ವಿಷಯಕ್ಕೆ ಹೋಗು

ಪುಷ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಷ್ಯ ನಕ್ಷತ್ರದ ಸ್ಥಾನ (ಸುತ್ತುಹಾಕಲಾಗಿದೆ)

ಪುಷ್ಯ ಎನ್ನುವುದು ಮಿಥುನ ರಾಶಿಯ ಒಂದು ಪ್ರಧಾನ ನಕ್ಷತ್ರ (ಕಾಸ್ಟರ್). ಈ ರಾಶಿಯ ಜೋಡಿ ನಕ್ಷತ್ರಗಳ (ಕಾಸ್ಟರ್ ಮತ್ತು ಪೊಲ್ಲಕ್ಸ್) ಪೈಕಿ ಉತ್ತರ ದಿಕ್ಕಿಗೆ ಇರುವಂಥದೇ ಪುಷ್ಯ. ವಿಷುವದಂಶ 310 53' 17.8" ಉ;[] ಘಂಟಾವೃತ್ತಾಂಶ 7 ಗಂ. 34 ಮಿ. 35.9 ಸೆ. ಸೂರ್ಯನಿಂದ 4 ಬೆಳಕು ವರ್ಷಗಳ ದೂರದಲ್ಲಿದೆ. ಇದೊಂದು ಯಮಳ ನಕ್ಷತ್ರಇಂಗ್ಲೆಂಡಿನ ಖಗೋಳವಿಜ್ಞಾನಿ ವಿಲಿಯಮ್ ಹರ್ಷೆಲ್ (1738-1822) ಇದರಲ್ಲಿಯ ಎರಡು ತಾರೆಗಳ ಕಕ್ಷಾ ಚಲನೆಯನ್ನು ಗಮನಿಸಿದ್ದ (1804). ಇವುಗಳ ಪರಿಭ್ರಮಣಾವಧಿ 350 ವರ್ಷಗಳು. ಯಮಳತಾರೆಗಳ ನಡುವಿನ ಕೋನಾಂತರ 3.9 ಸೆಕೆಂಡುಗಳು. ಸಾಧಾರಣ ವಿಭಜನಾ ಸಾಮರ್ಥ್ಯವಿರುವ ದೂರದರ್ಶಕದ ಮೂಲಕವೂ ಇವನ್ನು ವೀಕ್ಷಿಸಬಹುದು. ಈ ಒಂದೊಂದು ತಾರೆಯೂ ಪುನಃ ಒಂದೊಂದು ಯಮಳತಾರೆ. ಇದರಿಂದ ಸ್ವಲ್ಪ ದೂರದಲ್ಲಿ (ಕೋನಾಂತರ 73 ಸೆಕೆಂಡುಗಳು) ನಸುಗೆಂಪಿನ ಮತ್ತೊಂದು ಯಮಳ ತಾರೆ ಉಂಟು.[] ಹೀಗಾಗಿ ಪುಷ್ಯನಕ್ಷತ್ರ ಮುಜ್ಜೋಡಿ ವ್ಯವಸ್ಥೆ. ನಕ್ಷತ್ರದ ಪ್ರತಿಯೊಂದು ತಾರೆ ಹಾಗೂ ಯಮಳ ತಾರೆಗಳೂ ರೋಹಿತದರ್ಶಕೀಯ (spectroscopic) ಬಗೆಯವು. ಪುಷ್ಯ ನಕ್ಷತ್ರ (ಆಲ್ಫ ಜೆಮಿನೋರಮ್) ಎರಡನೆಯ ಕಾಂತಿಮಾನಕ್ಕೆ ಸೇರಿದ್ದು (ನಿರಪೇಕ್ಷ ಕಾಂತಿಮಾನ +0.986, + 1.886[]). ಪೂರ್ವದಲ್ಲಿ ಪುನರ್ವಸು ನಕ್ಷತ್ರಕ್ಕಿಂತಲೂ ಪುಷ್ಯ ನಕ್ಷತ್ರವೇ ಹೆಚ್ಚು ಪ್ರಕಾಶಮಯವಾಗಿತ್ತಂತೆ. ಆದರೆ ಇದನ್ನು ಸ್ಥಿರಪಡಿಸುವ ಪುರಾವೆಗಳು ಲಭ್ಯವಿಲ್ಲ.

ಗ್ರೀಕ್ ಪುರಾಣದಲ್ಲಿ

[ಬದಲಾಯಿಸಿ]

ಗ್ರೀಕ್ ಪುರಾಣದ ರೀತ್ಯ, ಪ್ರಾಚೀನ ಗ್ರೀಕರ ಪರಮೋಚ್ಚ ಅಧಿದೈವ ಜ಼್ಯೂಸ್ ಮತ್ತು ಲೀಡ್ (ಸ್ಪಾರ್ಟದ ರಾಜರಾಣಿಯರು) ಇವರ ಅವಳಿ ಗಂಡು ಮಕ್ಕಳು ಕಾಸ್ಟರ್ ಮತ್ತು ಪೊಲ್ಲಕ್ಸ್. ಟ್ರಾಯ್ ಪಟ್ಟಣದ ರಾಜಕುಮಾರಿ ಹೆಲೆನಳ ಸಹೋದರರು. ಇವರಿಬ್ಬರೂ ಸೋದರಿಕೆಯ ಶ್ರೀಮಂತ ಆದರ್ಶಕ್ಕೆ ಹೆಸರಾಗಿದ್ದವರು. ಪೊಲ್ಲಕ್ಸ್ ಅಮರನಾದ. ಆತ ದಿನಬಿಟ್ಟುದಿನ ಪರ್ಯಾಯವಾಗಿ ದೇವತೆಗಳೊಂದಿಗೂ ಹೇಡ್ಸ್‌ನಲ್ಲಿಯ ತನ್ನ ಸಹೋದರ ಕಾಸ್ಟರನೊಂದಿಗೂ ಇರುತ್ತಿದ್ದನಂತೆ.[][] ರಾಜಕೀಯ ಘಟನೆಗಳು ನಡೆದು ಕಾಸ್ಟರನನ್ನು ಕೊಲ್ಲಲಾಯಿತು. ತಮ್ಮ ಸೋದರಿಕೆಯ ಅಮರತ್ವವನ್ನು ಉಳಿಸಿಕೊಡುವಂತೆ ಪೊಲ್ಲಕ್ಸ್ ದೇವತೆಗಳನ್ನು ಪ್ರಾರ್ಥಿಸಿದ. ಮೊರೆ ಸಿದ್ಧಿ ಪಡೆಯಿತು. ಕಾಸ್ಟರನಿಗೆ ಮತ್ತೆ ಜೀವ ಬಂತು. ಇಬ್ಬರಿಗೂ ಆಕಾಶದಲ್ಲಿ ಶಾಶ್ವತ ಸ್ಥಾನ ಲಭ್ಯವಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Fabricius, C.; Høg, E.; Makarov, V.V.; Mason, B.D.; Wycoff, G.L.; Urban, S.E. (March 2002). "The Tycho double star catalogue". Astronomy and Astrophysics. 384: 180–189. Bibcode:2002A&A...384..180F. doi:10.1051/0004-6361:20011822.
  2. Tokovinin, A.A. (1997). "MSC: A catalogue of physical multiple stars". Astronomy and Astrophysics Supplement Series. 124 (1): 75–84. Bibcode:1997A&AS..124...75T. doi:10.1051/aas:1997181. ISSN 0365-0138.
  3. Barrado y Navascues, D. (1998). "The Castor moving group. The age of Fomalhaut and Vega". Astronomy and Astrophysics. 339: 831–839. arXiv:astro-ph/9905243. Bibcode:1998A&A...339..831B.
  4. "Dioscuri". Encyclopædia Britannica. 2008.
  5. Routledge (2002), "Castor and Polydeuces", Who's Who in Classical Mythology, London: Routledge.



ಹೊರಗಿನ ಕೊಂಡಿಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪುಷ್ಯ&oldid=1231416" ಇಂದ ಪಡೆಯಲ್ಪಟ್ಟಿದೆ