ವಿಷಯಕ್ಕೆ ಹೋಗು

ಮಾದಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Citron
Citrus medica
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಸ್ಯಾಪಿಂಡೇಲ್ಸ್
ಕುಟುಂಬ: ರೂಟೇಸಿಯೇ
ಕುಲ: ಸಿಟ್ರಸ್
ಪ್ರಜಾತಿ:
C. medica
Binomial name
Citrus medica

ಮಾದಳ ರೂಟೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ (ಸಿಟ್ರನ್).[೧] ನಿಂಬೆ, ಚಕ್ಕೋತ, ಕಿತ್ತಳೆಗಳ ಹತ್ತಿರ ಸಂಬಂಧಿ. ಮಹಾಫಲ ಪರ್ಯಾಯ ನಾಮ. ಸಸ್ಯವೈಜ್ಞಾನಿಕವಾಗಿ ಇದು ಸಿಟ್ರಸ್ ಮೆಡಿಕ ಎಂಬ ಪ್ರಭೇದ.

ಇದರ ತವರು ಭಾರತ ಎನ್ನಲಾಗಿದೆ.[೨] ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶ, ಖಾಸಿ ಮತ್ತು ಗ್ಯಾರೊಬೆಟ್ಟಗಳಲ್ಲಿ ಇದರ ಕಾಡುಬಗೆಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಭಾರತಾದ್ಯಂತ ಆರ್ದ್ರತೆ ಮತ್ತು ಉಷ್ಣತೆ ಹೆಚ್ಚಾಗಿರುವಂಥ ಎಡೆಗಳಲ್ಲಿ ಇದನ್ನು ಅಲ್ಲಲ್ಲಿ ಕೃಷಿ ಮಾಡುವುದನ್ನು ಗಮನಿಸಬಹುದು.

ಬಗೆಗಳು

[ಬದಲಾಯಿಸಿ]

ಮಾದಳದಲ್ಲಿ ಹುಳಿ ಮತ್ತು ಸಿಹಿ ಎಂಬ ಎರಡು ಮುಖ್ಯ ಗುಂಪುಗಳಿದ್ದು ಇವು ಒಂದೊಂದರಲ್ಲೂ ಕೆಲವು ಬಗೆಗಳುಂಟು. ಇವುಗಳ ಪೈಕಿ ಮುಖ್ಯವಾದವು: 1 ಚಾಂಗುರ-ಸಣ್ಣ ಕೆಲವು ಉರುಟಾದ ಕಾಯಿಗಳುಳ್ಳ ಕಾಡು ಬಗೆ. ಇದರ ಕಾಯಿಗಳಲ್ಲಿ ತಿರುಳು ಹೆಚ್ಚಾಗಿಲ್ಲ. 2 ತುರುಂಜ್-ದೊಡ್ಡ ಗಾತ್ರದ ಹಣ್ಣುಗಳುಳ್ಳ ಬಗೆ. ತಿರುಳು ಹುಳಿಯಾಗಿಯೂ ಸಿಪ್ಪೆ ಕೊಂಚ ಸಿಹಿಯಾಗಿಯೂ ಇದೆ. 3 ಮಾದಂಕ್ರಿ-ದೊಡ್ಡ ಗಾತ್ರದ ಹಣ್ಣುಗಳುಳ್ಳದ್ದು. ತಿರುಳು ಸಿಹಿಯಾಗಿದೆ. 4 ಬಜೋರ-ಸಣ್ಣ ಗಾತ್ರದ ಹುಳಿ ತಿರುಳಿನ ಹಣ್ಣುಗಳುಳ್ಳ ಬಗೆ. ಸಿಪ್ಪೆ ತೆಳುವಾಗಿದೆ. ಹೆಚ್ಚು ಪ್ರಮಾಣದಲ್ಲಿ ರಸ ಕೊಡುತ್ತದೆ. ಇವಲ್ಲದೆ ಇದೇ ಪ್ರಭೇದದ ಸಾರ್ಕೊಡ್ಯಾಕ್ಟಿಲಿಸ್ ಎಂಬ ಬಗೆಯೊಂದಿದ್ದು ಇದರ ಹಣ್ಣುಗಳು ಕೈಬೆರಳುಗಳಂತೆ ಉದ್ದುದ್ದ ಇವೆ.

ವಿವರಗಳು

[ಬದಲಾಯಿಸಿ]

ಮಾದಳ ಸುಮಾರು 3 ಮೀ ಎತ್ತರಕ್ಕೆ ಬೆಳೆಯುವ ಪೊದೆ ರೂಪದ ಮರ. ಎಲೆಗಳೂ ದೊಡ್ಡವು, ಸಣ್ಣ ತೊಟ್ಟುಳ್ಳವು. ತೊಟ್ಟಿನ ಆಚೀಚೆ ರೆಕ್ಕೆಗಳಿಲ್ಲ. ರೆಂಬೆಗಳಲ್ಲಿ ಮುಳ್ಳುಗಳುಂಟು. ಹಣ್ಣು ದೊಡ್ಡಗಾತ್ರದ್ದು. ಉದ್ದುದ್ದವಾಗಿದ್ದು ಚೂಚುಕದಂತೆ ಚೂಪಾದ ತುದಿಯನ್ನು ಪಡೆದಿದೆ. ಸಿಪ್ಪೆ ಮಂದ ಹಾಗೂ ಒರಟು. ಮಾಗಿದಾಗ ಹಳದಿಬಣ್ಣವನ್ನು ತಳೆಯುತ್ತದೆ. ತಿರುಳು ತಿಳಿಹದಿ ಬಣ್ಣದ್ದು, ಕಡಿಮೆ ಮೊತ್ತದಲ್ಲಿದೆ. ಕೊಂಚ ಹುಳಿಯಾಗಿಯೊ ಇಲ್ಲವೆ ಸ್ವಲ್ಪ ಸಿಹಿಯಾಗಿಯೊ ಇದೆ.

ಉಪಯೋಗಗಳು

[ಬದಲಾಯಿಸಿ]

ಮಾದಳವನ್ನು ಉಪ್ಪಿನಕಾಯಿ ರೂಪದಲ್ಲಿ ಬಳಸುವುದೇ ಹೆಚ್ಚು. ಇದರ ರಸ ತಂಪುಕಾರಕ, ಪ್ರತಿಬಂಧಕ ಎಂದು ಹೆಸರಾಗಿದೆ. ಸಿಪ್ಪೆ ಅತಿಸಾರಕ್ಕೆ ಒಳ್ಳೆಯ ಮದ್ದು ಎನ್ನಲಾಗಿದೆ. ಸಿಪ್ಪೆ ಹಾಗೂ ತಿರುಳುಗಳನ್ನು ಸಕ್ಕರೆ ಪಾಕದಲ್ಲಿ ಕುದಿಸಿ ಮುರಬ್ಬ ತಯಾರಿಸುವುದಿದೆ.

ಮಾದಳದ ಚೌಬೀನೆ ಬಿಳಿಬಣ್ಣದ್ದೂ ಸಾಕಷ್ಟು ಗಡುಸಾದುದೂ ಆಗಿದ್ದು ಸೂಕ್ಷ್ಮ ರಚನೆ ತೋರುವುದರಿಂದ ಕೃಷಿ ಉಪಕರಣಗಳ ತಯಾರಿಕೆಗೆ ಒದಗುತ್ತದೆ. ರೆಂಬೆಗಳಿಂದ ಊರುಗೋಲು ತಯಾರಿಸುವುದುಂಟು.

ಉಲ್ಲೇಖಗಳು

[ಬದಲಾಯಿಸಿ]
  1. http://eol.org/pages/582203/details
  2. Wu, Guohong Albert; Terol, Javier; Ibanez, Victoria; López-García, Antonio; Pérez-Román, Estela; Borredá, Carles; Domingo, Concha; Tadeo, Francisco R; Carbonell-Caballero, Jose; Alonso, Roberto; Curk, Franck; Du, Dongliang; Ollitrault, Patrick; Roose, Mikeal L. Roose; Dopazo, Joaquin; Gmitter Jr, Frederick G.; Rokhsar, Daniel; Talon, Manuel (2018). "Genomics of the origin and evolution of Citrus". Nature. 554 (7692): 311–316. Bibcode:2018Natur.554..311W. doi:10.1038/nature25447. PMID 29414943.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಮಾದಳ&oldid=1168724" ಇಂದ ಪಡೆಯಲ್ಪಟ್ಟಿದೆ