ಮಿಥುನ ರಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Gemini constellation map.svg

ಮಿಥುನ ರಾಶಿಯು ರಾಶಿಚಕ್ರದ ಹನ್ನೆರಡು ರಾಶಿಗಳ ಪೈಕಿ ಮೂರನೆಯದು. (ಜೆಮಿನಿ).

ಸನ್ನಿಹಿತ ಸ್ಧಾನ: ವಿಷುವದಂಶ 7 ಗಂ; ಘಂಟಾವೃತ್ತಾಂಶ 20(G. ಲಿಂಕ್ಸ್, ಆರೀಗ, ವೃಷಭ (ಟಾರಸ್), ಮಹಾವ್ಯಾಧ (ಒರೈಯನ್), ಮಾನೋಸಿರಾಸ್, ಲಘುಶ್ವಾನ (ಕ್ಯಾನಿಸ್ ಮೈನರ್) ಮತ್ತು ಕರ್ಕಾಟಕ (ಕ್ಯಾನ್ಸರ್) ನಕ್ಷತ್ರ ಪುಂಜಗಳು ಇದನ್ನು ಸುತ್ತುವರಿದಿವೆ. ನಾಲ್ಕನೆಯ ಕಾಂತಿಮಾನಕ್ಕಿಂತಲೂ ಹೆಚ್ಚಿನದಾದ ಹದಿಮೂರು ನಕ್ಷತ್ರಗಳು ಇವೆ. ಈ ರಾಶಿ ಹೆಚ್ಚುಕಡಿಮೆ ತ್ರಾಪಿಜ್ಯದ ಆಕಾರ ಹೊಂದಿದೆ. ಈ ತ್ರಾಪಿಜ್ಯದ ನೈಋತ್ಯ ಮೂಲೆ ಆಕಾಶಗಂಗೆಯೊಡನೆ ಮಿಳಿತಗೊಂಡಿರುವಂತೆ ಕಾಣುವುದು. ಈ ರಾಶಿಯ ಪ್ರಮುಖ ನಕ್ಷತ್ರಗಳು ಕ್ಯಾಸ್ಟರ್ () -ಪುಷ್ಯ ಮತ್ತು ಪೊಲಾಕ್ಸ್ (). ಪ್ರಾಚೀನದಲ್ಲಿ ಕ್ಯಾಸ್ಟರ್ ನಕ್ಷತ್ರವೇ ಅಧಿಕ ಪ್ರಕಾಶದಿಂದ ಕೂಡಿದ್ದು ಎಂದು ಹೇಳಲಾಗಿತ್ತು. ಆದರೆ ಇವುಗಳಲ್ಲಿ ಪೋಲಾಕ್ಸ್ ನಕ್ಷತ್ರವೇ ಅಧಿಕ ಪ್ರಕಾಶದ್ದು, ಬದಲಾವಣೆಗಳೇನಾದರೂ ಘಟಿಸಿದ್ದರೆ (ಅದು ನಿಶ್ಚಿತವಾಗಿ ತಿಳಿದಿಲ್ಲ) ಬಹುಮುಖ ವ್ಯವಸ್ಧೆಯೆಂದೆನಿಸಿರುವ ಪೊಲಾಕ್ಸ್‍ನ ಈಚಿನ ಪ್ರರೂಪದಲ್ಲಿ ಮಾತ್ರ ಸಾಧ್ಯವಾಗಿರಬೇಕು ಎನ್ನಲಾಗಿದೆ. ಪ್ರೋಪಸ್, ತೇಜತ್, ಆಲ್‍ಹೀನ ಆಲ್‍ಜಿóರ್, ಮೆಕ್‍ಬುಡ, ವಾಸಟ್ ಮೊದಲಾದವು ಇನ್ನಿತರ ಪ್ರಮುಖ ನಕ್ಷತ್ರಗಳು. ಈ ರಾಶಿಯಲ್ಲಿ ಕೆಲವೊಂದು ದ್ವಿತಾರೆಗಳೂ (ξ ಜರ್ಮಿನೇರಮ್), ಚರಕಾಂತಿಯ ನಕ್ಷತ್ರಗಳೂ ಗುಚ್ಛಗಳೂ ನೀಹಾರಿಕೆಗಳೂ ಇವೆ. ಜೆಮಿನಿಡ್ಸ್ ಎಂಬ ಉಲ್ದಾವೃಷ್ಟಿ ಗರಿಷ್ಠ ಬರುವುದು ಡಿಸೆಂಬರ್ 13ರ ವೇಳೆಗೆ. ಈ ತಿಂಗಳಲ್ಲಿ ಆಗಾಗ್ಗೆ ಉಲ್ಕಾವೃಷ್ಟಿಗಳು ಕಾಣುವ ಸಾಧ್ಯತೆ ಉಂಟು. ವೃಷ್ಟಿ ಗರಿಷ್ಠವಾಗಿದ್ದಾಗ ಶೀಘ್ರಗತಿಯಿಂದ ಚಲಿಸುವ, ಗಂಟೆಗೆ 60ರಷ್ಟು ಉಲ್ಕೆಗಳನ್ನು ಕಾಣಬಹುದು.

ಜರ್ಮನ್ ಬ್ರಿಟಿಷ್ ಖಗೋಳವಿಜ್ಞಾನಿ ವಿಲಿಯಮ ಹರ್ಷೆಲ್ (1863-1914) ಈ ರಾಶಿಯ ಟಿ ನಕ್ಷತ್ರದ ಬಳಿ ಯುರೇನಸ್ ಗ್ರಹ ಇದ್ದುದನ್ನು (1781) ಪತ್ತೆ ಮಾಡಿದ. ಅಮೆರಿಕದ ಖಗೋಳವಿಜ್ಞಾನಿ ವಿಲಿಯಮ್ ಟಾಮ್‍ಬೇ ಈ ರಾಶಿಯ ನಕ್ಷತ್ರದ ಬಳಿ ಪ್ಲೂಟೊ ಗ್ರಹ ಇದ್ದುದನ್ನು (1930) ಪತ್ತೆಮಾಡಿದ.

ಪುರಾಣೇತಿಹಾಸ[ಬದಲಾಯಿಸಿ]

ಬಲು ಪ್ರಾಚೀನದಿಂದಲೂ ಈ ರಾಶಿ ಅವಳಿಗಳೆಂದೇ (ಟ್ವಿನ್ಸ್) ಪ್ರಸಿದ್ಧ. ವಿಭಿನ್ನ ಸಂಸ್ಕøತಿಯಿಂದ ಕೂಡಿದ ಬೇರೆ ಬೇರೆ ಜನಾಂಗಗಳು ಇದನ್ನು ಹೀಗೆಂದೇ ಸಂಬೋಧಿಸಿದ್ದುಂಟು. ಅಭಿಜಾತ ಪುರಾಣದ ರೀತ್ಯ ಈ ಅವಳಿಗಳಿಗೆ ಕ್ಯಾಸ್ಟರ್ ಮತ್ತು ಪೊಲಾಕ್ಸ್ ಎಂಬ ಹೆಸರುಗಳೇ ಇವೆ. ಸ್ಪಾರ್ಟದ ದೊರೆಯ ಅರಸಿ ಲೀಡಾಳ ಪುತ್ರರಿವರು. ಚಿನ್ನದ ತುಪ್ಪುಳಕ್ಕಾಗಿ ಜೇಸನ್ ಎಂಬ ಗ್ರೀಕ್ ವೀರನೊಡನೆ ಆರ್ಗೊ ಎಂಬ ಹಡಗಿನಲ್ಲಿ ಪ್ರಯಾಣ ಮಾಡಿದವರು. ಇಬ್ಬರೂ ಅಪ್ರತಿಮ ವೀರರು ಹಾಗೂ ಒಬ್ಬರಿಂದೊಬ್ಬರನ್ನು ಬೇರ್ಪಡಿಸಲಾರದಂಥ ಜೊತೆಗಾರರು. ಇವರಿಬ್ಬರ ಪರಾಕ್ರಮ ಹಾಗೂ ಪ್ರೀತಿಗಳ ಜ್ಞಾಪಕಾರ್ಥ ಇವರ ತಂದೆ ಜೂಪಿಟರ್ ಇವರ ಮರಣಾನಂತರ ಆಕಾಶದಲ್ಲಿ ಸ್ಧಿರ ಪದವಿ ಒದಗಿಸಿದ. ಹಡಗು ಬಿರುಗಾಳಿಗೆ ಸಿಕ್ಕಿ ತೊಂದರೆಗೆ ಈಡಾಗಿದ್ದ ಸಮಯದಲ್ಲಿ ಇವರೊಡನಿದ್ದ ಇತರ ವೀರಾಗ್ರಣಿಗಳಿಗೆ ಇವರು ಮಾಡಿದ ಸಹಾಯಕ್ಕಾಗಿ. ಪ್ರಾಚೀನದಲ್ಲಿ ನಾವಿಕರು ಈ ನಕ್ಷತ್ರಪುಂಜವನ್ನು ಶುಭಪ್ರದವೆಂದು ಪರಿಗಣಿಸಿದ್ದರು. ಸಂತ ಪಾಲ ಮಾಲ್ಟ ಎಂಬಲ್ಲಿಂದ ಪ್ರಯಾಣಕೈಗೊಂಡ ನಾವೆಗೆ ಕ್ಯಾಸ್ಟರ್ ಮತ್ತು ಪೊಲಾಕ್ಸ್ ಎಂಬ ಹೆಸರಿತ್ತು.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: