ಜೈವಿಕ-ಅಣು
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2009) |
ಜೈವಿಕ-ಅಣು ಬದುಕಿರುವ ಜೀವಿಗಳಿಂದ ಉತ್ಪತ್ತಿಯಾಗುವ ಒಂದು ಕಾರ್ಬನಿಕ ಅಣುವಾಗಿದೆ. ಇದು ಪ್ರೋಟೀನ್‌ಗಳು, ಪಾಲಿಸ್ಯಾಕರೈಡ್‌ಗಳು ಮತ್ತು ನ್ಯೂಕ್ಲಿಯಕ್ ಆಮ್ಲಗಳಂತಹ ದೊಡ್ಡ ಪಾಲಿಮರ್‌ನ ಅಣುಗಳು ಮಾತ್ರವಲ್ಲದೆ ಪ್ರಾಥಮಿಕ ಚಯಾಪಚಯಜಗಳು(ಮೆಟಾಬಲೈಟ್ಸ್) ಎರಡನೇ ಚಯಾಪಚಯಜಗಳು ಮತ್ತು ನೈಸರ್ಗಿಕ ಉತ್ಪನ್ನಗಳು ಮೊದಲಾದ ಸಣ್ಣ ಅಣುಗಳನ್ನು ಒಳಗೊಳ್ಳುತ್ತದೆ. ಈ ವರ್ಗದ ಅಣುಗಳಿಗೆ ಒಂದು ಸಾಮಾನ್ಯ ಹೆಸರೆಂದರೆ ಜೀವಿಜನ್ಯ ಅಂಶ.
ಕಾರ್ಬನಿಕ ಅಣುಗಳಾದ ಜೈವಿಕ-ಅಣುಗಳು ಪ್ರಾಥಮಿಕವಾಗಿ ಇಂಗಾಲ,ಜಲಜನಕ, ಸಾರಜನಕ ಮತ್ತು ಆಮ್ಲಜನಕವನ್ನು ಹಾಗೂ ಕಡಿಮೆ ಪ್ರಮಾಣದಲ್ಲಿ ಫಾಸ್ಫರಸ್(ರಂಜಕ) ಮತ್ತು ಸಲ್ಫರ್(ಗಂಧಕ)ಅನ್ನು ಹೊಂದಿರುತ್ತದೆ. ಇತರ ಅಂಶಗಳೂ ಕೆಲವೊಮ್ಮೆ ಸೇರಿಕೊಳ್ಳುತ್ತವೆ. ಆದರೆ ಅವು ತೀರ ಕಡಿಮೆ ಸಾಮಾನ್ಯವಾಗಿರುತ್ತವೆ.
ಜೈವಿಕ-ಅಣುಗಳ ಪ್ರಕಾರಗಳು
[ಬದಲಾಯಿಸಿ]ಭಿನ್ನ ಪ್ರಕಾರದ ಜೈವಿಕ-ಅಣುಗಳು ಅಸ್ತಿತ್ವದಲ್ಲಿವೆ, ಅವುಗಳೆಂದರೆ:
- ಸಣ್ಣ ಅಣುಗಳು
- ಲಿಪಿಡ್‌ಗಳು, ಫಾಸ್ಫೊಲಿಪಿಡ್‌ಗಳು, ಗ್ಲೈಕೊಲಿಪಿಡ್‌ಗಳು, ಸ್ಟೆರಾಲ್‌ಗಳು, ಗ್ಲಿಸರೊಲಿಪಿಡ್‌ಗಳು
- ಕಾರ್ಬೊಹೈಡ್ರೇಟ್‌ಗಳು, ಶರ್ಕರಗಳು
- ಜೀವಸತ್ವಗಳು
- ಹಾರ್ಮೋನುಗಳು, ನ್ಯೂರೊಟ್ರಾನ್ಸ್ಮಿಟರ್‌ಗಳು
- ಚಯಾಪಚಯಜಗಳು
- ಮಾನೋಮರ್‌ಗಳು:
- ಅಮೈನೊ ಆಮ್ಲಗಳು
- ನ್ಯೂಕ್ಲಿಯೊಟೈಡ್‌ಗಳು
- ಮಾನೊಸ್ಯಾಕರೈಡ್‌ಗಳು
- ಪಾಲಿಮರ್‌ಗಳು:
- ಪೆಪ್ಟೈಡ್‌ಗಳು, ಆಲಿಗೊಪೆಪ್ಟೈಡ್‌ಗಳು, ಪಾಲಿಪೆಪ್ಟೈಡ್‌ಗಳು, ಪ್ರೋಟೀನ್‌ಗಳು
- ನ್ಯೂಕ್ಲಿಯಕ್ ಆಮ್ಲಗಳು, DNA, RNA
- ಆಲಿಗೊಸ್ಯಾಕರೈಡ್‌ಗಳು, ಪಾಲಿಸ್ಯಾಕರೈಡ್‌ಗಳು (ಸೆಲ್ಯುಲೋಸ್ಅನ್ನು ಒಳಗೊಂಡು)
- ಸೆಲ್ಯುಲೋಸ್, ಲಿಗ್ನಿನ್
- ಹೀಮೊಗ್ಲೋಬಿನ್
ನ್ಯೂಕ್ಲಿಯೊಸೈಡ್‌ಗಳು ಮತ್ತು ನ್ಯೂಕ್ಲಿಯೊಟೈಡ್‌ಗಳು
[ಬದಲಾಯಿಸಿ]ನ್ಯೂಕ್ಲಿಯೊಸೈಡ್‌ಗಳು ಒಂದು ನ್ಯೂಕ್ಲಿಯೊಬೇಸ್ ಒಂದು ರೈಬೋಸ್‌ಗೆ ಸೇರಿಕೊಂಡು ರಚನೆಯಾಗುವ ಅಣುಗಳಾಗಿವೆ. ಇದಕ್ಕೆ ಉದಾಹರಣೆಗಳೆಂದರೆ - ಸೈಟಿಡಿನ್, ಯೂರಿಡಿನ್, ಅಡೆನೊಸಿನ್, ಗ್ವಾನೊಸಿನ್, ತೈಮಿಡಿನ್ ಮತ್ತು ಇನೋಸಿನ್.
ನ್ಯೂಕ್ಲಿಯೊಸೈಡ್‌ಗಳನ್ನು ಜೀವಕೋಶದ ನಿರ್ದಿಷ್ಟ ಕೈನೇಸ್‌ಗಳಿಂದ ಫಾಸ್ಫರಿಲೀಕರಿಸಿ, ನ್ಯೂಕ್ಲಿಯೊಟೈಡ್‌ಗಳುಗಳನ್ನು ಉತ್ಪತ್ತಿ ಮಾಡಬಹುದು. DNA ಮತ್ತು RNA ಎರಡೂ ಪಾಲಿಮರ್‌ಗಳಾಗಿವೆ. ಅವು ಉದ್ದ, ರೇಖೀಯ ಅಣುಗಳನ್ನು ಒಳಗೊಂಡಿರುತ್ತವೆ. ನ್ಯೂಕ್ಲಿಯಕ್ ಆಮ್ಲಗಳ ಪುನರಾವರ್ತಿಸುವ ರಚನಾತ್ಮಕ ಘಟಕಗಳು ಅಥವಾ ಮಾನೊಮರ್‌ಗಳನ್ನು ನ್ಯೂಕ್ಲಿಯೊಟೈಡ್‌ಗಳೆಂದು ಕರೆಯುತ್ತಾರೆ.[೧]
ಪ್ರತಿಯೊಂದು ನ್ಯೂಕ್ಲಿಯೊಟೈಡ್ ಒಂದು ಅಚಕ್ರೀಯ ಸಾರಜನಕಯುಕ್ತ ಆಧಾರ, ಪೆಂಟೋಸ್ ಮತ್ತು ಒಂದರಿಂದ ಮೂರು ಫಾಸ್ಫೇಟ್ ಗುಂಪುಗಳಿಂದ ರಚಿಸಲ್ಪಟ್ಟಿರುತ್ತದೆ. ಅವು ಇಂಗಾಲ, ಸಾರಜನಕ, ಆಮ್ಲಜನಕ, ಜಲಜನಕ ಮತ್ತು ಫಾಸ್ಫರಸ್ಅನ್ನು ಒಳಗೊಂಡಿರುತ್ತವೆ. ಅವು ರಾಸಾಯನಿಕ ಶಕ್ತಿಯ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ (ಅಡೆನೊಸಿನ್ ಟ್ರೈಫಾಸ್ಫೇಟ್ ಮತ್ತು ಗ್ವಾನೊಸಿನ್ ಟ್ರೈಫಾಸ್ಫೇಟ್), ಜೀವಕೋಶೀಯ ಸಂಕೇತದಲ್ಲಿ ಭಾಗವಹಿಸುತ್ತವೆ (ಚಕ್ರೀಯ ಗ್ವಾನೊಸಿನ್ ಮೋನೊಫಾಸ್ಫೇಟ್ ಮತ್ತು ಚಕ್ರೀಯ ಅಡೆನೊಸಿನ್ ಮೋನೊಫಾಸ್ಫೇಟ್) ಹಾಗೂ ಕಿಣ್ವಕ ಕ್ರಿಯೆಗಳ ಪ್ರಮುಖ ಸಹ-ಅಂಶಗಳಾಗಿ ಜತೆಗೂಡುತ್ತವೆ (ಸಹ-ಕಿಣ್ವ A, ಫ್ಲೇವಿನ್ ಅಡೆನಿನ್ ಡೈನ್ಯೂಕ್ಲಿಯೊಟೈಡ್, ಫ್ಲೇವಿನ್ ಮೋನೊನ್ಯೂಕ್ಲಿಯೊಟೈಡ್ ಮತ್ತು ನಿಕೋಟಿನಮೈಡ್ ಅಡೆನಿನ್ ನ್ಯೂಕ್ಲಿಯೊಟೈಡ್ ಫಾಸ್ಫೇಟ್).[೨]
ಸ್ಯಾಕರೈಡ್‌ಗಳು
[ಬದಲಾಯಿಸಿ]ಮೋನೊಸ್ಯಾಕರೈಡ್‌ಗಳು ಕಾರ್ಬೊಹೈಡ್ರೇಟ್(ಶರ್ಕರ ಪಿಷ್ಟ)ಗಳ ಸರಳ ರೂಪವಾಗಿವೆ, ಇವು ಕೇವಲ ಒಂದು ಸರಳ ಶರ್ಕರವನ್ನು ಹೊಂದಿರುತ್ತವೆ. ಅವು ಮೂಲಭೂತವಾಗಿ ಅವುಗಳ ರಚನೆಯಲ್ಲಿ ಒಂದು ಆಲ್ಡಿಹೈಡ್ ಅಥವಾ ಕೀಟಾನ್ ಗುಂಪನ್ನು ಹೊಂದಿರುತ್ತವೆ.[೩] ಮೋನೊಸ್ಯಾಕರೈಡ್‌ನಲ್ಲಿನ ಆಲ್ಡಿಹೈಡ್ ಗುಂಪಿನ ಅಸ್ತಿತ್ವವನ್ನು ಆಲ್ಡೊ- ಎಂಬ ಪೂರ್ವಪ್ರತ್ಯಯದಿಂದ ಸೂಚಿಸಲಾಗುತ್ತದೆ. ಅದೇ ರೀತಿ, ಕೀಟಾನ್ ಗುಂಪನ್ನು ಕೀಟೊ- ಎಂಬ ಪೂರ್ವಪ್ರತ್ಯಯದಿಂದ ನಿರೂಪಿಸಲಾಗುತ್ತದೆ.[೧] ಮೋನೊಸ್ಯಾಕರೈಡ್‌ಗಳಿಗೆ ಉದಾರಣೆಗಳೆಂದರೆ - ಹೆಕ್ಸೋಸ್‌ಗಳಾದ ಗ್ಲೂಕೋಸ್ ಪ್ರಕ್ಟೋಸ್, ಗ್ಯಾಲಕ್ಟೋಸ್ ಹಾಗೂ ಪೆಂಟೋಸ್‌ಗಳಾದ ರೈಬೋಸ್ ಮತ್ತು ಡಿಆಕ್ಸಿರೈಬೋಸ್. ಸೇವಿಸಲ್ಪಟ್ಟ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಜಠರದಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಜೀರ್ಣವಾಗುತ್ತವೆ ಹಾಗೂ ಭಿನ್ನವಾಗಿ ಹೀರಲ್ಪಡುತ್ತವೆ. ಅವು ಭಿನ್ನ ಚಯಾಪಚಯ ಗತಿಯನ್ನು ಹೊಂದಿರುತ್ತವೆ. 2 ಭಿನ್ನ ಸ್ಯಾಕರೈಡ್‌ಗಳಿಗೆ ಸೇವಿಸಿದ ಆಹಾರದ ಮೇಲೆ ಭಿನ್ನವಾಗಿ ಪ್ರಭಾವ ಬೀರಲು ಹಲವಾರು ಅವಕಾಶಗಳನ್ನು ಒದಗಿಸುತ್ತವೆ.[೩]
ನೀರಿನ ತೆಗೆದುಹಾಕುವಿಕೆಯೊಂದಿಗೆ ಎರಡು ಮೋನೊಸ್ಯಾಕರೈಡ್‌ಗಳು ಅಥವಾ ಎರಡು ಏಕ ಸರಳ-ಶರ್ಕರಗಳು ಒಟ್ಟಿಗೆ ಸೇರಿ ಬಂಧಿಸಲ್ಪಟ್ಟು ಡೈಸ್ಯಾಕರೈಡ್‌ಗಳು ರಚನೆಯಾಗುತ್ತವೆ. ಅವನ್ನು ದುರ್ಬಲ ಆಮ್ಲದೊಂದಿಗೆ ಕುದಿಸುವ ಮೂಲಕ ಅಥವಾ ಸೂಕ್ತ ಕಿಣ್ವಗಳೊಂದಿಗೆ ಪರಸ್ಪರ ಕ್ರಿಯೆ ನಡೆಸುವ ಮೂಲಕ ಜಲಜನೀಕರಿಸಿ ಅವುಗಳ ರಚನಾ ಆಧಾರವಾದ ಮೋನೊಸ್ಯಾಕರೈಡ್‌ಅನ್ನು ಪಡೆಯಬಹುದು.[೧] ಡೈಸ್ಯಾಕರೈಡ್‌ಗಳಿಗೆ ಉದಾರಣೆಗಳೆಂದರೆ - ಸುಕ್ರೋಸ್, ಮಾಲ್ಟೋಸ್ ಮತ್ತು ಲ್ಯಾಕ್ಟೋಸ್.
ಪಾಲಿಸ್ಯಾಕರೈಡ್‌ಗಳು ಪಾಲಿಮರೀಕರಿಸಿದ ಮೋನೊಸ್ಯಾಕರೈಡ್‌ಗಳು, ಸಂಕೀರ್ಣ, ಕಾರ್ಬೊಹೈಡ್ರೇಟ್‌ಗಳಾಗಿವೆ. ಅವು ಅನೇಕ ಸರಳ ಶರ್ಕರಗಳನ್ನು ಹೊಂದಿರುತ್ತವೆ. ಉದಾಹರಣೆಗಳೆಂದರೆ ಪಿಷ್ಟ, ಸೆಲ್ಯುಲೋಸ್ ಮತ್ತು ಗ್ಲೈಕೋಜನ್. ಅವು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ ಮತ್ತು ಹೆಚ್ಚಾಗಿ ಸಂಕೀರ್ಣ ವಿಭಾಗದ ಸಂಪರ್ಕವನ್ನು ಹೊಂದಿರುತ್ತವೆ. ಗಾತ್ರದಿಂದಾಗಿ ಪಾಲಿಸ್ಯಾಕರೈಡ್‍ಗಳು ನೀರಿನಲ್ಲಿ ಕರಗುವುದಿಲ್ಲ. ಆದರೆ ಅವುಗಳ ಹೆಚ್ಚಿನ ಹೈಡ್ರಾಕ್ಸಿ ಗುಂಪುಗಳು ನೀರಿಗೆ ಒಡ್ಡಿದಾಗ ಹೈಡ್ರೀಕರಿಸಲ್ಪಡುತ್ತವೆ. ಕೆಲವು ಪಾಲಿಸ್ಯಾಕರೈಡ್‌ಗಳನ್ನು ನೀರಿನಲ್ಲಿ ಬಿಸಿಮಾಡಿದಾಗ ದಪ್ಪ ಕಾಲಾಯ್ಡ್ ಸ್ಥಿತಿಯ ಚೆದರಿಕೆ ಉಂಟಾಗುತ್ತದೆ.[೧] 2 - 10 ಮೋನೊಮರ್‌ಗಳನ್ನು ಹೊಂದಿರುವ ಸಣ್ಣ ಪಾಲಿಸ್ಯಾಕರೈಡ್‌ಗಳನ್ನು ಆಲಿಗೊಸ್ಯಾಕರೈಡ್‌ಗಳೆಂದು ಕರೆಯಲಾಗುತ್ತದೆ.[೪] ಸ್ಯಾಕರೈಡ್‌ಗಳಲ್ಲಿ ವ್ಯತ್ಯಾಸ ತೋರಿಸಲು ಪ್ರತಿದೀಪಕ ಸೂಚಕ-ಸ್ಥಾನಾಕ್ರಮಿಸುವ ಆಣ್ವಿಕ ಇಂಪ್ರಿಂಟಿಂಗ್ ಸಂವೇದಕವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ಯಶಸ್ವಿಯಾಗಿ ಮೂರು ಬ್ರ್ಯಾಂಡ್‌ಗಳ ಕಿತ್ತಳೆರಸ-ಪಾನೀಯದಲ್ಲಿ ಗುರುತಿಸಲ್ಪಟ್ಟಿದೆ.[೫] ಗ್ರಾಹಕ ಫಿಲಂಗಳ ಪ್ರತಿದೀಪ್ತಿ ತೀವ್ರತೆಯಲ್ಲಿನ ಬದಲಾವಣೆಯು ಸ್ಯಾಕರೈಡ್ ಸಾಂದ್ರತೆಗೆ ನೇರವಾಗಿ ಸಂಬಂಧಿಸಿದೆ.[೬]
ಲಿಗ್ನಿನ್
[ಬದಲಾಯಿಸಿ]ಲಿಗ್ನಿನ್ ಯಾದೃಚ್ಛಿಕ ಪಾಲಿಮರ್ ಆಗಿದೆ. ಇದು ಮುಖ್ಯವಾಗಿ ಆರೊಮ್ಯಾಟಿಕ್ ಸುರುಳಿಗಳಿಂದ ರಚಿಸಲ್ಪಟ್ಟಿರುತ್ತವೆ, ಆ ಸುರುಳಿಗಳೊಂದಿಗೆ ಸಣ್ಣ (ಮೂರರವರೆಗೆ) ಆಲಿಫ್ಯಾಟಿಕ್(ಇಂಗಾಲದ ಪರಮಾಣುಗಳ ತೆರೆದ ಸರಣಿಯುಳ್ಳ) ಇಂಗಾಲದ ಸರಪಣಿಗಳು ಜೋಡಿಕೊಂಡಿರುತ್ತವೆ. ಲಿಗ್ನಿನ್ ಎರಡನೇ ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಜೈವಿಕ-ಪಾಲಿಮರ್ ಆಗಿದೆ (ಸೆಲ್ಯುಲೋಸ್‌ನ ನಂತರ). ಇದು ಹೆಚ್ಚಿನ ಸಸ್ಯಗಳ ಪ್ರಾಥಮಿಕ ರಚನಾತ್ಮಕ ಘಟಕಗಳಲ್ಲಿ ಒಂದಾಗಿದೆ. ಇದು p -ಕೌಮೆರಿಲ್ ಆಲ್ಕೊಹಾಲ್, ಕಾನಿಫೆರಿಲ್ ಆಲ್ಕೊಹಾಲ್ ಮತ್ತು ಸಿನಾಪಿಲ್ ಆಲ್ಕೊಹಾಲ್[೭]ನಿಂದ ಪಡೆದ ಉಪ-ಘಟಕಗಳನ್ನು ಹೊಂದಿರುತ್ತದೆ. ಇದು ಜೈವಿಕ-ಅಣುಗಳಲ್ಲೇ ವಿಶೇಷವಾಗಿದೆ ಏಕೆಂದರೆ ಇದು ರೆಸಿಮಿಕ್ ಅಂದರೆ ಬೆಳಕಿನಿಂದ ಸಕ್ರಿಯವಾಗಿರುವುದಿಲ್ಲ. ಬೆಳಕಿನ ಸಕ್ರಿಯತೆಯು ಇಲ್ಲದಿರುವುದಕ್ಕೆ ಕಾರಣವೆಂದರೆ ಲಿಗ್ನಿನ್‌ನ ಪಾಲಿಮರೀಕರಣವು ಸ್ವತಂತ್ರ ರಾಡಿಕಲ್ ಜತೆಗೂಡುವ ಕ್ರಿಯೆಗಳ ಮೂಲಕ ನಡೆಯುತ್ತದೆ, ಅದರಲ್ಲಿ ಕೈರಲ್ ಕೇಂದ್ರದಲ್ಲಿ ರಚನೆಯಾಗಲು ಯಾವುದೇ ಆದ್ಯತೆಯಿರುವುದಿಲ್ಲ.
ಲಿಪಿಡ್‌ಗಳು
[ಬದಲಾಯಿಸಿ]ಲಿಪಿಡ್‌ಗಳು ಮುಖ್ಯವಾಗಿ ಕೊಬ್ಬಿನಾಮ್ಲ[[]] ಈಸ್ಟರ್ಗಳು . ಅವು ಜೈವಿಕ ಒಳಪೊರೆಯ ರಚನಾತ್ಮಕ ಮೂಲ ಅಂಶಗಳಾಗಿವೆ. ಮತ್ತೊಂದು ಜೈವಿಕ ಪಾತ್ರವೆಂದರೆ ಶಕ್ತಿಯ ಸಂಗ್ರಹ (ಉದಾ. ಟ್ರೈಗ್ಲಿಸರೈಡ್‌ಗಳು). ಹೆಚ್ಚಿನ ಲಿಪಿಡ್‌ಗಳು ಒಂದು ಧ್ರುವೀಯ ಅಥವಾ ಹೈಡ್ರೊಫಿಲಿಕ್ ಹೈಡ್ಅನ್ನು (ವಿಶಿಷ್ಟವಾಗಿ ಗ್ಲಿಸರಾಲ್) ಹಾಗೂ ಒಂದರಿಂದ ಮೂರರವರೆಗೆ ಧ್ರುವೀಯವಲ್ಲದ ಅಥವಾ ಹೈಡ್ರೊಫೋಬಿಕ್ ಕೊಬ್ಬಿನಾಮ್ಲದ ಟೈಲ್‌ಗಳನ್ನು ಹೊಂದಿರುತ್ತವೆ, ಆದ್ದರಿಂದ ಅವನ್ನು ಆಂಫಿಫಿಲಿಕ್ ಎನ್ನುತ್ತಾರೆ. ಕೊಬ್ಬಿನಾಮ್ಲಗಳು ಕೇವಲ ಏಕಬಂಧಗಳಿಂದ (ಪರ್ಯಾಪ್ತ ಕೊಬ್ಬಿನಾಮ್ಲಗಳು) ಬಂಧಿಸಲ್ಪಟ್ಟ ಅಥವಾ ಏಕ ಮತ್ತು ದ್ವಿ ಬಂಧಗಳೆರಡರಿಂದಲೂ (ಅಪರ್ಯಾಪ್ತ ಕೊಬ್ಬಿನಾಮ್ಲಗಳು) ಬಂಧಿಸಲ್ಪಟ್ಟ ಇಂಗಾಲದ ಪರಮಾಣುಗಳ ಕವಲೊಡೆಯದ ಸರಪಣಿಗಳನ್ನು ಒಳಗೊಂಡಿರುತ್ತವೆ. ಸರಪಣಿಗಳು ಸಾಮಾನ್ಯವಾಗಿ 14-24 ಇಂಗಾಲದ ಗುಂಪುಗಳಷ್ಟು ಉದ್ದವಿರುತ್ತದೆ, ಆದರೆ ಅದು ಯಾವಾಗಲೂ ಸಮಸಂಖ್ಯೆಯಾಗಿರುತ್ತದೆ.
ಜೈವಿಕ ಒಳಪೊರೆಯಲ್ಲಿರುವ ಲಿಪಿಡ್‌ಗಳ ಹೈಡ್ರೊಫಿಲಿಕ್ ಹೆಡ್ ಈ ಕೆಳಗಿನ ಮೂರು ವರ್ಗಗಳಲ್ಲಿ ಒಂದಕ್ಕೆ ಸೇರಿರುತ್ತದೆ:
- ಗ್ಲೈಕೊಲಿಪಿಡ್‌ಗಳು - ಇವುಗಳ ಹೆಡ್‌ಗಳು 1-15 ಸ್ಯಾಕರೈಡ್ ಶೇಷಗಳೊಂದಿಗೆ ಒಂದು ಆಲಿಗೊಸ್ಯಾಕರೈಡ್‌ಅನ್ನು ಹೊಂದಿರುತ್ತವೆ.
