ತ್ಯಾಗೀಶಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮಿ ತ್ಯಾಗೀಶಾನಂದರು(೧೮೯೨ - ೧೯೫೧) ರಾಮಕೃಷ್ಣ ಸಂಘದ ಹಿರಿಯ ಸಂನ್ಯಾಸಿಯಾಗಿದ್ದರು.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಕೇರಳದ ತಿರುಚ್ಚೂರು ಎಂಬಲ್ಲಿ ೧೯೮೧ ರಲ್ಲಿ ಜನಿಸಿದ ಸ್ವಾಮಿ ತ್ಯಾಗೀಶಾನಂದರ ಮೊದಲ ಹೆಸರು ವಿ. ಕೆ. ಕೃಷ್ಣ ಮೆನನ್. ಕೊಚಿನ್ನಿನ ರಾಜವಂಶ ಸಂಬಂಧಿಯಾದ ಪ್ರಸಿದ್ಧ ವಟ್ಟಕ ಕುರುಪತ್ ಕುಟುಂಬ ಇವರದು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಿರುಚ್ಚೂರಿನಲ್ಲಿಯೇ ಪೂರೈಸಿದ ಇವರು ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಇಂಟರ ಮೀಡಿಯೇಟ್ ಓದಿದರು. ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಅಧೀನವಾಗಿದ್ದ ಈ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಪ್ರಥಮ ಸ್ಥಾನವನ್ನೂ ಬಂಗಾರದ ಪದಕವನ್ನೂ ಪಡೆದರು. ನಂತರ ಬಿ.ಎ. ಮತ್ತು ಲಾ ಡಿಗ್ರಿ ಗಳನ್ನು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಪಡೆದರು. ಪ್ರಥಮಸ್ಥಾನ ಮತ್ತು ಬಂಗಾರದ ಪದಕಗಳು ಮತ್ತೆ ಅವರದಾದವು.

ಈ ಸಮಯದಲ್ಲಿ ಮೈಲಾಪುರದ ರಾಮಕೃಷ್ಣ ಮಠದ ಸಂಪರ್ಕ ಅವರಿಗೆ ಉಂಟಾಯಿತು. ರಾಮಕೃಷ್ಣರ ನೇರ ಶಿಷ್ಯರಾದ ಸ್ವಾಮಿ ರಾಮಕೃಷ್ಣಾನಂದರ ಸನ್ನಿಧಿ ಕೃಷ್ಣ ಮೆನನ್ನರ ವೈರಾಗ್ಯ-ಸೇವಾಭಾವಗಳಿಗೆ ಒಂದು ರೂಪವನ್ನು ಕೊಟ್ಟಿತು. ಮದ್ರಾಸಿಗೆ ಭೇಟಿ ನೀಡಿದ ಸ್ವಾಮಿ ಬ್ರಹ್ಮಾನಂದರಿಂದ ಮಂತ್ರದೀಕ್ಷೆಯನ್ನು ಕೃಷ್ಣ ಮೆನನ್ ಅಪಾರವಾದ ತಾಳ್ಮೆ ಮತ್ತು ಸತತ ಪ್ರಯತ್ನಗಳ ಫಲವಾಗಿ ಪಡೆದರು.

ವೃತ್ತಿ ಜೀವನ[ಬದಲಾಯಿಸಿ]

ಕಾನೂನು ಪದವಿ ಪಡೆದ ನಂತರ ಸ್ವಗ್ರಾಮಕ್ಕೆ ಮರಳಿದ ಇವರು ಕೆಲವು ಕಾಲ ತಮ್ಮ ಸೋದರಮಾವ-ನಿವೃತ್ತ ನ್ಯಾಯಾಧೀಶ ವಿ. ಕೆ. ಕೊಚ್ಚುನ್ನಿ ಮೆನನ್ ಕೆಳಗೆ ವಕೀಲಿ ವೃತ್ತಿಯಲ್ಲಿ ತೊಡಗಿ ಕೊಂಡರು. ಒಂದು ಮೊಕದ್ದಮೆಯಲ್ಲಿ ಸುಳ್ಳು ಹೇಳುವ ಪ್ರಸಂಗ ಬಂದುದ್ದರಿಂದ ಅವರು ವಕೀಲಿವೃತ್ತಿಯನ್ನೇ ಬಿಟ್ಟು ಬಿಟ್ಟರು. ೧೯೨೨ರಲ್ಲಿ ’ವಿವೇಕೋದಯಮ್’ ಸಂಘವು ತ್ರಿಚೂರಿನಲ್ಲಿ ಪ್ರಾರಂಭಿಸಿದ ಮಾಧ್ಯಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ಸೇರಿದ ಇವರು ಎಲ್.ಟಿ. ಪದವಿಯನ್ನು ಪಡೆದರು. ಈ ವೃತ್ತಿಯು ಅವರಿಗೆ ಬಹುವಾಗಿ ರುಚಿಸಿತು.

ಸೇವೆ[ಬದಲಾಯಿಸಿ]

೧೯೨೪ ರಲ್ಲಿ ಕೇರಳವು ಭಯಂಕರವಾದ ಪ್ರವಾಹಕ್ಕೆ ತುತ್ತಾಯಿತು. ಕೃಷ್ಣ ಮೆನನ್ ತಮ್ಮ ಸಹೋದ್ಯೋಗಿಗಳೊಡನೆ ಸೇರಿ ಶ್ರಮದಾಯಕವಾದ ಪರಿಹಾರ ಕಾರ್ಯಗಳನ್ನು ಕೈಗೊಂಡರು. ೨೦,೦೦ ರೂಪಾಯಿಗಳ ಸಹಾಯಧನದೊಂದಿಗೆ ರಾಮಕೃಷ್ಣ ಸಂಘವೂ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿತು. ಶಾಲೆಯ ಪ್ರಾಂಗಣದ ಗುಡಿಸಿಲಿನಲ್ಲಿ ಪ್ರಾರಂಭವಾದ ಮಠದಲ್ಲಿ ಕೃಷ್ಣ ಮೆನನ್ ವಾಸಿಸತೊಡಗಿದರು. ರಾಮಕೃಷ್ಣ- ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದ ಮೆನನ್, ಮಹಾತ್ಮಾ ಗಾಂಧೀಯವರ ಕೆಲಸಗಳ ಅಭಿಮಾನಿಯೂ ಆಗಿದ್ದರು. ಜೀವನ ಪರ್ಯಂತ ಮೆನನ್ ಖಾದಿಯನ್ನೇ ಬಳಿಸಿದರು. ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಖಾದಿಯನ್ನು ನೂಲುತ್ತಿದ್ದರು ಮತ್ತು ಧರಿಸುತ್ತಿದ್ದರು. ರಾಷ್ಟ್ರವಾದಿ ವಿಚಾರಗಳಿಂದ ಕೂಡಿದ್ದ ಈ ಶಾಲೆ ಸುತ್ತ-ಮುತ್ತಲೂ ಬಹಳ ಪ್ರಸಿದ್ಧವಾಯಿತು. ಮಹಾತ್ಮಾ ಗಾಂಧೀಜಿ ಈ ಶಾಲೆಗೆ ಭೇಟಿ ನೀಡಿ ಹರಸಿದರು.

೧೯೨೭ರಲ್ಲಿ ಮೆನನ್ ಹರಿಜನರು ವಿದ್ಯಾವಂತರಾಗ ಬೇಕೆಂದು ತಿರುಚ್ಚೂರಿನ ಸಮೀಪದ ವಿಲಂಗಣ ಎಂಬಲ್ಲಿನ ದಕ್ಷಿಣದ ಪುರನಾಟ್ಟುಕರ ಎಂಬ ಹಳ್ಳಿಯಲ್ಲಿ ಬಾಲಕ ಮತ್ತು ಬಾಲಿಕೆಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳನ್ನು ಸ್ಥಾಪಿಸಿದರು. ಜಾತಿಪದ್ಧತಿ- ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದ ಸಮಾಜದ ಹಲವಾರು ಜನರ ಇಷ್ಟಕ್ಕೆ ಇದು ವಿರುದ್ಧವಾಗಿತ್ತು. ಮನೆ-ಮನೆಗಳಲ್ಲಿ ಭಿಕ್ಷೆಬೇಡಿ ಶಾಲೆಗಾಗಿ ದ್ರವ್ಯಸಂಗ್ರಹ ಮಾಡಿದರು. ಅವರ ಕೆಲಸಗಳಿಂದ ಪ್ರಭಾವಿತರಾದ ಹತ್ತಾರು ಯುವಕರು ಮೆನನ್ ಅವರ ಒಡನಾಡಿಗಳಾದರು. ಮುಂದೆ ಇವರಲ್ಲಿ ಅನೇಕರು ರಾಮಕೃಷ್ಣ ಸಂಘವನ್ನು ಸೇರಿದರು.

ಸ್ವಪರೀಕ್ಷೆ[ಬದಲಾಯಿಸಿ]

ಏಕಾದಶಿ ವ್ರತವನ್ನು ಆಚರಿಸುತ್ತಿದ್ದ ಇವರಿಗೊಮ್ಮೆ ತಾವು ನಿಜವಾಗಿಯೂ ವಿವೇಕಾನಂದರ “ದರಿದ್ರ ದೇವೋ ಭವ” ಉಪದೇಶವನ್ನು ಪಾಲಿಸುತ್ತಿದ್ದೇನೆಯೇ ಎಂಬ ಸಂದೇಹ ಉಂಟಾಯಿತು. ಪ್ರತಿ ಜೀವಿಯಲ್ಲೂ ಶಿವನನ್ನು ಕಾಣುವ ಪಕ್ವಸ್ಥಿತಿಯನ್ನು ತಮ್ಮ ಮನಸ್ಸು ಮುಟ್ಟಿದೆಯೇ ಎಂಬುದನ್ನು ಸ್ವತಃ ಪರೀಕ್ಷಿಸಿಕೊಳ್ಳಲು ಅವರು ನಿಶ್ಚಯಿಸಿದರು. ಮುಂಜಾನೆ ಕಾಣಿಸಿ ಕೊಳ್ಳುವ ಮೊದಲ ಭಿಕ್ಷುಕನನ್ನು ನಾರಾಯಣನೆಂದು ಪೂಜಿಸಿ ದ್ವಾದಶಿ ಪಾರಣೆ ಮಾಡುವ ನಿಶ್ಚಯ ಮಾಡಿದರು. ಮರುದಿನ ಕಂಡ ದೃಶ್ಯ ಅವರನ್ನು ಕ್ಷಣಕಾಲ ಅಧೀರನನ್ನಾಗಿಸಿತು. ಗುಡಿಸಿಲಿನ ಬಳಿ ಬಂದ ಕುಷ್ಠರೋಗಿ ಭಿಕ್ಷುಕನನ್ನು ಕಂಡು – ಸಾವರಿಸಿಕೊಂಡು, ಅವನಿಗೆ ಕರೆತಂದು ಶಾಸ್ತ್ರೋಕ್ತ ಪೂಜೆ ಸಲ್ಲಿಸಿದರು-ಸೇವೆ ಗೈದರು. ಹೀಗೆ ಸ್ವಪರೀಕ್ಷೆಯಲ್ಲಿ ತೇರ್ಗಡೆಯಾದ ಇವರು ಪ್ರತಿ ಏಕಾದಶಿಯಂದು ಬಡವರಿಗೆ ಊಟ-ವಸ್ತ್ರಗಳಿಂದ ಸೇವೆಸಲ್ಲಿಸುವ ವ್ರತವನ್ನು ಆಜೀವನ ನಡೆಸಿದರು.

