುಬರ್ ರ ಚೇತೋಹಾರಿಯಾದ, ಹಾಗೂ ಕೆಲವೊಮ್ಮೆ ಕಾವ್ಯಮಯವಾದ ಬರವಣಿಗೆಯ ಶೈಲಿಯು ಅವರ ಕೃತಿಗಳಲ್ಲಿ ಪ್ರಮುಖವಾದ ಸಿದ್ಧಾಂತಗಳನ್ನು ಅಚ್ಚಳಿಯದಂತಾಗಿಸಿದೆ: ಹಸಿಡಿಕ್ ಕಥೆಗಳ ಪುನಃಕಥನ, ಬೈಬಲ್ ಬಗ್ಗೆ ವಿವರಣಾತ್ಮಕ ಬರಹಗಳು ಹಾಗೂ ಆಧ್ಯಾತ್ಮಿಕ ನುಡಿಗಳು ಈ ಕ್ರಮದಲ್ಲೇ ಮೂಡಿವೆ. ಸಾಂಸ್ಕೃತಿಕವಾಗಿ ಝಿಯಾನಿಸ್ಟ್ ಆಗಿದ್ದ ಬುಬರ್ ಜರ್ಮನಿ ಮತ್ತು ಇಸ್ರೇಲ್‌ಗಳ ಯಹೂದಿ ಮತ್ತು ಶೈಕ್ಷಣಿಕ ಸಮುದಾಯಗಳಲ್ಲಿ ಕ್ರಿಯಾಶೀಲರಾಗಿದ್ದರು. ಅವರು ಪ್ಯಾಲೆಸ್ಟೇನ್ ನಲ್ಲಿ ಉಭಯರಾಷ್ಟ್ರಗಳ ಪರಿಹಾರದ ಕಟ್ಟಾ ಬೆಂಬಲಿಗರಾಗಿದ್ದರು ಹಾಗೂ ಯಹೂದಿಗಳ ರಾಜ್ಯವಾದ ಇಸ್ರೇಲ್ ಸ್ಥಾಪನೆಯಾದನಂತರ ಅರಬ್ ದೇಶಗಳಲ್ಲಿ ಇಸ್ರೇಲಿನ ಪ್ರಾದೇಶಿಕ ಒಕ್ಕೂಟಗಳನ್ನು ಸ್ಥಾಪಿಸುವುದನ್ನು ಪ್ರಬಲವಾಗಿ ಬೆಂಬಲಿಸಿದರು. ಅವರ ಪ್ರಭಾವವು ಹ್ಯುಮಾನಿಟೀಸ್ ನ ಉದ್ದಗಲಕ್ಕೂ ಹರಡಿದೆ, ವಿಶೇಷತಃ ಸಾಮಾಜಿಕ ಲಿಂಗರಾಜ ಸಾಮಾಜಿಕ ತತ್ವಶಾಸ್ತ್ರ, ತಾತ್ವಿಕ ಅರಾಜಕತೆ, ಮತ್ತು ಧಾರ್ಮಿಕ ಅಸ್ತಿತ್ವಧರ್ಮದ ಕ್ಷೇತ್ರಗಳಲ್ಲಿ ಅವರ ಪ್ರಭಾವ ಗಣನೀಯವಾಗಿದೆ.

ಝಿಯಾನಿಸ್ಟ್ ದೃಷ್ಟಿಕೋನಗಳು[ಬದಲಾಯಿಸಿ]

ತಮ್ಮ ವೈಯಕ್ತಿ ಕ ದೃಷ್ಟಿಕೋನದಿಂದ ಝಿಯಾನಿಸಂ ನತ್ತ ಸಾಗಿದ ಬುಬರ್ ಝಿಯಾನಿಸಂನ ರಾಜಕೀಯ ಮತ್ತು ಸಾಂಸ್ಕೃತಿಕ ಮಾರ್ಗಗಳ ಬಗ್ಗೆ ಥಿಯೋಡೋರ್ ಹೆರ್ಝ್ ಹೊಂದಿದ್ದ ದೃಷ್ಟಿಕೋನಗಳನ್ನು ಒಪ್ಪಲಿಲ್ಲ. ಹೆರ್ಝ್ ಝಿಯಾನಿಸಂ ನ ಗುರಿಯು ರಾಷ್ಟ್ರವನ್ನು ಕಟ್ಟುವಂಹದ್ದೆಂಬ ಕಲ್ಪನೆಯನ್ನು ಹೊಂದಿದ್ದರು, ಅದಕ್ಕೆ ಯಹೂದಿ ಸಂಸ್ಕೃತಿ ಅಥವಾ ಧರ್ಮದ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಅದಕ್ಕೆ ತದ್ವಿರುದ್ಧವಾಗಿ ಸಮರ್ಥ ಝಿಯಾನಿಸಂ ಸಾಮಾಜಿಕ ಹಾಗೂ ಅಧ್ಯಾತ್ಮಿಕ ಶ್ರೀಮಂತಿಕೆಗಾಗಿಯೇ ಇರುವುದೆಂದು ಬುಬರ್ ನಂಬಿದ್ದರು. ಹರ್ಝ್ ಮತ್ತು ಬುಬರ್, ಪರಸ್ಪರ ಗೌರವ ಮತ್ತು ಭಿನ್ನಮತದೊಂದಿಗೇ, ತಮ್ಮ ತಮ್ಮ ಗುರಿಗಳನ್ನು ಮುಟ್ಟಲು ಜೀವನವಿಡೀ ಶ್ರಮಿಸಿದರು.

೧೯೦೨ರಲ್ಲಿ ಬುಬರ್ ಡೈ ವೆಲ್ಟ್ ಎಂಬ ಸಾಪ್ತಾಹಿಕದ ಸಂಪಾದಕರಾದರು; ಆ ಪತ್ರಿಕೆಯು ಝಿಯಾನಿಸಂ ಚಳುವಳಿಯ ಕೇಂದ್ರ ಅಂಗವಾಗಿತ್ತು. ಅದರೆ, ಒಂದು ವರ್ಷದ ನಂತರ ಬುಬರ್ ಯಹೂದಿಗಳ ಹಸಿಡಿಸಂ ಚಳುವಳಿಯಲ್ಲಿ ತೊಡಗಿಕೊಂಡರು. ಹಸಿಡಿಕ್ ಸಮುದಾಯಗಳು ತಮ್ಮ ಧರ್ಮವನ್ನು ದೈನಿಕ ಬದುಕು ಮತ್ತು ಸಂಪ್ರದಾಯಗಳಲ್ಲಿ ಸಾಕಾರಗೊಳಿಸುವುದನ್ನು ಕಂಡು ಅದನ್ನು ಬಹಳವೇ ಮೆಚ್ಚಿದರು. ಯಾವಾಗಲೂ ರಾಜಕೀಯದ ಚಿಂತನೆಗಳ ಬಗ್ಗೆ ಆಲೋಚಿಸುತ್ತಾ ಬಹಳ ಗಡಿಬಿಡಿಯಲ್ಲಿರುವ ಝಿಯಾನಿಸ್ಟ್ ಸಂಘಗಳಿಗೆ ಸಂಪೂರ್ಣ ವಿರುದ್ಧವಾದ ರೀತಿಯಲ್ಲಿ, ಬುಬರ್ ಯಾವಾಗಲೂ ಪ್ರತಿಪಾದಿಸುತ್ತಿದ್ದ ಝಿಯಾನಿಸಂ ನ ಮೌಲ್ಯಗಳನ್ನು, ಈ ಹಸಿಡಿಮ್ ಸಮುದಾಯಗಳು ಅಳವಡಿಸಿಕೊಂಡು ಜೀವನ ನಡೆಸುವಲ್ಲಿ ನಿರತರಾಗಿದ್ದರು. ೧೯೦೪ರಲ್ಲಿ ಬುಬರ್ ಬಹುತೇಕ ಝಿಯಾನಿಸ್ಟ್ ಸಂಘಟನಾ ಚಟುವಟಿಕೆಗಳಿಂದ ಹಿಂದೆ ಸರಿದರು ಹಾಗೂ ತಮ್ಮ ಸಮಯವನ್ನು ಅಧ್ಯಯನ ಮತ್ತು ಬರವಣಿಗೆಯಲ್ಲಿ ಕಳೆಯತೊಡಗಿದರು. ಆ ವರ್ಷ ಅವರು ಅವರ ಸಿದ್ಧಾಂತವನ್ನು ಪ್ರಕಟಣೆಗೊಳಿಸಿದರು: ಬೀಯ್ಟ್ ರೇಜ್ ಝುರ್ ಜೆಷಿಷ್ಟೆ ಡಸ್ ಇಂಡಿವಿಜುಯೇಷನ್ಸ್ ಪ್ರಾಬ್ಲಮ್ಸ್ ( ಜ್ಯಾಕೋಬ್ ಬಾಹ್ಮೆ ಮತ್ತು ನಿಕೊಲಾಸ್ ಕ್ಯುಸಾನಸ್ ಕುರಿತಾಗಿ).

ಜರ್ಮನಿಯ ಹೆಪ್ಪೆನ್ಹೀಮ್ ನಲ್ಲಿರುವ ಮಾರ್ಟಿನ್ ಬುಬರ್ ರ ಮನೆ (1916-1938) ಈಗ ಇದು ICCJ ನ ಕೇಂದ್ರಕಚೇರಿ.

ಸಾಹಿತ್ಯ ಮತ್ತು ಪಾಂಡಿತ್ಯ ವ್ಯಾಪ್ತಿ[ಬದಲಾಯಿಸಿ]

೧೯೧೦ರಿಂದ ೧೯೧೪ರವರೆಗೆ ಬುಬರ್ ಪುರಾಣಗಳ ಅಧ್ಯಯನ ಮಾಡಿದರು ಮತ್ತು ಪೌರಾಣಿಕ ಗ್ರಂಥಗಳ ಆವೃತ್ತಿಗಳನ್ನು ಪ್ರಕಟಿಸಿದರು. ೧೯೧೬ರಲ್ಲಿ ಅವರು ಬರ್ಲಿನ್ ನಿಂದ ಹೆಪ್ಪೆನ್ಹೀಮ್ ಗೆ ಹೋದರು. ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಅವರು ಪೂರ್ವ ಯೂರೋಪ್ ನ ಯಹೂದಿಗಳ ಸ್ಥಿತಿಯನ್ನು ಉತ್ತಮಗೊಳಿಸುವ ಸಲುವಾಗಿ ಜ್ಯೂಯಿಷ್ ನ್ಯಾಷನಲ್ ಕಮಿಷನ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು. ಆ ಅವಧಿಯಲ್ಲಿ ಅವರು ಡೆರ್ ಜ್ಯೂಡ್ ("ಯಹೂದಿ" ಎಂಬುದಕ್ಕೆ ಜರ್ಮನ್ ಪದ) ಎಂಬ ಯಹೂದಿ ಮಾಸಪತ್ರಿಕೆಯ ಸಂಪಾದಕರಾದರು(೧೯೨೪ ರವರೆಗೆ). ೧೯೨೧ರಲ್ಲಿ ಫ್ರಾನ್ಝ್ ರೋಸೆನ್ ಝ್ವೀಗ್ ರೊಡನೆ ಬುಬರ್ ನಿಕಟ ಸಂಬಂಧ ಹೊಂದಲಾರಂಭಿಸಿದರು. ೧೯೨೨ರಲ್ಲಿ ಬುಬರ್ ಮತ್ತು ರೋಸೆನ್ ಝ್ವೀಗ್ ಜರ್ಮನಿಯಲ್ಲಿ ಲೆಹ್ರ್ ಹಾವ್ಸ್ ಎಂದೇ ಪರಿಚಿತವಾಗಿರುವ ರೋಸೆನ್ ಝ್ವೀಗ್ ರ ಹೌಸ್ ಆಫ್ ಜ್ಯೂಯುಷಿ ಲರ್ನಿಂಗ್ ನಲ್ಲಿ ಒಟ್ಟಿಗೆ ಕಾರ್ಯನಿರತರಾದರು.

೧೯೨೩ರಲ್ಲಿ ಬುಬರ್ ಅಸ್ತಿತ್ವಧರ್ಮದ ಬಗ್ಗೆ ಅವರಿಗೆ ಖ್ಯಾತಿ ಇತ್ತಂತಹ ಪ್ರಬಂಧವಾದ ಇಖ್ ಉಂಡ್ ಡು (ಲನಂತರ ಆಂಗ್ಲಭಾಷೆಗೆ ಐ ಎಂಡ್ ದೌ ಎಂದು ತರ್ಜುಮೆ ಮಾಡಲಾಯಿತು) ಅನ್ನು ಬರೆದರು. ಅವರ ಕೃತಿಗಳನ್ನು ತಮ್ಮ ನಂತರದ ಜೀವನದಲ್ಲಿ ಕೊಂಚ ತಿದ್ದಿದರಾದರೂ, ಗಣನೀಯವಾದ ಬದಲಾವಣೆಗಳನ್ನು ಮಾಡಲು ಅವರು ಒಪ್ಪಲಿಲ್ಲ. ೧೯೨೫ರಲ್ಲಿ ಫ್ರಾನ್ಝ್ ರೋಸೆನ್ ಝ್ವೀಗ್ ರ ಜೊತೆ ಸೇರಿ ಬುಬರ್ ಹೀಬ್ರೂ ಬೈಬಲ್ ಅನ್ನು ಜರ್ಮನ್ ಭಾಷೆಗೆ ಅನುವಾದ ಮಾಡಲಾರಂಭಿಸಿದರು. ಬುಬರ್ ಈ ಅನುವಾದವನ್ನು ವೆರಡ್ಯೂಟ್ ಷಂಗ್ ("ಜರ್ಮನೀಕರಣ") ಎಂದು ಕರೆದರು, ಏಕೆಂದರೆ ಈ ಅನುವಾದವು ಎಲ್ಲಾ ಸಂದರ್ಭಗಳಲ್ಲೂ ಜರ್ಮನ್ ಸಾಹಿತ್ಯಕ್ಕೇ ಅಂಟಿರದೆ, ಕೆಲವೊಮ್ಮೆ ಹೊಸ ಚೈತನ್ಯಕರ (ಹಾಗೂ ನವೀನವಾಗಿ ಸಂಶೋಧಿಸಿದ) ಸಮಾನಾರ್ಥಕ ನುಡಿಗಟ್ಟುಗಳನ್ನು ಹೊಂದಿದೆ; ಹೀಬ್ರೂವಿನ ನಾನಾರ್ಥಪದಗಳಲ್ಲಿನ ಅರ್ಥಗೌರವಕ್ಕೆ ಆಭಾಸವಾಗದಿರಲು ಈ ಕ್ರಮ ಅಗತ್ಯವಾಗಿತ್ತು. ೧೯೨೬ರಿಂದ ೧೯೨೮ರವರೆಗೆ ಬುಬರ್ {೦ಡೈ ಕ್ರಿಯಟರ್ ("ದ ಕ್ರಿಯೇಚರ್")ನ ಸಹ-ಸಂಪಾದಕರಾಗಿದ್ದರು.

1930ರಲ್ಲಿ ಬುಬರ್ ಯೂನಿವರ್ಸಿಟಿ ಆಫ್ ಫ್ರಾಂಕ್ ಫರ್ಟ್ ಆಮ್ ಮೇಯ್ನ್ ನಲ್ಲಿ ಗೌರವ ಪ್ರಾಧ್ಯಾಪಕರಾದರು.ಅಡಾಲ್ಫ್ ಹಿಟ್ಲರ್ 1933ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ವಿರೋಧಿಸಿ ತಮ್ಮ ಪ್ರೊಫೆಸರ್ ಗಿರಿಗೆ ರಾಜೀನಾಮೆ ಇತ್ತರು. 4 ಅಕ್ಟೋಬರ್ 1933ರಂದು ನಾಝಿ ಅಧಿಕಾರಿಗಳು ಬುಬರ್ ಪಾಠ ಮಾಡಬಾರದೆಂದು ಕಟ್ಟಪ್ಪಣೆ ವಿಧಿಸಿದರು. 1935ರಲ್ಲಿ ಅವರನ್ನು ರೀಚ್ ಸ್ಖ್ರಿಫ್ಟಮ್ ಸ್ಕಾಮ್ಮರ್ (ದ ನ್ಯಾಷನಲ್ ಸೋಷಿಯಲಿಸ್ಟ್ ಆಥರ್ಸ್ ಅಸೋಸಿಯೇಷನ್) ನಿಂದ ಹೊರಹಾಕಲಾಯಿತು. ಅವರು ನಂತರ ಸೆಂಟ್ರಲ್ ಆಫೀಸ್ ಆಫ್ ಜ್ಯೂಯಿಷ್ ಎಜುಕೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು; ಜರ್ಮನ್ ಸರ್ಕಾರವು ಸಾರ್ವಜನಿಕ ಶಿಕ್ಷಣಕ್ಕೆ ಯಹೂದಿಗಳನ್ನು ಸೇರಿಸುವುದಕ್ಕೆ ನಿರ್ಬಂಧ ಹೂಡಿದ್ದ ಆ ಕಾಲದಲ್ಲಿ ಈ ಸಂಸ್ಥೆಯು ದಿನೇ ದಿನೇ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ನಾಝೀ ಆಡಳಿತವು ಈ ಸಂಸ್ಥೆಗೆ ನಾನಾ ತೊಡಕುಗಳನ್ನು ಒಡ್ಡಿತು.

ಕಡೆಗೆ, 1938ರಲ್ಲಿ, ಬುಬರ್ ಜರ್ಮನಿಯನ್ನು ತೊರೆದು ಮ್ಯಾಂಡೇಟ್ ಪ್ಯಾಲೆಸ್ಟೈನ್ ನ ಅಂದಿನ ರಾಜಧಾನಿಯಾಗಿದ್ದ ಜೆರೂಸೆಲಂ ನಲ್ಲಿ ನೆಲೆಸಿದರು. ಅಲ್ಲಿನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಸೇರಿದ ಬುಬರ್ ಮಾನವಶಾಸ್ತ್ರ ಮತ್ತು ಪರಿಚಯಾತ್ಮಕ ಸಮಾಜಶಾಸ್ತ್ರ ವಿಷಯಗಳನ್ನು ಬೋಧಿಸಿದರು. ಪ್ಯಾಲೆಸ್ಟೈನ್ ನಲ್ಲಿದ್ದ ಯಹೂದಿಗಳ ಸಮಸ್ಯಗಳ ಬಗ್ಗೆ ಇದ್ದ ಚರ್ಚೆಗಳಲ್ಲಿ ಅವರು ಭಾಗವಹಿಸಿದರು; ಅರಬ್ ಪ್ರಶ್ನೆಯ ಬಗ್ಗೆಯೂ ತೊಡಗಿಕೊಂಡ ಅವರು ಬೈಬಲ್, ಆಧ್ಯಾತ್ಮಕ ಮತ್ತು ಹಸಿಡಿಕ್ ಕೃತಿಗಳಲ್ಲಿ ಮೂಲಕ ಈ ಸಮಸ್ಯಗಳಿಗೆ ಪರಿಹಾರ ಕಾಣಲು ಯತ್ನಿಸಿದರು. ಬುಬರ್ ಇಖುಡ್ ಎಂಬ, ಅರಬರಿಗೆ ಮತ್ತು ಯಹೂದಿಗಳಿಗೆ ಪ್ಯಾಲೆಸ್ಟೈನ್ ನಲ್ಲಿ ದ್ವಿ-ರಾಷ್ಟ್ರ ಸ್ಥಾಪನೆಯ ಗುರಿ ಹೊಂದಿದ್ದ ಗುಂಪಿನ ಸದಸ್ಯರಾದರು. ಅಂತಹ ದ್ವಿರಾಷ್ಟ್ರ ಸಂಘವು ಕೇವಲ ಯಹೂದಿ ರಾಜ್ಯವನ್ನು ಮಾತ್ರ ಸ್ಥಾಪಿಸಿವುದಕ್ಕಿಂತಲೂ ಸಮರ್ಪಕವಾದ ರೀತಿಯಲ್ಲಿ ಝಿಯಾನಿಸಂ ನ ತತ್ವಗಳನ್ನು ಪೂರೈಸುವುದು ಎಂದು ಬುಬರ್ ಅಭಿಪ್ರಾಯ ಹೊಂದಿದ್ದರು. 1946ರಲ್ಲಿ ತಮ್ಮ ಕೃತಿಯಾದ ಪಾಥ್ಸ್ ಆಫ್ ಯುಟೋಪಿಯಾ ವನ್ನು ಬುಬರ್ ಬಿಡುಗಡೆ ಮಾಡಿದರು; ಆ ಕೃತಿಯಲ್ಲಿ ಬುಬರ್ ತಮ್ಮ ಸಂವಾದಾತ್ಮಕ ಸಾಮಾಜಿಕ ದೃಷ್ಟಿಕೋನಗಳನ್ನೂ, ತಮ್ಮ "ಸಂವಾದಾತ್ಮಕ ಸಮುದಾಯ" ಸಿದ್ಧಾಂತವನ್ನೂ ಮಂಡಿಸಿದ್ದರು; ಈ ಸಿದ್ಧಾಂತವು "ಸಂವಾದಾತ್ಮಕ ಸಂಬಂಧಗಳು" ಎಂಬ ಅಂತರ್ವ್ಯಕ್ತಿ ಬಾಂಧವ್ಯದ ಮೇಲೆ ಆಧಾರವಾದುದಾಗಿತ್ತು.

ಎರಡನೆಯ ಮಹಾಯುದ್ಧದ ನಂತರ ಬುಬರ್ ಯೂರೋಪ್ ಮತ್ತು ಯುಎಸ್ಎ ಗಳಿಗೆ ಪ್ರಯಾಣ ಮಾಡಿ ಉಪನ್ಯಾಸಗಳನ್ನು ನೀಡಲಾರಂಭಿಸಿದರು.

ಪ್ರಶಸ್ತಿಗಳು[ಬದಲಾಯಿಸಿ]

 • 1951ರಲ್ಲಿ ಬುಬರ್ ಹ್ಯಾಂಬರ್ಗ್ ವಿಶ್ವವಿದ್ಯಾಲಯವು ಕೊಡಮಾಡುವ ಗೋಯೆಥೆ ಪ್ರಶಸ್ತಿಗೆ ಭಾಜನರಾದರು.
 • 1953ರಲ್ಲಿ ಅವರು ಜರ್ಮನ್ ಬುಕ್ ಟ್ರೇಡ್ ಕೊಡಮಾಡುವ ಪೀಸ್ ಪ್ರೈಝ್ ಆಫ್ ದ ಜರ್ಮನ್ ಬುಕ್ ಟ್ರೇಡ್ ಪುರಸ್ಕಾರ ಪಡೆದರು.
 • 1958ರಲ್ಲಿ ಅವರಿಗೆ ಹ್ಯೂಮಾನಿಟೀಸ್ ಕ್ಷೇತ್ರದಲ್ಲಿನ ಸಾಧನೆಗಾಗಿ ಇಸ್ರೇಲ್ ಪುರಸ್ಕಾರ ನೀಡಲಾಯಿತು.[೩]
 • ೧೯೬೧ರಲ್ಲಿ ಅವರ ಯಹೂದೀ ಚಿಂತನೆಗಳನ್ನು ಗುರುತಿಸಿ ಅವರಿಗೆ ಬಯಾಲಿಕ್ ಪುರಸ್ಕಾರ ವನ್ನು ನೀಡಲಾಯಿತು.[೪]
 • ೧೯೬೩ರಲ್ಲಿ ಆಂಸ್ಟರ್ಡ್ಯಾಮ್ ನಲ್ಲಿ ಎರಾಸ್ಮಸ್ ಬಹುಮಾನಗಳನ್ನು ಗೆದ್ದರು.

ಸಿದ್ಧಾಂತ[ಬದಲಾಯಿಸಿ]

ಬುಬರ್, ತಮ್ಮ ಕೃತಿ ಐ ಎಂಡ್ ದೌ ನಲ್ಲಿ ವರ್ಣಿಸಿರುವ ಸಂವಾದಾತ್ಮಕ ಅಸ್ತಿತ್ವ ಎಂಬ ಸಂಯೋಜಿತ ಸಿದ್ಧಾಂತಕ್ಕೆ ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, ಅವರ ಪುಸ್ತಕವು ಹಲವಾರು ವಿಷಯಗಳನ್ನು ಕುರಿತು ಬರೆದಂತಹುದ್ದಾಗಿದ್ದು, ಅದರಲ್ಲಿ ಧಾರ್ಮಿಕ ಪ್ರಜ್ಞೆ, ಆಧುನಿಕತೆ, ಕೆಡುಕಿನ ರೂಪರೇಷೆಗಳು, ನೀತಿ, ಶಿಕ್ಷಣ, ಮತ್ತು ಬೈಬಲ್ ನ ವ್ಯಾಖ್ಯಾನಗು ಸೇರಿವೆ.

ಸಂವಾದ ಮತ್ತು ಅಸ್ತಿತ್ವ[ಬದಲಾಯಿಸಿ]

ಐ ಎಂಡ್ ದೌ ನಲ್ಲಿ ಬುಬರ್ ಮಾನವನ ಅಸ್ತಿತ್ವದ ಬಗ್ಗೆ ಒಂದು ಸಿದ್ಧಾಂತವನ್ನು ಪರಿಚಯಿಸಿದರು. ಫ್ಯುಯೆರ್ಬಾಷ್ ರ ದ ಎಸೆನ್ಸ್ ಆಫ್ ಕ್ರಿಶ್ಚಿಯಾನಿಟಿ ಮತ್ತು ಕೀರ್ಕೆಗ್ಗಾರ್ಡ್ ರ "ಸಿಂಗಲ್ ಒನ್"ನಿಂದ ಭಾಗಶಃ ಪ್ರೇರಿತರಾದ ಬುಬರ್ ಅಸ್ತಿತ್ವವೆಂದರೆ ಭೇಟಿಯಾಗುವಿಕೆ ಎಂಬ ಚಿಂತನೆಯ ಹಾದಿಯಲ್ಲಿ ತೊಡಗಿಕೊಂಡರು.[೫] ಅವರು ತಮ್ಮ ತತ್ವಗಳನ್ನು ಜೋಡಿ ಪದಗಳಾದ ಇಖ್-ಡು ಮತ್ತು ಇಖ್-E s ಗಳ ಮೂಲಕ ವಿವರಿಸಿದರು; ಪ್ರಜ್ಞೆಯ ವಿವಿಧ ರೂಪಗಳು, ಪರಸ್ಪರ ಕ್ರಿಯೆಗಳು ಮತ್ತು ಅಸ್ತಿತ್ವದ ವರ್ಗೀಕರಣಗಳ ಮೂಲಕ ವ್ಯಕ್ತಿಯು ಇತರ ವ್ಯಕ್ತಿಗಳೊಡನೆ, ಜಡ ವಸ್ತುಗಳೊಡನೆ ಮತ್ತು ಸರ್ವಸತ್ಯಗಳೊಡನೆ ಹೇಗೆ ಸಂವಾದಿಸುತ್ತಾನೆ ಎಂಬುದೇ ಈ ತತ್ವದ ತಿರುಳು. ತಾತ್ವಿಕವಾಗಿ, ಈ ಜೋಡಿ ಪದಗಳು ಅಸ್ತಿತ್ವದ ರೀತಿಗಳ ಬಗ್ಗೆ ಸಂಕೀರ್ಣ ಚಿಂತನೆಗಳನ್ನು ಮೂಡಿಸಲು ಬಳಸಲಾಗಿದೆ - ಪ್ರಮುಖವಾಗಿ ಹೇಗೆ ಒಬ್ಬ ವ್ಯಕ್ತಿ ಇರುತ್ತಾನೆ ಮತ್ತು ಆ ಇರುವಿಕೆಯನ್ನು ಹೇಗೆ ಯಥಾರ್ಥಗೊಳಿಸುತ್ತಾನೆ ಎಂಬುದನ್ನು. (ನೋಡಿ ಎಕ್ಸಿಸ್ಟೆನ್ಷಿಯಾಲಿಸಂ). ಐ ಎಂಡ್ ದೌ ನಲ್ಲಿ ಬುಬರ್ ವಾದಿಸುವಂತೆ, ವ್ಯಕ್ತಿಯು ಸರ್ವಕಾಲದಲ್ಲೂ ಜಗತ್ತಿನೊಡನೆ ಈ ವಿಧಗಳಲ್ಲಿ ಒಂದರ ಮೂಲಕ ಸಂಪರ್ಕದಲ್ಲಿರುತ್ತಾನೆ.

ಬುಬರ್ ಜೀವಿಗಳ ಉಭಯ ಕ್ರಮಗಳನ್ನು ವಿವರಿಸಲು ಬಳಸುವ ಉತ್ಪತ್ತಿಶಾಸ್ತ್ರದ ಪ್ರಮುಖ ಗುರಿಗಳಲ್ಲಿ ಒಂದು ಸಂವಾದಾತ್ವಕ (ಇಖ್-ಡು ), ಮತ್ತೊಂದು ಸ್ವಗತ (ಇಖ್-Es ). ಸಂಪರ್ಕದ ಪರಿಕಲ್ಪನೆಯನ್ನು, ವಿಶೇಷತಃ ಭಾಷಾಧಾರಿತ ಸಂಪರ್ಕ ಸಂಬಂಧಿತವಾದುದನ್ನು, ಸಂವಾದ ಮತ್ತು ಸ್ವಗತದ ಸಂದರ್ಭಗಳಲ್ಲಿ ನುಡಿಗಟ್ಟುಗಳ ಮೂಲಕ ವಿವರಿಸುವಲ್ಲಿ ಬಳಸಲಾಗುತ್ತದೆ; ಈ ವಿಧವು ಮಾನವನ ಅಸ್ತಿತ್ವದ ವ್ಯಕ್ತಿಗತ ಸಂಬಂಧಗಳ ರೀತಿಯನ್ನು ವಿವರಿಸಲೂ ಶಕ್ತವಾಗಿದೆ.

ಇಖ್ - ಡು[ಬದಲಾಯಿಸಿ]

ಇಖ್-ಡು ("ನಾನು-ನೀನು"ಅಥವಾ "ನಾನು-ನೀವು") ಎಂಬುದು ಎರಡು ವ್ಯಕ್ತಿಗಳು (ಜೀವಗಳು) ಪರಸ್ಪರ ಹಾಗೂ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುವಾಗ ಹೊಂದುವ ಸಂಬಂಧವನ್ನು ಒತ್ತಿಹೇಳುತ್ತದೆ. ಅದು ಒಂದು ದೃಢವಾದ ಭೇಟಿ, ಏಕೆಂದರೆ ಇಲ್ಲಿ ಜೀವಿಗಳು ತಮ್ಮ ನೈಜ ಸ್ಥಿತಿಯಲ್ಲಿ ಒಂದನ್ನೊಂದು ಭೇಟಿಯಾಗುತ್ತವೆ, ಜೀವಿಗಳನ್ನು ಗುಣಾತ್ಮಕವಾಗಿ ಅಥವಾ ಸ-ವಿಷಯಕವಾಗಿ ವಿವರಿಸುವ ಅವಶ್ಯಕತೆ ಇರುವುದಿಲ್ಲ. ಈ ಸಂಬಂಧದಲ್ಲಿ ಊಹೆ ಮತ್ತು ಅಭಿಪ್ರಾಯಗಳಿಗೆ ಯಾವುದೇ ಪಾತ್ರವಿರುವುದಿಲ್ಲ. ನಾನು-ನೀನು ಭೇಟಿಯಲ್ಲಿ ಅನಂತತೆ ಮತ್ತು ಸಾರ್ವತ್ರಿಕತೆಗಳು ನೈಜವಾಗಿರುತ್ತವೆ. (ಬರಿದೇ ಅಭಿಪ್ರಾಯಗಳಾಗಿರುವುದಿಲ್ಲ).