- ಫಾಸ್ಫೊಲಿಪಿಡ್‌ಗಳು - ಇವುಗಳ ಹೆಡ್‌ಗಳು ಒಂದು ಧನಾತ್ಮಕ ಆವೇಶದ ಗುಂಪನ್ನು ಹೊಂದಿರುತ್ತವೆ, ಅದು ಟೈಲ್ ಒಂದಿಗೆ ಋಣಾತ್ಮಕ ಆವೇಶದ ಫಾಸ್ಫೇಟ್ ಗುಂಪಿನಿಂದ ಬಂಧಿಸಲ್ಪಟ್ಟಿರುತ್ತದೆ.
- ಸ್ಟೆರಾಲ್‌ಗಳು - ಇವುಗಳ ಹೆಡ್‌ಗಳು ಸಮತಲೀಯ ಸ್ಟಿರಾಯ್ಡ್ ಸುರುಳಿಯನ್ನು ಒಳಗೊಂಡಿರುತ್ತದೆ, ಉದಾಹರಣೆಗಾಗಿ ಕೊಲೆಸ್ಟೆರಾಲ್.
ಇತರ ಲಿಪಿಡ್‌ಗಳೆಂದರೆ - ಪ್ರೋಸ್ಟಗ್ಲಾಂಡಿನ್‌ಗಳು ಮತ್ತು ಲ್ಯೂಕೊಟ್ರೀನ್‌ಗಳು, ಇವು ಅರಕಿಡಾನಿಕ್ ಆಮ್ಲಗಳಿಂದ ಸಂಶ್ಲೇಷಿಸಲಾದ 20-ಇಂಗಾಲದ ಕೊಬ್ಬಿನ ಆಸಿಲ್ ಘಟಕಗಳಾಗಿವೆ. ಅವುಗಳನ್ನು ಕೊಬ್ಬಿನಾಮ್ಲಗಳೆಂದೂ ಕರೆಯುತ್ತಾರೆ.
ಅಮೈನೊ ಆಮ್ಲಗಳು
[ಬದಲಾಯಿಸಿ]ಅಮೈನೊ ಆಮ್ಲಗಳು ಅಮೈನೊ ಮತ್ತು ಕಾರ್ಬೋಕ್ಸಿಲಿಕ್ ಆಮ್ಲದ ಕ್ರಿಯಾತ್ಮಕ ಗುಂಪುಗಳನ್ನು ಹೊಂದಿರುತ್ತವೆ. (ಜೈವಿಕ-ರಸಾಯನ ವಿಜ್ಞಾನದಲ್ಲಿ, ಅಮೈನೊ ಆಮ್ಲ ಪದವನ್ನು ಅಮೈನೊ ಮತ್ತು ಕಾರ್ಬೋಕ್ಸಿಲೇಟ್ ಕ್ರಿಯಾತ್ಮಕ ಅಂಶಗಳು ಒಂದೇ ಇಂಗಾಲಕ್ಕೆ ಬಂಧಿಸಲ್ಪಟ್ಟಿರುವ ಅಮೈನೊ ಆಮ್ಲಗಳನ್ನು ಹಾಗೂ ನಿಜವಾಗಿ ಅಮೈನೊ ಆಮ್ಲವಲ್ಲದ ಪ್ರೋಲಿನ್ಅನ್ನು ಸೂಚಿಸುವಾಗ ಬಳಸಲಾಗುತ್ತದೆ).
ಅಮೈನೊ ಆಮ್ಲಗಳು ಉದ್ದ ಪಾಲಿಮರ್ ಸರಪಣಿಗಳ ರಚನಾತ್ಮಕ ಆಧಾರ-ಅಂಶಗಳಾಗಿವೆ. 2-10 ಅಮೈನೊ ಆಮ್ಲಗಳನ್ನು ಹೊಂದಿರುವ ಸರಪಣಿಗಳನ್ನು ಪೆಪ್ಟೈಡ್‌ಗಳೆಂದು, 10-100 ಅಮೈನೊ ಆಮ್ಲಗಳನ್ನು ಹೊಂದಿರುವ ಸರಪಣಿಗಳನ್ನು ಪಾಲಿಪೆಪ್ಟೈಡ್‌ಗಳೆಂದು ಹಾಗೂ ಅದಕ್ಕಿಂತ ಉದ್ದದ ಸರಪಣಿಗಳನ್ನು ಪ್ರೋಟೀನ್‌ಗಳೆಂದು ಕರೆಯಲಾಗುತ್ತದೆ. ಈ ಪ್ರೋಟೀನ್ ರಚನೆಗಳು ಜೀವಿಗಳಲ್ಲಿ ಅನೇಕ ರಚನಾತ್ಮಕ ಮತ್ತು ಕಿಣ್ವಕ ಪಾತ್ರಗಳನ್ನು ಹೊಂದಿವೆ.
ಪ್ರಮಾಣಿತ ಆನುವಂಶಿಕ ಸಂಕೇತದಿಂದ ಸೂಚಿಸಲಾದ ಇಪ್ಪತ್ತು ಅಮೈನೊ ಆಮ್ಲಗಳಿವೆ. ಆದರೆ 500 ಕ್ಕಿಂತಲೂ ಹೆಚ್ಚಿನ ನೈಸರ್ಗಿಕ ಅಮೈನೊ ಆಮ್ಲಗಳು ಅಸ್ತಿತ್ವದಲ್ಲಿವೆ. ಈ ಇಪ್ಪತ್ತನ್ನು ಹೊರತುಪಡಿಸಿ ಉಳಿದ ಅಮೈನೊ ಆಮ್ಲಗಳು ಪ್ರೋಟೀನ್‌ಗಳಲ್ಲಿ ಕಂಡುಬಂದರೆ, ಇದು ಸಾಮಾನ್ಯವಾಗಿ ಟ್ರಾನ್ಸ್‌ಲೇಶನ್‌ನ (ಪ್ರೋಟೀನ್ ಸಂಶ್ಲೇಷಣೆ) ನಂತರದ ಮಾರ್ಪಾಡಿನ ಫಲಿತಾಂಶವಾಗಿರುತ್ತದೆ. ಕೆಲವು ಜೀವಿಗಳಲ್ಲಿ, ಪ್ರಮಾಣಿತ ಇಪ್ಪತ್ತನ್ನು ಹೊರತುಪಡಿಸಿ ಟ್ರಾನ್ಸ್‌ಲೇಶನ್‌ನ ಸಂದರ್ಭದಲ್ಲಿ ಕೇವಲ ಎರಡು ಅಮೈನೊ ಆಮ್ಲಗಳು ಪ್ರೋಟೀನ್‌ಗಳೊಂದಿಗೆ ಜತೆಗೂಡುತ್ತವೆ:
- ಸೆಲೆನೊಸಿಸ್ಟೈನ್ - ಇದು ಕೆಲವು ಪ್ರೋಟೀನ್‌ಗಳೊಂದಿಗೆ UGA ಕೋಡಾನ್‌ನಲ್ಲಿ ಒಂದುಗೂಡುತ್ತದೆ, ಇದು ಸಾಮಾನ್ಯವಾಗಿ ಒಂದು ನಿಲ್ಲಿಸುವ ಕೋಡಾನ್ ಆಗಿದೆ.
- ಪೈರೊಲೈಸಿನ್ - ಇದು ಕೆಲವು ಪ್ರೋಟೀನ್‌ಗಳೊಂದಿಗೆ UAG ಕೋಡಾನ್‌ನಲ್ಲಿ ಸೇರುತ್ತದೆ. ಉದಾಹರಣೆಗಾಗಿ, ಕೆಲವು ಮೀಥೆನೊಜೆನ್‌ಗಳಲ್ಲಿ ಕಿಣ್ವಗಳಲ್ಲಿ ಅವನ್ನು ಮೀಥೇನ್ಅನ್ನು ಉತ್ಪತ್ತಿ ಮಾಡಲು ಬಳಸಲಾಗುತ್ತದೆ.
ಪ್ರೋಟೀನ್ ಸಂಶ್ಲೇಷಣೆಯಲ್ಲಿ ಬಳಸಲ್ಪಡುವ ಈ ಮೇಲಿನವುಗಳನ್ನು ಹೊರತುಪಡಿಸಿ, ಇತರ ಜೈವಿಕವಾಗಿ ಪ್ರಮುಖವಾಗಿರುವ ಅಮೈನೊ ಆಮ್ಲಗಳೆಂದರೆ ಕಾರ್ನಿಟೈನ್ (ಜೀವಕೋಶದೊಳಗೆ ಲಿಪಿಡ್ ಸಾಗಣೆಯಲ್ಲಿ ಬಳಸಲ್ಪಡುತ್ತದೆ), ಆರ್ನಿತೈನ್, GABA ಮತ್ತು ಟಾರಿನ್.
ಪ್ರೋಟೀನ್ ರಚನೆ
[ಬದಲಾಯಿಸಿ]ಪ್ರೋಟೀನ್‌ಅನ್ನು ರಚಿಸುವ ಅಮೈನೊ ಆಮ್ಲಗಳ ನಿರ್ದಿಷ್ಟ ಸರಣಿಯನ್ನು ಪ್ರೋಟೀನ್‌ನ ಪ್ರಾಥಮಿಕ ರಚನೆ ಎಂದು ಕರೆಯುತ್ತಾರೆ. ಈ ಸರಣಿಯು ಪ್ರತಿಯೊಂದರ ಆನುವಂಶಿಕ ಅಂಶದಿಂದ ನಿರ್ಣಯಿಸಲ್ಪಡುತ್ತದೆ. ಪ್ರೋಟೀನ್‌ಗಳು ಅಣುಗಳ ನಡುವಣ ಆಕರ್ಷಣೆಯಿಂದ ರೂಪಿತವಾದ ಅನೇಕ, ಉತ್ತಮವಾಗಿ-ವರ್ಗೀಕರಿಸಿದ ಅಂಶಗಳ ಸ್ಥಳೀಯ ರಚನೆಯನ್ನು ಹೊಂದಿರುತ್ತವೆ. ಇದು ಪ್ರೋಟೀನ್‌ನ ಎರಡನೇ ರಚನೆಯಾಗುತ್ತದೆ. ಅವನ್ನು ವ್ಯಾಪಕವಾಗಿ ಎರಡಾಗಿ ವಿಭಾಗಿಸಲಾಗುತ್ತದೆ, ಆಲ್ಫಾ ಹೆಲಿಕ್ಸ್ ಮತ್ತು ಬೀಟಾ ಶೀಟ್, ಇದನ್ನು ಬೀಟಾ ಪ್ಲೀಟೆಡ್(ಮಡಿಕೆ ಮಾಡಿದ) ಶೀಟ್‌ಗಳೆಂದೂ ಕರೆಯಲಾಗುತ್ತದೆ. ಒಂದು ಅಮೈನೊ ಆಮ್ಲದ ಅಮೈನೊ ಗುಂಪು ಮತ್ತು ಇನ್ನೊಂದರ ಕಾರ್ಬೋಕ್ಸಿಲಿಕ್ ಆಮ್ಲದ ಗುಂಪಿನ ನಡುವಿನ ಆಕರ್ಷಣೆಯಿಂದಾಗಿ, ಪ್ರೋಟೀನ್ ಸುರುಳಿಯಾಗಿ ಸುತ್ತಿಕೊಂಡು ಆಲ್ಫಾ ಹೆಲಿಕ್ಸ್‌ಗಳು ರಚನೆಯಾಗುತ್ತವೆ. ಆ ಸುರುಳಿಯು ಪ್ರತಿ ಸುತ್ತಿನಲ್ಲಿ ಸುಮಾರು 3.6 ಅಮೈನೊ ಆಮ್ಲಗಳನ್ನು ಹೊಂದಿರುತ್ತವೆ ಹಾಗೂ ಅಮೈನೊ ಆಮ್ಲದ ಆಲ್ಕೈಲ್ ಗುಂಪು ಸುರುಳಿಯ ಮೇಲ್ಮೈಯ ಹೊರಗೆ ಕಂಡುಬರುತ್ತದೆ. ಬೀಟಾ ಮಡಿಕೆ-ಮಾಡಿದ ಶೀಟ್‌ಗಳು ಪ್ರೋಟೀನ್ ಸರಪಣಿಯ ಉದ್ದಕ್ಕೂ ಪ್ರಬಲ ನಿರಂತರ ಜಲಜನಕ ಬಂಧದಿಂದ ರಚಿಸಲ್ಪಡುತ್ತವೆ. ಈ ಬಂಧವು ಲಕ್ಷಣದಲ್ಲಿ ಸಮಾಂತರ ಅಥವಾ ಸಮಾಂತರವಾಗಿಲ್ಲದೇ ಇರಬಹುದು. ರಚನಾತ್ಮಕವಾಗಿ, ನೈಸರ್ಗಿಕ ರೇಷ್ಮೆಯು ಬೀಟಾ ಮಡಿಕೆ-ಮಾಡಿದ ಶೀಟ್‌ಗಳಿಂದ ರೂಪಿತವಾಗಿರುತ್ತದೆ. ಸಾಮಾನ್ಯವಾಗಿ, ಒಂದು ಪ್ರೋಟೀನ್ ವಿಭಿನ್ನ ಅನುಪಾತಗಳಲ್ಲಿ ಈ ಎರಡೂ ರಚನೆಗಳ ಕ್ರಿಯೆಯಿಂದ ರಚಿಸಲ್ಪಡುತ್ತದೆ. ಸುರುಳಿ ಸುತ್ತುವುದೂ ಸಹ ಯಾದೃಚ್ಛಿಕವಾಗಿರಬಹುದು. ಪ್ರೋಟೀನ್‌ನ ಒಟ್ಟು 3D ರಚನೆಯು ಅದರ ತೃತೀಯಕ ರಚನೆಯನ್ನು ನೀಡುತ್ತದೆ. ಇದು ಜಲಜನಕ ಬಂಧ, ಡಿಸಲ್ಫೈಡ್ ಬ್ರಿಡ್ಜ್‌ಗಳು, ಹೈಡ್ರೊಫೋಬಿಕ್ ಪರಸ್ಪರ ಕ್ರಿಯೆಗಳು, ಹೈಡ್ರೊಫಿಲಿಕ್ ಪರಸ್ಪರ ಕ್ರಿಯೆಗಳು, ವ್ಯಾನ್ ಡರ್ ವಾಲ್ಸ್ ಬಲ ಮೊದಲಾದ ವಿವಿಧ ಬಲಗಳಿಂದಾಗಿ ರಚನೆಯಾಗುತ್ತದೆ. ಪ್ರೋಟೀನ್ ರಚನೆಯಾಗಲು ಎರಡು ಅಥವಾ ಅದಕ್ಕಿಂತ ಹೆಚ್ಚು ವಿವಿಧ ಪಾಲಿಪೆಪ್ಟೈಡ್ ಸರಪಣಿಗಳು ಒಂದುಗೂಡಿದಾಗ, ಪ್ರೋಟೀನ್‌ನ ಚತುಷ್ಟಯ ರಚನೆಯು ಉಂಟಾಗುತ್ತದೆ. ಚತುಷ್ಟಯ ರಚನೆಯು ಹೀಮೊಗ್ಲೋಬಿನ್‌ನಂತಹ ಪಾಲಿಮರಿಕ್ ಮತ್ತು ಹೆಟಿರೊಮೆರಿಕ್ ಪ್ರೋಟೀನ್‌ಗಳ ಒಂದು ಅನನ್ಯ ಲಕ್ಷಣವಾಗಿದೆ. ಹೀಮೊಗ್ಲೋಬಿನ್ ಎರಡು ಆಲ್ಫಾ ಮತ್ತು ಎರಡು ಬೀಟಾ ಪೆಪ್ಟೈಡ್ ಸರಪಣಿಗಳನ್ನು ಹೊಂದಿರುತ್ತದೆ.
ಅಪೊಎಂಜೈಮ್‌ಗಳು
[ಬದಲಾಯಿಸಿ]ಅಪೊಎಂಜೈಮ್ ಪ್ರೋಟೀನ್‌ನ ನಿಷ್ಕ್ರಿಯ ಸಂಗ್ರಹ ಮತ್ತು ಸಾಮಾನ್ಯವಾಗಿ ಸ್ರಾವಕ ರೂಪವಾಗಿದೆ. ಇದು ಆ ಪ್ರೋಟೀನ್‌ನ ಸಕ್ರಿಯತೆಯಿಂದ ಸ್ರಾವಕ ಜೀವಕೋಶವನ್ನು ರಕ್ಷಿಸಲು ಅವಶ್ಯಕವಾಗಿರುತ್ತದೆ. ಅಪೊಎಂಜೈಮ್‌ಗಳು ಸಹ-ಅಂಶ(ಕೊಫ್ಯಾಕ್ಟರ್)ದ ಸೇರಿಕೆಯಲ್ಲಿ ಸಕ್ರಿಯ ಕಿಣ್ವವಾಗುತ್ತವೆ. ಸಹ-ಅಂಶಗಳು ಅಕಾರ್ಬನಿಕ (ಉದಾ. ಲೋಹದ ಅಯಾನುಗಳು ಮತ್ತು ಕಬ್ಬಿಣ-ಸಲ್ಫರ್ ಗುಂಪುಗಳು) ಅಥವಾ ಕಾರ್ಬನಿಕ (ಉದಾ. ಫ್ಲೇವಿನ್ ಮತ್ತು ಹೀಮ್) ಸಂಯುಕ್ತಗಳಾಗಿರಬಹುದು ಕಾರ್ಬನಿಕ ಸಹ-ಅಂಶಗಳು ಕಿಣ್ವದೊಂದಿಗೆ ಭದ್ರವಾಗಿ ಬಂಧಿಸಲ್ಪಡುವ ಪ್ರಾಸ್ಥೆಟಿಕ್ ಗುಂಪುಗಳಾಗಿರಬಹುದು ಅಥವಾ ಕ್ರಿಯೆಯ ಸಂದರ್ಭದಲ್ಲಿ ಕಿಣ್ವದ ಸಕ್ರಿಯ ಭಾಗದಿಂದ ಬಿಡುಗಡೆಯಾಗುವ ಸಹ-ಕಿಣ್ವಗಳಾಗಿರಬಹುದು.
ಐಸೊಎಂಜೈಮ್‌ಗಳು
[ಬದಲಾಯಿಸಿ]ಐಸೊಎಂಜೈಮ್‌ಗಳು ಒಂದೇ ರೀತಿಯ ಕ್ರಿಯೆ ಆದರೆ ಬೇರೆ ಬೇರೆ ರಚನೆಯನ್ನು ಹೊಂದಿರುವ ಕಿಣ್ವಗಳಾಗಿವೆ. ಅವು ವಿವಿಧ ಜೀನ್‌ಗಳ ಉತ್ಪನ್ನಗಳಾಗಿವೆ. ಅವು ವಿವಿಧ ಅಂಗಗಳಲ್ಲಿ ಒಂದೇ ರೀತಿಯ ಕ್ರಿಯೆಯನ್ನು ನಿರ್ವಹಿಸಲು ಉತ್ಪತ್ತಿಯಾಗುತ್ತವೆ. ಅಂತಹ ಕಿಣ್ವಗಳಿಗೆ ಒಂದು ಉದಾಹರಣೆಯೆಂದರೆ LDH. ರಕ್ತದಲ್ಲಿನ ಅವುಗಳ ವಿಭಿನ್ನ ಮಟ್ಟಗಳನ್ನು ಸ್ರಾವಕ ಅಂಗದಲ್ಲಿ ಯಾವುದೇ ವಿಕೃತ ರಚನೆಯಿದೆಯೇ ಎಂಬುದನ್ನು ಕಂಡುಹಿಡಿಯಲು ಬಳಸಲಾಗುತ್ತದೆ.
ಜೀವಸತ್ವಗಳು
[ಬದಲಾಯಿಸಿ]ಜೀವಸತ್ವವು ಸಾಮಾನ್ಯವಾಗಿ ಜೀವಿಯಲ್ಲಿ ಸಂಶ್ಲೇಷಿಸಲ್ಪಡದ ಒಂದು ಸಂಯುಕ್ತವಾಗಿದೆ. ಆದರೆ ಇದು ಜೀವಿಯ ಉಳಿಯುವಿಕೆಗೆ ಅಥವಾ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯವಾಗಿರುತ್ತದೆ (ಉದಾಹರಣೆಗಾಗಿ, ಸಹ-ಕಿಣ್ವಗಳು). ಆ ಸಂಯುಕ್ತಗಳನ್ನು ಹೀರಬೇಕು ಅಥವಾ ಸೇವಿಸಬೇಕು. ಆದರೆ ವೈಶಿಷ್ಟ್ಯವಾಗಿ ಕೇವಲ ಅಲ್ಪ ಪ್ರಮಾಣದಲ್ಲಿ. ಮೊದಲು ಪ್ರಸ್ತಾಪಿಸಿದ ಪಾಲಿಶ್ ಜೀವ-ರಾಸಾಯನಿಕ ತಜ್ಞ ಕ್ಯಾಸಿಮಿರ್ ಫಂಕ್ ಇವೆಲ್ಲವೂ ಮೂಲಭೂತವಾದವು ಎಂದು ಭಾವಿಸಿದ್ದನು, ಆದ್ದರಿಂದ ಅವುಗಳಿಗೆ vital-amines(ಜೀವಧಾರಕ-ಅಮೈನ್‌ಗಳು) ಎಂಬ ಹೆಸರು ನೀಡಿದನು. ನಂತರ "l" ಅಕ್ಷರವನ್ನು ಬಿಟ್ಟುಬಿಟ್ಟು vitamines(ಜೀವಸತ್ವಗಳು) ಎಂಬ ಪದ ಬಳಕೆಗೆ ಬಂದಿತು.
ಇವನ್ನೂ ಗಮನಿಸಿ
[ಬದಲಾಯಿಸಿ]- ಆಣ್ವಿಕ ಜೀವವಿಜ್ಞಾನ
- ಚಯಾಪಚಯ ಕ್ರಿಯೆ
- ಜೈವಿಕ-ಅಣುಗಳ ಪಟ್ಟಿ
ಆಕರಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ Slabaugh, Michael R., and Seager, Spencer L. (2007). Organic and Biochemistry for Today (6th ed.). Pacific Grove: Brooks Cole. ISBN 0-495-11280-1.
{{cite book}}
: CS1 maint: multiple names: authors list (link) - ↑ Alberts B, Johnson A, Lewis J, Raff M, Roberts K & Wlater P (2002). Molecular biology of the cell (4th ed.). New York: Garland Science. pp. 120–1. ISBN 0-8153-3218-1.
{{cite book}}
: CS1 maint: multiple names: authors list (link) - ↑ ೩.೦ ೩.೧ Peng, Bo, and Yu Qin (2009). "Fructose and Satiety". Journal of Nutrition: 6137–42.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Pigman, W. (1972). The Carbohydrates. Vol. 1A. San Diego: Academic Press. p. 3. ISBN 68-26647.
{{cite book}}
: Check|isbn=
value: length (help); Unknown parameter|coauthors=
ignored (|author=
suggested) (help) - ↑ Jin, Tan, Wang He-Fang, and Yan Xiu-Ping (2009). "Discrimination of Saccharides with a Fluorescent Molecular Imprinting Sensor Array Based on Phenylboronic Acid Functionalized Mesoporous Silica". Anal. Chem. 81 (13): 5273–80. doi:10.1021/ac900484x.
{{cite journal}}
: CS1 maint: multiple names: authors list (link) - ↑ Bo Peng and Yu Qin (2008). "Lipophilic Polymer Membrane Optical Sensor with a Synthetic Receptor for Saccharide Detection". Anal. Chem. 80 (15): 6137–41. doi:10.1021/ac800946p.
- ↑ K. Freudenberg & A.C. Nash (eds) (1968). Constitution and Biosynthesis of Lignin. Berlin: Springer-Verlag.
{{cite book}}
:|author=
has generic name (help)
- CS1 maint: multiple names: authors list
- CS1 errors: unsupported parameter
- CS1 errors: ISBN
- CS1 errors: generic name
- Articles needing additional references from January 2009
- Articles with invalid date parameter in template
- All articles needing additional references
- Articles with hatnote templates targeting a nonexistent page
- ಜೈವಿಕ-ಅಣುಗಳು
- ಅಣುಗಳು
- ಜೀವರಾಸಾಯನಿಕ
- ಜೈವಿಕ ಸಂಯುಕ್ತಗಳು