ವಿಷಯಕ್ಕೆ ಹೋಗು

ಇಟಾವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಟಾವಾ ಉತ್ತರಪ್ರದೇಶದ ಒಂದು ಜಿಲ್ಲೆ ಮತ್ತು ಅದರ ಮುಖ್ಯ ನಗರ. ಜಿಲ್ಲೆ ಉತ್ತರಪ್ರದೇಶದ ದಕ್ಷಿಣದ ಅಂಚಿನಲ್ಲಿದೆ; ನೈಋತ್ಯಕ್ಕೆ ಮಧ್ಯ ಭಾರತದ ಭಿಂಡ್ ಜಿಲ್ಲೆಯಿದೆ. ಮಿಕ್ಕ ಕಡೆಗಳಲ್ಲಿ ಆಗ್ರಾ, ಮಣಿಪುರಿ, ಫರೂಕಾಬಾದ್, ಕಾನ್ಪುರ ಮತ್ತು ಜಲೌನ ಜಿಲ್ಲೆಗಳಿವೆ.[೧] ವಿಸ್ತೀರ್ಣ 1,669 ಚ.ಮೈ. ಇದರ ಮಧ್ಯದಲ್ಲಿ ಯಮುನಾನದಿಯೂ ಸಂಗರ್ ಮುಂತಾದ ಉಪನದಿಗಳೂ ಹರಿಯುತ್ತವೆ. ಇಡೀ ಜಿಲ್ಲೆ ಏರುತಗ್ಗುಗಳ ಪ್ರದೇಶ; ಭೂಮಿ ಫಲವತ್ತಾದ ನೆರೆಮಣ್ಣಿನಿಂದ ಕೂಡಿದೆ. ಎಲ್ಲೆಡೆಯೂ ತೀವ್ರಬೇಸಾಯ ನಡೆದಿದೆ. ಬೇಸಿಗೆಯ ಕ್ಲ್‍ಪ್ತಮಾರುತಗಳಿಂದ ಸರಾಸರಿ 33" ವಾರ್ಷಿಕ ಮಳೆ ಬೀಳುತ್ತದೆ. ಗೋಧಿ, ದ್ವಿದಳ ಧಾನ್ಯಗಳು, ಬತ್ತ, ಮಿಲೆಟ್ ಮುಂತಾದವು ಕೃಷಿ ಉತ್ಪನ್ನಗಳೂ, ಕೆಲವು ಕಡೆ ಕಬ್ಬು, ಸಾಸಿವೆ ಬೆಳೆಯುತ್ತಾರೆ. ದಕ್ಷಿಣಕ್ಕೆ ಹೋದಂತೆ ನೆಲ ಕೊಂಚ ಎತ್ತರವಾಗುವುದರಿಂದ ನದಿಯಿಂದಾದ ಕಮರಿಗಳೂ ಕೊರಕಲುಗಳೂ ಹೆಚ್ಚು. ಸಾರಿಗೆ ಸಂಪರ್ಕಗಳಿಗೆ ಇಂಥ ಅಡಚಣೆ ಇರುವುದರಿಂದ ಈ ಭಾಗ ಮಾತ್ರ ಹೆಚ್ಚಾಗಿ ಮುಂದುವರಿದಿಲ್ಲ.

ಇಟಾವಾ ನಗರ ಆಡಳಿತ ಮತ್ತು ವ್ಯಾಪಾರ ಕೇಂದ್ರ. ಆಗ್ರಾಕ್ಕೆ 70 ಮೈ. ದೂರದಲ್ಲಿ ಯಮುನಾನದಿಯ ಉತ್ತರದಂಡೆಯ ಮೇಲಿದೆ ; ಆಗ್ರಾದಿಂದ ಕಾನ್ಪುರಕ್ಕೆ ಹೋಗುವ ರೈಲುಮಾರ್ಗ ಈ ಊರಿನ ಮೂಲಕ ಹೋಗುತ್ತದೆ. ಹತ್ತಿ, ರೇಷ್ಮೆಗಳ ಕೈಗಾರಿಕೆ ಬೆಳೆದಿದೆ. 15 ನೆಯ ಶತಮಾನದಲ್ಲಿ ಕಟ್ಟಿದ ಒಂದು ಕೋಟೆಯ ಅವಶೇಷಗಳು, ಹಿಂದೂ ದೇವಾಲಯಗಳು, ಹಿಂದೆ ಹಿಂದೂ ದೇವ ಮಂದಿರವಾಗಿದ್ದ ಒಂದು ಮಸೀದಿ-ಇವು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಜಿಲ್ಲೆಯಂತೆ ನಗರವೂ ಹಳ್ಳತಿಟ್ಟುಗಳನ್ನು ಹೊಂದಿರುವುದರಿಂದ 12ನೆಯ ಶತಮಾನ ಕಳೆಯುವವರೆಗೂ ಜನವಸತಿ ಕಡಿಮೆಯಿತ್ತು. ಜನ ಬಹುಪಾಲು ಹಿಂದುಗಳೇ ಆಗಿದ್ದರು. 1526ರಲ್ಲಿ ಬಾಬರ್‍ನ ಸೈನ್ಯವೊಂದು ಇದನ್ನು ವಶಪಡಿಸಿಕೊಂಡಿತು. ಮೊಗಲ್ ಸಾಮ್ರಾಜ್ಯ ಶಿಥಿಲಗೊಂಡಮೇಲೆ ಅನೇಕರ ಆಕ್ರಮಣಕ್ಕೆ ಸಿಕ್ಕಿ ಈ ಭಾಗ ಅನೇಕ ಯುದ್ಧಗಳ ರಂಗವಾಯಿತು. ಅರಾಜಕತೆ ಹೋಗಿ ವ್ಯವಸ್ಥಿತ ಆಡಳಿತ ಬಂದದ್ದು 1801ರಲ್ಲಿ, ಬ್ರಿಟಿಷರ ಆಧಿಪತ್ಯಕ್ಕೆ ಬಂದಮೇಲೆ. [೨]

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಇಟಾವಾ&oldid=1148840" ಇಂದ ಪಡೆಯಲ್ಪಟ್ಟಿದೆ