ಕಕ್ಷೆ
ಭೌತಶಾಸ್ತ್ರದಲ್ಲಿ, ಕಕ್ಷೆ ಎಂದರೆ ಗುರುತ್ವ ಶಕ್ತಿಗೆ ಒಳಪಟ್ಟ ಒಂದು ವಸ್ತುವಿನ ಬಾಗಿದ ಪಥ,[೧] ಉದಾಹರಣೆಗೆ ಒಂದು ನಕ್ಷತ್ರದ ಸುತ್ತ ಒಂದು ಗ್ರಹದ ಪಥ ಅಥವಾ ಒಂದು ಗ್ರಹದ ಸುತ್ತ ಒಂದು ನೈಸರ್ಗಿಕ ಉಪಗ್ರಹದ ಪಥ. ಸಾಮಾನ್ಯವಾಗಿ, ಕಕ್ಷೆ ಶಬ್ದವು ನಿಯತವಾಗಿ ಪುನರಾವರ್ತಿಸುವ ಪಥವನ್ನು ಸೂಚಿಸುತ್ತದೆ, ಆದರೆ ಇದು ಪುನರಾವರ್ತಿಸದ ಪಥವನ್ನು ಕೂಡ ಸೂಚಿಸಬಹುದು. ಸಮೀಪದ ಅಂದಾಜಿಗೆ, ಗ್ರಹಗಳು ಮತ್ತು ಉಪಗ್ರಹಗಳು ದೀರ್ಘವೃತ್ತಾಕಾರದ ಕಕ್ಷೆಗಳನ್ನು ಅನುಸರಿಸುತ್ತವೆ, ಮತ್ತು ಕೆಪ್ಲರ್‌ನ ಗ್ರಹ ಚಲನಾ ನಿಯಮಗಳಿಂದ ವರ್ಣಿಸಲ್ಪಟ್ಟಂತೆ ಕೇಂದ್ರ ದ್ರವ್ಯರಾಶಿಯು ದೀರ್ಘವೃತ್ತದ ಒಂದು ಕೇಂದ್ರಬಿಂದುವಿದ್ದಲ್ಲಿ ಸುತ್ತಲ್ಪಡುತ್ತದೆ.
ಬಹುತೇಕ ಪರಿಸ್ಥಿತಿಗಳಲ್ಲಿ, ಕಕ್ಷೀಯ ಚಲನೆಯನ್ನು ನ್ಯೂಟನ್‍ನ ಯಂತ್ರಶಾಸ್ತ್ರವು ಸಮರ್ಪಕವಾಗಿ ಅಂದಾಜಿಸುತ್ತದೆ. ನ್ಯೂಟನ್‍ನ ಯಂತ್ರಶಾಸ್ತ್ರವು ಗುರುತ್ವವು ವಿಲೋಮ ವರ್ಗ ನಿಯಮವನ್ನು ಪಾಲಿಸುವ ಬಲವೆಂದು ವಿವರಿಸುತ್ತದೆ. ಆದರೆ ಗುರುತ್ವವು ದೇಶಕಾಲದ ವಕ್ರತೆಯಿಂದ ಉಂಟಾಗುತ್ತದೆ ಮತ್ತು ಕಕ್ಷೆಗಳು ಜಿಯೋಡೆಸಿಕ್‍ಗಳನ್ನು ಅನುಸರಿಸುತ್ತವೆ ಎಂದು ವಿವರಿಸುವ ಆಲ್ಬರ್ಟ್ ಐನ್‍ಸ್ಟೈನ್‍ರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವು ಕಕ್ಷೀಯ ಚಲನೆಯ ನಿಖರ ಯಂತ್ರವಿಜ್ಞಾನದ ಹೆಚ್ಚು ನಿಖರ ಗಣನೆ ಮತ್ತು ತಿಳುವಳಿಕೆಯನ್ನು ಒದಗಿಸುತ್ತದೆ.
ಐತಿಹಾಸಿಕವಾಗಿ, ಗ್ರಹಗಳ ಸ್ಪಷ್ಟ ಚಲನೆಗಳನ್ನು ಐರೋಪ್ಯ ಮತ್ತು ಅರಬ್ಬೀ ತತ್ವಶಾಸ್ತ್ರಜ್ಞರು ಖಗೋಳಗಳ ಕಲ್ಪನೆಯನ್ನು ಬಳಸಿ ವಿವರಿಸಿದರು. ಈ ಮಾದರಿಯು ಪರಿಪೂರ್ಣ ಚಲಿಸುವ ಗೋಳಗಳು ಅಥವಾ ವರ್ತುಲಗಳ ಇರುವಿಕೆಯನ್ನು ಆಧಾರವೆಂದು ಭಾವಿಸಿತು. ಇವುಗಳಿಗೆ ನಕ್ಷತ್ರಗಳು ಮತ್ತು ಗ್ರಹಗಳು ಜೋಡಣೆಗೊಂಡಿದ್ದವು. ಸ್ವರ್ಗಗಳು ಗೋಳಗಳ ಚಲನೆಯಿಂದ ಬೇರೆಯಾಗಿ ಸ್ಥಿರಗೊಳಿಸಲ್ಪಟ್ಟಿದವು ಎಂದು ಇದು ಊಹಿಸಿತ್ತು. ಗುರುತ್ವದ ಯಾವುದೇ ತಿಳುವಳಿಕೆ ಇಲ್ಲದೆ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಗ್ರಹಗಳ ಚಲನೆಗಳನ್ನು ಹೆಚ್ಚು ನಿಖರವಾಗಿ ಅಳೆಯಲಾದ ನಂತರ, ಡೆಫ಼ರಂಟ್ ಮತ್ತು ಅಧಿಚಕ್ರಗಳಂತಹ ಸೈದ್ಧಾಂತಿಕ ಕಾರ್ಯವಿಧಾನಗಳನ್ನು ಸೇರಿಸಲಾಯಿತು. ಈ ಮಾದರಿಯು ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಸಮಂಜಸವಾಗಿ ನಿಖರವಾಗಿ ಮುನ್ನುಡಿಯುವಲ್ಲಿ ಸಮರ್ಥವಾಗಿತ್ತಾದರೂ, ಮಾಪನಗಳು ಹೆಚ್ಚು ನಿಖರವಾದಂತೆ ಮತ್ತಷ್ಟು ಮತ್ತಷ್ಟು ಅಧಿಚಕ್ರಗಳು ಬೇಕಾಗಿದ್ದವು, ಹಾಗಾಗಿ ಈ ಮಾದರಿಯು ಹೆಚ್ಚೆಚ್ಚು ಸ್ಥೂಲವಾಯಿತು. ಮೂಲತಃ ಭೂಕೇಂದ್ರಿತವಾಗಿದ್ದ ಈ ಮಾದರಿಯನ್ನು ಸರಳೀಕರಿಸಲು ನೆರವಾಗಲು ಕೇಂದ್ರದಲ್ಲಿ ಸೂರ್ಯವನ್ನು ಇಡುವಂತೆ ಕಾಪರ್ನಿಕಸ್ ಮಾರ್ಪಡಿಸಿದನು.
ಉಲ್ಲೇಖಗಳು
[ಬದಲಾಯಿಸಿ]