ನಪುಂಸಕತೆ
ಗೋಚರ
ನಪುಂಸಕತೆ - ವಯಸ್ಕಪುರುಷ ವ್ಯಕ್ತಿಯಲ್ಲಿ ವಯೋಧರ್ಮಕ್ಕೆ ತಕ್ಕಂಥ ಸಂಭೋಗಸಾಮರ್ಥ್ಯ ಇಲ್ಲದಿರುವಿಕೆ ( ಇಂಪೊಟೆನ್ಸ್).
ನಪುಂಸಕತ್ವ ಮತ್ತು ಬರಡುತನ
[ಬದಲಾಯಿಸಿ]- ಲೈಂಗಿಕ ವಿಚಾರಗಳಿಂದ ಉದ್ರೇಕಗೊಂಡು ನಿಮಿರಬೇಕಾದ ಶಿಶ್ನ ನಿಮಿರದಿರುವುದೇ ನಪುಂಸಕತ್ವಕ್ಕೆ ಮುಖ್ಯ ಕಾರಣ. ಶಿಶ್ನ ನಿಮಿರದೆ ಸಂಭೋಗಕ್ರಿಯೆ ಸಫಲವಾಗಲಾರದು; ವೀರ್ಯಸ್ಖಲನ ವಾಗಲಾರದು. ಆದ್ದರಿಂದ ನಪುಂಸಕರು ಬರಡರಾಗಿರುವುದು ಸಹಜ.
- ಲೈಂಗಿಕಾಸಕ್ತಿ, ಸಂಭೋಗಸಾಮರ್ಥ್ಯ, ವೀರ್ಯಾಣುಗಳ ಉತ್ಪತ್ತಿ ಮತ್ತು ವೀರ್ಯಸ್ಖಲನ ಇವುಗಳ ಹತೋಟಿ ಕ್ರಮಗಳು ಬೇರೆಬೇರೆಯೇ ಆಗಿದ್ದರೂ ಇವೆಲ್ಲ ಕ್ರಿಯೆಗಳನ್ನೂ ಕೊಂಡಿಹಾಕಿದಂತೆ ಜೋಡಿಸಿ ಮಾನಸಿಕ ಮತ್ತು ದೈಹಿಕ ವ್ಯಾಪಾರಗಳು ಇರುವುದರಿಂದ ಒಂದು ಕ್ರಿಯೆಯ ಮೇಲೆ ಇನ್ನೊಂದರ ಅವ್ಯವಸ್ಥೆ ಪರಿಣಾಮವನ್ನು ಉಂಟುಮಾಡುವುದು ಆಶ್ಚರ್ಯವಲ್ಲ.
- ಆದರೆ ಈ ರೀತಿ ಪರಿಣಾಮಗಳು ಯಾವಾಗಲೂ ಕಂಡುಬರಬೇಕೆಂಬುದು ಖಚಿತವಲ್ಲ. ಸಂಭೋಗಾಭಿಲಾಷೆ ಇಲ್ಲದಿರುವವರು ನಪುಂಸಕತೆಯನ್ನು ತೋರುವುದು ವ್ಯಕ್ತವೇ. ಆದರೆ ಅವರಲ್ಲಿ ವೀರ್ಯಾಣುಗಳ ಹಾಗೂ ವೀರ್ಯದ ಉತ್ಪತ್ತಿಕ್ರಿಯೆ ಕುಂದಿಲ್ಲದೆ ಇರಬಹುದು. ಮಾನಸಿಕ, ದೈಹಿಕ ಕಾರಣಗಳಿಂದ ಸಂಭೋಗಾಭಿಲಾಷೆ ತಾತ್ಕಾಲಿಕವಾಗಿ ನಾಶವಾಗಿರಬಹುದು.
- ಅಂಥವರಲ್ಲಿ ನಪುಂಸಕತೆಯೂ ತಾತ್ಕಾಲಿಕ. ಅನೇಕ ಬರಡರು ನಪುಂಸಕರಾಗಿರುತ್ತಾರೆ. ಆದರೆ ವೀರ್ಯೋತ್ಪತ್ತಿ ಸಾಮರ್ಥ್ಯವಿಲ್ಲದೆ ಇರುವವರೆಲ್ಲರೂ ಸಂಭೋಗಾಭಿಲಾಷೆ ಸಾಮರ್ಥ್ಯಗಳಿಲ್ಲದ ನಪುಂಸಕರಾಗಿರುತ್ತಾರೆಂಬುದು ಸುಳ್ಳು.
ಕಾರಣಗಳು
[ಬದಲಾಯಿಸಿ]- ನಪುಂಸಕತೆ ನಾನಾ ಕಾರಣಗಳಿಂದ ಸಂಭವಿಸಬಹುದು. ಜನನಾಂಗಗಳ ಆಜನ್ಮ ಹಾಗೂ ಆರ್ಜಿತನ್ಯೂನತೆ ವೈಪರೀತ್ಯಗಳಿಂದ, ಉದಾಹರಣೆಗೆ ಹೈಪೋಸ್ಪೇಡಿಯಾಸ್, ಪ್ರಬುದ್ಧಗೊಳ್ಳದ ಶಿಶ್ನವೃಷಣಗಳು, ಆಘಾತದಿಂದ ಪರಿಣಮಿಸಿದ ಕುಂಠಿತ ಮೂತ್ರನಾಳ ಇವುಗಳಿಂದ ನಪುಂಸಕತೆ ಉಂಟಾಗಬಹುದು.
- ದೈಹಿಕ ಹಾಗೂ ಮಾನಸಿಕ ದಣಿವು ದೀರ್ಘಕಾಲಿಕ ಮೂತ್ರಪಿಂಡರೋಗ, ಸಿಹಿಮೂತ್ರ ರೋಗ, ಪರಂಗಿರೋಗ ಇವುಗಳಿಂದ ನಪುಂಸಕತೆ ಕಂಡುಬರಬಹುದು. ಅನೇಕ ವೇಳೆ ದೀರ್ಘಕಾಲಿಕವಾದ ಮುಷ್ಟಿಮೈಥುನ ಹಾಗೂ ಅತಿ ಸಂಭೋಗಗಳಿಂದಲೂ ದಂಪತಿಗಳಲ್ಲಿ ಸಂಭೋಗ ಕ್ರಿಯೆಯಲ್ಲಿ ದೈಹಿಕ ಹಾಗೂ ಮಾನಸಿಕ ಹೊಂದಾಣಿಕೆ ಒದಗಿ ಬರದಿರುವುದರಿಂದಲೂ ನಪುಂಸಕತೆ ಪರಿಣಮಿಸಬಹುದು.
![](http://upload.wikimedia.org/wikipedia/commons/thumb/4/4c/Wikisource-logo.svg/50px-Wikisource-logo.svg.png)
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: