ಪಾಲ್ ರಾಯ್‍ಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಲ್ ರಾಯ್‍ಟರ್

ಪಾಲ್ ರಾಯ್‍ಟರ್ (1816-99) ಪ್ರಸಿದ್ಧ ರಾಯ್‌ಟರ್ ಸುದ್ದಿಸಂಸ್ಥೆಯ ಸ್ಥಾಪಕ.[೧]

ಜೀವನ[ಬದಲಾಯಿಸಿ]

ಹಿಂದಿನ ಪಶ್ಚಿಮ ಜರ್ಮನಿಯ ಕಾಸಲ್ ಎಂಬಲ್ಲಿ 1816 ಜುಲೈ 21 ರಂದು ಜನಿಸಿದ.[೨] ಯಹೂದ್ಯನಾದ (ಜ್ಯೂ) ಈತ 1844 ರಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ರಾಯ್‌ಟರ್ ಎಂಬುದನ್ನು ತನ್ನ ಹೆಸರಿಗೆ ಸೇರಿಸಿಕೊಂಡ. ಜರ್ಮನಿಯ ಗಾಟೆನ್‌ಜೆನ್‌ನಲ್ಲಿದ್ದ ಚಿಕ್ಕಪ್ಪನ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದ. ಆಗ ಈತನಿಗೆ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮದ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಪ್ರಸಿದ್ಧ ಭೌತ ಹಾಗೂ ಗಣಿತ ವಿಜ್ಞಾನಿ ಕಾರ್ಲ್ ಫ್ರೆಡ್‌ರಿಕ್ ಗಾಸ್ ಅವರ ಪರಿಚಯವಾಯಿತು. 1840 ರಲ್ಲಿ ಬರ್ಲಿನ್‌ನ ಒಂದು ಪ್ರಕಾಶನ ಸಂಸ್ಥೆ ಸೇರಿ ರಾಜಕೀಯಕ್ಕೆ ಸಂಬಂಧಿಸಿದ ಅನೇಕ ಕಿರು ಹೊತ್ತಿಗೆಗಳನ್ನು ಪ್ರಕಟಿಸಿದ. ಇದರಿಂದಾಗಿ ಅಧಿಕಾರಿಗಳ ಆಗ್ರಹಕ್ಕೆ ಗುರಿಯಾಗಿ 1848 ರಲ್ಲಿ ಬರ್ಲಿನ್ ಬಿಟ್ಟು ಪ್ಯಾರಿಸ್‌ಗೆ ಬಂದ.[೩] ಇಲ್ಲಿಂದ ಪ್ರಕಟಿತ ಸುದ್ದಿಗಳ ಮುಖ್ಯಾಂಶಗಳನ್ನೂ ವಾಣಿಜ್ಯ ಸುದ್ದಿಗಳನ್ನೂ ಭಾಷಾಂತರಿಸಿ ಜರ್ಮನಿಯ ಪತ್ರಿಕೆಗಳಿಗೆ ಒದಗಿಸಲಾರಂಭಿಸಿದ. 1850 ರಲ್ಲಿ ಜರ್ಮನಿಯ ಅಕೆನ್ ಪಟ್ಟಣದಿಂದ ಬೆಲ್ಜಿಯಮ್‌ನ ಬ್ರಸೆಲ್ಸ್ ನಗರಕ್ಕೆ ಪಾರಿವಾಳಗಳ ಮೂಲಕ ಸುದ್ದಿ ರವಾನಿಸುವ ವ್ಯವಸ್ಥೆಯನ್ನು ಸ್ಥಾಪಿಸಿದ. 1851 ನವೆಂಬರ್ 13ರಂದು ಇಂಗ್ಲೆಂಡಿನಲ್ಲಿ ತಂತಿ ವ್ಯವಸ್ಥೆ ಜಾರಿಗೆ ಬಂದದ್ದು ಸುದ್ದಿಸಂಸ್ಥೆಗಳ ಬೆಳವಣಿಗೆಗೆ ವರವಾಯಿತು. 1851 ರಲ್ಲಿ ಈತ ತಂತಿಯ ಮೂಲಕ ಸುದ್ದಿಯನ್ನು ವಿತರಿಸುವ ತನ್ನ ರಾಯ್‌ಟರ್ ಸುದ್ದಿ ಸಂಸ್ಥೆಯನ್ನು ಲಂಡನ್ನಿನ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡದಲ್ಲಿ ಪ್ರಾರಂಭಿಸಿದ. ಪ್ರಥಮವಾಗಿ ಲಂಡನ್ ಮತ್ತು ಪ್ಯಾರಿಸ್ ನಗರಗಳ ನಡುವೆ ವಾಣಿಜ್ಯ ಮಾಹಿತಿಯನ್ನು ಶೀಘ್ರವಾಗಿ ತಲುಪಿಸುವ ಜಾಲ ರಾಯ್‌ಟರ್‌ನಿಂದ ಪ್ರಾರಂಭವಾಯಿತು. ಬ್ಯಾಂಕಿನವರು ಮತ್ತು ವಾಣಿಜ್ಯೋದ್ಯಮಿಗಳು ರಾಯ್‌ಟರ್ ಸೇವೆಯನ್ನು ಬಳಸಿಕೊಂಡವರಲ್ಲಿ ಮೊದಲಿಗರು. `ಟೈಮ್ಸ್' ನಂಥ ದೊಡ್ಡ ದಿನಪತ್ರಿಕೆಗಳು ರಾಯ್‌ಟರ್‌ನ ಚಂದಾದಾರರಾಗಲು ಹಿಂಜರಿದಾಗ ಟ್ಯಾಬ್‌ಲಾಯ್ಡ್ ಪತ್ರಿಕೆಗಳು ಮಾಹೆಯಾನ 30 ಪೌಂಡ್‌ಗಳನ್ನು ಕೊಟ್ಟು ರಾಯ್‌ಟರ್‌ನ ಪ್ರಥಮ ಚಂದಾದಾರರಾದರು. 19 ನೆಯ ಶತಮಾನದ ಅಂತ್ಯದಲ್ಲಿ ರಾಯ್‌ಟರ್‌ನ ಸುದ್ದಿಯನ್ನು ಆಮ್‌ಸ್ಟರ್‌ಡ್ಯಾಮ್, ಬರ್ಲಿನ್, ವಿಯನ್ನಾ ಮತ್ತು ಅಥೆನ್ಸ್ ನಗರಗಳವರೆಗೂ ವಿಸ್ತರಿಸಲಾಯಿತು. ಈ ಮಧ್ಯೆ ಮತ್ತೆರಡು ಸುದ್ದಿ ಸಂಸ್ಥೆಗಳಾದ ಫ್ರಾನ್ಸಿನ ಹವಾಸ್, ಜರ್ಮನಿಯ ಉಲ್ಫ್ ಇವುಗಳೊಂದಿಗೆ ಸುದ್ದಿವಿತರಣೆಯ ಭೌಗೋಳಿಕ ಎಲ್ಲೆಯನ್ನು ವಿಭಾಗಿಸಿಕೊಳ್ಳಲಾಯಿತು. ಈತ 1871 ರಲ್ಲಿ ಬ್ಯಾರನ್ ಪದವಿಯನ್ನು ಪಡೆದ. 1878 ರಲ್ಲಿ ರಾಯ್‌ಟರ್ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಸ್ಥಾನದಿಂದ ನಿವೃತ್ತನಾದ. 1899 ಫೆಬ್ರುವರಿ 25 ರಂದು ನಿಧನನಾದ.

ರಾಯ್‍ಟರ್ ಸಂಸ್ಥೆ[ಬದಲಾಯಿಸಿ]

ಇಂದು ರಾಯ್‌ಟರ್ ಅಧಿಕೃತ ಕಚೇರಿ ಲಂಡನ್ನಿನ ಫ್ಲೀಟ್ ಸ್ಟ್ರೀಟಿನಲ್ಲಿದೆ. ಸಹಕಾರಿ ಮಾಲಿಕತ್ವ ವ್ಯವಸ್ಥೆಯ ರಾಯ್‌ಟರ್ ಸುದ್ದಿಸಂಸ್ಥೆ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ಪತ್ರಿಕೆಗಳ ಮಾಲಿಕತ್ವಕ್ಕೆ ಸೇರಿದೆ. ಇದರ ಮುಖ್ಯಕಾರ್ಯವೆಂದರೆ ವಿದೇಶಿ ಸುದ್ದಿಯನ್ನು ಬ್ರಿಟನ್ ಸುದ್ದಿಮಾಧ್ಯಮಗಳಿಗೆ ವಿತರಿಸುವುದು ಹಾಗೂ ಬ್ರಿಟನ್ನಿನ ಸುದ್ದಿಯನ್ನು ಮತ್ತು ವಿದೇಶಿ ಸುದ್ದಿಯನ್ನು ಪ್ರಪಂಚದ ಇತರ ಸುದ್ದಿ ಮಾಧ್ಯಮಗಳಿಗೆ ತಲುಪಿಸುವುದು. ವಿದೇಶಿಸುದ್ದಿ ವರದಿಯಲ್ಲಿ ರಾಯ್‌ಟರ್ ಜಗತ್ತಿಲ್ಲಿ ಅಗ್ರಸ್ಥಾನ ಪಡೆದಿದೆ. ಸಾವಿರಕ್ಕೂ ಹೆಚ್ಚು ಬಾತ್ಮೀದಾರರನ್ನು ಹೊಂದಿದ್ದು ದಿನಕ್ಕೆ ಏಳು ಲಕ್ಷಕ್ಕೂ ಹೆಚ್ಚು ಸುದ್ದಿಪದಗಳನ್ನು 155 ದೇಶಗಳಿಗೆ ವಿತರಿಸುತ್ತಿದೆ. ಸು. 3000 ಕ್ಕೂ ಅಧಿಕ ಚಂದಾದಾರರನ್ನು ಹೊಂದಿರುವ ರಾಯ್‌ಟರ್ 60 ಕ್ಕೂ ಹೆಚ್ಚು ಬ್ಯೂರೋಗಳನ್ನು ಅನೇಕ ಪ್ರಮುಖ ನಗರಗಳಲ್ಲಿ ಸ್ಥಾಪಿಸಿದೆ.

ತೇನ್‌ಸಿಂಗ್ ಮತ್ತು ಹಿಲರಿ ಜೋಡಿ ಎವರೆಸ್ಟ್ ಶಿಖರವನ್ನು ಏರಿದ ಸುದ್ದಿಯನ್ನು ಜಗತ್ತಿಗೆ ಪ್ರಪ್ರಥಮವಾಗಿ ತಿಳಿಸಿದ್ದು ರಾಯ್‌ಟರ್ ಸುದ್ದಿ ಸಂಸ್ಥೆ.

ಉಲ್ಲೇಖಗಳು[ಬದಲಾಯಿಸಿ]

  1. Paul Julius Reuter, Encyclopedia of World Biography, 2004, The Gale Group Inc.
  2. "Heroes – Trailblazers of the Jewish People". Beit Hatfutsot. Archived from the original on 2020-07-18. Retrieved 2023-06-17.
  3. "Paul Julius, baron von Reuter", Encyclopædia Britannica, 1998.

ಹೊರಗಿನ ಕೊಂಡಿಗಳು[ಬದಲಾಯಿಸಿ]