ಸಂನ್ಯಾಸ[ಬದಲಾಯಿಸಿ]

ಈ ಸಮಯದಲ್ಲಿಯೇ ಸಂನ್ಯಾಸ ಆಶ್ರಮವನ್ನು ಅಪೇಕ್ಷಿಸಿ ರಾಮಕೃಷ್ಣ ಸಂಘವನ್ನು ಮೆನನ್ ಸೇರಿದರು. ’ಅಖಂಡ ಚೈತನ್ಯ’ ಎಂಬ ಹೆಸರಿನಿಂದ ಬ್ರಹ್ಮಚಾರಿಯಾಗಿ ಸೇವೆ ಸಲ್ಲಿಸಿದ ಇವರು ೧೯೩೨ರಲ್ಲಿ ಸ್ವಾಮಿ ಶಿವಾನಂದರಿಂದ ಸಂನ್ಯಾಸ ದೀಕ್ಷೆ ಪಡೆದರು. ವಿಲಂಗಣದ ಆಶ್ರಮದ ಪ್ರಥಮಾಧ್ಯಕ್ಷ ಸ್ವಾಮಿ ತ್ಯಾಗೀಶಾನಂದ ಎಂಬ ಹೆಸರಿನಿಂದ ಸೇವೆ ಸಲ್ಲಿಸಲು ನಿಯುಕ್ತರಾದರು. ಹಗಲು-ರಾತ್ರಿ ದುಡಿತ ಆಧ್ಯಾತ್ಮಿಕ ಸಾಧನೆಗಳಿಂದ ಬಳಲಿದ ಅವರಲ್ಲಿ ಬೆನ್ನುಮೂಳೆಯ ಕ್ಷಯರೋಗ ಕಾಣಿಸಿಕೊಂಡಿತು. ಅವರಿಗೆ ವಿಶ್ರಾಂತಿ ಅವಶ್ಯವೆಂದು ಮನಗಂಡ ರಾಮಕೃಷ್ಣ ಸಂಘದ ಹಿರಿಯರು ಹವಾಮಾನದ ಬದಲಾವಣೆಗಾಗಿ ಅವರನ್ನು ೧೯೩೮ರಲ್ಲಿ ಬೆಂಗಳೂರಿನ ಬಸವನಗುಡಿಯ ಮಠದ ಅಧ್ಯಕ್ಷರಾಗಿ ನಿಯಮಿಸಿದರು.

ಬೆಂಗಳೂರಿನಲ್ಲಿ[ಬದಲಾಯಿಸಿ]

ವಿದ್ಯಾಭ್ಯಾಸದ ಉಪಯುಕ್ತತೆ ಮತ್ತು ಆವಶ್ಯಕತೆಗಳನ್ನು ಬಲ್ಲ ಸ್ವಾಮಿಗಳು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ವಸತಿಗೃಹವನ್ನು ಪ್ರಾರಂಭಿಸಿದರು. ಸ್ವತಃ ಅಡಿಗೆಮಾಡಿ, ಬಡೆಸಿ, ಮಕ್ಕಳ ಪರೀಕ್ಷಾಸಮಯದಲ್ಲಿ ಪಾತ್ರಗಳನ್ನು ಸ್ವತಃ ತೊಳೆಯುತ್ತಿದ್ದರು. ಇವನ್ನೆಲ್ಲ ನಂತರ ಉನ್ನತ ಹುದ್ದೆ ಅಲಂಕರಿಸಿದ ಅಂದಿನ ವಿದ್ಯಾರ್ಥಿಗಳು ಕೃತಜ್ಞತೆಯಿಂದ ಸ್ಮೃತಿಚಿತ್ರಗಳಲ್ಲಿ ದಾಖಲಿಸಿದ್ದಾರೆ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಸ್ವಾಮೀಜಿಯವರದು ಅಪಾರ ಪಾಂಡಿತ್ಯ. ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರ, ಪುರಾಣಗಳನ್ನು ಯಾವ ಟಿಪ್ಪಣೆಯೂ ಇಲ್ಲದೇ ಉದ್ಧರಿಸುತ್ತಿದ್ದ ಅವರ ಪಾಂಡಿತ್ಯಪೂರ್ಣ ಉಪನ್ಯಾಸಗಳನ್ನು ಜ್ಞಾನಾರ್ಥಿಗಳು ಪ್ರತಿವಾರ ಕೇಳಲು ಆಶ್ರಮಕ್ಕೆ ಬರುತ್ತಿದ್ದರು. ಅವರ ’ನಾರದ ಭಕ್ತಿಸೂತ್ರ’ ಕುರಿತಾದ ಕೃತಿ ಇಂದಿಗೂ ಆಚಾರ್ಯಕೃತಿಯಾಗಿದೆ. ಭಾರತೀಯ ಸಾಂಸ್ಕೃತಿಕ ಪರಂಪರೆ ಕೃತಿಶ್ರೇಣಿಗಾಗಿ ’ ಭಾಗವತದ ಸಂದೇಶ’ ಕುರಿತು ಅವರು ರಚಿಸಿದ ಲೇಖನ ಅವರ ವಿದ್ವತ್ತಿಗೆ ಸಾಕ್ಷಿಯಾಗಿದೆ. ಶ್ವೇತಾಶ್ವತರ ಉಪನಿಷತ್ತು ಮತ್ತು ಮಾಂಡೂಕ್ಯ ಕಾರಿಕೆ ಕುರಿತ ಅವರ ಲೇಖನಗಳು ಇಂದು ನಮಗೆ ಲಭ್ಯವಿರುವ ಅವರ ಕೆಲವೇ ಕೆಲವು ಕೃತಿಗಳು. ೧೯೫೦ರಲ್ಲಿ ತಮ್ಮ ಅಂತಿಮ ಕಾಲ ಬಂದಿದೆ ಎಂದೆನಿಸಿದ್ದರಿಂದ ದಕ್ಷಿಣ ಭಾರತ ಯಾತ್ರೆ ಕೈಗೊಂಡರು. ಕೋಲಾರದ ಚಿನ್ನದ ಗಣಿಯ ಪ್ರಸಿದ್ಧ ಆಸ್ಪತ್ರೆಯಲ್ಲಿ ಅವರಿಗೆ ಕ್ಷಯರೋಗ ಬಂದುದ್ದನ್ನು ವೈದ್ಯರು ಪತ್ತೆಹಚ್ಚಿದರು. ಅಪಾರವಾದ ಹೊಟ್ಟೆನೋವನ್ನು ಶಾಂತಚಿತ್ತರಾಗಿ ಸಹಿಸಿ ದೇಹಭಾವದಿಂದ ಇವರು ಮುಕ್ತರೇ ಎಂಬ ಆಶ್ಚರ್ಯ ವೈದ್ಯರದಾಗಿರುತ್ತಿತ್ತು. ಸ್ವಾಮಿಗಳು ೧೯೫೧ ಆಗಸ್ಟ ೬ರಂದು ಬ್ರಹ್ಮಲೀನರಾದರು.

ಆಸಕ್ತಿದಾಯಕ ಮಾಹಿತಿ[ಬದಲಾಯಿಸಿ]

  • ತಿರುವಣ್ಣಾಮಲೈಯಲ್ಲಿ ಶ್ರೀರಮಣದೊಡನೆ ಕೆಲವುಕಾಲ ವಾಸಿಸಿದ ಸ್ವಾಮಿಗಳಿಗೆ, ರಮಣರಲ್ಲಿ ಅಪಾರವಾದ ಭಕ್ತಿ.
  • ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಎಚ್. ನರಸಿಂಹಯ್ಯನವರು ಸ್ವಾಮಿಗಳು ಪ್ರಾರಂಭಿಸಿದ ವಿದ್ಯಾರ್ಥಿಗೃಹದಲ್ಲಿ ಬೆಳೆದವರು. ಸ್ವಾಮಿಗಳ ಜೀವನದಿಂದ ತಾವು ಗಾಢವಾಗಿ ಪ್ರಭಾವಿತರಾಗಿದ್ದನ್ನು ಅವರು ತಮ್ಮ ಆತ್ಮಕಥನದಲ್ಲಿ ದಾಖಲಿಸಿದ್ದಾರೆ.
  • ಸ್ವಾಮಿಗಳಿಗೆ ಬಹು ಪ್ರಿಯವಾದ ’ವಿವೇಕ ಚೂಡಾಮಣಿ’ಯ ಶ್ಲೋಕವೊಂದು ಹೀಗಿದೆ:

ಶಾಂತಾ ಮಹಾಂತೋ ನಿವಸಂತಿ ಸಂತಃ
ವಸಂತವತ್ ಲೋಕಹಿತಮ್ ಚರಂತಃ |
ತೀರ್ಣಾಃ ಸ್ವಯಮ್ ಭೀಮ ಭವಾರ್ಣವಾನ್ ಜನಾನ್
ಅಹೇತುನಾ ಅನ್ಯದಪಿ ತಾರಯಂತಃ ||
ಕೆಲವರು ಶಾಂತರೂ ಮಹಾಮಹಿಮರೂ ಇರುತ್ತಾರೆ. ಅವರು ಸಂತರು. ಅವರು ವಸಂತದಂತೆ ಲೋಕಹಿತಕ್ಕಾಗಿ ಚರಿಸುತ್ತಾರೆ. ಭಯಂಕರವಾದ ಈ ಸಂಸಾರ ಸಾಗರವನ್ನು ಅವರು ದಾಟಿ ಕೊಳ್ಳುತ್ತಾರೆ. ಮಾತ್ರವಲ್ಲ, ಏನೂ ಕಾರಣವಿಲ್ಲದಯೇ ಕೃಪೆ ತೋರಿಸಿ, ಇತರ ಜನರನ್ನೂ ಈ ಸಂಸಾರ ಸಾಗರದ ಆಚೆ ದಡವನ್ನು ಮುಟ್ಟಿಸುತ್ತಾರೆ.

  • ಸ್ವಾಮಿಗಳಿಗೆ ಪ್ರಿಯವಾದ ಇನ್ನೊಂದು ಶ್ಲೋಕ ಹೀಗಿದೆ:

ಅನುಭ್ಯಶ್ಚ ಮಹದ್ಭ್ಯಶ್ಚ ಶಾಸ್ತ್ರೇಭ್ಯಶ್ಚ ಕುಶಲೋ ನರಃ|
ಸರ್ವತಃ ಸಾರಮಾದದ್ಯಾತ್ ಪುಷ್ಪೇಭ್ಯ ಇವ ಸತ್ಪದಃ ||

ಆಧಾರ ಗ್ರಂಥಗಳು[ಬದಲಾಯಿಸಿ]

  • ಸ್ವಾಮಿ ತ್ಯಾಗೀಶಾನಂದರು – ಭಾರತ-ಭಾರತಿ ಪುಸ್ತಕ ಮಾಲಿಕೆ. ಡಾ. ಪ್ರಭು ಶಂಕರ
  • ಆತ್ಮಕಥೆ – ಡಾ. ಎಚ್. ನರಸಿಂಹಯ್ಯ
  • A spiritual Center Blossoms – ಎಮ್. ಎನ್. ನಂಜುಂಡಯ್ಯ