'ಇಖ್-ಡು ಸಂಬಂಧದಲ್ಲಿ ಜೋಡಣೆ ಇರುವುದಿಲ್ಲ (ಉದಾಹರಣೆಗೆ ರಚನೆ/ಆಕೃತಿ) ಹಾಗೂ ಯಾವುದೇ ವಿಷಯದ ಸಂವಹನವಿರುವುದಿಲ್ಲ (ಉದಾಹರಣೆಗೆ ಮಾಹಿತಿ) ಎಂದು ಬುಬರ್ ಒತ್ತಿಹೇಳಿದರು. ಇಖ್-ಡು ಒಂದು ಘಟನೆಯಾಗಿ ಸಂಭವಿಸುತ್ತದೆ ಎಂದು ಪ್ರಮಾಣೀಕರಿಸುವುದು ಸಾಧ್ಯವಿಲ್ಲವಾದರೂ (ಉದಾಹರಣೆಗೆ ಅದರ ಮಾಪನ ಸಾಧ್ಯವಿಲ್ಲ) ಬುಬರ್ ಅದು ಸತ್ಯ ಮತ್ತು ಅನುಭವವೇದ್ಯವೆಂದು ಪ್ರತಿಪಾದಿಸಿದರು. ಇಖ್-ಡು ವನ್ನು ಪ್ರತಿಪಾದಿಸುವಂತಹ ಹಲವಾರು ಉದಾಹರಣೆಗಳನ್ನು ದೈನಂದಿನ ಬದುಕಿನಿಂದಲೇ ಹೆಕ್ಕಿ ಬಳಸಿಕೊಳ್ಳಲಾಗುತ್ತದೆ - ಇಬ್ಬರು ಪ್ರೇಮಿಗಳು, ಒಬ್ಬ ವೀಕ್ಷಕ ಮತ್ತು ಬೆಕ್ಕು, ಲೇಖಕ ಮತ್ತು ಮರ, ಟ್ರೈನ್ ನಲ್ಲಿರುವ ಇಬ್ಬರು ಅಪರಿಚಿತರು. ಇಖ್-ಡು ಸಂಬಂಧವನ್ನು ವರ್ಣಿಸಲು ಬಳಸುವ ಸಾಮಾನ್ಯ ಆಂಗ್ಲ ಪದಗಳೆಂದರೆ ಎದುರಾಗುವಿಕೆ, ಭೇಟಿ, ಸಂವಾದ, ಪರಸ್ಪರತೆ, ಮತ್ತು ವಿನಿಮಯ(ಎಂಕೌಂಟರ್, ಮೀಟಿಂಗ್, ಡೈಲಾಗ್, ಮ್ಯೂಚುಯಾಲಿಟಿ, ಎಕ್ಸ್ ಚೇಂಜ್).

ಬುಬರ್ ಗುರುತಿಸಿದ ಒಂದು ಪ್ರಮುಖ ಇಖ್-ಡು ಸಂಬಂಧ ಮಾನವ ಮತ್ತು ದೇವರ ಮಧ್ಯೆ ಇರುವಂತಹುದು. ದೇವನೊಡನೆ ಪರಸ್ಪರ ಸಂಪರ್ಕ ಹೊಂದಲು ಇದೊಂದೇ ಮಾರ್ಗ ಎನ್ನುತ್ತಾರೆ ಬುಬರ್; ಯಾರೊಂದಿಗೇ ಆಗಲ ಅಥವಾ ಯಾವುದರೊಂದಿಗೇ ಆಗಲಿ, ಇಖ್-ಡು ಸಂಬಂಧವನ್ನು ಬೆಳೆಸಿದರೆ, ಅದು ದೇವನೊಂದಿಗೆ ಸರ್ವಕಾಲಿಕ ಸಂಬಂಧವನ್ನು ಹೊಂದಿದಂತೆ ಎಂಬ ವಾದವನ್ನು ಬುಬರ್ ಮುಂದಿಟ್ಟರು.

ಈ ನಾನು-ನೀನು ಸಂಬಂಧವನ್ನು ದೇವನೊಂದಿಗೆ ಕಲ್ಪಿಸಲು ವ್ಯಕ್ತಿಯು ಅಂತಹ ಚಿಂತನೆಗಳನ್ನು ಮುಕ್ತವಾಗಿ ಆಹ್ವಾನಿಸುವಂತಿರಬೇಕು, ಆದರೆ ಆ ಸಂಬಂಧವನ್ನು ಅರಸುತ್ತಾ ಹೋಗಬಾರದು. ಅಂತಹ ಸಂಬಂಧವನ್ನು ಅರಸಿ ಹೋದರೆ ಅದು-ತನದ ಗುಣಗಳ ಸೃಷ್ಟಿಯಾಗುತ್ತವೆ, ಆದ್ದರಿಂದ ನಾನು-ನೀನು ಸಂಬಂಧವು ಕುಂಠಿತವಾಗಿ ನಾನು-ಅದು ಸಂಬಂಧಕ್ಕೆ ಸೀಮಿತವಾಗುತ್ತದೆ. ನಾನು-ನೀನು ಸಂಬಂಧವನ್ನೇ ನಿರಪೇಕ್ಷೆಯಿಂದ ಆಹ್ವಾನಿಸಿದರೆ, ದೇವನು ನಮ್ಮ ಆಹ್ವಾನಕ್ಕೆ ಓಗೊಟ್ಟು ನಮ್ಮಲ್ಲಿಗೆ ಬರುವನು ಎಂದು ಬುಬರ್ ಹೇಳುತ್ತಾರೆ. ಅಲ್ಲದೆ, ಬುಬರ್ ವರ್ಣಿಸುವ ದೇವನು ನಿರ್ಗುಣನಾದ್ದರಿಂದ, ಈ ನಾನು-ನೀನು ಸಂಬಂಧವು ವ್ಯಕ್ತಿಯು ಬಯಸಿದಷ್ಟು ಕಾಲವೂ ಇರುತ್ತದೆ. ವ್ಯಕ್ತಿಯು ಅಂತಿಮವಾಗಿ ನಾನು-ಅದು ಸಂಬಂಧಕ್ಕೆ ಮರಳಿದಾಗ, ಅವು ಇನ್ನೂ ಆಳದ ಸಂಬಂಧ ಮತ್ತು ಸಂವಹನದ ಸ್ಥಂಭಗಳಾಗುತ್ತವೆ.

ಇಖ್ - Es[ಬದಲಾಯಿಸಿ]

ಇಖ್-Es ("ನಾನು-ಅದು") ಸಂಬಂಧವು ಇಖ್-ಡು ವಿಗೆ ಸರಿಸುಮಾರು ವಿರುದ್ಧವಾದ ಸಂಬಂಧವಾಗಿದೆ. ಇಖ್-ಡು ವಿನಲ್ಲಿ ಎರಡು ಜೀವಗಳು ಒಂದಕ್ಕೊಂದು ಎದುರಾಗುತ್ತವೆ; ಆದರೆ ಇಖ್-Es ಸಂಬಂಧದಲ್ಲಿ ಜೀವಿಗಳು ವಾಸ್ತವವಾಗಿ ಭೇಟಿಯಾಗುವುದಿಲ್ಲ. ಬದಲಿಗೆ "ನಾನು" ಎಂಬುದು ಅದರ ಎದುರಿನ ಜೀವಿಯ ಕಲ್ಪನೆಯನ್ನು ಅಥವಾ ಚಿಂತನೆಯನ್ನು ಎದುರುಗೊಳ್ಳುತ್ತದೆ ಮತ್ತು ಅದಕ್ಕೆ ಗುಣಗಳನ್ನು ಆರೋಪಿಸುತ್ತದೆ ಹಾಗೂ ಆ ಜೀವಿಯನ್ನು ಒಂದು ವಸ್ತುವಿನಂತೆ ಕಾಣುತ್ತದೆ. ಆ ಎಲ್ಲಾ ವಸ್ತುಗಳನ್ನೂ ಕೇವಲ ಮಾನಸಿಕ ಪ್ರತಿನಿಧಿಗಳೆಂದು ಪರಿಗಣಿಸಲಾಗುತ್ತದೆ, ಅವು ವ್ಯಕ್ತಿಯ ಮನದಲ್ಲಿ ಸೃಷ್ಟಿಯಾಗಿ, ಅಲ್ಲೇ ಪೋಷಿತವಾಗುತ್ತವೆ. ಈ ಸಿದ್ಧಾಂತವು ಕಾಂಟ್ ರವರ ಚಮತ್ಕಾರ ಸಿದ್ಧಾಂತವನ್ನು ಕೊಂಚ ಮಟ್ಟಿಗೆ ಆಧಾರವಾಗಿರಿಸಿಕೊಂಡಿದೆ; ಈ ವಸ್ತುಗಳು ಕಲ್ಪನೆಯ ಅನುಭವವನ್ನು ಹೊಂದಿದವನ ಮನದಲ್ಲಿ ನೆಲೆಸುತ್ತದೆ, ಹಾಗೂ ಕೇವಲ ಆಲೋಚನೆರಳ ರೂಪದಲ್ಲಿಯೇ ಇರುತ್ತದೆ. ಆದ್ದರಿಂದ ಇಖ್-Es ಸಂಬಂಧವು ವಾಸ್ತವವಾಗಿ ವ್ಯಕ್ತಿಯು ತನ್ನೊಂದಿಗೇ ಹೊಂದಿದಂತಹ ಸಂಬಂಧವಾಗುತ್ತದೆ, ಅದು ಸಂವಾದವಲ್ಲ, ಸ್ವಗತ.

ಇಖ್-Es ಸಂಬಂಧದಲ್ಲಿ ವ್ಯಕ್ತಿಯು ಇತರ ವಸ್ತುಗಳನ್ನು, ಮುಷ್ಯರನ್ನು, ಇತ್ಯಾದಿಗಳನ್ನು ಬಳಸತಕ್ಕ ಅಥವಾ ಅನುಭವಿಸತಕ್ಕ ವಸ್ತುಗಳು ಎಂಬ ದೃಷ್ಟಿಕೋನದಿಂದ ನೋಡುತ್ತಾನೆ. ಈ ವಿಧವಾದ ವಸ್ತುಪರತೆಯು ಸ್ವಾರ್ಥದ ಚಿಂತನೆಗಳಿಗೆ ಅನ್ವಯಿಸುತ್ತದೆ - ವಸ್ತುವು ಯಾವ ರೀತಿಯಲ್ಲಿ ವ್ಯಕ್ತಿಗೆ ಉಪಯೋಗವಾಗುವುದು ಎಂಬ ಆಲೋಚನೆ.

ಮನುಷ್ಯನ ಜೀವನಚು ಇಖ್-ಡು ಮತ್ತು ಇಖ್-Es ಗಳ ನಡುವೆ ಹೊಯ್ದಾಡುತ್ತಿರುತ್ತದೆ ಹಾಗೂ ಇಖ್-ಡು ಅನುಭವಗಳು ಕಡಿಮೆ ಹಾಗೂ ಯಾವಾಗಲಾದರೊಮ್ಮೆ ಸಂಭವಿಸುವಂತಹವು ಎಂದು ಬುಬರ್ ಅಭಿಪ್ರಾಯ ಪಡುತ್ತಾರೆ. ಆಧುನಿಕತೆ ಯ ಹಲವಾರು ಕೆಡುಕುಗಳನ್ನು ವಿಶ್ಲೇಷಿಸುತ್ತಾ (ಉದಾಹರಣೆಗೆ ಏಕಾಂಗಿತನ, ಅಮಾನವೀಯವಾಗಿಸುವಿಕೆ, ಇತ್ಯಾದಿ.), ಅಸ್ತಿತ್ವದ ಅಪ್ಪಟ ವಿಶ್ಲೇಷಣಾತ್ಮಕ ಹಾಗೂ ವಸ್ತುನಿಷ್ಠ ದೃಷ್ಟಿಕೋನಗಳ ವಿಸ್ತರತೆಯು ಮೂಲತಃ ಇಖ್-Es ಸಂಬಂಧಗಳ ಪ್ರತಿಪಾದನೆಯೇ ಎಂದು ಬುಬರ್ ನಂಬಿದ್ದರು - ಇದು ಮಾನವರ ನಡುವೆಯೂ ವಸ್ತುಗಳ ನಡುವೆ ಪ್ರಸ್ತುತವಾದಷ್ಟೇ ಪ್ರಸ್ತುತವಾದುದು. ಈ ಮಾದರಿಯು ಅಸ್ತಿತ್ವದಲ್ಲಿರುವವರನ್ನಷ್ಟೇ ಅಲ್ಲದೆ ಅಸ್ತಿತ್ವದ ಅರ್ಥದ ಮೌಲ್ಯವನ್ನೇ ತಗ್ಗಿಸುತ್ತದೆ ಎಂದು ಬುಬರ್ ವಾದಿಸಿದರು.

ಅನುವಾದದ ಬಗ್ಗೆ ಟಿಪ್ಪಣಿ[ಬದಲಾಯಿಸಿ]

ಇಖ್ ಉಂಡ್ ಡು ವನ್ನು ಮೂಲ ಜರ್ಮನ್ ಭಾಷೆಯಿಂದ ಹಲವಾರು ಭಾಷೆಗಳಿಗೆ ಅನುವಾದ ಮಾಡಲಾಗಿದೆ. ಅದರೆ, ಬುಬರ್ ರ ಜರ್ಮನ್ ಭಾಷೆಯು ಬಹಳ ನುಡಿಗಟ್ಟುಗಳಿಂದ ಕೂಡಿದ್ದುದರಿಂದ ಹಾಗೂ ಹಲವಾರು ಕಡೆಗಳಲ್ಲಿ ಕ್ರಮಬದ್ಧತೆ ಇಲ್ಲದುದರಿಂದ, ಅವರ ಕೃತಿಗಳಲ್ಲಿನ ಸಂಕೀರ್ಣ ಸಂದೇಶಗಳನ್ನು ಓದುಗರಿಗೆ ತಲುಪಿಸುವುದರ ಬಗ್ಗೆ ಸ್ವಾಭಾವಿಕವಾಗಿಯೇ ಹಲವಾರು ಚರ್ಚೆಗಳು ನಡೆದಿವೆ. ಇಂಗ್ಲಿಷ್ ಮಾತನಾಡುವ ಜಗತ್ತಿನ ಒಂದು ವಿಮರ್ಶಾತ್ಮಕ ಚರ್ಚೆಯು ಈ ಜೋಡಿ ಪದಗಳಾದ ಇಖ್-ಡು ಮತ್ತು ಇಖ್-Es ಗಳ ಸರಿಯಾದ ಅನುವಾದದ ಕುರಿತಾದುದಾಗಿದೆ. ಜರ್ಮನ್ ಭಾಷೆಯಲ್ಲಿ "ಡು" ಪದವನ್ನು ಬಳಸುವ ಜಾಗದಲ್ಲಿ ಇಂಗ್ಲಿಷ್ ನ "ದೌ" (ರೊನಾಲ್ಡ್ ಸ್ಮಿತ್ ರ ಆವೃತ್ತಿಯಲ್ಲಿ ಬಳಸಲಾಗಿದೆ) ಮತ್ತು "ಯೂ" (ವಾಲ್ಟರ್ ಕಾಫ್ ಮನ್ ಇದನ್ನು ಬಳಸಿದ್ದಾರೆ)ಗಳನ್ನು ಬಳಸಲಾಗುತ್ತದೆ. ಮುಖ್ಯ ಸಮಸ್ಯೆಯೆಂದರೆ ಬಹಳ ವೈಯಕ್ತಿಕವಾದ, ಹಾಗೂ ನಿಕಟತೆಯನ್ನು ಸೂಚಿಸುವ, ಜರ್ಮನ್ ಪದವಾದ "ಡು" ಗೆ ಸರಿಯಾದ, ಸಮಾನಾರ್ಥ ನೀಡುವ ಪದ ಇಂಗ್ಲಿಷ್ ನಲ್ಲಿ ಇಲ್ಲದಿರುವುದರಿಂದ ಅದನ್ನು ಸೂಕ್ತವಾಗಿ ಅನುವಾದಿಸುವುದೇ ಕ್ಲಿಷ್ಟಕರವಾಗಿದೆ. "ದೌ" ಧಾರ್ಮಿಕ ಮತ್ತು ಪೂಜನೀಯ ಭಾವವನ್ನು ಹೊಮ್ಮಿಸುತ್ತದೆ, ಇದೇ ಭಾವನೆಯನ್ನು ಬುಬರ್ ಮಂಡಿಸಲು ಇಚ್ಚಿಸಿದ್ದರು ಎಂಬುದು ಸ್ಮಿತ್ ರ ವಾದ(ಉದಾಹರಣೆಗೆ ಬುಬರ್ ದೇವನನ್ನು ಸರ್ವಕಾಲಿಕ "ಡು" ಎಂದು ವರ್ಣಿಸುತ್ತಾರೆ). ಕಾಫ್ ಮನ್ ಈ ಪದವು ಪ್ರಾಚೀನವಾದುದು ಹಾಗೂ ವ್ಯಕ್ತಿಭಾವರಹಿತವಾದುದೆಂದೂ, "ಯೂ" ಎಂಬುದೇ (ಜರ್ಮನ್ ಭಾಷೆಯ "ಡು" ಪದದಂತೆ) ವಾಡಿಕೆಯಲ್ಲಿರುವುದು ಹಾಗೂ ಆಪ್ತವಾದ ಮಾತುಕತೆಗಳಲ್ಲಿ ಬಳಸಲ್ಪಡುವುದೆಂದೂ, ಹಾಗಾಗಿ "ಯೂ" ಅನ್ನೇ ಬಳಸಬೇಕೆಂದೂ ದೃಢೀಕರಿಸಿದರು.

ಈ ಚರ್ಚೆಯು ಹೀಗೆಯೇ ಮುಂದುವರಿದಿದ್ದರೂ, ಇಂಗ್ಲಿಷ್ ಮಾತನಾಡುವವರ ಜಗತ್ತಿನಲ್ಲಿ ಬುಬರ್ ರ ಪುಸ್ತಕವು ಐ ಎಂಡ್ ದೌ ಎಂದೇ ಪ್ರಖ್ಯಾತವಾಗಿದೆ, ಪ್ರಾಯಶಃ ಸ್ಮಿತ್ ರ ಅನುವಾದವನು ಕಾಫ್ ಮನ್ ರ ಅನುವಾದಕ್ಕಿಂತಲೂ ಬಹಳ ವರ್ಷಗಳ ಮುಂಚೆ ಪ್ರಕಟವಾದುದು ಇದಕ್ಕೆ ಕಾರಣವಾಗಿರಬಹುದು. ಆದಾಗ್ಯೂ, ಸ್ಮಿತ್ ಮತ್ತು ಕಾಫ್ ಮನ್ ಇಬ್ಬರ ಅನುವಾದಗಳೂ ವ್ಯಾಪಕವಾಗಿ ಲಭ್ಯವಾಗಿವೆ.

ಹಸಿಡಿಸಂ (ಭಕ್ತಿಭಾವ) ಮತ್ತು ಅಧ್ಯಾತ್ಮಯೋಗ[ಬದಲಾಯಿಸಿ]

ಬುಬರ್ ಹಸಿಡಿಕ್ (ಭಕ್ತಿಭಾವದ) ವಿದ್ಯೆಯ ಪಂಡಿತರು, ವ್ಯಾಖ್ಯಾನಕಾರರು ಮತ್ತು ಅನುವಾದಕರಾಗಿದ್ದರು. ಅವರು ಹಸಿಡಿಸಂ ಅನ್ನು ಜುದಾಯಿಸಂ ನ ಸಾಂಸ್ಕೃತಿಕ ಪುನಶ್ಚೇತನಗೊಳಿಸುವ ಆಕರವೆಂದು ಭಾವಿಸಿದರು, ಹಾಗೂ ಆಗಾಗ್ಗೆ ಸಮುದಾಯ, ವ್ಯಕ್ತಿಗತ ಬದುಕು, ಮತ್ತು ಸಾಮಾನ್ಯ ಚಟುವಟಿಕೆಗಳಲ್ಲಿ ಅರ್ಥವನ್ನು (ಉದಾಹರಣೆಗೆ ಕೆಲಸಗಾರನಿಗೆ ತನ್ನ ಸಲಕರಣೆಗಳೊಡನೆ ಇರುವ ಸಂಬಂಧ) ಕಂಡುಕೊಳ್ಳುವುದರ ಬಗ್ಗೆ ಹೆಚ್ಚು ಒತ್ತು ನೀಡಿದರು. ಹಸಿಡಿಕ್ ತತ್ವಗಳು ದೇವನ ಅಸ್ತಿತ್ವವನ್ನು ಬೇಷರತ್ತಾಗಿ ಒಪ್ಪಿ ಜೀವನವನ್ನು ನಡೆಸುವ ಕ್ರಮಕ್ಕೆ ಒತ್ತು ಕೊಡುತ್ತವೆ, ಆ ಕ್ರಮದಲ್ಲಿ ದೈನಂದಿನ ಚಟುವಟಿಕೆಗಳು ಮತ್ತು ಧಾರ್ಮಿಕ ಅನುಭವಗಳ ಮಧ್ಯೆ ಯಾವುದೇ ವಿಶಿಷ್ಟವಾದ ವಿಂಗಡಣೆ ಇರುವುದಿಲ್ಲ ಎಂದರು ಬುಬರ್. ಬುಬರ್ ರ ಮಾನವಶಾಸ್ತ್ರದ ತತ್ವಜ್ಞಾನ ಎಂಬ ಕರತಿಯ ಮೇಲೆ ಈ ಚಿಂತನೆಯು ಪ್ರಬಲವಾದ ಪ್ರಭಾವ ಬೀರಿದೆ, ಆ ಕೃತಿಯು ಮಾನವನ ಅಸ್ತಿತ್ವಕ್ಕೆ ಮೂಲ ಆಧಾರವೇ ಸಂವಾದಾತ್ಮಕತೆ ಎಂದು ಪರಿಗಣಿಸುತ್ತದೆ.

೧೯೦೬ರಲ್ಲಿ ಬುಬರ್ ಡೈ ಜೆಷಿಕ್ಟೆನ್ ಡೆಸ್ ರಬ್ಬಿ ನಾಚ್ಮನ್ ಎಂಬ, ಬ್ರೆಸ್ಲೋವ್ ನ ರಬ್ಬಿ ನಾಚ್ಮನ್ ರ ಕಥೆಗಳ ಸಂಗ್ರಹವೊಂದನ್ನು ಬಿಡುಗಡೆ ಮಾಡಿದರು. ಆ ಖ್ಯಾತ ಹಸಿಡಿಕ್ ರೆಬ್ಬೆ ಯ ಕೃತಿಯನ್ನು ಇವರು ಆಧುನಿಕ ಹಸಿಡಿಕ್ ಶೈಲಿಗೆ ಅನುಗುಣವಾಗಿ ಮರುಕಥಾನಕಕ್ಕಿಳಿಸಿ, ಅದನ್ನು ವ್ಯಾಖ್ಯಾನಭರಿತವಾಗಿ ರಚಿಸಿದರು. ಎರಡು ವರ್ಷಗಳ ನಂತರ ಬುಬರ್ ಡೈ ಲೆಜೆಂಡೆ ಡೆಸ್ ಬಾಲ್ಷೆಮ್ ( ಬಾಲ್ ಷೆಮ್ ಟೋವ್ ನ ಕಥೆಗಳು) ಪುಸ್ತಕವನ್ನು ಬಿಡುಗಡೆ ಮಾಡಿದರು; ಬಾಲ್ಷೆಮ್ ಹಸಿಡಿಸಂನ ಸ್ಥಾಪಕರಾಗಿದ್ದರು.

ಹಸಿಡಿಕ್ ಸಂಪ್ರದಾಯದ ಬಗ್ಗೆ ಬುಬರ್ ನೀಡಿದ ವ್ಯಾಖ್ಯಾನವನ್ನು ಓದಿದ ಚೈಮ್ ಪೋಟೋಕ್ ರಂತಹ ಪಂಡಿತರು 'ಬುಬರ್ ಅದನ್ನು ರೋಮಾಂಚಕವಾಗಿಸಲು ಯತ್ನಿಸಿದ್ದಾರೆ' ಎಂದು ಟೀಕಿಸಿದ್ದಾರೆ. ಬುಬರ್ ರ ಕೃತಿ ಟೇಲ್ಸ್ ಆಫ್ ಹಸಿಡಿಮ್ ಪುಸ್ತಕದ ಪರಿಚಯಾತ್ಮಕ ನುಡಿಗಳನ್ನು ಬರೆಯುತ್ತಾ, ಪೋಟೋಕ್ ಬುಬರ್ ಹಸಿಡಿಸಮ್ ನಲ್ಲಿ ಕಾಣಬರುವ "ದಗಾಕೋರತನ, ಅಸ್ಪಷ್ಟತೆ, ಪರಸ್ಪರರಲ್ಲಿ ನಡೆಯುವ ರಕ್ತಪಾತ, ಜನಪದದಲ್ಲಿನ ಗುರುತರವಾದ ಮೂಢನಂಬಿಕೆಗಳು ಮತ್ತು ಭಕ್ತಿಯ ವೈಪರೀತ್ಯಗಳು, ಅದರಲ್ಲಿ ಉಲ್ಲೇಖವಾಗುವ ಟ್ಝಾಡಿಕ್ ಪೂಜೆ, ಅದರ ಅಶ್ಲೀಲವಾದ ಮತ್ತು ದುರ್ಬಲಗೊಳಿಸಲ್ಪಟ್ಟ ಲೂರಿಯಾನಿಕ್ ಕಬ್ಬಾಲಾದ ಪಠಣ"ಗಳನ್ನು ಉಪೇಕ್ಷಿಸಿದ್ದಾರೆ ಎಂದು ಬರೆದಿದ್ದಾರೆ. ಇದಕ್ಕಿಂತಲೂ ಉಗ್ರವಾದ ಟೀಕೆಯೆಂದರೆ ಬುಬರ್ ಹಸಿಡಿಸಮ್ ನಲ್ಲಿನ ಯಹೂದಿ ಕಟ್ಟಳೆಗಳ ಪ್ರಾಮುಖ್ಯತೆಯ ಮಟ್ಟವನ್ನು ತಗ್ಗಿಸಿದ್ದಾರೆ ಎಂಬುದು. ವೈಯಕ್ತಿಕ ಧಾರ್ಮಿಕತೆಗೆ ಅಧಿಕಾರವಾಣಿಯಿಂದ ಕೂಡಿ, ಪಂಥೀಯ ಧರ್ಮದ ಅಗತ್ಯವಿಲ್ಲ ಎಂಬುದನ್ನು ಪ್ರತಿಪಾದಿಸಲು ಹಸಿಡಿಮ್ ಅನ್ನೇ ಮೊರೆ ಹೋಗುತ್ತಿದ್ದ ಬುಬರ್ ರನ್ನು ಹೀಗೆ ಟೀಕಿಸಿದುದು ನಿಜಕ್ಕೂ ಒಂದು ವಿಪರ್ಯಾಸ.

ಬ್ರಿಟ್ ಶಲೋಮ್ ಮತ್ತು ದ್ವಿ-ರಾಷ್ಟ್ರ ಪರಿಹಾರ[ಬದಲಾಯಿಸಿ]

೧೯೨೦ರ ದಶಕದ ಆರಂಭದಲ್ಲಿಯೇ ಬುಬರ್ ದ್ವಿರಾಷ್ಟ್ರ ಯಹೂದಿ-ಅರಬ್ ಸಾಮ್ರಾಜ್ಯವನ್ನು ಸ್ಥಾಪಿಸಲು ಕರೆ ನೀಡುತ್ತಿದ್ದರು; "ಯಹೂದಿಗಳು ಅರಬ್ ಜನರೊಡನೆ ಶಾಂತಿ ಮತ್ತು ಭ್ರಾತೃತ್ವದಿಂದ ಇರಲು ಬಯಸುವುದನ್ನೂ, ಇಬ್ಬರಿಗೂ ತಾಯ್ನಾಡಾದ ಆ ಪ್ರದೇಶವನ್ನು ಒಂದು ರಿಪಬ್ಲಿಕ್ ಆಗಿ ಅಭಿವೃದ್ಧಿಗೊಳಿಸುವ ಇಚ್ಛೆಯನ್ನೂ, ಹಾಗೂ ಅಂತಹ ಪ್ರದೇಶದಲ್ಲಿ ಎರಡೂ ಜನಾಂಗಗಳು ಸ್ವತಂತ್ರವಾಗಿ ಅಭಿವೃದ್ಧಿಗೊಳ್ಳಲು ಅವಕಾಶವಾಗುವಂತೆ ಆ ರಿಪಬ್ಲಿಕ್ ಅನ್ನು ಅನುವಾಗಿಸುವ ಇರಾದೆಯನ್ನೂ ವ್ಯಕ್ತಪಡಿಸಬೇಕು" ಎಂದರು ಬುಬರ್.[೬]

ಝಿಯಾನಿಸಂ ಕೇವಲ ಒಂದು ರಾಷ್ಟ್ರೀಯ ಚಳುವಳಿ ಎಂಬ ಮನೋಭಾವವನ್ನೇ ಅಲ್ಲಗಳೆದ ಬುಬರ್ ಒಂದು ಶ್ರೇಷ್ಠವಾದ ಸಮಾಜದ ನಿರ್ಮಾಣವಾಗುವುದನ್ನು ಕಾಣಲು ಬಯಸಿದರು; "ಆ ಸಮಾಜದಲ್ಲಿ ಅರಬ್ ಜನರ ಮೇಲೆ ಯಹೂದಿಗಳು ಸವಾರಿ ಮಾಡುವಂತಿರಬಾರದು" ಎಂದರು ಬುಬರ್. ದೇಶದಲ್ಲಿ ಯಹೂದಿಗಳು ಅಲ್ಪಸಂಖ್ಯಾತರಾಗಿಯೇ ಉಳಿಯುವಂತಾದರೂ ಸಹ, ಅರಬರೊಡನೆ ಒಂದು ಒಪ್ಪಂದಕ್ಕೆ ಬರಲು ಝಿಯಾನಿಸ್ಟ್ ಚಳುವಳಿ ಅಗತ್ಯವಾಗಿತ್ತು. ೧೯೨೫ರಲ್ಲಿ ಬುಬರ್ ಬ್ರಿಟ್ ಶಲೋಮ್ (ಕಾನ್ವೆಂಟ್ ಆಫ್ ಪೀಸ್) ಎಂಬ ಸಂಘವನ್ನು ಸ್ಥಾಪಿಸುವುದರಲ್ಲಿ ನಿರತರಾಗಿದ್ದರು. ದ್ವಿರಾಷ್ಟ್ರೀಯ ರಾಜ್ಯವನ್ನು ಹುಟ್ಟುಹಾಕುವುದು ಆ ಸಂಘದ ಧ್ಯೇಯವಾಗಿತ್ತು. ತಮ್ಮ ಜೀವನದ ಉಳಿದ ಭಾಗದಾದ್ಯಂತ ಬುಬರ್ ಅರಬರು ಮತ್ತು ಯಹೂದಿಗಳು ಒಂದಲ್ಲ ಒಂದು ದಿನ ಒಂದು ಜಂಟಿ ದೇಶದಲ್ಲಿ ಸೌಹಾರ್ದದಿಂದ ಇರುತ್ತಾರೆಂಬ ನಂಬಿಕೆ ಮತ್ತು ಭರವಸೆ ಇಟ್ಟುಕೊಂಡಿದ್ದರು. ಅದೆಂತೇ ಇರಲಿ, ಬುಬರ್ ಝಿಯಾನಿಸ್ಟ್ ಗಳು ಮತ್ತು ತತ್ವಜ್ಞಾನಿಗಳ ಜೊತೆ ಹಲವಾರು ದಶಕಗಳ ಕಾಲ ಸ್ನೇಹವನ್ನು ಹೊಂದಿದ್ದರು; ಚೈಮ್ ವೀಝ್ಮನ್, ಮ್ಯಾಕ್ಸ್ ಬ್ರಾಡ್, ಹ್ಯೂಗೋ ಬರ್ಗ್ ಮನ್ ಮತ್ತು ಫೆಲಿಕ್ಸ್ ವೆಲ್ಟ್ಷ್ ರಂತಹ ಆತ್ಮೀಯರು ಹಳೆಯ ಯೂರೋಪಿಯನ್ ಕಾಲದಿಂದಲೂ ಪ್ರೇಗ್, ಬರ್ಲಿನ್ ಮತ್ತು ವಿಯೆನ್ನಾದಿಂದ ಹಿಡಿದು ೧೯೪೦, ೫೦, ಹಾಗೂ ೬೦ರ ದಶಕದ ಜೆರೂಸೆಲಂ ನ ವರೆಗೆ ಇವರೊಡನೆ ಸ್ನೇಹವನ್ನು ಹೊಂದಿದ್ದರು.

ಇಸ್ರೇಲಿ ರಾಜ್ಯವು ೧೯೪೮ರಲ್ಲಿ ಸ್ವಾತಂತ್ರ್ಯವನ್ನು ಪಡೆದ ನಂತರ, ಕೇವಲ ಪ್ಯಾಲೆಸ್ಟೈನ್ ನಷ್ಟು ವ್ಯಾಪ್ತಿಗೆ ಸೀಮಿತವಾಗದೆ, ಆ ವ್ಯಾಪ್ತಿಯನ್ನು ಮೀರಿದ "ಹತ್ತಿರದ ಪೂರ್ವದ" ರಾಜ್ಯಗಳನ್ನೊಡಗೂಡಿದ ಒಕ್ಕೂಟದಲ್ಲಿ ಭಾಗವಹಿಸಬೇಕೆಂದು ಸಲಹೆ ಇತ್ತರು.[೭]

ಮುದ್ರಿತ ಕೃತಿಗಳು[ಬದಲಾಯಿಸಿ]

ಮೂಲ ಕೃತಿಗಳು (ಜರ್ಮನ್)[ಬದಲಾಯಿಸಿ]

 • ಡೈ ಜೆಸ್ಕಿಚ್ಟೆನ್ ಡೆಸ್ ರಬ್ಬಿ ನಾಚ್ಮನ್ (೧೯೦೬)
 • ಡೈ ಫನ್ಫ್ ಝಿಗ್ ಸ್ಟೆ ಪ್ಫೋರ್ಟೆ (೧೯೦೭)
 • ಡೈ ಲೆಜೆಂಡೆ ಡೆಸ್ ಬಾಲ್ ಸ್ಖೆಮ್ (೧೯೦೮)
 • ಡೇನಿಯಲ್ - ಗೆಸ್ಪ್ರಾಚೆ ವಾನ್ ಡೆರ್ ವೆರ್ವಿರ್ಕ್ಲಿಚಂಗ್ (೧೯೧೩)
 • ಡೈ ಜ್ಯುಡಿಷೆ ಬೆವೆಗಂಗ್ - ಗೆಸಾಮ್ಮೆಲ್ಟೆ ಆಫ್ಸಾಫ್ಝೆ ಉಂಡ್ ಆನ್ಸ್ ಪ್ರಾಚೆನ್ ೧೯೦೦ - ೧೯೧೫ (೧೯೧೬)
 • ವಾಮ್ ಗೀಸ್ಟ್ ಡೆಸ್ ಜ್ಯೂಡೆಂಟಮ್ಸ್ - ರೆಡೆನ್ ಉಂಡ್ ಗೆಲೇಯ್ಟ್ ವೋರ್ಟೆ (೧೯೧೬)
 • ಡೈ ರೆಡೆ ಡೈ ಲೆಹ್ರೆ ಉಂಡ್ ಡಾಸ್ ಲೈಡ್ - ಡ್ರೇಯ್ ಬೀಯ್ಸ್ ಪೀಯ್ಲೆ (೧೯೧೭)
 • ಎರೇಯ್ನಿಸ್ಸೆ ಉಂಡ್ ಬೆಗೆಗ್ನುಂಗೆನ್ (೧೯೧೭)
 • ಚೈನೀಸಿಷೆ ಗೀಯ್ಸ್ ಟರ್ - ಉಂಡ್ ಲೈಬೆಸ್ಗೆಸ್ಚಿಚ್ಟೆನ್ (೧೯೧೯)
 • ಡೆರ್ ಗ್ರಾಸೆ ಮಗ್ಗಿಡ್ ಉಂಡ್ ಸೀಯ್ನ್ ನಾಷ್ಫೋಲ್ಗೆ (೧೯೨೨)
 • ರೆಡೆನ್ ಉಬೆರ್ ಡಾಸ್ ಜುಡೆಂಟಂ (೧೯೨೩)
 • ಇಖ್ ಉಂಡ್ ಡು (೧೯೨೩)
 • ಡಾಸ್ ವೆರ್ಬೋರ್ಜೀನ್ ಲಿಖ್ಟ್ (೧೯೨೪)
 • ಡೈ ಚಾಸ್ಸಿಡಿಸ್ಚೆನ್ ಬುಷೆರ್ (೧೯೨೮)
 • ಆಸ್ ಉನ್ ಬೆಕಾಂನ್ಟೆನ್ ಸ್ಕ್ರಿಫ್ಟೆನ್ (೧೯೨೮)
 • Ekstatische Konfessionen (೧೯೩೦)
 • ಝ್ವೀಸ್ ಪ್ರಾಷೆ (೧೯೩೨)
 • ಕಾಂಪ್ಫ್ ಉಮ್ ಇಸ್ರೇಲ್ - ರೆಡೆನ್ ಉಂಡ್ ಸ್ಖ್ರಿಫ್ಟೆನ್ ೧೯೨೧–೧೯೩೨ (೧೯೩೩)
 • ಹಂಡೆರ್ಟ್ ಚಾಸ್ಸಿಡಿಷೆ ಜೆಸ್ಚಿಕ್ಟೆನ್ (೧೯೩೩)
 • ಡೈ ಟ್ರೋಸ್ಟಂಗ್ ಇಸ್ರೇಲ್ಸ್ : ಆಸ್ ಜೆಸ್ಕಜಾಹು, ಕಾಪಿಟೆಲ್ ೪೦ ಬಿಸ್ ೫೫ (೧೯೩೩); ಫ್ರಾನ್ಝ್ ರಾಸೆನ್ ಝ್ವೀಗ್ ರೊಡಗೂಡಿ
 • ಎರ್ಝಾಹ್ಲುಂಜೆನ್ ವಾನ್ ಎಂಗ್ಲೀನ್, ಜೀಸ್ಟೆರ್ನ್ ಉಂಡ್ ಡಮೋನೆನ್ (೧೯೩೪)
 • ಡಾಸ್ ಬುಚ್ ಡೆರ್ ಪ್ರೀಸುಂಜೆನ್ (೧೯೩೫); ಫ್ರಾನ್ಝ್ ರಾಸೆನ್ ಝ್ವೀಗ್ ರೊಡಗೂಡಿ
 • ಡ್ಯೂಟಂಗ್ ಡೆಸ್ ಚಸ್ಸಿಡಿಸ್ಮಸ್ - ಡ್ರೇ ವೆರ್ಸುಷೆ (೧೯೩೫)
 • ಡೈ ಜೋಸೆಫ್ಸ್ಲೆಜೆಂಡೆ ಇನ್ ಅಕ್ವಾರೆಲ್ಲಿಯೆರ್ಟೆನ್ ಜೀಚುಂಗೆನ್ ಈನೆಸ್ ಉಂಬೆಕಾಂನ್ಡೆನ್ ರಸ್ಸಿಸ್ಕೆನ್ ಜುದೆನ್ ಡೆರ್ ಬೀಯ್ಡೆರ್ಮೀರ್ಝೀಟ್ (೧೯೩೫)
 • ' ಡೈ ಷ್ರಿಫ್ಟ್ ಇಹ್ರೆ ವೆರ್ಡ್ಯೂಟ್ ಸ್ಕಂಗ್(೧೯೩೬); ಫ್ರಾನ್ಝ್ ರಾಸೆನ್ ಝ್ವೀಗ್ ರೊಡಗೂಡಿ
 • ಆಸ್ ಟೀಯ್ಫೆನ್ ರುಫೆ ಇಖ್ ದಿಖ್ - ಡ್ರೀಉಂಡ್ ಝ್ವಾನ್ಝಿಗ್ ಪ್ಸಾಲ್ಮೆನ್ ಇನ್ ಡೆರ್ ಉರ್ಸ್ ಕ್ರಿಫ್ಟ್ (೧೯೩೬)
 • ಡಾಸ್ ಕೊಮ್ಮೆಂಡೆ  : ಉಂಟರ್ಸಚುಂಜೆನ್ ಝುರ್ ಎಂಟ್ಸ್ ಟೆಹಂಗ್ ಷಿಕ್ಟೆ ಡೆಸ್ ಮೆಸ್ಸಿಯಾನಿಷೆನ್ ಗ್ಲಾಬೆನ್ಸ್ - ೧. ಕನಿಗ್ಟಂ ಗಾಟ್ಟೆಸ್ (೧೯೩೬ ?)
 • ಡೈ ಸ್ಟುಂಡೆ ಉಂಡ್ ಡೈ ಎರ್ಕೆಂಟ್ನಿಸ್ - ರೆಡೆನ್ ಉಂಡ್ ಆಫ್ಸಾಟ್ಝೆ ೧೯೩೩-೧೯೩೫ (೧೯೩೬)
 • ಝಿಯಾನ್ ಆಲ್ಸ್ ಝೀ ಉಂಡ್ ಆಲ್ಸ್ ಆಫ್ಗಾಬೆ - ಜೆಡಾನ್ಕೆನ್ ಆಸ್ ಡ್ರೀ ಜಹ್ರ್ ಝೆಹ್ಟೆನ್ - ಮಿಲ್ಟ್ ಯೀಯ್ನರ್ ರೆಡೆರ್ ಉಬೆರ್ ನ್ಯಾಷನಲಿಸ್ಮಸ್ ಆಲ್ಸ್ ಅಂಹಾಂಗ್ (೧೯೩೬)
 • ವೋರ್ಟೆ ಆನ್ ಡೈ ಜುಗೆಂಡ್ (೧೯೩೮)
 • ಮೋಸೆಹ್ (೧೯೪೫)
 • ಡಯಲಾಗಿಷೆಸ್ ಲೆಬೆನ್ - ಜೆಸಾಮ್ಮೆಲ್ಟೆ ಪೀಲೋಸೋಫಿಷೆ ಉಂಡ್ ಪಡಗೋಗಿಷೆ ಸ್ಖ್ರಿಫ್ಟೆನ್ (೧೯೪೭)
 • ಡೆರ್ ವೆಗ್ ಡೆಸ್ ಮೆಂಷೆನ್ : ನಾಚ್ ಡೆರ್ ಚಾಸ್ಸಿಡಿಷೆನ್ ಲೆಹ್ರೆ (೧೯೪೮)
 • ಡಾಸ್ ಪ್ರಾಬ್ಲೆಮ್ ಡೆಸ್ ಮೆಂಷೆನ್ (೧೯೪೮, ಹೀಬ್ರೂ ಲಿಪಿಯಲ್ಲಿ ೧೯೪೨)
 • ಡೈ ಎರ್ಝಾಹ್ಲುಂಜೆನ್ ಡೆರ್ ಚಾಸ್ಸಿಡಿಂ (೧೯೪೯)
 • ಗಾಗ್ ಉಂಡ್ ಮಗಾಗ್ - ಯೀಯ್ನ್ ಕ್ರಾನಿಕ್ (೧೯೪೯, ಹೀಬ್ರೂ ಲಿಪಿ ೧೯೪೩)
 • ಇಸ್ರೇಲ್ ಉಂಡ್ ಪಾಲಾಸ್ತೀನಾ - ಝುರ್ ಜೆಷಿಷ್ಟೆ ಯೀಯ್ನರ್ ಐಡೀ (೧೯೫೦, ಹೀಬ್ರೂ ಲಿಪಿ ೧೯೪೪)
 • ಡೆರ್ ಗ್ಲಾಬೆ ಡೆರ್ ಪ್ರಾಫೆಟೆನ್ (೧೯೫೦)
 • ಪ್ಫೇಡ್ ಇನ್ ಯುಟೋಪಿಯಾ (೧೯೫೦)
 • ಝ್ವೀ ಗ್ಲಾಬೆನ್ ಸ್ವೀಸೆನ್ (೧೯೫೦)
 • ಉರ್ದಿಸ್ಟಾನ್ಝ್ ಉಂಡ್ ಬ್ರೆಝೀಹಂಗ್ (೧೯೫೧)
 • ಡೆರ್ ಯುಟೋಪಿಷೆ ಸೋಝಿಯಾಲಿಸ್ಮಸ್ (೧೯೫೨)
 • ಬಿಲ್ಡರ್ ವಾನ್ ಗುಟ್ ಉಂಡ್ ಬೋಸ್ (೧೯೫೨)
 • ಡೈ ಚಾಸ್ಸಿಡಿಷೆ ಬಾಟ್ಸ್ ಷಾಫ್ಟ್ (೧೯೫೨)
 • ರೆಕ್ಟ್ ಉಂಡ್ ಅನ್ ರೆಕ್ಟ್ - ಡ್ಯೂಟಂಗ್ ಯೀಯ್ನಿಜರ್ ಸಾಲ್ಮೆನ್ (೧೯೫೨)
 • ಆನ್ ಡೆರ್ ವೆಂಡೆ - ರೆಡೆನ್ ಉಬೆರ್ ಡಾಸ್ ಜುಡೆಂಟಂ (೧೯೫೨)
 • ಝ್ವಿಷೆನ್ ಜೆಸೆಲ್ಸ್ ಷಾಫ್ಟ್ ಉಂಡ್ ಸ್ಟಾಟ್ (೧೯೫೨)
 • ಡಾಸ್ ಎಕ್ಟೆ ಜೆಸ್ ಪ್ರಾಚ್ ಉಂಡ್ ಡೈ ಮಾಗ್ಲಿಷ್ ಕೀಟೆನ್ ಡೆಸ್ ಫ್ರೀಡೆನ್ಸ್ (೧೯೫೩)
 • ಯೀನ್ಸಿಷ್ಟೆನ್ : ಆಸ್ ಡೆನ್ ಸ್ಕ್ರಿಫ್ಟೆನ್ ಜೆಸಾಮ್ಮೆಲ್ಟ್ (೧೯೫೩)
 • ರೆಡೆನ್ ಉಬೆರ್ ಎರ್ಝೀಹಂಗ್ (೧೯೫೩)
 • ಗಾಟ್ಟೆಸ್ ಫಿನ್ ಸ್ಟೆಮಿಸ್ - ಬೆಟ್ರಾಷ್ಟುಂಜೆನ್ ಝುರ್ ಬೆರ್ಝೀಹಂಗ್ ಝ್ವಿಷೆನ್ ರಿಲೀಜನ್ ಉಂಡ್ ಫಿಲೋಸೊಫೀ (೧೯೫೩)
 • ಹಿನ್ವೀಯ್ಸ್ - ಜೆಸಾಮ್ಮೆಲ್ಟೆ ಎಸ್ಸೇಸ್ (೧೯೫೩)
 • ಡೈ ಫಂಫ್ ಬುಷೆರ್ ಡೆರ್ ವೀಯ್ಸಂಗ್ - ಝು ಯೀನರ್ ನ್ಯೂಯೆನ್ ವೆರ್ಡ್ಯೂಟ್ ಸ್ಖಂಗ್ ಡೆರ್ ಸ್ಖ್ರಿಫ್ಟ್ "' (೧೯೫೪); ಫ್ರಾನ್ಝ್ ರೋಸೆನ್ ಝ್ವೀಗ್ ಜೊತೆಗೂಡಿ
 • ಡೈ ಸ್ಖ್ರಿಫ್ಟೆನ್ ಉಬೆರ್ ಡಾಸ್ ಡಯಲಾಗಿಷೆ ಪ್ರಿನ್ ಝಿಪ್ (ಇಖ್ ಉಂಡ್ ಡು , ಝ್ವೀಸ್ ಪ್ರಾಷೆ , ಡೈ ಫ್ರೇಜ್ ಅನ್ ಡೆನ್ ಯೀನ್ಝೆಲ್ನೆನ್ , ಎಲಿಮೆಂಟೆ ಡೆಸ್ ಝ್ವಿಷೆನ್ ಮೆನ್ ಸ್ಖಿಷೆನ್ ) (೧೯೫೪)
 • ಸೆಹೆರ್ಟಂ - ಅಂಫಾಂಗ್ ಉಂಡ್ ಆಸ್ ಗಾಂಗ್ (೧೯೫೫)
 • ಡೆರ್ ಮೆನ್ಷ್ ಉಂಡ್ ಸೀಯ್ನ್ ಜೆಬಿಲ್ಡ್ (೧೯೫೫)
 • ಸ್ಖಲ್ಡ್ ಉಂಡ್ ಸ್ಖಲ್ಡ್ ಜೆಫುಹ್ಲೆ (೧೯೫೮)
 • ಬೆಗೆಗ್ನಂಗ್ - ಆಟಫಬಯಾಗ್ರಫಿಸ್ ಷೆ ಫ್ರಾಗ್ಮೆಂಟೆ (೧೯೬೦)
 • ಲೋಗೋಸ್ : ಝ್ವೀ ರೆಡೆನ್ (೧೯೬೨)
 • ನಾಚ್ ಲೆಸೆ (೧೯೬೫)

ಸಂಗ್ರಹ ಕೃತಿಗಳು[ಬದಲಾಯಿಸಿ]

ವೆರ್ಕೆ ೩ ಸಂಪುಟಗಳು (೧೯೬೨–೧೯೬೪)

 • I ಸ್ಖ್ರಿಫ್ಟೆನ್ ಝುರ್ ಫಿಲೋಸೊಫೀ (೧೯೬೨)
 • II ಸ್ಖ್ರಿಫ್ಟೆನ್ ಝುರ್ ಬೈಬಲ್ (೧೯೬೪)
 • III ಸ್ಖ್ರಿಫ್ಟೆನ್ ಝುಮ್ ಚಾಸ್ಸಿಡಿಸ್ಮಸ್ (೧೯೬೩)

ಮಾರ್ಟಿನ್ ಬುಬರ್ ವೆರ್ಕಾಸ್ಗೇಬ್ (MBW). ಬೆರ್ಲಿನೆರ್ ಅಕಾಡೆಮೀ ಡೆರ್ ವಿಸ್ಸೆನ್ ಷಾಫ್ಟೆನ್ / ಇಸ್ರೇಲ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಹ್ಯುಮಾನಿಟೀಸ್, ಸಂಪಾದಕ ಪಾಲ್ ಮೆಂಡೆಸ್ -ಫ್ಲಾಹ್ರ್ & ಪೀಟರ್ ಷೇರ್, ಮಾರ್ಟಿನಾ ಅರ್ಬನ್ ರೊಡಗೂಡಿ; ೨೧ ಸಂಪುಟಗಳು ಯೋಜಿತವಾಗಿವೆ (೨೦೦೧ - )

- ಪತ್ರ ವ್ಯವಹಾರ[ಬದಲಾಯಿಸಿ]

ಬ್ರೀಫ್ ವೆಷೆಲ್ ಆಸ್ ಸೀಯ್ಬೆನ್ ಜಹ್ರ್ ಝೆಹ್ನ್ ಟೆನ್ ೧೮೯೭-೧೯೬೫ (೧೯೭೨–೧೯೭೫)

 • I : ೧೮೯೭-೧೯೧೮ (೧೯೭೨)
 • II : ೧೯೧೮-೧೯೩೮ (೧೯೭೩)
 • III : ೧೯೩೮-೧೯೬೫ (೧೯೭೫)

ಜೀವನಚರಿತ್ರೆಗಳು[ಬದಲಾಯಿಸಿ]

 • ವುಲ್ಫ್ ಗ್ಯಾಂರ್ ಝಿಂಕ್ ಮಾರ್ಟಿನ್ ಬುಬರ್ - ೧೮೭೮/೧೯೭೮ (೧೯೭೮)
 • ಕ್ಲಾರಾ ಲೆವಿ ಕೊಯೆನ್ ಮಾರ್ಟಿನ್ ಬುಬರ್ (೧೯೯೧)

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಪಾಲ್ ಆರ್ಥರ್ ಸ್ಕ್ಲಿಪ್ ಮತ್ತು ಮಾರಿಸ್ ಫ್ರೀಡ್ಮನ್ ದ ಫಿಲಾಸಫಿ ಆಫ್ ಮಾರ್ಟಿನ್ ಬುಬರ್ (೧೯೬೭)
 • ರಿವ್ಕಾ ಹಾರ್ವಿಟ್ಝ್ ಬುಬರ್ಸ್ ವೇ ಟು "ಐ ಎಂಡ್ ದೌ" - ಮಾರ್ಟಿನ್ ಬುಬರ್ ರ ಉಪನ್ಯಾಸಗಳ ಒಂದು ಐತಿಹಾಸಿಕ ವಿಶ್ಲೇಷಣೆ ಹಾಗೂ ಚೊಚ್ಚಲ ಪ್ರಕಟಣೆ "ರಿಲೀಜನ್ ಆಲ್ಸ್ ಜೆಜೆನ್ವಾರ್ಟ್" (೧೯೭೮)
 • ಮಾರ್ಗಾಟ್ ಕಾನ್ & ರಫೇಲ್ ಬುಬರ್ ಮಾರ್ಟಿನ್ ಬುಬರ್ - ಎ ಬಿಬ್ಲಿಯೋಗ್ರಫಿ ಆಫ್ ಹಿಸ್ ರೈಟಿಂಗ್ಸ್, ೧೮೯೭-೧೯೭೮ (೧೯೮೦)
 • ಜೋಷಿಮ್ ಇಸ್ರೇಲ್ ಮಾರ್ಟಿನ್ ಬುಬರ್ - ಡಯಲಾಗ್ ಫಿಲೋಸೊಫೀ ಉಂಡ್ ಥಿಯೋರೀ ಉಂಡ್ ಪ್ರಾಕ್ಸಿಸ್ (೨೦೧೦)

ಇವನ್ನೂ ಗಮನಿಸಿ‌[ಬದಲಾಯಿಸಿ]

 • ಅಸ್ತಿತ್ವಧರ್ಮದ ಚಿಕಿತ್ಸೆ
 • ತಪ್ಪಿತಸ್ಥ ಮನೋಭಾವ
 • ಹ್ಯೂಮನಿಸ್ಟಿಕ್ ಮನೋವಿಜ್ಞಾನ
 • ಪರಸ್ಪರಾನ್ವಯತೆ
 • ಸಾಂದರ್ಭಿಕ ಚಿಕಿತ್ಸೆ
 • ಫ್ರಾನ್ಝ್ ರೋಸೆನ್ ಝ್ವೀಗ್
 • ಆಂಡ್ರೆ ನೆಹ್ರರ್
 • ಇಸ್ರೇಲ್ ಪ್ರೈಝ್ ವಿಜೇತರ ಪಟ್ಟಿ
 • ಬಯಾಲಿಕ್ ಬಹುಮಾನ ವಿಜೇತರ ಪಟ್ಟಿ
 • ಯಹೂದಿ ಅಸ್ತಿತ್ವಧರ್ಮ

ಉಲ್ಲೇಖಗಳು‌‌[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2009-08-04. Retrieved 2011-05-06.
 2. "ದ ಎಕ್ಸಿಸ್ಟೆನ್ಷಿಯಲ್ ಪ್ರೈಮರ್". Archived from the original on 2011-06-15. Retrieved 2011-05-06.
 3. "Israel Prize recipients in 1958 (in Hebrew)". Israel Prize Official Site. Archived from the original on 8 ಫೆಬ್ರವರಿ 2012. Retrieved 6 ಮೇ 2011.
 4. "List of Bialik Prize recipients 1933-2004 (in Hebrew), Tel Aviv Municipality website" (PDF). Archived from the original (PDF) on 2007-12-17. Retrieved 2011-05-06.
 5. Buber, Martin (1947; 2002). Between Man and Man. Routledge. pp. 250–251. {{cite book}}: Check date values in: |year= (help); External link in |title= (help)
 6. [12]
 7. Buber, Martin (2005) [1954]. "We Need The Arabs, They Need Us!". In Paul Mendes-Flohr (ed.) (ed.). A Land of Two Peoples. University of Chicago. ISBN 0-226-07802-7. {{cite book}}: |editor= has generic name (help)

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: