ಮಲಿಕ್ ಸರ್ವಾರ್
ಮಲಿಕ್ ಸರ್ವಾರ್ 1394ರಲ್ಲಿ ಅಸ್ತಿತ್ವಕ್ಕೆ ಬಂದ ಷಾರ್ಖಿ ಸ್ವತಂತ್ರ ರಾಜಮನೆತನದ ಸ್ಥಾಪಕ. ಈತ ನಪುಂಸಕ.[೧] ಮೊದಲು ಈತ ಫಿರೋಜ಼್ ಷಹ ತೊಗಲಕನ ಆಶ್ರಯದಲ್ಲಿ ಒಬ್ಬ ಅಧಿಕಾರಿಯಾಗಿದ್ದ. ಇವನ ಅಂದಿನ ಸ್ಥಾನಮಾನಗಳ ಬಗ್ಗೆ ಖಚಿತವಾಗಿ ಏನೂ ತಿಳಿಯದು. ಆದರೆ ಫಿರೋಜ಼ನ ಮರಣದ ಬಳಿಕ ಸುಲ್ತಾನನ ಸಿಂಹಾಸನಕ್ಕಾಗಿ ನಡೆದ ಒಳಜಗಳದಲ್ಲಿ ಈತ ಪ್ರಮುಖ ಪಾತ್ರ ವಹಿಸಿದ. ಸುಲ್ತಾನ್ ಅಬು ಬಕರ್‌ನ ಕಾಲದಲ್ಲಿ ಷಹ್ನ ಇ ಷಹರ್ ಎಂಬ ಅಧಿಕಾರದಲ್ಲಿ ಈತ ಮುಂದುವರಿದ.
ಮುಹಮ್ಮದ್ ಷಹನ ಕಾಲದಲ್ಲಿ
[ಬದಲಾಯಿಸಿ]ಫಿರೋಜ಼ನ ಕಿರಿಯ ಮಗನಾದ ಮುಹಮ್ಮದ್ ಷಹನ ಬೆಂಬಲಿಗನಾಗಿದ್ದ. ಅಬು ಬಕರನ ವಿರುದ್ಧ ಮುಹಮ್ಮದ್ ಹೋರಾಡತೊಡಗಿದ. ಸರ್ವಾರ್ 50,000 ಸೈನ್ಯಬಲದೊಡನೆ ಮುಹಮ್ಮದನನ್ನು ಕೂಡಿಕೊಂಡ. ಇವನೊಂದಿಗೆ ಕೆಲವರು ಪ್ರಾಂತ್ಯಾಧಿಕಾರಿಗಳೂ ಸೇರಿದರು. ಇದರಿಂದ ತುಷ್ಟನಾದ ಮುಹಮ್ಮದ್ ಇವನನ್ನು ವಜ಼ೀರನಾಗಿ ನೇಮಿಸಿಕೊಂಡು ಇವನಿಗೆ ಖ್ವಾಜಾ ಇ ಜಹಾನನೆಂಬ ಬಿರುದನ್ನಿತ್ತ. ಆದರೆ ಕುಂಡ್ಲಿಯ ಕದನದಲ್ಲಿ ಮುಹಮ್ಮದ್ ಸೋತು ಸರ್ವಾರನೊಂದಿಗೆ ಜಲೇಸರಕ್ಕೆ ಹಿಂದಿರುಗಿದ. ಒಂದು ವರ್ಷದೊಳಗೆ ದೆಹಲಿಯ ರಾಜಕೀಯ ಪರಿಸ್ಥಿತಿಗಳು ಮುಹಮ್ಮದನಿಗೆ ಅನುಕೂಲಕರವಾಗಿ ಪರಿಣಮಿಸಿದುವು. ಅಲ್ಲಿಯ ಅಮೀರರು ಮುಹಮ್ಮದನನ್ನು ಸುಲ್ತಾನ್ ಪದವಿಗೇರಿಸಿದರು. ಅವರಲ್ಲಿ ಪ್ರಮುಖನಾದ ಮೀರ್ ಹಜ಼ೀಬ್ ಸುಲ್ತಾನಿಯನ್ನು ಮುಹಮ್ಮದ್ ತನ್ನ ವಜ಼ೀರನಾಗಿಯೂ ಸರ್ವಾರನನ್ನು ಅವನ ಸಹಾಯಕನಾಗಿಯೂ (ನಾಯಿಬ್) ನೇಮಿಸಿದ. ಇದು ಸರ್ವಾರನಿಗೆ ತೃಪ್ತಿ ನೀಡಲಿಲ್ಲ. ಮುಹಮ್ಮದ್ ಜಲೇಸರದಲ್ಲಿ ಮುಹಮ್ಮದಾಬಾದ್ ಕೋಟೆಯನ್ನು ಕಟ್ಟಿಸುತ್ತಿದ್ದಾಗ ವಜ಼ೀರ ಆತನ ವಿರುದ್ಧ ದಂಗೆ ಎದ್ದಿರುವನೆಂದು ಸುಲ್ತಾನನಲ್ಲಿ ಆರೋಪಣೆ ಸಲ್ಲಿಸಿದ. ದೆಹಲಿಗೆ ಹಿಂದಿರುಗಿದ ಸುಲ್ತಾನ ಯಾವ ವಿಚಾರಣೆಯನ್ನೂ ಮಾಡದೆ ಸುಲ್ತಾನಿಯನ್ನು ಗಲ್ಲಿಗೇರಿಸಿ ಸರ್ವಾರನನ್ನು ವಜ಼ೀರ್ ಖ್ವಾಜಾ ಜಹಾನನಾಗಿ ನೇಮಿಸಿದ. ಸರ್ವಾರ್ ಈ ಪದವಿಯಲ್ಲಿ 1394ರ ವರೆಗೂ ಮುಂದುವರಿದ. ಆ ವೇಳೆಗೆ ಮುಹಮ್ಮದ್ ಷಹ ತೀರಿಕೊಂಡು ಅಲ್ಲಾವುದ್ದೀನ್ ಸಿಕಂದರ್ ಷಹ ಸುಲ್ತಾನನಾದ. ಈತನ ಬಳಿಕ, 1394ರ ಮಾರ್ಚ್ ತಿಂಗಳಲ್ಲಿ ಸರ್ವಾರ್ ಅನೇಕರ ಮನವೊಲಿಸಿಕೊಂಡು ಮುಹಮ್ಮದನ ಕೊನೆಯ ಮಗನಾದ ಮಹಮೂದನನ್ನು ಪಟ್ಟಕ್ಕೇರಿಸಿದ.
ನಂತರದ ವರ್ಷಗಳು
[ಬದಲಾಯಿಸಿ]ಇಷ್ಟರಲ್ಲಿ ಜೌನ್‌ಪುರದಲ್ಲಿ ಅಶಾಂತ ಪರಿಸ್ಥಿತಿ ತಲೆದೋರಿದ ಕಾರಣ ಮಹಮೂದ್ ಸರ್ವಾರನನ್ನು ಅಲ್ಲಿಗೆ ಕಳುಹಿಸಿದ. ಸುಲ್ತಾನಸ್ ಷಾರ್ಖ್ ಎಂಬ ಬಿರುದನ್ನು ಪಡೆದು ಅಲ್ಲಿಗೆ ಬಂದ ಸರ್ವಾರ್ ಎಟಾವ, ಕೋಲಿ, ಕನೌಜ್ ಮುಂತಾದ ಕಡೆಗಳಲ್ಲಿ ತಲೆದೋರಿದ್ದ ಗಲಭೆಗಳನ್ನು ಅಡಗಿಸಿ ಕ್ರಮೇಣ ಅಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡ.[೨] ಇಷ್ಟರಲ್ಲಿ ತೈಮೂರ ದೆಹಲಿಯ ಮೇಲೆ ದಂಡೆತ್ತಿ ಬಂದ. ತತ್ಪರಿಣಾಮವಾಗಿ ಉಂಟಾದ ಅನಿಶ್ಚಿತ ಪರಿಸ್ಥಿತಿಯ ಲಾಭ ಪಡೆದು ಸರ್ವಾರ್ ಜೌನ್‌ಪುರದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡು ಆ ಸುತ್ತಲಿನ, ಎಂದರೆ ಕನೌಜಿನಿಂದ ಬಿಹಾರದವರೆಗಿನ, ಪ್ರದೇಶದ ಸುಲ್ತಾನನಾದ. ಹೀಗೆ ಅಲ್ಲಿ ಷಾರ್ಖ್ ಮನೆತನ ಅಸ್ತಿತ್ವಕ್ಕೆ ಬಂತು. ಅನಂತರ ಇವನು ಈಗಿನ ಅಲೀಗಢ, ಮೊರಾದಾಬಾದ್, ಮೈನ್‌ಪುರಿ ಜಿಲ್ಲೆ ಮುಂತಾದವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಸುಮಾರು ಐದು ವರ್ಷಗಳ ಆಳ್ವಿಕೆಯ ಬಳಿಕ ಆಕಸ್ಮಿಕವಾಗಿ 1399ರಲ್ಲಿ ಸರ್ವಾರ್ ಮರಣಹೊಂದಿದ. ದೆಹಲಿಯ ಸುಲ್ತಾನನ ಕೈಕೆಳಗೆ ನುರಿತ ಅಧಿಕಾರಿಯೂ, ಸೇನಾನಿಯೂ ಆಗಿದ್ದ ಈತ ಶೀಘ್ರದಲ್ಲಿ ತನ್ನ ರಾಜ್ಯದಲ್ಲಿ ಸುವ್ಯವಸ್ಥಿತವಾದ ಆಡಳಿತ ರೂಪಿಸಿದ. ಅತೃಪ್ತರಾಗಿದ್ದ ಪ್ರಜೆಗಳನ್ನೂ, ಭೂಮಾಲೀಕರನ್ನೂ ತನ್ನ ನಿಷ್ಠಾವಂತ ಪ್ರಜೆಗಳಾಗುವಂತೆ ಮನವೊಲಿಸಿಕೊಂಡ. ರಾಜಧಾನಿಯಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿ ಅದನ್ನು ಹೆಚ್ಚು ಸುಂದರವಾದ ನಗರವನ್ನಾಗಿ ಮಾಡಿದ. ಬಹು ಬೇಗ ಅದು ಸಾಹಿತ್ಯ ಸಂಸ್ಕೃತಿಗಳ, ಸೌಂದರ್ಯದ ನೆಲೆವೀಡಾಗಿ ಅನೇಕರ ಮೆಚ್ಚುಗೆ ಪಡೆಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ Hawley, John C. (2008-06-25). India in Africa, Africa in India: Indian Ocean Cosmopolitanisms (in ಇಂಗ್ಲಿಷ್). Indiana University Press. ISBN 978-0-253-00316-4.
- ↑ Saeed 1972, p. 30–32.
ಗ್ರಂಥಸೂಚಿ
[ಬದಲಾಯಿಸಿ]- Saeed, Mian Muhammad (1972). The Sharqi of Jaunpur: A Political & Cultural History (in ಇಂಗ್ಲಿಷ್). University of Karachi.