ಹರಿಜನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರಿಜನ ಎಂಬುವುದು ಮಹಾತ್ಮ ಗಾಂಧೀಯವರು ಹೊರಡಿಸುತ್ತಿದ್ದ ವಾರಪತ್ರಿಕೆ. ಅಸ್ಪøಶ್ಯತೆಯನ್ನು ಹೋಗಲಾಡಿಸಲು ಅವರು ಹೋರಾಡಿದರಲ್ಲದೆ ಅದನ್ನು ನಿವಾರಿಸಲು ಆ ಪಿಡುಗಿಗೆ ತುತ್ತಾದ ಜನರನ್ನು ಹರಿಜನರೆಂದು ಕರೆದರು. ಅವರ ಪ್ರಕಾರ ಹರಿಜನ ಎಂದರೆ ಭಗವಂತನಿಗೆ ಪ್ರಿಯವಾದವರು. ಸಾಮಾಜಿಕ ಸುಧಾರಣೆಗೆ ಪತ್ರಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದೆಂದು ಭಾವಿಸಿದ ಅವರು, ದಲಿತರ ಉದ್ಧಾರಕ್ಕಾಗಿ ಹರಿಜನ ಪತ್ರಿಕೆಯನ್ನು ಆರಂಭಿಸಿದರು. ಇದೊಂದು ಆಂಗ್ಲ ವಾರಪತ್ರಿಕೆ. ಅಹಮದಾಬಾದಿನಲ್ಲಿ 1933 ಫೆಬ್ರವರಿ 11ರಂದು ಇದರ ಪ್ರಕಟಣೆಯನ್ನಾರಂಭಿಸಲಾಯಿತು. ಗಾಂಧೀಯವರ ಆಪ್ತಕಾರ್ಯದರ್ಶಿ ಮಹದೇವ ದೇಸಾಯಿ ಈ ಪತ್ರಿಕೆಯ ಸಂಪಾದಕರಾಗಿದ್ದರು. 16 ಪುಟಗಳಿದ್ದ ಈ ಪತ್ರಿಕೆಯನ್ನು ಟಾಬ್ಲಾಯ್ಡ್ ಆಕಾರದಲ್ಲಿ ಪ್ರತಿ ಭಾನುವಾರ ಪ್ರಕಟಿಸಲಾಗುತ್ತಿತ್ತು. ಆರ್ಥಿಕ ನೆರವು ಸಹಜವಾಗಿ ಪತ್ರಿಕೆಗೆ ಅವಶ್ಯಕವಿದ್ದರೂ ಅದು ಎಂದೂ ಜಾಹಿರಾತನ್ನು ಪ್ರಕಟಿಸಲಿಲ್ಲ. ಪತ್ರಿಕೆಯ ಬೆಲೆ ಮೂರು ಆಣೆ ಇತ್ತು. ಸಾವಿರಾರು ಜನರು ಇದರ ಚಂದಾದಾರರಾಗಿದ್ದರು. ಇದು ಗಾಂಧೀಯವರ ಅತ್ಯಂತ ಮಹತ್ತ್ವದ ಪ್ರಯೋಗಗಳಲ್ಲಿ ಒಂದು. ಸಮಾಜದಲ್ಲಿ ಅಸ್ಪøಶ್ಯತೆ ನಿವಾರಣೆಯ ಹೋರಾಟದ ಬಗ್ಗೆ ಸಂಪ್ರದಾಯಸ್ಥರನ್ನು ಪ್ರಚೋದಿಸಿ ಅವರು ಸ್ವತಂತ್ರವಾಗಿ ಚಿಂತಿಸಲು ಈ ಪತ್ರಿಕೆ ಪ್ರೇರೇಪಿಸಿತು.

ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬರುತ್ತಿದ್ದ ಈ ಪತ್ರಿಕೆಯನ್ನು ಹಿಂದಿ, ಗುಜರಾತಿ ಭಾಷೆಗಳಲ್ಲೂ ಪ್ರಕಟಿಸಲಾಗುತ್ತಿತ್ತು. ಸೆರೆವಾಸದಲ್ಲೂ ಪತ್ರಿಕೆಗೆ ಬರೆಯುವುದನ್ನು ಗಾಂಧೀ ನಿಲ್ಲಿಸಲಿಲ್ಲ. ಅನೇಕ ಬಾರಿ ಈ ಪತ್ರಿಕೆಯನ್ನು ನಿಲ್ಲಿಸಬೇಕಾದ ಸಂದರ್ಭಗಳು ಒದಗಿಬಂದುವು. ಅವುಗಳಲ್ಲಿ ಪ್ರಮುಖವಾದದ್ದು ಕ್ವಿಟ್ ಇಂಡಿಯ ಚಳವಳಿ. 1942 ಆಗಸ್ಟ್ 8ರಂದು ಈ ಚಳವಳಿಯಿಂದಾಗಿ ಅವರನ್ನು ಬಂಧಿಸಲಾಯಿತು. ಅಲ್ಲದೇ ಬ್ರಿಟಿಷ್ ಸರ್ಕಾರ ತನ್ನ ದಮನಕಾರಿ ಧೋರಣೆಯಿಂದ ಪತ್ರಿಕೆಯನ್ನು ಮುಚ್ಚಿ, ವಶಪಡಿಸಿಕೊಂಡಿತು. ತರುವಾಯ 1946 ಫೆಬ್ರವರಿ 10ರಂದು ಇದು ಪುನರಾರಂಭಗೊಂಡಿತು. ಗಾಂಧೀಯವರ ಹತ್ಯೆಯ ಅನಂತರ (1948) ಪತ್ರಿಕೆಯನ್ನು ಮುಂದುವರಿಸುವ ಪ್ರಯತ್ನಗಳು ನಡೆದವು. ನಾಲ್ಕು ತಿಂಗಳಕಾಲ ನಿಂತುಹೋದ ಈ ಪತ್ರಿಕೆಯನ್ನು ಕೆ.ಜಿ.ಮಿಶ್ರಾವಾಲಾ ಸಂಪಾದಕತ್ವದಲ್ಲಿ ಮತ್ತೆ ಆರಂಭಿಸಲಾಯಿತು. ಅಲ್ಲಿಂದ ಸು. 8 ವರ್ಷಗಳ ತನಕ ಗಾಂಧೀಯವರ ಆದರ್ಶ ಬದುಕನ್ನು ಆದರ್ಶವಾಗಿಟ್ಟುಕೊಂಡು ಸಾಮಾಜಿಕ ಪರಿವರ್ತನೆಯಲ್ಲಿ ಭಾಗಿಯಾಗಲು ಪತ್ರಿಕೆ ಸತತ ಹೋರಾಟ ನಡೆಸಿತು. 1956ರಲ್ಲಿ ಈ ಪತ್ರಿಕೆ ನಿಂತುಹೋಯಿತು. ಮಗನ್‍ಭಾಯಿ ಪಿ.ದೇಸಾಯಿ ಈ ಪತ್ರಿಕೆಯ ಕೊನೆಯ ಸಂಪಾದಕರು. 1933ರಲ್ಲಿ ಆರಂಭಗೊಂಡಾಗ 16 ಪುಟಗಳನ್ನು ಹೊಂದಿದ್ದ ಇದು 1956ರಲ್ಲಿ ನಿಂತು ಹೋಗುವ ಕಾಲದಲ್ಲಿ 24 ಪುಟಗಳನ್ನೂ 9,290 ಪ್ರಸಾರ ಸಂಖ್ಯೆಯನ್ನೂ ಹೊಂದಿತ್ತು.

ಈ ಪತ್ರಿಕೆ ಪತ್ರಿಕೋದ್ಯಮ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಪ್ರಪಂಚಾದ್ಯಂತ ಸಂವಹನ ಪರಿಣಿತರು ಐವತ್ತರ ದಶಕದ ಅನಂತರ ನವಯುಗದ ಸಮುದಾಯ ವಿಕಾಸ ಅಭಿವೃದ್ಧಿ ಪತ್ರಿಕೋದ್ಯಮವೆನ್ನುವ ವಿಚಾರಗಳ ಬಗ್ಗೆ ಚಿಂತನೆ ಮಾಡಲು ಪ್ರಾರಂಭಿಸಿದ್ದರು. ಆದರೆ ಗಾಂಧೀಯವರು ದಶಕಗಳಷ್ಟು ಮೊದಲೇ ಈ ಪತ್ರಿಕೆಯ ಮೂಲಕ ನವಯುಗ ಪತ್ರಿಕೋದ್ಯಮದ ಸಿದ್ಧಾಂತವನ್ನು ಪ್ರಯೋಗಾತ್ಮಕವಾಗಿ ನಡೆಸಿದ್ದರು. ಈ ದೃಷ್ಟಿಯಿಂದ ಇದು ಕೇವಲ ಒಂದು ಪತ್ರಿಕೆಯಾಗಿರ ಲಿಲ್ಲ; ಸಂವಹನ ಸಿದ್ಧಾಂತವೂ ಆಗಿತ್ತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹರಿಜನ&oldid=938483" ಇಂದ ಪಡೆಯಲ್ಪಟ್ಟಿದೆ