ವಿಷಯಕ್ಕೆ ಹೋಗು

ಧನಂಜಯನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿ. ಪಿ ಧನಂಜಯನ್ & ಶಾಂತಾ ಧನಂಜಯನ್

ಧನಂಜಯನರು ೨೦೦೯ ರಲ್ಲಿ ಸಂಗೀತ ಕಚೇರಿಯಲ್ಲಿ ನೀಡಿದ ಪ್ರದರ್ಶನ

ವನ್ನಾಡಿಲ್ ಪುದಿಯವೀಟ್ಟಿಲ್ ಧನಂಜಯನ್ (ಜನನ ೧೭ ಏಪ್ರಿಲ್ ೧೯೩೯) ಮತ್ತು ಶಾಂತಾ ಧನಂಜಯನ್ (ಜನನ ೧೨ ಆಗಸ್ಟ್ ೧೯೪೩) ಇವರನ್ನು ಧನಂಜಯನ್ಸ್ ಎಂದೂ ಕರೆಯುತ್ತಾರೆ. ಇವರು ೨೦೦೯ ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಭಾರತದ ನೃತ್ಯ ದಂಪತಿಗಳು.

ವೈಯಕ್ತಿಕ ಜೀವನ[ಬದಲಾಯಿಸಿ]

ವಿ.ಪಿ ಧನಂಜಯನ್ ಅವರು ಭಾರತದ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನಲ್ಲಿ ೧೭ ಏಪ್ರಿಲ್ ೧೯೩೯ ರಂದು ಮಲಯಾಳಿ ಪೊದುವಲ್ ಕುಟುಂಬದಲ್ಲಿ ಜನಿಸಿದರು. ಎಂಟು ಮಕ್ಕಳಿರುವ, ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡತನದ ಕುಟುಂಬದಲ್ಲಿ ಇವರು ಜನಿಸಿದರು.  ಒಮ್ಮೆ ಇವರ ತಂದೆ ಕಲಾಕ್ಷೇತ್ರಕಥಕ್ಕಳಿ ಮಾಸ್ಟರ್ ಗುರು ಚಂದು ಪಣಿಕ್ಕರ್ ಅವರನ್ನು ಆಕಸ್ಮಿಕವಾಗಿ ಭೇಟಿಯಾದರು. ಆ ಭೇಟಿಯಲ್ಲಿಯೇ ತನ್ನ ಮಗ ಮತ್ತು ವಿ.ಬಾಲಗೋಪಾಲನ್ ಅವರನ್ನು ಅವರ ಮಾರ್ಗದರ್ಶನದಲ್ಲಿ ಕಲಾಕ್ಷೇತ್ರಕ್ಕೆ ಕಳುಹಿಸಲು ಸಂಪೂರ್ಣವಾಗಿ ನಿರ್ಧರಿಸಿದರು.  ಧನಂಜಯನ್ ಅವರು ೫ ಅಕ್ಟೋಬರ್ ೧೯೫೩ ರಂದು ಕಲಾಕ್ಷೇತ್ರವನ್ನು ಸೇರಿದರು ಮತ್ತು ೧೯೫೫-೧೯೬೭ರವರೆಗೂ ರುಕ್ಮಿಣಿ ದೇವಿ (ಕಲಾಕ್ಷೇತ್ರದ ಸ್ಥಾಪಕರು)ಯವರ ಬಳಿ ಪ್ರಮುಖ ಪುರುಷ ನೃತ್ಯಗಾರರಾಗಿ ಗುರುತಿಸಿಕೊಂಡರು.  ಇವರು ಕಲಾಕ್ಷೇತ್ರದಿಂದ ನೃತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು (ಭರತನಾಟ್ಯ ಮತ್ತು ಕಥಕ್ಕಳಿ) ಪಡೆದರು. ಇವರು ಅರ್ಥಶಾಸ್ತ್ರ ಮತ್ತು ರಾಜಕೀಯ ವಿಷಯದಲ್ಲಿ ಬಿ.ಎ ಪದವಿ ಕೂಡ ಹೊಂದಿದ್ದಾರೆ.


ಶಾಂತಾ ಧನಂಜಯನ್ ಅವರು ೧೨ ಆಗಸ್ಟ್ ೧೯೪೩ ರಂದು ಮಲೇಷ್ಯಾದಲ್ಲಿ ಮಲಯಾಳಿ ನಾಯರ್ ಕುಟುಂಬದಲ್ಲಿ ಜನಿಸಿದರು ಮತ್ತು ಮತ್ತು ಇವರ ಪೂರ್ವಜರು ಕೇರಳ ಮೂಲದವರಾಗಿದ್ದು ಮಲೇಷ್ಯಾಕ್ಕೆ ವಲಸೆ ಬಂದವರಾಗಿದ್ದಾರೆ. ಹುಟ್ಟು ಕಲಾವಿದೆಯಾದ ಇವರು ೩ ವರ್ಷದವರಾಗಿದ್ದಾಗಲೇ ಇವರ ತಂದೆ ತಾಯಿಗೆ ಶಾಂತಾ ನೃತ್ಯಗಾರ್ತಿಯಾಗುತ್ತಾಳೆ ಎಂಬುದು ಮನವರಿಕೆಯಾಗಿತ್ತು. ಇವರ ನೃತ್ಯದ ಬಗೆಗಿನ ಆಸಕ್ತಿಯನ್ನು ಗಮನಿಸಿದ ಅವರು ಈಕೆಯನ್ನು ಶಿಕ್ಷಣಕ್ಕಾಗಿ ಭಾರತಕ್ಕೆ ಕಳುಹಿಸಲು ನಿರ್ಧರಿಸಿದರು.

ಧನಂಜಯ ಅವರಿಗೆ ಒಂದು ವರ್ಷ ಮೊದಲು ಜೂನ್ ೧೯೫೨ ರಲ್ಲಿ ಇವರಿಗೆ ಎಂಟು ವರ್ಷವಾಗಿದ್ದಾಗ  ಕಲಾಕ್ಷೇತ್ರಕ್ಕೆ ಕಳುಹಿಸಿದರು. ನಂತರ ಇವರು ಭರತನಾಟ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದರು ಮತ್ತು ಕಥಕ್ಕಳಿ ಮತ್ತು ಕರ್ನಾಟಕ ಸಂಗೀತವನ್ನೂ ಕಲಿತರು. ಅವರು ೧೯೫೫-೧೯೬೮ ರವರೆಗೆ ಕಲಾಕ್ಷೇತ್ರದಲ್ಲಿ ಪ್ರಮುಖ ಮಹಿಳಾ ನೃತ್ಯಗಾರ್ತಿಯಾಗಿದ್ದರು.


ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಸಂಜಯ್ ಯುಎಸ್ಎ ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಕಿರಿಯ ಮಗ ಸತ್ಯಜಿತ್[೧] ಭಾರತದ ಚೆನ್ನೈನಲ್ಲಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಅವರೂ ಕೂಡ ನೃತ್ಯಗಾರ, ನೃತ್ಯ ಸಂಯೋಜಕ, ನೃತ್ಯ ಬೋಧಕ ಮತ್ತು ಆಟೋಮೊಬೈಲ್ ಛಾಯಾಗ್ರಾಹಕರಾಗಿದ್ದಾರೆ.[೨]

ಕಲಾಕ್ಷೇತ್ರದಲ್ಲಿ[ಬದಲಾಯಿಸಿ]

ಗುರು ಚಂದು ಪಣಿಕ್ಕರ್  ಅವರ ಕೃಪೆ ಇಲ್ಲದಿದ್ದರೆ, ಧನಂಜಯನ್  ಕೇರಳದಲ್ಲಿ ಯಾವುದೋ ಒಂದು ಕೆಲಸ ಮಾಡಿಕೊಂಡಿರಬೇಕಿತ್ತು. ಧನಂಜಯನ್ ಕಲಾಕ್ಷೇತ್ರದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯುವ ಮೂಲಕ ಭರತನಾಟ್ಯ, ಕಥಕ್ಕಳಿ, ಮೃದಂಗಂ ಮತ್ತು ಸಂಗೀತವನ್ನು ಕಲಿತರು.  ಶಾಂತಾ ಅವರು ಒಂದು ದಶಕಗಳ ಕಾಲ ಇತರೆ ವಿಷಯಗಳ ಜೊತೆಗೆ ಭರತನಾಟ್ಯ ಮತ್ತು ಸಂಗೀತದಲ್ಲಿ ತರಬೇತಿ ಪಡೆದರು. ಅವರ ಈ ಸಾಧನೆಗೆ ತಮ್ಮ ಗುರುಗಳಾದ ರುಕ್ಮಿಣಿ ದೇವಿ ಅರುಂಡೇಲ್ ಮತ್ತು ಚಂದು ಪಣಿಕ್ಕರ್ ಹಾಗೂ ಕಲಾಕ್ಷೇತ್ರದ ವಿವಿಧ ಅಧ್ಯಾಪಕರಾದ ಎನ್.ಎಸ್.ಜಯಲಕ್ಷ್ಮಿ ಮತ್ತು ಶಾರದಾ ಹಾಫ್ಮನ್ ಅವರ ಶ್ರಮದಾಯಕ ಮಾರ್ಗದರ್ಶನವೇ ಕಾರಣ ಎಂದು ನಂಬಿದ್ದಾರೆ.


ಕಲಾಕ್ಷೇತ್ರದಲ್ಲಿದ್ದಾಗ, ಧನಂಜಯನಿಗೆ ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿತ್ತು.  ಇವರು ಭೇಟಿಯಾದ ಮೊದಲ ಹುಡುಗಿ ಶಾಂತ, ಅದೂ ಗುರು ಪಣಿಕ್ಕರ್‌ ಇವರನ್ನು ಕಲಾಕ್ಷೇತ್ರದ ಪೋರ್ಟಲ್‌ಗಳಿಗೆ ಕರೆದೊಯ್ಯುತ್ತಿದ್ದಾಗ.  ಶಾಂತಾ ತನ್ನ ನೃತ್ಯ ಮತ್ತು ಸಂಗೀತಾಭ್ಯಾಸದಲ್ಲಿ ಗಂಭೀರ ಆಸಕ್ತಿಯೊಂದಿದ ವಿದ್ಯಾರ್ಥಿಯಾಗಿದ್ದರೂ ತನ್ನ ಹನ್ನೆರಡನೇ ವಯಸ್ಸಿನಲ್ಲಿ ಧನಂಜಯನ್ ತನ್ನ ಬಾಳ ಸಂಗಾತಿಯಾಗಬೇಕು ಎಂದು ಮನದಲ್ಲೇ ನಿರ್ಧರಿಸಿದ್ದರು.  ಧನಂಜಯನ್ ಶಾಂತಾಗೆ ಹದಿನೆಂಟು ವರ್ಷದವಳಿದ್ದಾಗ ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದರು, ಆದರೆ ಅವರು ಪದವಿ ಮುಗಿದ ನಂತರ ಮಲೇಷ್ಯಾಕ್ಕೆ ಹೋದರು  ಮತ್ತು ನಾಲ್ಕು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗುವವರೆಗೂ ತಮ್ಮ ಒಪ್ಪಿಗೆಯನ್ನು ಧನಂಜಯನ್‌ಗೆ  ತಿಳಿಸಿರಲಿಲ್ಲ.  ಅವರು ೧೯೬೬ ರಲ್ಲಿ ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ವಿವಾಹವಾದರು.

ವೃತ್ತಿ - ನೃತ್ಯ ಜೋಡಿ[ಬದಲಾಯಿಸಿ]

ಧನಂಜಯನರು ೧೯೬೦ರ ದಶಕದ ಉತ್ತರಾರ್ಧದಲ್ಲಿ ತಮ್ಮದೇ ಆದ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಕಲಾಕ್ಷೇತ್ರವನ್ನು ತೊರೆದರು.  ಆ ಸಮಯದಲ್ಲಿ ಚೆನ್ನೈನ ಶ್ರೀಮಂತರು ಮತ್ತು ಸ್ಥಿತಿವಂತರು ತಮ್ಮ ಸ್ವಂತ ಮಕ್ಕಳಿಗೆ ನೃತ್ಯ ಕಲಿಸಲು ಹೆಚ್ಚು ಆಸಕ್ತಿ ಹೊಂದಿದ್ದರು.


ಅವರ ಪ್ರದರ್ಶನಗಳು/ನಿರ್ಮಾಣಗಳು:[೩]

 • ಪಂಡಿತ್ ರವಿಶಂಕರ್ ಅವರ ಮ್ಯಾಗ್ನಮ್ ಓಪಸ್ "ಘನಶ್ಯಂ" ೧೯೮೯/೯೦
 • ನ್ಯಾಷನಲ್ ಡ್ಯಾನ್ಸ್ ಇನ್ಸ್ಟಿಟ್ಯೂಟ್, ನ್ಯೂಯಾರ್ಕ್ "ಚಕ್ರ", ೧,೦೦೦ ಬಹುರಾಷ್ಟ್ರೀಯ ಮಕ್ಕಳದೊಂದಿಗೆ
 • ಓಹಿಯೋ ಬ್ಯಾಲೆಟ್ ಕಂ, ಕ್ಯುಯಾಹೋಗಾ ಸಮುದಾಯ ಕಾಲೇಜು ಮತ್ತು ಕ್ಲೀವ್‌ಲ್ಯಾಂಡ್ ಕಲ್ಚರಲ್ ಅಲೈಯನ್ಸ್‌ನ - ಜಂಗಲ್ ಬುಕ್ ಬ್ಯಾಲೆಟ್ ನ್ ಜಂಟಿ ಉದ್ಯಮ
 • ಸಿಂಗಾಪುರ್ ಸರ್ಕಾರದ ಅಂತರರಾಷ್ಟ್ರೀಯ ಕಲಾ ಉತ್ಸವಕ್ಕೆ ನೃತ್ಯ ಸಂಯೋಜಕ, "ಸೀತಾ ರಾಮ ಕಥಾ" ೧೯೮೬ ಅದೇ ಉತ್ಸವದಲ್ಲಿ, ಸಿಂಗಾಪುರ ಕಲಾವಿದರೊಂದಿಗೆ ನೃತ್ಯ ನಾಟಕ "ಸಂಘಮಿತ್ರ" ೧೯೯೪
 • ೧೯೯೮, ೧೯೯೯ ರಲ್ಲಿ ರಿಯೂನಿಯನ್ ಫ್ರೆಂಚ್ ಐಲ್ಯಾಂಡ್‌ನಲ್ಲಿ ಫ್ರೆಂಚ್ ಥಿಯೇಟರ್ ಫ್ಲೆರಿ ಮತ್ತು ಅಸೋಸಿಯೇಶನ್ ವಾಣಿ ಜಂಟಿಯಾಗಿ ನಿರ್ಮಿಸಿದ ಮಹಾಭಾರತಂ ನೃತ್ಯ ನಾಟಕ

ಭಾರತ ಕಲಾಂಜಲಿ[ಬದಲಾಯಿಸಿ]

ಧನಂಜಯನರು ೧೯೬೮ ರಲ್ಲಿ ಚೆನ್ನೈನ ಅಡ್ಯಾರ್‌ನಲ್ಲಿ ತಮ್ಮದೇ ಆದ ಭರತ ಕಲಾಂಜಲಿ ನೃತ್ಯ ಶಾಲೆಯನ್ನು ಪ್ರಾರಂಭಿಸಿದರು. ಇದು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು ಮತ್ತು ಇಂದು ನೂರಾರು ವಿದ್ಯಾರ್ಥಿಗಳನ್ನು ಹೊಂದಿರುವ ನೃತ್ಯ ಮತ್ತು ಸಂಗೀತದ ಪ್ರಧಾನ ಅಕಾಡೆಮಿಯಾಗಿದೆ. ಇದು ತನ್ನದೇ ಆದ ವಿದ್ಯಾರ್ಥಿಗಳು ಮತ್ತು ಪದವೀಧರರಿಂದ ರೂಪುಗೊಂಡ ರೆಪರ್ಟರಿಯಾಗಿದೆ.

ಭಾಸ್ಕರ[ಬದಲಾಯಿಸಿ]

ದಂಪತಿಗಳು ಕೇರಳದ ಧನಂಜಯನ್ ಅವರ ಜನ್ಮಸ್ಥಳ ಪಯ್ಯನೂರಿನಲ್ಲಿ ಕಲಾ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಅವರು ವಾರ್ಷಿಕ ಬೇಸಿಗೆ ನಾಟ್ಯ ಗುರುಕುಲಂ ಶಿಬಿರವನ್ನು ನಡೆಸಿದರು, ಅದು ಹೆಚ್ಚು ದಿನ ಕಾರ್ಯನಿರ್ವಹಿಸಲಿಲ್ಲ.

ಯೋಗವಿಲ್ಲೆ[ಬದಲಾಯಿಸಿ]

ಧನಂಜಯನರು ೧೯೮೮ ರಿಂದ ಅಮೇರಿಕಾದ ವರ್ಜೀನಿಯಾದ ಯೋಗವಿಲ್ಲೆಯ ಸಚ್ಚಿದಾನಂದ ಆಶ್ರಮದಲ್ಲಿ ವಾರ್ಷಿಕ ಬೇಸಿಗೆ ಗುರುಕುಲಂ ಶಿಬಿರವನ್ನು ನಡೆಸುತ್ತಿದ್ದಾರೆ. ನಾಟ್ಯ ಅಧ್ಯಾಯನ ಗುರುಕುಲಂ ಅಭಿವೃದ್ಧಿಪಡಿಸಿದ ಈ ಶಿಬಿರವು ಸಂಪೂರ್ಣವಾಗಿ ಲಲಿತಕಲೆಗಳಿಗೆ ಮೀಸಲಾದ  ಪೂರ್ಣ ಸಮಯದ ವಸತಿ ಕೋರ್ಸ್ ಆಗಿದೆ. ವರ್ಜೀನಿಯಾ ಗ್ರಾಮಾಂತರದಲ್ಲಿ ನೆಲೆಗೊಂಡಿರುವ ಇಲ್ಲಿ ಭಾರತೀಯ-ಅಮೆರಿಕನ್ ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಶಿಕ್ಷಕರು  ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಮೌಲ್ಯಗಳ ಅರಿವು ಮೂಡಿಸುವುದರ ಜೊತೆಗೆ  ಹಿಂದೂ ಧರ್ಮದ ತಳಹದಿಯ ತತ್ವಶಾಸ್ತ್ರವನ್ನು ಈ ಮೂಲಕ  ಹರಡುವ ಕಾರ್ಯ ಮಾಡುತ್ತಿದ್ದಾರೆ.

ಬಿರುದುಗಳು[ಬದಲಾಯಿಸಿ]

ಧನಂಜಯನರಿಗೆ ನೀಡಲಾದ ಕೆಲವು ಪ್ರಮುಖ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು:

 • ಪದ್ಮಭೂಷಣ, ಭಾರತ ಸರ್ಕಾರ, ೨೦೦೯ [೪]
 • ಕೇರಳ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್, ೧೯೯೪ [೫]

ಸಾಮಾಜಿಕ ಸಮಸ್ಯೆ ಮತ್ತು ರಾಜಕೀಯ[ಬದಲಾಯಿಸಿ]

ಧನಂಜಯನ್  ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಬಹಳ ನೇರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸುವ ಮೂಲಕ ಹೆಚ್ಚು ಗುರುತಿಸಿಕೊಂಡಿದ್ಧಾರೆ.  ಅವರ ಇತ್ತೀಚಿನ ಪ್ರಕಟಣೆ ಕಲೆ ಮತ್ತು ಸಂಸ್ಕೃತಿಯನ್ನು ಮೀರಿ ಪ್ರಸ್ತುತ ಭಾರತ ಅಥವಾ ಭಾರತಕ್ಕೆ ಸಂಬಂಧಿಸಿದ ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಚರ್ಚಿಸುತ್ತದೆ,  ಈ ರೀತಿಯಾಗಿ ಪ್ರತಿಯೊಬ್ಬರು ತಮ್ಮ ದೇಶವನ್ನು ನೋಡಬೇಕೆಂದು ಇವರು ಬಯಸುತ್ತಾರೆ.

ಪ್ರಕಟಣೆಗಳು[ಬದಲಾಯಿಸಿ]

ವಿಪಿ ಧನಂಜಯನ್ ಅವರು ಸಮೃದ್ಧ ಬರಹಗಾರರಾಗಿದ್ದು, ನೃತ್ಯ ಮಾತ್ರವಲ್ಲದೆ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆಯೂ ಬರೆಯುತ್ತಾರೆ. ಅವರ ಪ್ರಕಟಣೆಗಳು ಹೀಗಿವೆ:

 • ಪ್ರದರ್ಶನ ಕಲೆ ಮತ್ತು ಸಂಸ್ಕೃತಿಯ ಆಚೆಗೆ : ರಾಜಕೀಯ-ಸಾಮಾಜಿಕ ಅಂಶಗಳು, ವಿಪಿ ಧನಂಜಯನ್. ನವದೆಹಲಿ, BR ರಿದಮ್ಸ್, 2007, xviii, 314 ಪು., ಇಲ್ಸ್,  .ISBN 81-88827-08-8
 • ಭಾರತೀಯ ಶಾಸ್ತ್ರೀಯ ನೃತ್ಯದ ಕುರಿತು ಧನಂಜಯನ್, VP ಧನಂಜಯನ್, BR ರಿದಮ್ಸ್, 2004, 3ನೇ ಪರಿಷ್ಕೃತ ಆವೃತ್ತಿ, ISBN 81-88827-04-5

ಉಲ್ಲೇಖಗಳು[ಬದಲಾಯಿಸಿ]

 1. https://web.archive.org/web/20110208093143/http://studiosatyajit.com/
 2. https://bharatakalanjali.in/
 3. Dancer on Dance, V.P Dhananjayan, Bharata Kalanjali
 4. "Padma Awards" (PDF). Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 21 ಜುಲೈ 2015.
 5. "Dance". Department of Cultural Affairs, Government of Kerala. Retrieved 25 ಫೆಬ್ರವರಿ 2023.